ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಕೊಂಬಿಲ್ಲದ ಖಡ್ಗಮೃಗಗಳು: ದಕ್ಷಿಣ ಆಫ್ರಿಕಾದ ಸಂರಕ್ಷಣಾ ಕ್ರಾಂತಿ !

ದಕ್ಷಿಣ ಆಫ್ರಿಕಾ ವಿಶ್ವದ ಅತಿ ಹೆಚ್ಚು ಖಡ್ಗಮೃಗಗಳನ್ನು ಹೊಂದಿರುವ ದೇಶ. ವಿಶ್ವದ ಒಟ್ಟು ಖಡ್ಗಮೃಗಗಳ ಪೈಕಿ ಸುಮಾರು ಶೇ.80ರಷ್ಟು ಆ ದೇಶದಲ್ಲಿವೆ. ಪ್ರಮುಖವಾಗಿ ‘ಬಿಳಿ ಖಡ್ಗಮೃಗ’ ಮತ್ತು ಅಳಿವಿನ ಅಂಚಿನಲ್ಲಿರುವ ‘ಕಪ್ಪು ಖಡ್ಗಮೃಗ’ಗಳು ಇಲ್ಲಿನ ಹೆಮ್ಮೆ. ಇಲ್ಲಿನ ಕ್ರುಗರ್ ನ್ಯಾಷನಲ್ ಪಾರ್ಕ್ ಇವುಗಳ ಅತಿದೊಡ್ಡ ಆವಾಸಸ್ಥಾನ.

ಕೊಂಬಿಲ್ಲದ ಖಡ್ಗಮೃಗಗಳು: ದಕ್ಷಿಣ ಆಫ್ರಿಕಾದ ಸಂರಕ್ಷಣಾ ಕ್ರಾಂತಿ !

-

ಇದೇ ಅಂತರಂಗ ಸುದ್ದಿ

ಮೊನ್ನೆ ದಕ್ಷಿಣ ಆಫ್ರಿಕಾಕ್ಕೆ ಹೋದಾಗ ನಮ್ಮ ಸಫಾರಿ ಡ್ರೈವರ್-ಗೈಡ್ ಒಂದು ಸಂಗತಿ ಹೇಳಿದಾಗ, ಆ ಬಗ್ಗೆ ಆತನ ಜತೆಗೆ ವಿವರವಾಗಿ ಮಾತಾಡಲೇಬೇಕು ಎಂದು ಅನಿಸಿತು. ನಮ್ಮ ಸಫಾರಿ ವಾಹನದ ಪಕ್ಕದಲ್ಲಿ ಹಾದುಹೋಗುತ್ತಿದ್ದ ಖಡ್ಗಮೃಗಗಳ ( Rhinos )ನ್ನು ನೋಡಿ, ‘ಇವುಗಳಿಗೇಕೆ ಕೊಂಬುಗಳಿಲ್ಲ?’ ಎಂಬ ಪ್ರಶ್ನೆಗೆ ಆತ, “ಸರಕಾರದ ಆದೇಶದಂತೆ ಈ ಖಡ್ಗಮೃಗಗಳ ಕೊಂಬುಗಳನ್ನು ‘ಡಿ-ಹಾರ್ನಿಂಗ್’ ( De-horning ) ಮಾಡಿ ತೆಗೆಯಲಾಗಿದೆ" ಎಂದು ಹೇಳಿದ.

ಆಗ ನನ್ನ ಕುತೂಹಲ ಇಮ್ಮಡಿಯಾಯಿತು. ಸೀಟಿಗೆ ಒರಗಿಕೊಂಡಿದ್ದ ನಾನು ಅವನ ಸೀಟಿನ ಕಡೆಗೆ ವಾಲಿ, “ಹಾಗಂದ್ರೆ ಏನು? ಸ್ವಲ್ಪ ವಿವರವಾಗಿ ಹೇಳು" ಎಂದು ಹೇಳಿದೆ. ಆಫ್ರಿಕಾದ ‘ಬಿಗ್ ಫೈವ್’ ಪ್ರಾಣಿಗಳ ಪೈಕಿ ಒಂದಾಗಿರುವ ಖಡ್ಗಮೃಗಗಳ ಜೀವ ಉಳಿಸಲು ಅಲ್ಲಿನ ಸರಕಾರ ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ತೆಗೆದುಕೊಂಡಿರುವ ಅತ್ಯಂತ ಕಠಿಣವಾದ ಆದರೆ ಅನಿವಾರ್ಯವಾದ ಕ್ರಮವೇ ‘ಡಿ-ಹಾರ್ನಿಂಗ್’.

ದಕ್ಷಿಣ ಆಫ್ರಿಕಾ ವಿಶ್ವದ ಅತಿ ಹೆಚ್ಚು ಖಡ್ಗಮೃಗಗಳನ್ನು ಹೊಂದಿರುವ ದೇಶ. ವಿಶ್ವದ ಒಟ್ಟು ಖಡ್ಗಮೃಗಗಳ ಪೈಕಿ ಸುಮಾರು ಶೇ.80ರಷ್ಟು ಆ ದೇಶದಲ್ಲಿವೆ. ಪ್ರಮುಖವಾಗಿ ‘ಬಿಳಿ ಖಡ್ಗ ಮೃಗ’ ಮತ್ತು ಅಳಿವಿನ ಅಂಚಿನಲ್ಲಿರುವ ‘ಕಪ್ಪು ಖಡ್ಗಮೃಗ’ಗಳು ಇಲ್ಲಿನ ಹೆಮ್ಮೆ. ಇಲ್ಲಿನ ಕ್ರುಗರ್ ನ್ಯಾಷನಲ್ ಪಾರ್ಕ್ ಇವುಗಳ ಅತಿದೊಡ್ಡ ಆವಾಸಸ್ಥಾನ.

ಆದರೆ, ಕಳೆದ ಎರಡು ದಶಕಗಳಿಂದ ಇಲ್ಲಿ ‘ಪೋಚಿಂಗ್’ ಅಥವಾ ಅಕ್ರಮ ಬೇಟೆಗಾರರ ಹಾವಳಿ ಮಿತಿಮೀರಿದೆ. ಕಳ್ಳಬೇಟೆಗಾರರು ಖಡ್ಗಮೃಗಗಳನ್ನು ಕೊಲ್ಲುವುದು ಅವುಗಳ ಮಾಂಸಕ್ಕಲ್ಲ, ಬದಲಾಗಿ ಅವುಗಳ ಮೂಗಿನ ಮೇಲಿರುವ ಅಮೂಲ್ಯವಾದ ಕೊಂಬಿಗಾಗಿ. ಡಿ-ಹಾರ್ನಿಂಗ್ ಏಕೆ ಮಾಡಲಾಗುತ್ತಿದೆ? ಖಡ್ಗಮೃಗದ ಕೊಂಬು ಕೆರಾಟಿನ್ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ (ನಮ್ಮ ಉಗುರು ಮತ್ತು ಕೂದಲು ಕೂಡ ಇದೇ ವಸ್ತುವಿನಿಂದ ಮಾಡಲ್ಪಟ್ಟಿವೆ).

ಇದನ್ನೂ ಓದಿ: Vishweshwar Bhat Column: ಮರುಭೂಮಿಯಲ್ಲಿ ʼಸನ್‌ ಸಿಟಿʼ ಎಂಬ ಮಹಾಸಾಮ್ರಾಜ್ಯ ಕಟ್ಟಿದ ಕೆರ್ಜ್ನರ್ ಸಾಹಸಗಾಥೆ !

ಏಷ್ಯಾದ ಕೆಲವು ದೇಶಗಳಲ್ಲಿ, ವಿಶೇಷವಾಗಿ ವಿಯೆಟ್ನಾಂ ಮತ್ತು ಚೀನಾದಲ್ಲಿ, ಈ ಕೊಂಬಿಗೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ. ಇದು ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಮತ್ತು ಪ್ರತಿಷ್ಠೆಯ ಸಂಕೇತ ಎಂಬ (ತಪ್ಪು) ನಂಬಿಕೆ ಅಲ್ಲಿನ ಜನರಲ್ಲಿದೆ. ಖಡ್ಗಮೃಗದ ಒಂದು ಕೆ.ಜಿ. ಕೊಂಬಿನ ಬೆಲೆ ಅಂತಾರಾಷ್ಟ್ರೀಯ ಕಪ್ಪು ಮಾರುಕಟ್ಟೆಯಲ್ಲಿ ಸುಮಾರು 60 ಸಾವಿರ ಡಾಲರ್ (ಸುಮಾರು 50 ಲಕ್ಷ ರುಪಾಯಿ). ಈ ಹಣದ ಆಸೆಗೆ ಬಿದ್ದ ಬೇಟೆಗಾರರು ಖಡ್ಗಮೃಗಗಳನ್ನು ಕ್ರೂರವಾಗಿ ಕೊಲ್ಲುತ್ತಾರೆ.

ಇದನ್ನು ತಡೆಯಲು ಬೇರೆ ದಾರಿಯಿಲ್ಲದೇ, ‘ಕೊಂಬೇ ಇಲ್ಲದಿದ್ದರೆ ಬೇಟೆಗಾರರು ಬರಲು ಸಾಧ್ಯವಿಲ್ಲ’ ಎಂದು ಡಿ-ಹಾರ್ನಿಂಗ್ ಮಾಡಲಾಗುತ್ತಿದೆ. ಹಾಗಾದರೆ ಡಿ-ಹಾರ್ನಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದು ಅತ್ಯಂತ ವ್ಯವಸ್ಥಿತ ಮತ್ತು ವೈಜ್ಞಾನಿಕ ಕಾರ್ಯಾ ಚರಣೆ. ಇದರಲ್ಲಿ ಕೆಲವು ಹಂತಗಳಿವೆ. ಮೊದಲು ಹೆಲಿಕಾಪ್ಟರ್ ಮೂಲಕ ಕಾಡಿನಲ್ಲಿರುವ ಖಡ್ಗಮೃಗಗಳನ್ನು ಪತ್ತೆಹಚ್ಚಲಾಗುತ್ತದೆ.

ನಂತರ ತಜ್ಞ ಪಶುವೈದ್ಯರು ಅದಕ್ಕೆ ಅರಿವಳಿಕೆ ಗುಂಡು (Tranquilizer dart) ಹೊಡೆಯು ತ್ತಾರೆ. ಪ್ರಾಣಿ ಪ್ರಜ್ಞೆ ತಪ್ಪಿ ಬಿದ್ದ ಕೂಡಲೇ ಅದರ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚ ಲಾಗುತ್ತದೆ ಮತ್ತು ಕಿವಿಗಳಿಗೆ ಹತ್ತಿ ಇಡಲಾಗುತ್ತದೆ. ಪ್ರಾಣಿಗೆ ಸುತ್ತಲಿನ ಶಬ್ದದಿಂದ ಒತ್ತಡ ವಾಗದಂತೆ ತಡೆಯುವುದು ಉದ್ದೇಶ.

ನಂತರ ‘ಚೈನ್ ಸಾ’ ಅಥವಾ ಗರಗಸದ ಮೂಲಕ ಕೊಂಬನ್ನು ಸುರಕ್ಷಿತವಾಗಿ ಕತ್ತರಿಸ ಲಾಗುತ್ತದೆ. ಕೊಂಬಿನ ಬುಡದಲ್ಲಿ ರಕ್ತನಾಳಗಳಿರುತ್ತವೆ, ಆದ್ದರಿಂದ ಬುಡದಿಂದ ಸುಮಾರು 5-7 ಸೆಂ.ಮೀ ಮೇಲಿಂದ ಎಚ್ಚರಿಕೆಯಿಂದ ಕತ್ತರಿಸಲಾಗುತ್ತದೆ. ಕತ್ತರಿಸಿದ ನಂತರ ಉಳಿದ ಭಾಗವನ್ನು ಉಜ್ಜುವ ಯಂತ್ರದ ಮೂಲಕ ನಯಗೊಳಿಸಲಾಗುತ್ತದೆ.

rhe ok

ಅಂತಿಮವಾಗಿ ಅರಿವಳಿಕೆ ಮುರಿಯುವ ಮದ್ದನ್ನು (Reversal agent) ನೀಡಲಾಗುತ್ತದೆ. ಇದು ಅತ್ಯಂತ ನಿರ್ಣಾಯಕ ಹಂತ. ಪ್ರಾಣಿ ಎದ್ದು ಯಾವುದೇ ತೊಂದರೆಯಿಲ್ಲದೇ ಕಾಡಿ ನೊಳಗೆ ನಡೆಯತೊಡಗುತ್ತದೆ. ಇಡೀ ಪ್ರಕ್ರಿಯೆ ಕೇವಲ 15-20 ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಇದರ ವಿಶೇಷ ಅಂದರೆ ಔಷಧ ನೀಡಿದ ಕೆಲವೇ ನಿಮಿಷಗಳಲ್ಲಿ ಪ್ರಾಣಿಯು ಮರಳಿ ಪ್ರಜ್ಞೆ ಪಡೆಯುತ್ತದೆ.

ಅರಿವಳಿಕೆಯಿಂದ ಉಂಟಾಗಬಹುದಾದ ಉಸಿರಾಟದ ತೊಂದರೆ ಅಥವಾ ಇತರ ಅಡ್ಡ ಪರಿಣಾಮಗಳನ್ನು ತಡೆಯಲು ಈ ವೇಗದ ಚೇತರಿಕೆ ಅತಿ ಮುಖ್ಯ. ಯಾವುದೇ ಅಡ್ಡ ಪರಿಣಾಮವಿಲ್ಲದೆ ಪ್ರಾಣಿ ಎದ್ದು ನಿಂತು, ಸಹಜವಾಗಿ ಕಾಡಿನೊಳಗೆ ನಡೆಯತೊಡಗಿದಾಗ ಮಾತ್ರ ಆ ಕಾರ್ಯಾಚರಣೆ ಯಶಸ್ವಿ ಎಂದು ಪರಿಗಣಿಸಲಾಗುತ್ತದೆ.

ಇದು ಆಧುನಿಕ ಪಶುವೈದ್ಯಕೀಯ ವಿಜ್ಞಾನದ ಚಮತ್ಕಾರವೇ ಸರಿ. ಇದರಿಂದ ಖಡ್ಗಮೃಗ ಗಳಿಗೆ ನೋವಾಗುತ್ತದೆಯೇ? ಇಲ್ಲ. ಇದು ನಮಗೆ ಉಗುರು ಕತ್ತರಿಸಿದಷ್ಟೇ ಸಾಮಾನ್ಯ. ಕೊಂಬಿನಲ್ಲಿ ನರಗಳಿಲ್ಲದ ಕಾರಣ ಕತ್ತರಿಸುವಾಗ ಅದಕ್ಕೆ ನೋವಾಗುವುದಿಲ್ಲ. ಆದರೆ, ಪ್ರಾಣಿಯನ್ನು ಅರಿವಳಿಕೆ ನೀಡಿ ನೆಲಕ್ಕೆ ಉರುಳಿಸುವುದು ಅದಕ್ಕೆ ಮಾನಸಿಕವಾಗಿ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು.

ಕಳ್ಳಬೇಟೆಗಾರರ ಕೊಡಲಿಯ ಏಟಿನಿಂದ ನರಳಿ ಸಾಯುವ ಭೀಕರ ನೋವಿಗೆ ಹೋಲಿಸಿ ದರೆ, ಈ ಇಪ್ಪತ್ತು ನಿಮಿಷಗಳ ‘ನೋವುರಹಿತ’ ಶಸ್ತ್ರಚಿಕಿತ್ಸೆ ಆ ಪ್ರಾಣಿಯ ಪಾಲಿಗೆ ಜೀವದಾಯಕವೇ ಸರಿ. ಡಿ-ಹಾರ್ನಿಂಗ್‌ನಿಂದ ಆಗುವ ಲಾಭಗಳೇನು? ಕೊಂಬು ಇಲ್ಲದ ಪ್ರಾಣಿಯನ್ನು ಕೊಲ್ಲಲು ಬೇಟೆಗಾರರು ತಮ್ಮ ಜೀವವನ್ನು ಪಣಕ್ಕಿಟ್ಟು ಕಾಡಿಗೆ ಬರುವು ದಿಲ್ಲ. ಇದರಿಂದ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ದಕ್ಷಿಣ ಆಫ್ರಿಕಾದ ಕ್ರುಗರ್ ನ್ಯಾಷನಲ್ ಪಾರ್ಕ್ ಮತ್ತು ಖಾಸಗಿ ಮೀಸಲು ಅರಣ್ಯಗಳಲ್ಲಿ ಡಿ-ಹಾರ್ನಿಂಗ್ ಮಾಡಿದ ನಂತರ ಕಳ್ಳಬೇಟೆಯ ಪ್ರಮಾಣ ಶೇ.70ರಷ್ಟು ಕಡಿಮೆಯಾಗಿದೆ. ಡಿ-ಹಾರ್ನಿಂಗ್ ಮಾಡುವುದರಲ್ಲಿ ಕೆಲವು ಸವಾಲುಗಳೂ ಇವೆ. ಮನುಷ್ಯನ ಉಗುರಿನಂತೆ ಖಡ್ಗಮೃಗದ ಕೊಂಬು ಕೂಡ ನಿರಂತರವಾಗಿ ಬೆಳೆಯುತ್ತದೆ. ಆದ್ದರಿಂದ ಪ್ರತಿ 18 ರಿಂದ 24 ತಿಂಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕಾಗುತ್ತದೆ.

ಇದು ತುಂಬಾನೇ ದುಬಾರಿ ಕೆಲಸ. ಖಡ್ಗಮೃಗಗಳು ತಮ್ಮ ಮರಿಗಳನ್ನು ಸಿಂಹ ಅಥವಾ ಹೈನಾಗಳಿಂದ ರಕ್ಷಿಸಲು ಕೊಂಬನ್ನು ಬಳಸುತ್ತವೆ. ಕೊಂಬಿಲ್ಲದಿದ್ದಾಗ ಅವುಗಳಿಗೆ ಆತ್ಮ ರಕ್ಷಣೆ ಕಷ್ಟವಾಗಬಹುದು. ಕಾಡಿನಲ್ಲಿ ಗಂಡು ಖಡ್ಗಮೃಗಗಳು ತಮ್ಮ ಪ್ರದೇಶವನ್ನು ಗುರುತಿಸಲು ಮತ್ತು ಹೆಣ್ಣನ್ನು ಆಕರ್ಷಿಸಲು ಕೊಂಬನ್ನು ಪ್ರದರ್ಶಿಸುತ್ತವೆ.

ಕೊಂಬು ಇಲ್ಲದಿರುವುದು ಅವುಗಳ ನೈಸರ್ಗಿಕ ವರ್ತನೆಯ ಮೇಲೆ ಸ್ವಲ್ಪ ಪ್ರಭಾವ ಬೀರಬಹುದು. ಒಂದು ಕಡೆ ವೈದ್ಯರು ಶಾಸ್ತ್ರೀಯವಾಗಿ ಡಿ-ಹಾರ್ನಿಂಗ್ ಮಾಡಿದರೆ, ಇನ್ನೊಂದೆಡೆ ಕಳ್ಳಬೇಟೆಗಾರರು ಅತ್ಯಂತ ಕ್ರೂರವಾಗಿ ವರ್ತಿಸುತ್ತಾರೆ. ಅವರು ಅರಿವಳಿಕೆ ನೀಡುವುದಿಲ್ಲ. ಅದರ ಬದಲು, ಪ್ರಾಣಿಯ ಮುಖದ ಅರ್ಧ ಭಾಗವನ್ನೇ ಕೊಡಲಿಯಿಂದ ಸೀಳಿ ಕೊಂಬನ್ನು ಕಿತ್ತುಕೊಳ್ಳುತ್ತಾರೆ.

ಇದರಿಂದ ಖಡ್ಗಮೃಗ ಅತಿಯಾದ ರಕ್ತಸ್ರಾವದಿಂದ ಕಾಡಿನಲ್ಲಿ ನರಳಿ ಸಾಯುತ್ತದೆ. ಈ ಕ್ರೌರ್ಯವನ್ನು ತಪ್ಪಿಸಲು ಸರಕಾರವೇ ಮುನ್ನೆಚ್ಚರಿಕೆಯಾಗಿ ಡಿ-ಹಾರ್ನಿಂಗ್ ಮಾಡುತ್ತಿರು ವುದು ಸ್ವಾಗತಾರ್ಹ. ಆದರೂ ಕಾಲಕಾಲಕ್ಕೆ ಈ ವಿಷಯ ಪರ-ವಿರೋಧಗಳ ಅಬ್ಬರದಲ್ಲಿ ವಿವಾದಕ್ಕೆ ಗುರಿಯಾಗುವುದುಂಟು.

ದಕ್ಷಿಣ ಆಫ್ರಿಕಾದ ಸರಕಾರ ಈಗ ತನ್ನ ಬಹುತೇಕ ರಾಷ್ಟ್ರೀಯ ಉದ್ಯಾನಗಳಲ್ಲಿ ಈ ಯೋಜನೆಯನ್ನು ಕಡ್ಡಾಯಗೊಳಿಸಿದೆ. ಖಾಸಗಿ ಜಮೀನುಗಳಲ್ಲಿ ಖಡ್ಗಮೃಗಗಳನ್ನು ಸಾಕುವ ಮಾಲೀಕರಿಗೂ ಡಿ-ಹಾರ್ನಿಂಗ್ ಮಾಡಲು ಅನುಮತಿ ನೀಡಲಾಗಿದೆ. ಸಂಗ್ರಹಿಸಿದ ಕೊಂಬುಗಳನ್ನು ಸರಕಾರದ ಲಾಕರ್‌ಗಳಲ್ಲಿ ಭದ್ರವಾಗಿಡಲಾಗುತ್ತದೆ (ಇವುಗಳ ಮಾರಾಟಕ್ಕೆ ಅಂತಾರಾಷ್ಟ್ರೀಯ ನಿಷೇಧವಿದೆ).

ಕೆಲವೊಮ್ಮೆ ಖಡ್ಗಮೃಗಗಳು ಒಂದಕ್ಕೊಂದು ಜಗಳವಾಡುವಾಗ ಕೊಂಬಿನಿಂದ ಚುಚ್ಚಿ ಗಂಭೀರ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಕೊಂಬು ಇಲ್ಲದಿದ್ದರೆ ಇಂಥ ಅನಾಹುತ ಗಳನ್ನು ತಪ್ಪಿಸಬಹುದು.

ಅಲ್ಲದೇ, ಕೊಂಬಿನಿಂದ ಗಾಯಗೊಂಡ ಖಡ್ಗಮೃಗ ಮತ್ತು ಇತರ ಪ್ರಾಣಿಗಳ ಚರ್ಮದ ಗುಣಮಟ್ಟ ಕಡಿಮೆಯಾಗುತ್ತದೆ. ಗಾಯಗಳಿಲ್ಲದ ಚರ್ಮಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಕೊಂಬುಗಳನ್ನು ತೆಗೆದರೆ, ಸಾಗಾಣಿಕೆಯ ಸಮಯದಲ್ಲಿ ಪ್ರಾಣಿಗಳಿಗೆ ಹಾನಿಯಾಗುವುದು ಕಡಿಮೆಯಾಗುತ್ತದೆ.

ಖಡ್ಗಮೃಗಗಳ ಕೊಂಬು ಕತ್ತರಿಸುವುದು ಕೇಳಲು ಸಂಕಟವೆನಿಸಿದರೂ, ಇದು ‘ಅನಿವಾರ್ಯ ವಾದ ಕೆಡುಕು’. ಮನುಷ್ಯನ ದುರಾಸೆಯಿಂದ ಒಂದು ಅದ್ಭುತ ಜೀವಿ ಭೂಮಿಯಿಂದ ಅಳಿಸಿಹೋಗಬಾರದು ಎಂಬ ಏಕೈಕ ಉದ್ದೇಶದಿಂದ ಈ ಕಠಿಣ ಕ್ರಮವನ್ನು ತೆಗೆದುಕೊಳ್ಳ ಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಡ್ಗಮೃಗದ ಕೊಂಬಿಗೆ ಇರುವ ಬೇಡಿಕೆ ಕುಸಿಯುವವರೆಗೆ ಈ ಪ್ರಾಣಿಗಳು ತಮ್ಮ ‘ಕಿರೀಟ’ವನ್ನು ಕಳೆದುಕೊಳ್ಳುತ್ತಲೇ ಇರಬೇಕಾದ ಪರಿಸ್ಥಿತಿ ಇದೆ.

ಡಿ-ಹಾರ್ನಿಂಗ್ ಎನ್ನುವುದು ಕೇವಲ ಒಂದು ಪ್ರಕ್ರಿಯೆಯಲ್ಲ, ಅದು ಸಮಗ್ರ ಪಶು ನಿರ್ವಹಣೆಯ ಒಂದು ಭಾಗ. ಕಿರೀಟ ಹೋದರೂ ಪರವಾಗಿಲ್ಲ, ಖಡ್ಗಮೃಗಗಳ ಜೀವ ಉಳಿದರೆ ಸಾಕು ಎಂಬುದು ಇದರ ಹಿಂದಿರುವ ಆಶಯ. ಖಡ್ಗಮೃಗಗಳ ‘ಡಿ-ಹಾರ್ನಿಂಗ್’ ಚಟುವಟಿಕೆಯು ಕ್ರೌರ್ಯದ ವಿರುದ್ಧದ ವೈಜ್ಞಾನಿಕ ಸಮರವೂ ಹೌದು.

ಇದು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಿ ಅವುಗಳ ಆರೋಗ್ಯವನ್ನು ಕಾಪಾಡುತ್ತದೆ. ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ, ಸರಿಯಾದ ಸಮಯದಲ್ಲಿ ಮತ್ತು ಪಶುವೈದ್ಯರ ಮಾರ್ಗದರ್ಶನದಲ್ಲಿ ಇದನ್ನು ಮಾಡುವುದರಿಂದ ಪಶುಸಂಗೋಪನೆಯಲ್ಲಿ ಹೆಚ್ಚಿನ ಯಶಸ್ಸು ಕಾಣಬಹುದು.

ದೇಶ ಒಂದು, ಭಾಷೆ ಹನ್ನೆರಡು

ದಕ್ಷಿಣ ಆಫ್ರಿಕಾವನ್ನು ಪ್ರಪಂಚದಾದ್ಯಂತ ‘ರೇನ್‌ಬೋ ನೇಷನ್’ ಅಥವಾ ‘ಮಳೆಬಿಲ್ಲಿನ ರಾಷ್ಟ್ರ’ ಎಂದು ಕರೆಯಲಾಗುತ್ತದೆ. ಮಳೆಬಿಲ್ಲಿನಲ್ಲಿ ಹೇಗೆ ವಿವಿಧ ಬಣ್ಣಗಳು ಪರಸ್ಪರ ಬೆರೆತು ಒಂದು ಸುಂದರ ದೃಶ್ಯವನ್ನು ಸೃಷ್ಟಿಸುತ್ತವೆಯೋ, ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ ವಿವಿಧ ಬುಡಕಟ್ಟುಗಳು, ಸಂಸ್ಕೃತಿಗಳು ಮತ್ತು ಭಾಷೆಗಳು ಬೆರೆತು ಒಂದು ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿವೆ.

ದಕ್ಷಿಣ ಆಫ್ರಿಕಾದ 12 ಅಧಿಕೃತ ಭಾಷೆಗಳು ಕೇವಲ ಸಂವಹನದ ಮಾಧ್ಯಮವಲ್ಲ, ಅವು ಆ ದೇಶದ ಕರಾಳ ಇತಿಹಾಸ, ಸಂಘರ್ಷ, ವಿಮೋಚನೆ ಮತ್ತು ಅಂತಿಮವಾಗಿ ಸಾಧಿಸಿದ ಸಮಾನತೆಯ ಜೀವಂತ ಸಾಕ್ಷಿಗಳಾಗಿವೆ.

ದಕ್ಷಿಣ ಆಫ್ರಿಕಾದ ಇತಿಹಾಸವು ಭಾಷೆಯ ಮೇಲೆ ನಡೆದ ದೌರ್ಜನ್ಯದಿಂದ ಕೂಡಿದೆ. ವರ್ಣ ಭೇದ ನೀತಿಯ (Apartheid)ಕಾಲದಲ್ಲಿ, ಬಿಳಿ ಅಲ್ಪಸಂಖ್ಯಾತ ಸರಕಾರವು ಇಂಗ್ಲಿಷ್ ಮತ್ತು ಆಫ್ರಿಕಾ ಭಾಷೆಗಳನ್ನು ಮಾತ್ರ ಅಧಿಕೃತ ಎಂದು ಘೋಷಿಸಿತ್ತು. ಅಲ್ಲಿನ ಮೂಲ ನಿವಾಸಿ ಗಳಾದ ಕಪ್ಪು ವರ್ಣೀಯರ ಭಾಷೆಗಳಾದ ಜೂಲು, ಕ್ಸೋಸಾ ಅಥವಾ ಸೆಸೊಥೊ ಭಾಷೆಗಳಿಗೆ ಯಾವುದೇ ಮಾನ್ಯತೆ ಇರಲಿಲ್ಲ.

1976ರ ‘ಸೊವೆಟೊ ದಂಗೆ’ ಇದಕ್ಕೆ ಪ್ರಮುಖ ಉದಾಹರಣೆ. ಆಫ್ರಿಕಾ ಭಾಷೆಯನ್ನು ಕಪ್ಪು ವರ್ಣೀಯ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸಿದಾಗ, ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು. ಈ ಭಾಷಾ ಚಳವಳಿಯು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿತು. ಅಂದರೆ, ದಕ್ಷಿಣ ಆಫ್ರಿಕಾದಲ್ಲಿ ಭಾಷೆ ಎಂಬುದು ಅಸ್ಮಿತೆಯ ಹೋರಾಟವಾಗಿತ್ತು.

1994ರಲ್ಲಿ ನೆಲ್ಸನ್ ಮಂಡೇಲಾ ಅವರ ನೇತೃತ್ವದಲ್ಲಿ ಮೊದಲ ಪ್ರಜಾಪ್ರಭುತ್ವ ಸರಕಾರ ರಚನೆಯಾದಾಗ, ಅವರು ಮಾಡಿದ ಮೊದಲ ಕೆಲಸವೆಂದರೆ ದೇಶದ ಎಲ್ಲ ಜನರನ್ನು ಸಮಾನವಾಗಿ ಕಾಣುವುದು. 1996ರ ಸಂವಿಧಾನವು 11 ಭಾಷೆಗಳಿಗೆ (ಇತ್ತೀಚೆಗೆ 12) ಅಧಿಕೃತ ಸ್ಥಾನಮಾನ ನೀಡಿತು. ಇದು ಜಗತ್ತಿಗೆ ನೀಡಿದ ದೊಡ್ಡ ಸಂದೇಶ ಅಂದರೆ ‘ಬಲಿಷ್ಠ ರಾಷ್ಟ್ರ ಕ್ಕೆ ಒಂದು ಭಾಷೆಯ ಅಗತ್ಯವಿಲ್ಲ, ಬದಲಿಗೆ ವೈವಿಧ್ಯದ ಗೌರವದ ಅಗತ್ಯವಿದೆ’ ಎಂಬುದು. ಈ 12 ಭಾಷೆಗಳು ಯಾವುವೆಂದರೆ- ಜೂಲು ಮತ್ತು ಕ್ಸೋಸಾ ಬಹುಸಂಖ್ಯಾತರು ಮಾತ ನಾಡುವ ಗೌರವದ ಭಾಷೆಗಳು. ಆಫ್ರಿಕಾ ಒಂದು ಕಾಲದಲ್ಲಿ ‘ದಮನಕಾರಿಯ ಭಾಷೆ’ ಎನ್ನಿಸಿಕೊಂಡಿದ್ದರೂ, ಇಂದು ಅದನ್ನು ದೇಶದ ಭಾಗವಾಗಿ ಒಪ್ಪಿಕೊಳ್ಳಲಾಗಿದೆ.

ಇಂಗ್ಲಿಷ್ ಜಾಗತಿಕ ಸಂಪರ್ಕದ ಕೊಂಡಿಯಾಗಿದೆ. ಸೆಸೊಥೊ, ಸೆಪೆಡಿ, ಸೆಟ್ವಾನಾ, ಸಿಸ್ವಾಟಿ, ಇಸಿನೆಡೆಬೆಲೆ, ಕ್ಸಿಟ್ಸೊಂಗಾ ಮತ್ತು ಟಿಶಿವ್ಹೆಂಡಾ ಭಾಷೆಗಳು ವಿವಿಧ ಬುಡಕಟ್ಟುಗಳ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುತ್ತವೆ.

2023ರಲ್ಲಿ ಸೇರ್ಪಡೆಯಾದ ಸೈನ್ ಲ್ಯಾಂಗ್ವೇಜ್ ಭಾಷೆ, ವಿಕಲಚೇತನರನ್ನೂ ಒಳಗೊಳ್ಳುವ ಉನ್ನತ ಗುಣವನ್ನು ತೋರಿಸುತ್ತದೆ.

ಒಂದು ದೇಶದಲ್ಲಿ 12 ಅಧಿಕೃತ ಭಾಷೆಗಳಿರುವುದು ಆಡಳಿತಾತ್ಮಕವಾಗಿ ದೊಡ್ಡ ಸವಾಲು. ನ್ಯಾಯಾಲಯಗಳು, ಸಂಸತ್ತು, ಶಿಕ್ಷಣ ಮತ್ತು ಮಾಧ್ಯಮಗಳಲ್ಲಿ ಇಷ್ಟೊಂದು ಭಾಷೆಗಳನ್ನು ನಿರ್ವಹಿಸುವುದು ಕಷ್ಟ. ಆದರೂ ದಕ್ಷಿಣ ಆಫ್ರಿಕಾ ಇದನ್ನು ಮಾಡುತ್ತಿದೆ. ಇದು ಕೇವಲ ಕಾನೂನಲ್ಲ, ಇದು ಸಹಿಷ್ಣುತೆ.

ಒಬ್ಬ ನಾಗರಿಕನು ಸರಕಾರಿ ಕಚೇರಿಗೆ ಹೋದಾಗ ತನ್ನ ಮಾತೃಭಾಷೆಯಲ್ಲಿ ವ್ಯವಹರಿಸುವ ಹಕ್ಕನ್ನು ಹೊಂದಿರುತ್ತಾನೆ. ಇದು ಪ್ರಜೆಗಳಿಗೆ ತಮ್ಮ ದೇಶದ ಮೇಲೆ ಅಭಿಮಾನ ಮೂಡು ವಂತೆ ಮಾಡುತ್ತದೆ. ‘ನನ್ನ ಭಾಷೆಗೆ ಬೆಲೆ ಇದೆ ಎಂದರೆ, ನನ್ನ ಅಸ್ತಿತ್ವಕ್ಕೆ ಬೆಲೆ ಇದೆ’ ಎಂಬ ಭಾವನೆ ಅಲ್ಲಿನ ಜನರಲ್ಲಿ ಮೂಡಿದೆ.

ದಕ್ಷಿಣ ಆಫ್ರಿಕಾದ ರಾಷ್ಟ್ರಗೀತೆ ‘ನ್ಕೋಸಿ ಸಿಕೆಲೆಲ್ ಇ ಆಫ್ರಿಕಾ’ ಇಡೀ ಜಗತ್ತಿಗೆ ಒಂದು ಅದ್ಭುತ ಪಾಠ. ಇದು ಐದು ವಿಭಿನ್ನ ಭಾಷೆಗಳ ಸಮ್ಮಿಲನ. ಒಬ್ಬ ನಾಗರಿಕ ತನ್ನ ರಾಷ್ಟ್ರ ಗೀತೆಯನ್ನು ಹಾಡುವಾಗ ಅಕ್ಕಪಕ್ಕದವರ ಭಾಷೆಯನ್ನೂ ಹಾಡುತ್ತಾನೆ. ಇದು ಜನರಲ್ಲಿ ಪರಸ್ಪರ ಭಾಷಾ ಗೌರವವನ್ನು ಬೆಳೆಸುತ್ತದೆ. ವೈಷಮ್ಯವನ್ನು ಮರೆತು ಭಾಷೆಯ ಮೂಲಕ ಒಗ್ಗಟ್ಟಾಗುವುದು ಹೇಗೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ದಕ್ಷಿಣ ಆಫ್ರಿಕಾದ ಪ್ರತಿ ಭಾಷೆಯ ಹಿಂದೆ ಒಂದು ಕಥೆಯಿದೆ. ಕ್ಸೋಸಾ ಭಾಷೆಯ ಕ್ಲಿಕ್ ಶಬ್ದಗಳು ಅಲ್ಲಿನ ಆದಿವಾಸಿಗಳಾದ ‘ಖೋಯ-ಸಾನ್’ ಜನರೊಂದಿಗಿನ ಸಂಬಂಧವನ್ನು ನೆನಪಿಸುತ್ತವೆ. ಜೂಲು ಭಾಷೆಯು ಮಹಾನ್ ರಾಜ ಶಕಾ ಜೂಲು ಅವರ ವೀರತ್ವದ ನೆನಪುಗಳನ್ನು ಹೊತ್ತು ತರುತ್ತದೆ. ಆಫ್ರಿಕಾ ಭಾಷೆಯು ಯುರೋಪ್ ಮತ್ತು ಆಫ್ರಿಕಾದ ಸಂಸ್ಕೃತಿಗಳ ಸಂಮಿಶ್ರಣವನ್ನು ತೋರಿಸುತ್ತದೆ.

ಭಾಷೆಯನ್ನು ಉಳಿಸಿಕೊಳ್ಳುವುದು ಎಂದರೆ ಆ ಇತಿಹಾಸವನ್ನು ಜೀವಂತವಾಗಿಡುವುದು ಎಂದರ್ಥ. ಸ್ವಾತಂತ್ರ್ಯದ ನಂತರ ಈ ಭಾಷೆಗಳಿಗೆ ಮಾನ್ಯತೆ ನೀಡುವ ಮೂಲಕ, ದಕ್ಷಿಣ ಆಫ್ರಿಕಾ ತನ್ನ ಕಳೆದುಹೋದ ಆತ್ಮವನ್ನು ಮರಳಿ ಪಡೆದಂತಾಗಿದೆ. ಇಷ್ಟೊಂದು ಭಾಷೆ ಗಳಿದ್ದರೂ, ಇಂದಿನ ಜಾಗತಿಕ ಯುಗದಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ಹೆಚ್ಚಾಗುತ್ತಿದೆ. ಇದು ದೇಶೀಯ ಭಾಷೆಗಳ ಅವನತಿಗೆ ಕಾರಣವಾಗಬಹುದು ಎಂಬ ಆತಂಕವಿದೆ. ಆದರೆ, ಅಲ್ಲಿನ ಸರಕಾರ ಮತ್ತು ಜನರು ಭಾಷಾ ತಂತ್ರಜ್ಞಾನ ಮತ್ತು ಸಾಹಿತ್ಯದ ಮೂಲಕ ತಮ್ಮ ಭಾಷೆಗಳನ್ನು ಡಿಜಿಟಲ್ ಜಗತ್ತಿಗೆ ಅಳವಡಿಸಲು ಶ್ರಮಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಈ ಭಾಷಾ ನೀತಿಯು ಭಾರತದಂಥ ಬಹುಭಾಷಾ ರಾಷ್ಟ್ರಗಳಿಗೂ ಪ್ರೇರಣೆ. ಭಾಷೆಗಳು ಗೋಡೆಗಳಾಗಬಾರದು, ಅವು ಸೇತುವೆಗಳಾಗಬೇಕು ಎಂಬುದನ್ನು ದಕ್ಷಿಣ ಆಫ್ರಿಕಾ ಸಾಬೀತುಪಡಿಸಿದೆ. ಕೊನೆಯದಾಗಿ, ನೆಲ್ಸನ್ ಮಂಡೇಲಾ ಅವರ ಪ್ರಸಿದ್ಧ ಮಾತುಗಳನ್ನು ನೆನಪಿಸಿಕೊಳ್ಳಬಹುದು- “ನೀವು ಒಬ್ಬ ಮನುಷ್ಯನಿಗೆ ಅವನಿಗೆ ಅರ್ಥ ವಾಗುವ ಭಾಷೆಯಲ್ಲಿ ಮಾತನಾಡಿದರೆ, ಅದು ಅವನ ತಲೆಗೆ ಮುಟ್ಟುತ್ತದೆ.

ಅದೇ ನೀವು ಅವನ ಸ್ವಂತ ಭಾಷೆಯಲ್ಲಿ ಮಾತನಾಡಿದರೆ, ಅದು ಅವನ ಹೃದಯವನ್ನು ಮುಟ್ಟುತ್ತದೆ". ಹನ್ನೆರಡು ಭಾಷೆಗಳು ಇರುವುದರಿಂದ ದಕ್ಷಿಣ ಆಫ್ರಿಕಾದ ಸಾಹಿತ್ಯಲೋಕ ಅತ್ಯಂತ ಸಮೃದ್ಧವಾಗಿದೆ. ಪ್ರತಿ ಭಾಷೆಯೂ ತನ್ನದೇ ಆದ ವಿಶಿಷ್ಟ ಜಾನಪದ, ಕವಿತೆ ಮತ್ತು ಕಥೆಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕಾದ ಸಂಗೀತವನ್ನೇ ಗಮನಿಸಿ- ಅಲ್ಲಿನ ಪಾಪ್ ಸಂಗೀತದಿಂದ ಹಿಡಿದು ಭಕ್ತಿಗೀತೆಗಳವರೆಗೆ ಎಲ್ಲದರಲ್ಲೂ ಭಾಷೆಗಳ ಸುಂದರ ಮಿಶ್ರಣ ವಿರುತ್ತದೆ.

ನಗರದ ಇಂಗ್ಲಿಷ್ ತಿಳಿದವರು ಮಾತ್ರ ಬುದ್ಧಿವಂತರಲ್ಲ, ಬದಲಿಗೆ ತನ್ನ ಬುಡಕಟ್ಟು ಭಾಷೆ ಯಲ್ಲಿ ಜ್ಞಾನ ಹೊಂದಿರುವವನೂ ದೇಶದ ಆಸ್ತಿ ಎಂಬ ಭಾವನೆಯನ್ನು ಇದು ಮೂಡಿಸಿದೆ. ಅಲ್ಲದೆ, ನ್ಯಾಯಾಲಯಗಳಲ್ಲಿ ಒಬ್ಬ ಸಾಮಾನ್ಯ ಮನುಷ್ಯ ತನಗರಿವಿಲ್ಲದ ಭಾಷೆಯಲ್ಲಿ ವಿಚಾರಣೆ ಎದುರಿಸುವ ಬದಲು, ತನ್ನದೇ ಭಾಷೆಯಲ್ಲಿ ನ್ಯಾಯ ಕೋರುವ ಹಕ್ಕು ಪಡೆದಿರುವುದು ಸಮಾನತೆಯ ಪರಮಾವಧಿ.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ‘ಒಂದೇ ಭಾಷೆ, ಒಂದೇ ರಾಷ್ಟ್ರ’ ಎಂಬ ಪರಿಕಲ್ಪನೆಯು ಪ್ರಬಲವಾಗಿದೆ. ಆದರೆ ದಕ್ಷಿಣ ಆಫ್ರಿಕಾ ಈ ಪರಿಕಲ್ಪನೆಯನ್ನು ಸುಳ್ಳು ಮಾಡಿದೆ. ಭಾಷೆಯ ಹೆಸರಿನಲ್ಲಿ ದೇಶಗಳು ವಿಭಜನೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಹನ್ನೆರಡು ಭಾಷೆ ಗಳನ್ನು ಒಟ್ಟಿಗೆ ಹೊತ್ತೊಯ್ಯುವುದು ಒಂದು ರಾಜಕೀಯ ಪವಾಡವೇ ಸರಿ.

ಇಲ್ಲಿ ಯಾವುದೇ ಭಾಷೆಯು ಇನ್ನೊಂದು ಭಾಷೆಯ ಮೇಲೆ ಸವಾರಿ ಮಾಡುವುದಿಲ್ಲ. ಸಂಸತ್ತಿನಲ್ಲಿ ಸದಸ್ಯರು ತಮಗೆ ಇಷ್ಟ ಬಂದ ಅಧಿಕೃತ ಭಾಷೆಯಲ್ಲಿ ಮಾತನಾಡಬಹುದು ಮತ್ತು ಅದಕ್ಕೆ ಅನುವಾದದ ವ್ಯವಸ್ಥೆಯೂ ಇರುತ್ತದೆ. ಇದು ಪ್ರಜಾಪ್ರಭುತ್ವದ ನಿಜವಾದ ಆಶಯ- ಅಂದರೆ ಪ್ರತಿಯೊಬ್ಬರಿಗೂ ಧ್ವನಿ ನೀಡುವುದು.

ಸೋಜಿಗದ ಸಂಗತಿಯೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಸಂಚರಿಸುವಾಗ, ಎಡೆಯೂ ಇಂಗ್ಲಿಷ್ ಸೂಚನಾಫಲಕಗಳು, ನಾಮಫಲಕಗಳು ಮಾತ್ರ ಕಾಣುತ್ತವೆ. ಅಪ್ಪಿತಪ್ಪಿಯೂ ಬೇರೆ ಭಾಷೆ ಗಳ ಫಲಕಗಳು ಕಾಣುವುದಿಲ್ಲ. ಭಾರತದದರೆ ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆ ಗಳಲ್ಲಿ ಫಲಕಗಳು ಕಾಣುತ್ತವೆ. ಆದರೆ ಅಲ್ಲಿ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಗಳ ಫಲಕ ಕಾಣುವುದಿಲ್ಲ.

ಒಂದು ವೇಳೆ ಎಲ್ಲ ಭಾಷೆಗಳಿಗೂ ಪ್ರಾತಿನಿಧ್ಯ ಕೊಡಬೇಕೆಂದರೆ, ಒಂದು ಫಲಕದಲ್ಲಿ ಹನ್ನೆರಡು ಭಾಷೆಗಳನ್ನು ಬರೆಯಬೇಕಾಗುತ್ತದೆ. ಈ ಉಸಾಬರಿಯೇ ಬೇಡವೆಂದು ಅವರು ಇಂಗ್ಲಿಷನ್ನು ಒಪ್ಪಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ತನ್ನ ಹನ್ನೆರಡು ಅಧಿಕೃತ ಭಾಷೆಗಳ ಮೂಲಕ ತನ್ನ ಜನರ ಹೃದಯ ವನ್ನು ಮುಟ್ಟುವ ಪ್ರಯತ್ನ ಮಾಡಿದೆ. ಇದು ಕೇವಲ ರಾಜಕೀಯ ನಿರ್ಧಾರವಲ್ಲ, ಇದು ಮಾನವೀಯತೆಯ ವಿಜಯ. ಸಾವಿರಾರು ವರ್ಷಗಳ ನೋವು, ದಶಕಗಳ ಸಂಘರ್ಷ ಮತ್ತು ಅಂತಿಮವಾಗಿ ದೊರೆತ ಸ್ವಾತಂತ್ರ್ಯದ ಫಲವಾಗಿ ಈ 12 ಭಾಷೆಗಳು ರೇನ್‌ಬೋ ನೇಷನ್‌ನ ಬಣ್ಣಗಳಾಗಿ ಮಿಂಚುತ್ತಿವೆ.

ವಿಭಿನ್ನ ಹಿನ್ನೆಲೆಯ ಜನರು ಒಂದೇ ರಾಷ್ಟ್ರವಾಗಿ ಬಾಳಲು ಪರಸ್ಪರರ ಭಾಷೆಯನ್ನು ಗೌರವಿಸುವುದೇ ಮೊದಲ ಹೆಜ್ಜೆ ಎಂಬುದಕ್ಕೆ ಈ ದೇಶವೇ ಜಗತ್ತಿಗೆ ದೊಡ್ಡ ಮಾದರಿ.