ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

ಬೇರೆ ಬೇರೆ ಸಂದರ್ಭಗಳಿಗೆ ತಕ್ಕಂತೆ ಅದನ್ನು ಅರ್ಥಗರ್ಭಿತ ಮಾಡಲಿಕ್ಕೆ ಆಗುತ್ತದೆ. ಉದಾ ಹರಣೆಗೆ- ಸೊಳ್ಳೆಗಳು ಹಾಗೆ ಹೇಳಿದ್ದಿರಬಹುದು! ಯಾವುದೇ ಮಸ್ಕಿಟೊ ರಿಪೆಲ್ಲೆಂಟ್ʼಗಳಿಗೂ ಜಗ್ಗದೆ ಮನುಷ್ಯರ ಮೇಲೆ ಸತತ ದಾಳಿ ನಡೆಸಿ ಬಿಸಿಬಿಸಿ ರಕ್ತ ಚಪ್ಪರಿಸುವ ಸೊಳ್ಳೆಗಳಿಗೆ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ ಸಿಗದಿರುತ್ತದೆಯೇ? ಎಲ್ಲೋ ಒಂದೆರಡಷ್ಟೇ ನಿಮ್ಮ ಕೈಯೇಟಿಗೆ ಅಪ್ಪಚ್ಚಿಯಾಗಿ ಜೀವ ಕಳೆದುಕೊಂಡಾವೆಯೇ ಹೊರತು ಮಿಕ್ಕವುಗಳಿಗೆ ರಕ್ತಸಂತರ್ಪಣೆಯ ಆನಂದವೋ ಆನಂದ.

ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

-

ತಿಳಿರು ತೋರಣ

ಅರ್ಥಮನರ್ಥಂ ಭಾವಯ ನಿತ್ಯಮ್... ಎಂದು ಶಂಕರಾಚಾರ್ಯರು ಈಗೇನಾದರೂ ಹೇಳಿರುತ್ತಿದ್ದರೆ ಅದು ಮೂಢಮತಿಗಳಿಗಿಂತಲೂ ಹೆಚ್ಚಾಗಿ ಗೂಗಲ್ ಟ್ರಾನ್ಸ್‌ಲೇಟರ್‌ಅನ್ನು ಉದ್ದೇಶಿಸಿದ್ದಾಗಿರುತ್ತಿತ್ತು. ಆ ಪರಿಯಲ್ಲಿ ಕಾಣಸಿಗುತ್ತಿವೆ ಗೂಗಲ್ ಅನುವಾದದ ಅಧ್ವಾನ ಗಳು, ಅನರ್ಥಗಳು.

ಸುಮಾರು 10-12 ವರ್ಷಗಳ ಹಿಂದೆ ಬೆಂಗಳೂರಿನ ಸೈಂಟ್ ಮಾರ್ಕ್ಸ್ ರಸ್ತೆ ಪಕ್ಕದಲ್ಲಿ ಕಾಣಿಸಿಕೊಂಡಿದ್ದ ‘ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ’ ಎಂಬ ಸೂಚನಾಫಲಕದಿಂದ ಈ ಅನರ್ಥಾನುವಾದ ಯುಗ ಆರಂಭವಾಗಿದ್ದೆಂದು ನನಗನಿಸುತ್ತದೆ. ಅದು, Do Not Pass Urine ಎಂಬುದನ್ನು ಗೂಗಲ್ ಕನ್ನಡಕ್ಕೆ ಅನುವಾದಿಸಿದ್ದ ರೀತಿಯಾಗಿತ್ತು.

ಆಮೇಲೆ ಅದಕ್ಕಿಂತ ಹಾಸ್ಯಾಸ್ಪದ ಅನುವಾದಗಳು ಒಂದಾದ ಮೇಲೊಂದರಂತೆ ಕಾಣಿಸ ತೊಡಗಿದವು. ಅಂಗಡಿಮುಂಗಟ್ಟುಗಳ ನಾಮಫಲಕಗಳಲ್ಲಿ, ಜಾಹಿರಾತುಗಳಲ್ಲಿ, ಪತ್ರಿಕೆಗಳ ಸುದ್ದಿವಿವರಗಳಲ್ಲೂ ರಾರಾಜಿಸಿದವು. ಬಟ್ಟೆಯಂಗಡಿಯಲ್ಲಿ Gents Accessories ‘ಪುರುಷರ ಬಿಡಿಭಾಗಗಳು’ ಆಯ್ತು; ತರಕಾರಿ ಅಂಗಡಿಯಲ್ಲಿ Sweet Lime ನಿಂಬೆಹಣ್ಣಿನ ಬದಲಿಗೆ ‘ಸಿಹಿ ಸುಣ್ಣ’ ಆಯ್ತು; ರೇನ್‌ಕೋಟಿನ ಜಾಹಿರಾತು Always Stay Dry ಎಂಬುದನ್ನು ‘ಸದಾ ಒಣಗಿರಿ’ ಎಂದಿತು; ಆಲಿವ್ ಎಣ್ಣೆ Extra Virgin Extra Healthy ಇದ್ದದ್ದು ‘ಹೆಚ್ಚುವರಿ ಕನ್ಯೆ ಹೆಚ್ಚು ಆರೋಗ್ಯಕರ’ ಅಂತಾಯ್ತು; ಘಮಘಮಿಸುವ Mysore Sandal Soap ‘ಮೈಸೂರು ಚಪ್ಪಲ್ ಸಾಬೂನು’ ಎಂದಾಯ್ತು.

ಮೆಟ್ರೋ ರೈಲಿನ ಬೋಗಿಗಳು Train Coaches ‘ರೈಲು ತರಬೇತುದಾರರು’ ಆದುವು. ಹಟಿಯಾದಿಂದ ಬೆಂಗಳೂರು ದಂಡು ನಿಲ್ದಾಣಕ್ಕೆ ಬರುವ Hatia Bengaluru Cant Express ರೈಲು ‘ಹಟಿಯಾ ಬೆಂಗಳೂರು ಕ್ಯಾಂಟ್ ವ್ಯಕ್ತಪಡಿಸು’ ಎಂಬ ಹೆಸರು ಪಡೆಯಿತು!

ಇದನ್ನೂ ಓದಿ: Srivathsa Joshi Column: ಎಲೆಯಡಕೆಯ ಸುಸಂಸ್ಕೃತಿಯ ಸಸ್ಯಶಾಸ್ತ್ರೀಯ ಸಂಯೋಗ

ತಮಾಷೆಯಲ್ಲ. ಇವೆಲ್ಲ ನಿಜವಾಗಿಯೂ ಕಾಣಿಸಿಕೊಂಡ ಅತಿ ಭಯಂಕರ ಅನುವಾದಗಳೇ. ಇನ್ನೂ ಸುಮಾರಿವೆ, ನಗೆಯುಕ್ಕಿಸುವ ಸರಕೆಂದು ಸಂಗ್ರಹಿಸಿಟ್ಟಿದ್ದೇನೆ. ‘ಅಂಗಾಂಶ ಕಾಗದ’ ( Tissue Paper), ‘ಸ್ಫೋಟಕ ಲೇಖನಗಳು’ (Inflammable Articles), ‘ಬೆತ್ತಲೆ ಜ್ವಾಲೆಯಿಲ್ಲ ’ ( No Naked Flame), ‘ಮುಂದೆ ಗೂನು’ (Hump Ahead), ‘ವಜ್ರ ಮತ್ತು ಚಿನ್ನದ ಆಭರಣಗಳ ಭವ್ಯವಾದ ಉಡಾವಣೆ’ (Diamond & Gold Jewelry Grand launch), ‘ದೃಢವಾದ ಬಾಳೆ ಹಣ್ಣು’ (Banana Robusta), ‘ಕಿವಿ ಆಮದು ಮಾಡಿಕೊಂಡ ಆರ್ಥಿಕತೆ ಇರಾನ್ (Kiwi Imported Economy Iran), ‘ದಿನಾಂಕಗಳು ಆಮದು’ (Dates Imported ಗಲ್ಫ್‌ʼನಿಂದ ಆಮದಾದ ಖರ್ಜೂರ), ‘ಗೋಧಿ ಮುರಿದಿದೆ ಉತ್ತಮ’ (Wheat-broken fine) ಇತ್ಯಾದಿ.

ಇಂಥದನ್ನೆಲ್ಲ ನೋಡುತ್ತಲೇ ಬದುಕಬೇಕಾದ ಪರಿಸ್ಥಿತಿ ಕನ್ನಡಿಗರದು. ಆದರೂ ‘ರಾಜ್ಯ ದಲ್ಲಿ ಮರಣ ದರ ಕಡಿಮೆ’ ( Death rate reduced ) ಆಗಿದೆ ಎನ್ನುತ್ತವೆ ಪತ್ರಿಕೆಗಳು. ಯಾವುದಕ್ಕೂ ನಿಮ್ಮ ಖಾತೆಯಲ್ಲಿ ‘ಸಮತೋಲನ ಕಾಯ್ದುಕೊಳ್ಳಿ’( Maintain your Balance) ಎನ್ನುತ್ತವೆ ಬ್ಯಾಂಕುಗಳು.

ಇವುಗಳ ಸಾಲಿಗೆ ಹೊಸ ಸೇರ್ಪಡೆ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ!’ ದೋಸೆ-ಇಡ್ಲಿ ಹಿಟ್ಟು ಮಾರುವ, ಬೆಂಗಳೂರು ಮೂಲದ Batterbox ಎಂಬ ಕಂಪನಿಯ ಜಾಹಿರಾತು. ಅದರಲ್ಲಿ ’ Enjoyment in Every Bite’ ಎಂಬ ಇಂಗ್ಲಿಷ್ ವಾಕ್ಯ ಕನ್ನಡದಲ್ಲಿ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ ಆಗಿತ್ತು.’

“ನೀವು ಮನೆಯಲ್ಲಿ ಹಿಟ್ಟು ರುಬ್ಬುವುದು ಬೇಕಿಲ್ಲ, ರುಬ್ಬಿ ರೆಡಿ ಇರುವ ಹಿಟ್ಟನ್ನು ನಮ್ಮಿಂದ ಕೊಂಡುಕೊಳ್ಳಿ. ಗರಿಗರಿಯಾದ ದೋಸೆ ಮಾಡಿ. ರುಚಿರುಚಿಯಾಗಿ ಇರುತ್ತದೆ. ಪ್ರತಿ ತುತ್ತು ಸವಿಯುವಾಗಲೂ ನಿಮಗೆ ಆನಂದ ಸಿಗುತ್ತದೆ" ಎನ್ನುವುದನ್ನು ಒಂದೇ ಒಂದು ಪವರ್ ಫುಲ್ ಪಂಚ್‌ಲೈನ್ ಮೂಲಕ ಹೇಳುವ ಪ್ರಯತ್ನ ಆ ಜಾಹಿರಾತಿನದು.

ಅದರಲ್ಲೇನೂ ತಪ್ಪಿಲ್ಲ. ಜಾಹಿರಾತೆಂದರೆ ಹಾಗೆಯೇ. ಆದರೆ ಗೂಗಲ್ ಅನುವಾದದಿಂದಾಗಿ ಆಭಾಸವಾಗಿತ್ತು. ವಾಟ್ಸ್ಯಾಪ್ ಫೇಸ್‌ಬುಕ್‌ಗಳಲ್ಲಿ ಆ ಜಾಹಿರಾತಿನ ಚಿತ್ರ ಹರಿದಾಡಿತು. ಹಿಟ್ಟು ರುಬ್ಬುವ ಕಂಪನಿಯನ್ನೇ ನೆಟ್ಟಿಗರು ಚೆನ್ನಾಗಿ ರುಬ್ಬಿದರು. ನಗೆಪಾಟಲಿಗೀಡಾದ ಕಂಪನಿ ಆ ಜಾಹಿರಾತನ್ನು ಸರಿಪಡಿಸಿಕೊಂಡಿತೋ ಏನೋ. ಆಯ್ತುಬಿಡಿ, ಮುಂದೆ ಇನ್ನ್ಯಾ ವುದೋ ಕಂಪನಿಯ ಜಾಹಿರಾತಿನಲ್ಲಿ ಮತ್ತಿನ್ನೇನೋ ಹಾಸ್ಯಾಸ್ಪದ ಆಭಾಸ ನಮ್ಮ ಕಣ್ಮನಗಳನ್ನು ತಣಿಸಲಿಕ್ಕೆಂದೇ ಉದಯಿಸುತ್ತದೆ. ಏಕೆಂದರೆ ಗೂಗಲ್‌ನ ಮಂತ್ರ ಅರ್ಥ ಮನರ್ಥಂ ಭಾವಯ ನಿತ್ಯಮ್.

Screenshot_3 ಋ

ಅದಿರಲಿ, ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ ವಾಕ್ಯವನ್ನೇ ಇನ್ನೊಮ್ಮೆ ಗಮನಿಸಿ. ದೋಸೆ ಹಿಟ್ಟಿನ ಜಾಹಿರಾತಿನಲ್ಲಿ ಅದು ಅಸಂಬದ್ಧವೇ, ಒಪ್ಪಿಕೊಳ್ಳೋಣ. ಆದರೆ, ಒಂದು ಸ್ವತಂತ್ರ ವಾಕ್ಯದಂತೆ ನೋಡಿದರೆ ಅದು ಬಹಳ ಅರ್ಥಪೂರ್ಣವೇ ಆಗುತ್ತದೆ.

ಹೇಗಂತೀರಾ? ಬೇರೆ ಬೇರೆ ಸಂದರ್ಭಗಳಿಗೆ ತಕ್ಕಂತೆ ಅದನ್ನು ಅರ್ಥಗರ್ಭಿತ ಮಾಡಲಿಕ್ಕೆ ಆಗುತ್ತದೆ. ಉದಾಹರಣೆಗೆ- ಸೊಳ್ಳೆಗಳು ಹಾಗೆ ಹೇಳಿದ್ದಿರಬಹುದು! ಯಾವುದೇ ಮಸ್ಕಿಟೊ ರಿಪೆಲ್ಲೆಂಟ್ʼಗಳಿಗೂ ಜಗ್ಗದೆ ಮನುಷ್ಯರ ಮೇಲೆ ಸತತ ದಾಳಿ ನಡೆಸಿ ಬಿಸಿಬಿಸಿ ರಕ್ತ ಚಪ್ಪರಿಸುವ ಸೊಳ್ಳೆಗಳಿಗೆ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ ಸಿಗದಿರುತ್ತದೆಯೇ? ಎಲ್ಲೋ ಒಂದೆರಡಷ್ಟೇ ನಿಮ್ಮ ಕೈಯೇಟಿಗೆ ಅಪ್ಪಚ್ಚಿಯಾಗಿ ಜೀವ ಕಳೆದುಕೊಂಡಾವೆಯೇ ಹೊರತು ಮಿಕ್ಕವುಗಳಿಗೆ ರಕ್ತಸಂತರ್ಪಣೆಯ ಆನಂದವೋ ಆನಂದ.

ಬೆಕ್ಕಿನ ಮರಿಗಳು, ನಾಯಿಮರಿಗಳು ಪರಸ್ಪರ ಕಚ್ಚಿಕೊಳ್ಳುತ್ತ ಆಟ ಆಡುವುದನ್ನು ನೀವು ಗಮನಿಸಿರಬಹುದು. ಅದೇನೂ ಮಾರಾಮಾರಿ ಜಗಳ ಅಲ್ಲ, ಮೋಜಿನ ಆಟ. ಆ ಆಟದಲ್ಲಿ ಅವುಗಳಿಗೂ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ವೇ. ತಾಯಿಬೆಕ್ಕು ತನ್ನ ಮರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡೇ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದನ್ನೂ ನೀವು ನೋಡಿರಬಹುದು.

ಅದು ಕೂಡ ಒಂದು ವಿಧದಲ್ಲಿ ಆನಂದದಾಯಕ ಕಚ್ಚುವಿಕೆಯೇ. ತಾಯಿಬೆಕ್ಕಿನ ದೃಷ್ಟಿ ಯಿಂದ ಮರಿಗಳ ಬಗೆಗಿನ ಪ್ರೀತಿವಾತ್ಸಲ್ಯ ಆ ಕಚ್ಚುವಿಕೆಯಲ್ಲಿರುವುದು. ಮರಿಗಳ ದೃಷ್ಟಿ ಯಿಂದ ಅದು ಅಮ್ಮನ ಆಶ್ರಯದ ಅಭಯ. ಕೋರೆ ಹಲ್ಲುಗಳಿಂದಲೇ ಕಚ್ಚಿದ್ದರೂ ಮರಿಗಳಿಗೆ ಒಂಚೂರೂ ನೋವಾಗುವುದಿಲ್ಲ. ಬಿದ್ದುಬಿಡುತ್ತೇವೆಂದು ಭಯವಿರುವುದಿಲ್ಲ.

ಅವು ಆನಂದದಿಂದಲೇ ಇರುತ್ತವೆ. ಸಂಸ್ಕೃತದಲ್ಲಿ ಇದನ್ನು ‘ಮಾರ್ಜಾಲಕಿಶೋರನ್ಯಾಯ’ ಎಂದು ಲೋಕೋಕ್ತಿಯಾಗಿ ಬಳಸುವುದಿದೆ- ಭಕ್ತನು ಯಾವ ಚಿಂತೆಯನ್ನೂ ಹಚ್ಚಿಕೊಳ್ಳದೆ ಎಲ್ಲವನ್ನೂ ಭಗವಂತನಿಗೆ ಒಪ್ಪಿಸಿ ಶಾಂತನಾಗಿರುತ್ತಾನೆ, ಭಕ್ತನ ರಕ್ಷಣೆಯ ಹೊಣೆ ಯೆಲ್ಲವೂ ಆತನ ಸ್ವಾಮಿಗೆ ಸೇರಿದ್ದಾಗಿರುತ್ತದೆ- ಎಂಬ ವಿವರಣೆಯ ಸಂದರ್ಭದಲ್ಲಿ. ದೇವರೆಂದರೆ ತಾಯಿಬೆಕ್ಕು, ಭಕ್ತರೆಂದರೆ ಬೆಕ್ಕಿನಮರಿಗಳು.

ಕಚ್ಚುವಿಕೆಯನ್ನು ಕಷ್ಟಕಾರ್ಪಣ್ಯವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಅವು ಕಷ್ಟ ಗಳಲ್ಲ, ದೇವರು ನಮ್ಮನ್ನು ರಕ್ಷಿಸುವ ವಿಧಾನ. ಆ ಕಚ್ಚುವಿಕೆಯನ್ನು ನಾವು ಆನಂದಿಸ ಬೇಕು. ಬೆಕ್ಕು ಮಾತ್ರವಲ್ಲ, ಆ ರೀತಿ ಮರಿಗಳನ್ನು ಕಚ್ಚಿಕೊಂಡು ಸಾಗಿಸುವಿಕೆ ಮಾರ್ಜಾಲ ಪ್ರಭೇದದ ಹುಲಿ ಚಿರತೆ ಮುಂತಾದುವಲ್ಲೂ ಇದೆ.

ಎಷ್ಟು ನಾಜೂಕಿನ ಕಚ್ಚುವಿಕೆಯೆಂದರೆ ಅದನ್ನು ಮನುಷ್ಯನ ಮಾತು ಅಥವಾ ಅಕ್ಷರ ಗಳನ್ನು ಉಚ್ಚರಿಸುವ ರೀತಿ ಹೇಗಿರಬೇಕು ಎಂಬುದಕ್ಕೆ ದೃಷ್ಟಾಂತವಾಗಿ ಬಳಸಲಾಗಿದೆ. ಪಾಣಿನಿಯ ಶಿಕ್ಷಾಶಾಸದಲ್ಲಿ ಒಂದು ಶ್ಲೋಕ ಹೀಗಿದೆ: “ವ್ಯ್ರಾ ಯಥಾ ಹರೇತ್ ಪುತ್ರಾನ್ ದಂಷ್ಟ್ರಾಭ್ಯಾಂ ನ ಚ ಪೀಡಯೇತ್| ಭೀತಾ ಪತನಭೇದಾಭ್ಯಾಂ ತದ್ವದ್ವರ್ಣಾನ್ ಪ್ರಯೋ ಜಯೇತ್||" ಇದರ ಅರ್ಥ- ಪ್ರತಿಯೊಂದು ವರ್ಣವನ್ನು ಉಚ್ಚರಿಸುವಾಗಲೂ ಅದು ಎಷ್ಟು ಪ್ರಯತ್ನದಿಂದ ಮತ್ತು ಸುಟತೆಯಿಂದ ಕೂಡಿರಬೇಕೆಂದರೆ ತಾಯಿ ಹುಲಿಯು ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಎತ್ತಿ ಸಾಗುವಂತೆ.

ಮರಿಗೆ ನೋವೂ ಆಗಬಾರದು, ಬಾಯಿಯಿಂದ ಜಾರಿ ಬೀಳಲೂಬಾರದು. ನಮ್ಮ ಉಚ್ಚಾ ರವೂ ಅಷ್ಟೇ: ತೀರ ಹಲ್ಲುಗಳನ್ನು ಗಟ್ಟಿಯಾಗಿ ಕಚ್ಚಿಕೊಂಡು ಮಾತಾಡುವುದೂ ಸಲ್ಲ, ಹಲ್ಲಿಲ್ಲದವರಂತೆ ಮಾತುಗಳನ್ನು ಯದ್ವಾತದ್ವಾ ಉದುರಿಸುವುದೂ ಸಲ್ಲ. ಉಚ್ಚಾರದಲ್ಲಿ ‘ಕಚ್ಚುವಿಕೆ’ ಹೇಗಿರಬೇಕೆಂದರೆ ಮಾತನಾಡುವವನಿಗೂ ಕೇಳುಗನಿಗೂ ಆನಂದದಾಯಕ ವಾಗಬೇಕು.

ಇನ್ನೊಂದು ಆನಂದದಾಯಕ ಕಚ್ಚುವಿಕೆ ಒಲಿಂಪಿಕ್ಸ್ ಪಂದ್ಯಗಳಲ್ಲಿ ಪದಕ ವಿಜೇತ ಕ್ರೀಡಾಳುಗಳು ಪದಕವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುವುದು. ಇದನ್ನೂ ನೀವು ಫೋಟೊ ಗಳಲ್ಲಿ, ವಿಡಿಯೊಗಳಲ್ಲಿ ನೋಡಿಯೇಇರುತ್ತೀರಿ. ಇದಕ್ಕೆ ಸ್ವಲ್ಪ ಚರಿತ್ರೆಯೂ ಇದೆ.

1896ರಲ್ಲಿ ಅಥೆನ್ಸ್‌ನಲ್ಲಿ ಮೊತ್ತಮೊದಲ ಆಧುನಿಕ ಒಲಿಂಪಿಕ್ಸ್ ಆರಂಭವಾದಾಗ ಚಿನ್ನದ ಪದಕ ನೀಡುವ ಕ್ರಮವಿರಲಿಲ್ಲ. ಬೆಳ್ಳಿ ಮತ್ತು ಕಂಚಿನ ಪದಕಗಳು ಮೊದಲೆರಡು ಸ್ಥಾನಗಳಿಗೆ. 1900ರಲ್ಲಿ ಪದಕಗಳೇ ಇರಲಿಲ್ಲ, ಟ್ರೋಫಿ ಮತ್ತು ಕಪ್ ರೀತಿಯ ಬಹುಮಾನ. 1904ರಲ್ಲಿ ಮೊದಲ ಬಾರಿಗೆ ಅಪ್ಪಟ ಚಿನ್ನದ ಪದಕಗಳನ್ನು ನೀಡಲಾಯಿತು.

1908 ಮತ್ತು 1912ರಲ್ಲೂ ಆ ಕ್ರಮ ಮುಂದುವರೆಯಿತು. ಪದಕ ಅಪ್ಪಟ ಚಿನ್ನದ್ದೇ ಹೌದು ತಾನೆ ಎಂದು ದೃಢಪಡಿಸಲಿಕ್ಕೆ ವಿಜೇತರು ಅದನ್ನು ಹಲ್ಲುಗಳಿಂದ ಲಘುವಾಗಿ ಕಚ್ಚುತ್ತಿದ್ದ ರಂತೆ. ಚಿನ್ನ ಮೃದುಲೋಹವಾದ್ದರಿಂದ ಅಂತಹ ಪರೀಕ್ಷೆ. 1916ರಿಂದೀಚೆಗೆ, ಅಂದರೆ ಮೊದಲ ಪ್ರಪಂಚಯುದ್ಧದ ಬಳಿಕ ಪದಕಗಳು ಅಪ್ಪಟ ಚಿನ್ನದ್ದಾಗಿರದೆ ಬೆಳ್ಳಿ ಮತ್ತು ತಾಮ್ರದ ಮಿಶ್ರಣಕ್ಕೆ ಚಿನ್ನದ ಲೇಪ ಅಷ್ಟೇ. ಆದರೆ ಈಗಲೂ ವಿಜೇತರು ಪದಕವನ್ನು ಕಚ್ಚಿ ನೋಡುವುದು ಒಂದು ಸಂಪ್ರದಾಯವೇ ಆಗಿದೆ.

ಕ್ರೀಡಾಳುಗಳು ಹಾಗೆ ಮಾಡದಿದ್ದರೂ ಫೋಟೋಗ್ರಾಫರರೇ ಒತ್ತಾಯಿಸುತ್ತಾರೆ, ಅದೊಂದು ಆಕರ್ಷಕ ಐಕಾನಿಕ್ ಫೋಟೊ ಆಗುತ್ತದೆಂಬ ಕಾರಣಕ್ಕೆ. 2010ರ ಚಳಿಗಾಲದ ಒಲಿಂಪಿಕ್ಸ್‌ ನಲ್ಲಿ ಜರ್ಮನಿಯ ಕ್ರೀಡಾಳು ಡೇವಿಡ್ ಮ್ಯುಲ್ಲರ್ ಎಂಬಾತ ತಾನು ಗೆದ್ದ ಬೆಳ್ಳಿಪದಕವನ್ನು ಕಚ್ಚುವಾಗ ಹಲ್ಲು ಮುರಿದುಕೊಂಡ ಘಟನೆಯೂ ನಡೆದಿದೆ.

ಈಗೀಗ ಒಲಿಂಪಿಕ್ಸ್ ಮಾತ್ರವಲ್ಲ ಬೇರೆ ಕ್ರೀಡೆ/ಪಂದ್ಯಗಳ ವಿಜೇತರೂ ಪದಕವನ್ನು ಕಚ್ಚು ತ್ತಾರೆ. ಮೊನ್ನೆ ಐಸಿಸಿ-ಟಿ೨೦ ವಿಜೇತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತೊಂದಿ ಬ್ಬರು ಪದಕ ಕಚ್ಚಿಕೊಂಡು ಫೊಟೊಗೆ ಪೋಸ್ ಕೊಟ್ಟಿದ್ದರು.

ಈಗ ನೀವು ಈ ಅಂಕಣದಲ್ಲಿ ಊಹಿಸಿರಲಾರದ, ಆದರೆ ಜತೆಯಲ್ಲಿರುವ ಚಿತ್ರದಿಂದ ಅಂದಾ ಜಿಸಿರಬಹುದಾದ, ‘ಪ್ರತಿ ಕಚ್ಚುವಿಕೆಯಲ್ಲಿ ಆನಂದವೊಂದನ್ನು ವ್ಯಾಖ್ಯಾನಿಸುತ್ತೇನೆ. ಇದು ಗಂಡು-ಹೆಣ್ಣಿನ ಪ್ರಣಯದ ಆಟದಲ್ಲಿ, ಅರ್ಥಾತ್ ರತಿಕ್ರೀಡೆಯಲ್ಲಿ ಅಥವಾ ಮಿಲನ ಮಹೋತ್ಸವದಲ್ಲಿ ಸಂಭವಿಸುವ ಪ್ರೀತಿಭರಿತ ಕಚ್ಚುವಿಕೆ. ಇದರ ಬಗ್ಗೆ ವಾತ್ಸ್ಯಾಯನನ ಕಾಮಸೂತ್ರದಲ್ಲಿ ‘ದಶನಚ್ಛೇದ್ಯ’ ಎಂಬೊಂದು ಪ್ರತ್ಯೇಕ ಅಧ್ಯಾಯವೇ ಇದೆ.

ಪರಸ್ಪರ ಕಚ್ಚುವಿಕೆಯಿಂದ ಪ್ರೇಮಿಗಳ ಮೈಮೇಲೆ ಮೂಡುವ ಗುರುತುಗಳಿಗೆ ‘ದಂತಕ್ಷತ’ ಎಂಬ ಚಂದದ್ದೊಂದು ಹೆಸರೂ ಇದೆ. ಮೇಲ್ದುಟಿ, ಬಾಯಿಯ ಒಳಭಾಗ(ನಾಲಗೆ) ಮತ್ತು ಕಣ್ಣುಗಳು- ಇವಿಷ್ಟನ್ನು ಹೊರತುಪಡಿಸಿ ಎಲ್ಲಿಯೂ ಕಚ್ಚಬಹುದು. ಅದರಲ್ಲೂ ‘ಅಧರ’ (ಕೆಳತುಟಿ) ಪರಮಾವಧಿ ಕಚ್ಚುವಿಕೆಗೆ ಒಳಗಾಗುವುದು.

ಸಂಸ್ಕೃತ ಭಾಷೆಯನ್ನು ಶೃಂಗಾರಕ್ಕೆ ಎಷ್ಟು ಅಣಿಗೊಳಿಸಲಾಗಿದೆ ನೋಡಿ. ಬೇರೆಲ್ಲ ಭಾಷೆಗಳಲ್ಲಿ ತುಟಿಗಳೆರಡಕ್ಕೂ ಒಂದೇ ಪದ ಇರುವುದಾದರೆ ಸಂಸ್ಕೃತದಲ್ಲಿ ತುಟಿ ಎಂಬರ್ಥದ ಓಷ್ಠ ಪದವಲ್ಲದೆ ಕೆಳತುಟಿಗಷ್ಟೇ ಬಳಕೆಯಾಗುವ ಅಧರ ಎಂಬ ಪದ! ಸಂಸ್ಕೃತ ಕವಿಗಳು ಅದನ್ನು ಅಧರಂ ಮಧುರಂ ಎಂದು ಬಣ್ಣಿಸಿದ್ದೇ ಬಣ್ಣಿಸಿದ್ದು.

ನಮ್ಮ ಬೇಂದ್ರೆಯವರೂ ‘ಬಿದಿಗೆಯ ಬಿಂಬಾಧರದಲಿ ಇಂದಿಗು ಮಿಲನದ ಚಿಹ್ನವು ತೋರದಿದೆ... ಎನ್ನುವಲ್ಲಿ ಅಧರವನ್ನೂ, ಅದರ ಮೇಲೆ ಕಾಣಬೇಕಿದ್ದ ಕಚ್ಚಿದ ಗುರುತನ್ನೂ ರಸಮಯವಾಗಿ ಬಣ್ಣಿಸಿದ್ದಾರೆ.

ವಾತ್ಸ್ಯಾಯನನ ಪ್ರಕಾರ ಎಂಟು ವಿಧದ ದಂತಕ್ಷತಗಳಿರುತ್ತವೆ. ಅವುಗಳ ಸಂಕ್ಷಿಪ್ತ ವಿವರ ಹೀಗಿದೆ: ‘ಗೂಢಕ’ ಅಂದರೆ ಅತಿಹಗುರವಾಗಿ, ಯಾವುದೇ ಗುರುತು ಮೂಡದಂತೆ ಅಧರವನ್ನು ಕಚ್ಚುವುದು. ‘ಉಚ್ಛುನಕ’ ಅಂದರೆ ಅಧರವನ್ನೇ- ಗಾಯವಾಗಿ ತುಟಿ ಊದಿ ಕೊಳ್ಳುವಷ್ಟು ತೀವ್ರವಾಗಿ ಕಚ್ಚುವುದು. ‘ಬಿಂದು’ ಪ್ರಕಾರದಲ್ಲಿ ಕಚ್ಚುವವರು ತಮ್ಮ ಕೆಳ ದಂತಪಂಕ್ತಿ ಮತ್ತು ಮೇಲ್ದುಟಿಯನ್ನಷ್ಟೇ ಬಳಸಿರುತ್ತಾರೆ, ಕಚ್ಚಿಸಿಕೊಂಡವರಿಗೆ ಗಾಯದ ಗುರುತುಗಳು ಬಿಂದುಮಾತ್ರ ಇರುತ್ತವೆ.

‘ಬಿಂದುಮಾಲಾ’ದಲ್ಲಿ ಹಲ್ಲುಗಳಿಂದಾದ ಗುರುತುಗಳು ಮಾಲೆಯಂತೆ ಕಾಣುತ್ತವೆ, ಕಚ್ಚಿಸಿಕೊಳ್ಳುವ ಜಾಗ ಹಣೆ ಮತ್ತು ತೊಡೆ. ‘ಪ್ರವಾಲಮಣಿ’ಯಲ್ಲಿ ಮೇಲಿನ ಬಾಚಿಹಲ್ಲು ಳನ್ನು ಬಳಸಿ ಗಲ್ಲ ಅಥವಾ ಕುತ್ತಿಗೆಗೆ(ಸಿಂಹ ಸಿಂಹಿಣಿಗೆ ಮಾಡಿದಂತೆ) ಕಚ್ಚುವುದು.

‘ಮಣಿಮಾಲಾ’ ಅಂದರೆ ಯಾವುದೇ ಒಂದು ಜಾಗದಲ್ಲಿ ಆದರೆ ಅನೇಕ ಮಾಲೆಗಳ ರೀತಿಯ ಗುರುತುಗಳನ್ನು ಮೂಡಿಸುವ ಕಚ್ಚುವಿಕೆ. ‘ಖಂಡಾಭ್ರಕ’ದಲ್ಲಿ ಅಲ್ಲಲ್ಲಿ ಚದುರಿದ ಮೋಡಗಳಂತೆ ಮುಖ್ಯವಾಗಿ ಎದೆ ಮೇಲೆ ಕಚ್ಚಿದ ಗುರುತುಗಳು.

‘ವರಾಹಚರ್ವಿತ’ ಅಂದರೆ ಕಾಡುಹಂದಿ ಹೊಲದಲ್ಲಿ ನುಗ್ಗಿದರೆ ಹೇಗಿರುತ್ತದೋ ಹಾಗೆ ಮೈಮೇಲೆ ಎಲ್ಲೆಂದರಲ್ಲಿ ಗುರುತುಗಳಾಗುವಂಥ ತೀವ್ರ ಕಚ್ಚುವಿಕೆ. ಹಾಗಂತ ಇವ್ಯಾವುವೂ ಹಿಂಸಾತ್ಮಕವಲ್ಲ. ಹೆಣ್ಣು-ಗಂಡು ಭೇದವಿಲ್ಲದೆ, ಕಚ್ಚುವವರಿಗೂ ಕಚ್ಚಿಸಿಕೊಳ್ಳುವವರಿಗೂ ಪರಮಾನಂದ ನೀಡುವ ಕಚ್ಚುವಿಕೆಗಳೇ.

ಜಯಂತ ಕಾಯ್ಕಿಣಿಯವರ ಮುಂಗಾರುಮಳೆ ಭಾಷೆಯಲ್ಲಿ ಹೇಳುವುದಾದರೆ “ಆಹಾ ಎಂಥ ಮಧುರ ಯಾತನೆ...". ಇದನ್ನು ನೀಲಕಂಠ ದೀಕ್ಷಿತನೆಂಬ ಕವಿ ತಮಾಷೆಯಾಗಿ ಬಣ್ಣಿಸಿ ದ್ದಾನೆ: “ದಂತೋಲ್ಲೇಖ ನಖಕ್ಷತಾದಿದಯಿತವ್ಯಾಪಾರಪಾರಂಪರೀ| ನಿರ್ಗ್ಲಾನಾಪಿ ಹಿ ಕಾಮಿನೀ ದಿನಮುಖೇ ನಿಸ್ಸೀಮಮಾನಂದತಿ| ಮಾರ್ಜಾರೀ ನಖರಾಂಕುರಾಖು ದಶನವ್ಯಾ ವಿಧ್ಯಮಾನಾ ಮನಾ| ಗಾಯುರ್ವೇದವಿದೋಧಿಭಿಗಚ್ಛತಿ ರುದತ್ಯಾಸನ್ನಮೃತ್ಯುರ್ಯಥಾ||" ಅಂದರೆ ಪ್ರಿಯತಮನಿಂದ ದಂತಕ್ಷತ-ನಖಕ್ಷತಗಳನ್ನು ಪಡೆದ ಸುಂದರಿಗೆ ಮುಂಜಾನೆಯ ವೇಳೆಗೆ ದೈಹಿಕವಾಗಿ ಅಷ್ಟಿಷ್ಟು ನೋವುಂಟಾಗಿದ್ದರೂ ಅದಕ್ಕೆ ಮಿಗಿಲಾದ ಆನಂದವನ್ನು ಅವಳು ಪಡೆದಿರುತ್ತಾಳೆ. ಆದರೆ ಅದೇ ಪ್ರಿಯತಮೆ ಒಂದುವೇಳೆ ಇಲಿ-ಬೆಕ್ಕುಗಳ ಉಗುರು-ಹಲ್ಲುಗಳಿಂದ ನೋಯಿಸಿಕೊಂಡರೆ ಸಾವೇ ಎದುರಾದಂತೆ ಸಂಕಟಪಡುತ್ತ ವೈದ್ಯರತ್ತ ಧಾವಿಸುತ್ತಾಳೆ!

ವಾತ್ಸ್ಯಾಯನನಿಗೆ ಥ್ಯಾಂಕ್ಸ್ ಹೇಳುತ್ತ ‘ಪ್ರತಿ ಕಚ್ಚುವಿಕೆಯಲ್ಲೂ ಆನಂದವನ್ನು ಸಂಸ್ಕೃತದ ಬೇರೆಬೇರೆ ಕವಿಗಳು ತಮ್ಮ ಕಾವ್ಯಗಳ ಶೃಂಗಾರ ಸನ್ನಿವೇಶಗಳಲ್ಲಿ ವರ್ಣರಂಜಿತವಾಗಿ ಬಳಸಿಕೊಂಡಿದ್ದಾರೆ. ಕಾಳಿದಾಸನ ಕುಮಾರಸಂಭವದಲ್ಲಿ ಶಿವ-ಪಾರ್ವತಿಯರ ಪ್ರಣಯ ಲೀಲೆ: ನಿದ್ದೆಯಿಲ್ಲದೆ ಕಣ್ಣು ಕೆಂಪಾದ, ಅಧರದಲ್ಲಿ ಕಚ್ಚಿದ ಗುರುತುಳ್ಳ, ತಲೆಗೂದಲು ಅಸ್ತವ್ಯಸ್ತವಾಗಿದ್ದ, ಹಣೆಮೇಲಿನ ಕುಂಕುಮವೂ ಕರಗಿಹೋಗಿದ್ದ ಪಾರ್ವತಿಯನ್ನು ಕಂಡು ಶಿವನಿಗೆ ಮತ್ತಷ್ಟು ಮುದವಾಯಿತಂತೆ. ಶಿವನು ಕಚ್ಚಿದ್ದರಿಂದ ಆದ ತನ್ನ ಅಧರದ ನೋವನ್ನು ಅವನದೇ ತಲೆಯಲ್ಲಿದ್ದ ತಂಪು ಚಂದ್ರನತ್ತ ಮುಖವನ್ನೊಡ್ಡುತ್ತ ಪಾರ್ವತಿ ತತ್‌ಕ್ಷಣವೇ ಪರಿಹರಿಸಿಕೊಂಡಳಂತೆ!

ಶಿಶುಪಾಲವಧೆ ಕಾವ್ಯದಲ್ಲಿ ಮಾಘಕವಿಯು “ಆ ನಿರಾಭರಣಸುಂದರಿಯರಿಗೆ ಅಧರದ ಮೇಲಿನ ಗಾಯಗಳೇ ಆಭರಣವಾಗಿದ್ದವು. ಊದಿಕೊಂಡು ಬಿಂಬಹಣ್ಣಿನಂತಾಗಿದ್ದ ಅಧರದ ನೋವನ್ನು ಅವರ ಬಳೆಗಳ ಧ್ವನಿಯೇ ಹೇಳುತ್ತಿತ್ತು" ಎಂದಿದ್ದಾನೆ.

ಶ್ರೀಹರ್ಷನ ನೈಷಽಯಚರಿತದಲ್ಲಿ ನಳನ ಮಾತುಗಳು: “ದಮಯಂತಿಯ ಅಧರವು ಗಾಯಗೊಂಡು ಊದಿದಂತೆ ಕಾಣುತ್ತಿದೆ. ಅವಳ ಕನಸಲ್ಲಿ ಬಂದ ನಾನೇ ಕಚ್ಚಿದೆನೇ? ನಾನು ಹಾಗೆ ಮಾಡಿದರೂ ಆಕೆಯೇನೂ ಮುನಿಸಿಕೊಳ್ಳುವುದಿಲ್ಲ. ಬಿಂಬ ಫಲವನ್ನು ಗಿಳಿ ಕಚ್ಚಿದರೆ ಬಿಂಬ-ಲದ ಬಳ್ಳಿ ಸಿಟ್ಟಾಗುವುದಿಲ್ಲವಲ್ಲ?" ಜಯದೇವನ ಗೀತಗೋವಿಂದದಲ್ಲಿ ಕೃಷ್ಣನ ಅಧರವೇ ಊದಿಕೊಂಡಿದೆ! “ದಶನಪದಂ ಭವದಧರಗತಂ ಮಮ ಜನಯತಿ ಚೇತಸಿ ಖೇದಮ್" ಎನ್ನುತ್ತಾಳೆ ರಾಧೆ, ಸಿಟ್ಟಿನಿಂದ.

“ರಾತ್ರಿಯಿಡೀ ಯಾರೋ ಗೋಪಿಕೆಯೊಡನೆ ಲಲ್ಲೆಗರೆದು ಬಂದಿದ್ದೀ. ನಿನ್ನ ತುಟಿಯಲ್ಲಿ ಉಂಟಾಗಿರುವ ಗಾಯಗಳು ನನ್ನನ್ನು ನೋಯಿಸುತ್ತಿವೆ. ನನ್ನ ಮುಂದೆ ನಿನ್ನದೇನೂ ತಪ್ಪಿಲ್ಲವೆಂದು ಹೇಗೆ ಹೇಳುತ್ತಿ?" ಅದಕ್ಕೆ ಕೃಷ್ಣನೆನ್ನುತ್ತಾನೆ: “ರಾಧೇ, ನನ್ನ ಮೇಲೆ ಸಂಶಯ ವಿದ್ದರೆ ನನ್ನನ್ನು ಶಿಕ್ಷಿಸು.

ನಿರ್ದಾಕ್ಷಿಣ್ಯವಾಗಿ ನನ್ನ ತುಟಿಯನ್ನು ಕಚ್ಚು. ನಿನ್ನ ಬಾಹುಗಳೆಂಬ ಬಳ್ಳಿಯಿಂದ ನನ್ನನ್ನು ಬಂಧಿಸು. ನಿನ್ನ ಸ್ತನಭಾರದಿಂದ ನನ್ನನ್ನು ಅಪ್ಪಚ್ಚಿಗೊಳಿಸು." ಹೀಗೆಯೇ, ಅನಂತ ಭಟ್ಟನೆಂಬ ಕವಿಯು ಅರ್ಜುನನು ಹಿಮಾಲಯಕ್ಕೆ ಹೋಗಿದ್ದೇಕೆ ಎಂದು ಬಣ್ಣಿಸಿದ್ದಾನೆ- ನಾಗಕನ್ಯೆ ಉಲೂಪಿಯು ಪ್ರಣಯಕೇಳಿಯಲ್ಲಿ ಅರ್ಜುನನ ಮೈಗೆಲ್ಲ ಕಚ್ಚಿದ್ದಳಂತೆ, ಆ ಗಾಯಗಳ ಉರಿಯನ್ನು ಶಮನಗೊಳಿಸಲಿಕ್ಕೆಂದು ತಂಪಾದ ಹಿಮಾಲಯದತ್ತ ನಡೆದನಂತೆ!

ದಂಡಿಯ ದಶಕುಮಾರ ಚರಿತೆಯಲ್ಲಿ ಇಂತಹ ಬಣ್ಣನೆ ಮತ್ತಷ್ಟು ರಂಗೇರುತ್ತದೆ. ಮಂತ್ರಗುಪ್ತನೆಂಬ ರಾಜಕುಮಾರನು ತನ್ನ ಶೃಂಗಾರಸಾಹಸವನ್ನು ಬಣ್ಣಿಸುವ ಸಂದರ್ಭ ದಲ್ಲಿ ನಿರೋಷ್ಠ್ಯವಾಗಿ ಮಾತನಾಡುತ್ತಾನೆ. ಅಂದರೆ ಅವನ ಮಾತಿನಲ್ಲಿ ಪ, ಫ, ಬ, ಭ, ಮ ಅಕ್ಷರಗಳೇ ಬರುವುದಿಲ್ಲ, ಹಿಂದಿನ ರಾತ್ರಿ ಅವನ ಪ್ರಿಯತಮೆಯು ತುಟಿ ಕಚ್ಚಿದ್ದರಿಂದ, ಆ ಗಾಯಗಳಿಂದಾಗಿ ಪ-ವರ್ಗದ ಅಕ್ಷರಗಳನ್ನು ಉಚ್ಚರಿಸುವ ಸಾಮರ್ಥ್ಯವನ್ನು ಆತ ತಾತ್ಕಾಲಿಕವಾಗಿ ಕಳೆದುಕೊಂಡಿದ್ದರಿಂದ!

ಆಶ್ಚರ್ಯವಾಗುತ್ತದೆ ನಿಜವಾಗಿಯೂ ಆ ಪಾತ್ರಗಳಿಗೇ ಅಷ್ಟೆಲ್ಲ ಶೃಂಗಾರಪ್ರಜ್ಞೆ ಇತ್ತೇ ಅಥವಾ ಅವುಗಳನ್ನು ಬಣ್ಣಿಸಿದ ಕವಿಗಳ ರಸಿಕತೆಯ ಪರಾಕಾಷ್ಠೆಯೇ? ಏನಿದ್ದರೂ ಇದೆಲ್ಲವೂ ‘ಪ್ರತಿ ಕಚ್ಚುವಿಕೆಯಲ್ಲಿ ಆನಂದ’ ಅಲ್ಲದೆ ಮತ್ತೇನು? ಹೌದು, ಮಧುರವಾದ ಮತ್ತೇ!