Dr Vijay Darda Column: ವಯಸ್ಸೆಂಬುದು ಬರೀ ಸಂಖ್ಯೆಯಷ್ಟೆ, ಬಿಡಿ !
ಭಾಗವತ್ ಹೀಗೆ ಹೇಳಿದ್ದೇ ತಡ ರಾಜಕೀಯ ವಿರೋಧಿಗಳು ಅವರ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಟು ಹಾಕಿ ಚರ್ಚೆ ಆರಂಭಿಸಿದರು. ಮೋದಿಯನ್ನು ಗುರಿಯಾಗಿ ಸಿಯೇ ಭಾಗವತ್ ಹೀಗೆ ಹೇಳಿದ್ದಾರೆಂದು ವ್ಯಾಖ್ಯಾನಿಸಿದರು. ಸೆಪ್ಟೆಂಬರ್ 17, 2025ಕ್ಕೆ ಮೋದಿ ಯವರಿಗೆ 75 ವರ್ಷ ವಾಗುತ್ತದೆ. ಕುತೂಹಲಕರ ಸಂಗತಿಯೆಂದರೆ, ಈ ಕತೆ ಹೇಳಿದ ಭಾಗವತ್‌ರಿಗೂ ಕೂಡ ಈ ವರ್ಷದ ಸೆಪ್ಟೆಂಬರ್ 11 ರಂದು 75 ವರ್ಷ ತುಂಬುತ್ತದೆ.


ಸಂಗತ
ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿಯವರಿಗೆ 75 ವರ್ಷಗಳು ತುಂಬುತ್ತಿದ್ದರೂ ಅವರಿಗಿರುವ ಶಕ್ತಿ, ಅವರು ಕೆಲಸ ಮಾಡುವ ರೀತಿ ಯುವಕರನ್ನೂ ನಾಚಿಸುವಂತಿದೆ. ಕೇವಲ ವಯಸ್ಸಾಗಿದೆ ಎಂಬ ಕಾರಣಕ್ಕೆ ಅವರು ನಿವೃತ್ತಿಯಾಗಲಿ ಎಂದು ಕೇಳುವುದು ಸರಿಯಲ್ಲ. ತಮ್ಮಿಂದಾಗದ ದಿನ ಅವರೇ ಎದ್ದು ಹೊರಟು ಬಿಡುತ್ತಾರೆ.
ಎಂಥಾ ಕಾಕತಾಳೀಯವಿದು. ಈ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ವಯಸ್ಸಿನ ಬಗ್ಗೆ ಎರಡು ಅತ್ಯಂತ ಪ್ರಮುಖ ಹೇಳಿಕೆಗಳು ಬಂದವು. ಎರಡೂ ಹೇಳಿಕೆಗಳು ಪ್ರಮುಖ ವ್ಯಕ್ತಿಗಳಿಂದ ಬಂದವು ಮತ್ತು ಅವು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗುರಿಯಾದವು!
ಮೊದಲ ಹೇಳಿಕೆ ನೀಡಿದ್ದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ. ಇನ್ನು, ಹಳೆಯದೊಂದು ದೃಷ್ಟಾಂತದ ರೂಪದಲ್ಲಿ ಎರಡನೇ ಹೇಳಿಕೆ ನೀಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್. ಇವರಿಬ್ಬರು ಇರುವ ಜಾಗ ಎಷ್ಟು ಎತ್ತರದ್ದು ಅಂದರೆ, ಸಹಜವಾಗಿಯೇ ಅವರ ಮಾತಿಗೆ ಬಹಳ ತೂಕ ಬಂದುಬಿಡುತ್ತದೆ.
ಹೀಗಾಗಿ ಅವರ ಮಾತಿನಿಂದ ಎದ್ದ ಬಿರುಗಾಳಿ ಸಹ ಜೋರಾಗಿಯೇ ಇದ್ದಿರುತ್ತದೆ. ಅದರಲ್ಲೂ ಮೋಹನ ಭಾಗವತ್ ಅವರ ಹೇಳಿಕೆಯು ತಕ್ಷಣ ರಾಜಕೀಯ ಸ್ವರೂಪ ಪಡೆದುಕೊಂಡು ಬಿಟ್ಟಿತ್ತು. ಅದರ ಬಗ್ಗೆ ಚರ್ಚೆಗೂ ಮುನ್ನ ಇಬ್ಬರೂ ಏನು ಹೇಳಿದ್ದರು ಎಂಬುದನ್ನು ನೋಡೋಣ. ಜುಲೈ 6ರಂದು ದಲೈ ಲಾಮಾ ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆ ವೇಳೆಗೆ ಸರಿಯಾಗಿ ಅವರ ಉತ್ತರಾಧಿಕಾರಿ ಆಯ್ಕೆಯ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು.
ಇದನ್ನೂ ಓದಿ: Dr Vijay Darda Column: ಭಾರತದ ಹೀರೋ ಆದ ಅಸಾದುದ್ದೀನ್ ಒವೈಸಿ !
ಹುಟ್ಟುಹಬ್ಬದ ದಿನ ಅವರು ಉತ್ತರಾಧಿಕಾರಿಯನ್ನು ಘೋಷಿಸುತ್ತಾರೆ ಎಂದೂ ಕೆಲವರು ವದಂತಿ ಹರಡಿದ್ದರು. ಆದರೆ ದಲೈ ಲಾಮಾ ತಮ್ಮ ಮಾತಿನ ಮೂಲಕ ವಯಸ್ಸಿನ ಪ್ರಶ್ನೆಗೆ ಫುಲ್ ಸ್ಟಾಪ್ ಹಾಕಿ ಬಿಟ್ಟರು. ‘ಕರುಣೆಯ ಬೋಧಿಸತ್ವನೆಂದೇ ಹೆಸರಾಗಿರುವ ಅವಲೋಕಿತೇಶ್ವರನು ನನಗೆ ನೀನಿನ್ನೂ 30ರಿಂದ 40 ವರ್ಷಗಳ ಕಾಲ ಜನರ ಸೇವೆ ಮಾಡುವೆಯೆಂದು ಸೂಚನೆ ನೀಡಿದ್ದಾನೆ’ ಎಂದು ಅವರು ಹುಟ್ಟುಹಬ್ಬದ ದಿನ ಸಂದೇಶ ನೀಡಿದರು.
ಟಿಬೆಟ್‌ನಲ್ಲಿ ಅವಲೋಕಿತೇಶ್ವರನಿಗೆ ಚೆನ್‌ರೆಜಿಗ್ ಎನ್ನುತ್ತಾರೆ. ಚೀನಾದಲ್ಲಿ ಗೌನ್ಯಿನ್ ಎನ್ನುತ್ತಾರೆ. ದಲೈ ಲಾಮಾ ಅವರ ಮಾತು ಕೇಳಿ ಸಹಜವಾಗಿಯೇ ಅವರ ಬೆಂಬಲಿಗರಿಗೆ ಬಹಳ ಖುಷಿ ಯಾಯಿತು. ಆದರೆ, ಚೀನಾಕ್ಕೆ ಖುಷಿಯಾಗಲಿಲ್ಲ. ಏಕೆಂದರೆ 14ನೇ ದಲೈಲಾಮಾನನ್ನು ಚೀನಾ ಯಾವತ್ತೂ ಶತ್ರುವಿನಂತೆ ನೋಡುತ್ತಾ ಬಂದಿದೆ. ಅವರು ಇಷ್ಟೊಂದು ಸುದೀರ್ಘ ಅವಧಿಯವರೆಗೆ ಬದುಕಿದ್ದಾರೆ ಎಂಬುದೇ ಚೀನಾಕ್ಕೆ ನುಂಗಲಾಗದ ತುತ್ತಾಗಿದೆ.

ಅವರನ್ನು ನೋಡಿದಾಗಲೆಲ್ಲ ಚೀನಾಕ್ಕೆ ಬಹಳ ಕಿರಿಕಿರಿಯಾಗುತ್ತದೆ. ಎರಡನೇ ಎಪಿಸೋಡ್ ಇನ್ನೂ ಸ್ವಲ್ಪ ಆಸಕ್ತಿಕರವಾಗಿದೆ. ಆರ್‌ಎಸ್‌ಎಸ್‌ನ ಮಾಜಿ ನಾಯಕ ಮೋರೋಪಂತ ಪಿಂಗಳೆಯವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆ ಘಟನೆ ನಡೆಯಿತು. ಸಮಾರಂಭದಲ್ಲಿ ಭಾಗವಹಿ ಸಿದ್ದ ಭಾಗವತ್ ಅವರು ಮಾತನಾಡುತ್ತಾ ಒಂದು ಘಟನೆಯನ್ನು ನೆನೆದರು.
ಅದೊಂದು ದಂತಕತೆ. ‘ಮೋರೋಪಂತ ಪಿಂಗಳೆಯವರಿಗೆ 75 ತುಂಬಿತ್ತು. ಆಗ ವೃಂದಾವನದಲ್ಲಿ ಅವರಿಗೊಂದು ಸನ್ಮಾನ ಮಾಡಲಾಯಿತು. ಶಾಲು ಹೊದಿಸಿ ಹಾರ ಹಾಕಿಸಿಕೊಂಡ ಬಳಿಕ ಅವರು ಮಾತನಾಡಿ, ‘ನನಗೆ 75 ತುಂಬಿತು ಎಂದು ನೀವು ಶಾಲು ಹೊದಿಸಿ ಸನ್ಮಾನಿಸಿದ್ದೀರಿ. ಇದರ ಅರ್ಥ ವೇನೆಂಬುದು ನನಗೆ ಗೊತ್ತು. ನಿಮಗೆ ವಯಸ್ಸಾಯಿತು, ಇನ್ನು ಮನೆಗೆ ನಡೆಯಿರಿ. ಬೇರೆಯವರಿಗೆ ನಿಮ್ಮ ಜಾಗದಲ್ಲಿ ನಿಂತು ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ನನಗೆ ನೀವು ಹೇಳುತ್ತಿರುವ ರೀತಿಯಿದು’ ಎಂದು ಹೇಳಿದ್ದರು.
ತಗೊಳ್ಳಿ, ಭಾಗವತ್ ಹೀಗೆ ಹೇಳಿದ್ದೇ ತಡ ರಾಜಕೀಯ ವಿರೋಧಿಗಳು ಅವರ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಟು ಹಾಕಿ ಚರ್ಚೆ ಆರಂಭಿಸಿದರು. ಮೋದಿಯನ್ನು ಗುರಿಯಾಗಿ ಸಿಯೇ ಭಾಗವತ್ ಹೀಗೆ ಹೇಳಿದ್ದಾರೆಂದು ವ್ಯಾಖ್ಯಾನಿಸಿದರು. ಸೆಪ್ಟೆಂಬರ್ 17, 2025ಕ್ಕೆ ಮೋದಿ ಯವರಿಗೆ 75 ವರ್ಷವಾಗುತ್ತದೆ. ಕುತೂಹಲಕರ ಸಂಗತಿಯೆಂದರೆ, ಈ ಕತೆ ಹೇಳಿದ ಭಾಗವತ್‌ರಿಗೂ ಕೂಡ ಈ ವರ್ಷದ ಸೆಪ್ಟೆಂಬರ್ 11 ರಂದು 75 ವರ್ಷ ತುಂಬುತ್ತದೆ.
ರಾಜಕೀಯವೇ ಹಾಗೆ. ಅದು ಯಾರಿಗೆ ಪೂರ್ಣವಾಗಿ ಅರ್ಥವಾಗುವುದಿಲ್ಲವೋ ಅವರೂ ಕೂಡ ರಾಜಕೀಯದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ಮಾಡುತ್ತಿರುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆಯೂ ಜನರು ಮಾತನಾಡುತ್ತಾರೆ!
ಆದರೆ, ನನ್ನ ಪ್ರಕಾರ ಮೋರೋಪಂತ ಪಿಂಗಳೆ ಬಗ್ಗೆ ಭಾಗವತ್ ಸಾಂದರ್ಭಿಕವಾಗಿ ಮಾತನಾಡಿ ಒಂದು ದಂತಕತೆಯನ್ನು ಹೇಳಿದ್ದಾರೆಯೇ ಹೊರತು ಅದಕ್ಕೂ ಮೋದಿಗೂ ಯಾವುದೇ ಸಂಬಂಧವಿಲ್ಲ. ಅದು ಮೋದಿಯವರ ವಯಸ್ಸನ್ನು ಕುರಿತಾಗಿ ಹೇಳಿದ ಮಾತೇ ಅಲ್ಲ. ಏಕೆಂದರೆ ಮೋದಿ ಮತ್ತು ಭಾಗವತ್ ಇಬ್ಬರೂ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ.
ಎಷ್ಟೆಂದರೆ, ಅವರನ್ನು ನೋಡಿದರೆ ಯುವಕರೂ ನಾಚಬೇಕು. ಅವರ ಸಮಕ್ಕೆ ಕೆಲಸ ಮಾಡಲು ಯುವಕರಿಂದಲೂ ಸಾಧ್ಯವಿಲ್ಲ. ಸಾರ್ವಜನಿಕ ಸೇವೆಯಲ್ಲಿ ಅವರು ಪ್ರದರ್ಶಿಸುವ ಶಕ್ತಿ ಮತ್ತು ತೊಡಗಿಕೊಳ್ಳುವ ರೀತಿಯನ್ನು ಯಾರೂ ಸರಿಗಟ್ಟಲಾರರು. ಅದಕ್ಕಿಂತ ಹೆಚ್ಚಾಗಿ, ಸ್ವತಃ ಮೋದಿ ಯವರೇ ಈ ಹಿಂದೆ ತಾನೊಬ್ಬ ಫಕೀರ ಎಂದು ಹೇಳಿದ್ದಾರೆ. ಸಮಯ ಬಂದಾಗ ನಾನೊಂದು ಬ್ಯಾಗ್ ಹೆಗಲಿಗೆ ಹಾಕಿಕೊಂಡು ಹೊರಟುಬಿಡುತ್ತೇನೆಂದು ಅವರು ಖುಲ್ಲಂಖುಲ್ಲಾ ಹೇಳಿಕೆ ನೀಡಿದ್ದಾರೆ!
ಒಂದು ಪ್ರಸಿದ್ಧ ಕವಿತೆ ನೆನಪಾಗುತ್ತಿದೆ: ವಯಸ್ಸಾಗುವುದು ಬದುಕಿನ ಸಹಜ ಪ್ರಕ್ರಿಯೆ. ಅದು ಗೊತ್ತೇ ಆಗದಿದ್ದರೆ ವಯಸ್ಸು ಹೇಗಾಗುತ್ತದೆ? ಕಾಲದ ಜೊತೆಗೆ ಸಾಕಷ್ಟು ಬದಲಾಗಿದೆ. ಭಾರತೀಯರ ಜೀವಿತಾವಧಿ ಕಳೆದ 75 ವರ್ಷಗಳಲ್ಲಿ ದುಪ್ಪಟ್ಟಾಗಿದೆ.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಜನರ ಸರಾಸರಿ ಜೀವಿತಾವಧಿ ಕೇವಲ 32 ವರ್ಷವಿತ್ತು. ನಿಜ, ಕೆಲವರು ಅದಕ್ಕಿಂತ ಸುದೀರ್ಘ ಅವಧಿಯವರೆಗೆ ಬದುಕಿದ್ದರು. ಆದರೆ, ಹೆಚ್ಚಿನವರು ಸಣ್ಣ ವಯಸ್ಸಿಗೇ ತೀರಿಹೋಗುತ್ತಿದ್ದರು. ಬಡತನ, ಹಸಿವು, ಅನಾರೋಗ್ಯ ಹೀಗೆ ಅದಕ್ಕೆ ನಾನಾ ಕಾರಣ ಗಳಿದ್ದವು.
ಹೀಗಾಗಿ ಜೀವಿತಾವಧಿ 32 ವರ್ಷವೆಂದು ಪರಿಗಣಿಸಲ್ಪಡುತ್ತಿತ್ತು. ಇಂದು ಭಾರತೀಯರ ಸರಾಸರಿ ಜೀವಿತಾವಧಿ 72 ವರ್ಷಗಳಿಗೆ ಏರಿದೆ. ನಿಜ, ಈಗಲೂ ಸಣ್ಣ ವಯಸ್ಸಿಗೆ ಸಾಯುವವರು ಇದ್ದಾರೆ ಅಥವಾ ದಿನಕ್ಕೊಂದು ಒಳ್ಳೆಯ ಊಟ ಸಿಗದೆ ಪರದಾಡುವವರೂ ಇದ್ದಾರೆ. ನಾನು ಇಲ್ಲಿ ಸಮಾಜದ ಅಂತಹ ವರ್ಗದ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳುತ್ತಿರುವುದು ಜೀವನದ ಗುಣಮಟ್ಟವನ್ನು ಸುಧಾರಿಸಿಕೊಂಡ ಬಹುಸಂಖ್ಯಾತ ವರ್ಗದ ಬಗ್ಗೆ. ಅವರಿಗೆ ಒಳ್ಳೆಯ ಆಹಾರ ಸಿಗುತ್ತಿದೆ.
ಹಣ್ಣು, ತರಕಾರಿ, ಪೌಷ್ಟಿಕ ಆಹಾರ, ಡ್ರೈ ಫ್ರೂಟ್ ಗಳು ಹಾಗೂ ಆರೋಗ್ಯ ಸೇವೆಯ ಲಭ್ಯತೆಯಿದೆ. ನಡೆಯುವುದಕ್ಕೆ ಬೇರೊಬ್ಬರ ನೆರವು ಪಡೆಯುವವರ ಬಗ್ಗೆ ನಾನಿಲ್ಲಿ ಚರ್ಚಿಸುವ ಅಗತ್ಯವಿಲ್ಲ. 75, 80 ವರ್ಷಗಳು ತುಂಬಿದರೂ ಅತ್ಯಂತ ಆರೋಗ್ಯಕರವಾಗಿ, ಕ್ರಿಯಾಶೀಲವಾಗಿ ಬದುಕುತ್ತಿರುವವರ ಬಗ್ಗೆ ಹೇಳುತ್ತಿದ್ದೇನೆ.
ಒಳ್ಳೆಯ ಉದಾಹರಣೆ ಶರದ್ ಪವಾರ್. ಅವರಿಗೆ 84 ವರ್ಷಗಳಾದರೂ ಅತ್ಯಂತ ಚಟುವಟಿಕೆಯಿಂದ ಬದುಕುತ್ತಿದ್ದಾರೆ. ಇನ್ನೂ ಅವರು ರಾಜಕಾರಣ ಮತ್ತು ಸಾರ್ವಜನಿಕ ಸೇವೆಯಲ್ಲಿ ದಣಿವರಿಯದೆ ದುಡಿಯುತ್ತಿದ್ದಾರೆ. ರಾಮ್ ಜೇಠ್ಮಲಾನಿ 90 ವರ್ಷಗಳ ನಂತರವೂ ಕೋರ್ಟ್‌ನಲ್ಲಿ ವಾದ ಮಾಡು ತ್ತಿದ್ದರು. ಡಾ.ಮನಮೋಹನ ಸಿಂಗ್ ಅವರು 92ನೇ ವರ್ಷದಲ್ಲಿ ಇಹಲೋಕ ತ್ಯಜಿಸುವು ದಕ್ಕೂ ಸ್ವಲ್ಪ ಕಾಲ ಮುಂಚಿನವರೆಗೆ ಕ್ರಿಯಾಶೀಲವಾಗಿಯೇ ಇದ್ದರು.
ಇದೇ ಪಟ್ಟಿಗೆ ಇನ್ನೂ ಸಾಕಷ್ಟು ಜನರನ್ನು ಸೇರಿಸಬಹುದು. 88 ವರ್ಷದ ಇಎಂಎಸ್ ನಂಬೂದರಿ ಪಾಡ್, 84ರ ಕರುಣಾನಿಧಿ, 89 ವರ್ಷದ ಜೆಆರ್‌ಡಿ ಟಾಟಾ, 89 ವರ್ಷದ ಘನಶ್ಯಾಮ್ ದಾಸ್ ಬಿರ್ಲಾ, 86 ವರ್ಷದ ರತನ್ ಟಾಟಾ, 82 ವರ್ಷದ ನಾನಿ ಪಾಲ್ಕಿವಾಲಾ ಹಾಗೂ 91 ವರ್ಷದ ಸೋಲಿ ಸೊರಾಬ್ಜಿ ಮುಂತಾದವರು ಬದುಕಿನ ಕೊನೆಯವರೆಗೂ ಚಟುವಟಿಕೆಯಿಂದ ಇದ್ದರು.
ಜ್ಯೋತಿ ಬಸು 85ನೇ ವರ್ಷದಲ್ಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಆದರೆ, ನಂತರ ಬಂದ ಎಡರಂಗದ ನಾಯಕ ಹರಕಿಶನ್ ಸಿಂಗ್ ಸುರ್ಜೀತ್ ಅವರು ಅಷ್ಟೊಂದು ವಯಸ್ಸಾದವರಿಗೆ ಏಕೆ ದೊಡ್ಡ ಹುದ್ದೆ ನೀಡಬಾರದು ಎಂಬುದನ್ನು ತೋರಿಸಿಕೊಟ್ಟರು ಎಂಬುದು ಬೇರೆ ವಿಷಯ! ಆದರೆ ನನ್ನ ಪ್ರಕಾರ, ವಯಸ್ಸಾಗುವುದು ಅಂದರೆ ಅನುಭವಗಳಿಂದ ಮಾಗುವುದು. ಉದಾಹರಣೆಗೆ ಅಮಿತಾಭ್ ಬಚ್ಚನ್. ಇಂದಿಗೂ ಅವರು ಎಷ್ಟು ಅದ್ಭುತವಾದ ಕೆಲಸಗಳನ್ನು ಮಾಡುತ್ತಿದ್ದಾರೆ!
ವಹೀದಾ ರೆಹಮಾನ್ ಈಗಲೂ ಭಾರತ ಹಾಗೂ ವಿದೇಶಗಳಲ್ಲಿ ಕಾಡು ಸುತ್ತುತ್ತಾ ಫೋಟೋಗ್ರಫಿ ಮಾಡುತ್ತಿದ್ದಾರೆ. ಹೇಮಾಮಾಲಿನಿ ಈಗಲೂ ದುರ್ಗಾಪೂಜೆಯಲ್ಲಿ ವೇದಿಕೆಯ ಮೇಲೆ ಹತ್ತಿ ನರ್ತಿಸುತ್ತಾರೆ. ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಈಗಲೂ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.
ಡಾ.ಫಾರೂಖ್ ಉದ್ವಾದಿಯಾ (93) ಹಾಗೂ ಡಾ.ಭೀಮ್ ಸಿಂಘಲ್ (92) ಇವತ್ತಿಗೂ ಸಂಪೂರ್ಣ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಜಡ್ಜ್‌ಗಳಿಗೆ ನಿವೃತ್ತಿಯೆಂಬುದೇ ಇಲ್ಲ. ಅಲ್ಲಿಗೆ ನ್ಯಾಯಮೂರ್ತಿಗಳು 9 ವರ್ಷಗಳ ಪೂರ್ಣ ಅವಧಿಗೆ ನೇಮಕಗೊಳ್ಳುತ್ತಾರೆ. ಅದು ಪೂರ್ಣವಾಗುವವರೆಗೂ ಇದ್ದರೆ ಮತ್ತೆ ಅವರನ್ನು ಅದೇ ಹುದ್ದೆಗೆ ಪುನರಾಯ್ಕೆ ಮಾಡಬಹುದು. ಅವರಿಗೆ ಎಷ್ಟು ವಯಸ್ಸಾಗಿದೆ ಎಂಬು ದನ್ನು ಯಾರೂ ನೋಡುವುದಿಲ್ಲ!
ಹಾಗಂತ ಯುವಕರಿಗೆ ಅವಕಾಶ ಸಿಗಬಾರದೇ ಎಂದು ಕೇಳಿದರೆ, ಅವರಿಗೂ ಅವಕಾಶ ಸಿಗಬೇಕು. ಆದರೆ ವಯಸ್ಸಾದವರನ್ನು ವಯಸ್ಸಿನ ಕಾರಣಕ್ಕೇ ಮನೆಗೆ ಹೋಗಿ ಎಂದು ಹೇಳಬಾರದು. ಏಕೆಂದರೆ ವಯಸ್ಸು ಮತ್ತು ಅನುಭವದ ಜೊತೆಗೆ ಜಾಣ್ಮೆಯೂ ಬರುತ್ತದೆ. ಅದರ ಜೊತೆಗೆ ನವಚೈತನ್ಯವೂ ಸೇರಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದು ಯುವಕರಿಗೂ ಅನ್ವಯಿಸುತ್ತದೆ. ಕೊನೆಯಲ್ಲಿ ವಯಸ್ಸಿನ ಬಗ್ಗೆ ಒಂದೆರಡು ಸಾಲುಗಳು ನೆನಪಾಗುತ್ತಿವೆ:
ವಯಸ್ಸಾಯಿತು ಎಂದು ತಮಾಷೆ ಮಾಡಬೇಡಿ, ನನಗಿರುವ ಬೇಡಿಕೆ ಬೇರೆಯೇ ಇದೆ. ವಯಸ್ಸೆಂಬುದು ಕನ್ನಡಿಯೊಳಗಿನ ಹೆಮ್ಮೆ.