ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghav Sharma Nidle Column: ಬಿಹಾರ ಗದ್ದುಗೆ ಮೇಲೆ ಯಾದವ- ಮುಸ್ಲಿಂ ಕಣ್ಣು

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಶಾಸಕರೊಬ್ಬರನ್ನೂ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ತೇಜಸ್ವಿ ಯಾದವ್ ಭರವಸೆ ನೀಡಿರುವುದರಿಂದ ಮುಸ್ಲಿಂ ಮತಗಳ ವಿಭಜನೆಗೆ ಕಡಿವಾಣ ಹಾಕುವ ತಂತ್ರ ಹೆಣೆಯಲಾಗಿದೆ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಮುಸ್ಲಿಂ ಮತಗಳ ಸಣ್ಣ ವಿಭಜನೆಯೂ ಆರ್. ಜೆ.ಡಿ.-ಕಾಂಗ್ರೆಸ್‌ಗೆ ಹಾನಿ ಮಾಡಬಲ್ಲದು.

ಬಿಹಾರ ಗದ್ದುಗೆ ಮೇಲೆ ಯಾದವ- ಮುಸ್ಲಿಂ ಕಣ್ಣು

-

Ashok Nayak Ashok Nayak Oct 28, 2025 7:27 AM

ಬಿಹಾರದಲ್ಲಿ ರಂಗೇರಿದ ಚುನಾವಣಾ ಅಖಾಡ

ಆರ್‌ಜೆಡಿಯಿಂದ ಮುಸ್ಲಿಂ ಮತಗಳ ವಿಭಜನೆಗೆ ಕಡಿವಾಣ ಹಾಕುವ ತಂತ್ರ

ಪಟ್ನಾ: ದೀಪಾವಳಿ ಮುಗಿದ ೬ ದಿನಗಳ ಬಳಿಕ ಉತ್ತರ ಭಾರತದಲ್ಲಿ ಆಚರಿಸಲಾಗುವ ಛಟ್ ಪೂಜೆಯನ್ನು 4 ದಿನಗಳ ಕಾಲ ಬಿಹಾರದಲ್ಲಿ ಬಹಳ ಭಕ್ತಿ ವೈಭವಗಳಿಂದ ಆಚರಿಸಲಾಗುತ್ತದೆ. ಪಟನಾದ ಗಂಗಾ ನದಿ ತೀರಕ್ಕಂತೂ ಭಕ್ತ ಸಾಗರವೇ ಹರಿದು ಬಂದಿತ್ತು. ಹಬ್ಬದ ಸಂಭ್ರಮದ ಮಧ್ಯೆಯೇ ಚುನಾವಣೆ ಕಾವು ಕೂಡ ರಾಜ್ಯಾದ್ಯಂತ ರಂಗೇರಿದ್ದು, ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್‌ರನ್ನು ಮಹಾಘಟಬಂಧನದ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಮುಸ್ಲಿಂ-ಯಾದವ್ (ಎಂಫ್ವೈ ಕಾಂಬಿನೇಷನ್) ಸಂಯೋಜನೆಯನ್ನು ಬಿಗಿಗೊಳಿಸುವ ಇಂಡಿ ಒಕ್ಕೂಟದ ತಂತ್ರಕ್ಕೆ ವೇಗ ಸಿಕ್ಕಿದೆ. ‌

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂ ಶಾಸಕರೊಬ್ಬರನ್ನೂ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ತೇಜಸ್ವಿ ಯಾದವ್ ಭರವಸೆ ನೀಡಿರುವುದರಿಂದ ಮುಸ್ಲಿಂ ಮತಗಳ ವಿಭಜನೆಗೆ ಕಡಿವಾಣ ಹಾಕುವ ತಂತ್ರ ಹೆಣೆಯಲಾಗಿದೆ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಿಂದ ಮುಸ್ಲಿಂ ಮತಗಳ ಸಣ್ಣ ವಿಭಜನೆ ಯೂ ಆರ್. ಜೆ.ಡಿ.-ಕಾಂಗ್ರೆಸ್‌ಗೆ ಹಾನಿ ಮಾಡಬಲ್ಲದು.

ಹೀಗಾಗಿ ಈ ಬಾರಿ ಮುಖ್ಯವಾಗಿ ಯಾದವರು ಬಹಳ ಆಕ್ರಮಣಶೀಲತೆಯಿಂದ ಪ್ರಚಾರದಲ್ಲಿ ತೊಡಗಿದ್ದು, ಬಿಹಾರಕ್ಕೆ ಮುಸ್ಲಿಂ ಡಿಸಿಎಂ ಎಂಬ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಬಿಹಾರದಲ್ಲಿ ಮುಸ್ಲಿಂ-ಯಾದವ ಎರಡೂ ಸಮುದಾಯಗಳ ಸುಮಾರು ೩೧% ಮತದಾರರಿದ್ದು, ಶೇ.೯೦-೯೫ ಮಂದಿ ಮಹಾಘಟ್‌ಬಂಧನ್‌ಗೇ ಮತ ಹಾಕುತ್ತಾರೆ.

ಇದನ್ನೂ ಓದಿ: Raghav Sharma Nidle Column: ಹಲವರ ಭವಿಷ್ಯ ಬರೆಯಲಿರುವ ಬಿಹಾರ ಕದನ

ನಮ್ಮ ಗುರಿ ಯಾದವೇತರ ಇತರೆ ಹಿಂದುಳಿದ, ಅತಿ ಹಿಂದುಳಿದ ಮತ್ತು ಮೇಲ್ಜಾತಿಗಳು. ಮೋದಿ-ನಿತೀಶ್ ಕಾಂಬಿನೇಷನ್ ಈ ಮತಗಳನ್ನು ಸೆಳೆಯಲು ನೆರವಾಗುತ್ತವೆ ಎಂದು ಪಟನಾದ ಟೈಲರ್ ರೋಡ್‌ನ ನಂ.೩ ಸರಕಾರಿ ಬಂಗಲೆಯಲ್ಲಿ (ರಾಜ್ಯ ರಸ್ತೆ ನಿರ್ಮಾಣ ಇಲಾಖೆ ಸಚಿವ ನಿತಿನ್ ನವೀನ್ ನಿವಾಸ) ಮಾತಿಗೆ ಸಿಕ್ಕ ಬಿಜೆಪಿ ಕಾರ್ಯಕರ್ತ ರಾಜೀವ್ ಕುಮಾರ್ ಎಂಬವರು ‘ವಿಶ್ವವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

‘ಮುಸ್ಲಿಂ ಮತಗಳನ್ನು ಧ್ರುವೀಕರಣಗೊಳಿಸುವುದು ಆರ್.ಜೆ.ಡಿ. ಗುರಿ. ಇದಕ್ಕಾಗಿ ಕೇಂದ್ರ ಸರಕಾರದ ವಕ್ ಕಾನೂನಿನ ಬಗ್ಗೆಯೂ ಚರ್ಚೆಯಾಗುತ್ತಿದ್ದು, ಈ ಕಾನೂನನ್ನು ನಾವು ಹರಿದು ಬಿಸಾಕುತ್ತೇವೆ’ ಎಂದು ತೇಜಸ್ವಿ ಯಾದವ್ ಗುಡುಗಿದ್ದಾರೆ. ನಾವು ಅಧಿಕಾರಕ್ಕೆ ಬರಲಿ, ಬಿಡಲಿ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವುದು ಖಚಿತ ಎಂಬ ಭರವಸೆ ನೀಡಿ, ಮುಸಲ್ಮಾನರ ಮತ ಕೇಳುತ್ತಿದ್ದಾರೆ.

ಸೀಮಾಂಚಲ್‌ನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದ ತೇಜಸ್ವಿ, ಇದು ಸಂವಿಧಾನ ಮತ್ತು ಬಹುತ್ವ ಉಳಿಸುವ ಹೋರಾಟ ಎಂಬ ವ್ಯಾಖ್ಯಾನ ನೀಡಿದ್ದಾರೆ.

ಸಂವಿಧಾನ ಮತ್ತು ಬಹುತ್ವದ ಬಗ್ಗೆ ಮಾತನಾಡುತ್ತಲೇ, ತುಷ್ಟೀಕರಣದ ರಾಜಕಾರಣ ಮಾಡಿ ಮತ ಕೀಳುವ ತಂತ್ರಗಳು ಬಿಹಾರದಲ್ಲಿ ಹೊಸದೇನಲ್ಲ. ಅಲ್ಲಿನ ಕಿಶನ್‌ಗಂಜ್‌ನಲ್ಲಿ ಮಾತನಾಡುತ್ತಾ, ‘ಈ ದೇಶ ಎಲ್ಲರಿಗೂ ಸೇರಿದ್ದು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಎಲ್ಲರೂ ತ್ಯಾಗ ಮಾಡಿದ್ದಾರೆ. ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ’ ಎಂದು ದೊಡ್ಡ ವರ್ಗವೊಂದರ ಮತ ಸೆಳೆಯುವ ಯತ್ನವನ್ನು ತೇಜಸ್ವಿ ಮಾಡಿದ್ದಾರೆ.

Screenshot_7 ok

ಅವರು ಕೆಲ ದಿನಗಳ ಹಿಂದೆ ಸಹರ್ಸಾ, ಮುಜಫರ್‌ಪುರ, ಉಜಿಯಾರ್‌ಪುರ ಮತ್ತು ದಭಂಗಾದಲ್ಲಿ ಚುನಾವಣಾ ರಾಲಿ ಮಾಡಿದ್ದರು. ಪಟ್ನಾದಿಂದ ಹೊರಟಾಗ ಹೆಲಿಕಾಪ್ಟರ್‌ನಲ್ಲಿ ತಮ್ಮೊಂದಿಗೆ ಇನ್ನೂ ಮೂವರು ನಾಯಕರನ್ನು ಕೂರಿಸಿದ್ದರು. ಅದರ ಫೋಟೋವನ್ನೂ ಬಿಡುಗಡೆ ಮಾಡಲಾ ಯಿತು.

ನಿಶಾದ್ (ಬೆಸ್ತ) ಸಮುದಾಯದ ಮುಖೇಶ್ ಸಾಹ್ನಿ ತೇಜಸ್ವಿ ಪಕ್ಕದಲ್ಲಿದ್ದರು. ಅತ್ಯಂತ ಹಿಂದುಳಿದ ವರ್ಗದ ಇಂಡಿಯನ್ ಇನ್‌ಕ್ಲೂಸಿವ್ ಪಾರ್ಟಿಯ ಅಧ್ಯಕ್ಷ ಐ.ಪಿ. ಗುಪ್ತಾ ಮುಂದಿನ ಸೀಟಿನಲ್ಲಿದ್ದರು. ಆರ್‌ಜೆಡಿಯ ಖಾರಿ ಶೋಯೆಬ್ ಅವರು ಐ.ಪಿ. ಗುಪ್ತಾ ಪಕ್ಕದಲ್ಲಿ ಕೂತಿದ್ದರು. ಬಿಹಾರದ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಆರ್‌ಜೆಡಿಯಲ್ಲಿ ಅತಿದೊಡ್ಡ ಮುಸ್ಲಿಂ ನಾಯಕ ಎಂದು ಪರಿಗಣಿಸ ಲಾಗಿದ್ದರೂ, ತೇಜಸ್ವಿ ಯಾದವ್ ಈ ಬಾರಿ ಯುವ ಮತದಾರರ ಗಮನ ಕೇಂದ್ರೀಕರಿಸಿರುವುದರಿಂದ ಖಾರಿ ಶೋಯೆಬ್‌ರಂತಹ ಯುವ ಮುಸ್ಲಿಂ ನಾಯಕ ತೇಜಸ್ವಿ ಹೆಲಿಕಾಪ್ಟರ್‌ನಲ್ಲಿ ಸ್ಥಾನ ಪಡೆದರು. ಲಾಲೂ ಪ್ರಸಾದ್ ಯಾದವ್‌ರ ರಾಜಕೀಯ ಚಾಲಾಕಿತನಗಳು ಈಗ ಪುತ್ರ ತೇಜಸ್ವಿಯಲ್ಲೂ ಕಾಣುತ್ತಿರುವುದು ಇದಕ್ಕೆ ನಿದರ್ಶನ ಎನ್ನಬಹುದು.

ಮೇಲ್ಜಾತಿ, ಇಬಿಸಿಯತ್ತ ಗಮನ: ಎದುರಾಳಿಗಳು ಏನೇ ಹೇಳಲಿ, ೨೦೨೦ರ ವಿಧಾನಸಭೆ ಚುನಾವಣೆ ಯಲ್ಲಿ ಇಂಡಿ ಒಕ್ಕೂಟದ ಪರ ಅತ್ಯಧಿಕ ಸೀಟುಗಳನ್ನು ಗೆದ್ದ, ದೊಡ್ಡ ಪಕ್ಷವಾಗಿ ಆರ್.ಜೆ.ಡಿ. ಹೊರಹೊಮ್ಮಿದ್ದರೆ ಅದಕ್ಕೆ ತೇಜಸ್ವಿ ಕೊಡುಗೆಯೇ ಮುಖ್ಯವಾಗಿತ್ತು. ೭೦ ಸೀಟುಗಳಲ್ಲಿ ಸ್ಪ‌ರ್ಧಿಸಿದ್ದ ಕಾಂಗ್ರೆಸ್ ಬರೀ ೧೯ ಸೀಟುಗಳಲ್ಲಷ್ಟೇ ಗೆದ್ದಿದ್ದರಿಂದ ಮಹಾಘಟ್ ಬಂಧನ್‌ಗೆ ಅಧಿಕಾರ ಕೈತಪ್ಪಿತ್ತು.

ಲಾಲೂ ಪ್ರಸಾದ್ ಯಾದವ್ ನಂತರ ಯಾದವ-ಮುಸ್ಲಿಮರ ಪ್ರಶ್ನಾತೀತ ನಾಯಕನಾಗಿರುವ ತೇಜಸ್ವಿ, ಈ ಬಾರಿ ಮೇಲ್ಜಾತಿಗಳ ಮತಗಳನ್ನು ಸೆಳೆಯಲೆಂದೇ ಈ ಹಿಂದೆ ಬಿಜೆಪಿ, ಜೆಡಿಯು ಪಕ್ಷಗಳಲ್ಲಿದ್ದ, ಭೂಮಿಹಾರ್ ಸಮುದಾಯಕ್ಕೆ ಸೇರಿದ ಕೆಲ ಮಾಜಿ ಶಾಸಕ, ಸಂಸದರನ್ನೂ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದು ಕೆಲ ಆಯ್ದ ಕ್ಷೇತ್ರಗಳಲ್ಲಿ ಮೇಲ್ಜಾತಿ ಮತಗಳನ್ನು ಮಹಾಘಟ ಬಂಧನದ ಕಡೆಗೆ ತಿರುಗಿಬಲ್ಲದು ಎಂದು ಪಟನಾ ಬಿಜೆಪಿ ಕಚೇರಿಯಲ್ಲಿ ಸಿಕ್ಕ ಕೆಲ ಬೆಂಬಲಿಗರೇ ಒಪ್ಪಿಕೊಂಡರು.

ಮಲ್ಹಾ (ಬೆಸ್ತ) ಸಮುದಾಯಕ್ಕೆ ಡಿಸಿಎಂ: ಮಹಾಘಟ್‌ಬಂಧನದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಈ ಬಾರಿ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿಯ (ವಿಐಪಿ) ಮುಖೇಶ್ ಸಹಾನಿ ಯವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು. ಮುಖೇಶ್ ಸಹಾನಿ ಬಿಹಾರ ಅತಿ ಹಿಂದುಳಿದ ಮಲ್ಹಾ ಸಮುದಾಯದವರು. ಕರ್ನಾಟಕದ ಬೆಸ್ತ, ಗಂಗಾಮತ ಸಮುದಾಯ ದವನ್ನು ಬಿಹಾರದಲ್ಲಿ ಮಲ್ಹಾ ಕಮ್ಯುನಿಟಿ ಎಂದು ಗುರುತಿಸಲಾಗುತ್ತದೆ. ರಾಜ್ಯದ ದೋಣಿಗಾರರು, ಮೀನುಗಾರರು ಎಂದು ಕರೆಯಲ್ಪಡುವ ಇವರನ್ನು ನಿಶಾದ್ ಅಥವಾ ಕೆವಾಟ್ ಎಂದೂ ಕರೆಯುತ್ತಾರೆ.

ರಾಜ್ಯದ ಬಹುಪಾಲು ಕ್ಷೇತ್ರಗಳಲ್ಲಿ ನಿಶಾದ್ ಸಮುದಾಯ ಹಬ್ಬಿರುವುದರಿಂದ ನಮ್ಮ ಮುಖೇಶ್ ಸಹಾನಿ ಡಿಸಿಎಂ ಆಗುತ್ತಾರೆ. ಹೀಗಾಗಿ ನಾವೆಲ್ಲರೂ ಮಹಾಘಟ್‌ಬಂಧನ್‌ಗೆ ಮತ ಹಾಕಬೇಕು ಎಂಬ ಚರ್ಚೆ ಸಮುದಾಯದೊಳಗೆ ವೇಗ ಪಡೆದುಕೊಂಡಿದೆ. ಮಲ್ಹಾ ಸಮುದಾಯ ಶೇ.೨.೬ರಷ್ಟು ಜನಸಂಖ್ಯೆ ಹೊಂದಿರುವುದಲ್ಲದೆ, ಈ ಸಮುದಾಯದೊಂದಿಗೆ ಜೋಡಿಸಿಕೊಂಡಿರುವ ಸಣ್ಣ-ಪುಟ್ಟ ಅತಿ ಹಿಂದುಳಿದ ಜಾತಿಗಳು ಶೇ.೯ರಷ್ಟಿದ್ದು, ಈ ಜಾತಿಗಳ ಮೇಲೂ ಮುಖೇಶ್ ಸಹಾನಿ ಆಯ್ಕೆ ಪ್ರಭಾವ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ೧೦ ವರ್ಷಗಳ ಹಿಂದೆ ಬಿಹಾರ ರಾಜಕಾರಣ ಕ್ಕೆ ಮುಖೇಶ್ ಸಹಾನಿ ಪ್ರವೇಶ ಮಾಡಿದ ನಂತರದಲ್ಲಿ ಗಮನಾರ್ಹ ರಾಜಕೀಯ ಮತ್ತು ಚುನಾ ವಣಾ ಪ್ರಭಾವ ಗಳಿಸಿರುವ ಈ ಸಮುದಾಯ, ರಾಜ್ಯದ ಮಿಥಿಲಾಂಚಲ ಮತ್ತು ಸೀಮಾಂಚಲ ಪ್ರದೇಶಗಳಲ್ಲಿ ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಬಲ್ಲದು.

ಬಡತನ ಮತ್ತು ದಬ್ಬಾಳಿಕೆಯಂತಹ ಶೋಷಣೆಗಳನ್ನು ಎದುರಿಸಿದ ಈ ಸಮುದಾಯ ಮುಖೇಶ್ ಸಹಾನಿ ಪ್ರಭಾವಳಿಯಿಂದಾಗಿ ರಾಜಕೀಯದ ಮುಖ್ಯವೇದಿಕೆಗೆ ಬಂದಿರುವುದು ಈ ಚುನಾವಣೆಯ ಪ್ರಮುಖ ಅಂಶಗಳಲ್ಲೊಂದು. ತನ್ನನ್ನು ತಾನು ಮಲ್ಹಾಗಳ ಮಗ (ಸನ್ ಆಫ್ ಮಲ್ಹಾಸ್) ಎಂದೇ ಬ್ರ್ಯಾಂಡ್ ಮಾಡಿಕೊಂಡಿರುವ ಸಹಾನಿಯವರನ್ನು ಡಿಸಿಎಂ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ಒಪ್ಪಿಗೆ ನೀಡಿರಲಿಲ್ಲ.

ಹೀಗಾಗಿಯೇ, ಸೀಟು ಹಂಚಿಕೆ ವಿಚಾರದಲ್ಲೂ ಗೊಂದಲ ಏರ್ಪಟ್ಟು, ಘೋಷಣೆಯಲ್ಲಿ ವಿಳಂಬ ವಾಗಿತ್ತು. ಆದರೆ ತೇಜಸ್ವಿ ಯಾದವ್ ಮತ್ತು ಸಹಾನಿ ಒತ್ತಡ ತಾಳದೆ ಕಾಂಗ್ರೆಸ್ ಒಪ್ಪಿಕೊಂಡು, ಕೈ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರೇ ಪಟನಾದಲ್ಲಿ ಇದನ್ನು ಘೋಷಿಸಿದರು.

ಮಹಾಘಟ್‌ಬಂಧನ: ಪಾನ್ ಸಮುದಾಯದ ಬಲ ಈ ನಡುವೆ ಬಿಹಾರದ ಪಾನ್ ಸಮುದಾಯದ ನಾಯಕ ಐಪಿ ಗುಪ್ತಾ ಅವರ ಇಂಡಿಯನ್ ಇನ್ ಕ್ಲೂಸಿವ್ ಪಾರ್ಟಿ (ಐಐಪಿ) ಮಹಾಘಟ್‌ಬಂಧನಕ್ಕೆ ಸೇರಿಕೊಂಡಿದ್ದು, ೩ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ೪ ಕ್ಷೇತ್ರಗಳಲ್ಲಿ ಐಐಪಿಯ ಅಭ್ಯರ್ಥಿಗಳು ಆರ್.ಜೆ.ಡಿ. ಮತ್ತು ಕಾಂಗ್ರೆಸ್ ಚಿಹ್ನೆಗಳಲ್ಲಿ ಸ್ಪ‌ರ್ಧಿಸಲಿದ್ದಾರೆ. ಪಾನ್-ತಂತಿ-ತತ್ವ ಸಮುದಾಯ ಗಳಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ರಾಜ್ಯಾದ್ಯಂತ ಹೋರಾಟ ಮಾಡಿ ಬೆಳಕಿಗೆ ಬಂದಿರುವ ಐಪಿ ಗುಪ್ತಾ, ಕೆಲ ದಿನಗಳ ಹಿಂದೆ ಪಟನಾದ ಗಾಂಧಿ ಮೈದಾನದಲ್ಲೂ ದೊಡ್ಡ ಪ್ರಮಾಣದಲ್ಲಿ ಜನ ಸೇರಿ ಪ್ರತಿಭಟನಾ ಸಭೆ ನಡೆಸಿದ್ದರು.

ಬಿಹಾರದಲ್ಲಿ ಪಾನ್ ಸಮುದಾಯ ಸಾಮಾನ್ಯವಾಗಿ ಚೌರಾಸಿಯಾ ಅಥವಾ ಬರೈ ಮತ್ತು ತಮೋಲಿ ಸಮುದಾಯಗಳನ್ನು ಸೂಚಿಸುತ್ತದೆ. ಈ ಸಮುದಾಯದವರು ಸಾಂಪ್ರದಾಯಿಕವಾಗಿ ವೀಳ್ಯದೆಲೆ ಗಳ (ಪಾನ್) ಕೃಷಿ, ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. 2025ರ ಆರಂಭ ದಲ್ಲಿ, ತಂತಿ-ತತ್ವ-ಪಾನ್ ಸಮುದಾಯಗಳನ್ನು ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ವರ್ಗದಿಂದ ಪರಿಶಿಷ್ಟ ಜಾತಿಗಳ ವ್ಯಾಪ್ತಿಗೆ ತರುವ ಬಿಹಾರ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ರದ್ದು ಗೊಳಿಸಿತ್ತು.

1992ರಲ್ಲಿ ಮಂಡಲ್ ಆಯೋಗದ ವರದಿ ಅನುಷ್ಠಾನಗೊಳಿಸಿದ್ದ ವೇಳೆ ಈ ಸಮುದಾಯಗಳನ್ನು ಇಬಿಸಿ (ಅತಿ ಹಿಂದುಳಿದ) ವರ್ಗಕ್ಕೆ ಸೇರಿಸಲಾಯಿತು. ಪಾನ್-ತಂತಿ ಸಮುದಾಯಗಳಿಗೆ ಎಸ್‌ಸಿ ಸ್ಥಾನಮಾನ ಮರುಸ್ಥಾಪಿಸಲು ಮತ್ತು ತಮ್ಮ ಪಕ್ಷ ಸ್ಥಾಪಿಸುವ ಸಲುವಾಗಿಯೇ ಐ.ಪಿ. ಗುಪ್ತಾ ಪಟನಾದಲ್ಲಿ ರಾಲಿ ನಡೆಸಿದ್ದರು. ಮೊದಲು ಪಕ್ಷವನ್ನು ಇಂಡಿಯನ್ ಇನ್‌ಕ್ವಿಲಾಬ್ ಪಾರ್ಟಿ ಎಂದು ನಾಮಕರಣ ಮಾಡಲಾಗಿತ್ತು. ಈಗ ಅದನ್ನು ಇಂಡಿಯನ್ ಇನ್‌ಕ್ಲೂಸಿವ್ ಪಾರ್ಟಿ ಎಂದು ಮರು ನಾಮಕರಣ ಮಾಡಲಾಗಿದೆ.

ಬಿಜೆಪಿಯೇ ಗುರಿ

ವೈಶ್ಯ ಸಮುದಾಯದ ಉಪ ಜಾತಿ ಎಂದು ಪಾನ್ ಗುರುತಿಸಿಕೊಂಡಿದೆ. ವೈಶ್ಯ ಸಮುದಾಯ ಬಿಜೆಪಿ ಬಗ್ಗೆ ಹೆಚ್ಚು ಒಲವು ಹೊಂದಿರುವುದರಿಂದಲೇ ಐಪಿ ಗುಪ್ತಾ ಇಂಡಿ ಒಕ್ಕೂಟದ ಭಾಗವಾಗಿರುವುದು ಮಹತ್ವ ಪಡೆದುಕೊಳ್ಳುತ್ತದೆ. ಬಿಜೆಪಿಯಿಂದ ವೈಶ್ಯ ಸಮುದಾಯದ ಸುಮಾರು ೧೬ ಅಭ್ಯರ್ಥಿಗಳು ಕಣದಲ್ಲಿದ್ದರೆ, 143 ಸೀಟುಗಳಲ್ಲಿ ಸ್ಪ‌ರ್ಧಿಸುತ್ತಿರುವ ಆರ್.ಜೆ.ಡಿ. ಕೂಡ ಸರಿ ಸುಮಾರು ಅಷ್ಟೇ ಪ್ರಮಾಣದ ವೈಶ್ಯರನ್ನು ಅಭ್ಯರ್ಥಿಗಳನ್ನಾಗಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ೨೯ ಸೀಟುಗಳಲ್ಲಿ ಸ್ಪ‌ರ್ಧಿಸುತ್ತಿರುವುದರಿಂದ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ಪರಿಶಿಷ್ಟ ಜಾತಿ ವ್ಯಾಪ್ತಿಯ ಪಾಸ್ವಾನ್ ಸಮುದಾಯ ಎನ್‌ಡಿಎ ಮೈತ್ರಿಕೂಟಕ್ಕೆ ಬಲ ತುಂಬುವ ನಿರೀಕ್ಷೆ ಇದೆ.

ಮದ್ಯ ಕುಡಿಯುವವರು ಎಲ್ಲರೂ ತೇಜಸ್ವಿಗೆ ವೋಟ್ ಹಾಕುತ್ತಾರೆ. ಜಾಸ್ತಿ ದುಡ್ಡು ಕೊಟ್ಟರೂ ‘ದಾರು’ ಇಲ್ಲಿ ಸಿಗುತ್ತಿಲ್ಲ. ಜನ ಹೈರಾಣಾಗಿದ್ದಾರೆ. ಎಲೆಕ್ಷನ್ ಫೈಟ್ ಜೋರಿದೆ. ನಿತೀಶ್ ಗೆಲ್ಲಲೂ ಬಹುದು. ಪ್ರಶಾಂತ್ ಕಿಶೋರ್ ಗೊತ್ತಿಲ್ಲ. ಅವನ ಹೆಸರು ತೆಗೆಯಬೇಡಿ.

- ಅಮರ್ ದೀಪ್ ಗೊಂಡ್, ಟ್ಯಾಕ್ಸಿ ಡ್ರೈವರ್, ಪಟನಾ

*

ನನಗೆ ಪ್ರಶಾಂತ್ ಕಿಶೋರ್ ಭಾಷಣ ತುಂಬಾ ಇಷ್ಟವಾಗುತ್ತದೆ. ಅವರಿಗೆ ಭವಿಷ್ಯ ಇದೆ. ಆದರೆ ನಾನು ಆರ್. ಜೆ.ಡಿ. ಸಪೋರ್ಟ್ ಮಾಡುತ್ತೇನೆ. ಹೊಸಬರು ಸಿಎಂ ಆಗಬೇಕು ಎಂಬುದು ನನ್ನ ಆಸೆ.

- ಹಿರಣ್ಯ ಕುಮಾರ್, ಸೈಕಲ್ ರಿಕ್ಷಾ ಚಾಲಕ, ಪಟನಾ

*

ಬೆಲೆ ಏರಿಕೆ ಮತ್ತು ನಿರುದ್ಯೋಗವೇ ದೊಡ್ಡ ವಿಷಯ. ನನ್ನ ಮಕ್ಕಳಿಗೆ ನೌಕರಿ ಸಿಗುತ್ತಿಲ್ಲ. ಕೆಲಸ ಕೊಡಿಸುವವರು ಅಧಾರಕ್ಕೆ ಬರಬೇಕು. ನಮಗೆ ಅಭಿವೃದ್ಧಿಯಷ್ಟೇ ಜಾತಿ ಕೂಡ ಮುಖ್ಯ. ವೋಟ್ ಹಾಕುವಾಗ ಜಾತಿ ಕೂಡ ನೋಡ್ತೇವೆ.

- ವಿದ್ಯಾ ಭೂಷಣ್ ಕುಮಾರ್,

ವ್ಯಾಪಾರಿ, ಪಟನಾ ನಿವಾಸಿ