ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ

ದುರದೃಷ್ಟವಶಾತ್ ಮಹಾರಾಷ್ಟ್ರ ಕೂಡ ಈಗ ಶೈಕ್ಷಣಿಕ ಹಗರಣಗಳಲ್ಲಿ ಪಾಲ್ಗೊಂಡ ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾಗಿದೆ. ನಕಲಿ ಶಿಕ್ಷಕರನ್ನು ಶಾಲೆಗಳಿಗೆ ನೇಮಕಾತಿ ಮಾಡಿದರೆ ಅವರು ಎಂತಹ ಪ್ರಜೆಗಳನ್ನು ಸೃಷ್ಟಿ ಮಾಡಬಲ್ಲರು? ವಿದ್ಯಾರ್ಥಿಗಳಿಗೆ ಏನು ಪಾಠ ಮಾಡು ತ್ತಾರೆ? ಅವರು ಭವ್ಯ ಭಾರತದಲ್ಲಿ ಎಂತಹ ಪ್ರಜೆಗಳನ್ನು ಸೃಷ್ಟಿಸಬಲ್ಲರು? ಇಷ್ಟಕ್ಕೂ, ಶಿಕ್ಷಣಕ್ಕಿಂತ ಪವಿತ್ರವಾದುದು ನಮ್ಮ ಜೀವನದಲ್ಲಿ ಏನಿದೆ? ಆದರೆ ಈ ವಂಚಕರು ಅದನ್ನೂ ಕುಲಗೆಡಿಸುತ್ತಿದ್ದಾರೆ!

ಶಿಕ್ಷಣ ವ್ಯವಸ್ಥೆಯಲ್ಲಿ ಕಳ್ಳಾಟ ದೇಶಕ್ಕೇ ಮೋಸ

Profile Ashok Nayak Apr 24, 2025 6:55 AM

ಸಂಗತ

ಡಾ.ವಿಜಯ್‌ ದರಡಾ

ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಉತ್ತರ ಪ್ರದೇಶ, ಬಿಹಾರ, ಕರ್ನಾಟಕ, ತ್ರಿಪುರಾ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಶೈಕ್ಷಣಿಕ ಹಗರಣಗಳು ನಡೆದಿದ್ದು ಕೆಲ ಸಮಯದ ಹಿಂದೆ ಪತ್ರಿಕೆಗಳಲ್ಲಿ ಪ್ರಮುಖ ಹೆಡ್‌ಲೈನ್ ಆಗಿತ್ತು. ಇದೀಗ ಮಹಾರಾಷ್ಟ್ರ ಕೂಡ ಆ ಸಾಲಿಗೆ ಸೇರ್ಪಡೆಯಾಗಿದೆ. ಎಂತಹ ದುರದೃಷ್ಟ ನೋಡಿ. ನನಗೆ ಬಹಳ ಆಘಾತವಾಗಿದೆ. ಮಹಾ ರಾಷ್ಟ್ರದಲ್ಲಿ ನಿಜಕ್ಕೂ ಏನಾಗುತ್ತಿದೆ? ಈ ಹಗರಣಕ್ಕೆ ಯಾರು ಹೊಣೆ? ಒಂದು ಕಡೆ ನಾವೆಲ್ಲರೂ ನಮ್ಮ ನಮ್ಮ ರಾಜ್ಯ ಮತ್ತು ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು ಎಂದು ಮಾತನಾಡುತ್ತೇವೆ. ಇನ್ನೊಂದು ಕಡೆ ಶಿಕ್ಷಕರ ನೇಮಕಾತಿಯಲ್ಲೇ ಬಹುಕೋಟಿ ಮೊತ್ತದ ವಂಚನೆ ಗಳು ನಡೆಯುತ್ತಿವೆ. ಶೈಕ್ಷಣಿಕ ಅರ್ಹತೆಯೇ ಇಲ್ಲದ ನಕಲಿ ಶಿಕ್ಷಕರು ನಮ್ಮ ಶಾಲೆ, ಕಾಲೇಜುಗಳಿಗೆ ನೇಮಕಗೊಳ್ಳು ತ್ತಿದ್ದಾರೆ. ಮೊದಲಿಗೆ ನಾಗ್ಪುರ ವಲಯದಲ್ಲಿ ಈ ಹಗರಣ ಆರಂಭವಾಯಿತು.

ಅದರ ತನಿಖೆ ನಡೆಸಿದಾಗ ಛತ್ರಪತಿ ಸಂಭಾಜಿನಗರದಲ್ಲೂ ಇಂತಹ ಹಲವು ಪ್ರಕರಣಗಳು ನಡೆದಿರು ವುದು ಬೆಳಕಿಗೆ ಬಂತು. ಅಲ್ಲಿ ಸಾಕಷ್ಟು ಜನರು ನಕಲಿ ಸರ್ಟಿಫಿಕೆಟ್ ಗಳನ್ನು ಬಳಸಿಕೊಂಡು ಪಿಎಚ್‌ಡಿ ಕೂಡ ಪಡೆದಿದ್ದರು. ಹಿಂದೆ ನಾನು ರಾಜ್ಯಸಭೆ ಸದಸ್ಯನಾಗಿದ್ದಾಗ ನಕಲಿ ಪಿಎಚ್‌ಡಿ ಪದವಿಗಳ ಬಗ್ಗೆ ಶಾಸನಸಭೆಯಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದೆ.

ದೇಶಾದ್ಯಂತ ನೂರಾರು ಜನರು ನಕಲಿ ಅಂಕಪಟ್ಟಿ ಹಾಗೂ ಸರ್ಟಿಫಿಕೆಟ್‌ಗಳನ್ನು ಬಳಸಿ ಪಿಎಚ್‌ಡಿ ಪಡೆಯುತ್ತಿದ್ದಾರೆ, ಇದೊಂದು ಹಗರಣದ ರೀತಿಯಲ್ಲಿ ನಡೆಯುತ್ತಿದೆ ಎಂದು ಗಮನ ಸೆಳೆದಿದ್ದೆ. ಈಗ ಈ ನಕಲಿ ಸರ್ಟಿಫಿಕೆಟ್‌ಗಳ ಹಾವಳಿ ಎಲ್ಲಿಗೆ ಹೋಗಿ ತಲುಪಿದೆಯೆಂದರೆ, ನಾಮಪತ್ರ ಸಲ್ಲಿಸಲು ಕೂಡ ನಕಲಿ ಸರ್ಟಿಫಿಕೆಟ್‌ಗಳನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: Dr Vijay Darda Column: ಚೀನಾ ವಿರುದ್ದ ಟ್ರಂಪ್‌ ಕಾರ್ಡ್‌ ಕೆಲಸ ಮಾಡುವುದೆ ?

ನನಗೊಂದು ವಿಷಯ ಅರ್ಥವಾಗುತ್ತಿಲ್ಲ. ನಕಲಿ ದಾಖಲೆಗಳನ್ನು ಬಳಸಿಕೊಂಡು ಶಿಕ್ಷಕರಾಗಿ ನೇಮಕಗೊಳ್ಳುವವರು ವಿದ್ಯಾರ್ಥಿಗಳಿಗೆ ಏನು ಪಾಠ ಮಾಡುತ್ತಾರೆ? ಅವರು ಭವ್ಯ ಭಾರತದಲ್ಲಿ ಎಂತಹ ಪ್ರಜೆಗಳನ್ನು ಸೃಷ್ಟಿಸಬಲ್ಲರು? ನಾಗ್ಪುರ ವಲಯವೊಂದರಲ್ಲೇ 12 ಶಾಲೆಗಳಿಗೆ 580 ನಕಲಿ ಶಿಕ್ಷಕರು ನೇಮಕಗೊಂಡಿದ್ದಾರೆ ಎಂಬುದು ಆಘಾತಕಾರಿ ಹಾಗೂ ನಂಬಲು ಸಾಧ್ಯವಿಲ್ಲದ ಸಂಗತಿ.

ಇದರ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವಾಲಯಕ್ಕೆ ಗೊತ್ತೇ ಇರಲಿಲ್ಲ ಅಂದರೆ ನಮ್ಮ ವ್ಯವಸ್ಥೆ ಎಲ್ಲಿಗೆ ಹೋಗಿ ತಲುಪಿದೆ ಎಂದು ಅಚ್ಚರಿಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲ ಶಾಲಾ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ನಕಲಿ ಲಾಗಿನ್ ಐಡಿಗಳನ್ನು ಬಳಸಿಕೊಂಡು ನಕಲಿ ಶಿಕ್ಷಕರು ಹಾಗೂ ಸಿಬ್ಬಂದಿಯ ಹೆಸರುಗಳನ್ನು ಸರಕಾರದ ವೆಬ್‌ಸೈಟಿನಲ್ಲಿ ಸೇರ್ಪಡೆ ಮಾಡಿದ್ದಾರೆ.

Screenshot_6 ಒಕ

ಹಳೆಯ ದಿನಾಂಕವನ್ನು ತೋರಿಸಿ ನೇಮಕಾತಿ ಮಾಡಿಕೊಂಡು, ಅಲ್ಲಿಂದ ಇಲ್ಲಿಯವರೆಗೂ ಇವರಿಗೆ ವೇತನ ಸಂದಾಯವಾದಂತೆ ನಮೂದಿಸಿ, ಹಿಂಬಾಕಿಯನ್ನೂ ಪಾವತಿಸಿ, ಕೋಟ್ಯಂತರ ರೂಪಾಯಿ ಹಣ ನುಂಗಿಹಾಕಿದ್ದಾರೆ. ಇಲ್ಲೇನೋ ಅಕ್ರಮ ನಡೆಯುತ್ತಿದೆ ಎಂದು ಕೆಲ ದಕ್ಷ ಅಧಿಕಾರಿಗಳು ದಾಖಲೆಗಳನ್ನು ಪರಾಮರ್ಶೆ ನಡೆಸದೆ ಇದ್ದಿದ್ದರೆ ಈ ಅವ್ಯವಹಾರ ಹೀಗೇ ಮುಂದುವರೆಯುತ್ತಿತ್ತು. ಈ ಪ್ರಾಮಾಣಿಕ ಅಧಿಕಾರಿಗಳು ತಾವೂ ಕೂಡ ಅಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರಿಂದ ಹಗರಣ ಬೆಳಕಿಗೆ ಬಂದಿತು.

ಈ ಅವ್ಯವಹಾರದಲ್ಲಿ ಕೆಲ ದೊಡ್ಡ ದೊಡ್ಡ ರಾಜಕಾರಣಿಗಳು ಕೂಡ ಭಾಗಿಯಾಗಿದ್ದಾರೆ ಎಂಬ ಸುದ್ದಿಯಿದೆ. ಸರಿಯಾಗಿ ತನಿಖೆ ನಡೆದರೆ ಎಲ್ಲಾ ಹೆಸರುಗಳು ಹೊರಗೆ ಬರುತ್ತವೆ. ಪುಣೆಯ ಶಿಕ್ಷಣ ನಿರ್ದೇಶನಾಲಯಕ್ಕೆ ಹಗರಣದ ಸುಳಿವು ಸಿಕ್ಕಾಗ ಅದು 304 ಶಾಲೆಗಳ ಬಳಿ ನಿಮ್ಮಲ್ಲಿ ನಡೆದ ನೇಮಕಾತಿಯ ದಾಖಲೆಗಳನ್ನು ನೀಡಿ ಎಂದು ಕೇಳಿತು. 2019ರಿಂದ 2025ರ ನಡುವೆ ನೇಮಕ ಗೊಂಡ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯ ಬಗ್ಗೆ ಅದು ವರದಿ ಕೇಳಿತು. ಆ ನೇಮಕಾತಿಗೆ ಸರಕಾರದಿಂದ ದೊರೆತ ಒಪ್ಪಿಗೆ, ನೇಮಕಾತಿಯ ದಿನಾಂಕ, ವೇತನದ ಬಿಲ್‌ಗಳನ್ನು ನೀಡುವಂತೆ ಯೂ ಸೂಚಿಸಿತು.

ಶಾಲೆಗಳು 1056 ಶಿಕ್ಷಕರ ನೇಮಕಾತಿಯ ಪಟ್ಟಿಯನ್ನು ಮಾತ್ರ ನೀಡಿದವು. ಆದರೆ, ಸರಕಾರ ಕೇಳಿದ ವಿವರಗಳನ್ನು ನೀಡಲು ಅವುಗಳಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅನೇಕ ಶಿಕ್ಷಕರು ಅಸ್ತಿತ್ವದಲ್ಲೇ ಇರಲಿಲ್ಲ ಮತ್ತು ನೇಮಕಾತಿ ನಡೆಯುವುದಕ್ಕೂ ಮೊದಲೇ ನಕಲಿ ಶಿಕ್ಷಕರಿಗೆ ಹಿಂದಿನ ದಿನಾಂಕ ಗಳಿಂದ ವೇತನ ಪಾವತಿಸಲಾಗಿತ್ತು!

ಹಗರಣದಲ್ಲಿ ಭಾಗಿಯಾಗಿದ್ದ ನಾಗ್ಪುರದ ಶಿಕ್ಷಣ ಇಲಾಖೆ ಅಧಿಕಾರಿ ನಿಲೇಶ್ ವಾಗ್ಮರೆಯನ್ನು ಅಮಾನತು ಮಾಡಲಾಯಿತು. ಆತ ಶಿಕ್ಷಣ ಇಲಾಖೆಯಲ್ಲಿ ಬಹಳ ಪ್ರಭಾವಿಯಾಗಿದ್ದ. ತನ್ನ ಅಂಕಲ್ ಮಹಾರಾಷ್ಟ್ರದ ಸರಕಾರದಲ್ಲಿ ಮಂತ್ರಿ ಎಂದು ಹೇಳಿಕೊಂಡು ಈತ ಓಡಾಡುತ್ತಿದ್ದ. ತನಿಖೆ ಮುಂದುವರೆದಾಗ ಹಗರಣದ ಹಲವು ಮಜಲುಗಳು ತೆರೆದುಕೊಂಡವು. ಇನ್ನೂ ಏನೇನು ಹೊರಗೆ ಬರುವುದೋ ಕಾದು ನೋಡೋಣ!

ಹಿಂದೆ ಪೃಥ್ವಿರಾಜ್ ಚವಾಣ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ನನ್ನ ತಮ್ಮ ರಾಜೇಂದ್ರ ದರಡಾ ಶಿಕ್ಷಣ ಮಂತ್ರಿಯಾಗಿದ್ದರು. ಅವರು ಆ ಸಮಯದಲ್ಲಿ ಶಾಲೆಗಳು ನಕಲಿ ವಿದ್ಯಾರ್ಥಿಗಳ ಹೆಸರು ನೋಂದಣಿ ಮಾಡಿಕೊಂಡು ಸರ್ಕಾರದಿಂದ ಹಣ ಲಪಟಾಯಿಸುತ್ತಿದ್ದ ಹಗರಣವನ್ನು ಪತ್ತೆ ಮಾಡಿದ್ದರು. ಆಗ ಮುಖ್ಯಮಂತ್ರಿಗಳಿಗೆ ದೇವೇಂದ್ರ ಫಡ್ನವೀಸ್ ಕಾರ್ಯದರ್ಶಿಯಾಗಿದ್ದರು.

ಶ್ರೀಕರ ಪರದೇಶಿಯವರು ನಾಂದೇಡ್‌ನ ಜಿಲ್ಲಾಧಿಕಾರಿಯಾಗಿದ್ದರು. ಅವರು ಅಂದಿನ ಶಿಕ್ಷಣ ಮಂತ್ರಿ ರಾಜೇಂದ್ರ ದರಡಾಗೆ ವರದಿ ನೀಡಿ, ನಾಂದೇಡ್‌ನ ಕೆಲ ಶಾಲೆಗಳಲ್ಲಿ ನಿಜವಾಗಿಯೂ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೂ, ಸರಕಾರದ ದಾಖಲೆಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸವಿದೆ ಎಂದು ತಿಳಿಸಿದ್ದರು. ಅದನ್ನು ರಾಜೇಂದ್ರ ದರಡಾ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ, ತಾನು ರಾಜ್ಯಾದ್ಯಂತ ಶಾಲೆಗಳಲ್ಲಿ ನಕಲಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವ ಆಂದೋ ಲನ ಕೈಗೊಳ್ಳುವುದಾಗಿ ತಿಳಿಸಿದರು.

ಅಂದಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ಸಚಿವರು ಅದಕ್ಕೆ ಬೆಂಬಲ ನೀಡಿ ದ್ದರು. ಇದು ಗಮನಾರ್ಹ ಸಂಗತಿ ಏಕೆಂದರೆ, ಸಾಕಷ್ಟು ಶಾಲೆಗಳು ಪ್ರಭಾವಿ ವ್ಯಕ್ತಿಗಳು, ರಾಜಕಾರಣಿ ಗಳು ಮತ್ತು ಅವರ ಆಪ್ತರ ಒಡೆತನದಲ್ಲಿದ್ದವು. ಅದಕ್ಕೆ ತಲೆಕೆಡಿಸಿಕೊಳ್ಳದೆ ಮೂರು ದಿನಗಳ ತನಿಖಾ ಆಂದೋಲನ ನಡೆಯಿತು. ಅದು ನಕಲಿ ವಿದ್ಯಾರ್ಥಿಗಳ ಪತ್ತೆಗೆ ದೇಶದಲ್ಲಿ ನಡೆದ ಅತಿ ದೊಡ್ಡ ಆಂದೋಲನವಾಗಿತ್ತು.

ಫಲಿತಾಂಶ ಬಂದಾಗ ಎಲ್ಲರಿಗೂ ಆಘಾತವಾಗಿತ್ತು. ರಾಜ್ಯ ಸರಕಾರದ ದಾಖಲೆಗಳಲ್ಲಿ 2.18 ಕೋಟಿ ವಿದ್ಯಾರ್ಥಿಗಳಿದ್ದರು. ಅವುಗಳ ಪೈಕಿ 12 ಲಕ್ಷ ವಿದ್ಯಾರ್ಥಿಗಳು ಅಸ್ತಿತ್ವದಲ್ಲೇ ಇಲ್ಲ ಎಂಬುದು ತನಿಖೆ ಯಲ್ಲಿ ತಿಳಿದುಬಂತು. ಈ 12 ಲಕ್ಷ ವಿದ್ಯಾರ್ಥಿಗಳ ಹೆಸರೇ ಸಂಪೂರ್ಣ ನಕಲಿಯಾಗಿದ್ದವು. ಆದರೆ ಅವರ ಹೆಸರಿನಲ್ಲಿ ಶಾಲೆಗಳಿಗೆ ಅನುದಾನ, ಶಿಕ್ಷಕರ ವೇತನ, ಪಠ್ಯಪುಸ್ತಕಕ್ಕೆ ಹಣ, ನೋಟ್‌ ಪುಸ್ತಕ, ಮಧ್ಯಾಹ್ನದ ಬಿಸಿಯೂಟ ಹೀಗೆ ಕೋಟ್ಯಂತರ ರೂಪಾಯಿಗಳನ್ನು ಸರಕಾರ ಪಾವತಿಸುತ್ತಿತ್ತು.

ರಾಜೇಂದ್ರ ದರಡಾ ನಡೆಸಿದ ಆ ಆಂದೋಲನದಿಂದ ಸರಕಾರಕ್ಕೆ 100 ಕೋಟಿ ರೂಪಾಯಿ ಪ್ರತಿ ವರ್ಷ ಉಳಿತಾಯವಾಗತೊಡಗಿತು. ಒಂದಂತೂ ಸ್ಪಷ್ಟ. ಸರಕಾರವು ಶಿಕ್ಷಕರಿಗೆ ವೇತನ ಶ್ರೇಣಿ ಜಾರಿಗೊಳಿಸಿದ ಬಳಿಕ ಸರಕಾರಿ ಶಾಲಾ ಶಿಕ್ಷಕರು ಮತ್ತು ಅನುದಾನಿತ ಶಾಲೆಗಳ ಶಿಕ್ಷಕರಿಗೆ ದೊಡ್ಡ ಮೊತ್ತದ ವೇತನ ಲಭಿಸತೊಡಗಿದ್ದರಿಂದ ಹಗರಣಗಳು ಹೆಚ್ಚುತ್ತಲೇ ಹೋಗಿವೆ. ತಳಮಟ್ಟದಿಂದ ಉನ್ನತ ಹಂತದ ವರೆಗೂ ಇದರಲ್ಲಿ ನಾನಾ ವ್ಯಕ್ತಿಗಳು ಭಾಗಿಯಾಗಿದ್ದಾರೆ.

ಇದು ತೆರಿಗೆದಾರರ ಹಣದ ಲೂಟಿಯಲ್ಲದೆ ಬೇರೇನೂ ಅಲ್ಲ. ಶಿಕ್ಷಣ ನೀಡುವುದು ಪವಿತ್ರ ಕಾರ್ಯ ಎಂದು ನಂಬಿರುವ ನಮ್ಮ ದೇಶದಲ್ಲೇ ಶಿಕ್ಷಣದ ಹೆಸರಿನಲ್ಲಿ ಇಂತಹ ಹಗರಣಗಳು ನಡೆಯುತ್ತಿವೆ ಎಂಬುದು ನನಗಂತೂ ಆಘಾತಕಾರಿ ಸಂಗತಿ. ಆದರೆ ಇಂದು ಶಾಲೆ ಮತ್ತು ಕಾಲೇಜುಗಳನ್ನು ‘ಸಂಸ್ಥೆ ಗಳು’ ಎಂದು ಕರೆಯತೊಡಗಿದ ಮೇಲೆ ಶಿಕ್ಷಣ ಕೂಡ ಬಿಸಿನೆಸ್ ಆಗಿ ಪರಿವರ್ತಿತವಾಗಿದೆ. ನಿಮಗೆ ಆಶ್ಚರ್ಯವಾಗಬಹುದು. ಇಂದು ಶಾಲೆ, ಕಾಲೇಜುಗಳನ್ನು ಉದ್ಯಮದಂತೆ ನಡೆಸುವವರು ಎಷ್ಟು ಶ್ರೀಮಂತರಾಗಿದ್ದಾರೆ ಅಂದರೆ, ಅವರು ದೊಡ್ಡ ದೊಡ್ಡ ನಗರಗಳಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಬಂಗಲೆ, ವಿಲ್ಲಾ, ಮನೆ, ಫ್ಲಾಟ್‌ಗಳನ್ನು ಹೊಂದಿದ್ದಾರೆ.

ನೆನಪಿಡಿ, ಯಾವುದೇ ಸಮಾಜಕ್ಕೆ ಶಿಕ್ಷಣಕ್ಕಿಂತ ದೊಡ್ಡ ವರದಾನ ಬೇರೆ ಇಲ್ಲ. ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದಾಗ ಮಾತ್ರ ನಾವು ಗುಣಮಟ್ಟದ ಶಿಕ್ಷಕರನ್ನೂ, ಸುಶಿಕ್ಷಿತ ಪ್ರಜೆಗಳನ್ನೂ ಸೃಷ್ಟಿಸಲು ಸಾಧ್ಯ. ಆಗ ಮಾತ್ರ ನಾವು ಜಗತ್ತಿನೆದುರು ಎದೆ ತಟ್ಟಿಕೊಂಡು ರಾಮಾಯಣ ನಮ್ಮದು, ಭಗವದ್ಗೀತೆ ನಮ್ಮದು ಎಂದು ಹೇಳಿಕೊಳ್ಳಬಹುದು. ಇಂದು ಜಗತ್ತಿನಾದ್ಯಂತ ವಿಶ್ವವಿದ್ಯಾಲಯಗಳು ತಮ್ಮಲ್ಲಿರುವ ವಿದ್ಯಾರ್ಥಿಗಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಕಲಿಸುತ್ತಿವೆ.

ಆದರೆ ನಾವು ನಮ್ಮ ಮನೆಗಳಲ್ಲೂ ಮಕ್ಕಳಿಗೆ ಇದನ್ನು ಕಲಿಸುತ್ತಿಲ್ಲ. ಮಕ್ಕಳಿಗೆ ನಾವು ಬೇರೇನನ್ನೂ ನೀಡುವುದು ಬೇಕಿಲ್ಲ- ಕೇವಲ ಶಿಕ್ಷಣ ನೀಡಿದರೆ ಸಾಕು! ಒಂದು ಬಡ ಕುಟುಂಬದ ಮಗು ಶಿಕ್ಷಣ ಪಡೆದರೆ ಅದು ದೊಡ್ಡವನಾದ ಮೇಲೆ ಇಡೀ ಕುಟುಂಬವನ್ನೇ ಮೇಲೆತ್ತುತ್ತದೆ. ಸಮಾಜದಲ್ಲಿ ನಿಜವಾದ ಬದಲಾವಣೆ ತರುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಕೋಟ್ಯಧಿಪತಿಗಳು ದಿವಾಳಿಯಾಗುವು ದನ್ನು ನಾನು ನೋಡಿದ್ದೇನೆ.

ಅದೇ ವೇಳೆ, ಉತ್ತಮ ಶಿಕ್ಷಣ ಪಡೆದವರು ದಿವಾಳಿಯಾಗದೆ ಇನ್ನೂ ಎತ್ತರೆತ್ತರಕ್ಕೆ ಏರುವುದನ್ನೂ ನೋಡಿದ್ದೇನೆ. ನನ್ನ ಪ್ರಕಾರ, ಶಿಕ್ಷಣ ವ್ಯವಸ್ಥೆಯ ಜೊತೆಗೆ ಕಳ್ಳಾಟ ಆಡುವುದು ನಮಗೆ ನಾವು
ಮಾಡಿಕೊಳ್ಳುವ ಮೋಸವಲ್ಲ, ಬದಲಿಗೆ ದೇಶಕ್ಕೇ ಮಾಡುವ ಮೋಸ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಶಿಕ್ಷಣ ಕ್ಷೇತ್ರದಲ್ಲಿ ಅಪರಾತಪರಾ ಮಾಡಿದ ವಂಚಕರನ್ನು ಪತ್ತೆಹಚ್ಚಿ ಶಿಕ್ಷಿಸುತ್ತಾರೆ ಎಂಬ ನಂಬಿಕೆ ನನಗಿದೆ. ಅವರ ಜೊತೆಗೆ ಕಾರ್ಯದರ್ಶಿಯಾಗಿ ಪ್ರವೀಣ್ ಪರದೇಶಿ ಇದ್ದಾರೆ. ಅವರಿಗೆ ವಂಚಕರನ್ನು ಹಿಡಿಯುವುದು ಹೇಗೆಂಬುದು ಚೆನ್ನಾಗಿ ಗೊತ್ತಿದೆ!