Vishweshwar Bhat Column: ಫ್ರಾಂಕ್ ಕೀಟಿಂಗ್: ನೆನಪು
ಸಾಮಾನ್ಯವಾಗಿ ರಾಜಕೀಯ ವಿದ್ಯಮಾನಗಳು ಅಥವಾ ಜಾಗತಿಕ ಸುದ್ದಿಗಳಿಗೆ ಮೀಸಲಾಗುವ ಪತ್ರಿಕೆಯ ಮುಖಪುಟದಲ್ಲಿ, ಫ್ರಾಂಕ್ ಕೀಟಿಂಗ್ ಅವರ ದೊಡ್ಡ ಚಿತ್ರದೊಂದಿಗೆ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಯಿತು. ಒಬ್ಬ ಕ್ರೀಡಾ ಪತ್ರಕರ್ತನಿಗೆ ಇಂಥ ಗೌರವ ಸಿಗುವುದು ಪತ್ರಿಕೋ ದ್ಯಮದ ಇತಿಹಾಸದ ಅತ್ಯಂತ ಅಪರೂಪ.
-
ಸಂಪಾದಕರ ಸದ್ಯಶೋಧನೆ
ಇತ್ತೀಚೆಗೆ ಲಂಡನ್‌ನಿಂದ ಆಗಮಿಸಿದ, ನನ್ನ ಹಳೆಯ ಪತ್ರಿಕೆಗಳ ಮೋಹವನ್ನು ಅರಿತ ಓದುಗ ಅಭಿಮಾನಿಯೊಬ್ಬರು, ‘ದಿ ಗಾರ್ಡಿಯನ್’ ಪತ್ರಿಕೆಯ ಹಳೆಯ ಸಂಚಿಕೆಗಳ ಒಂದು ಕಟ್ಟನ್ನು ಕೊಟ್ಟರು. ನನಗೆ ದೊಡ್ಡ ಗಂಟು ಕೊಟ್ಟಷ್ಟೇ ಸಂತೋಷವಾಯಿತು. ಆ ಪೈಕಿ 2013ರ ಜನೆವರಿ 26ರ ಸಂಚಿಕೆ ವಿಶೇಷವಾಗಿ ನನ್ನ ಗಮನ ಸೆಳೆಯಿತು.
ಆ ದಿನದ ಪತ್ರಿಕೆಯ ಮುಖಪುಟ ಒಬ್ಬ ವ್ಯಕ್ತಿಯ ನಿಧನ ಸುದ್ದಿ(ಅಬಿಚುವರಿ)ಗೆ ಮೀಸಲಾಗಿತ್ತು. ಆ ವ್ಯಕ್ತಿಯ ಹೆಸರು ಫ್ರಾಂಕ್ ಕೀಟಿಂಗ್. ನಾನು ಇವರ ಅನೇಕ ಕ್ರೀಡಾ ವರದಿಗಳನ್ನು ಓದಿದ್ದೆ. ಅವರು ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ‘ದಿ ಗಾರ್ಡಿಯನ್’ ಪತ್ರಿಕೆಯ ಧ್ವನಿಯಾಗಿದ್ದರು, ಪ್ರತಿನಿಧಿಯಾಗಿದ್ದರು. ಹೀಗಾಗಿ, ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಪತ್ರಿಕೆಯು ತನ್ನ ನಿಯಮಗಳನ್ನು ಬದಿಗಿಟ್ಟು, ಅತ್ಯಂತ ಭಾವಪೂರ್ಣವಾಗಿ ಗೌರವ ಸಲ್ಲಿಸಿತ್ತು.
ಸಾಮಾನ್ಯವಾಗಿ ರಾಜಕೀಯ ವಿದ್ಯಮಾನಗಳು ಅಥವಾ ಜಾಗತಿಕ ಸುದ್ದಿಗಳಿಗೆ ಮೀಸಲಾಗುವ ಪತ್ರಿಕೆಯ ಮುಖಪುಟದಲ್ಲಿ, ಫ್ರಾಂಕ್ ಕೀಟಿಂಗ್ ಅವರ ದೊಡ್ಡ ಚಿತ್ರದೊಂದಿಗೆ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಯಿತು. ಒಬ್ಬ ಕ್ರೀಡಾ ಪತ್ರಕರ್ತನಿಗೆ ಇಂಥ ಗೌರವ ಸಿಗುವುದು ಪತ್ರಿಕೋ ದ್ಯಮದ ಇತಿಹಾಸದ ಅತ್ಯಂತ ಅಪರೂಪ.
ಇದನ್ನೂ ಓದಿ: Vishweshwar Bhat Column: ಶ್ವಾನಗಳ ಆಘ್ರಾಣ ಪತ್ರಿಕೋದ್ಯಮ
ಸಂಪಾದಕರು ನಿಧನರಾದರೆ, ಒಳಪುಟಗಳಲ್ಲಿ ಸುದ್ದಿಯಾಗುವುದುಂಟು. ಆದರೆ ಒಬ್ಬ ಕ್ರೀಡಾ ವರದಿಗಾರನ ನಿಧನ ಸುದ್ದಿಗೆ ‘ದಿ ಗಾರ್ಡಿಯನ್’ ಇನ್ನಿಲ್ಲದ ಮಹತ್ವವನ್ನು ನೀಡಿತ್ತು. ಪತ್ರಿಕೆಯ ಸಂಪಾದಕರು ಮತ್ತು ಅವರ ಸಮಕಾಲೀನ ಬರಹಗಾರರು ಕೀಟಿಂಗ್ ಅವರೊಂದಿಗಿನ ನೆನಪು ಗಳನ್ನು ಹಂಚಿಕೊಂಡರು.
‘ಅವರೊಬ್ಬ ಕ್ರೀಡಾ ವರದಿಗಾರನಲ್ಲ, ಕ್ರೀಡಾಂಗಣದ ಕವಿ’ ಎಂದು ‘ಗಾರ್ಡಿಯನ್’ ಅವರನ್ನು ಕೊಂಡಾಡಿತು. ‘ಅವರು ಬಳಸುತ್ತಿದ್ದ ಪದಗಳು, ಸೃಷ್ಟಿಸುತ್ತಿದ್ದ ಉಪಮೆಗಳು ಮತ್ತು ಕ್ರೀಡಾಪಟು ಗಳನ್ನು ಅವರು ಪ್ರೀತಿಸುತ್ತಿದ್ದ ರೀತಿ ಅನನ್ಯವಾಗಿತ್ತು. ಕ್ರಿಕೆಟ್‌ನ್ನು ಕೇವಲ ರನ್, ವಿಕೆಟ್ ಅಥವಾ ಬೌಲಿಂಗ್ ಅಂಕಿ-ಅಂಶಗಳಾಗಿ ನೋಡುತ್ತಿದ್ದ ಕಾಲದಲ್ಲಿ, ಅದಕ್ಕೊಂದು ಸಾಹಿತ್ಯಿಕ ಮೆರುಗು ಮತ್ತು ಮಾನವೀಯ ಸ್ಪರ್ಶ ನೀಡಿದ ಲೇಖನಿ ಎಂದೆಂದಿಗೂ ಮೌನವಾಯಿತು’ ಎಂದು ಸಂಪಾದಕೀಯ ದಲ್ಲೂ ಪತ್ರಿಕೆ ಬರೆಯಿತು.
ಕ್ರೀಡಾ ವರದಿಯನ್ನು ಕೇವಲ ಪತ್ರಿಕೆಯ ಒಂದು ಮೂಲೆಗೆ ಸೀಮಿತಗೊಳಿಸದೇ, ಅದನ್ನು ಪ್ರಧಾನ ಸಾಹಿತ್ಯದ ಮಟ್ಟಕ್ಕೆ ಎತ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಇಂಗ್ಲೆಂಡ್ ಕ್ರಿಕೆಟ್‌ನ ದಂತಕಥೆಗಳಾದ ಸರ್ ಇಯಾನ್ ಬೋಥಮ್, ಡೇವಿಡ್ ಗೋವರ್ ಸೇರಿದಂತೆ ಅನೇಕ ಮಾಜಿ ನಾಯಕರು ಕೀಟಿಂಗ್ ನಿಧನಕ್ಕೆ ಸಂತಾಪ ಸೂಚಿಸಿದದ್ದರು.
‘ಮೈದಾನದಲ್ಲಿ ನಾವು ಪ್ರದರ್ಶಿಸಿದ ಆಟಕ್ಕೆ ನಿಜವಾದ ಸೌಂದರ್ಯ ತಂದುಕೊಟ್ಟಿದ್ದೇ ಫ್ರಾಂಕ್ ಅವರ ಲೇಖನಿ. ನಮ್ಮ ಸಾಧನೆಗಳನ್ನು ಅವರು ಬರೆದಾಗ ಸಿಗುತ್ತಿದ್ದ ಆನಂದವೇ ಬೇರೆ. ಅವರು ನಮ್ಮ ಆಟದ ಬಗ್ಗೆ ಬಣ್ಣಿಸಿದಾಗ, ನಮ್ಮ ಆಟದ ಬಗ್ಗೆ ನಮಗೇ ಗೌರವ, ಹೆಮ್ಮೆ ಮೂಡುತ್ತಿತ್ತು’ ಎಂದು ಕ್ರೀಡಾಪಟುಗಳು ಸ್ಮರಿಸಿದ್ದರು.
ಅವರ ಬರಹಗಳು ಕ್ರೀಡಾಪಟುಗಳಿಗೆ ಕೇವಲ ವಿಮರ್ಶೆಯಾಗಿರದೇ, ಅವರಲ್ಲಿ ಸಕಾರಾತ್ಮಕ ಶಕ್ತಿ ಯನ್ನು ತುಂಬುವ ಪ್ರೇರಣೆಯಾಗಿದ್ದವು. ಶ್ರೇಷ್ಠ ರಗ್ಬಿ ಆಟಗಾರರು ಮತ್ತು ಒಲಿಂಪಿಕ್ಸ್ ತಾರೆಗಳೂ ಸಹ ಈ ಮಾಂತ್ರಿಕ ಬರಹಗಾರನಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸಿದ್ದರು. ಫ್ರಾಂಕ್ ಕೀಟಿಂಗ್ ಅವರ ಬರಹಗಳ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಅವರ ಶಬ್ದ ಸಂಪತ್ತು ಮತ್ತು ಸಾಹಿತ್ಯಿಕ ಶೈಲಿ.
ಅಂದಿನ ಕಾಲದ ಸಾಂಪ್ರದಾಯಿಕ ಕ್ರೀಡಾ ವರದಿಗಾರರು ಕೇವಲ ಯಾರು ಎಷ್ಟು ರನ್ ಹೊಡೆದರು, ಯಾರು ಎಷ್ಟು ವಿಕೆಟ್ ಪಡೆದರು ಎಂಬ ಸ್ಕೋರ್ ಬೋರ್ಡ್ ವಿವರಗಳಿಗೆ ಸೀಮಿತವಾಗುತ್ತಿದ್ದರು. ಆದರೆ ಕೀಟಿಂಗ್ ಅದರಾಚೆಗಿನ ಕಥೆಗಳನ್ನು ಹುಡುಕುತ್ತಿದ್ದರು. ಅವರು ಆಟಗಾರರ ಮುಖಭಾವ, ಮೈದಾನದ ವಾತಾವರಣ, ಪ್ರೇಕ್ಷಕರ ಉದ್ವೇಗ ಮತ್ತು ಪಂದ್ಯದ ಹಿಂದಿನ ಮಾನವೀಯ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. ಅವರ ವರದಿಗಳನ್ನು ಓದುತ್ತಿದ್ದರೆ ಓದುಗ ತಾನೇ ಸ್ವತಃ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವಂಥ ಅನುಭವ ಪಡೆಯುತ್ತಿದ್ದ. ಅವರ ಬರಹಗಳಲ್ಲಿ ಲಘು ಹಾಸ್ಯ ಮತ್ತು ಲವಲವಿಕೆ ಸದಾ ಇರುತ್ತಿತ್ತು.
ಕ್ರೀಡಾಪಟುಗಳನ್ನು ಕೇವಲ ನಾಯಕರನ್ನಾಗಿ ಬಿಂಬಿಸದೇ, ಅವರಲ್ಲಿರುವ ಸಣ್ಣಪುಟ್ಟ ದೋಷಗಳನ್ನು, ಮಾನವೀಯ ಸಹಜ ಗುಣಗಳನ್ನು ಪ್ರೀತಿಯಿಂದಲೇ ವಿಡಂಬನೆ ಮಾಡುತ್ತಿದ್ದರು. ಫ್ರಾಂಕ್ ಕೀಟಿಂಗ್ ಜಗತ್ತಿನ ಪ್ರಮುಖ ಕ್ರೀಡಾಕೂಟಗಳನ್ನು ಅತ್ಯಂತ ಹತ್ತಿರದಿಂದ ವರದಿ ಮಾಡಿ ದ್ದಾರೆ. ಒಲಿಂಪಿಕ್ಸ್, ಕ್ರಿಕೆಟ್ ವಿಶ್ವಕಪ್, ಆಶಸ್ ಸರಣಿ, ರಗ್ಬಿ ವಿಶ್ವಕಪ್ ಸೇರಿದಂತೆ ನೂರಾರು ಐತಿಹಾಸಿಕ ಪಂದ್ಯಗಳಿಗೆ ಅವರು ಸಾಕ್ಷಿಯಾಗಿದ್ದಾರೆ.