Vishweshwar Bhat Column: ಸೆಂಚಾ ಚಹಾದ ಗಮ್ಮತ್ತು ಗೊತ್ತಾ ?
ಅಷ್ಟಕ್ಕೂ ಸೆಂಚಾ ಎಂದರೇನು? ಸೆಂಚಾ ಅಂದ್ರೆ ಬಿಸಿನೀರಿನಲ್ಲಿ ತಯಾರಿಸಲಾದ ಚಹಾ ಎಂದು ಸರಳ ವಾಗಿ ಹೇಳಬಹುದು. ಇದನ್ನು ಜಪಾನಿನ ಬೆಳೆದಿರುವ ಹಸಿರು ಚಹಾ ಎಲೆಗಳಿಂದ ತಯಾರಿಸ ಲಾಗು ತ್ತದೆ. ಸೆಂಚಾವನ್ನು ಸೂರ್ಯ ಪ್ರಕಾಶದಲ್ಲಿ ಬೆಳೆಯಲಾಗುತ್ತದೆ ಮತ್ತು ಬೆಳೆದ ಎಲೆಗಳನ್ನು ತಾಜಾ ಸ್ಥಿತಿಯಲ್ಲಿಯೇ ಸಂರಕ್ಷಿಸಿ ಇಡಲಾಗುತ್ತದೆ


ಸಂಪಾದಕರ ಸದ್ಯಶೋಧನೆ
ಜಪಾನಿಗೆ ಹೋದಾಗ ಅಲ್ಲಿನ ಸೆಂಚಾ ಎಂಬ ಹಸಿರು ಚಹಾವನ್ನು ಸೇವಿಸದೇ ಬರಬೇಡಿ" ಎಂದು ಸ್ನೇಹಿತರೊಬ್ಬರು ಹೇಳಿದ್ದರು. ಹಾಗೆ ಮುಂದುವರಿದು ಅವರು, “ಚಹಾ ವಿಶ್ವದಾದ್ಯಂತ ಜನಪ್ರಿಯ ಪಾನೀಯ. ಆದರೆ ಪ್ರತಿ ದೇಶದಲ್ಲಿ ಇದರ ತಯಾರಿಕೆ, ಸೇವನೆ ಹಾಗೂ ಸಂಸ್ಕೃತಿಯಲ್ಲಿ ವಿಭಿನ್ನತೆ ಗಳಿವೆ. ಜಪಾನಿನಲ್ಲಿ ಮಾತ್ರ ಚಹಾ ಪಾನವು ಕೇವಲ ದಿನನಿತ್ಯದ ಅಭ್ಯಾಸವೊಂದೇ ಅಲ್ಲ, ಅದೊಂದು ಧ್ಯಾನಪೂರ್ವಕ ಅನುಭವ. ಈ ಪೈಕಿ ‘ಸೆಂಚಾ’ ಎನ್ನುವ ಹಸಿರು ಚಹಾ, ಅತ್ಯಂತ ಪ್ರಸಿದ್ಧವಾಗಿರುವ ಮತ್ತು ಸಾಮಾನ್ಯವಾಗಿ ಬಹುತೇಕರು ಕುಡಿಯುವ ಪ್ರಕಾರವಾಗಿದೆ. ಸೆಂಚಾ ಚಹಾವನ್ನು ಜಪಾನಿಯರು ಭಾವನಾತ್ಮಕವಾಗಿ ಹಾಗೂ ಆರೋಗ್ಯಪೂರ್ಣವಾಗಿ ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದಾರೆ" ಎಂದು ಹೇಳಿದ್ದರು.
ಅಷ್ಟಕ್ಕೂ ಸೆಂಚಾ ಎಂದರೇನು? ಸೆಂಚಾ ಅಂದ್ರೆ ಬಿಸಿನೀರಿನಲ್ಲಿ ತಯಾರಿಸಲಾದ ಚಹಾ ಎಂದು ಸರಳವಾಗಿ ಹೇಳಬಹುದು. ಇದನ್ನು ಜಪಾನಿನ ಬೆಳೆದಿರುವ ಹಸಿರು ಚಹಾ ಎಲೆಗಳಿಂದ ತಯಾರಿಸ ಲಾಗುತ್ತದೆ. ಸೆಂಚಾವನ್ನು ಸೂರ್ಯ ಪ್ರಕಾಶದಲ್ಲಿ ಬೆಳೆಯಲಾಗುತ್ತದೆ ಮತ್ತು ಬೆಳೆದ ಎಲೆಗಳನ್ನು ತಾಜಾ ಸ್ಥಿತಿಯಲ್ಲಿಯೇ ಸಂರಕ್ಷಿಸಿ ಇಡಲಾಗುತ್ತದೆ. ಇವುಗಳನ್ನು ಕೊಯ್ಯಲಾದ ನಂತರ ತಕ್ಷಣವೇ
ಸಾಂಪ್ರದಾಯಿಕವಾಗಿ ಹಬೆ (ಬಾಷ್ಪ)ಯಲ್ಲಿ ಬೇಯಿಸಿ, ನಂತರ ತಂಪಾಗಿಸಿ, ಕೈಯಿಂದ ಹರಡಿ ಒಣಗಿಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಆಪರೇಶನ್ ಸಿಂದೂರ ಮತ್ತು ತುಪ್ಪದಲ್ಲಿ ಬಿದ್ದ ಜಾರ್ಜಿಯಾದ ಒಣರೊಟ್ಟಿ
ಸೆಂಚಾ ತಯಾರಿಕೆಯಲ್ಲಿ ಈ ಹಂತಗಳು ಬಹಳ ಮುಖ್ಯ. ಈ ವಿಧಾನವು ಚಹಾ ಎಲೆಗಳಲ್ಲಿ ಇರುವ ಪೋಷಕಾಂಶಗಳನ್ನು ಹಾಗೇ ಉಳಿಸುವಲ್ಲಿ ಸಹಾಯಕವಾಗುತ್ತದೆ. ಜಪಾನಿನಲ್ಲಿ ಸೆಂಚಾ ಸೇವನೆ ಯನ್ನು ಸಂಸ್ಕೃತಿಯ ಭಾಗ ಎಂದು ಪರಿಗಣಿಸಲಾಗಿದೆ. ಅಲ್ಲಿ ‘ಸೆಂಚಾ-ಡೋ’ ಎಂಬ ಪರಂಪರೆ ಇದೆ, ಅಂದರೆ ಸೆಂಚಾ ಪಾನದ ಕಲೆ. ಇದರಂತೆಯೇ ಮ್ಯಾಚಾ ಚಹಾ ಸೇವನೆಯು ‘ಚಾ-ನೋ-ಯು’ ಎಂಬ ಧ್ಯಾನಪೂರ್ವಕ ಶಿಷ್ಟಾಚಾರದ ಭಾಗವಾಗಿದೆ.
ಹೆಚ್ಚಿನ ಸಮಯಗಳಲ್ಲಿ, ಜಪಾನಿ ಕುಟುಂಬಗಳಲ್ಲಿ ಅತಿಥಿಗೆ ಸ್ವಾಗತ ಹೇಳುವಾಗ ಸೆಂಚಾ ಚಹಾ ವನ್ನು ನೀಡುವುದು ಸಾಮಾನ್ಯ. ಇದರ ಸೇವನೆಯು ಶಾಂತತೆ, ಆತ್ಮೀಯತೆ, ಸಂಬಂಧ, ಸೌಹಾರ್ದ, ಆತಿಥ್ಯ ಮತ್ತು ನೆಲೆಗಟ್ಟಿನ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಸೆಂಚಾ ಚಹಾ ಸ್ವಾದವು ಅದರ ಗುಣಮಟ್ಟ, ತಯಾರಿಕೆಯ ರೀತಿ ಮತ್ತು ಬೆಳೆದ ಪ್ರದೇಶವನ್ನು ಆಧರಿಸಿರುತ್ತದೆ. ಉತ್ತಮ ಗುಣಮಟ್ಟ ದ ಸೆಂಚಾ ಚಹಾಕ್ಕೆ ಸ್ವಲ್ಪ ಸಿಹಿ, ನೆನೆಸಿದ ಕೊತ್ತಂಬರಿ ಎಲೆಗಳಂಥ ಪರಿಮಳ ಹಾಗೂ ವಿಶೇಷ ರುಚಿ ಇರುತ್ತದೆ. ಕೆಲವೊಮ್ಮೆ ಸ್ವಲ್ಪ ಕಹಿ ಸ್ವಾದ ಕೂಡ ಇರುತ್ತದೆ. ಆದರೆ ವಿಶೇಷವೆಂದರೆ, ಅದು ಬಾಯಲ್ಲಿ ಆನಂದದ ಅನುಭವವನ್ನು ಉಂಟುಮಾಡುತ್ತದೆ.
ಸೆಂಚಾ ಚಹಾವನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆಯಂತೆ. ಸೆಂಚಾನಲ್ಲಿ ‘ಕ್ಯಾಟೆಚಿನ್’ ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಅಂಶಗಳಿವೆ, ಇವು ದೇಹದ ಟಾಕ್ಸಿನ್ ನಿವಾರಣೆಯಲ್ಲಿ ಸಹಕಾರಿ. ಅಲ್ಲದೇ, ಈ ಚಹಾ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಕಾರಿ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ.
ಸೆಂಚಾದಲ್ಲಿ ಲಥೀನಿನ್ ( L-theanine) ಎನ್ನುವ ಸಂಯುಕ್ತವು ಅಸ್ತಿತ್ವದಲ್ಲಿದ್ದು, ಅದು ಮಿದುಳಿನ ಶಾಂತಿಗೆ ಕಾರಣವಾಗುತ್ತದೆ. ಸೆಂಚಾ ಸೇವನೆಯು ಚರ್ಮದ ದೂಷಣಗಳನ್ನು ಕಡಿಮೆ ಮಾಡಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಚಹಾ ಮೆಟಬಾಲಿಸಂ ಹೆಚ್ಚಿಸಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕವಂತೆ. ಸೆಂಚಾಗಳಲ್ಲಿ ಹಲವು ಬಗೆ. ಆ ಪೈಕಿ ಅಸಾಮಾ ಸೆಂಚಾ ಕೂಡ ಒಂದು. ಇದು ಅತ್ಯುತ್ತಮ ಗುಣಮಟ್ಟದ ಚಹಾ, ಹೆಚ್ಚು ಸಿಹಿ ಮತ್ತು ಸಮೃದ್ಧ ಸ್ವಾದ ಹೊಂದಿದೆ. ಇನ್ನೊಂದು ಫುಕಮುಶಿ ಸೆಂಚಾ. ಈ ಎಲೆಗಳನ್ನು ಹೆಚ್ಚು ಸಮಯ ಬಾಷ್ಪದ ಮೂಲಕ ಬೇಯಿಸ ಬೇಕು.
ಇದು ಹೆಚ್ಚು ತೀವ್ರವಾದ ಬಣ್ಣ ಮತ್ತು ರುಚಿಯನ್ನು ನೀಡುತ್ತದೆ. ಇನ್ನೊಂದು ಚುಮುಷಿ ಸೆಂಚಾ. ಇದು ಹೆಚ್ಚಾಗಿ ಬಳಸುವ, ಸಮತೋಲಿತವಾದ ರುಚಿ ಹೊಂದಿದ ಚಹಾ. ಭಾರತೀಯ ಮಾರುಕಟ್ಟೆ ಯಲ್ಲೂ ಸೆಂಚಾ ಚಹಾಕ್ಕೆ ಬೇಡಿಕೆ ಹೆಚ್ಚಾಗಿದೆ. ಹಲವು ಆನ್‌ಲೈನ್ ಚಹಾ ಬ್ರ್ಯಾಂಡ್‌ಗಳು ಮತ್ತು ಆರ್ಗಾನಿಕ್ ಮಾರುಕಟ್ಟೆಗಳು ಸೆಂಚಾ ಚಹಾವನ್ನು ನೀಡುತ್ತಿವೆ. ಜಪಾನಿಗೆ ಹೋದಾಗ ಯಾರಾ ದರೂ ‘ಚಹಾ ಬೇಕಾ?’ ಎಂದು ಕೇಳಿದರೆ, ಬೇಡ ಎಂದು ಹೇಳಬಾರದು. ಕಾರಣ ಅದು ಅಲ್ಲಿನ ಶ್ರದ್ಧೆ, ಪರಂಪರೆ ಮತ್ತು ಆರೋಗ್ಯದ ಸಂಕೇತ.