Mohan Vishwa Column: ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳಿಗೆ ನೆಲೆಯಿಲ್ಲ
ಅಖಂಡ ಭಾರತದ ವಿಭಜನೆಯ ವೇಳೆ ಪಾಕಿಸ್ತಾನದಲ್ಲೇ ಉಳಿಯಬೇಕಾಗಿಬಂದ ಹಿಂದೂಗಳು ಇಂದಿಗೂ ಅಲ್ಲಿ ಅಲ್ಪಸಂಖ್ಯಾತರಾಗಿ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ನಾಡಿನಲ್ಲಿ ಜನ್ಮತಳೆದು ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿಯವರು ತಮ್ಮ ದರ್ಬಾರಿನಲ್ಲಿ ಸ್ವಾಮೀಜಿಯ ಆದರ್ಶಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ, ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ಆಶ್ರಯ ನೀಡುವ ಮೂಲಕ ತಮ್ಮ ಮತ ಬ್ಯಾಂಕ್ ತುಷ್ಟೀಕರಣ ರಾಜಕೀಯದಲ್ಲಿ ನಿರತ ರಾಗಿದ್ದಾರೆ.


ವೀಕೆಂಡ್ ವಿತ್ ಮೋಹನ್
camohanbn@gmail.com
ಅಮೆರಿಕದ ಶಿಕಾಗೊ ನಗರದಲ್ಲಿ 1893ರ ಸೆಪ್ಟೆಂಬರ್ 11ರಂದು ಪ್ರಪಂಚದ ಮೊಟ್ಟಮೊದಲ ಸರ್ವಧರ್ಮ ಸಮ್ಮೇಳನ ನಡೆಯಿತು. ‘ಬಿರುಗಾಳಿಯ ಸಂತ’ ಸ್ವಾಮಿ ವಿವೇಕಾನಂದರು ಈ ಸಮ್ಮೇಳನದಲ್ಲಿ ಹಿಂದೂ ಧರ್ಮದ ಮಹತ್ವವನ್ನು ಪಾಶ್ಚಿಮಾತ್ಯ ಜಗತ್ತಿಗೆ ಸಾರಿ ಸಾರಿ ಹೇಳಿದ್ದರು. ಹಾವಾಡಿಗರ ನಾಡೆಂದು ಭಾರತವನ್ನು ನೋಡುತ್ತಿದ್ದ ಪಾಶ್ಚಿಮಾತ್ಯರ ಮುಂದೆ ಹಿಂದೂ ಧರ್ಮದ ಮಹತ್ವವನ್ನು ಸ್ವಾಮಿಗಳು ವಿವರವಾಗಿ ಮಂಡಿಸಿ ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿದ್ದರು. ಪಾಶ್ಚಿಮಾತ್ಯ ದೇಶಗಳಿಗೆ ಭಾರತದ ‘ಮಿತ್ರಭಾವ’ವನ್ನು ಪರಿಚಯಿಸಿ, ಜಗತ್ತಿನ ಜನರೆಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕೆಂದೂ, ಜಗತ್ತಿನ ಅತ್ಯಂತ ಸಹಿಷ್ಣು ಧರ್ಮವೆಂದರೆ ಅದು ಹಿಂದೂ ಧರ್ಮವೆಂದೂ ಸ್ವಾಮಿಗಳು ಅಂದು ಹೇಳಿದ್ದುಂಟು.
ಆದರೆ, ಅವರ ಸ್ವಂತ ರಾಜ್ಯ ಪಶ್ಚಿಮ ಬಂಗಾಳದಲ್ಲಿ ನಡೆದ ಇತಿಹಾಸವೇ ಬೇರೆ. ಸ್ವಾತಂತ್ರ್ಯಾ ನಂತರ ಮೊಟ್ಟ ಮೊದಲ ಬಾರಿಗೆ ಅಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷವು ಹಿಂದೂ ಧರ್ಮವನ್ನು ಹೇಳ ಹೆಸರಿಲ್ಲದಂತೆ ಮಾಡಿತು.
ಅದರ ನಂತರ ಅಧಿಕಾರಕ್ಕೆ ಬಂದ ಕಮ್ಯುನಿಸ್ಟರು ಪಶ್ಚಿಮ ಬಂಗಾಳವನ್ನು 3 ದಶಕಗಳ ಕಾಲ ಹಾಳು ಮಾಡಿದರು. ನಂತರ ಆಡಳಿತದ ಚುಕ್ಕಾಣಿ ಹಿಡಿದು ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಯಾಗಿರುವ ಮಮತಾ ಬ್ಯಾನರ್ಜಿಯವರ ದರ್ಬಾರಿನಲ್ಲಿ, ಹಿಂದೂಗಳು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: Mohan Vishwa Column: ಪುರಾತನ ವಕ್ಫ್ ಕಾಯ್ದೆಗೆ ಎಳ್ಳು-ನೀರು
‘ವಕ್ಫ್ ತಿದ್ದುಪಡಿ ಕಾಯಿದೆ, 2025’ರ ವಿರುದ್ಧ ಬಂಗಾಳದ ಮುರ್ಷಿರಾಬಾದ್ ನಗರದಲ್ಲಿ ನಡೆಯು ತ್ತಿರುವ ಪ್ರತಿಭಟನೆಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಮನಬಂದಂತೆ ಥಳಿಸಲಾಗುತ್ತಿದೆ. ಮತಾಂಧರು ಹಿಂದೂಗಳ ಮನೆಗಳನ್ನು ಧ್ವಂಸ ಮಾಡುತ್ತಿದ್ದಾರೆ. ಮತಾಂಧರ ಅಟ್ಟಹಾಸಕ್ಕೆ ಹೆದರಿ ಹಿಂದೂಗಳು ಉಟ್ಟಬಟ್ಟೆಯಲ್ಲಿ ತಮ್ಮ ಊರುಗಳನ್ನು ಬಿಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬಂಗಾಳದ ಪೊಲೀಸರು ಮಮತಾ ಬ್ಯಾನರ್ಜಿಯವರ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ, ಗಲಭೆ ಕೋರರ ವಿರುದ್ಧ ಲಾಠಿ ಬೀಸಲು ಹೆದರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಸರಕಾರವೇ ಗಲಭೆಕೋರರ ಪರವಾಗಿ ನಿಂತಿದೆ. ಪಶ್ಚಿಮ ಬಂಗಾಳದ ಉಚ್ಚ ನ್ಯಾಯಾಲಯವು ಅರೆಸೇನಾ ಪಡೆಯನ್ನು ಅಲ್ಲಿಗೆ ಕಳುಹಿಸುವಂತೆ ಕೇಂದ್ರಕ್ಕೆ ಹೇಳಿದೆ. ಅಂದು ಶಿಕಾಗೊದಲ್ಲಿ ಸ್ವಾಮಿ ವಿವೇಕಾ ನಂದರು ತಮ್ಮ ಭಾಷಣದಲ್ಲಿ, ಜಗತ್ತಿನಲ್ಲಿ ಹಂಚಿ ಹೋಗಿರುವ ಹಿಂದೂ ಧರ್ಮದ ಅನುಯಾಯಿಗಳ ಪರವಾಗಿ, ಅಲ್ಲಿ ನೆರೆದಿದ್ದ ಪಾಶ್ಚಿಮಾತ್ಯ ಸಭಿಕರಿಗೆ, ಹಿಂದೂ ಧರ್ಮದ ಪರವಾಗಿ ಭಾಷಣ ಮಾಡಲು ಕರೆಸಿದ್ದಕ್ಕೆ ಕೃತಜ್ಞತೆಯನ್ನು ತಿಳಿಸಿದ್ದರು.
“ಕೇವಲ ಸಮನ್ವಯವೊಂದೇ ಅಲ್ಲದೇ ಸ್ವೀಕಾರದ ಪಾಠವನ್ನು ಇಡೀ ವಿಶ್ವಕ್ಕೆ ಸಾರಿದ ಧರ್ಮಕ್ಕೆ ನಾನು ಸೇರಿದವನು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ" ಎಂದು ಸ್ವಾಮಿಗಳು ಅಂದು ಹೇಳಿದ್ದರು. ಆದರೆ ವಿಪರ್ಯಾಸ ನೋಡಿ, ಸ್ವಾಮಿ ವಿವೇಕಾನಂದರ ಬಂಗಾಳದಲ್ಲಿ ಇಂದು ಹಿಂದೂ ಗಳು ತಮ್ಮ ಜೀವ ಉಳಿಸಿಕೊಳ್ಳಲು ಊರು ಬಿಡುವ ಪರಿಸ್ಥಿತಿ ಎದುರಾಗಿದೆ.
ಕೇಸರಿ ಬಣ್ಣದ ವಸ ಕಂಡರೆ ಮಮತಾ ಬ್ಯಾನರ್ಜಿ ಬೆಂಬಲಿಗರು ಉರಿದು ಬೀಳುವ ಪರಿಸ್ಥಿತಿ ಬಂಗಾಳದಲ್ಲಿದೆ. ಬೀದಿ ಬೀದಿಗಳಲ್ಲಿ ಹಸಿರು ಬಣ್ಣದ ಬಾವುಟಗಳು ರಾರಾಜಿಸುತ್ತಿದ್ದು, ಅವಕ್ಕೆ ಸಿಕ್ಕಿರುವ ಪ್ರಾಶಸ್ತ್ಯ ಕೇಸರಿ ವಸಗಳಿಗೆ ಸಿಗುತ್ತಿಲ್ಲ. ಮೂರು ದಶಕಗಳ ಕಾಲ ಆಡಳಿತ ನಡೆಸಿದ ಕಮ್ಯುನಿಸ್ಟರು, ಚೀನಾ ಮತ್ತು ರಷ್ಯಾ ದೇಶಗಳಿಂದ ಆಮದು ಮಾಡಿಕೊಳ್ಳಲಾದ, ಸತ್ತು ಹೋಗಿರುವ ಕಮ್ಯುನಿಸ್ಟ್ ಸಿದ್ಧಾಂತವನ್ನು ಪಶ್ಚಿಮ ಬಂಗಾಳದಲ್ಲಿ ಪ್ರತಿಪಾದಿಸಿ, ಹಿಂದೂ ಧರ್ಮದ ಆಚರಣೆ ಗಳಿಗೆ ಧಕ್ಕೆ ತಂದಿಟ್ಟರು.
ಕಮ್ಯುನಿಸ್ಟರ ಚಾಳಿಯನ್ನು ಮುಂದುವರಿಸಿದ ಮಮತಾ ಬ್ಯಾನರ್ಜಿ, ಜಾತ್ಯತೀತತೆಯ ಹೆಸರಿನಲ್ಲಿ ದಶಕಗಳಿಂದ ಒಂದು ಧರ್ಮದ ಓಲೈಕೆಯಲ್ಲಿ ತೊಡಗಿದ್ದಾರೆ. ‘ಜೈ ಶ್ರೀರಾಮ್’ ಘೋಷಣೆಯು ಮಮತಾ ಬ್ಯಾನರ್ಜಿಗೆ ಅಸಹಿಷ್ಣುತೆಯಾಗಿ ಕಾಣುತ್ತದೆ. ಬಂಗಾಳದ ವಿವೇಕಾನಂದರು ಹಿಂದೂ ಧರ್ಮವನ್ನು ಜಗತ್ತಿನ ಅತ್ಯಂತ ಸಹಿಷ್ಣು ಧರ್ಮವೆಂದು ಹೇಳಿದ್ದನ್ನು ದುರುಪಯೋಗಪಡಿಸಿ ಕೊಂಡಿರುವ ಮಮತಾ ಬ್ಯಾನರ್ಜಿ, ಹಿಂದೂಗಳು ಏನು ಮಾಡಿದರೂ ಸಹಿಸಿಕೊಳ್ಳುತ್ತಾರೆಂಬ ಭ್ರಮೆಯಲ್ಲಿ, ಸಾವಿರಾರು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಿಗೆ ಕಾರಣರಾಗಿರುವ ತಮ್ಮದೇ ಪಕ್ಷದವರ ಪರವಾಗಿ ನಿಂತಿದ್ದಾರೆ.
ಕೋಲ್ಕತ್ತಾದಲ್ಲಿ ಪ್ರತಿ ವರ್ಷವೂ ಉಚ್ಚ ನ್ಯಾಯಾಲಯದ ಆದೇಶದಡಿಯಲ್ಲಿ ದುರ್ಗಾ ಪೂಜೆಯ ಮೆರವಣಿಗೆಯನ್ನು ನಡೆಸಬೇಕಾದಂಥ ಪರಿಸ್ಥಿತಿಯಿದೆ. ಆದರೆ ಮುಸಲ್ಮಾನರ ಹಬ್ಬಗಳಲ್ಲಿ ನಡೆಯುವ ಮೆರವಣಿಗೆ ವಿಚಾರದಲ್ಲಿ ಹಾಗಿಲ್ಲ, ಸ್ವತಃ ಮಮತಾ ಬ್ಯಾನರ್ಜಿ ಸರಕಾರವೇ ಅದಕ್ಕೆ ಜಾತ್ಯತೀತತೆ ಹೆಸರಲ್ಲಿ ಅನುಮತಿ ನೀಡುತ್ತಾ ಬಂದಿದೆ.
ಸ್ವಾಮಿ ವಿವೇಕಾನಂದರು ತಮ್ಮ ಶಿಕಾಗೊ ಭಾಷಣದಲ್ಲಿ, “ಭೂಮಿಯ ಮೇಲಿನ ಎಲ್ಲಾ ಧರ್ಮಗಳ, ಎಲ್ಲಾ ದೇಶಗಳ ಪೀಡಿತರು ಮತ್ತು ಅನಾಥರಿಗೆ ಆಶ್ರಯ ನೀಡಿದ ಹೆಮ್ಮೆಯ ಧರ್ಮ ನಮ್ಮದು. ಸಹಾಯಹಸ್ತಕ್ಕಾಗಿ ಕೈಚಾಚಿ ಬಂದ ಲವು ಧರ್ಮಗಳಿಗೆ ಆಶ್ರಯ ನೀಡಿದ ದೇಶ ನಮ್ಮದು. ರೋಮನ್ನರ ಆಕ್ರಮಣಕ್ಕೆ ತುತ್ತಾಗಿ ತಮ್ಮ ನೆಲೆಯಿಂದ ಓಡಿಹೋದ ಯಹೂದಿಗಳಿಗೆ ಆಶ್ರಯ ನೀಡಿದ್ದು ಭಾರತದವರು" ಎಂದು ಹೇಳಿದ್ದರು. 1950ರ ದಶಕದಲ್ಲಿ ಟಿಬೆಟಿಯನ್ನರ ಮೇಲೆ ಚೀನಾ ದಾಳಿಮಾಡಿದಾಗ ತಪ್ಪಿಸಿಕೊಂಡು ಬಂದ ಬೌದ್ಧರಿಗೆ ಆಶ್ರಯ ನೀಡಿದ ದೇಶ ನಮ್ಮದು.
ಟಿಬೆಟಿಯನ್ನರ ಪರಮೋಚ್ಚ ನಾಯಕ ದಲೈ ಲಾಮಾರಿಗೆ ಆಶ್ರಯ ನೀಡಿದ ದೇಶ ಭಾರತ. ಆದರೆ ವಿಪರ್ಯಾಸವೆಂದರೆ, ಇಂದು ವಿವೇಕಾನಂದರ ಬಂಗಾಳದಲ್ಲಿ ಹಿಂದೂಗಳು ಗಲಭೆಕೋರರಿಗೆ ಹೆದರಿ ಬೇರೆ ಕಡೆಗೆ ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ. ಅಖಂಡ ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲೇ ಉಳಿಯಬೇಕಾಗಿಬಂದ ಹಿಂದೂಗಳು ಇಂದಿಗೂ ಅಲ್ಲಿ ಅಲ್ಪ ಸಂಖ್ಯಾತರಾಗಿ ಪ್ರತಿನಿತ್ಯ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸ್ವಾಮಿ ವಿವೇಕಾನಂದರ ನಾಡಿನಲ್ಲಿ ಜನ್ಮತಳೆದು ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಯವರು ತಮ್ಮ ದರ್ಬಾರಿನಲ್ಲಿ ಸ್ವಾಮೀಜಿಯ ಆದರ್ಶಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ, ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ಆಶ್ರಯ ನೀಡುವ ಮೂಲಕ ತಮ್ಮ ಮತಬ್ಯಾಂಕ್ ತುಷ್ಟೀಕರಣ ರಾಜಕೀಯದಲ್ಲಿ ನಿರತರಾಗಿದ್ದಾರೆ. ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಮಮತಾ ಅವರು ಅಕ್ರಮ ವಲಸಿಗರ ವಿರುದ್ಧ ಸಂಸತ್ತಿನಲ್ಲಿ ಕೂಗಾಡಿ ಕಡತಗಳನ್ನು ಎಸೆದಾಡಿದ್ದರು.
ಆದರೆ ಇಂದು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅದೇ ಅಕ್ರಮ ವಲಸಿಗರನ್ನು ಬಂಗಾಳದಲ್ಲಿ ಪೋಷಿಸಿ ಹಿಂದೂಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಬಾಂಗ್ಲಾದ ಅಕ್ರಮ ವಲಸಿಗರನ್ನು ಪೋಷಿಸಿ ಪಶ್ಚಿಮ ಬಂಗಾಳದ ಭೌಗೋಳಿಕ ಚಿತ್ರಣವನ್ನೇ ಬದಲಿಸಿರುವ ಮಮತಾ ಬ್ಯಾನರ್ಜಿ, ಅಲ್ಲಿನ ಹಿಂದೂಗಳ ಮರಣ ಶಾಸನ ಬರೆಯುತ್ತಿದ್ದಾರೆ. 1893ರ ತಮ್ಮ ಶಿಕಾಗೊ ಭಾಷಣದಲ್ಲಿ ಸ್ವಾಮೀಜಿ ಉಲ್ಲೇಖಿಸಿದಂತೆ, ಯಹೂದಿಗಳಿಗೆ ಭಾರತವು ಆಶ್ರಯ ನೀಡಿದ ವಿಚಾರ ವನ್ನು ಇಂದಿಗೆ ತಾಳೆಮಾಡಿ ನೋಡಿದರೆ, ಕರೋನ ಎರಡನೇ ಅಲೆಯ ಸಂಕಷ್ಟದಲ್ಲಿ ಇಸ್ರೇಲಿನ ಯಹೂದಿಗಳು ಭಾರತಕ್ಕೆ ಮಾಡಿದ ಸಹಾಯ ನೆನಪಾಗುತ್ತದೆ.
ಇದಲ್ಲವೇ ಒಬ್ಬರನ್ನೊಬ್ಬರು ಅರಿತು ಸಹಾಯ ಮಾಡುವ ಪರಿ? ಅದನ್ನು ಬಿಟ್ಟು, ಅಕ್ರಮ ಬಾಂಗ್ಲಾ ಶತ್ರುಗಳನ್ನು ಒಳಬಿಟ್ಟುಕೊಂಡು ಪಶ್ಚಿಮ ಬಂಗಾಳದ ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಕೆಲಸವನ್ನು ಮಮತಾ ಮಾಡುತ್ತಿದ್ದಾರೆ!
ಸ್ವಾಮಿ ವಿವೇಕಾನಂದರು ತಮ್ಮ ಶಿಕಾಗೊ ಭಾಷಣದಲ್ಲಿ ಮುಂದುವರಿದು, “ಅಂಧಶ್ರದ್ಧೆ ಹಾಗೂ ಅದರ ಭಯಾನಕ ಮೂಲಭೂತವಾದಗಳು, ಈ ಸುಂದರ ಪೃಥ್ವಿಯನ್ನು ಹಿಂದಿನಿಂದಲೂ ಆಕ್ರಮಿಸಿಕೊಂಡಿವೆ. ಅವು ಈ ಧರೆಯನ್ನು ಹಿಂಸಾಚಾರದ ವಿಷದಿಂದ ತುಂಬಿಸಿವೆ, ಮಾನವ ರಕ್ತದಿಂದ ಪದೇಪದೆ ತೋಯಿಸಿ ನಾಗರಿಕತೆಯನ್ನು ನಾಶಗೊಳಿಸಿವೆ, ದೇಶಗಳನ್ನೇ ಸರ್ವನಾಶಕ್ಕೆ ದೂಡಿವೆ" ಎಂದಿದ್ದರು. ಸ್ವಾಮೀಜಿಯ ಅಂದಿನ ಈ ಮಾತುಗಳು, ಪಶ್ಚಿಮ ಬಂಗಾಳದಲ್ಲಿಂದು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿರುವ ಗಲಭೆಯ ಸನ್ನಿವೇಶಗಳಿಗೆ ಅದೆಷ್ಟು ಹೋಲುತ್ತವೆಯೆಂದರೆ, ಅಕ್ರಮ ಬಾಂಗ್ಲಾ ವಲಸಿಗರ ಮೇಲಿನ ಅಂಧಶ್ರದ್ಧೆಯ ಪರಿಣಾಮವಾಗಿ ಪಶ್ಚಿಮ ಬಂಗಾಳವು 2019ರ ಹಿಂದಿನ ಕಾಶ್ಮೀರವಾದರೂ ಅಚ್ಚರಿ ಪಡಬೇಕಿಲ್ಲ.
ಭಯಾನಕ ಮೂಲಭೂತವಾದಿಗಳು ಆಕ್ರಮಿಸಿಕೊಂಡ ಭೌಗೋಳಿಕ ಪ್ರದೇಶಗಳೆಲ್ಲವೂ ಹಿಂಸಾ ಚಾರದಿಂದ ತುಂಬಿವೆ. ಮೂಲಭೂತವಾದದ ಹೆಸರಿನಲ್ಲಿ ಹಲವು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು ನಡೆದುಹೋಗಿವೆ. ಹಿಂದೂ ಪ್ರಾಬಲ್ಯದ ಜಿಲ್ಲೆಗಳೆಲ್ಲವೂ ‘ಲ್ಯಾಂಡ್ ಜಿಹಾದ್’ ಮೂಲಕ ಅಕ್ರಮ ಬಾಂಗ್ಲಾ ವಲಸಿಗರ ಅಡಗುತಾಣವಾಗಿವೆ. ಮಮತಾ ಅಕ್ರಮವಾಗಿ ಆಶ್ರಯ ನೀಡಿದ್ದರ ಫಲವಾಗಿ ಬಾಂಗ್ಲಾದ ನುಸುಳುಕೋರರು ಹೆಚ್ಚೆಚ್ಚು ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿದ್ದಾರೆ.
ಸ್ವಾಮಿ ವಿವೇಕಾನಂದರು ತಮ್ಮ ಶಿಕಾಗೊ ಭಾಷಣದಲ್ಲಿ ಮುಂದುವರಿದು ಮತಾಂತರದ ಬಗ್ಗೆ ಹೇಳುತ್ತಾ, “ಒಂದು ಧರ್ಮದ ದಿಗ್ವಿಜಯವು ಉಳಿದ ಧರ್ಮದ ನಾಶವಾಗುತ್ತದೆ ಎಂದು ಭಾವಿಸು ವವರು ಇಲ್ಲಿದ್ದಾರೆ. ಅವರಿಗೆ ನನ್ನದೊಂದು ಕಿವಿಮಾತು- ಸೋದರರೇ, ನಿಮ್ಮದು ಅಸಂಭವನೀಯ ನಂಬಿಕೆ. ಕ್ರೈಸ್ತನೊಬ್ಬ ಹಿಂದೂ ಆಗಬೇಕೆಂದು ನಾನು ಬಯಸಲೇ? ಹಿಂದೂ ಅಥವಾ ಬೌದ್ಧ ನೊಬ್ಬ ಕ್ರೈಸ್ತನಾಗಬೇಕೆಂದು ನಾನು ಬಯಸಲೇ? ಹಾಗೆ ಮಾಡಿದರೆ ದೇವರು ನನ್ನನ್ನು ತಡೆಯಲಿ. ಬೀಜವೊಂದು ಗಾಳಿ-ಬೆಳಕಿಗೆ ಸಿಲುಕಿ ಬದಲಾಗದೆ, ತನ್ನ ಸ್ವಂತ ಬೆಳವಣಿಗೆಯ ನಿಯಮದಂತೆ ಸಸ್ಯವಾಗಿ ಬೆಳೆಯುತ್ತದೆ.
ಕ್ರೈಸ್ತನು ಹಿಂದೂ ಆಗಿ, ಹಿಂದೂ ವ್ಯಕ್ತಿಯು ಕ್ರೈಸ್ತನಾಗಿ ಬದಲಾಗಬೇಕಿಲ್ಲ. ಪ್ರತಿಯೊಬ್ಬರೂ ಇತರರ ಶಕ್ತಿಯನ್ನು ಗೌರವಿಸಿ, ಸ್ವಂತಿಕೆಯನ್ನು ಉಳಿಸಿಕೊಂಡು, ತಮ್ಮದೇ ನಿಯಮದಂತೆ ವೃದ್ಧಿಸಬೇಕು" ಎಂದಿದ್ದರು. ಯುರೋಪಿನಲ್ಲಿ ಹುಟ್ಟಿ ಕೋಲ್ಕತ್ತಾದಲ್ಲಿ ಸೇವೆಯ ಹೆಸರಿನಲ್ಲಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿದ ಮಹಾನುಭಾವರು ಪಶ್ಚಿಮ ಬಂಗಾಳದಲ್ಲಿದ್ದರು.
ಸ್ವಾಮೀಜಿಯ ಹುಟ್ಟೂರಿನಲ್ಲಿ ನಡೆದ ಮತಾಂತರದ ಅವಧಿಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಟಿಎಂಸಿ ಪಕ್ಷಗಳು ಅಧಿಕಾರದಲ್ಲಿದ್ದವು. ಸ್ವಾಮಿ ವಿವೇಕಾನಂದರು ಅಂದು ಶಿಕಾಗೊ ಭಾಷಣದಲ್ಲಿ ಮತಾಂತರದ ಬಗ್ಗೆ ಅಷ್ಟು ಸ್ಪಷ್ಟವಾಗಿ ವಿವರಣೆಯನ್ನು ನೀಡಿರಬೇಕಾದರೆ, ಅವರ ನಾಡಿನಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಅವಧಿಯಲ್ಲಿ ರಾಜಕೀಯ ಪ್ರೇರಿತವಾಗಿ ಲಕ್ಷಾಂತರ ಹಿಂದೂಗಳ ಮತಾಂತರ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಮಾತ್ರ ವಿಪರ್ಯಾಸದ ಪರಮಾವಧಿ.
ಬಿರುಗಾಳಿಯ ಸಂತನಾಗಿ, 128 ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯರ ಮುಂದೆ ಹಿಂದೂ ಧರ್ಮದ ಬಗ್ಗೆ ಇಡೀ ಸಭಾಂಗಣವೇ ಎದ್ದು ನಿಂತು ಕರತಾಡನ ಮಾಡುವಂತೆ ಭಾಷಣ ಮಾಡಿದ್ದ ಸ್ವಾಮಿ ವಿವೇಕಾನಂದರ ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಹಾಗೂ ಮಮತಾ ಬ್ಯಾನರ್ಜಿಯವರು ಸ್ವಾರ್ಥ ರಾಜಕೀಯವನ್ನು ಮೆರೆಯುತ್ತಿದ್ದಾರೆ. ತನ್ಮೂಲಕ, ಮತಾಂಧರು, ಮೂಲಭೂತವಾದಿಗಳು, ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಮಿಷನರಿಗಳನ್ನು ಪೋಷಿಸುತ್ತಾ ಬಂದಿದ್ದಾರೆ. ಇವರ ಆಡಳಿತದ ಪರಿಣಾಮ, ಸ್ವಾಮಿ ವಿವೇಕಾನಂದರ ನಾಡಿನಲ್ಲೇ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ.