ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?

ಎತ್ತಿನಹೊಳೆಯ ವಿಚಾರದಲ್ಲಿ ನಡೆದಂತೆ ಕರಾವಳಿ ಮತ್ತು ಬಯಲುಸೀಮೆಯ ಜನರು ಮತ್ತೊಮ್ಮೆ ಈ ಯೋಜನೆ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ವರದಾ-ಬೇಡ್ತಿ ಯೋಜನೆ ವಿರುದ್ಧ ಅಭಿಯಾನ ಆರಂಭವಾಗಿದೆ. ಆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಪರಿಸರ ಹೋರಾಟಗಾರರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

Lokesh Kaayarga Column: ಬೇಡ್ತಿ ಇನ್ನೊಂದು ಎತ್ತಿನಹೊಳೆ ಆಗಬಹುದೇ ?

-

ಲೋಕಮತ

‘ಎವೆರಿಬಡಿ ಲವ್ಸ್ ಎ ಗುಡ್ ಡ್ರೌಟ್’- ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಈ ಪ್ರಸಿದ್ಧ ಕೃತಿಯ ಶೀರ್ಷಿಕೆ ಸಾರ್ವಕಾಲಿಕವಾದದ್ದು. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಯಾವುದೇ ದುರಂತಗಳು ನಾಯಕರೆನಿಸಿಕೊಂಡವರಿಗೆ, ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಭರಪೂರ ಅವಕಾಶಗಳನ್ನು ಒದಗಿಸಿಕೊಡುತ್ತವೆ.

ಇದನ್ನು ಸಾಬೀತು ಮಾಡಲು ನಮ್ಮ ರಾಜ್ಯದ ದೃಷ್ಟಾಂತಗಳೇ ಕಣ್ಣ ಮುಂದಿವೆ. ಕಳೆದ ಒಂದು ದಶಕದಲ್ಲಿ ಬರದ ಹೆಸರಿನಲ್ಲಿ, ಮಳೆಯ ಹೆಸರಿನಲ್ಲಿ, ಕೊರೋನಾ ಹೆಸರಿನಲ್ಲಿ ಬಿಡು ಗಡೆಯಾದ ಹಣ ಫಲಾನುಭವಿಗಳಿಗೆ ಎಷ್ಟರ ಮಟ್ಟಿಗೆ ಸಂದಾಯವಾಗಿದೆ ಎಂದು ನಮಗೆ ಗೊತ್ತು.

ಇದೀಗ ಬಯಲುಸೀಮೆಯ ಜಲಕ್ಷಾಮವನ್ನು ನೀಗಿಸುವ ಹೆಸರಿನಲ್ಲಿ ಜಾರಿಯಾಗುತ್ತಿರುವ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕುರಿತು ಭಾರತದ ಮಹಾಲೇಖ ಪಾಲರು (ಸಿಎಜಿ) ನೀಡಿರುವ ವರದಿ ಬಿಡುಗಡೆಯಾಗಿದೆ. ವಿಶೇಷ ಅಧಿವೇಶನದಲ್ಲಿ (ಜನವರಿ 29, 2026) ಸರಕಾರವೇ ಸದನದ ಮುಂದಿಟ್ಟಿರುವ ಈ ವರದಿಯಲ್ಲಿ ಯೋಜನೆಯ ಅನುಷ್ಠಾನ ದಲ್ಲಿನ ವಿಳಂಬ, ಹಣ ಕಾಸಿನ ದುರ್ಬಳಕೆ ಮತ್ತು ಗುತ್ತಿಗೆ ಪ್ರಕ್ರಿಯೆಯಲ್ಲಿನ ಗಂಭೀರ ಲೋಪ ಗಳನ್ನು ಎತ್ತಿ ತೋರಿಸಲಾಗಿದೆ.

ವಿಶೇಷ ಎಂದರೆ ಸದ್ಯ ನಡೆಯುತ್ತಿರುವ ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ ಆಡಳಿತ ಪಕ್ಷ ವಾಗಲಿ, ವಿರೋಧ ಪಕ್ಷಗಳ ನಾಯಕರಾಗಲಿ ಈ ಬಗ್ಗೆ ಚಕಾರ ಎತ್ತಿಲ್ಲ. ಇದೀಗ ಈ ವರದಿ ಯ ಬೆನ್ನಿಗೇ ಬೇಡ್ತಿ ನದಿ ನೀರನ್ನು ತಿರುಗಿಸುವ ಇನ್ನೊಂದು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ರಾಜ್ಯಸರಕಾರ ಒಪ್ಪಿಗೆ ಸೂಚಿಸಿದೆ.

ಜಲ ಸಂಪನ್ಮೂಲ ಖಾತೆಯನ್ನೂ ನಿರ್ವಹಿಸುವ ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಷಯ ವನ್ನು ಅತ್ಯಂತ ಉತ್ಸುಕತೆಯಿಂದ ಪ್ರಕಟಿಸಿದ್ದಾರೆ. ನೀರು ಬರಲಿ, ಬಾರದಿರಲಿ ಎತ್ತಿನಹೊಳೆ ಯಂತೆ ಈ ಯೋಜನೆಯಲ್ಲೂ ಭರಪೂರ ಹಣದ ಹೊಳೆ ಹರಿಯುವುದಂತೂ ನಿಶ್ಚಿತ.

ಬೇಡ್ತಿ-ವರದಾ ನದಿಗಳ ನದಿ ಜೋಡಣೆ ವಿಷಯ ಹೊಸದೇನೂ ಅಲ್ಲ. ಎತ್ತಿನ ಹೊಳೆ ಯೋಜನೆಗೂ ಮುನ್ನವೇ ಈ ಎರಡು ನದಿಗಳಿಗೆ ಸಂಪರ್ಕ ಬೆಸೆಯುವ ಮೂಲಕ ಅರಬ್ಬಿ ಸಮುದ್ರಕ್ಕೆ ಹರಿಯುವ ಬೇಡ್ತಿ ನದಿ ನೀರನ್ನು ಬಂಗಾಳಕೊಳ್ಳಿಯತ್ತ ಹರಿಸುವ ಪ್ರಸ್ತಾಪ ಸರಕಾರದ ಮುಂದಿತ್ತು.

ಆದರೆ ಸ್ಥಳೀಯ ಮುಖಂಡರು, ಪರಿಸರಾಸಕ್ತರ ವಿರೋಧದ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಯಾಗಿರಲಿಲ್ಲ. ತಮಾಷೆ ಎಂದರೆ ಅಂದು ಈ ಯೋಜನೆಯನ್ನು ಬಲವಾಗಿ ವಿರೋಧಿಸಿದ್ದ ಬಿಜೆಪಿ ನಾಯಕರೇ ಈಗ ನದಿ ತಿರುವು ಯೋಜನೆಯ ರೂವಾರಿಗಳಾಗಿದ್ದಾರೆ.

ಗೋದಾವರಿ-ಕಾವೇರಿ ನದಿಗಳ ಜೋಡಣೆ ಯೋಜನೆಯ ಭಾಗವಾಗಿ ಕೇಂದ್ರ ಸರಕಾರ ಬೇಡ್ತಿ- ವರದಾ ನದಿಗಳ ನದಿ ಜೋಡಣೆ ಯೋಜನೆ ಮುಂದಿಟ್ಟಿದ್ದು ಇದಕ್ಕೆ 9 ಸಾವಿರ ಕೋಟಿ ರು.ಗಳ ನೆರವನ್ನೂ ಪ್ರಕಟಿಸಿದೆ.

‘ರಾಜ್ಯದ ಜನರಿಗೆ ಉಪಯೋಗವಾಗಲು ಕೇಂದ್ರ ಸರಕಾರವೇ 10 ಸಾವಿರ ಕೋಟಿ ರು. ಹಾಕಿ, ರಾಜ್ಯದಿಂದ 1 ಸಾವಿರ ಕೋಟಿ ಕೇಳುತ್ತಿರುವಾಗ ನಾವು ಈ ಯೋಜನೆ ಬೇಡ ಎನ್ನಲು ಆಗುತ್ತದೆಯೇ? ಸಮುದ್ರಕ್ಕೆ ಹೋಗುವ ನೀರನ್ನು ಜನರ ಅನುಕೂಲಕ್ಕೆ ಬಳಸುವುದು ನಮ್ಮ ಉದ್ದೇಶ’ ಎಂದು ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಡಿಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಎತ್ತಿನಹೊಳೆಯ ವಿಚಾರದಲ್ಲಿ ನಡೆದಂತೆ ಕರಾವಳಿ ಮತ್ತು ಬಯಲುಸೀಮೆಯ ಜನರು ಮತ್ತೊಮ್ಮೆ ಈ ಯೋಜನೆ ವಿಚಾರದಲ್ಲಿ ಸಂಘರ್ಷಕ್ಕಿಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ವರದಾ-ಬೇಡ್ತಿ ಯೋಜನೆ ವಿರುದ್ಧ ಅಭಿಯಾನ ಆರಂಭವಾಗಿದೆ. ಆ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಪರಿಸರ ಹೋರಾಟಗಾರರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಹಾವೇರಿ, ಗದಗ, ರಾಯಚೂರು ಭಾಗದ ರೈತರು, ಮಠಾಧೀಶರು, ರಾಜಕೀಯ ಮುಖಂಡರು ಸಭೆ ನಡೆಸಿ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ.

ಬೇಡ್ತಿ ನದಿ ಪಶ್ಚಿಮಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುವ ನದಿ. ವರದಾ ನದಿ ಪಶ್ಚಿಮಘಟ್ಟದಲ್ಲಿಯೇ ಹುಟ್ಟಿ ಪೂರ್ವಕ್ಕೆ ಹರಿದು ಮುಂದೆ ತುಂಗಭದ್ರೆ ಮೂಲಕ ಬಂಗಾಳ ಕೊಳ್ಳಿಯನ್ನು ಸೇರುವ ನದಿ. ಬೇಡ್ತಿ ನದಿಯಿಂದ ಅರಬ್ಬಿ ಸಮುದ್ರಕ್ಕೆ ಪ್ರತಿವರ್ಷ ಸುಮಾರು 242 ಟಿಎಂಸಿ ನೀರು ಸೇರುತ್ತದೆ ಎಂದು ಅಂದಾಜಿಸಲಾಗಿದೆ.

ಈ ನೀರಿನಲ್ಲಿ 18 ಟಿಎಂಸಿ ನೀರನ್ನು ವರದಾ ನದಿಗೆ ಪಂಪ್ ಮಾಡಿ ಹಾವೇರಿ, ಗದಗ ಮತ್ತು ರಾಯಚೂರು ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಿಸುವುದು ಮತ್ತು ಇಲ್ಲಿನ ರೈತರು ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುವಂತೆ ಮಾಡುವುದು ಈ ಯೋಜನೆಯ ಗುರಿ. ಯೋಜನೆಯ ಉದ್ದೇಶದಲ್ಲಿ ಯಾವ ದೋಷವೂ ಇಲ್ಲ. ಆದರೆ ಎತ್ತಿನ ಹಳ್ಳ ಯೋಜನೆಯ ಅನುಭವದಿಂದ ಹೇಳುವುದಾದರೆ ಈ ಯೋಜನೆಯೂ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚು.

1992ರಲ್ಲಿ ರೂಪಿಸಲಾದ ಮೊದಲ ಯೋಜನೆ ಪ್ರಕಾರ ಗದಗ ಜಿಲ್ಲೆಯ ಹಿರೇವದತ್ತಿಯಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಗೋಡದಲ್ಲಿ ಪಟ್ಟಣಹಳ್ಳ ನದಿಗೆ ಅಣೆಕಟ್ಟು ನಿರ್ಮಿಸಿ ಮುಂದೆ ಸುರಂಗಗಳ ಮೂಲಕ ವರದಾ ನದಿಗೆ ನೀರನ್ನು ಕೊಂಡೊ ಯ್ಯುವ ಉದ್ದೇಶ ಹೊಂದಲಾಗಿತ್ತು.

ಬದಲಾದ ಡಿಪಿಆರ್‌ನಲ್ಲಿ ಬೇಡ್ತಿ ನದಿಯಿಂದ ಪಂಪ್ ಮೂಲಕ ವರದಾ ನದಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಪಶ್ಚಿಮಘಟ್ಟದಲ್ಲಿ ಯಾವುದೇ ಜಲಾಶಯ ನಿರ್ಮಿಸುವುದಿಲ್ಲ. ಬದಲಿಗೆ ಗದಗ ಜಿಲ್ಲೆಯ ವಡಕಟ್ಟಿಯಲ್ಲಿ ಜಲಾಶಯ ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಬೇಡ್ತಿ ನದಿಯಲ್ಲಿ ವರ್ಷಪೂರ್ತಿ ಹರಿಯುವ ನೀರನ್ನು ಈ ಯೋಜನೆಗೆ ಬಳಸುವುದಿಲ್ಲ.

ಬದಲಿಗೆ 242 ಟಿಎಂಸಿ ನೀರಲ್ಲಿ ಕೇವಲ 18 ಟಿಎಂಸಿ ನೀರನ್ನು ಮಾತ್ರ ವರದಾ ನದಿಗೆ ಹರಿಸ ಲಾಗುತ್ತದೆ ಎನ್ನಲಾಗಿದೆ. ಪರಿಸರಕ್ಕೆ ಧಕ್ಕೆ ತರುವ ರೀತಿಯಲ್ಲಿ ಯೋಜನೆ ಇಲ್ಲ. ಅನಿವಾರ್ಯ ವಾದರೆ ಮಾತ್ರ ಮರಗಳನ್ನು ಕಡಿಯಲಾಗುತ್ತದೆ. ಈ ಯೋಜನೆಯಿಂದ ನದಿಯ ಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಯೋಜನೆ ಪರ ಇರುವವರ ಮಾತು.

ಎತ್ತಿನಹೊಳೆ ವಿಚಾರದಲ್ಲೂ ಇದೇ ಮಾತುಗಳನ್ನು ಆಡಲಾಗಿತ್ತು. ಎತ್ತಿನ ಹಳ್ಳದ ಮೂಲಕ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ. ಅದರಲ್ಲಿ ಕೆಲವೇ ಟಿಎಂಸಿ ನೀರನ್ನು ಬಯಲು ಸೀಮೆಗೆ ಹರಿಸಲಾಗುತ್ತದೆ. ಪಶ್ಚಿಮ ಘಟ್ಟಕ್ಕೆ, ಅಲ್ಲಿನ ಜೀವ ವೈವಿಧ್ಯತೆಗೆ, ಜೀವಿ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಲಾಗಿತ್ತು.

ನಂತರ ಸಕಲೇಶಪುರದ ಯೋಜನಾ ಸ್ಥಳದಲ್ಲಿ ಮತ್ತು ದೈತ್ಯಾಕಾರದ ಪೈಪ್ ಲೈನ್ ಹಾಕಲಾದ ಪ್ರದೇಶದಲ್ಲಿ ನಡೆದ ಮರಗಳ ಮಾರಣ ಹೋಮ ಎಲ್ಲರಿಗೂ ಗೊತ್ತು. ಈ ಪ್ರದೇಶ ದಲ್ಲಿದ್ದ ಅಪೂರ್ವ ವನ್ಯಜೀವಿಗಳಲ್ಲಿ ಕೆಲವು ಕಾಣೆಯಾಗಿವೆ.

ವನ್ಯಮೃಗಗಳಲ್ಲಿ ಕೆಲವು ಘಟ್ಟ ಹತ್ತಿ ನಾಗರ ಹೊಳೆ ಸೇರಿಕೊಂಡರೆ, ಇನ್ನು ಕೆಲವು ಘಟ್ಟ ಇಳಿದು ಕರಾವಳಿ ಜಿಲ್ಲೆಗಳ ರೈತರ ಅಡಿಕೆ ತೋಟಕ್ಕೆ ಧಾಂಗುಡಿ ಇಟ್ಟಿವೆ. ಕಳೆದ ನಾಲ್ಕೈದು ದಶಕಗಳಿಂದ ಹುಲಿ, ಚಿರತೆ ನೋಡದ ಇಲ್ಲಿನ ಜನರು ಈಗ ಹಗಲು ಹೊತ್ತಿನಲ್ಲಿಯೇ ಇವುಗಳ ದರ್ಶನ ಮಾಡುವಂತಾಗಿದೆ.

ನಡುರಾತ್ರಿಯಲ್ಲೂ ನಿರ್ಭೀತರಾಗಿ ಸಂಚರಿಸುತ್ತಿದ್ದ ಜನತೆ ಹಗಲು ಹೊತ್ತಿನಲ್ಲೇ ಹಿಂಡು ಹಿಂಡಾಗಿ ಆನೆಗಳು ಅಡಿಕೆ ತೋಟದಲ್ಲಿ ಸಂಚರಿಸುವುದನ್ನು ಮೂಕ ಪ್ರೇಕ್ಷಕರಂತೆ ನೋಡ ಬೇಕಾಗಿದೆ. ನೀರಿಲ್ಲದ ಊರಿಗೆ ಹನಿ ನೀರು ಕೂಡ ಅಮೃತ ಸಮಾನ. ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ದಂಡಿಯಾಗಿ ಹರಿಯುವ ನೀರನ್ನು ಕಂಡಾಗ ರಾಜ್ಯದ ಬಯಲು ಸೀಮೆಯ ಜನತೆ ನಮಗೂ ಇದೇ ರೀತಿ ನೀರಿನ ಭಾಗ್ಯ ಇರಬಾರದೇ ಎಂದು ಆಶಿಸುವುದು ಸಹಜ. ಆದರೆ ಮಳೆಗಾಲ ನಂತರದ ಆರು ತಿಂಗಳಲ್ಲಿ ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆಯ ಕಥೆ ಹೆಚ್ಚು ಕಡಿಮೆ ಒಂದೇ ಇರುತ್ತದೆ.

ಮಳೆ ನಿಂತ ಬೆನ್ನಿಗೇ ಬತ್ತಿ ಹೋಗುವ ಕರಾವಳಿ, ಮಲೆನಾಡು ಭಾಗದ ನದಿಗಳಿಂದ ಕುಡಿಯುವ ನೀರಿಗೆ ಸಾಕಾಗುವಷ್ಟೂ ನೀರು ಸಿಗುವುದಿಲ್ಲ. ಮಂಗಳೂರು ನಗರದ ಜನತೆ, ಅಲ್ಲಿನ ಕೈಗಾರಿಕೆಗಳು ಬೇಸಿಗೆಯ ಒಂದೆರಡು ತಿಂಗಳು ಅನುಭವಿಸುವ ನೀರಿನ ಕೊರತೆ, ಬಯಲು ಸೀಮೆಯ ಜನರ ನೀರಿನ ಹಾಹಾಕಾರಕ್ಕಿಂತ ಕಡಿಮೆಯೇನೂ ಅಲ್ಲ.

ಆದರೆ ದೊಡ್ಡ ಮಟ್ಟದ ನೀರಾವರಿ ಯೋಜನೆಗಳಿಲ್ಲದ ಎರಡೂ ಭಾಗದಲ್ಲಿ ಜನರು ಬೋರ್‌ ವೆಲ್ ನೀರನ್ನು ಆಶ್ರಯಿಸಿ ಕೃಷಿ ಮಾಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಬಯಲು ಸೀಮೆಯಲ್ಲಿ ಫ್ಲೋರೈಡ್ ಮತ್ತು ಲವಣಾಂಶ ಪ್ರಮಾಣ ಹೆಚ್ಚು ಎನ್ನುವುದನ್ನು ಬಿಟ್ಟರೆ ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಕಡಿಮೆ ಒಂದೇ.

ಮಳೆಗಾಲದಲ್ಲಿ ಉಕ್ಕಿ ಹರಿಯುವ ಬೇಡ್ತಿಯಾಗಲಿ, ಕೆಂಪಳ್ಳವಾಗಲಿ ಬೇಸಿಗೆ ಪೂರ್ಣ ಬತ್ತಿ ಸೊರಗಿ ಹೋಗುತ್ತದೆ. ಕರಾವಳಿಯಲ್ಲಿ ಮಳೆಯಾಗುವ ಸಂದರ್ಭದಲ್ಲೇ ಹೆಚ್ಚು ಕಡಿಮೆ ಹಾವೇರಿ, ಗದಗ ಭಾಗದಲ್ಲೂ ಮಳೆಯಾಗುತ್ತದೆ. ಇವರಿಗೂ ಬೇಸಿಗೆಯಲ್ಲಿಯೇ ನೀರಿನ ಅವಶ್ಯಕತೆ ಹೆಚ್ಚು. ಆದರೆ ಡಿಪಿಆರ್‌ನಲ್ಲಿ ಬೇಡ್ತಿ ನೀರನ್ನು ವರದೆಗೆ ಹರಿಸಿ ಈ ನದಿ ವರ್ಷ ಪೂರ್ತಿ ಹರಿಯುವಂತೆ ಮಾಡುವ ಗುರಿ ಹೊಂದಲಾಗಿದೆ.

ಬೇಸಿಗೆಯಲ್ಲಿ ಬೇಡ್ತಿಯಲ್ಲಿ ಇಲ್ಲದ ನೀರನ್ನು ಹರಿಸುವುದು ಹೇಗೆ ಎಂಬ ಪ್ರಾಥಮಿಕ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಎತ್ತಿನ ಹೊಳೆಯೂ ಈ ಪ್ರಾಥಮಿಕ ತಿಳಿವಳಿಕೆಯ ಕೊರತೆ ಕಾರಣ ದಿಂದಲೇ ಹಳ್ಳ ಹಿಡಿದಿದೆ ಎನ್ನುವುದು ಯೋಜನೆ ಪರ ಮಾತನಾಡುವವರು ತಿಳಿಯ ಬೇಕಾದ ವಿಚಾರ.

ಕೇಂದ್ರ ಸರಕಾರವೇ ಮುಂದಡಿ ಇಟ್ಟ ಯೋಜನೆಯಾದ ಕಾರಣ ಮತ್ತು ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಕಾರ‍್ಯಗತಗೊಳ್ಳುವ ಮೂಲಕ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆ, ವಿವಿಧ ನ್ಯಾಯಮಂಡಳಿಗಳು ಮತ್ತು ಕೇಂದ್ರ ಜಲ ಆಯೋಗದ ಅನುಮತಿ ಪಡೆಯುವುದು ಕಷ್ಟವೇನಲ್ಲ. ಆದರೆ ಯೋಜನೆ ಜಾರಿಗೆ ಮುನ್ನ ಇದರ ಪರ ನಿಂತವರು ಎತ್ತಿನ ಹೊಳೆ ಯೋಜನೆಗಾದ ದುರ್ಗತಿಯನ್ನು ಹತ್ತಲ್ಲ ನೂರು ಸಲ ಮನದಟ್ಟು ಮಾಡಿಕೊಳ್ಳಬೇಕಾಗಿದೆ.

2012ರಲ್ಲಿ ಎತ್ತಿನಹೊಳೆ ಯೋಜನೆ ಆರಂಭವಾದಾಗ ಯೋಜನಾ ವೆಚ್ಚ 8,323 ಕೋಟಿ ರು. ಎಂದು ಅಂದಾಜಿಸಲಾಗಿತ್ತು. 2023ರ ಪರಿಷ್ಕೃತ ಅಂದಾಜು 23,251 ಕೋಟಿ ರು.ಗಳಾಗಿವೆ. ಮಾರ್ಚ್ 2024ರ ವೇಳೆಗೆ ಯೋಜನೆ ವೆಚ್ಚ ರೂ.15,297 ಕೋಟಿ ತಲುಪಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರು ಪೂರೈಕೆ ಇನ್ನೂ ಕನಸಾಗಿಯೇ ಉಳಿದಿದೆ.

ಯೋಜನೆಯನ್ನು ಪೂರ್ಣಗೊಳಿಸಲು ಇನ್ನೂ ಸುಮಾರು ?7,954 ಕೋಟಿ ಹಣದ ಅವಶ್ಯಕತೆ ಯಿದೆ. ಆದರೆ ಈ ಹಣವನ್ನು ಹೇಗೆ ಹೊಂದಿಸಬೇಕು ಎಂಬ ಬಗ್ಗೆ ಸರಕಾರದ ಬಳಿ ಸ್ಪಷ್ಟ ವಾದ ಯೋಜನೆಯಿಲ್ಲ ಎಂದು ಸಿಎಜಿ ವರದಿ ಹೇಳಿದೆ. ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದು ಯೋಜನೆಯನ್ನು ತ್ರಿಶಂಕು ಸ್ಥಿತಿಗೆ ತಂದಿದೆ.

ಇನ್ನೊಂದೆಡೆ 14,805 ಕೋಟಿ ರೂ. ಮೊತ್ತದ 18 ಕಾಮಗಾರಿಗಳನ್ನು ಏಳು ಕಂಪನಿಗಳಿಗೆ, 5216 ಕೋಟಿ ರೂ. ಮೊತ್ತದ 11 ಕಾಮಗಾರಿಗಳ ಗುತ್ತಿಗೆಯನ್ನು ಒಂದೇ ಕಂಪನಿಗೆ ನಿಯಮ ಉಲ್ಲಂಘಿಸಿ ನೀಡಲಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಕಾಮಗಾರಿಗಳ ಸಂಬಂಧ ಮಾಡಲಾದ ಡಿಪಿಆರ್‌ಗಳಲ್ಲಿ ಯೋಜನೆ ಪೂರ್ಣಗೊಳಿಸುವ ದಿನಾಂಕ ನಿಗದಿ ಪಡಿಸಿಲ್ಲದಿರುವುದನ್ನೂ ಸಿಎಜಿ ಉಲ್ಲೇಖಿಸಿದೆ.

ಮಳೆಗಾಲದ ತಿಂಗಳಲ್ಲಿ ಹೆಚ್ಚಿನ ನೀರು ಪಂಪ್ ಮಾಡುವ ಸಂಬಂಧ ವಿನ್ಯಾಸ ಬದಲಾವಣೆ ಮಾಡಿದ ಪರಿಣಾಮ 621.45 ಕೋಟಿ ರು. ಹೆಚ್ಚುವರಿ ವೆಚ್ಚ ಆಗಿರುವ ಬಗ್ಗೆಯೂ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸಿಎಜಿ ವರದಿಯನ್ನು ವರದಿಯನ್ನು ಬದಿಗಿಟ್ಟು ನೋಡಿದರೂ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಡ್ಡ ಪಾಲನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆಯು ತ್ತಿರುವ ಕಾಮಗಾರಿ ಗಮನಿಸಿದರೆ ಸಾಕು ಯೋಜನೆಯ ಭವಿಷ್ಯವನ್ನು ಈಗಲೇ ಊಹಿಸ ಬಹುದು.

ಇಲ್ಲಿ ಬಹಳಷ್ಟು ಸ್ಥಳಗಳಲ್ಲಿ ನಾಲೆಗಳ ತಡೆಗೋಡೆಗಳು ಕುಸಿದಿದೆ. ಕೆಲವು ಕಡೆ ನಾಲೆ ಗೋಡೆ ಬಿರುಕುಬಿಟ್ಟು ಗಿಡ ಬೆಳೆದು ಬಳ್ಳಿ ಸುತ್ತುವರಿದಿವೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಕೊರಟಗೆರೆ ತಾಲೂಕಿಗೆ 2026ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಯಲಿದೆ ಎನ್ನುತ್ತಿದ್ದಾರೆ.

ಬೇಡ್ತಿ ವಿಚಾರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜನರಿಗೆ ಧಾರಾಳ ಭರವಸೆ ನೀಡುವ ಮುನ್ನ ಎತ್ತಿನ ಹೊಳೆ ಯೋಜನೆ ವೈಫಲ್ಯ ಮತ್ತು ಅದರಿಂದ ಆಗಿರುವ ಅನಾಹುತಗಳನ್ನು ಖುದ್ದಾಗಿ ತಿಳಿಯಬೇಕು. ಇಲ್ಲವಾದರೆ ಎತ್ತಿನ ಹೊಳೆಗೆ ಪಟ್ಟು ಹಿಡಿದು ಮೂಲೆ ಗುಂಪಾದ ವೀರಪ್ಪ ಮೊಯಿಲಿ ಮತ್ತು ಡಿ.ವಿ.ಸದಾನಂದ ಗೌಡರಂತೆ, ಬೊಮ್ಮಾಯಿ ಯವರೂ ಮುಂದೊಂದು ದಿನ ಪರಿತಪಿಸಬೇಕಾಗುತ್ತದೆ.