Roopa Gururaj Column: ಶ್ರಾವಣದಲ್ಲಿ ಪಡಿ ಬೇಡುವ ಪದ್ದತಿ
ಪ್ರಥಮವಾಗಿ ಪಡಿ ಬೇಡುವುದರಿಂದ ಮಕ್ಕಳಲ್ಲಿನ ಸಂಕೋಚ ಸ್ವಭಾವ ನೀಗುತ್ತದೆ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಮಧುಕರಿವೃತ್ತಿ ಮಾಡಿ ಜೀವನ ನಡೆಸಬಹುದು ಎಂಬುದನ್ನು ಕಲಿಸುತ್ತದೆ. ಮಕ್ಕಳಿಗೆ ತಾವು ತಿನ್ನುವ ಅಕ್ಕಿಯ ಸಂಪಾದಿಸುವುದರ ಮಹತ್ವ ಮತ್ತು ಮತ್ತೊಬ್ಬರ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತಗ್ಗಿ ಬಗ್ಗಿ ನಡೆಯವುದನ್ನೂ ಮತ್ತು ಕೀಳರಿಮೆಯನ್ನು ಹೋಗಲಾಡಿ ಸುತ್ತದೆ.


ಒಂದೊಳ್ಳೆ ಮಾತು
rgururaj628@gmail.com
ಶ್ರಾವಣ ಶನಿವಾರದಂದು, ಮಕ್ಕಳು ಮತ್ತು ಕೆಲವೊಮ್ಮೆ ದೊಡ್ಡವರೂ ಕೂಡಾ, ಶುಭ್ರವಸ್ತ್ರದಲ್ಲಿ ಹಣೆಗೆ ಮೂರು ಎಳೆ ಇಲ್ಲವೇ ಒಂದು ಎಳೆ ನಾಮವನ್ನು ಹಚ್ಚಿಕೊಂಡು ಕೈಯಲ್ಲಿ ಪಂಚಪಾತ್ರೆ ಇಲ್ಲವೇ ಸಣ್ಣ ಚೊಂಬು ಅದಕ್ಕೂ ನಾಮ ಬಳಿದು, ಕೆಲವೊಂದು ಬಾರಿ ಅದಕ್ಕೆ ಹೂವಿನ ಮಾಲೆ ಯನ್ನು ಸುತ್ತಿಕೊಂಡು ಅಕ್ಕ ಪಕ್ಕದ ಮನೆಯ ಹೊಸಿಲಲ್ಲಿ ನಿಂತುಕೊಂಡು ಇಲ್ಲವೇ ದೇವರ ಮನೆಯ ಮುಂದೆ ನಿಂತು ಶ್ರೀನಿವಾಸಾಯ ಮಂಗಳಂ, ರಂಗ ನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಜೋರಾಗಿ ಕೂಗಿದಾಗ, ಆ ಮನೆಯ ಒಡತಿ ಒಳಗಿನಿಂದ ಹಿಡಿ ಅಕ್ಕಿಯನ್ನು ಮೂರು ಬಾರಿ ಹಾಕಿ, ಅದರಿಂದ ಕೆಲ ಅಕ್ಕಿಕಾಳನ್ನು ತಾನು ತಂದ ಪಾತ್ರೆಗೆ ಹಾಕಿಕೊಳ್ಳುತ್ತಾರೆ.
ಅಕ್ಕಿಯ ಜೊತೆ ಬೆಲ್ಲ ಮತ್ತು ಕೈಲಾದಷ್ಟು ದಕ್ಷಿಣೆ ಹಾಕಿ ಕಳುಹಿಸುತ್ತಾರೆ. ಇಡೀ ಶ್ರಾವಣ ಮಾಸದ ಶನಿವಾರದಂದು ವೆಂಕಟರಮಣ ಸ್ವಾಮಿ, ರಂಗನಾಥ ಸ್ವಾಮಿ ಇಲ್ಲವೇ ನರಸಿಂಹ ಸ್ವಾಮಿಯ ಒಕ್ಕಲಿನವರು ಕನಿಷ್ಠ ಪಕ್ಷ ಐದು ಮನೆಯಲ್ಲಾದರೂ ಈ ರೀತಿಯಲ್ಲಿ ಬೇಡಬೇಕು.
ಇದನ್ನೂ ಓದಿ: Roopa Gururaj Column: ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು
ಈ ರೀತಿಯಾಗಿ ಪಡಿ ಬೇಡಿ ತಂದ ಅಕ್ಕಿ ಬೆಲ್ಲ ಮತ್ತು ಹಣವನ್ನು ಜೋಪಾನವಾಗಿ ಎತ್ತಿಟ್ಟು ಕಡೆಯ ಶ್ರಾವಣ ಶನಿವಾರದಂದು ಆ ಅಕ್ಕಿ ಮತ್ತು ಬೆಲ್ಲದಿಂದ ಪಾಯಸ ಇಲ್ಲವೇ ಸಿಹಿ ಹುಗ್ಗಿ, ಬೆಲ್ಲದನ್ನ ಮಾಡಿ ತಮ್ಮ ಮನೆ ದೇವರಿಗೆ ನೈವೇದ್ಯ ಮಾಡಿ ಎಲ್ಲರೂ ಅದನ್ನು ಪ್ರಸಾದ ರೂಪದಲ್ಲಿ ಮನೆ ಯವರೆಲ್ಲರೂ ಸೇವಿಸುತ್ತಾರೆ ಮತ್ತು ಇನ್ನು ಕಾಣಿಕೆ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ಮುಡಿ ಕಟ್ಟಿ ಎತ್ತಿಟ್ಟು ತಮ್ಮ ಮನೆದೇವರ ದರ್ಶನಕ್ಕೆ ಹೋದಾಗ ಆ ದೇವಾಲಯದ ಹುಂಡಿಯಲ್ಲಿ ಭಕ್ತಿಯಿಂದ ಹಾಕಿ ಪಾವನರಾಗುತ್ತಾರೆ.
ಪ್ರಥಮವಾಗಿ ಪಡಿ ಬೇಡುವುದರಿಂದ ಮಕ್ಕಳಲ್ಲಿನ ಸಂಕೋಚ ಸ್ವಭಾವ ನೀಗುತ್ತದೆ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಮಧುಕರಿವೃತ್ತಿ ಮಾಡಿ ಜೀವನ ನಡೆಸಬಹುದು ಎಂಬುದನ್ನು ಕಲಿಸುತ್ತದೆ. ಮಕ್ಕಳಿಗೆ ತಾವು ತಿನ್ನುವ ಅಕ್ಕಿಯ ಸಂಪಾದಿಸುವುದರ ಮಹತ್ವ ಮತ್ತು ಮತ್ತೊಬ್ಬರ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತಗ್ಗಿ ಬಗ್ಗಿ ನಡೆಯವುದನ್ನೂ ಮತ್ತು ಕೀಳರಿಮೆಯನ್ನು ಹೋಗಲಾಡಿ ಸುತ್ತದೆ.
ಇನ್ನು ಭಿಕ್ಷೆ ನೀಡುವವರಿಗೂ ತಮ್ಮಲ್ಲಿರುವ ದವಸ ಧಾನ್ಯಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಮನೋಭಾವವನ್ನು ಬೆಳೆಸುತ್ತದೆ ಮತ್ತು ಮೂರು ಬಾರಿ ಅಕ್ಕಿಯನ್ನು ಹಾಗಿ ಕಡೆಯಲ್ಲಿ ನಾಲ್ಕು ಕಾಳು ಅಕ್ಕಿಯನ್ನು ಆ ಪಡಿ ಬೇಡಿದ ಪಾತ್ರೆಯಿಂದ ತನ್ನ ಪಾತ್ರೆಗೆ ಹಾಕಿ ಕೊಳ್ಳುವುದರ ಮೂಲಕ ತಮ್ಮ ಮನೆಯಲ್ಲಿ ಸದಾಕಾಲವೂ ಧನಧಾನ್ಯಗಳು ಆಕ್ಷಯವಾಗಲೀ ಎಂಬುದರ ಸಂಕೇತವಾಗಿದೆ.
ಇನ್ನು ತಮ್ಮ ಮನೆದೇವರಿಗೆ ಪಡಿ ಬೇಡುವಾಗ ಸಂಗ್ರಹಿಸಿದ ಹಣವನ್ನು ಸಮರ್ಪಿಸಲು ವರ್ಷ ಕ್ಕೊಮ್ಮೆಯಾದರೂ ಮನೆ ದೇವರಿಗೆ ಹೋಗಿ ಬರುವಂತಾಗಲೀ ಎನ್ನುವ ಭಾವನೆಯೂ ಇದೆ. ಸಾಮಾನ್ಯವಾಗಿ ವೈಷ್ಣವರಿಗೆ (ವಿಷ್ಣುವಿನ ಆರಾಧಕರು) ಶ್ರಾವಣಮಾಸ ಮುಖ್ಯವಾದರೇ, ಶೈವರಿಗೆ (ಶಿವಾರಾಧಕರಿಗೆ) ಕಾರ್ತೀಕ ಮಾಸ ಪ್ರಾಮುಖ್ಯವಾಗುತ್ತದೆ.
ಹಿಂದೆ ಸುಮಾರು 8 ವರ್ಷಕ್ಕೆಲ್ಲಾ ಗಂಡು ಮಕ್ಕಳಿಗೆ ಉಪನಯನವನ್ನು ಮಾಡಿ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಶಿಕ್ಷಣಾರ್ಥಿಗಳು ಗುರುಕುಲದಲ್ಲಿ ಅಧ್ಯಯನ ಮಾಡುತ್ತಾ ಅಕ್ಕಪಕ್ಕದ ಊರಿನಿಂದ ಕೇವಲ ಭಿಕ್ಷೆಯಿಂದಲೇ ಜೀವನ ಸಾಗಿಸಬೇಕಾಗಿತ್ತು.
ಅಂತಹ ವಿದ್ಯಾರ್ಥಿಗಳಿಗೆ ಮತ್ತು ಗುರುಗಳಿಗೆ ಗೃಹಸ್ಥರು ಧಾರಾಳವಾಗಿ ಭಿಕ್ಷೆ ನೀಡಿ ಪೋಷಿಸು ತ್ತಿದ್ದರು. ಹಾಗಾಗಿ ಗುರುಕುಲಕ್ಕೆ ಕಳುಹಿಸುವ ಮುಂಚೆಯೇ ಚಿಕ್ಕ ವಯಸ್ಸಿನಿಂದಲೇ ಮಧುಕರ ವೃತ್ತಿಯ ಸಂಕೋಚವನ್ನು ನೀಗಿಸಲು ಮನೆಯಲ್ಲಿಯೇ ಈ ರೀತಿ ಯಾಗಿ ತರಬೇತಿ ನೀಡುವುದರ ಸಲುವಾಗಿಯೇ ಇಂತಹ ಪದ್ದತ್ತಿ ರೂಢಿಯಲ್ಲಿ ಬಂದಿರಬೇಕು ಎಂದು ಹಿರಿಯರೊಬ್ಬರ ಅಭಿಪ್ರಾಯ.
ನಮ್ಮ ಹಿರಿಯರು ರೂಢಿಗೆ ತಂದ ಮತ್ತು ಆಚರಿಸುತ್ತಿದ್ದ ಎಲ್ಲಾ ಹಬ್ಬ ಹರಿದಿನಗಳ ಹಿಂದೆಯೂ ಅನೇಕ ಗೂಡಾರ್ಥಗಳಿರುತ್ತವೆ. ನಾವುಗಳು ಅದನ್ನು ಸರಿಯಾಗಿ ಅರ್ಥೈಸಿ ಕೊಂಡು ಹಬ್ಬ ಹರಿದಿನಗಳನ್ನುಆಚರಿಸಿದಾಗ ಮಾತ್ರವೇ ಅದಕ್ಕೆ ಸಾರ್ಥಕತೆ ದೊರಕಿದಂತಾಗುತ್ತದೆ; ಇಲ್ಲವೇ ಅವೆಲ್ಲವೂ ಕಾಟಾಚಾರಗಳಾಗಿ ಹೋಗಿ ಮುಂದೆ ಕೆಲವು ವರ್ಷಗಳ ನಂತರ ಈ ಎಲ್ಲಾ ಆಚರಣೆ ಗಳೂ ನಿಂತು ಹೋದರೂ ಆಚ್ಚರಿಯೇನಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಆಚರಣೆಗಳ ಅರ್ಥ ನಮಗೆ ಗೊತ್ತಿದ್ದರೆ ಆಚರಿಸುವವರ ಬಗ್ಗೆ ಗೌರವವಿರುತ್ತದೆ ಅಲ್ಲವೇ?