Raghava Sharma Nidle Column: ದೀದಿ...ಅವರು ಒಂದೇ ಸೆಕೆಂಡಿನಲ್ಲಿ ಮುಗಿಸುವುದು ಯಾರನ್ನು ?
“ತೃಣಮೂಲ ಕಾಂಗ್ರೆಸ್ ಸರಕಾರ ಇರುವುದರಿಂದಲೇ ನೀವು ಸುರಕ್ಷಿತವಾಗಿದ್ದು, ಒಂದೇ ವೇಳೆ ನಮ್ಮ ಸರಕಾರ ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ನಿಮ್ಮನ್ನು ಮುಗಿಸಿ ಬಿಡು ತ್ತಿದ್ದರು" ಎಂಬ ಪ್ರಚೋದನಕಾರಿ ಹಾಗೂ ಬೆದರಿಕೆ ಹಾಕುವ ರೀತಿಯ ಅವರ ಭಾಷಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.
-
ಜನಪಥ
ಬಂಗಾಳದಲ್ಲಿ ಬಿಜೆಪಿ ಕೇಡರ್ ಗಟ್ಟಿಗೊಳ್ಳುತ್ತಿರುವುದರ ಪರಿಣಾಮ ನಾಲಿಗೆ ಹರಿಯಬಿಟ್ಟ ಸಿಎಂ ಮಮತಾ ಬ್ಯಾನರ್ಜಿ, ‘ನಮ್ಮ ಸರಕಾರ ಇರುವುದರಿಂದಲೇ ನೀವು ಸುರಕ್ಷಿತವಾಗಿದ್ದು, ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ನಿಮ್ಮನ್ನು ಮುಗಿಸಿ ಬಿಡುತ್ತಿದ್ದರು’ ಎಂದು ಬೆದರಿಕೆ ಹಾಕಿದ್ದಾರೆ. ಇದು ದೀದಿಯ ಹತಾಶೆಯ ಸಂಕೇತವೇ?
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಕದನಕ್ಕೆ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ಕೇಂದ್ರ ಚುನಾವಣಾ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಮತ್ತು ರಾಜ್ಯ ಗೃಹ ಕಾರ್ಯದರ್ಶಿ ಜಗದೀಶ್ ಪ್ರಸಾದ್ ಮೀನಾ ಅವರನ್ನು ಜವಾಬ್ದಾರಿಗಳಿಂದ ತೆರವುಗೊಳಿಸಿ, ಅವರ ಸ್ಥಾನಕ್ಕೆ ಕ್ರಮವಾಗಿ ದುಷ್ಯಂತ ನರಿಯಾಲ ಹಾಗೂ ಸಂಘಮಿತ್ರ ಘೋಷ್ ಅವರನ್ನು ನೇಮಕ ಮಾಡಿದೆ.
ಚುನಾವಣೆ ಹೊಸ್ತಿಲಲ್ಲಿ ಸರಕಾರದ ಉನ್ನತ ಆಡಳಿತಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಈ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದ ಯಾವುದೇ ಕರ್ತವ್ಯ ನಿರ್ವಹಿಸ ಬಾರದು ಎಂದು ಆದೇಶಿಸಿರುವುದು ಸಾಮಾನ್ಯ ಬೆಳವಣಿಗೆಯೇನಲ್ಲ.
ವಿರೋಧಿಗಳನ್ನು ಹತ್ತಿಕ್ಕಲು ಅಧಿಕಾರಿಗಳನ್ನು ಬಳಸುತ್ತಿದ್ದ ಸಿಎಂ ಮಮತಾ ಬ್ಯಾನರ್ಜಿ, ಅಧಿಕಾರಿ ಗಳನ್ನು ತೆರವುಗೊಳಿಸಿದ ಮಾತ್ರಕ್ಕೆ ಬಂಗಾಳದಲ್ಲಿ ನಮ್ಮ ಗೆಲುವನ್ನು ತಡೆಯಲಾಗದು" ಎಂಬ ವಿಶ್ವಾಸದ ಮಾತುಗಳನ್ನಾಡಿದ್ದರೂ, ಪೊಲೀಸ್ ಮತ್ತು ಅಧಿಕಾರಶಾಹಿಯನ್ನು ಬಿಗಿಗೊಳಿಸುವ ಚುನಾವಣಾ ಆಯೋಗದ ಕ್ರಮ ಟಿಎಂಸಿಯ ಒತ್ತಡ ಹೆಚ್ಚಿಸಿರುವುದು ಸುಳ್ಳಲ್ಲ. ರೋಚಕ ಚುನಾವಣಾ ಸೆಣಸಾಟಕ್ಕೆ ಸಾಕ್ಷಿಯಾಗಿರುವ ಬಂಗಾಳದಲ್ಲಿ ದೀದಿ-ಮೋದಿ ನಡುವಿನ ಕದನವನ್ನು ಇದು ತೀವ್ರಗೊಳಿಸಲಿದೆ.
ಪೊಲೀಸ್ ಮಹಾನಿರ್ದೇಶಕ ಪೀಯೂಷ್ ಪಾಂಡೆ, ಕೊಲ್ಕತ್ತಾ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ಮತ್ತು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ವಿನೀತ್ ಗೋಯಲ್ ಅವರನ್ನು ವರ್ಗಾಯಿಸಲೂ ಆಯೋಗ ಆದೇಶಿಸಿದ್ದು, ಅಧಿಕಾರಶಾಹಿಯಲ್ಲಿ ದಿಗಿಲು ಹುಟ್ಟಿಸಿದೆ.
ಇದನ್ನೂ ಓದಿ:Raghava Sharma Nidle Column: ನಿತೀಶ್ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಬಿಗಿಯಾಗಿರುವುದೇ ?
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರನ್ನು ಸಂಸತ್ತಿನಲ್ಲಿ ವಾಗ್ದಂಡನೆಗೆ ಒಳಪಡಿಸಲು ವಿಪಕ್ಷಗಳು ಮುಂದಾಗುತ್ತಿರುವ ನಡುವೆ ಬಂಗಾಳದಲ್ಲಿ ಆಯೋಗ ಬಿಗಿ ನಿಲುವುಗಳನ್ನು ತಳೆದಿದೆ. 2021ರ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆದಿತ್ತು. ಆದರೆ ಈ ಬಾರಿ ಕೇವಲ 2 ಹಂತಗಳಲ್ಲಿ ಮತದಾನ ನಡೆಯುತ್ತಿರುವುದು ಕೂಡ ವಿಪಕ್ಷದಲ್ಲಿರುವ ಬಿಜೆಪಿಗೆ ಅನುಕೂಲಕರ ಎಂದೇ ವಿಶ್ಲೇಷಿಸಲಾಗಿದೆ.
2021ರಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆದು, ರಣನೀತಿಗಳನ್ನು ಹಂತಹಂತವಾಗಿ ಬದಲಿಸಲು ಟಿಎಂಸಿಗೆ ಅನುಕೂಲವಾಗಿತ್ತು. ಯಾವುದೇ ಸರಕಾರಕ್ಕೆ ಆಗಲಿ, 15 ವರ್ಷಗಳ ಆಡಳಿತದ ಬಳಿಕ ವಿರೋಧಿ ಅಲೆ ಬರುವುದು ನಿರೀಕ್ಷಿತವೇ. ಟಿಎಂಸಿಯೂ ಅಂಥದ್ದೇ ವಿರೋಧ ಎದುರಿಸುತ್ತಿದ್ದರೂ, “ಬಂಗಾಳಿ ಅಸ್ಮಿತೆಯನ್ನು ನಮ್ಮಿಂದಷ್ಟೇ ಕಾಪಾಡಲು ಸಾಧ್ಯ. ಬಂಗಾಳಿ ಅಸ್ಮಿತೆಗೆ ಧಕ್ಕೆ ತರುವ ಹೊರಗಿನವರನ್ನು ಒಳಗೊಂಡ (ಮೋದಿ-ಶಾ) ಬಿಜೆಪಿಯನ್ನು ಬಂಗಾಳದ ಜನ ಬೆಂಬಲಿಸುವುದಿಲ್ಲ/ಬೆಂಬಲಿಸಬಾರದು" ಎಂಬ ಪೊಲಿಟಿಕಲ್ ನರೇಟಿವ್ ಅನ್ನು ಈ ಸಲವೂ ಮುಂದುವರಿಸುತ್ತಿದೆ.
ಕಳೆದ ಚುನಾವಣೆಯಲ್ಲಿ ಈ ನರೇಟಿವ್ ಟಿಎಂಸಿ ಗೆಲುವಿಗೆ ಕೊಡುಗೆ ನೀಡಿತ್ತು ಮತ್ತು ರಾಜ್ಯ ಬಿಜೆಪಿ ಘಟಕವನ್ನು ದಿಲ್ಲಿಯಿಂದ ಬಂದ ಬಿಜೆಪಿ ನಾಯಕರು ನಿರ್ವಹಣೆ ಮಾಡುತ್ತಿದ್ದುದರಿಂದ ಬಿಜೆಪಿ ಸೀಟುಗಳ ಸಂಖ್ಯೆ 80ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಬಿಜೆಪಿ ತನ್ನ ತಂತ್ರ ಬದಲಿಸಿದೆ. ಮಾ.13ರಂದು ಕೊಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಬೃಹತ್ ಸಮಾವೇಶದಿಂದಲೇ ಇದು ಸ್ಪಷ್ಟವಾಗಿದೆ.
ಈ ಜನಸಭೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಕೇಂದ್ರದ ಯಾವೊಬ್ಬ ನಾಯಕ ನೂ ಇರಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳ ಸ್ಥಳೀಯ ನಾಯಕರಿಗಷ್ಟೇ ಸ್ಥಾನ ಮೀಸಲಿಡಲಾಗಿತ್ತು. 4 ರಿಂದ 5 ಲಕ್ಷ ಮಂದಿ ಸಮಾವೇಶದಲ್ಲಿದ್ದರು. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ, ಹಾಗಾಗಿ ಯೇ ವಿಪಕ್ಷದ ರ‍್ಯಾಲಿಗೆ ಈ ಪರಿಯಲ್ಲಿ ಜನ ಸೇರಿದ್ದಾರೆ ಎನ್ನುವುದು ಬಿಜೆಪಿ ಪ್ರತಿಪಾದನೆ.
2021ರಲ್ಲಿ ಎಸಗಿದ ತಪ್ಪುಗಳನ್ನು ಪುನರಾವರ್ತಿಸದೆ ಹೊಸ ರಣನೀತಿಗಳೊಂದಿಗೆ ಅಖಾಡ ದಲ್ಲಿರುವ ನರೇಂದ್ರ ಮೋದಿ-ಅಮಿತ್ ಶಾ ನೇತೃತ್ವದ ಕೇಸರಿಪಡೆಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಅಂಗಸಂಸ್ಥೆಗಳ ಕಾರ್ಯಕರ್ತರು ಕಳೆದ ಹಲವು ತಿಂಗಳುಗಳಿಂದ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಬೀಡುಬಿಟ್ಟು, ಜನರ ಮನಃಪರಿವರ್ತನೆಗೊಳಿಸುವ ಜಾಗೃತ ಅಭಿಯಾನಗಳನ್ನು ನಡೆಸುತ್ತಿರುವುದೂ ಬಲ ತುಂಬುತ್ತಿದೆ.
ಆರೆಸ್ಸೆಸ್ಸಿನ ವಿವಿಧ ಗುಂಪುಗಳು ಸಾಂಪ್ರದಾಯಿಕ ಪ್ರಚಾರ ಕಾರ್ಯದ ಬದಲು ನೇರವಾಗಿ ಜನಸಾಮಾನ್ಯರ ಸಂಪರ್ಕ ಅಭಿಯಾನ ನಡೆಸಿದೆ. ಕಾರ್ಯಕರ್ತರು, ಮುಖಂಡರು ಸಾರ್ವಜನಿಕ ರ‍್ಯಾಲಿ ಅಥವಾ ವೇದಿಕೆ ಭಾಷಣಗಳ ಬದಲಿಗೆ ಮನೆ-ಮನೆಗಳು, ಟೀ ಸ್ಟಾಲ್, ನೆರೆಹೊರೆಯ ಕ್ಲಬ್ ಗಳು ಮತ್ತು ದೇವಾಲಯದ ಅಂಗಳಗಳ ಒಳಗೆ ಸಣ್ಣಸಣ್ಣ ಸಭೆಗಳನ್ನು ನಡೆಸಿ, ಜನರ ಒಲವು ಸಂಪಾದನೆ ಮಾಡುವಲ್ಲಿ ತೊಡಗಿದ್ದಾರೆ.
ಇದು ಸಂಘದ ಜಾಗರಣ ಅಭಿಯಾನದ ಭಾಗವೂ ಹೌದು. ಇಲ್ಲಿ ಜಾಗರಣ್ ಎಂದರೆ ಜಾಗೃತಿ. ಈ ಅಭಿಯಾನಕ್ಕೂ ರಾಜ್ಯ ಚುನಾವಣೆಗೂ ನೇರ ಸಂಬಂಧವಿದೆ ಎಂದು ಮೇಲ್ನೋಟಕ್ಕೆ ಕಾಣ ದಿದ್ದರೂ, ಸಾಂಸ್ಕೃತಿಕ ಅಥವಾ ಸಾಮಾಜಿಕ ಜಾಗೃತಿ ಎಂಬ ವ್ಯಾಖ್ಯಾನದ ಮೂಲಕ ಜನರನ್ನು ಪರೋಕ್ಷವಾಗಿ ಬಿಜೆಪಿಯತ್ತ ಆಕರ್ಷಿಸಲಾಗುತ್ತಿದೆ.
ಈ ಸಭೆಗಳಲ್ಲಿ ಹಿಂದೂ ಗುರುತು, ರಾಜ್ಯದಲ್ಲಿ ಹಿಂದುಗಳು ನಿರ್ಲಕ್ಷ್ಯಕ್ಕೊಳಗಾಗಿರುವುದು ಮತ್ತು ಬಂಗಾಳಿ ಹಿಂದೂಗಳಲ್ಲಿ ಹೆಚ್ಚಿನ ಐಕ್ಯತೆಯ ಅಗತ್ಯತೆಯ ವಿಷಯಗಳ ಬಗ್ಗೆ ಗಾಢವಾಗಿ ಚರ್ಚಿಸ ಲಾಗಿದೆ. ಹಿಂದೂಗಳ ಪರ ನಿಲ್ಲುವ ಪಕ್ಷವನ್ನು ಬೆಂಬಲಿಸಿ ಎಂದು ನೇರವಾಗಿ ಕೇಳಿಕೊಳ್ಳದಿದ್ದರೂ, ಸಮುದಾಯಗಳು ತಮ್ಮ ಸಾಮಾಜಿಕ ಮತ್ತು ರಾಜಕೀಯ ಪರಿಸರವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಸಂಘ ಮತ್ತು ಬಿಜೆಪಿ ಈ ರೀತಿ ಕಾರ್ಯಾಚರಣೆ ನಡೆಸಿದ್ದವು. ಇದರಿಂದ ಬಿಜೆಪಿ ಸೀಟುಗಳ ಸಂಖ್ಯೆ ಗಮನಾರ್ಹ ಪ್ರಮಾಣ ದಲ್ಲಿ ಏರಿಕೆ ಕಂಡರೂ, ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಅವೆರಡನ್ನೂ ಮೀರಿಸುವ ರೀತಿಯಲ್ಲಿ ರಣನೀತಿಗಳನ್ನು ಅಳವಡಿಸಿಕೊಳ್ಳಲಾಗಿದ್ದು, 2021ಕ್ಕಿಂತ ಮಿಗಿಲಾಗಿ ಪ್ರಬಲ ಸವಾಲೊಡ್ಡಲು ಬಿಜೆಪಿ ಮುಂದಾಗಿದೆ.
ಹಿಂದಿನ ಚುನಾವಣೆಗಳಲ್ಲಿ ಟಿಎಂಸಿ ಪ್ರೇರಿತ ಭಯ-ಭೀತಿಯ ಸಂಘರ್ಷದ ವಾತಾವರಣ ಎದುರಿ ಸಲು ಬಿಜೆಪಿಯಲ್ಲಿ ಸೀಮಿತ ಕಾರ್ಯಕರ್ತ ಪಡೆಯಿತ್ತು. ಆದರೆ, ಈ ಬಾರಿ ಆ ಸಂಖ್ಯೆ ಹೆಚ್ಚಾಗಿದೆ. ಟಿಎಂಸಿಗೆ ‘ಪ್ರತಿರೋಧ’ ಒಡ್ಡುವಲ್ಲಿ ಕೇಸರಿ ಕಾರ್ಯಕರ್ತರ ನೈತಿಕಸ್ಥೈರ್ಯ ಬಲಗೊಂಡಿರುವುದು ಹಲವೆಡೆ ಕಾಣುತ್ತಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಎಂಬಾತನನ್ನು ಸಜೀವ ದಹನದ ಮೂಲಕ ಹತ್ಯೆ ಮಾಡಿದ ಘಟನೆ ಬಿಜೆಪಿ ಪ್ರಚಾರಗಳಲ್ಲಿ ಬಹುಚರ್ಚಿತ ವಿಷಯವಾಗುತ್ತಿದೆ. ‘ಹಿಂದೂಗಳ ರಕ್ಷಣೆ ಆಗಲೇಬೇಕು’ ಎಂಬ ಮಾನಸಿಕತೆ ತೀವ್ರಗೊಳಿಸುತ್ತಿರುವುದು ತಂತ್ರಗಾರಿಕೆಯ ಭಾಗವಾಗಿದ್ದು, ಅದಕ್ಕೆ ಪೂರಕವಾಗಿ ನರೇಟಿವ್ʼಗಳನ್ನು ರೂಪಿಸಲಾಗುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಬಿಜೆಪಿ ಪ್ರಚಾರಗಳಲ್ಲಿ ‘ಜೈ ಶ್ರೀರಾಮ’ಗಿಂತ ‘ಜೈ ಮಾ ಕಾಳಿ’, ‘ಜೈ ಮಾ ದುರ್ಗಾ’ ಎಂಬ ಬಂಗಾಳಿ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆ ಎತ್ತಿ ಹಿಡಿಯುವ ಘೋಷವಾಕ್ಯಗಳೂ ದೊಡ್ಡ ಸ್ವರದಲ್ಲಿ ಕೇಳಿ ಬರುತ್ತಿದೆ. ಬಂಗಾಳದಲ್ಲಿ ‘ಜೈ ಶ್ರೀರಾಮ್’ ಜತೆಗೆ ‘ಜೈ ಮಾ ದುರ್ಗಾ’ ಎನ್ನುವುದು ಬಹಳ ಮುಖ್ಯ.
2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆಯ ಅನುಭವ ಬಿಜೆಪಿಗೆ ಇದನ್ನು ಗೊತ್ತು ಮಾಡಿಸಿದೆ. ಸಂಘಟನಾತ್ಮಕವಾಗಿ ಬಿಜೆಪಿ ನೆಲೆ ಗಟ್ಟಿಗೊಳ್ಳುತ್ತಿರುವುದರಿಂದ ಮಮತಾ ಬ್ಯಾನರ್ಜಿ ನಾಲಗೆ ಹರಿಯ ಬಿಡುತ್ತಿದ್ದಾರೆ.
“ತೃಣಮೂಲ ಕಾಂಗ್ರೆಸ್ ಸರಕಾರ ಇರುವುದರಿಂದಲೇ ನೀವು ಸುರಕ್ಷಿತವಾಗಿದ್ದು, ಒಂದೇ ವೇಳೆ ನಮ್ಮ ಸರಕಾರ ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ನಿಮ್ಮನ್ನು ಮುಗಿಸಿಬಿಡುತ್ತಿದ್ದರು" ಎಂಬ ಪ್ರಚೋದನಕಾರಿ ಹಾಗೂ ಬೆದರಿಕೆ ಹಾಕುವ ರೀತಿಯ ಅವರ ಭಾಷಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ.
ಈ ಮೂಲಕ ಚುನಾವಣೆಯನ್ನು ನೇರವಾಗಿ ‘ಹಿಂದೂ ವರ್ಸಸ್ ಮುಸ್ಲಿಂ’ ಎಂಬಂತೆ ದೀದಿಯೇ ಬಿಂಬಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರುದ್ಧ ಧರಣಿ ನಡೆಸುತ್ತಿದ್ದಾಗ ಭಾಷಣ ಮಾಡಿದ್ದ ಮಮತಾ, “ನಾವು ಅಧಿಕಾರದಲ್ಲಿದ್ದೇವೆ, ಅದಕ್ಕಾಗಿಯೇ ನೀವೆಲ್ಲರೂ ಸುರಕ್ಷಿತ ವಾಗಿದ್ದೀರಿ. ನಾವು ಇಲ್ಲದಿದ್ದರೆ, ಒಂದು ನಿರ್ದಿಷ್ಟ ಸಮುದಾಯದ ಜನರು ಗುಂಪಾಗಿ ಸೇರಿ ನಿಮ್ಮನ್ನು ಸುತ್ತುವರಿದು, ಒಂದೇ ಸೆಕೆಂಡಿನಲ್ಲಿ ಮುಗಿಸುತ್ತಾರೆ" ಎಂದು ಬೆದರಿಕೆ ಹಾಕಿದ್ದರು.
ರಾಜ್ಯದ ಮುಖ್ಯಮಂತ್ರಿ ಎಂಬುದನ್ನೂ ಮರೆತು ಅವರು ಈ ರೀತಿ ಮಾತನಾಡಿರುವುದನ್ನು ನೋಡಿದರೆ, ‘ದೀದಿ ಹತಾಶರಾಗಿದ್ದಾರಾ?’ ಎಂಬ ಸಂಶಯವೂ ಮೂಡುತ್ತದೆ. ‘ಹಿಂದೂಗಳನ್ನು ಮುಗಿಸಲು ದೀದಿ ಕರೆ ನೀಡಿದ್ದಾರೆ’ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ.
ಹಾಗಂತ ಭಾಷಣದ ಬಗ್ಗೆ ಸಿಎಂ ಮಮತಾ ವಿರುದ್ಧ ಯಾವುದೇ ಕೇಸು ದಾಖಲಾಗಿಲ್ಲ. ದೀದಿಯ ಹತಾಶೆಯ ಮಾತು ಬಿಜೆಪಿಗೂ ಅಸವಾಗಿದ್ದು, ಹಿಂದೂ ಮತಗಳ ಕ್ರೋಡೀಕರಣಕ್ಕೆ ನೆರವಾಗಲಿದೆ. ಏತನ್ಮಧ್ಯೆ, ಮತದಾರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಾರಂಭವಾದಾಗಿನಿಂದ ಬಂಗಾಳ ದಲ್ಲಿ 63.66 ಲಕ್ಷ ಹೆಸರುಗಳನ್ನು (ಶೇ.8.3) ಸಾವು, ವಲಸೆ, ನಕಲು ಮತ್ತು ಪತ್ತೆ ಹಚ್ಚಲಾಗದಿರುವಿಕೆ ಕಾರಣದಿಂದಾಗಿ ಮತಪಟ್ಟಿಯಿಂದ ಅಳಿಸಲಾಗಿದೆ.
ಹೀಗಾಗಿ, ರಾಜ್ಯದ ಒಟ್ಟು ಮತದಾರರ ಸಂಖ್ಯೆ 7.04 ಕೋಟಿಗೆ ಇಳಿದಿದೆ. 60 ಲಕ್ಷ ಮತದಾರರ ಹೆಸರು ಆಯೋಗದ ಅಧಿಕಾರಿಗಳ ಪರಿಶೀಲನೆಯಲ್ಲಿದ್ದು, 60 ಲಕ್ಷದಲ್ಲಿ ಎಷ್ಟು ಮಂದಿ ಹೆಸರನ್ನು ಕೈಬಿಡುತ್ತಾರೆನ್ನುವುದು ಕುತೂಹಲಕರ.
ಬಾಂಗ್ಲಾ ಅಕ್ರಮ ವಾಸಿಗರ ಸಂಖ್ಯೆಯೇ ಹೆಚ್ಚು ಡಿಲೀಟ್ ಆಗಿರುವುದರಿಂದ ಮತಪಟ್ಟಿ ಪರಿಷ್ಕರಣೆ ರಾಜಕೀಯವಾಗಿ ಬಿಜೆಪಿಗೆ ಲಾಭ ಎನ್ನುವುದರಲ್ಲಿ ಅನುಮಾನವಿಲ್ಲ. ಒಂದೂವರೆ ದಶಕಗಳಿಂದ ಟಿಎಂಸಿ ರಾಜಕೀಯ ಯಶಸ್ಸಿನ ಆಧಾರಸ್ತಂಭವಾಗಿದ್ದದ್ದು ಅಲ್ಪಸಂಖ್ಯಾತ ಸಮುದಾಯ. ಸಣ್ಣ ಪುಟ್ಟ ಅಸಮಾಧಾನಗಳಿದ್ದರೂ ಮುಸ್ಲಿಂ ಮತಬ್ಯಾಂಕ್ ಟಿಎಂಸಿ ಜತೆಗೇ ಗುರುತಿಸಿಕೊಳ್ಳ ಬಹುದು. ಆದರೆ, ಟಿಎಂಸಿಯ ಮಾಜಿ ನಾಯಕ ಹುಮಾಯೂನ್ ಕಬೀರ್ ಅವರ ‘ಆಮ್ ಜನತಾ ಉನ್ನಯನ್’ ಪಕ್ಷ ಮತ್ತು ಪ್ರಭಾವಿ ಫರ್ಫುರಾ ಷರೀಫ್ ದೇಗುಲಕ್ಕೆ ಸಂಬಂಧಿಸಿದ ಭಾರತೀಯ ಜಾತ್ಯತೀತ ರಂಗದಂಥ (ಐಎಸ್ʼಎಫ್) ಸಣ್ಣಸಣ್ಣ ಪಕ್ಷಗಳು ಮುಸ್ಲಿಂ ಮತಗಳ ಮೇಲಿನ ಟಿಎಂಸಿಯ ಹಿಡಿತ ವನ್ನು ಸಣ್ಣಮಟ್ಟಿಗೆ ಸಡಿಲಗೊಳಿಸಬಹುದೇ ಎಂಬ ಪ್ರಶ್ನೆಗಳಿವೆ.
ರಾಜ್ಯದಲ್ಲಿ ಎಡಪಕ್ಷಗಳು ಪ್ರಸ್ತುತತೆ ಕಳೆದುಕೊಂಡಿರುವ ಮಧ್ಯೆ ಕಾಂಗ್ರೆಸ್ ಪಕ್ಷವಂತೂ ತನಗೆ ಅಸ್ತಿತ್ವವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಟಿಎಂಸಿ ಅಥವಾ ಎಡಪಕ್ಷಗಳಲ್ಲಿ ಯಾರೊಂದಿಗೆ ಗುರುತಿಸಿಕೊಳ್ಳುವುದು ಎಂಬ ಕೈ ನಾಯಕರ ಗೊಂದಲಕ್ಕೆ ಉತ್ತರವಿಲ್ಲ. ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ಹೇಳಿಕೆಗಳಿಗಷ್ಟೇ ಸೀಮಿತರಾಗುತ್ತಿದ್ದು, ಅಖಾಡದಲ್ಲಿ ಟಿಎಂಸಿ-ಬಿಜೆಪಿ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ.
ಹೀಗಾಗಿ, ಬಂಗಾಳದಲ್ಲಿ ಈ ಬಾರಿ ದ್ವಿಪಕ್ಷೀಯ ಕದನ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 90 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. 60 ಕ್ಷೇತ್ರಗಳಲ್ಲಿ 5000 ಮತಗಳ ಅಂತರದಲ್ಲಿ ಹಿಂದೆ ಬಿದ್ದಿತ್ತು. ಈ 60 ಕ್ಷೇತ್ರಗಳ ಮೇಲೆ ವಿಶೇಷ ಗಮನ ನೀಡಿರುವ ಬಿಜೆಪಿ, ಅಲ್ಲಿ ಮತಪಟ್ಟಿ ಪರಿಷ್ಕರಣೆ, ಆಡಳಿತ ವಿರೋಧಿ ಅಲೆ ಮೂಲಕ ಮತದಾರರ ಮನಸ್ಥಿತಿಯನ್ನು ತನ್ನತ್ತ ಸೆಳೆಯುವ ತಂತ್ರ ತೀವ್ರಗೊಳಿಸಿದೆ.
ಬಂಗಾಳದಲ್ಲಿ ಮುಸ್ಲಿಂ ಪ್ರಭಾವವಿರುವ 112 ಕ್ಷೇತ್ರಗಳಿದ್ದು, ಕಳೆದ ಬಾರಿ 106ರಲ್ಲಿ ಟಿಎಂಸಿ ಗೆದ್ದಿತ್ತು. ಹಿಂದೂಗಳ ಪ್ರಭಾವವಿರುವ 182 ಸೀಟುಗಳಲ್ಲಿ ಟಿಎಂಸಿ 109ನ್ನು, ಬಿಜೆಪಿ 72ನ್ನು ತಮ್ಮ ದಾಗಿಸಿಕೊಂಡಿದ್ದವು. ಮುಸ್ಲಿಂ ಜನಸಂಖ್ಯೆ ಶೇ.30ರಷ್ಟಿರುವ 89 ಕ್ಷೇತ್ರಗಳಲ್ಲಂತೂ ಬಿಜೆಪಿ ಗೆಲುವಿನ ಹಾದಿ ಬಲು ಕಠಿಣ.
ಬಂಗಾಳವನ್ನು ಬಿಜೆಪಿ ಗೆದ್ದರೆ ಟಿಎಂಸಿಗೆ ಉಳಿಗಾಲವಿಲ್ಲ, ದೀದಿಗೆ ದಿಲ್ಲಿಯಲ್ಲೂ ಮಾನ್ಯತೆ ಇರುವುದಿಲ್ಲ. ಆದರೆ, ದೀದಿ ವರ್ಚಸ್ಸು ಮತ್ತು ಆಕ್ರಮಣಶೀಲ ನಾಯಕತ್ವ ಮೀರಿ ಗೆಲ್ಲುವುದು ಅಂದುಕೊಂಡಷ್ಟು ಸುಲಭವಲ್ಲ. ಹಾಗಾದರೆ, ಬಂಗಾಳಿಗರ ಲೆಕ್ಕಾಚಾರ ಏನಿರಬಹುದು? ಮೇ 4ರವರೆಗೆ ಕಾಯೋಣ...