Prakash Shesharaghavachar Column: ಡಾ.ಹೆಡ್ಗೆವಾರ್ ಪ್ರತಿರೂಪ ಬಾಳಾಸಾಹೇಬ್ ದೇವರಸ್
ಐವತ್ತು ವರ್ಷಕ್ಕೂ ಹೆಚ್ಚಿನ ಕಾಲ ಆರೆಸ್ಸೆಸ್‌ನ ಸಂಪರ್ಕವಿರುವ ನನಗೂ, ಬಾಳಾಸಾಹೇಬ್ ದೇವರಸ್ ರವರ ಬದುಕಿನ ಕುರಿತು ಸಂಪೂರ್ಣ ಗೊತ್ತಿರಲಿಲ್ಲ; ಮರಾಠಿ ಭಾಷೆಯಲ್ಲಿರುವ ಅವರ ಪರಿಚಯ ಪುಸ್ತಕದ ಕನ್ನಡ ಭಾವಾನುವಾದವನ್ನು (ಶ್ರೀ ಬಾಳಾಸಾಹೇಬ ದೇವರಸ್: ಸಾರ್ಥಕ ಬದುಕಿನ ಪರಿಚಯ) ಓದಿದ ನಂತರವೇ ಅವರ ಜೀವನದ ಪರಿಚಯವಾಗಿದ್ದು. ಈ ಪುಸ್ತಕವು ಬಾಳಾಸಾಹೇಬರ ಜೀವನದ ಮೇಲಷ್ಟೇ ಬೆಳಕು ಚೆಲ್ಲುವುದಿಲ್ಲ,


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಗುರೂಜಿಯವರಿಂದ ಹಿಡಿದು ಹಾಲಿ ಸರಸಂಘ ಚಾಲಕರಾದ ಮೋಹನ್ ಭಾಗವತ್ ರವರೆಗೆ ಎಲ್ಲರನ್ನೂ ಕಂಡಿರುವ ಮತ್ತು ಅವರ ವಿದ್ವತ್ಪೂರ್ಣ ‘ಬೌದ್ಧಿಕ್’ ಕೇಳಿರುವ ಅದೃಷ್ಟ ನನ್ನದು. ಸಾಮಾನ್ಯವಾಗಿ ಆರೆಸ್ಸೆಸ್ ಎಂದ ಕೂಡಲೇ ಅದರ ಸಂಸ್ಥಾಪಕ ಡಾ.ಹೆಡ್ಗೆವಾರ್ (ಡಾಕ್ಟರ್‌ಜೀ) ಮತ್ತು ಗುರೂಜಿಯವರ ಹೆಸರು ಮಾತ್ರ ಪ್ರಮುಖವಾಗಿ ಕೇಳಿಬರುತ್ತವೆ.
ಅದರೆ ಆರೆಸ್ಸೆಸ್‌ನ ಮೂರನೆಯ ಸರಸಂಘಚಾಲಕರಾದ ಮಾನನೀಯ ಮಧುಕರ ದತ್ತಾತ್ರೇಯ ದೇವರಸ್‌ರವರ (ಬಾಳಾಸಾಹೇಬ್) ಕುರಿತು ಹೆಚ್ಚಿನ ಮಾಹಿತಿ ಹೊರಗಿನ ಬಹುತೇಕರಿಗೆ ತಿಳಿದಿಲ್ಲ. 1925ರಲ್ಲಿ ಕೇಶವ ಬಲಿರಾಂ ಹೆಡ್ಗೇವಾರ್ ಅವರು ಸಂಘವನ್ನು ಸ್ಥಾಪನೆ ಮಾಡಿದ ದಿನದಿಂದ ತಮ್ಮ ಜೀವನದ ಕೊನೆಯ ಉಸಿರು ಇರುವ ತನಕವೂ, ಸಂಘದ ಕಾರ್ಯವನ್ನು ಈಶ್ವರೀಯ ಕೆಲಸವೆಂದು ನಿರಂತರವಾಗಿ ವ್ರತದಂತೆ ನಿರ್ವಹಿಸಿ, ಸಮಾಜಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡವರು ಬಾಳಾಸಾಹೇಬರು.
ಐವತ್ತು ವರ್ಷಕ್ಕೂ ಹೆಚ್ಚಿನ ಕಾಲ ಆರೆಸ್ಸೆಸ್‌ನ ಸಂಪರ್ಕವಿರುವ ನನಗೂ, ಬಾಳಾಸಾಹೇಬ್ ದೇವರಸ್‌ರವರ ಬದುಕಿನ ಕುರಿತು ಸಂಪೂರ್ಣ ಗೊತ್ತಿರಲಿಲ್ಲ; ಮರಾಠಿ ಭಾಷೆಯಲ್ಲಿರುವ ಅವರ ಪರಿಚಯ ಪುಸ್ತಕದ ಕನ್ನಡ ಭಾವಾನುವಾದವನ್ನು (ಶ್ರೀ ಬಾಳಾಸಾಹೇಬ ದೇವರಸ್: ಸಾರ್ಥಕ ಬದುಕಿನ ಪರಿಚಯ) ಓದಿದ ನಂತರವೇ ಅವರ ಜೀವನದ ಪರಿಚಯವಾಗಿದ್ದು. ಈ ಪುಸ್ತಕವು ಬಾಳಾಸಾಹೇಬರ ಜೀವನದ ಮೇಲಷ್ಟೇ ಬೆಳಕು ಚೆಲ್ಲುವುದಿಲ್ಲ,
ಅದರೊಂದಿಗೆ 1925ರಲ್ಲಿ ಪ್ರಾರಂಭವಾದ ಆರೆಸ್ಸೆಸ್‌ನ ಹಂತಹಂತದ ಬೆಳವಣಿಗೆ, ಬದಲಾವಣೆ ಮತ್ತು ಸುಧಾರಣೆಯ ಬಗ್ಗೆಯೂ ಅದು ಮಾಹಿತಿ ನೀಡುತ್ತಾ ಹೋಗುತ್ತದೆ. ಮೋಹಿತೆವಾಡದಲ್ಲಿ ಡಾಕ್ಟರ್‌ಜೀ ಸಂಘವನ್ನು ಆರಂಭಿಸಿದ ಮೊದಲ ದಿನವೇ ಬಾಳಾಸಾಹೇಬರು ಅದರ ಸಂಪರ್ಕಕ್ಕೆ ಬರುತ್ತಾರೆ. ಆಗ ಅವರ ವಯಸ್ಸು ಕೇವಲ 11 ವರ್ಷ.
ಇದನ್ನೂ ಓದಿ: Prakash Shesharaghavachar Column: ಮೋದಿ 3.1: ಮುಂದುವರಿದಿರುವ ಅಭಿವೃದ್ದಿ ಪರ್ವ
ಅಂದು ಆರಂಭವಾದ ಸಂಘದ ಜತೆಗಿನ ಅವರ ಪಯಣ, ಅವರ ಕೊನೆಯುಸಿರಿನ ತನಕ ಮುಂದುವರಿಯಿತು; ಸ್ವಯಂಸೇವಕರಾಗಿ ಆರಂಭವಾದ ಅವರ ‘ಸಂಘಪಯಣ’, ಅವರು ಸರಸಂಘ ಚಾಲಕರಾಗುವ ತನಕ ನಿರಂತರವಾಗಿ ನಡೆಯುತ್ತದೆ. ತಂದೆಯವರಿಗೆ ಮಗ ಐಸಿಎಸ್ ಓದಿ ಸರಕಾರಿ ಅಧಿಕಾರಿಯಾಗಲಿ ಎಂಬ ಹಂಬಲವಿತ್ತು; ಆದರೆ ಡಾಕ್ಟರ್‌ಜೀ ಅವರ ಪ್ರಭಾವಕ್ಕೆ ಬಂದ ಮೇಲೆ ಮಗನ ಬದುಕು ಭಾರತಮಾತೆಯ ಸೇವೆಗೆ ಮುಡಿಪಾಗಿಹೋಯಿತು.
ಬಾಳಾಸಾಹೇಬರ ಸಂಘಕಾರ್ಯವು ಘಟನಾಯಕನ ಸ್ತರದಿಂದ ಪ್ರಾರಂಭವಾಯಿತು. ಮೆಟ್ರಿಕ್ ಪರೀಕ್ಷೆ ಮುಗಿದ ತರುವಾಯ, ಸಂಘಕಾರ್ಯವು ತಮ್ಮ ಜೀವನದ ವ್ರತವಾಗಬೇಕು ಎಂದು ಅವರು ನಿಶ್ಚಯಿಸಿದರು. ಡಾಕ್ಟರ್‌ಜೀ ಅವರಿಗೆ, ‘ಸ್ವಯಂಸೇವಕರು ವಾಲಂಟಿಯರ್ಸ್ ಎಂದು ಕರೆಸಿಕೊಳ್ಳ ಬಾರದು, ಅವರು ಉನ್ನತ ಶಿಕ್ಷಣವನ್ನು ಪಡೆದು ಸಂಘಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು’ ಎಂಬ ಸ್ಪಷ್ಟವಾದ ಕಲ್ಪನೆಯಿತ್ತು.
ಸ್ವಯಂಸೇವಕನೆಂದರೆ ಸುಶಿಕ್ಷಿತ, ಸದ್ಗುಣಿ, ಸಮಾಜಕ್ಕೆ ಅಧಾರವಾಗುವಂತಿರಬೇಕು ಎಂದು ಡಾಕ್ಟರ್‌ಜೀ ಬಯಸುತ್ತಿದ್ದರು. ಇದರಿಂದಾಗಿ ಸಂಘವು ‘ಸ್ವಯಂಸೇವಕ’ ಎಂಬ ಪರಿಭಾಷೆಗಿದ್ದ ರೂಢಿಗತ ಪರಿಕಲ್ಪನೆಯನ್ನೇ ಬದಲಾಯಿಸಿತು. 1932ರಲ್ಲಿ ಸ್ವಯಂಸೇವಕರಿಗೆ ಚಳಿಗಾಲದ ಶಿಬಿರ ಆರಂಭವಾಯಿತು. ಬಾಳಾಸಾಹೇಬರಿಗೆ ಡಾಕ್ಟರ್‌ಜೀ ಹಲವು ಜವಾಬ್ದಾರಿಗಳನ್ನು ನೀಡಿದರು. ತಮಗೆ ವಹಿಸಿದ ಕಾರ್ಯಗಳನ್ನು ಅವರು ಶ್ರದ್ಧೆಯಿಂದ ನಿರ್ವಹಿಸಿ ಯಶಸ್ವಿಯಾದರು.
1938ರಲ್ಲಿ ನಡೆದ ಸಂಘ ಶಿಕ್ಷಾ ವರ್ಗಕ್ಕೆ ( OTC ) ಸಂಬಂಧಿಸಿ ಬಾಳಾಸಾಹೇಬರಿಗೆ ಮುಖ್ಯ ಶಿಕ್ಷಕನ ಜವಾಬ್ದಾರಿಯನ್ನು ನೀಡಲಾಯಿತು. 40 ದಿನಗಳ ಕಾಲ ನಡೆದ ಶಿಬಿರದಲ್ಲಿ ಬಾಳಾಸಾಹೇಬರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನೇಕ ಹೊಸ ಪದ್ಧತಿಗಳನ್ನು ಪರಿಚಯಿಸುವುದರಲ್ಲಿ ಬಾಳಾಸಾಹೇಬರು ಮುಂಚೂಣಿಯಲ್ಲಿದ್ದರು. ತಮ್ಮ ಉಸ್ತುವಾರಿಯಿದ್ದ ಇತವಾರಿ ಶಾಖೆಯ ವಾರ್ಷಿಕೋತ್ಸವವನ್ನು ನಡೆಸಿದರು.
ಅಂದು ಆರಂಭವಾದ ಶಾಖೆಗಳ ವಾರ್ಷಿಕೋತ್ಸವ ಪದ್ಧತಿಯು ಇಂದಿಗೂ ನಡೆದುಕೊಂಡು ಬಂದಿದೆ. ಉತ್ಸಾಹ ತುಂಬುವ ಸಾಂಘಿಕ ಗೀತೆಯನ್ನು ಬಾಳಾಸಾಹೇಬರು ಶಾಖೆಗಳಲ್ಲಿ ಆರಂಭಿಸಿದರು. ಈ ಗೀತೆಯು ಇಂದಿಗೂ ಆರೆಸ್ಸೆಸ್ ಶಾಖೆಗಳಲ್ಲಿ ಆಕರ್ಷಣೆಯ ಭಾಗವಾಗಿದೆ. ಸಂಘದ ಪ್ರಾರ್ಥನೆಯನ್ನು ಸಂಸ್ಕೃತದಲ್ಲಿ ಅಂತಿಮಗೊಳಿಸುವಲ್ಲಿ ಬಾಳಾಸಾಹೇಬರ ಪಾತ್ರವಿತ್ತು.
1940ರ ಸಂಘ ಶಿಕ್ಷಾ ವರ್ಗದಲ್ಲಿ ಇದನ್ನು ಸುಶ್ರಾವ್ಯವಾಗಿ ಮೊದಲು ಹಾಡಿದ್ದು, ಸಂಘಕಾರ್ಯಕ್ಕೆ ಕರ್ನಾಟಕವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಯಾದವ್ ರಾವ್ ಜೋಶಿ ಯವರು. ‘ಘೋಷ್ ಪಥಕ’ ಆರಂಭಿಸಲು ಸ್ವಯಂಸೇವಕರು ಉತ್ಸಾಹ ತೋರಿದಾಗ, ಘೋಷ್ ವಾದ್ಯವನ್ನು ಖರೀದಿಸಬೇಕಾಗಿ ಬರುತ್ತದೆ; ಕೃಷ್ಣ ಜನ್ಮಾಷ್ಟಮಿಯ ಪೂಜೆಗೆ ಹೋಗಿ, ಅಲ್ಲಿ ಕೊಟ್ಟ ದಕ್ಷಿಣೆಯಲ್ಲಿ ಬಾಳಾಸಾಹೇಬರು ಮತ್ತು ಅವರ ನಾಲ್ವರು ಸಂಗಾತಿಗಳು ಘೋಷ್ ವಾದ್ಯವನ್ನು ಖರೀದಿಸುತ್ತಾರೆ.
ಆರಂಭದಲ್ಲಿ ಸ್ವಯಂಸೇವಕರಿಗೆ ಘೋಷ್ ವಾದನ ಕಲಿಸಿದವರು ಓರ್ವ ಕ್ರಿಶ್ಚಿಯನ್ ಬ್ಯಾಂಡ್ ಮಾಸ್ತರ್ ಎಂಬುದು ಗಮನಾರ್ಹ ಸಂಗತಿ. 1928ರಲ್ಲಿ ಮೊದಲ ಬಾರಿಗೆ ಸ್ವಯಂಸೇವಕರಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು. ಹನುಮಂತನ ಮೂರ್ತಿಯ ಮುಂದೆ ಪ್ರತಿಜ್ಞೆಯನ್ನು ಬೋಧಿಸಲಾಗುತ್ತಿತ್ತು.
‘ಗುರುಸ್ವರೂಪಿ ಭಗವಾಧ್ವಜದ ಮುಂದೆ ಪ್ರತಿಜ್ಞೆ ಸ್ವೀಕರಿಸುತ್ತೇವೆ, ಆದ್ದರಿಂದ ಹನುಮನ ವಿಗ್ರಹ ಬೇಡ’ ಎಂಬ ಬಾಳಾಸಾಹೇಬರ ಸಲಹೆಯನ್ನು ಡಾಕ್ಟರ್‌ಜೀ ಒಪ್ಪಿದರು. ಬಾಳಾಸಾಹೇಬರು ಸಂಘದ ಆಜ್ಞೆಗಳಲ್ಲಿ ಸಂಸ್ಕೃತವನ್ನು ಬಳಕೆಗೆ ತಂದರು, ಸ್ವತಃ ಆಜ್ಞೆಗಳನ್ನು ಸಂಸ್ಕೃತದಲ್ಲಿ ರೂಪಿಸಿದರು. ಪಥ ಸಂಚಲನ ( Route March ), ದಕ್ಷ ( attention ), ಆರಾಮ ( Stand at ease ), ಚತುರ್ವ್ಯೂಹ ( Column of Four) ಮುಂತಾದ ಆಜ್ಞೆಗಳನ್ನು ಅವರು ರಚಿಸಿ ಸಂಘದ ಶಾಖೆಯಲ್ಲಿ ಅಳವಡಿಕೆ ಮಾಡಿದರು.
ಇಂದಿಗೂ ಅವರು ರೂಪಿಸಿದ ಆಜ್ಞೆಗಳೇ ದೇಶಾದ್ಯಂತ ಚಾಲ್ತಿಯಲ್ಲಿರುವುದು. ಶಾಖೆಯಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ವಿಕಿರ ( conclude ) ಆಗುವ ತನಕ ಶಾಖೆಯ ಸ್ವರೂಪವನ್ನು ನಿರ್ಣಯಿಸುವ ಹೊಣೆಯನ್ನು ಬಾಳಾಸಾಹೇಬರಿಗೆ ವಹಿಸಲಾಯಿತು. ಅದನ್ನು ಅವರು ಅಚ್ಚುಕಟ್ಟಾಗಿ ರೂಪಿಸಿ, 1940ರ ಸಂಘ ಶಿಕ್ಷಾ ವರ್ಗದಲ್ಲಿ ಅಳವಡಿಸಿಕೊಂಡರು.
ಬಾಳಾಸಾಹೇಬರು ತಮ್ಮ ಕಾನೂನು ಪದವಿಯನ್ನು ಪಡೆದ ನಂತರ, ‘ಸಂಘಕಾರ್ಯವೇ ನನ್ನ ಜೀವಿತೋದ್ದೇಶ’ ಎಂದು ನಿರ್ಣಯಿಸಿ ಪ್ರಚಾರಕರಾಗಿ ಹೊರಬಿದ್ದರು. 1940ರ ಜೂನ್ 21ರಂದು ಡಾ.ಹೆಡ್ಗೇವಾರರು ಕೊನೆಯುಸಿರೆಳೆದರು. ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಡಾಕ್ಟರ್‌ಜೀ ಅವರ ಸಂಪರ್ಕಕ್ಕೆ ಬಂದಿದ್ದ ಬಾಳಾಸಾಹೇಬರು, ಅಂತಿಮ ಗಳಿಗೆಯವರೆಗೆ ಅವರ ಜತೆಯಲ್ಲಿದ್ದರು.
ಪೂಜನೀಯ ಗುರೂಜಿಯವರು ಬಾಳಾಸಾಹೇಬರನ್ನು ‘ಡಾಕ್ಟರ್‌ಜೀ ಅವರ ಪ್ರತಿರೂಪ’ ಎಂದೇ ಹೇಳುತ್ತಿದ್ದರು. 1943ರಲ್ಲಿ ಪುಣೆಯ ಸಂಘಶಿಕ್ಷಾ ವರ್ಗದಲ್ಲಿ ಸ್ವಯಂಸೇವಕರಿಗೆ ಅವರನ್ನು ಹಾಗೆಯೇ ಪರಿಚಯ ಮಾಡಿಸಲಾಯಿತು. ಅವರ ನಡೆ-ನುಡಿ-ವ್ಯವಹಾರ ಗಮನಿಸಿದರೆ ಡಾಕ್ಟರ್‌ಜೀ ಹೇಗಿದ್ದರು ಎಂಬುದರ ಅನುಭವವಾಗುತ್ತದೆ ಎಂದು ತಿಳಿಸಲಾಯಿತು.
1943ರಲ್ಲಿ ಬಾಳಾ ಸಾಹೇಬರನ್ನು ಸಹಸರಕಾರ್ಯವಾಹರಾಗಿ ನಿಯುಕ್ತಿಗೊಳಿಸಲಾಯಿತು. ತದನಂತರ 1965ರಲ್ಲಿ ಸರಕಾರ್ಯವಾಹರಾಗಿ ಅವರು ನಿಯೋಜಿಸಲ್ಪಟ್ಟರು. ಸಂಘದ ಪ್ರೇರಣೆ ಪಡೆದ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷತ್, ಜನಸಂಘ, ವನವಾಸಿ ಕಲ್ಯಾಣ ಪರಿಷತ್ ಸಂಘಟನೆಗಳಲ್ಲಿ ಸಂಘದ ಕಾರ್ಯಕರ್ತರು ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದರು.
‘ಸಂಘವು ನೇರವಾಗಿ ಏನನ್ನೂ ಮಾಡುವುದಿಲ್ಲ, ಆದರೆ ಸಂಘದ ಸ್ವಯಂಸೇವಕರು ಯಾವ ಕ್ಷೇತ್ರವನ್ನೂ ಬಿಡುವುದಿಲ್ಲ’ ಎಂದು ಹೇಳುವ ಮೂಲಕ ಬಾಳಾಸಾಹೇಬರು ಡಾಕ್ಟರ್‌ಜೀ ಅವರು ಹೇಳಿದ ಮಾತನ್ನು ಉಲ್ಲೇಖಿಸುತ್ತಿದ್ದರು. ‘ಸಂಘವು ವಿದ್ಯುಜ್ಜನಕ ಇದ್ದ ಹಾಗೆ. ವಿದ್ಯುತ್ತನ್ನು ಬಳಸಿಕೊಂಡು ಫ್ಯಾನ್, ದೀಪ ಮುಂತಾದವು ಹೇಗೆ ಕೆಲಸ ಮಾಡುತ್ತವೋ, ಹಾಗೆಯೇ ಸಂಘದ ಸಂಸ್ಕಾರ ಪಡೆದ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಘದ ಅಪೇಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತಾರೆ’ ಎಂದು ಅವರು ಹೇಳುತ್ತಿದ್ದರು.
1973ರ ಜೂನ್ 5ರಂದು ಪೂಜನೀಯ ಗುರೂಜಿಯವರ ದೇಹಾಂತ್ಯವಾಯಿತು. 33 ವರ್ಷ ಸತತವಾಗಿ ಸಂಘಕಾರ್ಯವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದ ಜೀವವು ಶಾಶ್ವತ ವಿರಾಮವನ್ನು ಪಡೆಯಿತು. ಮಧುಕರ ದತ್ತಾತ್ರೇಯ ದೇವರಸ್ ಎಂಬ ಮೂಲನಾಮದ ಬಾಳಾಸಾಹೇಬರು ಜೂನ್ 6 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೆಯ ಸರಸಂಘಚಾಲಕರಾಗಿ ಜವಾಬ್ದಾರಿ ಯನ್ನು ಹೊತ್ತರು.
ಸರಸಂಘಚಾಲಕರಾಗಿ ವರ್ಷ ಕಳೆಯುವ ಮುನ್ನವೇ 1974ರಲ್ಲಿ ಪುಣೆಯ ‘ವಸಂತ ವ್ಯಾಖ್ಯಾನ ಮಾಲೆ’ ಎಂಬ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ, ಸಾಮಾಜಿಕ ಸಾಮರಸ್ಯ ಮತ್ತು ಹಿಂದೂ ಸಂಘಟನೆ ಎಂಬ ವಿಷಯದ ಮೇಲೆ ಬಾಳಾಸಾಹೇಬರು ಉಪನ್ಯಾಸ ನೀಡಿದರು. ‘ವರ್ಣವ್ಯವಸ್ಥೆಯ ಕಾಲ ಮಾನ ಈಗಿಲ್ಲ. ಈಗ ಯಾರು ಬೇಕಾದರೂ, ಯಾವ ಕೆಲಸವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳ ಬಹುದು. ಅದು ಆನುವಂಶಿಕವಾಗಿ ಉಳಿದಿಲ್ಲ. ಹೀಗಾಗಿ ವರ್ಣವ್ಯವಸ್ಥೆಯು ಅಪ್ರಸ್ತುತ’ ಎಂದು ತಿಳಿಸಿದರು. ಸಂಘದವರನ್ನು ‘ಮನುವಾದಿಗಳು’ ಎಂದು ಅಪಪ್ರಚಾರ ಮಾಡುವವರು ಇದನ್ನು ಅವಶ್ಯವಾಗಿ ಓದಬೇಕಾಗಿದೆ.
ಮುಂದುವರಿದ ಅವರು, ಅಮೆರಿಕದಲ್ಲಿ ಗುಲಾಮಗಿರಿಯನ್ನು ಕೊನೆಗಾಣಿಸಿದ ಅಬ್ರಹಾಂ ಲಿಂಕನ್ If slavery is not wrong Nothing is wrong ಎಂದ ಹಾಗೆ If untouchability is not wrong, Nothing is wrong ಎಂದು ಹೇಳಿ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆಯ ಬಗ್ಗೆ ನೋವಿನಿಂದ ಮಾತನಾಡಿದರು.
ಸಂಘವನ್ನು ನಿಷೇಧಿಸಲು 1975ರ ಜನವರಿಯಲ್ಲಿಯೇ ವಿಧೇಯಕದ ಕರಡು ಸಿದ್ಧವಿತ್ತು. ಮುಂದೆ ಉದ್ಭವವಾಗುವ ಪರಿಸ್ಥಿತಿಯನ್ನು ಎದುರಿಸಲೆಂದು ಸ್ವಯಂಸೇವಕರನ್ನು ಸಜ್ಜುಗೊಳಿಸಲು ಸಂಘದ ಹಿರಿಯ ನಾಯಕರೊಂದಿಗೆ ಬಾಳಾಸಾಹೇಬರು ಮಾತುಕತೆಯನ್ನು ಆರಂಭಿಸಿದರು.
ತುರ್ತು ಪರಿಸ್ಥಿತಿಯ ಘೋಷಣೆಯಾದ ಕೂಡಲೇ 1200 ಪ್ರಚಾರಕರು ಭೂಗತರಾದರು. ಮುಂದಿನ ಹೋರಾಟಕ್ಕೆ ವೇದಿಕೆಯನ್ನು ಸಿದ್ಧಮಾಡಲೆಂದು ಈ ಎಲ್ಲ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಸಂಘದ ಮುಂದಾಲೋಚನೆಯ ಆಳ-ಅಗಲವು, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಊಹೆಗೂ ಮೀರಿದ್ದಾಗಿತ್ತು.
ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ, ಜನಸಂಘವನ್ನು ಜನತಾಪಾರ್ಟಿಯಲ್ಲಿ ವಿಲೀನಗೊಳಿಸಲು ಅನುಮತಿಸಲಾಯಿತು. ಆದರೆ, ಇಂದಿರಾರನ್ನು ಸೋಲಿಸಿ ಅಧಿಕಾರಕ್ಕೆ ಬಂದ ಜನತಾ ನಾಯಕರಿಗೆ, ದೇಶವನ್ನಾಳುವ ಚಿಂತೆಗಿಂತ ಆರೆಸ್ಸೆಸ್‌ನ ಚಿಂತೆ ಹೆಚ್ಚಾಯಿತು. ಮಧು ಲಿಮಯೆ ‘ದ್ವಿಸದಸ್ಯತ್ವ’ದ ಗುಮ್ಮನನ್ನು ಮುಂದಿಟ್ಟುಕೊಂಡು ‘ಜನಸಂಘದ ಸದಸ್ಯರು ಆರೆಸ್ಸೆಸ್‌ನ ಸದಸ್ಯತ್ವವನ್ನು ಬಿಡಬೇಕು’ ಎಂಬ ಆತ್ಮಘಾತುಕ ವಾದವನ್ನು ಮುಂದಿಟ್ಟರು.
ಇದನ್ನು ಧಿಕ್ಕರಿಸಿದ ಜನಸಂಘದ ಸದಸ್ಯರು ಜನತಾ ಪಾರ್ಟಿಯಿಂದ ಹೊರಬಂದರು. ಸಂಘದ ಮೇಲೆ ಹೇರಲಾಗಿದ್ದ ಮೂರು ನಿರ್ಬಂಧಗಳನ್ನು ಕಂಡ ಬಾಳಾಸಾಹೇಬರು, ಅದನ್ನು ಎದುರಿಸಿ ಸರಕಾರವನ್ನು ಬಗ್ಗಿಸಿದ್ದರು. ಹಾಗೆಯೇ 1996ರಲ್ಲಿ, ಸಂಘದ ಸ್ವಯಂಸೇವಕರಾದ ವಾಜಪೇಯಿ ಯವರು ದೇಶದ ಪ್ರಧಾನಿಯಾಗಿದ್ದನ್ನು ಕಂಡ ಅದೃಷ್ಟ ಅವರದ್ದು.
1996ರಲ್ಲಿ ಅವರು ವಿಧಿವಶರಾದರು. ತಮ್ಮ ಅಂತ್ಯಕ್ರಿಯೆ ರೇಷಮ್‌ಬಾಗ್‌ನಲ್ಲಿ ನಡೆಯಬಾರದು, ಜನಸಾಮಾನ್ಯರ ಅಂತ್ಯಕ್ರಿಯೆ ನಡೆಯುವ ಸಾಧಾರಣ ಸ್ಮಶಾನದಲ್ಲಿ ನಡೆಯಬೇಕು ಎಂದು ಅವರು ಮೊದಲೇ ತಿಳಿಸಿದ್ದುಂಟು. ಅವರ ಇಚ್ಛೆಯಂತೆಯೇ ಅಂತ್ಯಕ್ರಿಯೆ ನಡೆಯಿತು. ಸಂಘದೊಂದಿಗೆ ಬೆಸೆದುಹೋಗಿದ್ದ ಬಾಳಾಸಾಹೇಬರ ಬಾಂಧವ್ಯ ಈ ಇಹಲೋಕದಿಂದ ಕಳಚಿಕೊಂಡಿತು.
ನಾನು ಓದಿದ ಪುಸ್ತಕದ ಪ್ರತಿಯೊಂದು ಹಾಳೆಯಲ್ಲೂ, ಸಂಘದೊಂದಿಗೆ ಬಾಳಾಸಾಹೇಬರಿಗೆ ಇದ್ದ ಗಾಢನಂಟಿನ ಅನುಭವವಾಗುತ್ತದೆ. ಸಂಘವು ಪ್ರಾರಂಭವಾದ ಮೊದಲ ದಿನದಿಂದ, ತಮ್ಮ ಕೊನೆ ಯುಸಿರು ಇರುವವರೆಗೆ ಸಂಘಕಾರ್ಯಕ್ಕೆ ಸಮರ್ಪಿಸಿಕೊಂಡಿದ್ದ ಬಾಳಾಸಾಹೇಬರು ಆರೆಸ್ಸೆಸ್‌ನ ಸ್ವಯಂಸೇವಕರಿಗೆ ಸದಾಕಾಲವೂ ಆದರ್ಶವಾಗಿ ಉಳಿದಿದ್ದಾರೆ.
(ಲೇಖಕರು ಬಿಜೆಪಿಯ ವಕ್ತಾರರು)