ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಆದಾಧಿಸುವೆ ಮದನಾರಿ ಹಾಡಿನ ತತ್ತಧೀಂ ತಕಿಟ ತಕತಧೀಂ ತಕಿಟ...

ಹಾಡುಗಾರ, ವೀಣಾವಾದಕ, ಕೊಳಲು ವಾದಕ, ಮೃದಂಗವಾದಕ ಮತ್ತು ಘಟವಾದಕ- ಈ ಐದೂ ಪಾತ್ರಗಳಿಗೆ ಜೀವ ತುಂಬಿದರು. ಈಗಿನಂತೆ ತಂತ್ರಜ್ಞಾನ ಸಾಧ್ಯತೆಗಳಿಲ್ಲದಿದ್ದ ಆ ಕಾಲದಲ್ಲಿ ಐದು ಬೇರೆ ಬೇರೆ ಮುಖವಾಡ (ಫೇಸ್ ಮಾಸ್ಕ್)ಗಳನ್ನು ಧರಿಸಿ ನಟಿಸಿದ, ಮೂರು ಬೇರೆ ಬೇರೆ ಕ್ಯಾಮರಾಗಳಿಂದ ಸೆರೆ ಹಿಡಿದ, ಅದೂ ಮೊದಲೊಮ್ಮೆ ಏನೋ ಎಡವಟ್ಟಿನಿಂದಾಗಿ ಸರಿಯಾಗದಿದ್ದಾಗ ಡಾ.ರಾಜ್ ಅವರ ಉಮೇದಿನಿಂದಲೇ ಮತ್ತೊಮ್ಮೆ ಚಿತ್ರೀಕರಿಸಿದ ದೃಶ್ಯಕಾವ್ಯವದು- ಎಂದು ಹುಣಸೂರು ಕೃಷ್ಣಮೂರ್ತಿ ಯವರ ಸಹಾಯಕರಾಗಿ ದುಡಿದಿದ್ದ ಭಾರ್ಗವ ಒಮ್ಮೆ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಆದಾಧಿಸುವೆ ಮದನಾರಿ ಹಾಡಿನ ತತ್ತಧೀಂ ತಕಿಟ ತಕತಧೀಂ ತಕಿಟ...

ತಿಳಿರು ತೋರಣ

srivathsajoshi@yahoo.com

ಅರ್ಜುನನು ದ್ವಾರಕಾಪುರಿಯ ಶಿವದೇಗುಲದಲ್ಲಿ ಕಪಟ ಸನ್ಯಾಸಿಯ ವೇಷದಲ್ಲಿದ್ದಾಗ ಅಲ್ಲಿ ಪೂಜಾ ಕೈಂಕರ್ಯಕ್ಕೆ ಸಹಾಯಕಿಯಾಗಿ ಸುಭದ್ರೆ ಬರುತ್ತಾಳೆ. ಆಕೆಯನ್ನು ಕಂಡ ಅರ್ಜುನ ಮೋಹ ಪರವಶನಾಗುತ್ತಾನೆ. ಆ ಸಂದರ್ಭದಲ್ಲಿ ಹಾಡಿದ್ದೇ ‘ಆರಾಧಿಸುವೆ ಮದನಾರಿ ಆದರಿಸು ನೀ ದಯ ತೋರಿ...’ ಗೀತೆ. ‘ಮದನಾರಿ’ ಅಂದರೆ ‘ಮದನನ ಅರಿ’ ಅರ್ಥಾತ್ ಮನ್ಮಥಶತ್ರು ಪರಮೇಶ್ವರ ಅಂತಲೂ ಆಗುತ್ತದೆ, ಸೌಂದರ್ಯಮದ ತುಂಬಿ ತುಳುಕುತ್ತಿದ್ದ ನಾರಿ ಸುಭದ್ರೆ ಅಂತಲೂ ಆಗುತ್ತದೆ. ಕಥೆಯಲ್ಲಿ ಆ ಕಪಟನಾಟಕದ ಸೂತ್ರಧಾರಿ ಯಥಾ ಪ್ರಕಾರ ಕೃಷ್ಣನೇ. ಆದರೆ ಕೃಷ್ಣಮೂರ್ತಿ- ಅದೇ, ಹುಣಸೂರು ಕೃಷ್ಣಮೂರ್ತಿ, ‘ಬಭ್ರುವಾಹನ’ ಚಿತ್ರದ ನಿರ್ದೇಶಕರು, ಕಪಟದ ಪರಿಮಾಣ ವನ್ನು ಐದು ಪಟ್ಟು ಮಾಡಿ ಇನ್ನಷ್ಟು ಪರಿಣಾಮಕಾರಿಯಾಗಿಸಿದರು. ‘ಅರ್ಜುನ ಮತ್ತು ಬಭ್ರು ವಾಹನ ದ್ವಿಪಾತ್ರದಲ್ಲಿ ಡಾ.ರಾಜ್‌ಕುಮಾರ್!’ ಎಂದು ಪೋಸ್ಟರ್‌ಗಳಲ್ಲಿದ್ದರೂ ಆರಾಧಿಸುವೆ ಮದನಾರಿ ಹಾಡಿನ ದೃಶ್ಯದಲ್ಲಿ ಡಾ.ರಾಜ್ ಪಂಚಪಾತ್ರಗಳಲ್ಲಿ ಕಾಣಿಸಿಕೊಂಡರು.

ಹಾಡುಗಾರ, ವೀಣಾವಾದಕ, ಕೊಳಲು ವಾದಕ, ಮೃದಂಗವಾದಕ ಮತ್ತು ಘಟವಾದಕ- ಈ ಐದೂ ಪಾತ್ರಗಳಿಗೆ ಜೀವ ತುಂಬಿದರು. ಈಗಿನಂತೆ ತಂತ್ರಜ್ಞಾನ ಸಾಧ್ಯತೆಗಳಿಲ್ಲದಿದ್ದ ಆ ಕಾಲದಲ್ಲಿ ಐದು ಬೇರೆಬೇರೆ ಮುಖವಾಡ (ಫೇಸ್ ಮಾಸ್ಕ್)ಗಳನ್ನು ಧರಿಸಿ ನಟಿಸಿದ, ಮೂರು ಬೇರೆ ಬೇರೆ ಕ್ಯಾಮರಾ ಗಳಿಂದ ಸೆರೆ ಹಿಡಿದ, ಅದೂ ಮೊದಲೊಮ್ಮೆ ಏನೋ ಎಡವಟ್ಟಿನಿಂದಾಗಿ ಸರಿಯಾಗದಿದ್ದಾಗ ಡಾ.ರಾಜ್ ಅವರ ಉಮೇದಿನಿಂದಲೇ ಮತ್ತೊಮ್ಮೆ ಚಿತ್ರೀಕರಿಸಿದ ದೃಶ್ಯಕಾವ್ಯವದು- ಎಂದು ಹುಣ ಸೂರು ಕೃಷ್ಣಮೂರ್ತಿಯವರ ಸಹಾಯಕರಾಗಿ ದುಡಿದಿದ್ದ ಭಾರ್ಗವ ಒಮ್ಮೆ ಒಂದು ಸಂದರ್ಶನ ದಲ್ಲಿ ಹೇಳಿದ್ದರು.

ಇದನ್ನೂ ಓದಿ: Srivathsa Joshi Column: ಈಸ್ಟರ್‌ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !

ಹುಣಸೂರರದೇ ಶ್ರೀಮಂತ ಗೀತಸಾಹಿತ್ಯ, ಖರಹರಪ್ರಿಯ ರಾಗವನ್ನು ಅಳವಡಿಸಿಕೊಂಡ ಟಿ.ಜಿ.ಲಿಂಗಪ್ಪನವರ ಸಂಗೀತ, ಡಾ.ರಾಜ್ ಕುಮಾರ್ ಅದ್ಭುತ ನಟನೆ ಮತ್ತು ಗಾಯನ ಎಲ್ಲ ಸೇರಿ ಆರಾಧಿಸುವೆ ಮದನಾರಿ ಇನ್ನಷ್ಟು ಉತ್ತುಂಗಕ್ಕೇರಿತು, ಉತ್ಕೃಷ್ಟವಾಯಿತು. ಕನ್ನಡ ಜನಮಾನಸ ದಲ್ಲಿ ಚಿರಸ್ಥಾಯಿಯಾಯಿತು.

ಸರಿ, ಆರಾಧಿಸುವೆ ಮದನಾರಿ ಹಾಡಿನಲ್ಲಿ ಎರಡೂ ಚರಣಗಳಾದ ಮೇಲೆ, ಸ್ವರಪ್ರಸ್ತಾರವೂ ಮುಗಿದ ಮೇಲೆ, ಹಾಡುಗಾರ ಅರ್ಜುನ ಎರಡೂ ಕೈಗಳಿಂದ ತಾಳ ಹಾಕುತ್ತ ‘ತತ್ತಧೀಂ ತಕಿಟ ತತ್ತಧೀಂ ತಕಿಟ...’ ಎಂದು ಬಾಯಿಯಿಂದ ಉಚ್ಚರಿಸುವುದು, ಅದಕ್ಕನುಗುಣವಾಗಿ ಒಮ್ಮೆ ಮೃದಂಗ ವಾದಕ ಅರ್ಜುನ ಮೃದಂಗವನ್ನೂ, ಇನ್ನೊಮ್ಮೆ ಘಟವಾದಕ ಅರ್ಜುನ ಘಟವನ್ನೂ ನುಡಿಸುವುದು ಇದೆ ಯಲ್ಲ ಆ ಭಾಗವನ್ನಷ್ಟೇ ಒಮ್ಮೆ ನೆನಪಿಸಿಕೊಳ್ಳೋಣ.

ಆ ರೀತಿ ತಾಳದ ನಡೆಗೆ, ಅಂದರೆ ಲಯಕ್ಕೆ ಅನುಗುಣವಾಗಿ ತಾಳ ವಾದ್ಯಗಳನ್ನು ನುಡಿಸುವುದಕ್ಕೆ ಮತ್ತು ಅವುಗಳೊಳಗೇ ರೌಂಡ್ ರಾಬಿನ್‌ನಂತೆ ಆವರ್ತನಗಳನ್ನು ಮಾಡುದಕ್ಕೆ ಲಯವಿನ್ಯಾಸ ಎನ್ನುತ್ತಾರೆ. ನಾನು ಶಾಸ್ತ್ರೀಯ ಸಂಗೀತ ಅರಿತವನಲ್ಲ, ಒಬ್ಬ ಸಾಮಾನ್ಯ ಕುತೂಹಲಿ ಶ್ರೋತೃ ಮಾತ್ರ. ಆದ್ದರಿಂದ ಲಯ ವಿನ್ಯಾಸದ ಶಾಸ್ತ್ರೀಯತೆಗೆ ಕೈಹಾಕದೆ ಸಿಂಪಲ್ಲಾಗಿ ನನ್ನ ಕುತೂಹಲದ ವಿಷಯವನ್ನಷ್ಟೇ ಇಲ್ಲಿ ಮಂಡಿಸುತ್ತೇನೆ.

ನನ್ನಲ್ಲಿ ಮೂಡಿರುವ ಲೇಟೆಸ್ಟ್ ಕುತೂಹಲ ಏನಪ್ಪಾ ಅಂದ್ರೆ, ತಾಳವಾದ್ಯಗಳ ಶಬ್ದದ ಮೌಖಿಕ ಪ್ರಸ್ತುತಿ- ಅದೇ, ‘ತತ್ತಧೀಂ ತಕಿಟ ತತ್ತಧೀಂ ತಕಿಟ...’ ರೀತಿಯಲ್ಲಿ ಬಾಯಿಯಿಂದ ಉಚ್ಚರಿಸುವುದು. ಮೃದಂಗ, ಘಟ, ಖಂಜಿರ, ಮೋರ್ಚಿಂಗ್, ತವಿಲ್, ತಬಲಾ ಮುಂತಾದ ತಾಳವಾದ್ಯಗಳ ಬಡಿತ ವನ್ನು ಮನುಷ್ಯಸ್ವರದಿಂದ ಧ್ವನಿಸುವುದು. ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಭಾರಿ ಕೌತುಕದ ವಿಷಯವೇ. ಅಬ್ಬಾ! ಎಂದು ಆಶ್ಚರ್ಯಪಡುವಂಥದೇ. ‘ತಿಳಿರು ತೋರಣ’ಕ್ಕಂತೂ ವಸ್ತುವಾಗ ಬಲ್ಲದ್ದೇ. ಅಲ್ಲದೇ ಇಂದು ನಾನು ಈ ವಿಷಯವನ್ನು ಆಯ್ದುಕೊಳ್ಳುವುದಕ್ಕೆ ಬೇರೆಯೇ ಒಂದು ಕಾರಣವೂ ಇದೆ, ಆಮೇಲೆ ತಿಳಿಸುತ್ತೇನೆ.

6.2 ok

ಆರಾಧಿಸುವೆ ಮದನಾರಿಯಂತೆಯೇ ಬೇರೆ ಕೆಲವು ಚಿತ್ರಗೀತೆಗಳಲ್ಲೂ ಇದೇರೀತಿ ತಕತರಿ ತಕಝಣು... ಭಾಗಗಳು ಬರುವುದಿದೆ, ನಾವು ಹೆಚ್ಚಾಗಿ ಗಮನಿಸಿರುವುದಿಲ್ಲ ಅಷ್ಟೇ. ಅಣ್ಣಾವ್ರದ್ದೇ ಇನ್ನೊಂದು ಸೂಪರ್‌ಹಿಟ್, ‘ಸನಾದಿ ಅಪ್ಪಣ್ಣ’ ಚಿತ್ರದ ‘ಕರೆದರೂ ಕೇಳದೇ ಸುಂದರನೇ ಏಕೆ ನನ್ನಲ್ಲಿ ಈ ಮೌನ...’ ಹಾಡು ಇದೆಯಲ್ಲ! ಕನ್ನಡಿಗರೆಲ್ಲರನ್ನೂ ಈಗಲೂ ಮೈನವಿರೇಳಿಸುವ ಅಜರಾಮರ ಗೀತೆ. ಸ್ವಾರಸ್ಯವೆಂದರೆ, ಚಿತ್ರದಲ್ಲಿ ಇದು ಕೂಡ ಶಿವದೇವಾಲಯದಲ್ಲಿ ನಡೆಯುವ ಪ್ರಸಂಗ. ಆದ್ದರಿಂದಲೇ ಒಮ್ಮೆ ಅಪ್ಪಣ್ಣನನ್ನು ನೋಡಿ ಸುಂದರನೇ ಅಂತಲೂ ಇನ್ನೊಮ್ಮೆ ಶಿವ ವನ್ನು ನೋಡಿ ಶಂಕರನೇ ಅಂತಲೂ ಸಂಬೋಧನೆ.

ನೃತ್ಯಗಾರ್ತಿ ಬಸಂತಿ (ಜಯಪ್ರದಾ) ಮತ್ತು ಸನಾದಿ ಅಪ್ಪಣ್ಣ (ಡಾ. ರಾಜ್) ಪರಸ್ಪರ ಸವಾಲು, ಪೈಪೋಟಿಯ ಜುಗಲ್ಬಂದಿ. ಹಾಡಿನ ಆರಂಭದ ಭಾಗವನ್ನು, ಅಂದರೆ ಎರಡು ಚರಣಗಳನ್ನು ಎಸ್. ಜಾನಕಿ ಹಾಡಿದ್ದರೆ ಆಮೇಲಿನ ‘ಧಿಮಿಂ ಧಿಮಿಂ ಧ್ವನಿ ಮೃದಂಗ ಕೇಳದೆ ಕೊರಳ ನಾಗ ನಲಿದಾ ಡಲು ನೋಡದೆ... ಶಿವ ಡಂ ಡಂ ಡಂ ತತೋಂ ತೋಂ ತನನ...’ ಭಾಗವನ್ನು ನೃತ್ಯ ನಿರ್ದೇಶಕ ಉಡುಪಿ ಜಯರಾಂ ಅವರೇ ಹಾಡಿದ್ದಾರೆ.

ಅಣ್ಣಾವ್ರು ಬಿಸ್ಮಿಲ್ಲಾ ಖಾನ್ ಆದರೇ ಅಥವಾ ಬಿಸ್ಮಿಲ್ಲಾ ಖಾನರೇ ಅಣ್ಣಾವ್ರು ಆದರೇ? ಗೊತ್ತೇ ಆಗ ದಂತೆ ಪರಕಾಯಪ್ರವೇಶವಾಗಿ ಸನಾದಿಯ ಅನುರಣನ. ತತೋಂ ತೋಂ ತನನ ವೇಗಗತಿಯ ಲಯದ ಮಟ್ಟುಗಳೇ ಗೆಜ್ಜೆ ಕಟ್ಟಿ ಕುಣಿದವೇನೋ ಎಂದೆನಿಸುವಂಥ ನರ್ತನ. ಪ್ರೇಕ್ಷಕರಿಗೆ ರಸೋ ತ್ಕಟತೆಯ ದರ್ಶನ, ನಿದರ್ಶನ, ರೋಮಾಂಚನ.

ಹೀಗೆಯೇ ಯೋಚಿಸುತ್ತಿದ್ದಂತೆ ನನಗೆ ಇನ್ನೂ ಕೆಲವು ಹಾಡುಗಳು ನೆನಪಾದವು. ‘ಗಾಳಿಪಟ’ ಚಿತ್ರದ ‘ನಧೀಂ ಧೀಂತನ ನಧೀಂ ಧೀಂತನ... ಮಧುರ ಪ್ರೇಮದ ಮೊದಲ ತಲ್ಲಣ...’ ಭಾವನಾ ಮತ್ತು ದಿಗಂತ್ ಜತೆ ನೂರಾರು ನೃತ್ಯಗಾರ್ತಿಯರು, ಯಕ್ಷಗಾನ ವೇಷಧಾರಿಗಳು ಹೆಜ್ಜೆ ಹಾಕುವ ಸುಂದರ ಚಿತ್ರಣ. ಇದರಲ್ಲಿನ ‘ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ...’ ಸಾಲನ್ನು ವಿಶೇಷವಾಗಿ ಗಮನಿಸಬೇಕು. ಹೃದಯವೇ ಮೃದಂಗವಾಗಿ ನುಡಿದರೆ ಹೇಗಿರುತ್ತದೆ? ಅದರ ತಾಕಿಟ ತರಿಕಿಟ ಶಬ್ದದ ಅಲೆಗಳು ಗಂಟಲಿಂದಲೇ ತಾನೆ ಹೊರ ಬರಬೇಕು? ಅದನ್ನೇ ಬೇಂದ್ರೆಯವರೆಂದಿದ್ದು: ‘ಅಂತರಂಗದ ಮೃದಂಗ ಅಂತು ತೋಂ ತನಾನ... ಚಿತ್ತ ತಾಳ ಬಾರಿಸುತ್ತಿತ್ತು ಝಂ ಝಣಣ ನಾನ... ’ ಅದೇ ಇಂದಿನ ವಿಷಯ- ತಾಳವಾದ್ಯಗಳ ಶಬ್ದದ ಮೌಖಿಕ ಪ್ರಸ್ತುತಿ.

ಮತ್ತೆ ಕೆಲವು ಹಾಡುಗಳಲ್ಲಿ ನಾಟ್ಯದ ದೃಶ್ಯವಿಲ್ಲದಿದ್ದರೂ ಸಂಗಡಿಗರ ಸಮೂಹಗಾಯನದಲ್ಲಿ ತಕ್ಕಜಣು ತಕ್ಕಜಣು... ಇರುವುದಿದೆ. ‘ಅನುರಾಗ ಅರಳಿತು’ ಚಿತ್ರದ ‘ಗಂಗಾ ಯಮುನಾ ಸಂಗಮ ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ...’ ಅಂಥದೊಂದು ಉದಾಹರಣೆ. ಇದರ ಎರಡೂ ಇಂಟರ್‌ ಲ್ಯೂಡ್‌ಗಳಲ್ಲಿ ತಕ್ಕಜಣು ತಕ್ಕಜಣು ತಕ್ಕಜಣು ತಜಣು ತಜಣು ತಜಣುತ... ಇದೆ. ‘ಜನ್ಮಜನ್ಮದ ಅನುಬಂಧ’ ಚಿತ್ರದ ‘ಆಕಾಶದಿಂದ ಜಾರಿ ಭೂಮಿಗೆ ಬಂದ ನೋಡಿ ನಮಗಾಗಿ ಆ ದೇವನೇ...’ ಹಾಡಿನಲ್ಲಿ ಸಮೂಹನೃತ್ಯ ದೃಶ್ಯಾವಳಿಗೆ ಹೊಂದಿಕೊಂಡೇ ‘ದದಧೋಂ ದದಧೋಂ ದದಧೋಂ...’ ಮಿಳಿತಗೊಳಿಸಿದ್ದಾರೆ ಇಳೆಯರಾಜ.

ಅಲ್ಲೂ ಶಿವದೇಗುಲದಲ್ಲೇ ನೃತ್ಯ. ಎಷ್ಟೆಂದರೂ ಶಿವನೆಂದರೆ ನಾಟ್ಯದೇವತೆಯಲ್ಲವೇ, ಲಯ ಪದದ ಎರಡೂ ಅರ್ಥಗಳಿಗೆ ಆತನೇ ಅಧಿಪತಿ. ಹಳೆಯ ಕನ್ನಡ (ಮತ್ತು ಹಿಂದಿ) ಚಿತ್ರಗೀತೆಗಳ ವಿಷಯಕ್ಕೆ ಬಂದರೆ ಸಮಗ್ರ ಮಾಹಿತಿ ಬೆರಳತುದಿಯಲ್ಲೇ ಇರುತ್ತದೆ ನನ್ನ ಸೋದರ ಮಾವ ಚಿದಂಬರ ಕಾಕತ್ಕರ್ ಅವರಿಗೆ. ಆ ಮಟ್ಟಿಗೆ ಅವರೊಬ್ಬ ಅದ್ಭುತ ಮಾಹಿತಿ ಕಣಜ. ಆರಾಧಿಸುವೆ ಮದನಾರಿ ಗೀತೆಯ ತತ್ತಧೀಂ ತಕಿಟ ಭಾಗದಂಥದ್ದು ಇರುವ ಎಷ್ಟೋ ಚಿತ್ರಗೀತೆಗಳು ಅವರಿಗೆ ಖಂಡಿತ ಗೊತ್ತಿ ರುತ್ತವೆ ಎಂದುಕೊಂಡು ಅವರಿಗೊಂದು ವಾಟ್ಸ್ಯಾಪ್ ಸಂದೇಶ ಕಳುಹಿಸಿದೆ.

ಐದೇ ನಿಮಿಷಗಳೊಳಗೆ ಅವರು ನನಗೆ ದೊಡ್ಡದೊಂದು ಪಟ್ಟಿಯನ್ನೇ ಕಳುಹಿಸಿದರು! ಮೊದಲ ನೆಯದಾಗಿ, ‘ಶ್ರೀಕೃಷ್ಣ ದೇವರಾಯ’ ಚಿತ್ರದ ‘ಶರಣು ವಿರೂಪಾಕ್ಷ ಶಶಿಶೇಖರ...’ ಅದಂತೂ ಆರಂಭ ವಾಗುವುದೇ ‘ತಾಂ ಧೀಂ ಧೀಂ ತರಿಕಿಟತಕ ತರಿಕಿಟತಕ...’ ನುಡಿಗಳಿಂದ. ‘ರಣಧೀರ’ ಚಿತ್ರದ ‘ಮೀನಾಕ್ಷಿ ನಿನ್ನ ಕಣ್ಣಮೇಲೆ ಮುರಳಿಗೇಕೋ ಕಣ್ಣು...’ ಸಹ ಅಷ್ಟೇ- ಆರಂಭವಾಗುವುದೇ ‘ಧೀಂ ತರಿಕಿಟ ಧೀಂತರಿಕಿಟ ತಕಝುಂ ತಕಝುಂ...’ ಎಂಬ ಸಂಗಡಿಗರ ಧ್ವನಿಯಿಂದ. ಇನ್ನೊಂದು, ‘ಜಗದೇಕವೀರನ ಕಥೆ’ ಚಿತ್ರಕ್ಕಾಗಿ ಘಂಟಸಾಲ ವೆಂಕಟೇಶ್ವರರಾವು ಹಾಡಿದ ‘ಶಿವಶಂಕರಿ ಶಿವಾನಂದ ಲಹರಿ...’ ಅದರ ಕೊನೆಯಲ್ಲಿ ‘ತೋಂ ತೋಂ ಧಿರಧಿರತೋಂ...’ ಬರುತ್ತದೆ. ಇವೆಲ್ಲ ಶಾಸ್ತ್ರೀಯ ಸಂಗೀತದ ಗಾಢ ಛಾಯೆಯುಳ್ಳ ಚಿತ್ರಗೀತೆಗಳು, ಇವುಗಳಲ್ಲಿ ತಕಿಟ ತಕಧಿಮಿಗಳಿರುವುದು ಆಶ್ಚರ್ಯ ವೇನಿಲ್ಲ.

ನಿಜಕ್ಕೂ ಆಶ್ಚರ್ಯವೆನಿಸಿದ್ದು ಪಟ್ಟಿಯಲ್ಲಿ ‘ನ್ಯಾಯವೇ ದೇವರು’ ಚಿತ್ರದ ಕುಡುಕನ ಹಾಡು ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು...’ ಕೂಡ ಇದ್ದುದನ್ನು ನೋಡಿ! ತತ್‌ಕ್ಷಣವೇ ಯುಟ್ಯೂಬ್‌ ನಲ್ಲಿ ಹುಡುಕಿ ಪ್ಲೇ ಮಾಡಿ ನೋಡಿದೆ, ಸಿಕ್ಕಿತು ಅಲ್ಲೂ ‘ಒಳಗೆ ಇರುವ ಈಚಲದೇವ ಕುಣಿ ಅಂದರೆ ಕುಣಿತೀನಿ ಥಯ್ಯತಕಾ ಝುಮ್ಮಲಕ್ಕಾ ತಕಿಟತಧಿಮಿ ತಕಿಟತಧಿಮಿ ಧಿತ್ತಳಾಂಗು ಧಿತ್ತಳಾಂಗು ಥೈ!’ ಹಾಗೆಯೇ ‘ಮಾಜಾಬಜಾರ್’ ಚಿತ್ರದ ‘ಆಹಾ ನನ್ ಮದ್ವೆಯಂತೆ’ಯಲ್ಲಿ ಘಟೋತ್ಕಚನ ಪ್ರವೇಶದ ವೇಳೆ ನಟಿ/ ಗಾಯಕಿಯ ಧ್ವನಿ ಹಠಾತ್ತನೆ ಹೆಣ್ಣಿನಿಂದ ಗಂಡಿಗೆ ಬದಲಾಗಿ ‘ತತೋಂ ತೋಂ ತೋಂ ತ ತಧೀಂ ಧೀಂ ಧೀಂ ತ...’ ಎಂದು ಹಾಡುವ ಸಂದರ್ಭ. ನಾನೇಕೆ ಅಂಥ ಹಾಡುಗಳ ಹುಡುಕಾಟ ದಲ್ಲಿದ್ದೇನೆಂದು ಬಹುಶಃ ನನ್ನ ಸೋದರಮಾವ ಊಹಿಸಿದರೆಂದು ಕಾಣುತ್ತದೆ,

ವಾಟ್ಸ್ಯಾಪ್ ಸಂದೇಶದಲ್ಲೇ ಮತ್ತೊಂದಿಷ್ಟು ಪೂರಕ ಮಾಹಿತಿಯನ್ನೂ ಸೇರಿಸಿದರು. ‘ಈ ರೀತಿ ಮೃದಂಗ, ತಬಲಾ ಮುಂತಾದ ತಾಳವಾದ್ಯಗಳ ಧ್ವನಿಯನ್ನು ಬಾಯಿಯಿಂದ ಉಚ್ಚರಿಸುವುದಕ್ಕೆ ನೃತ್ಯದಲ್ಲಾದರೆ ಜತಿ ಎನ್ನುತ್ತಾರೆ; ಸಂಗೀತ ಕಛೇರಿಯಲ್ಲಾದರೆ ‘ಕೊನ್ನಕ್ಕೋಲ್’ ಎನ್ನುತ್ತಾರೆ. ಹಿಂದೆಲ್ಲ ಆಕಾಶವಾಣಿಯಲ್ಲಿ ತಾಳ ವಾದ್ಯ ಕಛೇರಿಗಳು ಆಗಾಗ ಪ್ರಸಾರವಾಗುತ್ತಿದ್ದವು. ಮೃದಂಗ, ಘಟ, ಖಂಜಿರ, ತವಿಲ್, ಮೋರ್ಚಿಂಗ್ ಮತ್ತು ಕೊನ್ನಕ್ಕೋಲ್ ಇವುಗಳ ಲಯವಿನ್ಯಾಸ ಕೇಳಲಿಕ್ಕೆ ತುಂಬ ಚೆನ್ನಾಗಿರುತ್ತಿತ್ತು. ಈಗ ಅಂಥ ಕಾರ್ಯಕ್ರಮಗಳು, ಅದರಲ್ಲೂ ಕೊನ್ನಕ್ಕೋಲ್ ಕಣ್ಮರೆ ಯಾಗುತ್ತಿವೆ.

ಕೊನ್ನಕ್ಕೋಲ್ ಕಲಾವಿದರ ನಾಲಗೆ ಹೊರಳುಗಳು ನಿಜಕ್ಕೂ ಅತ್ಯಾಶ್ಚರ್ಯಕರ!’ ಎಂದು ಬರೆದರು. ಅದೇ ನನಗೂ ಬೇಕಿದ್ದದ್ದು. ಕೊನ್ನಕ್ಕೋಲ್ ಪದ ಕೇಳಿ/ಓದಿ ಗೊತ್ತಿತ್ತು ನನಗೆ. ಇಲ್ಲಿ ನಮ್ಮ ವಾಷಿಂಗ್ಟನ್ ಪ್ರದೇಶದ ಸಂಗೀತಸಂಸ್ಥೆ ‘ನಾದತರಂಗಿಣಿ’ಯ ವಾರ್ಷಿಕ ಸಂಗೀತೋತ್ಸವದಲ್ಲಿ ಲಯವಿನ್ಯಾಸವೂ ಒಂದು ಪ್ರಮುಖ ಆಕರ್ಷಣೆ. ಉತ್ಸವಕ್ಕೆಂದೇ ಬೆಂಗಳೂರಿನಿಂದ ಬರುವ ಸಂಗೀತವಿದ್ವಾನ್ ಆನೂರು ಅನಂತಕೃಷ್ಣ ಶರ್ಮ(ಶಿವು) ಅವರೇ ಕೆಲವೊಮ್ಮೆ ಕೊನ್ನಕ್ಕೋಲ್ ನಿರ್ವಹಿಸುತ್ತಾರೆ. ಆದರೆ ಆಗಲೇ ಹೇಳಿದಂತೆ ನಾನೇನಿದ್ದರೂ ಒಬ್ಬ ಶ್ರೋತೃ ಅಷ್ಟೇ, ಸಂಗೀತಜ್ಞ ಅಲ್ಲವಾದ್ದರಿಂದ ಕೊನ್ನಕ್ಕೋಲ್ ಬಗ್ಗೆ ಅಧಿಕಾರಯುತವಾಗಿ ಬರೆಯಲು ಸರಕು-ಸಾಮರ್ಥ್ಯ ಉಳ್ಳವನಲ್ಲ.

ನನ್ನ ಸೋದರ ಮಾವ ಹಾಗಲ್ಲ, ಒಬ್ಬ ಹವ್ಯಾಸಿ ಕೊಳಲುವಾದಕನಾಗಿ ಅವರು ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದವರು. ಒಂದಿಷ್ಟು ಗುರುಮುಖೇನ, ಮತ್ತೊಂದಿಷ್ಟು ಏಕಲವ್ಯ ನಂತೆ ಕಲಿತವರು. ಕೊಳಲು ಕಛೇರಿಗಳನ್ನಷ್ಟೇ ಅಲ್ಲದೇ ಮಂಗಳೂರು ಮತ್ತು ಆಸುಪಾಸಿನಲ್ಲಿ ಅದೆಷ್ಟೋ ಭರತನಾಟ್ಯ ರಂಗಪ್ರವೇಶಗಳ ಸಜೀವ-ಸಂಗೀತದಲ್ಲಿ ವೇಣುವಾದನ ನಿರ್ವಹಿಸಿದವರು. ಸಂಗೀತ-ನೃತ್ಯ ಪರಿಭಾಷೆ ಬಲ್ಲವರು. ಜತಿ, ನಟ್ಟುವಾಂಗ, ಸೊಲ್ ಕಟ್ಟು, ಕೊನ್ನಕ್ಕೋಲ್ ಮುಂತಾದ ಪಾರಿಭಾಷಿಕ ಪದಗಳನ್ನು ನಿಖರವಾಗಿ ಬಳಸುವ ಅರ್ಹತೆಯುಳ್ಳವರು.

ಕೊನ್ನಕ್ಕೋಲ್ ಬಗ್ಗೆ ಅಧಿಕೃತ ಮಾಹಿತಿಗೋಸ್ಕರ ಅಂತರಜಾಲ ಮಥನ ಮಾಡಿದಾಗ ಒಂದು ಒಳ್ಳೆಯ ಕನ್ನಡ ಲೇಖನವೇ ನನಗೆ ಸಿಕ್ಕಿತು. ಅದು, ಮುಂಬೈಯ ಮೈಸೂರು ಅಸೋಸಿಯೇಷನ್‌ನ ‘ನೇಸರು’ ತಿಂಗಳೋಲೆಯ ಮೇ 2003ರ ಸಂಚಿಕೆಯಲ್ಲಿ ಪ್ರಕಟವಾದದ್ದು. ಅದಕ್ಕಿಂತ ಒಂದುವರ್ಷ ಹಿಂದೆ, ಅಂದರೆ 2002ರ ಮಾರ್ಚ್‌ನಲ್ಲಿ ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ಕರ್ನಾಟಕ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ 32ನೇ ಸಮ್ಮೇಳನದಲ್ಲಿ ಮೃದಂಗ ವಿದ್ವಾನ್,

ಕರ್ನಾಟಕ ಕಲಾಶ್ರೀ ಬಿ.ಕೆ.ಚಂದ್ರಮೌಳಿಯವರು ಸೋದಾಹರಣವಾಗಿ ಮಂಡಿಸಿದ್ದ ಭಾಷಣದ ಲೇಖನರೂಪ. ಕೊನ್ನಕ್ಕೋಲ್ ಪದದ ವ್ಯುತ್ಪತ್ತಿಯಿಂದಲೇ ಆರಂಭವಾಗುತ್ತದೆ: ‘ತೆಲುಗು ಭಾಷೆಯಲ್ಲಿ ಕೊನಿ ಅಂದರೆ ಹೇಳುವುದು (ಕೊನಿಯಾಡು); ತಮಿಳಿನಲ್ಲಿ ಕೊನಕ್ಕುರದು ಎಂದರೆ ತೊದಲು ಭಾಷೆಯಿಂದ ಉಚ್ಚರಿಸುವುದು, ಹೇಳುವುದು, ಅಥವಾ ಜಪಿಸುವುದು. ಕ್ಕೋಲ್ ಎಂದರೆ ಆಳ್ವಿಕೆ ನಡೆಸುವುದು ಎಂಬರ್ಥ. ತಾಳವಾದ್ಯಗಳಿಗಿದು ರಾಜನ ಆಳ್ವಿಕೆಯಿದ್ದಂತೆ.

ತಮಿಳಿನ ಕೊನ್ನಕ್ಕೋಲ್ ಕನ್ನಡದಲ್ಲಿ ಕೊನಗೋಲು ಎಂಬುದಾಗಿಯೂ ಬಳಕೆಯಾಗುತ್ತದೆ. ಕೊನ್ನಕ್ಕೋಲ್ ಪರಂಪರೆ ಸಾವಿರಾರು ವರ್ಷಗಳಷ್ಟು ಹಿಂದಿನದು. ಬಹಳ ಹಿಂದಿನ ಕಾಲ ದಿಂದಲೂ ನೃತ್ಯಕ್ಕೆ ಹೇಳುವ ಜತಿಗಳ ಮೂಲಕ ಇದು ಹುಟ್ಟಿದ್ದಿರಬಹುದು. ಯಾವುದೇ ಲಯ ವಾದ್ಯವನ್ನು ಅಭ್ಯಾಸ ಮಾಡುವುದಾಗಲೀ ನುಡಿಸುವುದಾಗಲೀ ಅದಕ್ಕೆ ಮುಂಚೆ ವಾದಕರು ಈ ಕೊನಗೋಲನ್ನು ತಳಹದಿಯಾಗಿ ಮಾಡಿಕೊಳ್ಳಬೇಕು.

ಕೊನಗೋಲಿನಲ್ಲಿ ತಾಳದ ನಡೆಗಳನ್ನು ಉಚ್ಚರಿಸಿಕೊಂಡರೆ ಆಮೇಲೆ ಅದನ್ನೇ ವಾದ್ಯದಲ್ಲಿ ನುಡಿಸುವುದು ಸುಲಭವಾಗುತ್ತದೆ...’ ಮುಂತಾದ ವಿವರಗಳಿರುವ ಆ ಲೇಖನದಲ್ಲಿ, ಕೊನಗೋಲು ಕಲೆಯನ್ನು ಉಳಿಸಿ ಬೆಳೆಸಿದ ಅನೇಕ ವಿದ್ವಾಂಸರ ಹೆಸರನ್ನು ಉಲ್ಲೇಖಿಸಿ ಗೌರವಿಸಲಾಗಿದೆ. ಅಂತರಜಾಲದಲ್ಲೇ ನನಗೆ ಸಿಕ್ಕಿದ ಇನ್ನೊಂದು ಗಮನಾರ್ಹ ಆಕರವೆಂದರೆ `Konnakol- The History and Development of Solkattu - the Vocal Syllables - of the Mridangam' ಎಂಬೊಂದು ಸಂಶೋಧನಾ ಪ್ರಬಂಧ. ಲೀಸಾ ಯಂಗ್ ಎಂಬ ಓರ್ವ ಆಸ್ಟ್ರೇಲಿಯನ್ ಸಂಗೀತ ಗಾರ್ತಿ ನಮ್ಮ ಕರ್ನಾಟಕ ಶಾಸೀಯಸಂಗೀತದಲ್ಲಿ ಆಸಕ್ತಳಾಗಿ ಚೆನ್ನೈಗೆ ಬಂದು ಪ್ರಸಿದ್ಧ ವಿದ್ವಾನ್ ಕಾರೈಕುಡಿ ಆರ್.ಮಣಿಯವರಲ್ಲಿ ಶಿಷ್ಯವೃತ್ತಿ ನಡೆಸಿ ಅವರ ಮಾರ್ಗ ದರ್ಶನದಲ್ಲಿಯೇ ಕೈಗೊಂಡ ಸಂಶೋಧನೆಯ ಪ್ರೌಢಪ್ರಬಂಧ. ಮೆಲ್ಬೋರ್ನ್ ವಿಶ್ವವಿದ್ಯಾಲಯ ದಿಂದ ಮಾಸ್ಟರ್ ಇನ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಪದವಿಗಾಗಿ,‌ ವಿಕ್ಟೋರಿಯನ್ ಕಾಲೇಜ್ ಆಫ್ ಆರ್ಟ್ಸ್ ಮೂಲಕ 1998ರಲ್ಲಿ ಸಲ್ಲಿಸಿದ್ದು. ವಿದೇಶೀಯಳೊಬ್ಬಳ ದೃಷ್ಟಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಅದರಲ್ಲೂ ಮೃದಂಗ ಮತ್ತು ಕೊನ್ನಕ್ಕೋಲ್ ಗಳ ಅವಿನಾಭಾವ ಸಂಬಂಧಗಳ ಆಳವಾದ ಮತ್ತು ಶ್ರದ್ಧಾಪೂರ್ವಕ ಅಧ್ಯಯನ.

ಅಷ್ಟಾಗಿ, ಕೊನ್ನಕ್ಕೋಲ್ ಬಗ್ಗೆಯೇ ಮಾಹಿತಿ ಸಂಗ್ರಹಣೆಯ ಹುಚ್ಚು ನನಗೇಕೆ ಹಿಡಿಯಿತು? ಅದಕ್ಕೆ ಕಾರಣ ನನ್ನೊಬ್ಬ ಹಿರಿಯ ಹಿತೈಷಿ ಓದುಗಮಿತ್ರ, ಮೂಲತಃ ನಮ್ಮೂರಿನವರೇ ಆದರೂ ಈಗ ಬೆಂಗಳೂರಿನಲ್ಲಿ ನಿವೃತ್ತಜೀವನ ನಡೆಸುತ್ತಿರುವ ಮುಕುಂದ ಚಿಪಳೂಣಕರ್. ಅವರು ಮೊನ್ನೆ ನನಗೆ ಕಳುಹಿಸಿದ ಒಂದು ಸುದ್ದಿತುಣುಕು. ಕನ್ನಡ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ‘ವಾದ್ಯ ವೈಭವ: ಬೆಂಗಳೂರು ಗಾಯನ ಸಮಾಜವು ವಾದ್ಯವೈಭವ-2025 ಸಂಗೀತ ಕಾರ್ಯಕ್ರಮ ಆಯೋಜಿಸಿದೆ.

ಇದರ ಪ್ರಯುಕ್ತ ಶನಿವಾರ ಸಂಜೆ 6ಕ್ಕೆ ಎಚ್.ಕೆ. ವೆಂಕಟರಾಮ್ ಪಿಟೀಲು, ಪ್ರವೀಣ್ ಸ್ಪರ್ಶ ಅವರು ಮೃದಂಗ, ಜಿ.ಗುರುಪ್ರಸನ್ನ ಅವರು ಖಂಜಿರ, ಸೋಮಶೇಖರ ಜೋಯಿಸ್ ಅವರು ಕಣ್ಣಗೋಳು ನುಡಿಸಲಿದ್ದಾರೆ ಎಂಬ ಸುದ್ದಿಯ ಕ್ಲಿಪ್ಪಿಂಗ್. ಅದರಲ್ಲಿರುವ ‘ಕಣ್ಣಗೋಳು’ ಎಂದರೇನು, ಅದು ಕೊಳಲು ಇರಬಹುದೇ ಎಂದು ಮುಕುಂದಣ್ಣನ ಪ್ರಶ್ನೆ. ಆ ಸುದ್ದಿತುಣುಕಿನಲ್ಲಿ ಸೋಮಶೇಖರ ಜೋಯಿಸ್ ಎಂಬ ಹೆಸರು ಓದಿದೊಡನೆ ಅದು ಕಣ್ಣಗೋಳು ಅಲ್ಲ, ಕೊನ್ನಕ್ಕೋಲ್ ಅಥವಾ ಕೊನಗೋಲು ಎಂದು ನನಗೆ ತಿಳಿಯಿತು. ಪತ್ರಿಕೆಯವರು ತಪ್ಪು ಬರೆದಿದ್ದಾರೆಂದು ಅಂದಾಜಾಯ್ತು.

ಏಕೆಂದರೆ ಸೋಮಶೇಖರ ಜೋಯಿಸ್ ಅವರು ಕೊನ್ನಕ್ಕೋಲ್ ಕಲಾವಿದರಾಗಿ ಪ್ರಸಿದ್ಧರು. ಕೊನ್ನ ಕ್ಕೋಲ್ ಕಲೆಯ ಪೋಷಣೆ-ಪ್ರಚಾರದಲ್ಲಿ ತೊಡಗಿಸಿಕೊಂಡವರು. ಅದಕ್ಕೋಸ್ಕರವೇ ಒಂದು ಯುಟ್ಯೂಬ್ ಚಾನೆಲ್ ಸಹ ನಡೆಸುತ್ತಿರುವವರು. ಫೇಸ್‌ಬುಕ್‌ನಲ್ಲೂ ಸಕ್ರಿಯರು. ಕರ್ನಾಟಕ ಸರಕಾರ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ತಾಳವಾದ್ಯ ಪರೀಕ್ಷೆಗಳಲ್ಲಿ ಕೊನಗೋಲೂ ಸೇರು ವಂತಾದದ್ದು ಅವರ ಪ್ರಯತ್ನದ ಫಲ.

ತನ್ನ ನೆಚ್ಚಿನ ಕಲೆಯ ಹೆಸರು ಕಣ್ಣಗೋಳು ಎಂದು ಪತ್ರಿಕೆಯಲ್ಲಿ ಅಚ್ಚಾದದ್ದು ಮಾತ್ರ ಅವರಿಗೂ ತುಸು ಇರಿಸುಮುರಿಸು ಆಯ್ತೇನೋ. ನನಗದು ಅನುಕೂಲಕರವಾಗಿಯೇ ಒದಗಿಬಂತು. ‘ನಿಮಗೆ ಅಂಕಣಬರಹಕ್ಕೆ ವಿಷಯ ಎಲ್ಲಿಂದ ಹೊಳೆಯುತ್ತದೆ? ಬೇಕಾದ ಮಾಹಿತಿಯನ್ನೆಲ್ಲ ಎಲ್ಲಿಂದ ಸಂಗ್ರಹಿಸುತ್ತೀರಿ?’ ಎಂದು ಆಗಾಗ ನಾನೆದುರಿಸುವ ಪ್ರಶ್ನೆಗೆ ಉದಾಹರಣೆ ರೂಪದ ಉತ್ತರವೆಂಬಂತೆ ಈ ವಾರದ ತೋರಣ ಕಟ್ಟುವುದಕ್ಕಾಯ್ತು.

ನಿಮಗಾದರೂ ಅಷ್ಟೇ- ಇನ್ನು ಮುಂದೆ ಬಭ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ ಹಾಡನ್ನು, ಮುಖ್ಯವಾಗಿ ‘ತತ್ತಧೀಂ ತಕಿಟ ತಕತಧೀಂ ತಕಿಟ...’ ಭಾಗವನ್ನು ಕೇಳುವಾಗ ಅದರ ಹಿಂದೆ ಇಷ್ಟೆಲ್ಲ ಸ್ವಾರಸ್ಯಕರ ವಿಷಯವಿದೆ ಎಂದು ನೆನಪಿಸಿಕೊಳ್ಳುವುದಕ್ಕಾಯ್ತು!