ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಈಸ್ಟರ್‌ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !

ಪಂಚಾಂಗ ಪುಸ್ತಕ ಅಚ್ಚಿನಮನೆಯಿಂದ ಮಾರುಕ ಟ್ಟೆಗೆ ಬರುವಾಗಲೇ ಅದರ ಎಡ ಮೂಲೆ ಯಲ್ಲೊಂದು ತೂತು ಪಂಚ್ ಮಾಡಿದ್ದಿರುತ್ತದೆ, ದಾರ ಪೋಣಿಸಿ ಗೋಡೆಯ ಮೊಳೆಗೆ ನೇತು ಹಾಕಲಿಕ್ಕೆ ಅನುಕೂಲ ಆಗಲೆಂದು. ಅಂದರೆ ಈ ದೇಶದಲ್ಲೂ ನಮ್ಮಲ್ಲಿಯಂತೆ ಪಂಚಾಂಗವನ್ನು ಗೋಡೆಗೆ ನೇತಾಡಿಸಿಡುವ ಕ್ರಮವೇ ಇರುವುದು!

ಈಸ್ಟರ್‌ ಎಷ್ಟು ಸೌರಮಾನವೋ ಅಷ್ಟೇ ಚಾಂದ್ರಮಾನವೂ ಹೌದು !

ತಿಳಿರುತೋರಣ

srivathsajoshi@yahoo.com

ಅಮೆರಿಕದಲ್ಲೊಂದು ರೈತರ ಪಂಚಾಂಗ ಅಂತ ಇದೆ, The Old Farmer's Almanac ಎಂದು ಅದರ ಹೆಸರು. ಕ್ರಿ.ಶ. 1792ರಿಂದ ಪ್ರತಿವರ್ಷವೂ ಪ್ರಕಟವಾಗುತ್ತಿರುವುದರಿಂದ ‘ಉತ್ತರ ಅಮೆರಿಕ ಖಂಡ ದಲ್ಲಿ ಅಖಂಡ ಪ್ರಕಟಣೆ ಕಂಡಿರುವ ಅತ್ಯಂತ ಹಳೆಯ ನಿಯತಕಾಲಿಕ’ ಎಂಬ ಹೆಗ್ಗಳಿಕೆ ಅದರದು. ಹೆಸರಿನ ಮಟ್ಟಿಗೆ ರೈತರ ಪಂಚಾಂಗ ಅಂತ ಇದ್ದರೂ ಅದರ ಹೂರಣದಲ್ಲಿ ರಸವೈವಿಧ್ಯ ಇರುತ್ತದೆ.

ಹವಾಮಾನ ಮುನ್ಸೂಚನೆ, ಮಳೆ-ಬೆಳೆ ಲಕ್ಷಣಗಳು, ಯಾವ ಬಿತ್ತನೆಯನ್ನು ಯಾವಾಗ ಮಾಡಬೇಕು ಎಂಬ ಕೋಷ್ಟಕಗಳು ಮತ್ತಿತರ ಕೃಷಿ ಸಲಹೆಗಳೆಲ್ಲ ರೈತರಿಗೆ ಮಾರ್ಗದರ್ಶಿ. ಹೊಸರು ಚಿಗಳು, ಫ್ಯಾಷನ್ ಶೈಲಿಗಳು, ತಂತ್ರಜ್ಞಾನದ ಹೊಸ ಉತ್ಪನ್ನಗಳ ಪರಿಚಯ, ಪ್ರಮುಖ ಕ್ರೀಡೆಗಳ, ಜನಪದ ಉತ್ಸವಗಳ ವೇಳಾಪಟ್ಟಿ, ಗ್ರಹಗತಿಗಳ ಪ್ರಕಾರ ವರ್ಷಭವಿಷ್ಯ... ಇವೆಲ್ಲ ರೈತರಲ್ಲದ ಜನಸಾಮಾನ್ಯ ರಿಗೂ ಜ್ಞಾನದಾಯಕ, ಮನೋರಂಜಕ.

ಇನ್ನೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಈ ಪಂಚಾಂಗ ಪುಸ್ತಕ ಅಚ್ಚಿನಮನೆಯಿಂದ ಮಾರುಕ ಟ್ಟೆಗೆ ಬರುವಾಗಲೇ ಅದರ ಎಡ ಮೂಲೆಯಲ್ಲೊಂದು ತೂತು ಪಂಚ್ ಮಾಡಿದ್ದಿರುತ್ತದೆ, ದಾರ ಪೋಣಿಸಿ ಗೋಡೆಯ ಮೊಳೆಗೆ ನೇತುಹಾಕಲಿಕ್ಕೆ ಅನುಕೂಲ ಆಗಲೆಂದು. ಅಂದರೆ ಈ ದೇಶದಲ್ಲೂ ನಮ್ಮಲ್ಲಿಯಂತೆ ಪಂಚಾಂಗವನ್ನು ಗೋಡೆಗೆ ನೇತಾಡಿಸಿಡುವ ಕ್ರಮವೇ ಇರುವುದು!

ಪಂಚಾಂಗ ಎಂದಮೇಲೆ ಯಾವ್ಯಾವ ಹಬ್ಬಗಳು ಯಾವ ದಿನ/ದಿನಾಂಕದಂದು ಬರುತ್ತವೆಂಬ ವಿವರಗಳೂ ಇದ್ದೇ ಇರುತ್ತವೆ. ಅಮೆರಿಕದಲ್ಲಿ ಬಹುಸಂಖ್ಯಾತರು ಕ್ರಿಶ್ಚಿಯನ್ ಮತಾನುಯಾಯಿಗಳು ಆದ್ದರಿಂದ ಕ್ರಿಶ್ಚಿಯನ್ ಹಬ್ಬಗಳ ವಿವರಗಳಿರುತ್ತವೆಯೇ ಹೊರತು ಸಂಕಷ್ಟ ಚತುರ್ಥಿ, ವೈಕುಂಠ ಏಕಾದಶಿ, ಬನದ ಹುಣ್ಣಿಮೆ, ಭೀಮನ ಅಮಾವಾಸ್ಯೆಗಳೆಲ್ಲ ಈ ರೈತರ ಪಂಚಾಂಗದಲ್ಲಿ ನಮೂದಾ ಗಿರುವುದಿಲ್ಲವೆನ್ನಿ. ಅಥವಾ ಈದ್ -ಮಿಲಾದ್, ಬಕ್ರಿದ್, ರಮ್ಜಾನ್‌ಗಳೂ ಇದುವರೆಗೆ ರೈತರ ಪಂಚಾಂಗದಲ್ಲಿ ಕಾಣಿಸಿಕೊಂಡಿಲ್ಲವೆನ್ನಿ.

ಅಂದ ಹಾಗೆ ಕ್ರಿಶ್ಚಿಯನ್ ಹಬ್ಬಗಳು- ಹೊಸ ವರ್ಷದ ದಿನ ಯಾವಾಗಲೂ ಜನವರಿ 1, ಕ್ರಿಸ್ಮಸ್ ಯಾವಾಗಲೂ ಡಿಸೆಂಬರ್ 25- ಹೀಗೆ ನಿರ್ದಿಷ್ಟ ದಿನಾಂಕದಂದೇ ಬರುವುದರಿಂದ ಪಂಚಾಂಗದ ಆವಶ್ಯಕತೆಯೇನಿದೆ? ಹಾಗೆ ನೋಡಿದರೆ ಅಮೆರಿಕದಲ್ಲಿ ಬೇರೆ ಕೆಲವು ಸಾರ್ವಜನಿಕ ರಜಾದಿನಗಳೂ- ಪ್ರೆಸಿಡೆಂಟ್ಸ್ ಡೇ, ಮೆಮೋರಿಯಲ್ ಡೇ, ಲೇಬರ್ ಡೇ, ಥ್ಯಾಂಕ್ಸ್‌ಗಿವಿಂಗ್ ಡೇ ಮುಂತಾದುವು- ಇಂಥಿಂಥ ತಿಂಗಳ ಇಂಥಿಂಥ ವಾರದಂದು, ಉದಾಹರಣೆಗೆ ಪ್ರೆಸಿಡೆಂಟ್ಸ್ ಡೇ ಫೆಬ್ರವರಿ ತಿಂಗಳ ಮೂರನೇ ಸೋಮವಾರ, ಮೆಮೋರಿಯಲ್ ಡೇ ಮೇ ತಿಂಗಳ ಕೊನೆಯ ಸೋಮವಾರ, ಲೇಬರ್ ಡೇ ಸೆಪ್ಟೆಂಬರ್ ತಿಂಗಳ ಮೊದಲ ಸೋಮವಾರ- ಹೀಗೆ ಇರುವುದರಿಂದ ಸರಿಸುಮಾರಾಗಿ ಯಾವಾಗ ಬರುತ್ತವೆಂದು ಪಂಚಾಂಗವಿಲ್ಲದೆಯೇ ಅಂದಾಜು ಮಾಡಲಿಕ್ಕಾಗುತ್ತದೆ.

ಗ್ರೆಗೋರಿಯನ್ ಕ್ಯಾಲೆಂಡರ್‌ನ ತಿಂಗಳು, ದಿನಾಂಕ ಅಥವಾ ವಾರದ ಯಾವ ದಿನ- ಇದಿಷ್ಟೇ ಪರಿಗಣನೆಯಾದ್ದರಿಂದ ಇವೆಲ್ಲವೂ ಸೌರಮಾನ. ಅಂದರೆ ಸೂರ್ಯನ ಸುತ್ತ ಭೂಮಿಯ ಚಲನೆ ಯನ್ನು ಆಧರಿಸಿ ನಿರ್ಣಯವಾಗುವಂಥವು. ಆದರೆ ಈಸ್ಟರ್ ಸಂಡೇ (ಮತ್ತು ಅದರಿಂದಾಗಿ ಗುಡ್ ಫ್ರೈಡೇ ಆಚರಣೆ) ಇದಕ್ಕೊಂದು ಅಪವಾದ! ಕಾರಣ, ಈಸ್ಟರ್ ಪ್ರತಿವರ್ಷವೂ ಭಾನುವಾರ ದಂದೇ ಇರುವುದು ಹೌದಾದರೂ ಕರಾರುವಾಕ್ಕಾಗಿ ಯಾವ ತಿಂಗಳ ಯಾವ ದಿನದಂದು ಎಂಬ ಲೆಕ್ಕಾಚಾರ ತುಂಬ ಸಂಕೀರ್ಣವಾದುದು, ಮತ್ತು ಅದರಲ್ಲಿ ಚಾಂದ್ರಮಾನ ಕಾಲಗಣನೆಯೂ ಸೇರಿಕೊಂಡಿರು ವುದು!

ರೈತರ ಪಂಚಾಂಗದಲ್ಲಿ ಇದನ್ನು ಕೂಲಂಕಷವಾಗಿ ವಿವರಿಸಿದ್ದಾರೆ. ನಮ್ಮೆಲ್ಲರ ಸಾಮಾನ್ಯಜ್ಞಾನ ಭಂಡಾರದಲ್ಲಿ ಇಂಥ ವಿಷಯಗಳೂ ಸೇರಿಕೊಂಡಿರಬೇಕು ಎಂಬ ಆಶಯದಿಂದ ಮತ್ತು ಈದಿನ (20 ಏಪ್ರಿಲ್ 2025) ಈಸ್ಟರ್ ಸಂಡೇ ಆದ್ದರಿಂದ, ಸಂದರ್ಭೋಚಿತವಾಗಿ ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಕೆಲವು ವಿವರಗಳನ್ನೊದಗಿಸುವ ಒಂದು ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ. ಓದುಗಮಿತ್ರರೆಲ್ಲರಿಗೂ ಈಸ್ಟರ್ ಹಬ್ಬದ ಶುಭ ಹಾರೈಕೆಗಳನ್ನೂ ಇದರೊಡನೆ ಸೇರಿಸಿದ್ದೇನೆ.

ಈಸ್ಟರ್ ಸಂಡೇ ಅಂದರೆ ನಮಗೆಲ್ಲ ತಿಳಿದಿರುವಂತೆ ಯೇಸುಕ್ರಿಸ್ತನ ಪುನರುತ್ಥಾನ ( Resurrection) ಆದ ದಿನ. ಅದಕ್ಕೆ ಎರಡು ದಿನಗಳ ಹಿಂದೆ ಗುಡ್ ಫ್ರೈಡೇಯಂದು ಕ್ರಿಸ್ತನನ್ನು ಶಿಲುಬೆಗೇರಿಸಿದ್ದು. ಪ್ರತಿವರ್ಷ ಈಸ್ಟರ್ ಸಂಡೇ (ಮತ್ತು ಅದರ ಹಿಂದಿನ ಗುಡ್ ಫ್ರೈಡೇ) ಯಾವ ದಿನಾಂಕದಂದು ಬರುತ್ತದೆ ಯೆಂಬುದು, ಮೇಲ್ನೋಟಕ್ಕೆ ಸುಲಭವಾಗಿ ಕಾಣುವ ಆದರೆ ನಿಜವಾಗಿಯೂ ಸಂಕೀರ್ಣ ವಾದ ಲೆಕ್ಕಾಚಾರ.

ಸುಲಭವಾದ ಲೆಕ್ಕಾಚಾರದಂತೆ “ಪ್ರತಿವರ್ಷ ಮಾರ್ಚ್ 21ರಂದು ಸಂಭವಿಸುವ ಸಮನಿಶಿ (ಹಗಲು ಮತ್ತು ರಾತ್ರಿ ಸಮಪ್ರಮಾಣದಲ್ಲಿರುವ ದಿನ ಅಥವಾ Spring Equinox) ಆದ ಮೇಲಿನ ಹುಣ್ಣಿ ಮೆಯ ತರುವಾಯ ಬರುವ ಮೊದಲ ಭಾನುವಾರ" ಈಸ್ಟರ್ ಸಂಡೇ ಮತ್ತು ಅದಕ್ಕಿಂತ ಹಿಂದಿನ ಶುಕ್ರವಾರವೇ ಗುಡ್ ಫ್ರೈಡೇ. ಈ ವ್ಯಾಖ್ಯೆಯ ಪ್ರಕಾರ ಈಸ್ಟರ್ ಸಂಡೇ ಯಾವುದೇ ವರ್ಷದಲ್ಲಿ ಮಾರ್ಚ್ 22ರಿಂದ ಏಪ್ರಿಲ್ 25ರವರೆಗಿನ ಅವಧಿಯಲ್ಲಿನ ಒಂದು ಭಾನುವಾರದಂದು ಬರುತ್ತದೆ.

ಈಗ, ಈ ಸುಲಭ ಲೆಕ್ಕಾಚಾರ ಈ ವರ್ಷಕ್ಕೆ, ಅಂದರೆ 2025ನೇ ಇಸವಿಗೆ ಕೂಡಿ ಬರುತ್ತದೆಯೇ ನೋಡೋಣ. ಈ ವರ್ಷ ಸಮನಿಶಿ ಇದ್ದದ್ದು ಮಾರ್ಚ್ 20ರಂದು. ಸುಲಭ ಲೆಕ್ಕಾಚಾರಕ್ಕೆ ಅಲ್ಲೇ ಸ್ವಲ್ಪ ಎಡವಟ್ಟಾಯ್ತು, ಆದರೂ ಪರವಾಇಲ್ಲ, ಹುಣ್ಣಿಮೆ ಇನ್ನೂ ದೂರದಲ್ಲಿದ್ದುದರಿಂದ ಗೊಂದಲವಿಲ್ಲ. ಆ ಹುಣ್ಣಿಮೆ ಇದ್ದದ್ದು ಏಪ್ರಿಲ್ 12ರಂದು ಶನಿವಾರ. ಹುಣ್ಣಿಮೆಯ ತರುವಾಯ ಬರುವ ಮೊದಲ ಭಾನುವಾರ ಅಂದರೆ ಏಪ್ರಿಲ್ 13.

ಸುಲಭ ಲೆಕ್ಕಾಚಾರ ಮತ್ತೊಮ್ಮೆ ತಪ್ಪಿತು. ಆವತ್ತು ಈಸ್ಟರ್ ಸಂಡೇ ಆಗಿರಲಿಲ್ಲ, ಬದಲಿಗೆ ಹುಣ್ಣಿಮೆ ಆದಮೇಲಿನ ಎರಡನೇ ಭಾನುವಾರ, ಅಂದರೆ ಏಪ್ರಿಲ್ 20ರಂದು ಈಸ್ಟರ್ ಬಂದಿದೆ. ಹಾಗಾಗಿ ಈ ವರ್ಷದ ಈಸ್ಟರ್ ದಿನನಿರ್ಧಾರ ಸುಲಭ ಲೆಕ್ಕಾಚಾರದ್ದಲ್ಲ, ಸಂಕೀರ್ಣ ಲೆಕ್ಕಾಚಾರದ್ದು. ಲೆಕ್ಕಾಚಾರ ಸಂಕೀರ್ಣ ಆಗುವುದು ಕೆಲವು ವರ್ಷಗಳಲ್ಲಿ ನೈಜ ಖಗೋಳ ವಿದ್ಯಮಾನದ ಪ್ರಕಾರ ಅಂದರೆ ಸೂರ್ಯನ ಸುತ್ತ ಭೂಮಿ ಮತ್ತು ಭೂಮಿಯ ಸುತ್ತ ಚಂದ್ರನ ಚಲನೆಯನ್ನಾಧರಿಸಿ ಹಗಲು-ರಾತ್ರಿ ಹುಣ್ಣಿಮೆ-ಅಮಾವಾಸ್ಯೆಗಳು ಸಂಭವಿಸುವುದಕ್ಕೂ, ಹಿಂದಿನ ಕಾಲದ ಕ್ರೈಸ್ತ ಧರ್ಮಗುರುಗಳು ನಿರ್ಧರಿಸಿಟ್ಟ ಕೋಷ್ಟಕದ ಪ್ರಕಾರ ಆಯಾ ವರ್ಷಗಳಲ್ಲಿ ಸಮನಿಶಿ ಮತ್ತು ತದನಂತರದ ಹುಣ್ಣಿಮೆ ಯಾವತ್ತೆಂದು ನಮೂದಾಗಿರುವುದಕ್ಕೂ ವ್ಯತ್ಯಾಸ ಬಂದಾಗ.

ಹಿಂದಿನ ಕಾಲದ ಅಂದರೆ ಒಂದೆರಡು ಶತಮಾನಗಳ ಹಿಂದಿನ ಅಲ್ಲ, ಕ್ರಿ.ಶ. 325ನೆಯ ಇಸವಿಯಲ್ಲಿ ಮುಂದಿನ ಸಾವಿರಾರು ವರ್ಷಗಳಿಗಾಗುವಂತೆ ಪ್ಯಾಶ್ಚಲ್ ಹುಣ್ಣಿಮೆ (ಮಾರ್ಚ್ 21ರ ಸಮನಿಶಿ ದಿನ ಆದಮೇಲಿನ ಮೊದಲ ಹುಣ್ಣಿಮೆ)ಗಳ ಪಟ್ಟಿಯೊಂದನ್ನು ಮಾಡಿಟ್ಟಿದ್ದಾರೆ, ಮತ್ತು ಪಾಶ್ಚಾತ್ಯ ಚರ್ಚ್‌ಗಳು ಈಗಲೂ ಅದೇ ಪಟ್ಟಿಯನ್ನು ಅನುಸರಿಸುತ್ತವೆ. ಈ ಮಧ್ಯೆ ಜೂಲಿಯನ್ ಕ್ಯಾಲೆಂಡರ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಎಂಬೆರಡು ಭಿನ್ನ ಕಾಲಗಣನೆಗಳು ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅಧಿಕವರ್ಷ, ಫೆಬ್ರವರಿಯಲ್ಲಿ 29 ದಿನ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅಧಿಕವರ್ಷ ಹೌದು ಆದರೆ 100 ರಿಂದ ನಿಶ್ಶೇಷ ಭಾಗವಾಗುವ ಇಸವಿಗಳು 400ರಿಂದಲೂ ನಿಶ್ಶೇಷ ಭಾಗವಾದರೆ ಮಾತ್ರ ಅಧಿಕ ವರ್ಷ. ಉದಾಹರಣೆಗೆ 1900 ಅಥವಾ 2100ನೇ ಇಸವಿಗಳು ಜೂಲಿಯನ್ ಪ್ರಕಾರ ಮಾತ್ರ ಅಧಿಕ ವರ್ಷಗಳು. 2000ನೇ ಇಸವಿ ಗ್ರೆಗೋರಿಯನ್‌ನಲ್ಲೂ ಅಧಿಕವರ್ಷವೇ. ಕ್ರಿ.ಶ 325ನೆಯ ಇಸವಿಯಲ್ಲಿ ಕ್ರೈಸ್ತ ಧರ್ಮಗುರುಗಳು ಪಟ್ಟಿ ಮಾಡಿಟ್ಟದ್ದು ಈಸ್ಟರ್ ದಿನನಿರ್ಣಯ ಸುಲಭವಾಗಲಿ ಎಂದೇ.

ಆದರೆ ಸೂರ್ಯ, ಭೂಮಿ, ಚಂದ್ರನ ಸಾಪೇಕ್ಷ ಸ್ಥಾನಗಳು ಮತ್ತು ಚಲನೆಗಳಲ್ಲಿನ ಸೂಕ್ಷ್ಮ ಏರು ಪೇರುಗಳು ಒಂದೋ ಅವರಿಗೆ ಅರಿವಿರಲಿಲ್ಲ, ಅಥವಾ ಇದ್ದರೂ ಅವುಗಳನ್ನವರು ಗಣನೆಗೆ ತೆಗೆದುಕೊಳ್ಳಲಿಲ್ಲ. ಸಮನಿಶಿ ಪ್ರತಿವರ್ಷವೂ ಮಾರ್ಚ್ 21ರಂದೇ ಬರುತ್ತದೆಯೆಂದು ಅವರು ಬರೆದಿಟ್ಟರು ಮತ್ತು ಅದನ್ನೇ ಈಸ್ಟರ್ ದಿನನಿರ್ಧಾರಕ್ಕೆ ಆಧಾರವಾಗಿರಿಸಿದರು.

ಸಮನಿಶಿಯ ಬಳಿಕ ಬರುವ ಪ್ಯಾಶ್ಚಲ್ ಹುಣ್ಣಿಮೆಯ ದಿನವನ್ನೂ ಪ್ರತಿವರ್ಷಕ್ಕೆ ಅವರು ಆಗಲೇ ಬರೆದಿಟ್ಟಿದ್ದರು. ಈಸ್ಟರ್ ದಿನನಿರ್ಧಾರದಲ್ಲಿ ಪ್ಯಾಶ್ಚಲ್ ಹುಣ್ಣಿಮೆಯೂ ಮುಖ್ಯವಾಗುತ್ತದೆ. 2019ರಲ್ಲಿ ಏನಾಯ್ತೆಂದರೆ ಸಮನಿಶಿ ಮಾರ್ಚ್ 20ರಂದು, ಅಮೆರಿಕದ ಪೂರ್ವ ಕರಾವಳಿ ಸಮಯ
ಸಂಜೆ 5:58ಕ್ಕೆ ಆಯ್ತು. ಆವತ್ತೇ ಹುಣ್ಣಿಮೆಯೂ ಇತ್ತು.

ರಾತ್ರಿ 9:43ಕ್ಕೆ ಪೂರ್ಣಚಂದ್ರದರ್ಶನ. ಸರಳ ಲೆಕ್ಕಾಚಾರದ ಪ್ರಕಾರವಾದರೆ ಆ ವರ್ಷ ಈಸ್ಟರ್ ಆಚರಣೆ ಭಾನುವಾರ ಮಾರ್ಚ್ 24ರಂದು ಇರಬೇಕಿತ್ತು. ಆದರೆ ಹಾಗಾಗಲಿಲ್ಲ. ಮುಂದೆ ಏಪ್ರಿಲ್ 19ರಂದು ಶುಕ್ರವಾರ ಪ್ಯಾಶ್ಚಲ್ ಹುಣ್ಣಿಮೆ ಆಯ್ತು, ಅನಂತರದ ಭಾನುವಾರ ಏಪ್ರಿಲ್ 21ರಂದು ಈಸ್ಟರ್ ಸಂಡೇ ಆಚರಣೆ ಆಯ್ತು. ಈ ವರ್ಷ(2025) ಸಮನಿಶಿ ಆದ ಮೇಲಿನ ನಿಜವಾದ ಹುಣ್ಣಿಮೆ ಇದ್ದದ್ದು ಶನಿವಾರ ಏಪ್ರಿಲ್ 12ರಂದು. ಆದರೆ ಕ್ರೈಸ್ತ ಧರ್ಮಗುರುಗಳ ಪಟ್ಟಿಯಲ್ಲಿ ಈ ವರ್ಷದ ಪ್ಯಾಶ್ಚಲ್ ಹುಣ್ಣಿಮೆ ಇರುವುದು ಭಾನುವಾರ ಏಪ್ರಿಲ್ 13ರಂದು.

ಅದಾದ ಮೇಲಿನ ಭಾನುವಾರವೆಂದರೆ ಏಪ್ರಿಲ್ 20 ಈ ವರ್ಷದ ಈಸ್ಟರ್ ದಿನಾಚರಣೆ ಎಂದಾಯ್ತು. ಒಮ್ಮೆ ಈಸ್ಟರ್ ದಿನನಿರ್ಧಾರವಾದ ಮೇಲೆ ಗುಡ್ ಫ್ರೈಡೇ ದಿನನಿರ್ಧಾರ ಸುಲಭ. ಬೇರೇನೂ ನಿಯಮಗಳಿಲ್ಲ, ಈಸ್ಟರ್ ಸಂಡೇಗಿಂತ ಎರಡು ದಿನ ಹಿಂದಿನ ಶುಕ್ರವಾರವೇ ಗುಡ್ ಫ್ರೈಡೇ. ಹಾಗಾಗಿ ಈ ವರ್ಷ ಗುಡ್ ಫ್ರೈಡೇ ಏಪ್ರಿಲ್ 18ರಂದು ಆಯ್ತು. ಅಷ್ಟಾಗಿ, ಪ್ರಪಂಚದಾದ್ಯಂತ ಎಲ್ಲ ಕ್ರಿಶ್ಚಿಯನ್ನರೂ ಒಂದೇ ದಿನದಂದು ಈಸ್ಟರ್ ಆಚರಿಸುತ್ತಾರೆಯೇ? ಉತ್ತರ ಹೌದು ಮತ್ತು ಇಲ್ಲ ಎರಡೂ!

ಪೌರ್ವಾತ್ಯ ಸಾಂಪ್ರದಾಯಿಕ ಚರ್ಚ್ ಎಂದು ಕರೆಯಲ್ಪಡುವ ಪಂಗಡವು ಸಮನಿಶಿ ಮತ್ತು ಅನಂತರದ ಹುಣ್ಣಿಮೆಯು ಜೆರುಸಲೆಮ್‌ನ (ಕ್ರಿಸ್ತನನ್ನು ಶಿಲುಬೆಗೆ ಆರೋಹಿಸಿದ ಮತ್ತು ಪುನರು ತ್ಥಾನವಾದ ಸ್ಥಳ) ಅಕ್ಷಾಂಶ-ರೇಖಾಂಶಗಳಿಗೆ ಅನ್ವಯವಾಗುವಂತೆ ಯಾವಾಗ ಬರುತ್ತದೆಂದು ಲೆಕ್ಕ ಮಾಡಿ ಅದರಂತೆ ಈಸ್ಟರ್ ದಿನವನ್ನು ನಿರ್ಧರಿಸುತ್ತದೆ. ಪಾಶ್ಚಾತ್ಯ ಚರ್ಚ್, ಮೇಲೆ ವಿವರಿಸಿದಂತೆ ಸಮನಿಶಿ ಪ್ರತಿವರ್ಷವೂ ಮಾರ್ಚ್ 21ಕ್ಕೇ ಬರುತ್ತದೆಂದು ಪರಿಗಣಿಸಿ ಅನಂತರದ ಪ್ಯಾಶ್ಚಲ್ ಹುಣ್ಣಿಮೆಯ ದಿನವನ್ನೂ ಕ್ರಿ.ಶ 325ರಲ್ಲಿ ಸಿದ್ಧಪಡಿಸಿಟ್ಟಿರುವ ಕೋಷ್ಟಕದ ರೀತ್ಯಾ ಗೊತ್ತುಪಡಿಸಿ ಈಸ್ಟರ್ ದಿನವನ್ನು ನಿರ್ಧರಿಸುತ್ತದೆ.

ಈ ವರ್ಷ 2025ರಲ್ಲಿ ಎರಡೂ ಪಂಗಡಗಳಿಗೆ ಏಪ್ರಿಲ್ 20ರಂದು ಈಸ್ಟರ್ ಹಬ್ಬ. 2026ರಲ್ಲಿ ಪಾಶ್ಚಾ ತ್ಯರಿಗೆ ಏಪ್ರಿಲ್ 5ರಂದು ಮತ್ತು ಪೌರ್ವಾತ್ಯರಿಗೆ ಏಪ್ರಿಲ್ 12ರಂದು ಈಸ್ಟರ್. 2027ರಲ್ಲಿ ಪಾಶ್ಚಾತ್ಯ ರಿಗೆ ಮಾರ್ಚ್ 28ರಂದು ಮತ್ತು ಪೌರ್ವಾತ್ಯರಿಗೆ ಮೇ 2ರಂದು ಈಸ್ಟರ್. 2028ರಲ್ಲಿ ಎರಡೂ ಪಂಗಡಗಳಿಗೆ ಏಪ್ರಿಲ್ 16ರಂದು ಈಸ್ಟರ್. ಇರಲಿ, ಈಸ್ಟರ್ ದಿನನಿರ್ಧಾರದ ಗೊಂದಲ ವನ್ನು ಕ್ರೈಸ್ತ ಧರ್ಮಗುರುಗಳಿಗೆ, ಖಗೋಳ ಶಾಸ್ತ್ರಜ್ಞರಿಗೆ, ಗಣಿತಜ್ಞರಿಗೆ ಬಿಟ್ಟು ಈಸ್ಟರ್ ಬಗ್ಗೆ ಬೇರೆ ಕೆಲವು ಸ್ವಾರಸ್ಯ ಕರ ಸಂಗತಿಗಳೊಂದಿಷ್ಟನ್ನು ಅವಲೋಕಿಸೋಣ. ಈಸ್ಟರ್ ಹಬ್ಬದ ಹೆಸರಿನ ಮೂಲ ಬ್ಯಾಬಿಲೋನಿಯನ್ ಸಂಸ್ಕೃತಿಯಲ್ಲಿ ಪ್ರೀತಿ ಮತ್ತು ಸಂತಾನೋತ್ಪತ್ತಿಯ ದೇವತೆಯಾದ Ishtar.

ಜೀವನಚೈತನ್ಯವನ್ನು ಉಡುಗಿಸುವ ಚಳಿ ಹಿಮಪಾತಗಳೆಲ್ಲ ಮುಗಿದ ಮೇಲೆ ಪ್ರಕೃತಿಯಲ್ಲಿ ನಳನಳಿ ಸುವ ಕಾಂತಿಯನ್ನು, ಉಲ್ಲಾಸವನ್ನು ತರುವ ವಸಂತ ಋತುವಿಗೆ ಉತ್ಸಾಹ ಸಡಗರ ತುಂಬಿದ ಸ್ವಾಗತ ಕೋರುವ ಕ್ರಮ ಪ್ರಾಚೀನ ಸಂಸ್ಕೃತಿಗಳೆಲ್ಲದರಲ್ಲೂ ಇತ್ತು. ಪ್ರಕೃತಿಯನ್ನು ಚಿಗುರಿಸುವ ಆ ದೇವತೆಯನ್ನು ಸ್ಕಾಂಡಿನೇವಿಯನ್ನರು Ostra ಎಂದೂ, ಆಂಗ್ಲೊಸಾಕ್ಸನ್ನರು Eostre ಎಂದೂ, ಜರ್ಮನ್ನರು Eastre ಅಂತಲೂ ಕರೆದು ಗೌರವಿಸುತ್ತಿದ್ದರು.

ಐರೋಪ್ಯ ಭಾಷೆಗಳಲ್ಲಿನ ಈ ಪದಗಳೇ ಆಂಗ್ಲ ಭಾಷೆಯಲ್ಲಿ Easter ಎಂದಾಗಿದ್ದು ಅತಿಸಂಭ್ರಮದ ಕ್ರಿಶ್ಚಿಯನ್ ಹಬ್ಬಗಳ ಪೈಕಿ ಒಂದಾಗಿದೆ. ಈಸ್ಟರ್‌ಗೂ ಮೊಟ್ಟೆಗಳಿಗೂ ನಂಟಿರುವುದು, ಮೊಟ್ಟೆಯು ಸಂತಾನವೃದ್ಧಿಯ ಅರ್ಥಪೂರ್ಣ ಸಂಕೇತವಾಗಿರುವುದರಿಂದ. ಬಣ್ಣ ಬಳಿದ ಮೊಟ್ಟೆಗಳು ಅಥವಾ ಮೊಟ್ಟೆಯಾಕಾರದ ವಸ್ತುಗಳು ಈಸ್ಟರ್ ಹಬ್ಬದ ಉಡುಗೊರೆಗಳಲ್ಲಿ ಅತಿ ಮುಖ್ಯವಾದುವು.

ತಿಂಗಳುಗಟ್ಟಲೆ ಚಳಿಗಾಲದ ಕಪ್ಪುಕತ್ತಲೆಯ ಬಳಿಕ ಸೂರ್ಯ ರಶ್ಮಿಯ ಪುನರ್ದರ್ಶನವಾಗುವುದು ಒಂದು ಪವಾಡವೇ ಎಂದು ನಂಬಿದ್ದ ಜನರು ಮೊಟ್ಟೆಗಳನ್ನು ಪ್ರಕೃತಿಯ ನವೀಕರಣದ ಸಂಕೇತ ವಾಗಿಸಿಕೊಂಡಿದ್ದು ಆಶ್ಚರ್ಯವೇನೂ ಇಲ್ಲ. ಮೊಟ್ಟೆಯ ಕವಚದಿಂದ ಹೊರಬರುವ ಮರಿ ಮತ್ತು ಸಮಾಧಿಯಿಂದ ಪುನರುತ್ಥಾನಗೊಂಡು ಬರುವ ಪ್ರಭು ಯೇಸು- ಪ್ರಕೃತಿಯಲ್ಲಿ ಧರ್ಮತತ್ತ್ವವನ್ನು ಕಾಣುವ ಮಾನವನ ಸ್ವಭಾವಕ್ಕೆ ಅತಿ ಸಮಂಜಸವಾದ ನಿದರ್ಶನ.

ಈಸ್ಟರ್ ಹಬ್ಬದ ವಾತಾವರಣದ ಇನ್ನೊಂದು ಅವಿನಾಭಾವ ಸಂಕೇತವಾದ ಮೊಲ ಸಹ ಸಂತಾ ನಾಭಿವೃದ್ಧಿಯ ಪ್ರತೀಕ. ರಾತ್ರಿಯ ಹೊತ್ತಿನಲ್ಲಿ ಆಹಾರವನ್ನು ಹುಡುಕುತ್ತ ಹೊರಡುವ ಮೊಲವು ಚಂದ್ರನ ಪ್ರತಿನಿಽಯಾಗಿಯೂ ಈಸ್ಟರ್ ಹಬ್ಬಕ್ಕೆ ಕಳೆಯೇರಿಸುತ್ತದೆಯೆಂದು ಪ್ರಾಚೀನ ಈಜಿಪ್ಟ್ ಮತ್ತು ಪರ್ಷಿಯನ್ ಸಂಸ್ಕೃತಿಗಳ ಜನರ ನಂಬಿಕೆ. ಈಸ್ಟರ್‌ಗೆ ಸಂಬಂಧ ಪಟ್ಟಂತೆ ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಸ್ವಾರಸ್ಯಕರ ನಂಬಿಕೆಗಳು, ಚಿತ್ರವಿಚಿತ್ರ ಆಚರಣೆಗಳ ವೈವಿಧ್ಯಗಳು ಯಥೇಷ್ಟವಾಗಿ ಕಾಣಸಿಗುತ್ತವೆ.

ಈಸ್ಟರ್ ಹಬ್ಬದ ದಿನ ಹೊಸಬಟ್ಟೆ ಧರಿಸುವ ರಿವಾಜಿನ ಬಗ್ಗೆ ಕೂಡ ದಂತಕಥೆಗಳಿವೆ. ಈಸ್ಟರ್ ಆಚರಣೆಗಿಂತ ಮುಂಚಿನ ದಿನಗಳು ಒಂದು ರೀತಿಯಲ್ಲಿ ಸೂತಕದ ದಿನಗಳಿದ್ದಂತೆ. ಆಗ ಹಳೆಯ ಬಟ್ಟೆಗಳನ್ನೇ ಧರಿಸಿರಬೇಕಾಗುತ್ತಿತ್ತು. ಈಸ್ಟರ್ ಸಂಭ್ರಮವನ್ನು ಸಾರುವುದಕ್ಕಾಗಿಯೇ ಹಳೆಯ ಬಟ್ಟೆಗಳನ್ನು ಬಿಸಾಕಿ ಹೊಸದನ್ನು ಧರಿಸಬೇಕು. ಒಂದು ವೇಳೆ ಯಾರಾದರೂ ಹೊಸ ಬಟ್ಟೆ ಧರಿಸದಿದ್ದರೆ ಪ್ರಾಣಿಪಕ್ಷಿಗಳು ಅವರನ್ನು ಭ್ರಷ್ಟರನ್ನಾಗಿಸಬಹುದು, ಕಾಗೆ-ಗೂಬೆಗಳು ಬಂದು ಕಣ್ಣು ಕುಕ್ಕಬಹುದು ಅಂತೆಲ್ಲ ನಂಬಿಕೆಗಳಿವೆಯಂತೆ. ಒಟ್ಟಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಿದ ಭಾವವಿದೆ ಈಸ್ಟರ್ ಸಂಭ್ರಮದಲ್ಲಿ.

ನಾರ್ವೆಯಲ್ಲಿ ಈಸ್ಟರ್ ಸಂದರ್ಭದಲ್ಲಿ ಪತ್ತೆದಾರಿ ಕಾದಂಬರಿಗಳು ಮತ್ತು ಕ್ರೈಮ್‌ಥ್ರಿಲ್ಲರ್‌ಗಳನ್ನು ಓದುವುದು ಹಬ್ಬದಂದು ಕಾಲಕ್ಷೇಪಕ್ಕೆ ಒಂದು ವಿಧಾನ. ಕೊಲೆಸುಲಿಗೆಗಳ ಕಥಾನಕಗಳನ್ನೋದು ವುದು ಕ್ರಿಸ್ತನ ಮರಣವನ್ನು ಪ್ರತಿಬಿಂಬಿಸುವ ಒಂದು ನಮೂನೆಯಿರಬಹುದು ಎಂದು ನಂಬಲಾಗುತ್ತದೆ. ಈಸ್ಟರ್‌ಗೆ ಸುತ್ತಮುತ್ತ ನಾಲ್ಕೈದು ದಿನಗಳ ರಜೆ ಇದ್ದು ಜನರು ಬೆಟ್ಟಪ್ರದೇಶಗಳಿಗೆ ಪ್ರವಾಸ ಹೋಗುತ್ತಾರೆ. ಲಾಟ್ವಿಯಾ ದೇಶದಲ್ಲಿ ಈಸ್ಟರ್ ವಿಶೇಷವೆಂದು ಮೊಟ್ಟೆ ಒಡೆಯುವ ಸ್ಪರ್ಧೆಯಿರುತ್ತದೆ (ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ತೆಂಗಿನಕಾಯಿಗಳನ್ನು ಒಂದಕ್ಕೊಂದು ಕುಟ್ಟಿ ಒಡೆಯುವ ಸ್ಪರ್ಧೆಯಂತೆ ಇರಬಹುದು).

ವಿಧವಿಧದ ಮೊಟ್ಟೆಗಳ ಜತೆ ಸೆಣಸಾಡಿಯೂ ಒಡೆಯದೇ ಇರುವ ಮೊಟ್ಟೆಯ ಮಾಲೀಕ ಸ್ಪರ್ಧೆ ಯಲ್ಲಿ ವಿಜೇತನಾಗುತ್ತಾನೆ. ಬರ್ಮುಡಾದ ಬಿಳಿ ಲಿಲ್ಲಿ ಹೂಗಳು ಈಸ್ಟರ್ ಅಲಂಕಾರಕ್ಕೆಂದು ಬಳಕೆಯಾಗುವ ಹೂಗಳು. ಅಮೆರಿಕದಲ್ಲಿ ಇವು ಈಸ್ಟರ್ ಲಿಲ್ಲಿಗಳೆಂದೇ ಪ್ರಖ್ಯಾತ. ಯೇಸುವಿನ ಪುನರುತ್ಥಾನದ ವೇಳೆ ಗೇಬ್ರಿಯಲ್ ನುಡಿಸಿದ ಟ್ರಂಪೆಟ್ ಆಕಾರ ಈ ಲಿಲ್ಲಿ ಹೂಗಳಿಗಿರುವುದರಿಂದ ಮತ್ತು ಅವು ಪರಿಶುದ್ಧತೆಯ ಅಚ್ಚಬಿಳಿ ಬಣ್ಣದಲ್ಲಿರುವುದರಿಂದ ಈಸ್ಟರ್ ಹಬ್ಬದ ವಿಶೇಷವಾಗಿ ಬಳಕೆಯಾಗುತ್ತವೆ.

ಮೆಕ್ಸಿಕೊ ದೇಶದಲ್ಲಿ ಈಸ್ಟರ್ ಆಚರಣೆಗೆ ನೃತ್ಯ-ನಾಟಕಗಳ ವಿಶೇಷವಿರುತ್ತದೆ. ಇದರಲ್ಲಿ ಊರವರೆಲ್ಲ ಭಾಗವಹಿಸುತ್ತಾರೆ. 1833ರಲ್ಲಿ ಅಲ್ಲಿ ಕಾಣಿಸಿಕೊಂಡ ಕಾಲರಾ ಹೆಮ್ಮಾರಿಯನ್ನು ಜಯಿಸಿ ಬದುಕುಳಿದವರು ಕೃತಜ್ಞತಾರೂಪದಲ್ಲಿ ಈ ರೀತಿ ರೂಪಕಗಳನ್ನು ಅಭಿನಯಿಸುತ್ತಾರಂತೆ. ಸ್ವೀಡನ್‌ನಲ್ಲಿ ಈಸ್ಟರ್ ಆಚರಣೆಯು ಅಮೆರಿಕದ ಹ್ಯಾಲೊವೀನ್ ಆಚರಣೆಯನ್ನು ಹೋಲುತ್ತದೆ. ಸ್ವೀಡನ್‌ನಲ್ಲಿ ಈಸ್ಟರ್‌ನ ಹಿಂದಿನ ದಿನ ದೆವ್ವಗಳು ಕಸಬರಿಕೆ ಹಿಡಿದುಕೊಂಡು ಚರ್ಚ್ ಗಂಟೆಗಳನ್ನು ಸ್ವಚ್ಛಗೊಳಿಸಲು ಬರುತ್ತವೆಂಬ ಪ್ರತೀತಿಯಿದೆ.

ಶ್ವೇತಭವನದ ಹುಲ್ಲುಹಾಸಿನಲ್ಲಿ ಈಸ್ಟರ್ ಮೊಟ್ಟೆ ಹುಡುಕುವ ಆಟ ಅಮೆರಿಕದ ರಾಜಧಾನಿಯಲ್ಲಿ ರಾಷ್ಟ್ರಾಧ್ಯಕ್ಷರ ಅಧಿಕೃತ ನಿವಾಸದಲ್ಲಿ ಈಸ್ಟರ್ ಆಚರಣೆಯ ವಿಶೇಷ. ಈಸ್ಟರ್‌ನ ಮಾರನೆಯ ದಿನ ಸೋಮವಾರದಂದು ಶ್ವೇತಭವನದ ಸುತ್ತಲ ಹುಲ್ಲುಹಾಸಿನ ಪ್ರದೇಶದಲ್ಲಿ ಬಣ್ಣಬಣ್ಣದ ಮೊಟ್ಟೆ ಗಳನ್ನು ಅಡಗಿಸಿಡಲಾಗುತ್ತದೆ. ಆ ಮೊಟ್ಟೆಗಳ ಮೇಲೆ ಗಣ್ಯ ವ್ಯಕ್ತಿಗಳು ಸಹಿ ಮಾಡಿದ್ದಿರುತ್ತದೆ. ಗಣ್ಯರೆಂದರೆ ಕ್ರೀಡೆ, ವಿಜ್ಞಾನ, ಚಲನಚಿತ್ರ, ಸಂಗೀತ ಇತ್ಯಾದಿ ವಿವಿಧ ಕ್ಷೇತ್ರಗಳವರು.

ಕೆಲವೇ ಕೆಲವು ಮೊಟ್ಟೆಗಳ ಮೇಲೆ ಸ್ವತಃ ಪ್ರೆಸಿಡೆಂಟ್ ಮತ್ತು ಫಸ್ಟ್ ಲೇಡಿ ಸಹಿ ಮಾಡಿರುತ್ತಾರೆ. ಪುಟ್ಟಪುಟ್ಟ ಮಕ್ಕಳು ಈ ಮೊಟ್ಟೆಗಳನ್ನು ಹುಡುಕಿ ತೆಗೆದು ನಿಧಿ ಸಿಕ್ಕವರಂತೆ ಸಂಭ್ರಮಪಡುತ್ತಾರೆ. ಅಂತೂ ಮಾನವಜನಾಂಗವು ಪ್ರಕೃತಿಯ ನವಚೈತನ್ಯವನ್ನು ಹಬ್ಬವನ್ನಾಗಿಸಿ ಸಂಭ್ರಮಿಸುವ ರೀತಿ- ಅದು ನಮ್ಮ ಸಂಕ್ರಾಂತಿಯೇ ಇರಲಿ, ಯುಗಾದಿಯೇ ಇರಲಿ, ಶರನ್ನವರಾತ್ರಿಯೇ ಇರಲಿ ಅಥವಾ ಪುನರುತ್ಥಾನ ಪ್ರತೀಕದ ಈಸ್ಟರ್ ಹಬ್ಬವೇ ಇರಲಿ, ಜಾತಿ-ಮತ-ದೇಶಗಳ ಸೀಮೆಗಳಿಗಿಂತ ಮಿಗಿಲಾದುದು ಎಂದೆನಿಸುವುದಿಲ್ಲವೇ?