Shishir Hegde Column: ಬುಗರಿಬೈಲ್ ಬಸ್ಸು ಕಲಿಸಿದ ಶರಣಾಗತಿಯ ಪಾಠ
ಕುಮಟೆಯಿಂದ ನಮ್ಮೂರಿನ ಮಾರ್ಗಮಧ್ಯೆ ಸಿಗುವ ಅಂಗಡಿಗಳೂ ಮನೆಯವರಂತೆ ಹಾಲ್ಟಿಂಗ್ ಗಾಡಿಗೆ ಕಾಯುತ್ತಿದ್ದವು. ಅದು ಅವರ ಗಿರಾಕಿಗಳ ಕೊನೆಯ ಸಾಧ್ಯತೆಯಾಗಿತ್ತು. ಹಾಗಾಗಿ ಬಸ್ಸು ಮುಂದೆ ಮುಂದೆ ಹೊರಟಂತೆ ಅಂಗಡಿಗಳು ಲೈಟ್ ಆರಿಸಿ ಮುಚ್ಚಿ ಕೊಳ್ಳುತ್ತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳು ‘ಹಾಲ್ಟಿಂಗ್ ಗಾಡಿ’ ಬಂದಾಯ್ತು ಎಂದು ಮಲಗಲು ಗಡಿಬಿಡಿ ಬೀಳುತ್ತಿದ್ದವು.
-
ಶಿಶಿರಕಾಲ
ನಮ್ಮೂರು ಮೂರೂರಿನಿಂದ ಕುಮಟೆಯ ಹೈಸ್ಕೂಲು, ಕಾಲೇಜಿಗೆ ಬಸ್ಸಿನಲ್ಲಿ ಹೋಗಬೇಕಿತ್ತು. ಸುಮಾರು ಹತ್ತು ಕಿಲೋಮೀಟರ್ ದೂರ. ಕಾಲೇಜು ಹೆಚ್ಚಿನ ದಿನ ಶುರುವಾಗುತ್ತಿದ್ದುದು ಬೆಳಗ್ಗೆ ಎಂಟುಗಂಟೆಗೆ. ಅಷ್ಟು ಬೇಗ ಕುಮಟಾ ತಲುಪಬೇಕೆಂದರೆ ಇದ್ದದ್ದು ಬೆಳಗ್ಗೆ ೬ ಗಂಟೆಯ ‘ಹಾಲ್ಟಿಂಗ್ ಬಸ್’ ಮಾತ್ರ. ಹೆಸರೇ ಹೇಳುವಂತೆ ‘ಹಾಲ್ಟಿಂಗ್ ಬಸ್’ - ರಾತ್ರಿ ನಮ್ಮೂರ ತಂಗುತ್ತಿದ್ದ ಬಸ್.
ಅದುವೇ ಕುಮಟೆಯಿಂದ ನಮ್ಮೂರಿಗೆ ಬರುತ್ತಿದ್ದ ಕೊನೆಯ ಬಸ್. ಅದುವೇ ಮುಂದಿನ ಊರಾದ ಬುಗರಿಬೈಲಿನಲ್ಲಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ಹೊರಡುತ್ತಿದ್ದ ದಿನದ ಮೊದಲ ಬಸ್. ನಮ್ಮೂರಿಗೆ ಬರುತ್ತಿದ್ದ ಬಸ್ಸುಗಳಲ್ಲಿಯೇ ಅತ್ಯಂತ ನಂಬಲರ್ಹ ಬಸ್ಸೆಂದರೆ ‘ಹಾಲ್ಟಿಂಗ್ ಬಸ್’. ರಾತ್ರಿ ಕೊನೆಯ ಬಸ್ ಆದದ್ದರಿಂದ ಕುಮಟೆಯಿಂದ ಬಸ್ಸು ೧೦ ಗಂಟೆಗೆ ಹೊರಡಲೇಬೇಕಿತ್ತು. ಬಂದಮೇಲೆ ಬೆಳಗ್ಗೆ ಕುಮಟೆಗೆ ಹೋಗಲೇಬೇಕಿತ್ತು.
ಹಾಗಾಗಿ ನಮ್ಮೂರಿಗೆ ಬರುತ್ತಿದ್ದ ಏಳೆಂಟು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಈ ಬಸ್ಸಿಗೆ ಮಾತ್ರ ನಿಯತತೆ, ಪಕ್ಕಾತನ ಇತ್ತು. ಉಳಿದವು ಬಂದರೆ ಬಂದವು, ಹೋದರೆ ಹೋದವು. ನಮ್ಮೂರಲ್ಲಿ ‘ನಿನ್ನೆ ಹಾಲ್ಟಿಂಗ್ ಗಾಡಿಗೆ ಬಂದ್ನೋ’ ಎಂದರೆ ಅದು ‘ರಾತ್ರಿ ಬಹಳ ತಡವಾಗಿ’ ಊರಿಗೆ ಬಂದದ್ದು ಎನ್ನುವುದಕ್ಕೆ ಅನ್ವರ್ಥ.
ಇದನ್ನೂ ಓದಿ: Shishir Hegde Column: ಚಿಕ್ಕಪುಟ್ಟ 'ರಿಪೇರಿ' ಕೊಡುವ ಖುಷಿ, ಕಲಿಸುವ ಪಾಠ
ಅದರಾಚೆ ಊರಿಗೆ ಬರಲಿಕ್ಕೆ ಬೇರೊಂದು ಉಪಾಯವೇ ಇರಲಿಲ್ಲ. ಬೈಕು-ಕಾರು ಅಷ್ಟಿರದ ಸಮಯ. ಊರೆಂಬ ವ್ಯವಸ್ಥೆಯ ಆಚೆ ಪುಟಿದ ಊರವರನ್ನು ಸಮುದ್ರದ ತೆರೆಗಳು ಪ್ಲಾಸ್ಟಿಕ್ ಬಾಟಲಿಯನ್ನು ದಡಕ್ಕೆ ತರುವಂತೆ, ಬಸ್ಸು ನಮ್ಮೂರಿನ ಜನರನ್ನು ಚಾಚೂ ತಪ್ಪದೆ ನಿತ್ಯ ಊರಿಗೆ ಮರಳಿಸಿ ಕೃತಾರ್ಥವಾಗುತ್ತಿತ್ತು. ಈ ಕೊನೆಯ ಬಸ್ಸಿಗೆ ಬಾರದವನು ಆ ದಿನ ಬರುವುದಿಲ್ಲ ಎಂದೇ ಅರ್ಥ.
ಕುಮಟೆಯಿಂದ ನಮ್ಮೂರಿನ ಮಾರ್ಗಮಧ್ಯೆ ಸಿಗುವ ಅಂಗಡಿಗಳೂ ಮನೆಯವರಂತೆ ಹಾಲ್ಟಿಂಗ್ ಗಾಡಿಗೆ ಕಾಯುತ್ತಿದ್ದವು. ಅದು ಅವರ ಗಿರಾಕಿಗಳ ಕೊನೆಯ ಸಾಧ್ಯತೆಯಾಗಿತ್ತು. ಹಾಗಾಗಿ ಬಸ್ಸು ಮುಂದೆ ಮುಂದೆ ಹೊರಟಂತೆ ಅಂಗಡಿಗಳು ಲೈಟ್ ಆರಿಸಿ ಮುಚ್ಚಿ ಕೊಳ್ಳುತ್ತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳು ‘ಹಾಲ್ಟಿಂಗ್ ಗಾಡಿ’ ಬಂದಾಯ್ತು ಎಂದು ಮಲಗಲು ಗಡಿಬಿಡಿ ಬೀಳುತ್ತಿದ್ದವು.
ಹಾಲ್ಟಿಂಗ್ ಬಸ್ಸು ಬಂತೆಂದರೆ ಊರ ಕೋಟೆಯ ಬಾಗಿಲು ಮುಚ್ಚಿದಂತೆ. ಅದಾದ ಮೇಲೆ ಊರಿಗೆ ಊರೇ ಸ್ತಬ್ಧ. ನಾಯಿಗಳ ಕೂಗು ನಿಲ್ಲಿಸಿದಲ್ಲಿ ನಿಶ್ಶಬ್ದ. ಈ ಬಸ್ಸು ಇಡೀ ಊರಿನ ‘ಮೈನ್ ಸ್ವಿಚ್’ ರೀತಿ ಕೆಲಸ ಮಾಡುತ್ತಿತ್ತು. ಈ ರೀತಿ ಟ್ರೋಜನ್ ಕುದುರೆಯಂತೆ ಒಳಬಂದ ಹಾಲ್ಟಿಂಗ್ ಬಸ್ಸಿನೊಳಕ್ಕೆ ಡ್ರೈವರ್, ಕಂಡಕ್ಟರ್ ಪೇಪರ್ ಹಾಸಿ, ಲುಂಗಿ ಹೊದ್ದು ಮಲಗು ತ್ತಿದ್ದರು.
ಹಾಲ್ಟಿಂಗ್ ಬಸ್ಸಿನ ರಾತ್ರಿಯ ಅವತಾರವೇ ಅನನ್ಯ. ಎಲ್ಲ ಕಿಟಕಿ ತೆರೆದಿದ್ದರೂ ಸಾರಾಯಿ, ಬೆವರಿನ ವಾಸನೆ ಬಸ್ಸಿನೊಳಗಿನ ಯಾವುದೋ ಅವ್ಯಕ್ತ ಚಕ್ರವ್ಯೂಹದೊಳಗೆ ಸಿಕ್ಕಿಕೊಂಡು ಒzಡಿ ಅಲ್ಲಿಯೇ ಸುಳಿ ಸುತ್ತುತ್ತಿದ್ದವು. ಬಸ್ಸು ರಸ್ತೆಯಲ್ಲಿ ನಿಂತು ಹೋಗುವಾಗ, ಘಟ್ಟದ ತಿರುವುಗಳಲ್ಲಿ ಮಗ್ಗುಲು ಮುರಿಯುವಾಗ, ರಸ್ತೆಯ ಹೊಂಡದಲ್ಲಿ ಪುಟಿದೇಳುವಾಗ ಇಡೀ ಬಸ್ಸೇ ಟೈಟಾಗಿ ‘ಡ್ರಿಂಕ್ ಆಂಡ್ ಡ್ರೈವ್’ ಮಾಡುತ್ತಿದೆಯೋ ಎಂದೆನಿಸುತ್ತಿತ್ತು. ಆದರೆ ಅದೇ ಹಾಲ್ಟಿಂಗ್ ಬಸ್ಸಿನ ಬೆಳಗ್ಗಿನ ವಯ್ಯಾರವೇ ವಯ್ಯಾರ.
ನಿನ್ನೆ ರಾತ್ರಿ ನಮ್ಮೂರಿಗೆ ಬಂದ ಬಸ್ಸು ಇದೇ ಹೌದೇ ಎಂದು ಹುಬ್ಬೇರುವಷ್ಟು. ‘Of ’ ಆದ ನಮ್ಮೂರಿನ ಸ್ವಿಚ್ ಅನ್ನು ’on’ ಮಾಡುತ್ತಿದ್ದುದು ಇದೇ ಹಾಲ್ಟಿಂಗ್ ಬಸ್ಸು- ಬೆಳಗ್ಗೆ ಎದ್ದು ವಾಪಸ್ ಕುಮಟೆ ಕಡೆಗೆ ಹೊರಟಾಗ. ಊರಲ್ಲಿ ‘ಹಾಲ್ಟಿಂಗ್ ಬಸ್ಸಿಗೆ ಹೊರಟೆ’ ಎಂದರೆ ಅತ್ಯಂತ ಬೇಗ, ನಸುಕಿನಲ್ಲಿ ಹೊರಟಂತೆ. ಈ ಬಸ್ಸಿನಲ್ಲಿ ಸಾಮಾನ್ಯವಾಗಿ ಕಾಲೇಜು ಹುಡುಗ-ಹುಡುಗಿಯರೇ ತುಂಬಿರುತ್ತಿದ್ದರು.
ಬಿಟ್ಟರೆ ದೂರದ ಊರಿಂದ ಬಂದ ನೆಂಟರು. ಪ್ರಯಾಣ ದೀರ್ಘವಿದ್ದರೆ ಅವರೂ ಇದೇ ಬ್ರಹ್ಮ ಮುಹೂರ್ತದ ಬಸ್ಸನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬಸ್ಸಿನಲ್ಲಿ ರಾತ್ರಿಯ ವಾಸನೆ ಮಾಯವಾಗಿರುತ್ತಿತ್ತು. ಒಂದು ಕಡೆಯಿಂದ ಡ್ರೈವರ್ ಹಚ್ಚಿದ, ನಮ್ಮೂರಿನ ತಯಾರಾದ ‘ಮುರಳಿ ಅಗರಬತ್ತಿ’ಯ ಸುವಾಸನೆ. ಸ್ವಚ್ಛವಾಗಿಸಿದ ಬಸ್ಸಿನ ಗ್ಲಾಸು. ಮೆಡಿಮಿಕ್ಸ್, ಹಮಾಮು, ಲೈಫ್ ಬಾಯ್ ಹೀಗೆ ಬಸ್ಸು ಹತ್ತುವ ಒಬ್ಬೊಬ್ಬರದು ಒಂದೊಂದು ಸೋಪಿನ ಪರಿಮಳ.
ಬಸ್ಸಿನೊಳಗೆ ದುಬೈ ಶೇಕ್ ಬಂದು ಕೂತಂತೆ. ಎಲ್ಲ ಘಮಗಳು ಜತೆ ಸೇರಿ ಬಸ್ಸಿನದು ಮದು ಮಗನ ಗತ್ತು-ಗಮ್ಮತ್ತು ನೀಡುತ್ತಿದ್ದವು. ಇದೆಲ್ಲದರ ನಡುವೆ ಅಪರೂಪಕ್ಕೆ ಮೈಸೂರ್ ಸ್ಯಾಂಡಲ್, ಲಕ್ಸ್ ಮೊದಲಾದ ಸೋಪಿನ ಪರಿಮಳ ಬಂದರೆ ಯಾರೋ ಊರ ನೆಂಟರು ಬಸ್ ಹತ್ತಿದ್ದಾರೆ ಎಂದು ತಿಳಿದು ಹೋಗುತ್ತಿತ್ತು. ಅಂಗಡಿ ಶಾನುಭೋಗರ ಮಗಳನ್ನು ಬಿಟ್ಟರೆ ಬೇರಿನ್ಯಾರೂ ವಿಲಾಯತಿ ಸೆಂಟ್ ಹಾಕುತ್ತಿರಲಿಲ್ಲ.
ಬಸ್ಸಿನಲ್ಲಿ ಕೊನೆಯ ಉದ್ದದ ಸೀಟನ್ನು ವೀಳ್ಯದೆಲೆಯ ದೊಡ್ಡ ಪಿಂಡಿಗಳಿಗೆ, ಬಾಳೆಗೊನೆ ಇತ್ಯಾದಿ ಕೃಷಿ ಉದ್ದೇಶಗಳಿಗೆ ಮೀಸಲಾಗಿಡಲಾಗುತ್ತಿತು. ಮೀಸಲು ಎಂದರೆ ಹಾಗಲ್ಲ. ಅಲ್ಲಿ ಹೋಗಿ ಕೂತರೆ ಬಾಳೆಗೊನೆ, ಹಲಸಿನ ಹಣ್ಣು ಇತ್ಯಾದಿಗಳ ಅಂಟು ಬಟ್ಟೆಯನ್ನು ಕಲೆ ಮಾಡುತ್ತಿತ್ತು. ಹಾಗಾಗಿ ಕೋಳಿ ಅಂಕಕ್ಕೆ ಗುಟ್ಟಲ್ಲಿ ಚೀಲದೊಳಗೆ ಕೋಳಿ ಒಯ್ಯುವವರು ಮಾತ್ರ ಅಲ್ಲಿ ಕೂರುತ್ತಿದ್ದುರು ಬಿಟ್ಟರೆ ಬೇರಿನ್ಯಾರೂ ಅಲ್ಲಿ ಕೂರುತ್ತಿರಲಿಲ್ಲ. ಅದು ಬಿಟ್ಟರೆ ಬೇರೆ ಯಾವುದೇ ಸೀಟಿನ ಮೀಸಲಾತಿ ಇತ್ಯಾದಿ ನಮ್ಮೂರ ಬಸ್ಸುಗಳಲ್ಲಿ ಇರಲಿಲ್ಲ.
ಕೆಲವು ಸೀಟುಗಳ ಪಕ್ಕದಲ್ಲಿ ಮಹಿಳೆಯ ಚಿತ್ರ ಬಿಡಿಸುತ್ತಿದ್ದುದು ಏಕೆಂದು ಅರ್ಥವಾಗಿದ್ದೇ ಆಧುನಿಕತೆ ಬೆಳೆದಂತೆ. ಅದು ಬಿಟ್ಟರೆ ನಮಗಿಂತ ವಯಸ್ಸಿನಲ್ಲಿ ದೊಡ್ಡವರಿದ್ದರೆ ಅವರಿಗೆ ಸೀಟು ಬಿಟ್ಟುಕೊಡುವುದು ಸಾಮಾನ್ಯ ಅಭ್ಯಾಸವಾಗಿತ್ತು. ಕಾಲೇಜು ಹುಡುಗ-ಹುಡುಗಿ ಯರಿಗೆ ಅದೇಕೋ ನಿಂತು ಪ್ರಯಾಣಿಸುವುದು ಖುಷಿಯಾಗಿತ್ತು.
ಇನ್ನು ನಮ್ಮೂರಿಗೆ ಬರುವ ಉಳಿದ ದೈನಂದಿನ ಬಸ್ಸು ಬಂದರೆ ಬಂದವು, ಹೋದರೆ ಹೋದವು. ಬೆಳಗಿನ ಎಂಟು ಗಂಟೆಯ ಬಸ್ಸು ಕೆಲವೊಮ್ಮೆ ಹತ್ತು ಗಂಟೆಯಾದರೂ ಬರುತ್ತಿರಲಿಲ್ಲ. ಕೆಲವೊಮ್ಮೆ ಹನ್ನೊಂದು ಗಂಟೆಯ ಬಸ್ಸು ಮಧ್ಯಾಹ್ನ ಮೂರು ಗಂಟೆಯ ಬಸ್ಸಿನ ಜತೆಯ, ಬೆನ್ನ ಬಂದದ್ದೂ ಇದೆ.
ಬಸ್ಸು, ಡಿಪೋ, ಡಿಪೋ ಮ್ಯಾನೇಜರ್, ಡ್ರೈವರ್, ಕಂಡಕ್ಟರ್, ಬಸ್ಸಿನ ಎಂಜಿನ್ ಹೀಗೆ ಸಮಗ್ರ ವ್ಯವಸ್ಥೆ ಅದರದೇ ಆದ ಲೆಕ್ಕ, ಪಂಚಾಂಗಕ್ಕನುಗುಣವಾಗಿ ನಡೆಯುತ್ತಿತ್ತು. ಹಾಗಾಗಿ ಬಸ್ಸಿಗೆ ಕಾಯುವುದು ಇಡೀ ಊರಿನ ಕರ್ಮ-ಕರ್ತವ್ಯಗಳ ಭಾಗವಾಗಿತ್ತು.
ಪಾಳಿಯ ಪ್ರಕಾರವೋ ಎಂಬಂತೆ ಊರಿನವರೆಲ್ಲ ಆಗೀಗ ಸ್ಟ್ಯಾಂಡಿಗೆ ಬಂದು, ಕಾದು ಈ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಅಂತೆಯೇ ಊರಿನ ಮುಂದಿನ ತಲೆಮಾರಿನವರಾದ ಶಾಲೆ ಕಾಲೇಜಿನ ಮಕ್ಕಳು ಈ ಪಾಳಿಗೆ ಬಾಲ್ಯದಿಂದಲೇ ತಾಲೀಮು ನಡೆಸುತ್ತಿದ್ದರು.
ಗೊತ್ತುಗುರಿಯಿಲ್ಲದ ಅನಿಶ್ಚಿತತೆಯಲ್ಲಿ ಕಾಯುವುದಿದೆಯಲ್ಲ, ಅದು ಇಂದಿನ ದಿನಮಾನ ದಲ್ಲಿ ಸಂಭವಿಸುವುದೇ ಇಲ್ಲ. ಬಹಳ ವಿರಳ. ಅನಿಶ್ಚಿತತೆ ಇದ್ದರೂ ಸತ್ತು ಹೋಗುವಷ್ಟು ಬೇಸರ ಈಗ ಯಾರಿಗೂ ಬರುವುದಿಲ್ಲ. ಈಗ ತಾಸುಗಟ್ಟಲೆ ಏನೆಂದರೆ ಏನೂ ಮಾಡದೆ, ಏಕಾಂತ, ಏನೋ ಒಂದಕ್ಕೆ ಕಾಯುವ ಪ್ರಮೇಯ ಇಲ್ಲವೇ ಇಲ್ಲ.
ಏಕೆಂದರೆ ಕೈಯಲ್ಲಿ ಮೊಬೈಲ್ ಇರುತ್ತದೆ. ನನಗನಿಸುವಂತೆ ಈಗ ಏನೂ ಮಾಡದೆ, ಮೊಬೈಲ್ ನೋಡದೆ ಕಾಯುವುದು ಬಹುತೇಕರಿಗೆ ಸಾಧ್ಯವೇ ಇಲ್ಲ. ಮೊಬೈಲ್ ಇಲ್ಲದ ನಮ್ಮದೇ ಸಾಂಗತ್ಯ ನಮಗೆ ಸಹಿಸಲಾಗದ ಮಟ್ಟಿಗೆ ಎಲ್ಲವೂ ಬದಲಾಗಿದೆ. ಈಗೀಗ ಜನ ಸುಮ್ಮನೆ ಕೂರಲು ಭಯಪಡುತ್ತಾರೆ, ಚಡಪಡಿಸುತ್ತಾರೆ. ಕಾಯುವುದು, ಅನಿರೀಕ್ಷಿತತೆ ಯನ್ನು ಎದುರಿಸುವುದು ಕಡಿಮೆಯಾಗುತ್ತಿದೆ.
ನಿತ್ಯ ಜೀವನದಲ್ಲಿ ಕೆಲವೊಂದಿಷ್ಟು ನಮ್ಮ ನಿಯಂತ್ರಣದಲ್ಲಿರುತ್ತವೆ, ಇನ್ನು ಕೆಲವು ನಮ್ಮ ನಿಯಂತ್ರಣವನ್ನು ಮೀರಿದವು. ಈ ಪಾಠವನ್ನು ಕಲಿಸಿದ್ದು ಈ ಬಸ್ಸಿಗೆ ಕಾಯುವ ಕಾಯಕ. ಬಸ್ಸು ಮನಸ್ಸಿಗೆ ಬಂದ ಸಮಯಕ್ಕೆ ಬರುತ್ತಿತ್ತು, ಆದರೆ ಬಸ್ಸಿಗೆ ಹೋಗುವವರು ಮಾತ್ರ ಸರಿಯಾದ ಸಮಯಕ್ಕೇ ಮನೆಯಿಂದ ಹೊರಡಲೇ ಬೇಕಿತ್ತು- ಪ್ರತಿನಿತ್ಯ.
ಬೆಳಗ್ಗೆ ಎದ್ದು ಸ್ನಾನ, ನಿತ್ಯಕರ್ಮ ಮುಗಿಸಿ, ಹೊರಬಟ್ಟೆ ಧರಿಸಿ ತಯಾರಾಗಿ ಹೊರಡು ವುದು ಎಲ್ಲವೂ ನಮ್ಮದೇ ನಿಯಂತ್ರಣದಲ್ಲಿದ್ದವು. ಆದರೆ ಬಸ್ಸು ನಮ್ಮ ನಿಯಂತ್ರಣದಾಚೆ. ನಮ್ಮೆಲ್ಲ ನಿಯಂತ್ರಿತ ದಿನದ ಯೋಜನೆಯನ್ನು ಬಸ್ಸು ಯಾವ್ಯಾವತ್ತೋ ಬುಡಮೇಲು ಮಾಡಿಬಿಡುತ್ತಿತ್ತು. ಕೆಲವರು ಇದರಿಂದ ಕೋಪಗೊಳ್ಳುತ್ತಿದ್ದರು, ಬಸ್ಸಿನ ಮೆಟ್ಟಿಲಿನ ಮೇಲೇ ನಿಂತು ಡ್ರೈವರ್ ಜತೆ ಜಗಳಕ್ಕಿಳಿಯುತ್ತಿದ್ದರು.
ಆದರೆ ಉಳಿದ ಇಡೀ ಊರಿಗೆ ಊರು ಇದನ್ನು ಒಪ್ಪಿಕೊಂಡಿತ್ತು. ಅದಕ್ಕೆ ಹೊಂದಿ ಕೊಂಡಿತ್ತು. ಅದೊಂದು ರೀತಿಯ ಪೂರ್ಣ ಶರಣಾಗತಿ. ನಮ್ಮೆಲ್ಲರ ಬದುಕಿನಲ್ಲಿ ‘ನಿಯಂತ್ರಣ’ ಮತ್ತು ‘ಶರಣಾಗತಿ’ಯ ಹಗ್ಗಜಗ್ಗಾಟ ನಿತ್ಯನಿರಂತರ. ನಮ್ಮ ಅತ್ಯಂತ ನೆಚ್ಚಿನ ಭ್ರಮೆಯಲ್ಲಿ ಒಂದು ‘ನಿಯಂತ್ರಣ’- ಕಂಟ್ರೋಲ್.
ನಮಗೆ ನಮ್ಮ ನಿತ್ಯ ಬದುಕಿನ ಎಲ್ಲದರ ಮೇಲೂ ನಿಯಂತ್ರಣ ಬೇಕು. ಸಮಯಕ್ಕೆ ಏಳಲು ಅಲಾರ್ಮ್, ಯಾವ ದಿನ ಹೇಗೆಂದು ತಿಳಿಯಲು ಕ್ಯಾಲೆಂಡರ್- ಒಟ್ಟಾರೆ ಸಮಯ ನಮ್ಮ ನಿಯಂತ್ರಣದಲ್ಲಿರಬೇಕು. ಅಷ್ಟೇ ಅಲ್ಲ- ನಮ್ಮ ಮೇಲೆಯೂ ನಮಗೆ ನಿಯಂತ್ರಣ ಬೇಕು. ದೇಹ ನಿಯಂತ್ರಣಕ್ಕೆ ನಿದ್ರೆ, ಹೆಜ್ಜೆ ಲೆಕ್ಕ (step-count) ಬೇಕು.
ಆರೋಗ್ಯವನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಜಿಮ್, ಡಯೆಟ್, ಔಷಧಿ ಇತ್ಯಾದಿ ಬೇಕು. ನಮ್ಮ ಸುತ್ತಲಿನ ಜನರ ಮೇಲೆ ಗಂಡ/ಹೆಂಡತಿ, ಮಕ್ಕಳು, ಜತೆಯಲ್ಲಿ ಕೆಲಸ ಮಾಡುವವರು ಹೀಗೆ- ಅವರೆಲ್ಲರ ಮೇಲೂ ಏನೋ ಒಂದು ಹಂತದ ನಿಯಂತ್ರಣ ಬೇಕು. ನಮ್ಮ ಉದ್ಯೋಗ-ಬಡ್ತಿ, ಆರ್ಥಿಕತೆ, ಮಳೆ, ಉಷ್ಣತೆ, ಮಿಂಚು, ಕೇಳುವ ಸಂಗೀತ ಎಲ್ಲವೂ. ಟಿವಿಯ ಜತೆ ನಮ್ಮ ಭವಿಷ್ಯದ ರಿಮೋಟ್ ಕಂಟ್ರೋಲ್ ಇದ್ದರೆ ಅದು ಕೂಡ ನಮಗೆ ಬೇಕು.
ಸಮಯ, ಜನರು, ಪ್ರತಿಫಲ, ಭಾವನೆಗಳು, ನಮ್ಮ ಸುತ್ತಲಿನ ಜನರು- ಒಂದು ಚಣ ಯೋಚಿಸಿ ನೋಡಿ- ನಾವು ಅದೆಷ್ಟು control freak ಅಲ್ಲವೇ!! ಅದೆಷ್ಟು ವಿಲಕ್ಷಣ ನಿಯಂತ್ರಣಗಳ ನಿರಂತರ ಬಯಕೆ. ಕೊನೆಯಲ್ಲಿ ಎಷ್ಟೆಂದರೆ ಸಾಮಾಜಿಕ ಗೌರವ- ನಮ್ಮ Image - ಖ್ಯಾತಿ ಕೂಡ ನಮ್ಮದೇ ನಿಯಂತ್ರಣದಲ್ಲಿರಬೇಕು.
ನಿಯಂತ್ರಣ ಕೆಟ್ಟದಲ್ಲ. ನಿಯಂತ್ರಣ ನಮಗೊಂದು ಸಮಾಧಾನ, ನಿರಾತಂಕ ಕೊಡುತ್ತದೆ. ನಿಯಂತ್ರಣವಿದ್ದಷ್ಟು ಬದುಕು ಹೆಚ್ಚು ನಿಶ್ಚಿತ ಎನ್ನುವುದು ಸುಳ್ಳಲ್ಲ. ಆದರೆ ಈ ನಿಯಂತ್ರಣ ಬಯಕೆಯದ್ದೊಂದು ಸಮಸ್ಯೆಯಿದೆ. ಏನೆಂದರೆ ಯಾವುದೇ ನಿಯಂತ್ರಣ ಒಂದು ಶಾಶ್ವತ ಸ್ಥಿತಿ ಅಲ್ಲ.
ಬದುಕಿನ ಯಾವುದೇ ನಿಯಂತ್ರಿತ ವಿಷಯವೊಂದು ಯಾವ ಸಮಯದಲ್ಲಿಯೂ ಸಮತೋಲನ ತಪ್ಪಬಹುದು. ಆದರೆ ಚಿಕ್ಕದಿರಲಿ, ದೊಡ್ಡದಿರಲಿ ನಿಯಂತ್ರಣ ತಪ್ಪಿದಾಗ ನಾವೇನು ಮಾಡುತ್ತೇವೆ? ತಕ್ಷಣ ಸಿಟ್ಟಿಗೆಳುತ್ತೇವೆ, ವ್ಯಾಕುಲಗೊಳ್ಳುತ್ತೇವೆ. ಕಾರಣ ಹುಡುಕಿ ಶಪಿಸುತ್ತೇವೆ. ಇಲ್ಲವೇ ಅದರಿಂದ ವಿಮುಖರಾಗುತ್ತೇವೆ. ಒಟ್ಟಾರೆ ಶರಣಾಗಲು ಹೆದರುತ್ತೇವೆ.
ಹಾಗಾದರೆ ಶರಣಾಗುವುದು ಎಂದರೆ ಏನು? ಸಾಮಾನ್ಯ ಅರ್ಥದಲ್ಲಿ ಶರಣಾಗುವುದು ಎಂದರೆ ಮೊರೆ ಹೋಗುವುದು ಇತ್ಯಾದಿ. ಅಧೀನ ಭಾವ. ಇನ್ನೊಂದು- ಸಹಗಮನ. ಜತೆಯಾಗುವುದು. adjustment ಅಲ್ಲ- ಬದಲಿಗೆ ಹೊಂದಿಕೊಳ್ಳುವುದು. ಸೈಕಲ್ ಹಿಂದಿನ ಸವಾರಿ ಕ್ಯಾರಿಯರ್ ಹತ್ತಿ ಕೂತಂತೆ. ಬೈಕಿನ ಹಿಂದೆ ಕೂತವರು ಬ್ಯಾಲೆ ಮಾಡಿದಂತೆ. ಸಂದರ್ಭ, ಸ್ಥಿತಿ, ಅನಿರೀಕ್ಷಿತಗಳಿಗೆ ಶರಣಾಗುವುದು ಎಂದರೆ ಅದರ ಜತೆ align ಆಗುವುದು- ಸಾಲುಗೂಡುವುದು. ಹೊತ್ತಿಗೆ ಬಸ್ ಬರಲಿಲ್ಲ, ವಿಮಾನ ಹೊರಡಲಿಲ್ಲ, ಡಾಕ್ಟರ್ ಒಳಕರೆ ಯಲಿಲ್ಲ, ಆಫೀಸ್ ತಲುಪಲಿಲ್ಲ, ಹೆಂಡತಿ ನಗಲಿಲ್ಲ ಎಲ್ಲ ಇಲ್ಲಗಳನ್ನು ಥಾವತ್ ಒಪ್ಪಿಕೊಳ್ಳುವುದು.
ಒಪ್ಪಿಕೊಳ್ಳುವುದೆಂದರೆ ಅದು ಕೂಡ ಅಧೀನ ಭಾವವಲ್ಲ. ಚಿಕ್ಕ ಮಗು ಅಕಸ್ಮಾತ್ ಹಾಲು ಚೆಲ್ಲಿದಾಗ ಅದಕ್ಕೆ ಬಯ್ಯುವುದರ ಬದಲಿಗೆ ನಕ್ಕುಬಿಡುವುದು. ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಕೊಂಡಾಗ- ಆ ಅವಸ್ಥೆಯ ವಿರುದ್ಧ ಹೊಡೆದಾಡದೆ ಸುಂದರ ಹಾಡು ಹಚ್ಚಿ ಗುನುಗುನಾ ಯಿಸುವುದು. ಎದುರಿಗಿರುವ ನಿಯಂತ್ರಣಕ್ಕೆ ಮೀರಿದ ಅವಸ್ಥೆಯನ್ನು ಗುರುತಿಸುವುದು.
ಯಾವುದು ನಿಯಂತ್ರಣದಲ್ಲಿದೆ- ಯಾವುದು ನಿಯಂತ್ರಣದಲ್ಲಿಲ್ಲ ಎನ್ನುವುದನ್ನು ಗುರುತಿಸಿದರೆ ಅರ್ಧ ಶರಣಾದಂತೆ. ಶರಣಾಗತ ಭಾವ, ಒಪ್ಪಿಕೊಳ್ಳುವ, ಸ್ಥಿತಿಗೆ ಹೊಂದಿ ಕೊಳ್ಳುವ ಭಾವ ವಯಸ್ಸಾದಂತೆ ಬೆಳೆಯುತ್ತ ಹೋಗುತ್ತದೆ ಎನ್ನುವುದು ನನ್ನ ಗ್ರಹಿಕೆ. ವೃದ್ಧರಲ್ಲಿ ಬದುಕಿನೆಡೆಗೆ ಶರಣಾಗತಭಾವ ಹೆಚ್ಚು.
ಎಲ್ಲವನ್ನೂ ಇದ್ದದ್ದು ಇದ್ದ ಹಾಗೆಯೇ ನೋಡುವ, ಒಪ್ಪಿಕೊಂಡು ಎದುರಿಸುವ, ಅವಶ್ಯ ವಿದ್ದಲ್ಲಿ ಪ್ರಶ್ನಿಸುವ ವಿವೇಚನೆ. ನಿತ್ಯಬದುಕಿನಲ್ಲೂ, ಜೀವನದಲ್ಲೂ- ಕೆಲವೊಂದು ನಿಯಂತ್ರಣ ಮೀರಿದವಾದರೆ ಇನ್ನು ಕೆಲವು ನಿಯಂತ್ರಣ ಬಿಡಬೇಕಾದವು. ಆದರೆ ನಮ್ಮೊಳಗೆ ಅದೆಷ್ಟೋ ವಿಷಯದಲ್ಲಿ ‘ಕೂಡುಕುಟುಂಬದ ಮುದುಕ ಯಜಮಾನನಿರು ತ್ತಾನೆ’.
ಅವನು ಎಂದೂ ಅಲ್ಮೇರಾದ ಚಾವಿ ಕೊಡಲು ತಯಾರಿರುವುದಿಲ್ಲ. ನಿಯಂತ್ರಣ ಬಿಡಲು ಒಳಮನಸ್ಸು ಒಪ್ಪುವುದಿಲ್ಲ. ಕೆಲವರಿಗೆ ಏನೇ ನಿಯಂತ್ರಣ ತಪ್ಪಿದರೂ ಬದುಕೇ ಮುಗಿದಂತಾಡುತ್ತಾರೆ. ನಿಯಂತ್ರಣ ನಿಶ್ಚಿತತೆಯನ್ನು ಕೊಡಬಹುದು, ಕೆಲವೊಮ್ಮೆ ಕೊಡದಿರಬಹುದು. ಆದರೆ ಶರಣಾಗತಭಾವ ಮಾತ್ರ ಶಾಂತಿ, ತೃಪ್ತಿಯನ್ನು ಕೊಡಬಲ್ಲದು. ನಿಯಂತ್ರಣ ಮತ್ತು ಶರಣಾಗತಿ- ಇವೆರಡೂ ಹದವಾದ ಪಾಕದಲ್ಲಿದ್ದರಷ್ಟೇ ಬದುಕಿನ ಹಾದಿ ಸುಲಭ. ಬದುಕಿನಲ್ಲಿ ಕೆಲವೇ ಹಾಲ್ಟಿಂಗ್ ಬಸ್ಸಿನಂತೆ- ನಿಯತ, ನಿಶ್ಚಿತ.
ಬಾಕಿ ಬಹುತೇಕದವು ನಮ್ಮೂರಿನ ಉಳಿದ ಬಸ್ಸುಗಳಂತೆ ನಿಯಂತ್ರಣಕ್ಕೆ ಸಿಕ್ಕರೆ ಸಿಕ್ಕವು, ಬಿಟ್ಟರೆ ಬಿಟ್ಟವು. ಬಸ್ಸು ಲೇಟಾಗಿ ಬಂದು- ನಮ್ಮ ದಿನದ ನಿಯಂತ್ರಣ ತಪ್ಪಿದರೆ ಡ್ರೈವರ್ ಅನ್ನು ಬಾಗಿಲಲ್ಲಿ ನಿಂತು ಬೈದರೆ ಪ್ರಯೋಜನವಿಲ್ಲ. ಇನ್ನೂ ಸುಲಭದಲ್ಲಿ ಹೇಳಬೇಕೆಂದ ರೆ- ಈ ಇಡೀ ಪ್ರಪಂಚವನ್ನೇ ಸರಿಮಾಡಲು ಹೊರಡುವುದರ ವಿರುದ್ಧ ಭಾವವೇ ಶರಣಾ ಗತಿ- ಬದುಕನ್ನೊಪ್ಪುವ ಭಾವ.
ಬೇರೆಯವರ ಯೋಚನೆ, ನಡವಳಿಕೆ, ಇಷ್ಟ, ರುಚಿ, ಅನ್ಯರ ಗುಣ, ವಾತಾವರಣ, ಮಳೆ, ಇತಿಹಾಸ, ಭವಿಷ್ಯತ್ತು, ಅಪಘಾತ, ಟ್ರಾಫಿಕ್ ಜಾಮ, ಕೆಲಸ ಕಳೆದುಕೊಳ್ಳುವುದು ( layoff), ಅನಾರೋಗ್ಯ, ಬೇರೆಯವರು ನಮ್ಮನ್ನು ಪ್ರೀತಿಸುವ ರೀತಿ ಮತ್ತು ಪ್ರಮಾಣ, ವಯಸ್ಸು, ವಯೋಸಹಜ ಬದಲಾವಣೆ, ಹುಟ್ಟಿದ ಮನೆ, ಹಿನ್ನೆಲೆ, ಸಾವು, ಅನ್ಯರ ಭಾವೋದ್ವೇಗಗಳು, ರಾಜಕೀಯ, ಎಲೆಕ್ಷನ್ನು- ಕೊನೆಯಲ್ಲಿ ಕೃಷ್ಣ ಹೇಳಿದ ಕರ್ಮದ ಪ್ರತಿಫಲ ಹೀಗೆ ನಮ್ಮ ವೈಯಕ್ತಿಕ ನಿಯಂತ್ರಣದಲ್ಲಿರದ ಪಟ್ಟಿಯೇ ಜಾಸ್ತಿಯಿದೆ.
ಅವು ನಮ್ಮ ನಿಯಂತ್ರಿತ ಬದುಕನ್ನು ಏರುಪೇರಾಗಿಸುತ್ತವೆ. ಹಾಗಾದಾಗ ಒಮ್ಮೆ ನಿಂತು ಇದು ನಿಯಂತ್ರಿತವೋ ಶರಣಾಗತಿಯೋ? ನಾನು ಬದಲಿಸಬಹುದೋ- ಇಲ್ಲವೋ ಎಂದು ಒಂದು ಬಾರಿ ಕೇಳಿಕೊಳ್ಳಬೇಕು. ಆಗಲೇ ನಮ್ಮ ಬದುಕಿನ ಅರ್ಧ ಹೋರಾಟ, ವಾದಗಳು ಅರ್ಥಹೀನವೆನಿಸುವ ಸತ್ಯ ತಿಳಿಯುವುದು.
ನಿತ್ಯ ಬದುಕಿನಲ್ಲಿ, ಅದೆಷ್ಟೋ ವಿಷಯಗಳಲ್ಲಿ- ನಾವು ಅನವಶ್ಯಕ ಯುದ್ಧವನ್ನು ಜಾರಿ ಯಲ್ಲಿಟ್ಟಿರುತ್ತೇವೆ, ಅಮೆರಿಕದಂತೆ! ಸುಮ್ಮನೆ ಒಣಪ್ರತಿಷ್ಠೆಗೆ, ಬರಡು ನೆಲಕ್ಕೆ, ಮದ್ದು, ಗುಂಡು, ಹಣ, ಸಮಯ, ಶಕ್ತಿ ಎಲ್ಲವನ್ನೂ ಪೋಲುಮಾಡುತ್ತಿರುತ್ತೇವೆ. ಎಲ್ಲವೂ ನಮ್ಮ ನಿಯಂತ್ರಣದಲ್ಲಿರಬೇಕೆನ್ನುವ ಬಯಕೆ ಕೆಲವರಲ್ಲಿ ಉಲ್ಬಣವಾಗಿರುತ್ತದೆ. ಅಂಥವರು ತಮಗೆ ಸಂಬಂಧವೇ ಇಲ್ಲದುದೆಲ್ಲದರ ಅನವಶ್ಯಕ ನಿಯಂತ್ರಣಕ್ಕೆ ಮುಂದಾಗುತ್ತಾರೆ! ಅಂಥವರು ದೇವಸ್ಥಾನದ ಟ್ರಸ್ಟಿಯಾಗಿಯೂ ಸೇರಿಕೊಳ್ಳುತ್ತಾರೆ.
ಅವರನ್ನೂ, ಯಾರನ್ನೂ ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲವೂ ನಮ್ಮ ನಿಯಂತ್ರಣ ದಲ್ಲಿಲ್ಲ- ನಿಯಂತ್ರಣದಲ್ಲಿ ಇರಬೇಕಾಗಿಯೂ ಇಲ್ಲ. ಹಾಗಂತ ಇದೆಲ್ಲವನ್ನು ಮೀರಿದ ಶರಣಾಗತಿ ನಿಷ್ಕ್ರಿಯೆಯಲ್ಲ....