ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shishir Hegde Column: ಕುರ್ಚಿಯು ಹೋಗಿ ಮುಟ್ಟಬೇಕಾದ ಜಾಗವಾಗಿದ್ದು ಹೇಗೆ ?

ನೆಲದ ಮೇಲೆ ಕೂರುವುದಕ್ಕಿಂತ ಈ ರೀತಿ ಕಲ್ಲಿನ ಮೇಲೆ ಸ್ವಲ್ಪ ಎತ್ತರಕ್ಕೆ ಕೂರುವುದು ಹೆಚ್ಚು ಅನು ಕೂಲ. ಅಷ್ಟರಲ್ಲಿ ಅವನು ಹಾಗೆ ಕೂತದ್ದನ್ನು ಇನ್ನೊಬ್ಬ ಕಂಡ. ಕುಳಿತುಕೊಳ್ಳಲು ಒಳ್ಳೆಯ ಉಪಾಯ.. ಎರಡನೆಯವನು ಗುಡಿಸಿಲಿನೊಳಗೆ ಚಪ್ಪಡಿ ಕಂದನ್ನು ತಂದಿಟ್ಟುಕೊಂಡ. ಮೂರನೆ ಯವನು ಅದರ ಬೆನ್ನಿಗೆ ಆನಿಸಿಕೊಳ್ಳಲು ಇನ್ನೊಂದು ಕಲ್ಲನ್ನು ಸರಿಸಿಟ್ಟ. ಇನ್ನೊಬ್ಬ ಅದನ್ನೇ ಸ್ವಲ್ಪ ಎತ್ತರಕ್ಕೆ ಇರಿಸಿದ. ಹೀಗೆ- ಹೇಗೋ ಗೊತ್ತಿಲ್ಲ, ಕುರ್ಚಿಯೆಂಬ ಕುರ್ಚಿಯ ರೂಪಾಂತರಗಳ ಆವಿಷ್ಕಾರವಾಯಿತು!!

ಕುರ್ಚಿಯು ಹೋಗಿ ಮುಟ್ಟಬೇಕಾದ ಜಾಗವಾಗಿದ್ದು ಹೇಗೆ ?

-

ಶಿಶಿರಕಾಲ

ನಾವು ತೀರಾ ಆದಿಮಾನವನ ಗುಂಪಿನ ಬದುಕಿನ ವಿವರ, ಇತಿಹಾಸ ನೋಡಿದರೆ ಕುರ್ಚಿ ಇಂದಿನಂತೆ ಎಲ್ಲರ ಪೀಠೋಪಕರಣವಾಗುವುದಕ್ಕಿಂತ ಮೊದಲೇ ಗದ್ದುಗೆ, ಸಿಂಹಾಸನ ವಾಗಿತ್ತು ಎನ್ನುವುದು ತಿಳಿಯುತ್ತದೆ. ಮೇಲೆ ಕೂರುವವರು ಮುಖಂಡ, ಹಿರಿಯ, ರಾಜ, ಪಾರೋ ಇತ್ಯಾದಿ. ಉಳಿದವರೆಲ್ಲ ನೆಲದ ಮೇಲೆಯೇ ಕೂರುತ್ತಿದ್ದರಲ್ಲವೇ. ಅಲ್ಲಿಂದ ಮುಂದೆ ಯಾರು ಎತ್ತರದಲ್ಲಿ ಕೂರುತ್ತಾರೋ ಅವರ ಮಾನ-ಮರ್ಯಾದೆ ಜಾಸ್ತಿ ಎಂದಾಯಿತು. ಯೋಗ್ಯತಾನುಸಾರ ಕುರ್ಚಿ.

ಅವನಿಗೆ ಸುಸ್ತಾಗಿತ್ತು ಅಷ್ಟೇ. ಅವನೇನು ಜಗತ್ತನ್ನು ಬದಲಿಸಿ ಬಿಡುತ್ತೇನೆ ಎಂದು ಹೊರಟವನಲ್ಲ. ಅವನೊಬ್ಬ ಸಾಮಾನ್ಯ. ಕಾಲ್ನಡಿಗೆ ಅಂದುಕೊಂಡದ್ದಕ್ಕಿಂತ ದೀರ್ಘವಾಗಿತ್ತು, ಹಾಗಾಗಿ ದಣಿವಾಗಿತ್ತು. ಮೊಣಕಾಲು ಸೋತುಹೋಗಿತ್ತು. ಇನ್ನು ನಡೆಯಲು ಸಾಧ್ಯವೇ ಇಲ್ಲ ಎನ್ನುವಾಗ ಅಲ್ಲಿಯೇ, ಪಕ್ಕದಂದು ಚಿಕ್ಕ ಸಪಾಟು ಬಂಡೆಗಲ್ಲು. ಆ ಕಲ್ಲಿನ ಮೇಲಿನ ಧೂಳು, ಕಸಗಳನ್ನು ಸರಿಸಿ ಕುಳಿತುಕೊಂಡ. ಕಾಲು ನೀಡಿಸಿದ. ಅದೆಷ್ಟು ಆರಾಮ!

ನೆಲದ ಮೇಲೆ ಕೂರುವುದಕ್ಕಿಂತ ಈ ರೀತಿ ಕಲ್ಲಿನ ಮೇಲೆ ಸ್ವಲ್ಪ ಎತ್ತರಕ್ಕೆ ಕೂರುವುದು ಹೆಚ್ಚು ಅನುಕೂಲ. ಅಷ್ಟರಲ್ಲಿ ಅವನು ಹಾಗೆ ಕೂತದ್ದನ್ನು ಇನ್ನೊಬ್ಬ ಕಂಡ. ಕುಳಿತುಕೊಳ್ಳಲು ಒಳ್ಳೆಯ ಉಪಾಯ.. ಎರಡನೆಯವನು ಗುಡಿಸಿಲಿನೊಳಗೆ ಚಪ್ಪಡಿ ಕಂದನ್ನು ತಂದಿಟ್ಟುಕೊಂಡ. ಮೂರನೆ ಯವನು ಅದರ ಬೆನ್ನಿಗೆ ಆನಿಸಿಕೊಳ್ಳಲು ಇನ್ನೊಂದು ಕಲ್ಲನ್ನು ಸರಿಸಿಟ್ಟ. ಇನ್ನೊಬ್ಬ ಅದನ್ನೇ ಸ್ವಲ್ಪ ಎತ್ತರಕ್ಕೆ ಇರಿಸಿದ. ಹೀಗೆ- ಹೇಗೋ ಗೊತ್ತಿಲ್ಲ, ಕುರ್ಚಿಯೆಂಬ ಕುರ್ಚಿಯ ರೂಪಾಂತರಗಳ ಆವಿಷ್ಕಾರವಾಯಿತು!!

ನಾವು ತೀರಾ ಆದಿಮಾನವನ ಗುಂಪಿನ ಬದುಕಿನ ವಿವರ, ಇತಿಹಾಸ ನೋಡಿದರೆ ಕುರ್ಚಿ ಇಂದಿನಂತೆ ಎಲ್ಲರ ಪೀಠೋಪಕರಣವಾಗುವುದಕ್ಕಿಂತ ಮೊದಲೇ ಗದ್ದುಗೆ, ಸಿಂಹಾಸನವಾಗಿತ್ತು ಎನ್ನುವುದು ತಿಳಿಯುತ್ತದೆ. ಮೇಲೆ ಕೂರುವವರು ಮುಖಂಡ, ಹಿರಿಯ, ರಾಜ, ಪಾರೋ ಇತ್ಯಾದಿ.

ಇದನ್ನೂ ಓದಿ: Shishir Hegde Column: ಜಗತ್ತಿನಲ್ಲಿ ಮನುಷ್ಯರಿಗಿಂತ ವಸ್ತುಗಳೇ ಹೆಚ್ಚು ಓಡಾಡುತ್ತವೆ !

ಉಳಿದವರೆಲ್ಲ ನೆಲದ ಮೇಲೆಯೇ ಕೂರುತ್ತಿದ್ದರಲ್ಲವೇ. ಅಲ್ಲಿಂದ ಮುಂದೆ ಯಾರು ಎತ್ತರದಲ್ಲಿ ಕೂರುತ್ತಾರೋ ಅವರ ಮಾನ-ಮರ್ಯಾದೆ ಜಾಸ್ತಿ ಎಂದಾಯಿತು. ಯೋಗ್ಯತಾನುಸಾರ ಕುರ್ಚಿ. ಮನೆಯಲ್ಲಿ, ಕಚೇರಿಗಳಲ್ಲಿ, ಕಾರ್ಯಕ್ರಮಗಳಲ್ಲಿ- ವೇದಿಕೆಯ ಮೇಲೆ, ವೇದಿಕೆಯ ಮುಂದೆ- ಕೆಳಗೆ. ಹೆಚ್ಚಿನ ಯೋಗ್ಯತೆಯ ಅತಿಥಿಗಳಿಗೆ ಸೋಫಾ. ಅಗಲದ ಕುರ್ಚಿಯ ಬಿಸಿನೆಸ್ ಕ್ಲಾಸಿನ ವಿಮಾನದ ಪ್ರಯಾಣಕ್ಕೆ ಮೂರ್ನಾಲ್ಕು ಪಟ್ಟು ಹಣ.

ಮುಖ್ಯಮಂತ್ರಿಯ ಕುರ್ಚಿ, ಹೆಡ್‌ಮಾಸ್ತರ್ ಕುರ್ಚಿ, ಬಸ್ ಕಂಡಕ್ಟರಿನ ಚಿಕ್ಕ ಟ್ರಂಕ್- ಅದರ ಮೇಲೆ ತೆಳ್ಳಗಿನ ದಿಂಬು- ಸೀಟು, ಆಸ್ಪತ್ರೆಯ ಕಾರಿಡಾರಿನ ಕುರ್ಚಿ, ನ್ಯಾಯಾಧೀಶರ, ಸ್ವಾಮೀಜಿಗಳ ಪೀಠ, ಆರಾಮಕುರ್ಚಿ, ಸೆಕ್ಯುರಿಟಿ ಗಾರ್ಡಿನ ನೀಲ್‌ಕಮಲ್ ಕುರ್ಚಿ, ಯಕ್ಷಗಾನ ನಾಟಕ ಕಂಪನಿಗಳ ಕುರ್ಚಿ- ಎಲ್ಲಾ ಕುರ್ಚಿಗಳಿಗೂ ಅವುಗಳದ್ದೇ ಆದ ಜೀವವಿದೆ, ಬೆಲೆಯಿದೆ, ಶ್ರೇಣಿಯಿದೆ.

ಸಿನಿಮಾ, ಕಾರ್ಯಕ್ರಮ, ಹೋಟೆಲ್ಲು, ಸ್ಟೇಡಿಯಂ, ಥಿಯೇಟರ್, ರೈಲು, ಬದುಕು ಎಡೆಯೂ ನಾವು ಒಳ್ಳೆಯ ಕುರ್ಚಿ ಬಯಸುತ್ತೇವೆ, ಹುಡುಕುತ್ತೇವೆ. ಸನ್ಯಾಸ ಪಡೆದ ಸ್ವಾಮೀಜಿಗಳ ಮಧ್ಯೆ ಯಾರ ಪೀಠ ಎತ್ತರಕ್ಕಿಡಬೇಕು ಎಂಬ ವಿಷಯದಲ್ಲಿ ಮನಸ್ತಾಪ-ಜಗಳವಾಗುತ್ತವೆ, ಶತಮಾನಗಳ ಕಾಲ ವೈಮನಸ್ಸು ಮುಂದುವರಿಯುತ್ತದೆ. ಇಷ್ಟಾಗಿ ಈಗ ಮನುಕುಲಕ್ಕೆ ಕುರ್ಚಿಯದೇ ಸಮಸ್ಯೆ, ಶಾಪ!

ಇಂದಿನ ವಿಜ್ಞಾನಿಗಳು, ನರ ಮೂಳೆ ತಜ್ಞರು ಹೇಳುವುದು Sitting is new smoking. ಅವರ ಪ್ರಕಾರ ಇಡೀ ದಿನ ಕುಳಿತುಕೊಳ್ಳುವುದು ದಿನಕ್ಕೆ ನಾಲ್ಕು ಬೀಡಿ-ಸಿಗರೇಟು ಸೇದಿದ್ದಕ್ಕೆ ಸಮಾನವಂತೆ! ಸೌಕರ್ಯಕ್ಕೆ ಹುಟ್ಟಿದ ಕುರ್ಚಿ ಮೊದಲಿನಿಂದಲೂ ಅಧಿಕಾರ, ಘನತೆಯ ವಿಷಯವಾಗಿ ಅನಾದಿ ಕಾಲದಿಂದ ಮುಂದುವರಿದು ಬಂದಿರುವುದು ವಿಚಿತ್ರವಂತೂ ಹೌದಲ್ಲವೇ? ಪತಂಜಲಿಯು ‘ಸ್ಥಿರಂ ಸುಖಂ ಆಸನಂ’ ಎಂದು ಸುಮ್ಮನಾದ. ಆದರೆ ಅಲ್ಲಿಂದಿಲ್ಲಿಯವರೆಗೂ ಕುರ್ಚಿ ಸ್ಥಿರವೂ ಅಲ್ಲ, ಶಾಶ್ವತದ ವಿಷಯವೂ ಅಲ್ಲ, ಸುಖದ ವಿಷಯವೂ ಅಲ್ಲ.

peetha

ಕುರ್ಚಿ ಒಂದು destination ಗೆ ಹೋಗಿ ಮುಟ್ಟಬೇಕಾದ ಜಾಗ, ಸ್ಥಾನ. ಕುರ್ಚಿಯು ಕೂತವನನ್ನೇ ಬದಲಿಸಿಬಿಡುತ್ತದೆ! ಒಮ್ಮೆ ಸ್ವಲ್ಪ ನಿಧಾನಿಸಿ ಯೋಚಿಸಿ ನೋಡಿ. ಅನುಕೂಲಕ್ಕೆ, ಸೌಲಭ್ಯಕ್ಕೆ ಹುಟ್ಟಿದ ಮುಗ್ಧವೆನಿಸುವ ವಸ್ತುಗಳು ಹೀಗೆ ನಮ್ಮನ್ನು ಚಿತ್ರ ವಿಚಿತ್ರವಾಗಿ ಆವರಿಸಿಕೊಂಡು ಬಿಡು ತ್ತವೆ ಅಲ್ಲವೇ? ಸಮಯ- ಟೈಮ್ ಕೂಡ ಹಾಗೆಯೇ.

ಮನುಷ್ಯನ- ಹೋಮೋ ಸೇಪಿಯನ್ನಿನ ಪೂರ್ಣ ಇತಿಹಾಸ ತೆಗೆದುಕೊಂಡರೆ ಅದರ ಬಹುತೇಕ ಭಾಗ ಯಾರೂ ‘ಟೈಮ್ ಎಷ್ಟಾಯ್ತು?’ ಎಂದು ಕೇಳಿಯೇ ಇಲ್ಲ. ಅವರಿಗೆಲ್ಲರಿಗೂ ‘ಸಮಯ ಎಷ್ಟು’ ಎನ್ನುವುದೇ ಅರ್ಥವಿಲ್ಲದ ಪ್ರಶ್ನೆಯಾಗಿತ್ತು. ಬೆಳಕಾದಾಗ ಏಳುತ್ತಿದ್ದರು, ಹಸಿವಾದಾಗ ತಿನ್ನುತ್ತಿದ್ದರು, ಸುಸ್ತಾದಾಗ ಕೆಲಸ ನಿಲ್ಲಿಸುತ್ತಿದ್ದರು, ಕತ್ತಲಾದಾಗ ಮಲಗುತ್ತಿದ್ದರು.

ಸಿಂಪಲ್. ಈ ರೀತಿ- ಬೆಳಕಿಗೆ ತಕ್ಕಂತೆ ಇದ್ದ ಮನುಷ್ಯನ ಬದುಕಿನಲ್ಲಿ ಅದ್ಯಾವುದೋ ಒಂದು ದಿನ, ಗಳಿಗೆ- ಯಾರೋ ಒಬ್ಬ ಪುಣ್ಯಾತ್ಮನಿಗೆ ದಿನವನ್ನು ತುಂಡುತುಂಡಾಗಿ ನೋಡುವ ಕಲ್ಪನೆಯೊಂದು ಹುಟ್ಟಿಕೊಂಡಿತು. ‌

ಬಹುಶಃ ಸಂಘಜೀವನದಲ್ಲಿ ಬದುಕಿನಲ್ಲಿ ಕೆಲಸಗಳ ಸಮನ್ವಯಕ್ಕೆ (coordination) ಅವಶ್ಯಕತೆ ಯೆನಿಸಿರಬೇಕು. ಬೆಳಗ್ಗೆ ಬರುತ್ತೇನೆ, ಮಧ್ಯಾಹ್ನ ಕೊಡುತ್ತೇನೆ ಎಂಬಿತ್ಯಾದಿ ವ್ಯವಹಾರಕ್ಕೆ ಶುರುವಾಗಿ ದ್ದಿರಬೇಕು. ಈಗ? ಸಮನ್ವಯಕ್ಕಿದ್ದ ಸಮಯ ಈಗ ಇಡೀ ಮನುಷ್ಯಕುಲವನ್ನೇ ನಿಯಂತ್ರಿಸುತ್ತದೆ.

ದಿನನಿತ್ಯದ ಬಹುಪಾಲು ಕೆಲಸವನ್ನು ಯಾವಾಗ ಆರಂಭಿಸಬೇಕು, ಯಾವಾಗ ಮುಗಿಸಬೇಕು ಎಂದು ನಿರ್ಧರಿಸುವುದು ನಾವಲ್ಲ- ಗಡಿಯಾರ! ಆದರೆ ಇವತ್ತಿಗೂ ಹಳ್ಳಿಗಳಲ್ಲಿ ಹೆಚ್ಚಿನ ಮಾತುಕತೆ ಗಳು ಯಾಮ-ಜಾವದ ಲೆಕ್ಕದಲ್ಲಿಯೇ ಇರುತ್ತವೆ. ಆದರೆ ಹಳ್ಳಿಯಿಂದ ಪೇಟೆಗೆ, ಪೇಟೆಯಿಂದ ಮಹಾ ನಗರಕ್ಕೆ ಹೀಗೆ ಆಧುನಿಕತೆಯ ಮೇಲುಸ್ತರಕ್ಕೆ ಏರಿದಂತೆಲ್ಲ, ಮನುಷ್ಯನ ಬದುಕಿನ ಮೇಲಿನ ಸಮಯದ ಹಿಡಿತ ಬಿಗುವಾಗುತ್ತಾ ಹೋಗುತ್ತದೆ.

ಯಾಮದ ಲೆಕ್ಕದ ನಮ್ಮೂರಿಗೆ ಸರಕಾರಿ ಬಸ್ಸು, ಗಂಟೆಗಳ ಲೆಕ್ಕದ ನಿಖರತೆಯಲ್ಲಿ ಬಂದು ಹೋಗು ತ್ತದೆ. ಅತ್ತ ಜಪಾನಿನಲ್ಲಿ ರೈಲು ಸೆಕೆಂಡುಗಳ ನಿಖರತೆಯಲ್ಲಿ ಚಲಿಸುತ್ತದೆ. ಅದರರ್ಥ ರೈಲಿನಲ್ಲಿ ಹೋಗುವ ಪ್ರಯಾಣಿಕರಿಂದ ಹಿಡಿದು ಆ ಇಡೀ ವ್ಯವಸ್ಥೆ ಸೆಕೆಂಡುಗಳ ನಿಖರತೆಗೆ ಹೊಂದಿಕೊಳ್ಳ ಬೇಕಾಯ್ತು.

ಸಮಯಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ ‘ಟೈಮ್ ಸೆನ್ಸ್?’ ಇಲ್ಲವೇ ಎಂದು ಕೇಳುತ್ತೇವೆ. ಸೆನ್ಸ್- ಸಮಯ ಒಂದು ಭಾವ! ನಾವೆಲ್ಲರೂ ಸಮಯವನ್ನು ನಿರಂತರ ಭಾವನಾತ್ಮಕವಾಗಿ ಅನುಭವಿಸು‌ ತ್ತಿರುತ್ತೇವೆ. ಎಷ್ಟು ಹೊತ್ತಿಗೂ ಸಮಯದ ಪರಿವೆಯನ್ನಿಟ್ಟೇ ಬದುಕುತ್ತೇವೆಯಲ್ಲ. ಸಮಯ ನೋಡಿ ದಾಗಲೆಲ್ಲ ಒಂದೋ ಇನ್ನಷ್ಟು ಸಮಯವಿದೆ ಎಂದೆನಿಸುತ್ತದೆ, ಇಲ್ಲವೇ ತಡವಾಯ್ತು ಎಂದೆನಿಸು ತ್ತದೆ. ‌

ಕೈಗಾರಿಕೆ ಬೆಳೆದಂತೆ ಶಿಫ್ಟ್-, ಡೆಡ್‌ಲೈನ್, ಉತ್ಪಾದಕತೆ ಏನೇನೋ ಬೆಳೆದು, ಬದಲಾಗಿ ಈಗ ಸಮಯ ವನ್ನು ‘ಉಳಿತಾಯ’ ಮಾಡಬೇಕು. ‘ಸದ್ಬಳಕೆ’ ಮಾಡಬೇಕು ಎನ್ನುವಲ್ಲಿಗೆ ಬಂದು ಮುಟ್ಟಿದ್ದೇವೆ. ಅನಂತ ಅಂಬಾನಿಯ ದುಬಾರಿ ಕೋಟಿ ಬೆಲೆಯ ವಾಚಿಗೆ ಉಸೇನ್ ಬೋಲ್ಟನ ಓಟದ ವೇಗ ಅಳೆಯಲಿಕ್ಕಾಗುವುದಿಲ್ಲ. ‌

ಸಮಯ- ಗಡಿಯಾರ ಇವತ್ತು ಪ್ರತಿಯೊಬ್ಬನನ್ನೂ ಅಳೆಯುತ್ತದೆ. ಅಂಥ ಟೈಮ್- ಸಮಯ ವಿಜ್ಞಾನಿಗಳ ಪ್ರಕಾರ ನಾವಂದುಕೊಂಡಷ್ಟು ಪಾಪದ್ದಲ್ಲ. ಸಮಯ ಕೆಲವು ವಿಶೇಷ ಸ್ಥಿತಿಗಳಲ್ಲಿ ‘ಬಾಗುತ್ತದೆ’, ‘ಹಿಗ್ಗುತ್ತದೆ’. ಐನ್‌ಸ್ಟೀನ್ ಪ್ರಕಾರ ಬೆಳಕಿನಷ್ಟು ವೇಗದಲ್ಲಿ ಪ್ರಯಾಣಿಸಿದರೆ ಪ್ರಯಾಣಿಕನ ಸಮಯ ನಿಧಾನವಾಗುತ್ತದೆ.

ಬ್ಲಾಕ್ ಹೋಲ್- ಕಪ್ಪು ರಂಧ್ರದ ಹೊರಮೈ ಪ್ರವೇಶಿಸುತ್ತಿದ್ದಂತೆ ಸಮಯವೇ ನಿಂತುಹೋಗುತ್ತದೆ! ಇದೆಲ್ಲದರ ನಡುವೆ ಅಮೆರಿಕ ಮೊದಲಾದ ದೇಶಗಳಲ್ಲಿ ವರ್ಷಕ್ಕೆರಡು ಬಾರಿ ಸಮಯವನ್ನೇ ಒಂದೆರಡು ತಾಸು ಹಿಂದೆ ಮುಂದೆ ಮಾಡುವ ಪದ್ಧತಿಯಿದೆ!!

ಟೈಮ್ ನೋಡಿ, ಸಮಯದ ಪ್ರಕಾರ ಬದುಕಬೇಕು ಎನ್ನುತ್ತಾರೆ. ಆದರೆ ಕೈಗಡಿಯಾರದ ಪ್ರಕಾರ ನಡೆದುಕೊಳ್ಳಬಾರದು ಎನ್ನುವವರೂ ಇದ್ದಾರೆ. ನೀವು ತೂಕ ಇಳಿಸಬೇಕು, ಆರೋಗ್ಯ ಸರಿಮಾಡಿ ಕೊಳ್ಳಬೇಕು, ಸರಿಯಿಟ್ಟುಕೊಳ್ಳಬೇಕು ಎಂದು ಡಯೆಟಿಷಿಯನ್ ಬಳಿ ಹೋಗಿ- ಅವರು ಹೇಳುವುದು ಸೂರ್ಯಾಸ್ತಕ್ಕಿಂತ ಮೊದಲು ತಿನ್ನಬೇಕು, ಹಸಿವೆಯಾದಾಗಷ್ಟೇ ತಿನ್ನಬೇಕು, ನಡುನಡುವೆ ಒಂದಿಷ್ಟು ಹೊತ್ತು, ದೇಹಕ್ಕೆ ಆಹಾರ ಕೊಡದೆ ಕೃತಕವಾಗಿ ಉಪವಾಸ ಬೀಳಿಸಬೇಕು.

ಇನ್ನು ಮಾನಸಿಕ, ನರತಜ್ಞರು ಕತ್ತಲಾದಮೇಲೆ ಬೆಳಕು ಕಡಿಮೆ ನೋಡಬೇಕು, ಮಲಗುವುದಕ್ಕಿಂತ ಮೊದಲು ಮೊಬೈಲ್ ನೋಡಬಾರದು, ನೀಲಿಬೆಳಕು ನೋಡಬಾರದು, ವಿದ್ಯುತ್ ದೀಪ ನಿದ್ರೆಗೆ ಒಳ್ಳೆಯದಲ್ಲ. ಬೆಳಗಿನ ಜಾವ, ಸಂಜೆ ಸೂರ್ಯನ ಬೆಳಕು ಒಂದರ್ಧ ಗಂಟೆ ನೋಡಬೇಕು, ನೋಡಿದರೆ ಸೆರೆಟೋನಿನ್ ಇತ್ಯಾದಿ ಸರಿಯಾಗಿ ಬಿಡುಗಡೆಯಾಗುತ್ತದೆ.

ಆಗ ನಿದ್ರೆ ಪರಿಪೂರ್ಣವಾಗುತ್ತದೆ. ಇಂದಿನ ವಿeನ ಕಾಡಿನಲ್ಲಿ ಆದಿ ಮಾನವನಂತೆ ಬದುಕುವುದೇ ಅತ್ಯಂತ ಆರೋಗ್ಯಕರ ಎಂದು ಹೇಳುವುದೊಂದು ಬಾಕಿಯಿದೆ. ಇರಲಿ, ಅಲ್ಲಿಗೆ ಸಮಯ- ಟೈಮ್ ಅನ್ನು ನಾವು ಕಂಡುಹಿಡಿದು ಶತಮಾನಗಳೇ ಕಳೆದಿದ್ದರೂ ನಮ್ಮ ದೇಹ ಮಾತ್ರ ಸೂರ್ಯನ ಬೆಳಕಿನ ಲೆಕ್ಕದಲ್ಲಿ ತನ್ನೊಳಗೆ ಬೇರೆಯದೇ ಗಡಿಯಾರ- ಟೈಮ್ ಇಟ್ಟುಕೊಂಡಿದೆ, ಅದರಂತೆ ದೇಹವನ್ನು ನಿರ್ವಹಿಸುತ್ತದೆ.

ಈ ಮನುಷ್ಯಕೃತ ಗಡಿಯಾರದ ಸಮಯ ಮತ್ತು ದೇಹದ ಅಂತರ್ ಸಮಯ circadian rhythm ಸ್ವಲ್ಪವೇ ವ್ಯತ್ಯಾಸವಾದಾಗ ನೇರ ಅಡ್ಡಪರಿಣಾಮ. ನನಗೆ ಎಲ್ಲಿಲ್ಲದಷ್ಟು ವಿಚಿತ್ರವೆನಿಸುವ ಇನ್ನೊಂದು- ಬೂಟು, ಷೂ, ಚಪ್ಪಲಿಗಳದ್ದು. ಯಾವುದೋ ಒಂದು ಕಾಲದಲ್ಲಿ ಕಲ್ಲು ಮುಳ್ಳು ಗಳಿಂದ, ಹಾವು ಹರಣೆಗಳಿಂದ, ಚಳಿ, ಸುಡುವ ಬಿಸಿಲು- ಒಟ್ಟಾರೆ ಕಾಲಿನ ರಕ್ಷಣೆಗೆ ಆವಿಷ್ಕಾರ ವಾಗಿದ್ದು ಪಾದರಕ್ಷೆ.

ಎಷ್ಟು ಮಹತ್ವದ ಆವಿಷ್ಕಾರ ಯೋಚಿಸಿ. ಚಪ್ಪಲಿ ಮನುಷ್ಯನಿಗೆ ಚಲನೆ ಕೊಟ್ಟಿತು. ಖಂಡಾಂತರ ನಡೆದು ವಲಸೆ ಹೋಗುವಷ್ಟು ಶಕ್ತಿ ತುಂಬಿಬಿಟ್ಟಿತು. ಈಗ ಬರಿಕಾಲಲ್ಲಿ ನಾಲ್ಕು ಹೆಜ್ಜೆ ಮಣ್ಣು ದಾರಿಯಲ್ಲಿ ನಡೆದು ನೋಡಿ. ಅಭ್ಯಾಸವಿದ್ದರೆ ಸರಿ- ನೀವು ಪೇಟೆಜೀವಿಯಾಗಿದ್ದಲ್ಲಿ ಕುಂಟುತ್ತ ಹಾರುತ್ತ ಆರು ಹೆಜ್ಜೆ ದಾಟಲಿಕ್ಕಾಗುವುದಿಲ್ಲ. ಆದರೆ ಈಗ ಪಾದರಕ್ಷೆ ರಕ್ಷಣೆಯ ವಿಷಯವಾಗಿಯೇ ಉಳಿದಿಲ್ಲ.

ಚಪ್ಪಲಿಗೊಂದು ಜಾಗವಿದೆ ಎನ್ನುತ್ತೇವೆ. ಆದರೆ ಚಪ್ಪಲಿಗಳ ನಡುವೆಯೇ ಅವುಗಳಿಗೆ ಪ್ರತ್ಯೇಕ ಜಾಗಗಳಿವೆ. ಪ್ಯಾರಗಾನ್, ಬಾಟಾ, ನೈಕಿ, ಆದಿದಾಸ್, ಸ್ಕೆಚರ್, ಗುಚ್ಚಿ, ಪ್ರಡಾ, ಬೆಲೆನ್ಸಿಯಾಗ. ಸರಿಯೋ ತಪ್ಪೋ, ಪಾದರಕ್ಷೆ ನೋಡಿ ವ್ಯಕ್ತಿಯನ್ನು ಅಳೆಯುವುದು ಅತ್ಯಂತ ಸಹಜ ಮತ್ತು ಸಾಮಾನ್ಯ ಮನುಷ್ಯ ಗುಣ. ಯಾಕೋ ಗೊತ್ತಿಲ್ಲ. ನನಗೆ ಬಹಳ ವಿಚಿತ್ರವೆನಿಸುವ ಇನ್ನೊಂದು ವಿಷಯ ಬ್ಯಾಗ್- ಚೀಲ ಬೆಳೆದು ಬಂದ ರೀತಿ. ಅನಾದಿ ಕಾಲದಲ್ಲಿ, ಯಾವುದೋ ಪುಣ್ಯಾತ್ಮನಿಗೆ ವಸ್ತುಗಳನ್ನು ಒಯ್ಯಲು ಚೀಲ ಅವಶ್ಯಕತೆಯೆನಿಸಿತು.

ಚೀಲ, ಪಾದರಕ್ಷೆ ಇವೆಲ್ಲ ಯಾವುದೋ ಒಂದು ದಿನ ಆವಿಷ್ಕಾರವಾದ ವಸ್ತುಗಳಲ್ಲ ಎನ್ನುವುದು ಗೊತ್ತು. ಅವು ನಿಧಾನಕ್ಕೆ ಬದಲಾವಣೆಗೊಳ್ಳುತ್ತ ರೂಪ ಪಡೆದವು. ಮೊದಲು ಬೊಗಸೆಗೆ ಎಲೆಯ ಬಳಕೆ, ನಂತರ ಚರ್ಮದ, ಹುಲ್ಲಿನ ಚೀಲ, ಬಟ್ಟೆಯ ಚೀಲ, ಕೈಚೀಲ ಇತ್ಯಾದಿ. ಇತ್ತೀಚೆಗೆ ಶಿಕಾಗೋ ನಗರದಲ್ಲಿರುವ ಲೂಯಿ ವಿಟ್ಟೋನ್ ಅಂಗಡಿಗೆ ಹೋಗಿದ್ದೆ.

ಅಲ್ಲಿ ಮಹಿಳೆಯರ ಹ್ಯಾಂಡ್‌ಬ್ಯಾಗ್ ಒಂದನ್ನು ಪ್ರದರ್ಶನಕ್ಕಿಟ್ಟಿದ್ದರು. ನಾಲ್ಕು ಪಾರ್ಲೆ-ಜಿ ಪ್ಯಾಕೆಟ್ ಇಡುವಷ್ಟು ದೊಡ್ಡದು. ಬೆಲೆ? ಮೂರುವರೆ ಸಾವಿರ ಡಾಲರ್ - ಮೂರ್ನಾಲ್ಕು ಲಕ್ಷ ರುಪಾಯಿ. ನಾನು ಕೂಡ ಬ್ರಾಂಡೆಡ್ ವಸ್ತುಗಳನ್ನು ಬಳಸುತ್ತೇನೆ.

ಆದರೆ ಹತ್ತಿಪ್ಪತ್ತು ಲಕ್ಷ ರೂಪಾಯಿಯ ಬ್ಯಾಗ್, ಸೂಟ್‌ಕೇಸ್? ಇವುಗಳ ಎದುರು ನಿಂತು ನೋಡು ವಾಗ “ಅಷ್ಟಕ್ಕೂ ಮನುಷ್ಯ ಬ್ಯಾಗ್‌ಗಳನ್ನು ಆವಿಷ್ಕರಿಸಿದ್ದೇಕೆ? ಅವಶ್ಯಕತೆಯೇನು?" ಎಂಬ ಪ್ರಶ್ನೆ ನೆನಪಾದರೆ ಗಲಿಬಿಲಿಯಾಗುತ್ತದೆ! ವಸ್ತುಗಳು ಅಳತೆಗೋಲುಗಳಾಗಿವೆ.

ಡಿಕೆಶಿ ಎರಡೂವರೆ ಲಕ್ಷದ ಲೂಯಿ ವಿಟ್ಟೋನ್ ಶಾಲು ಹೊದೆಯುತ್ತಾರೆ. ಡೊನಾಲ್ಡ್ ಟ್ರಂಪ್ ಹಾಕಿಕೊಳ್ಳುವ ನೀಲಿ ಬಣ್ಣದ ಕೋಟು- ಇಟಾಲಿಯನ್ ಬ್ರಿಯೋನಿಗೆ- ಹತ್ತಿರತ್ತಿರ ಮೂವತ್ತೆರಡು ಲಕ್ಷ ರೂಪಾಯಿ. ‌

ಬಟ್ಟೆ, ಶೂ, ಬೆಲ್ಟು, ಆಭರಣ, ಹ್ಯಾಂಡ್‌ಬ್ಯಾಗ್, ಕೈಚೀಲ, ಮೊಬೈಲ್, ಕನ್ನಡಕ, ಟಿವಿ ಇವೆಲ್ಲವೂ ತಮ್ಮ ತಮ್ಮದೇ ಲೋಕಗಳನ್ನು ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ. ಒಂದೊಂದರದೂ ಒಂದೊಂದು ಲೋಕ ನಿಜ. ಆದರೆ ಇವು ಭೌತಿಕ ಲೋಕಗಳಲ್ಲ. ಅವೆಲ್ಲವೂ ಸೃಷ್ಟಿಯಾಗಿರುವುದು, ನೆಲೆನಿಂತಿರು‌ ವುದು ನಮ್ಮ ನಿಮ್ಮ ಎಲ್ಲರ ಮನಸ್ಸಿನಲ್ಲಿ. ಅಮೂಲ್ಯವೆನ್ನುವ ನಂಬಿಕೆಯ ಮೇಲೆ. ಹಾಗೆ ನೋಡಿದರೆ ಈ ರೀತಿಯ ಕಲ್ಪನೆಯ ಬೆಲೆ- ನಂಬಿಕೆಗಳ ಮೇಲೆಯೇ ನಮ್ಮ ಇಡೀ ವ್ಯವಸ್ಥೆ ನಿಂತಿದೆ.

ಸ್ಟಾಕ್ ಮಾರ್ಕೆಟ್‌ನಿಂದ ಸಾಮಾನ್ಯ ರುಪಾಯಿ ನೋಟಿನವರೆಗೆ. ಬೆಲೆ ಇದೆ ಎಂದು ಎಲ್ಲರೂ ನಂಬಿಕೊಂಡರೆ ಮಾತ್ರ ಬೆಲೆ. ನೋಟಿನ ಮೇಲೆ ಬರೆದಿರುತ್ತಾರೆ ನೋಡಿ- I promise to pay the bearer the sum of hundred rupees. ಏನರ್ಥ. ಈ ನೋಟಿಗೆ ನೂರು ರೂಪಾಯಿಯ ಬೆಲೆ ನನ್ನ ಭರವಸೆ. ಆರ್‌ಬಿಐ ಗವರ್ನರ್ ಹೀಗೆ ಬರೆದು ಸಹಿ ಹಾಕುವುದು ಆ ನಂಬಿಕೆಗೆ. ಸದ್ಯದ ವ್ಯವಸ್ಥೆ ಯಲ್ಲಿ- ಇಡೀ ಆರ್ಥಿಕತೆ, ಸ್ಟಾಕ್ ಮಾರ್ಕೆಟ್, ಜಾಗತಿಕ ಆರ್ಥಿಕತೆ ಎಲ್ಲವೂ ಭಗವಾನ್ ಭರೋಸಾ- ಕಲ್ಪಿತ ಸಾಮೂಹಿಕ ಭರವಸೆಯ ಮೇಲೆಯೇ ನಿಂತಿದೆ, ನಡೆಯುತ್ತದೆ.

ಅವು ಅವೈಜ್ಞಾನಿಕ ಎನ್ನುತ್ತಿಲ್ಲ- ಬದಲಿಗೆ ಗ್ರಹಿಸಬೇಕಾದ ವಿಷಯವೆಂದರೆ ಹಣ, ಅಂಕಿ-ಸಂಖ್ಯೆ ಇವೆಲ್ಲ ಹೇಗೆ ನಮ್ಮನ್ನಾವರಿಸಿವೆ ಎನ್ನುವುದನ್ನು. ಅವು ಬಹುತೇಕ ನಮ್ಮ ಹಿಡಿತದಲ್ಲಿಯೇ ಇಲ್ಲ, ಅವುಗಳ ಹಿಡಿತದಲ್ಲಿ ನಾವಿದ್ದೇವೆ.

ಯಾವಾಗ ರಿಸೆಶನ್- ಆರ್ಥಿಕ ಮುಗ್ಗಟ್ಟು ಬರಬಹುದು, ಮಾರ್ಕೆಟ್ ನೆಲಕಚ್ಚಬಹುದು- ಯಾರಿಗೂ ನಿಖರತೆ ಇಲ್ಲ. ಗಾಳಿ ಬೀಸಿದಂತೆ, ಟ್ರಂಪ್, ಮೋದಿ- ಯಾರೋ ಹೇಳಿಕೆ ಕೊಟ್ಟಂತೆ, ಯಾರದೋ ನಂಬಿಕೆ ಬದಲಾದಂತೆ ಈ ಅಂಕಿ-ಸಂಖ್ಯೆಗಳು ಹೆಚ್ಚು ಕಡಿಮೆಯಾಗಿ ಯಾರೋ ಕೆಲಸ ಕಳೆದುಕೊಳ್ಳ ಬಹುದು, ಇನ್ಯಾರೋ ದುಡ್ಡು, ಉಳಿತಾಯ ಕಳೆದುಕೊಳ್ಳಬಹುದು, ಯಾರೋ ಎಲ್ಲಾ ನಿರ್ಗತಿಕರಾಗಿ ಬಿಡಬಹುದು!

ಅದೆಲ್ಲ ಇರುವುದೇ ಹೀಗೆ. ಸಮಾಜ ಪ್ರತಿಯೊಂದು ವಸ್ತು, ವಿಷಯ, ನಂಬಿಕೆಗಳಿಗೆ ಒಂದು ಬೆಲೆ ಕಟ್ಟಿರುತ್ತದೆ. ಅದು ಸರಕಾರಿ ನಿಗದಿತ ಬೆಲೆ. ಹಾಗಾಗಿ ಅದುವೇ ನಮ್ಮ ವ್ಯಾವಹಾರಿಕ ಬೆಲೆ ಆಗಬೇಕೆಂದೇನಿಲ್ಲ. ಆದರೆ ನಾವೆಲ್ಲರೂ ಅದ್ಯಾವುದೋ ಒಂದಿಷ್ಟು compulsion ಒತ್ತಾಯದ ನಂಬಿಕೆಗೆ ಗಂಟುಬಿದ್ದು ಬದುಕನ್ನು ಇನ್ನಷ್ಟು ಸಂಕೀರ್ಣವಾಗಿಸಿ ತಲೆಬಿಸಿ ಮಾಡಿಕೊಂಡು ಬದುಕುತ್ತಿರುತ್ತೇವೆ!