ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸೋಮಾರಿ ತಿರುಕನ ಕನಸು

ಒಂದೂರಿನಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಗಟ್ಟಿ ಮುಟ್ಟಾಗಿದ್ದರೂ ಯಾವ ಕೆಲಸವನ್ನೂ ಮಾಡದೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಇವನಿಗೆ ಯಾವ ಬಂಧು ಬಳಗದವರೂ ಇರಲಿಲ್ಲ. ಶುದ್ಧ ಸೋಮಾರಿಯಾದ ಇಂಥವನಿಗೆ ಮದುವೆಯ ಭಾಗ್ಯವೂ ಇರಲಿಲ್ಲ. ಭಿಕ್ಷೆ ಬೇಡಿ ತಿನ್ನುವುದು, ತಿಂದು ಮಲಗೋದು ಅಷ್ಟೇ ಇವನ ಕೆಲಸ.

ಸೋಮಾರಿ ತಿರುಕನ ಕನಸು

ಒಂದೊಳ್ಳೆ ಮಾತು

rgururaj628@gmail.com

ಒಂದೂರಿನಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಗಟ್ಟಿಮುಟ್ಟಾಗಿದ್ದರೂ ಯಾವ ಕೆಲಸವನ್ನೂ ಮಾಡದೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಇವನಿಗೆ ಯಾವ ಬಂಧು ಬಳಗದವರೂ ಇರಲಿಲ್ಲ. ಶುದ್ಧ ಸೋಮಾರಿಯಾದ ಇಂಥವನಿಗೆ ಮದುವೆಯ ಭಾಗ್ಯವೂ ಇರಲಿಲ್ಲ. ಭಿಕ್ಷೆ ಬೇಡಿ ತಿನ್ನುವುದು, ತಿಂದು ಮಲಗೋದು ಅಷ್ಟೇ ಇವನ ಕೆಲಸ.

ಒಂದು ದಿನ ಒಬ್ಬಳು ಗೃಹಿಣಿ ಅವನಿಗೆ ಬೇಕಾಗಿದ್ದಕ್ಕಿಂತಲೂ ಸ್ವಲ್ಪ ಹೆಚ್ಚಿಗೆ ಹಸಿ ಹಿಟ್ಟನ್ನು ಭಿಕ್ಷೆ ನೀಡಿದಳು. ‘ಈ ದಿನ ನನ್ನ ಅದೃಷ್ಟ ಚೆನ್ನಾಗಿದೆ, ಸೀದಾ ಗುಡಿಸಲಿಗೆ ಹೋಗಿ ಅಂಬಲಿ ಮಾಡಿ ಕುಡಿದು ಚೆನ್ನಾಗಿ ನಿದ್ರೆ ಮಾಡಿ ಬಿಡುತ್ತೇನೆ’ ಎಂದುಕೊಂಡು ಬಂದ. ಇವತ್ತಿಗೆ ಸ್ವಲ್ಪ ಹಿಟ್ಟು ಸಾಕು ಉಳಿದದ್ದು ನಾಳೆಗೆ ಇರಲಿ, ನಾಳೆ ಭಿಕ್ಷೆ ಬೇಡುವುದು ತಪ್ಪುತ್ತದೆ ಎಂದುಕೊಂಡ. ಒಂದು ಮಡಿಕೆ ಯೊಳಗೆ ಉಳಿದ ಹಿಟ್ಟು ಹಾಕಿ ಇಲಿಗಳ ಕಾಟದಿಂದ ತಪ್ಪಿಸಲು ಮಡಕೆಯನ್ನು ಒಂದು ಡಬ್ಬದ ಮೇಲಿಟ್ಟ. ಅಂಬಲಿ ಕುಡಿದು ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಿ ಯೋಚಿಸತೊಡಗಿದ. ಹಿಟ್ಟನ್ನು ಊರಲ್ಲಿ ಬರಗಾಲ ಬರುವವರೆಗೂ ಹಾಗೆ ಉಳಿಸಿಕೊಳ್ಳಬೇಕು, ಆಗ ಅದನ್ನು ಮಾರಿದರೆ ತನಗೆ ತುಂಬಾ ದುಡ್ಡು ಸಿಗುತ್ತದೆ, ಅದರಿಂದ ಒಂದು ಹೆಣ್ಣು ಆಡು, ಒಂದು ಗಂಡು ಆಡನ್ನು ಕೊಂಡರೆ ಸ್ವಲ್ಪ ಸಮಯದಲ್ಲೇ ಅವುಗಳಿಂದ ಆಡುಗಳ ಮಂದೆಯೇ ಆಗುತ್ತದೆ. ಅವುಗಳನ್ನು ಮಾರಿ ಒಂದು ಎತ್ತು, ಒಂದು ಹಸುವನ್ನು ಕೊಳ್ಳಬೇಕು.

ಅವು ಕರು ಹಾಕಿದಾಗ ಜಾನುವಾರುಗಳ ಒಂದು ದೊಡ್ಡ ಹಿಂಡೇ ಆಗುತ್ತದೆ. ಅವುಗಳನ್ನು ಮಾರಿ ಒಂದು ಎಮ್ಮೆ, ಒಂದು ಕೋಣವನ್ನು ಕೊಂಡರೆ ಅವುಗಳದ್ದೂ ದೊಡ್ಡ ಹಿಂಡೇ ಆಗುತ್ತದೆ. ಮುಂದೆ ಅವುಗಳನ್ನು ಮಾರಿ ಒಂದು ಜೊತೆ ಕುದುರೆಯನ್ನು ಕೊಂಡರೆ, ಮುಂದೆ ಅವೂ ಮರಿ ಹಾಕಿ, ಕುದುರೆಗಳ ದೊಡ್ಡ ಲಾಯವೇ ಆಗುತ್ತದೆ. ಅವುಗಳನ್ನು ಮಾರಿ ದೊಡ್ಡ ಬಂಗಲೆಯನ್ನು ಕೊಳ್ಳಬಹುದು.

ಇದನ್ನೂ ಓದಿ: Roopa Gururaj Column: ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ಹೀಗೆ ಸಾಗಿತ್ತು ಅವನ ಹಗಲುಗನಸು. ಆಗ ಒಬ್ಬ ದೊಡ್ಡ ಶ್ರೀಮಂತ ತನ್ನ ಮಗಳನ್ನು ತನಗೆ ಕೊಟ್ಟು ಮದುವೆ ಮಾಡುತ್ತಾನೆ. ನನಗೊಬ್ಬ ರಾಜಕುಮಾರನಂತಹ ಮಗ ಹುಟ್ಟುತ್ತಾನೆ. ಆ ಮಗು ಅಂಬೆಗಾಲಿಡುತ್ತಾ, ಕುದುರೆ ಲಾಯದ ಬಳಿ ಹೋಗುತ್ತದೆ. ಅಯ್ಯೋ ಕುದುರೆಗಳು ಮಗುವನ್ನು ತುಳಿದುಬಿಟ್ಟರೆಲೇ, ಇವಳೇ ಮಗುವನ್ನು ಒಳಗೆ ಕರೆದುಕೋ ಎಂದು ಕೂಗುತ್ತಾನೆ. ಅವಳಿಗೆ ತನ್ನ ಕೆಲಸದಲ್ಲಿ ಇವನ ಕೂಗು ಕೇಳಿಸುವುದಿಲ್ಲ, ತಾನೇ ಎದ್ದು ಓಡಿ ಹೋಗಿ ಮಗುವನ್ನು ಎತ್ತಿಕೊಂಡು ಬರುತ್ತಾನೆ. ಕೋಪದಿಂದ ಹೆಂಡತಿಗೆ ಕಾಲೆತ್ತಿ ಒದೆಯಲು ಹೋಗುತ್ತಾನೆ.

ಅಷ್ಟರಲ್ಲೇ ಇವನ ಕಾಲು ತಗಲಿ ಡಬ್ಬದ ಮೇಲಿಟ್ಟಿದ್ದ ಹಿಟ್ಟಿನ ಮಡಕೆ ಕೆಳಗೆ ಬಿದ್ದು ಒಡೆದು ಚೂರಾಗುತ್ತದೆ. ತಕ್ಷಣ ಹಗಲುಗನಸಿನಿಂದ ಎಚ್ಚರಗೊಂಡ ಭಿಕ್ಷುಕನಿಗೆ ತಾನು ಮಾಡಿದ ಅನರ್ಥ ಕಾಣಿಸಿತು. ಹಗಲುಗನಸು ಕಾಣುತ್ತಾ, ರಾತ್ರಿಗಿದ್ದ ಹಿಟ್ಟನ್ನೂ ಮಣ್ಣು ಪಾಲು ಮಾಡಿದ್ದ.

‘ಅಯ್ಯೋ, ಎಷ್ಟು ಚಂದದ ಕನಸು ಒಡೆದು ನುಚ್ಚು ನೂರಾಗಿ ಹೋಯಿತಲ್ಲಾ’ ಎಂದು ಸಪ್ಪೆಮೊರೆ ಹಾಕಿಕೊಂಡು, ರಾತ್ರಿಯ ಊಟಕ್ಕಾಗಿ ಭಿಕ್ಷೆ ಬೇಡಲು ಮತ್ತೆ ಹೊರಗೆ ಹೊರಟ. ಕನಸು ಕಾಣುವುದು ಸುಲಭ, ಆದರೆ ಆ ಕನಸನ್ನು ನನಸಾಗಿಸಿಕೊಳ್ಳಲು ಹಗಲು-ರಾತ್ರಿಯ ನಿರಂತರ ಪರಿಶ್ರಮವಿರುತ್ತದೆ. ನಾನು ಹೀಗಿರಬೇಕು, ಹಾಗಾಗಬೇಕು ಎಂದು ಎಲ್ಲರ ಮುಂದೆ ಕೊಚ್ಚಿಕೊಳ್ಳುವವರು ಅದಕ್ಕಾಗಿ ಏನು ಮಾಡುತ್ತಿದ್ದೇವೆ ಎಂದು ಹೇಳುವುದೇ ಇಲ್ಲ.

ಆದ್ದರಿಂದಲೇ ಗಾಳಿಯಲ್ಲಿ ಕತ್ತಿ ಆಡಿಸದೆ, ನಮ್ಮ ಜೀವನ ಚಂದಗಾಣಿಸಲು ಕನಸುಗಳಿರಲಿ, ರಾತ್ರಿಯ ನಿದ್ದೆಗಳನ್ನೇ ತ್ಯಾಗ ಮಾಡಬೇಕಾಗುತ್ತದೆ. ಕಷ್ಟ ಪಟ್ಟಾಗ ಸುಖ ಸಿಕ್ಕೇ ಸಿಗುತ್ತದೆ, ಆದರೆ ಆ ಕಷ್ಟದ ದಾರಿಯಲ್ಲಿ ನಮ್ಮ ನಿರಂತರ ಪ್ರಯತ್ನವನ್ನು ಎಂದೂ ಕೈ ಬಿಡಬಾರದು.