ಇವಿ ಬಸ್‌ಗಳ ದೂರಿಗೆ ಬಿಎಂಟಿಸಿಯೇ ಬೇಸ್ತು !
ಬೆಂಗಳೂರಿನಲ್ಲಿ ಪರಿಚಯಿಸಲಾಗಿರುವ ಪರಿಸರ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ದಾರಿ ಮಧ್ಯೆ ಕೆಟ್ಟು ನಿಂತು ಸಮಸ್ಯೆಯನ್ನುಂಟು ಮಾಡುತ್ತಿದ್ದು, ಈ ಬಗ್ಗೆ ಕಳೆದ ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ 13 ಸಾವಿರ ದೂರುಗಳು ಸಾರ್ವಜನಿಕರಿಂದ ದಾಖಲಾಗಿದೆ ಎನ್ನುವುದು ಅಂಕಿ-ಅಂಶದಿಂದ ಬಹಿರಂಗವಾಗಿದೆ.
-
Ashok Nayak
Oct 28, 2025 7:40 AM
ಅಪರ್ಣಾ ಎ.ಎಸ್. ಬೆಂಗಳೂರು
ಮೂರು ವರ್ಷದಲ್ಲಿ 13 ಸಾವಿರ ದೂರು ದಾಖಲು
ಅಧಿಕಾರಿಗಳ ಕೈಗೆ ಸಿಗುತ್ತಿಲ್ಲ, ಹಿಡಿತವಿಲ್ಲ: ಚಾಲಕರು
ಕೇಂದ್ರ ಸರಕಾರದ ಸಹಯೋಗದೊಂದಿಗೆ ಪರಿಸರಕ್ಕೆ ಪೂರಕವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿದ್ದ ಬಿಎಂಟಿಸಿ ಇದೀಗ ಈ ಬಸ್‌ಗಳ ನಿರ್ವಹಣೆ ಹಾಗೂ ಬಸ್‌ಗಳಿಂದ ಬರುತ್ತಿರುವ ದೂರುಗಳಿಗೆ ಬೇಸ್ತು ಬಿದ್ದಿದೆ. ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಇವಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ತೆಗೆದುಕೊಂಡಿದೆ. ಆದ್ದರಿಂದ ಇವಿ ಬಸ್ ಹಾಗೂ ಚಾಲಕರ ಮೇಲೆ ನಿಗಮಕ್ಕಾಗಲಿ, ರಾಜ್ಯ ಸರಕಾರಕ್ಕಾಗಿ ಯಾವುದೇ ಹಿಡಿತವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿ ರುವ ಎಲೆಕ್ಟ್ರಿಕ್ ಬಸ್ ಚಾಲಕರ ಚಾಲನೆ ಹಾಗೂ ಬಸ್‌ಗಳ ನಿರ್ವಹಣೆ ವಿರುದ್ಧ ಸಾವಿರಾರು ದೂರುಗಳು ಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಬಿಎಂಟಿಸಿಯಿದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಪರಿಚಯಿಸಲಾಗಿರುವ ಪರಿಸರ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ದಾರಿ ಮಧ್ಯೆ ಕೆಟ್ಟು ನಿಂತು ಸಮಸ್ಯೆಯನ್ನುಂಟು ಮಾಡುತ್ತಿದ್ದು, ಈ ಬಗ್ಗೆ ಕಳೆದ ಮೂರು ವರ್ಷದ ಅವಽಯಲ್ಲಿ ಬರೋಬ್ಬರಿ 13 ಸಾವಿರ ದೂರುಗಳು ಸಾರ್ವಜನಿಕರಿಂದ ದಾಖಲಾಗಿದೆ ಎನ್ನುವುದು ಅಂಕಿ-ಅಂಶದಿಂದ ಬಹಿರಂಗವಾಗಿದೆ.
2021ರಿಂದ ಗುತ್ತಿಗೆ ಆಧಾರದ ಮೇಲೆ ಒಟ್ಟು 1700 ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಆರಂಭಿಸಿದ್ದು, ಇದು ಸಂಸ್ಥೆಯ ಶೇ.೨೫ರಷ್ಟು ಬಸ್‌ಗಳ ಪ್ರಮಾಣದಲ್ಲಿದೆ. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಲೆಕ್ಕಾಚಾರದಲ್ಲಿ ಬಿಎಂಟಿಸಿ ಇದ್ದರೂ, ಪದೇಪದೆ ಕೇಳಿಬರುತ್ತಿರುವ ದೂರುಗಳಿಂದ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿ ಅಧಿಕಾರಿಗಳಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿರುವ ಬಸ್‌ಗಳು ತಾಂತ್ರಿಕ ದೋಷಗಳಿಂದಾಗಿ ರಸ್ತೆ ಮಧ್ಯೆ ಕೆಟ್ಟು ಹೋಗುತ್ತಿದೆ.
ಇದನ್ನೂ ಓದಿ: Metro, BMTC in profit: ಸರಕಾರದ ಬೊಕ್ಕಸ ತುಂಬಿದ ಸಂಭ್ರಮ
ಇದರೊಂದಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಗೊಂಡಿರುವ ಕಾರಣ ರ‍್ಯಾಶ್ ಡ್ರೈವಿಂಗ್ ಆರೋಪ ಕೇಳಿಬಂದಿದೆ. ಸೂಕ್ತ ತರಬೇತಿ ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಎಲೆಕ್ಟ್ರಿಕ್ ಬಸ್ ವಿರುದ್ಧ ೩ ವರ್ಷದಲ್ಲಿ ಹದಿಮೂರು ಸಾವಿರ ಪ್ರಕರಣಗಳು ದಾಖಲಾಗಿದೆ ಎನ್ನಲಾಗುತ್ತಿದೆ
*
ಬಿಎಂಟಿಸಿಯಲ್ಲಿ ಬಳಕೆ ಮಾಡಲಾಗುತ್ತಿರುವ ಎಲೆಕ್ಟ್ರಿಕ್ ಬಸ್ ಗಳಲ್ಲಿ ಚಾರ್ಜಿಂಗ್ ಹಾಗೂ ಬ್ಯಾಟರಿಯದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬ್ಯಾಟರಿ ಅತಿಯಾಗಿ ಬಿಸಿಯಾಗುವುದು, ಎಸಿ ಕೈಕೊಡುವುದು, ಬೇಗನೆ ಚಾರ್ಜ್ ಕಳೆದುಕೊಳ್ಳುವುದು ಸರಿಯಾಗಿ ಕಾರ್ಯನಿರ್ವಹಿಸದಂತಹ ಸನ್ನಿವೇಶಗಳು ಉಂಟಾಗುತ್ತಿದ್ದು, ಬಸ್‌ಗಳು ಅಲ್ಲಲ್ಲಿ ಹಠಾತ್ತನೆ ನಿಲ್ಲಲು ಕಾರಣವಾಗುತ್ತಿದೆ. ಈ ಒಂದು ತಿಂಗಳ ಅವಧಿಯಲ್ಲಿಯೇ ಸುಮಾರು 281 ಬಸ್‌ಗಳು ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತಿದ್ದು, ಇವುಗಳಲ್ಲಿ ಹೆಚ್ಚಿನವು ಎಲೆಕ್ಟ್ರಿಕ್ ಬಸ್‌ಗಳಾಗಿವೆ ಎನ್ನುವ ಆರೋಪ ಕೇಳಿ ಬಂದಿದೆ.
*
ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಬಸ್‌ಗಳ ವಿರುದ್ಧ ಹೆಚ್ಚುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ, ಕೇಂದ್ರ ಸರಕಾರಕ್ಕೆ ಈ ಸಂಬಂಧ ಪತ್ರ ಬರೆದಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಕೈಗಾರಿಕಾ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ಎಲೆಕ್ಟ್ರಿಕ್ ಬಸ್‌ಗಳು ಪದೇಪದೆ ಕೈಕೊಡುತ್ತಿರುವ ಬಗ್ಗೆ ತನಿಖೆ ನಡೆಸಬೇಕು. ಮುಂದೆ ಟೆಂಡರ್ ಕರೆಯುವಾಗ ತರಬೇತಿ ಹೊಂದಿರುವ ಚಾಲಕರನ್ನೇ ಖಾಸಗಿ ಸಂಸ್ಥೆಗಳು ನೇಮಿಸಲಿವೆ ಎನ್ನುವ ಷರತ್ತು ವಿಧಿಸಬೇಕು ಹಾಗೂ ಕೇಂದ್ರ ಸರಕಾರ, ಬಿಎಂಟಿಸಿ ಹಾಗೂ ಟೆಂಡರ್ ಪಡೆಯುವ ಸಂಸ್ಥೆ ಯನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
*
ದೂರು ನೀಡೋಕೆ ಪ್ರತ್ಯೇಕ ವ್ಯವಸ್ಥೆ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾಪ
೩ ವರ್ಷದಲ್ಲಿ ಸಾರ್ವಜನಿಕರಿಂದ ೧೩ ಸಾವಿರ ದೂರುಗಳು ದಾಖಲು
ಎಲೆಕ್ಟ್ರಿಕ್ ಬಸ್‌ಗಳು ಪದೇಪದೆ ಕೈಕೊಡುತ್ತಿರುವ ಬಗ್ಗೆ ತನಿಖೆಗೆ ಆಗ್ರಹ