ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaji Column: ಕಾಗದದ ಹಣ ಕೈಕೊಟ್ಟರೆ, ಬಂಗಾರ ಕೈ ಹಿಡಿಯುತ್ತದೆ...

ಹಬ್ಬ-ಮದುವೆ-ಮುಹೂರ್ತ ಕಾಲದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದು ಸಹಜ. ೨೦೨೫ರಲ್ಲಿ ಚಿನ್ನದ ETF ಹೂಡಿಕೆಗಳು ಭಾರತದಲ್ಲಿ ದಾಖಲೆ ಮಟ್ಟ ತಲುಪಿದ್ದು, ಚಿನ್ನವನ್ನು ಹೂಡಿಕೆ ರೂಪದಲ್ಲಿಯೂ ಜನರು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಜತೆಗೆ ಆಮದು ಸುಂಕ, ಜಿಎಸ್‌ಟಿ ಮತ್ತು ವ್ಯಾಪಾರಿಗಳ ಮಾರ್ಜಿನ್ ಗಳು ಚಿನ್ನದ ಚಿಲ್ಲರೆ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ICICI Direct ವಿಶ್ಲೇಷಣೆಯ ಪ್ರಕಾರ, 2025ರಲ್ಲಿ ಬಡ್ಡಿದರ ಕಡಿತದ ನಿರೀಕ್ಷೆಯೇ ಚಿನ್ನದತ್ತ ಹೂಡಿಕೆಗೆ ತಿರುಗಿದೆ.

ಕಾಗದದ ಹಣ ಕೈಕೊಟ್ಟರೆ, ಬಂಗಾರ ಕೈ ಹಿಡಿಯುತ್ತದೆ...

-

Ashok Nayak Ashok Nayak Oct 13, 2025 9:18 AM

ಸುವರ್ಣರೇಖೆ

ನಾರಾಯಣ ಯಾಜಿ

ಭಾರತೀಯರಿಗೆ ಅಚ್ಚುಮೆಚ್ಚಾಗಿರುವ ಚಿನ್ನದ ಬೆಲೆ ಇದೀಗ ಗಗನಮುಖಿಯಾಗಿದೆ. ಕಳೆದ ತಿಂಗಳಲ್ಲಿ ೧೦ ಗ್ರಾಂ.ಗೆ ೧,೧೩,೦೦೦ ರುಪಾಯಿ ಆಸುಪಾಸಿನಲ್ಲಿದ್ದ ಚಿನ್ನದ ದರ ಇದೀಗ ಒಮ್ಮೆಲೇ ೧,೨೭೦೦೦ ರುಪಾಯಿ ಸನಿಹಕ್ಕೆ ಬಂದಾಗಿದೆ. ಒಂದು ವರ್ಷದ ಅವಧಿಯಲ್ಲಿ ಶೇ.೬೦ರಷ್ಟು ದರ ಏರಿದುದರ ಪರಿಣಾಮವಾಗಿ ಹಳದಿಲೋಹವು ಗಗನಕುಸುಮವಾಗುತ್ತಿದೆಯೇ ಎಂಬ ಆತಂಕ ಭಾರತದ ಮಧ್ಯಮ ವರ್ಗದವರಲ್ಲಿ ಮನೆ ಮಾಡಿದೆ. ಚಿನ್ನದ ಬೆಲೆಯೇರಿಕೆಗೆ ಕಾರಣವಾಗಿರುವ ಒಂದಷ್ಟು ಅಂಶಗಳ ಕಡೆಗೆ ಗಮನ ಹರಿಸೋಣ.

೧) ಜಾಗತಿಕ ಅಶಾಂತಿ: ವಿಶ್ವದ ರಾಜಕೀಯ ವಾತಾವರಣವಂತೂ ಅಸ್ಥಿರತೆಯಲ್ಲಿ ಹೊರಳಾಡು ತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ, ಮಧ್ಯಪ್ರಾಚ್ಯದ ಅಶಾಂತಿ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ, ಯುರೋಪಿನ ಸಾಲದ ಬಿಕ್ಕಟ್ಟು ಇವೆಲ್ಲವೂ ಹೂಡಿಕೆ ದಾರರ ಮನಸ್ಸಿನಲ್ಲಿ ಭಯ ಮತ್ತು ಅನಿಶ್ಚಿತತೆ ಉಂಟುಮಾಡಿವೆ. ಈ ಭಾವನಾತ್ಮಕ ಮತ್ತು ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಜನರು ತಮ್ಮ ಬಂಡವಾಳವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಚಿನ್ನದತ್ತ ತಿರುಗುತ್ತಾರೆ.

ಶತಮಾನಗಳಿಂದಲೂ ಚಿನ್ನವನ್ನು ‘ಮೌಲ್ಯ ಸಂರಕ್ಷಕ ಮತ್ತು ವಿಶ್ವಾಸಾರ್ಹ ಆಸ್ತಿ’ಯಾಗಿ ಪರಿಗಣಿಸ ಲಾಗುತ್ತಿದ್ದು, ಹಣದ ಮೌಲ್ಯ ಕುಸಿಯುವ ಕಾಲದಲ್ಲಿ ಅದು ಭದ್ರತೆಯಾಗಿ ರೂಪ ತಾಳುತ್ತದೆ. ರಾಯಿಟರ‍್ಸ್ ಈ ಪರ್ಯಾಯ ನೆಲೆಯನ್ನು ಉಳಿತಾಯದ ಸುರಕ್ಷಿತ ಸ್ವರ್ಗ ಎಂದಿದೆ.

೨) ಡಾಲರ್ ಬಲಹೀನತೆ: ಅಮೆರಿಕದ ಡಾಲರ್ ಈಗ ಮೊದಲಿನಂತೆ ಜಾಗತಿಕ ಶಕ್ತಿಯಾಗಿ ಉಳಿದಿಲ್ಲ. ಕಳೆದೊಂದು ವರ್ಷದಲ್ಲಿ ಅದು ವಿಶ್ವದ ಪ್ರಮುಖ ಕರೆನ್ಸಿಯ ಎದುರು ಶೇ.೧೦ರಷ್ಟು ಅಪಮೌಲ್ಯಗೊಂಡಿದೆ. ಡಾಲರ್ ಬಲಹೀನವಾದಾಗ ಅಂತಾರಾಷ್ಟ್ರೀಯ ಹೂಡಿಕೆಗೆ ಚಿನ್ನವೇ ಉತ್ತಮ ಆಯ್ಕೆ. ಪರಿಣಾಮವಾಗಿ ಜಾಗತಿಕ ಬೇಡಿಕೆಯು ಹೆಚ್ಚಿ, ಅದರ ದರವೂ ಏರಿದೆ. ಭಾರತ ದಲ್ಲೂ ರುಪಾಯಿ ಮೌಲ್ಯ ಕುಸಿದ ಪರಿಣಾಮ ಚಿನ್ನದ ಆಮದು ಬೆಲೆ ನೇರವಾಗಿ ಹೆಚ್ಚುತ್ತಿದೆ. ೨೦೨೫ರಲ್ಲಿ ರುಪಾಯಿ ಶೇ.೧.೩ರಷ್ಟು ದುರ್ಬಲವಾದ ಪರಿಣಾಮದಿಂದಲೇ ಚಿನ್ನದ ದರದಲ್ಲಿ ಶೇ.೩-೪ರಷ್ಟು ಹೆಚ್ಚಳ ಕಂಡುಬಂದಿದೆ.

ಇದನ್ನೂ ಓದಿ: Narayana Yaji Column: ಸುಭಾಷ್‌ ಬೋಸರ ಆತ್ಮಕಥೆ

೩) ಹಣಕಾಸು ನೀತಿಯ ಪ್ರಭಾವ: ಬಡ್ಡಿದರ ನೀತಿ ಮತ್ತು ದರ ಏರಿಕೆಯ ಭೀತಿಯು ಕೂಡ ಚಿನ್ನದ ಬೆಲೆ ಏರಿಕೆಗೆ ಸಹಕಾರಿಯಾಗಿದೆ. ಅಮೆರಿಕನ್ ಫೆಡರಲ್ ರಿಸರ್ವ್ ಹಾಗೂ ಇತರ ಪ್ರಮುಖ ಬ್ಯಾಂಕುಗಳು ಬಡ್ಡಿದರವನ್ನು ಇಳಿಸುವ ನಿರೀಕ್ಷೆಯನ್ನು ಮೂಡಿಸಿದಂತೆಯೇ, ಚಿನ್ನವು ಬಾಂಡ್ ಮತ್ತು ನಿಕ್ಷೇಪಗಳಿಗಿಂತ ಹೆಚ್ಚು ಆಕರ್ಷಕ ಹೂಡಿಕೆ ಆಯ್ಕೆಯಾಗಿದೆ.

ಬಡ್ಡಿದರ ಕಡಿಮೆಯಾದಾಗ ಅವಕಾಶ ವೆಚ್ಚ ( opportunity cost) ಕಡಿಮೆಯಾಗುತ್ತದೆ, ಅಂದರೆ ಚಿನ್ನವನ್ನು ಹಿಡಿದುಕೊಳ್ಳುವುದು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗುತ್ತದೆ. ಅದೇ ಸಮಯ ದಲ್ಲಿ ದರ ಏರಿಕೆಯ ಭೀತಿಯು ಜನರಲ್ಲಿ ಮೌಲ್ಯ ಸಂರಕ್ಷಣೆಯ ಅಗತ್ಯತೆಯನ್ನು ಹುಟ್ಟುಹಾಕಿದೆ. ಹಣದ ಖರೀದಿಶಕ್ತಿಯು ಕುಸಿಯುವ ಕಾಲದಲ್ಲಿ ಚಿನ್ನವನ್ನು ನಗದಿನ ಬದಲಿಗೆ ನಂಬಿಕೆಯ ಮೌಲ್ಯ ರೂಪದಲ್ಲಿ ಇಟ್ಟುಕೊಳ್ಳುವ ಹೂಡಿಕೆದಾರರ ಸಂಖ್ಯೆ ಹೆಚ್ಚುತ್ತಿದೆ.

ಭಾರತೀಯ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆಯೇರಿಕೆಗೆ ಸ್ಥಳೀಯ ಅಂಶಗಳೂ ತೀರಾ ಮಹತ್ತರವಾಗಿವೆ. ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವು ಕೇವಲ ಆರ್ಥಿಕ ಆಸ್ತಿಯಲ್ಲ; ಅದು ಮೌಲ್ಯ, ಗೌರವ ಮತ್ತು ಪರಂಪರೆಯ ಸಂಕೇತವಾಗಿದೆ.

ಹಬ್ಬ-ಮದುವೆ-ಮುಹೂರ್ತ ಕಾಲದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದು ಸಹಜ. ೨೦೨೫ರಲ್ಲಿ ಚಿನ್ನದ ETF ಹೂಡಿಕೆಗಳು ಭಾರತದಲ್ಲಿ ದಾಖಲೆ ಮಟ್ಟ ತಲುಪಿದ್ದು, ಚಿನ್ನವನ್ನು ಹೂಡಿಕೆ ರೂಪ ದಲ್ಲಿಯೂ ಜನರು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಜತೆಗೆ ಆಮದು ಸುಂಕ, ಜಿಎಸ್‌ಟಿ ಮತ್ತು ವ್ಯಾಪಾರಿಗಳ ಮಾರ್ಜಿನ್ ಗಳು ಚಿನ್ನದ ಚಿಲ್ಲರೆ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ICICI Direct ವಿಶ್ಲೇಷಣೆಯ ಪ್ರಕಾರ, 2025ರಲ್ಲಿ ಬಡ್ಡಿದರ ಕಡಿತದ ನಿರೀಕ್ಷೆಯೇ ಚಿನ್ನದತ್ತ ಹೂಡಿಕೆಗೆ ತಿರುಗಿದೆ.

೪) ಹೆಚ್ಚಿದ ಚಿನ್ನದ ದಾಸ್ತಾನು: ಚಿನ್ನದ ಬೆಲೆ ಏರಿಕೆಯಲ್ಲಿ ಕೇಂದ್ರ ಬ್ಯಾಂಕ್‌ಗಳ ಬೃಹತ್ ಖರೀದಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿಶ್ವ ಚಿನ್ನ ಪರಿಷತ್ತಿನ ಅಂಕಿ-ಅಂಶಗಳ ಪ್ರಕಾರ, ೨೦೨೪ರಲ್ಲಿ ಜಾಗತಿಕ ಕೇಂದ್ರ ಬ್ಯಾಂಕ್‌ಗಳು ಒಟ್ಟು ೧,೦೪೫ ಟನ್ ಚಿನ್ನವನ್ನು ತಮ್ಮ ಸಂಗ್ರಹಕ್ಕೆ ಸೇರಿಸಿವೆ, ಇದು ಕಳೆದ ಹಲವಾರು ದಶಕಗಳಲ್ಲಿ ಅತ್ಯಧಿಕವಾಗಿವೆ. ವಿಶೇಷವಾಗಿ ಚೀನಾ ಈ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿದೆ. ಚೀನಾದ ಪೀಪಲ್ಸ್ ಬ್ಯಾಂಕ್ ಕಳೆದ ವರ್ಷದಲ್ಲಿ ೨೫೦ ಟನ್‌ಗಿಂತ ಹೆಚ್ಚು ಚಿನ್ನವನ್ನು ಖರೀದಿಸಿದ್ದು, ಇದರಿಂದ ಜಾಗತಿಕ ಪೂರೈಕೆಯ ಮೇಲೆ ಒತ್ತಡ ಉಂಟಾಗಿದೆ. ‌

ಚೀನಾ ತನ್ನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಡಾಲರ್‌ನ ಅವಲಂಬನೆಯನ್ನು ಕಡಿಮೆ ಮಾಡಿ ಯುವಾನ್ ಕರೆನ್ಸಿಯ ಅಂತಾರಾಷ್ಟ್ರೀಯ ಪ್ರಭಾವವನ್ನು ಬಲಪಡಿಸುವ ಉದ್ದೇಶದಿಂದ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿದೆ. ಈ ಕ್ರಮವು ಜಾಗತಿಕ ಚಿನ್ನದ ಮಾರುಕಟ್ಟೆಗೆ ಹೊಸ ಪ್ರೇರಣೆ ನೀಡಿದೆ.

ರಷ್ಯಾ, ಟರ್ಕಿ, ಭಾರತ ಮತ್ತು ಕತಾರ್ ದೇಶಗಳೂ ತಮ್ಮ ಚಿನ್ನದ ಸಂಗ್ರಹವನ್ನು ವೃದ್ಧಿಪಡಿಸು ತ್ತಿದ್ದು, ಇದರ ಒಟ್ಟು ಪರಿಣಾಮವಾಗಿ ಚಿನ್ನದ ಬೆಲೆಯು ನಿರಂತರ ಏರಿಕೆಯಲ್ಲಿ ಮುಂದುವರಿಯು ತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸಹ ಈ ವರ್ಷದಲ್ಲಿ ಈ ತನಕ ಸುಮಾರು ೫೯ ಟನ್ ಚಿನ್ನವನ್ನು ಹೊಸತಾಗಿ ಖರೀದಿಸಿದೆ. ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ೯೨ರ ದಶಕದಲ್ಲಿ ಒತ್ತೆ ಯಿಟ್ಟ ಚಿನ್ನವನ್ನೂ ಸೇರಿದಂತೆ ವಿವಿಧ ದೇಶದಲ್ಲಿದ್ದ ಸುಮಾರು ೨೦೦ ಟನ್ ಚಿನ್ನವನ್ನು ಸರಕಾರ ವು ೨೦೨೪-೨೫ರಲ್ಲಿ ಪುನಃ ತಂದು ನಮ್ಮ ದೇಶದ ಖಜಾನೆಯಲ್ಲಿ ಭದ್ರವಾಗಿರಿಸಿದೆ. ಭಾರತದ ರಿಸರ್ವ್ ಬ್ಯಾಂಕಿನಲ್ಲಿ, ವಿದೇಶದಲ್ಲಿರುವ ಸುಮಾರು ೨೨೪ ಟನ್ ಚಿನ್ನವೂ ಸೇರಿ ೮೦೦ ಟನ್‌ಗಳಷ್ಟು ಚಿನ್ನವಿದ್ದು ಅಮೆರಿಕದ ೮೧೦೦ ಟನ್ನಿಗೆ ಹೋಲಿಸಿದರೆ ತುಂಬಾ ಕಡಿಮೆಯೇ ಆಗಿದೆ.

ಆದರೆ ಭಾರತದ ಪ್ರತಿ ಮನೆಯಲ್ಲಿರುವ ಚಿನ್ನದ ದಾಸ್ತನು ೨೬೦೦ ಟನ್ನುಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಲೆಕ್ಕದಲ್ಲಿ ಜಾಗತಿಕವಾಗಿ ಭಾರತವೇ ನಂ. ೧. ೫) ಪೂರೈಕೆಯ ಅಡೆತಡೆಗಳು: ಚಿನ್ನದ ಉತ್ಪಾದನೆ ಸುಲಭವಾದ ಕೆಲಸವಲ್ಲ. ಹೊಸ ಗಣಿಗಳ ಅನ್ವೇಷಣೆ ನಿಧಾನಗತಿಯಲ್ಲಿ ಸಾಗು ತ್ತಿದೆ, ಮತ್ತು ಪರಿಸರ ನಿಯಮಗಳು, ಇಂಧನ ವೆಚ್ಚದ ಏರಿಕೆ ಇತ್ಯಾದಿ ಕಾರಣಗಳಿಂದ ಗಣಿಗಾರಿಕೆಯ ವೆಚ್ಚವೂ ಹೆಚ್ಚಿದೆ.

Aditya Birla Capital ವರದಿಯ ಪ್ರಕಾರ, ಉತ್ಪಾದನಾ ವೆಚ್ಚ ಮತ್ತು ಪೂರೈಕೆಯ ತೊಂದರೆಗಳು ಚಿನ್ನದ ಬೆಲೆಯ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತಿವೆ. ಬೇಡಿಕೆ ಹೆಚ್ಚುತ್ತಿದ್ದರೂ ಪೂರೈಕೆ ಸಮ ಪ್ರಮಾಣ ದಲ್ಲಿ ಹೆಚ್ಚದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

ಜಗತ್ತು De-Dollarization ನತ್ತ ಸಾಗುತ್ತಿದೆಯೇ?

ಇದು ಅಷ್ಟು ಸುಲಭವಲ್ಲ. ಇತಿಹಾಸದಲ್ಲಿ ಡಾಲರ್, ಕರೆನ್ಸಿ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಭದ್ರವಾಗಿ ಕಾಪಾಡಿಕೊಂಡು ಬರುತ್ತಿದೆ. ಅಮೆರಿಕವೇ ಆಗಲಿ, ಬೇರೆ ಯಾವ ದೇಶವೇ ಆಗಲಿ, ಇದಕ್ಕೆ ಬದಲಿ ವ್ಯವಸ್ಥೆಯನ್ನು ದ್ವಿಪಕ್ಷೀಯವೋ, ಕೆಲವೊಂದು ದೇಶಗಳ ವ್ಯವಹಾರದಲ್ಲಿ ಸೀಮಿತ ವಾಗಿಯೋ ಇರಿಸಿಕೊಳ್ಳಬಹುದೇ ಹೊರತು ಜಾಗತಿಕವಾಗಿ ಪರ್ಯಾವಾಗಲಾರವು.

ಅಮೆರಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಅಂದರೆ ೮೧೦೦ ಟನ್‌ನಷ್ಟು ಚಿನ್ನದ ಸಂಗ್ರಹವಿದೆ. ಜತೆಗೆ ಅದು ವಿಶ್ವದ ಅತಿದೊಡ್ಡ ಸಾಲಗಾರನೂ ಆಗಿದೆ. ಅಲ್ಲಿನ ಜಿಡಿಪಿಯ ಶೇ.೧೨೬ರಷ್ಟು ಸಾಲವಿದೆ. ಜತೆಗೆ ಅಮೆರಿಕವು ೨೯.೮೫ ಟ್ರಿಲಿಯನ್ ಬೃಹತ್ ಆರ್ಥಿಕತೆಯ ದೇಶ. ಇನ್ನು ಡಾಲರಿಗೆ ಪರ್ಯಾಯ ಆಲೋಚನೆಯಾಗಿ ಚೀನಾವನ್ನು ಯಾವ ದೇಶವೂ ನಂಬುವುದಿಲ್ಲ. ಯುರೋ ಸಹ ಇನ್ನೂ ಈ ಮಟ್ಟದಲ್ಲಿ ಬೆಳೆದು ಬಂದಿಲ್ಲ ಮತ್ತು ಪೆಟ್ರೋಲಿಯಂ ವಸ್ತುಗಳು ಗಲ್ಫ್ ದೇಶದಲ್ಲಿ ಉತ್ಪಾದನೆ ಯಾದರೂ ಅದರ ಬ್ಯಾರೆಲ್ ದರವನ್ನು ನಿಗದಿಮಾಡುವುದು ನ್ಯೂಯಾರ್ಕ್ ವಿನಿಮಯ ( NewYork Mercantile Exchange- NYMEX) ಕೇಂದ್ರದಲ್ಲಿ. ‌

ಬ್ರಿಕ್ಸ್ ಕರೆನ್ಸಿಯ ವಿಶ್ವಾಸಾರ್ಹತೆ ಜಾಗತಿಕ ಮಟ್ಟದಲ್ಲಿ ಎದ್ದುನಿಲ್ಲುವಷ್ಟು ಈ ದೇಶಗಳ ಅರ್ಥ ವ್ಯವಸ್ಥೆಯಿಲ್ಲ. ಇವತ್ತಿಗೂ ಜಾಗತಿಕವಾಗಿ ಅಮೆರಿಕದ ವಿಸಾ ಮತ್ತು ಮಾಸ್ಟರ್‌ಕಾರ್ಡ್ ಶೇ.70ರಷ್ಟು ಹಣಕಾಸಿನ ವ್ಯವಹಾರವನ್ನು ನಿಭಾಯಿಸುತ್ತದೆ ಎನ್ನುವುದನ್ನು ಗಮನಿಸಬೇಕು. ಭಾರತದ ‘ರೂಪೆ ಕಾರ್ಡ್’ ದೇಶೀಯವಾಗಿ ಮೊದಲ ಸ್ಥಾನದಲ್ಲಿದ್ದರೂ ಅಂತಾರಾಷ್ಟ್ರೀಯವಾಗಿ ಸ್ಥಾಪಿತವಾಗಿಲ್ಲ. ‌

ಪರ್ಯಾಯ ಮಾರ್ಗ

ಹಬ್ಬ-ಮದುವೆ-ಮುಹೂರ್ತ ಕಾಲದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದು ಸಹಜ. ೨೦೨೫ರಲ್ಲಿ ಚಿನ್ನ ಖರೀದಿ ದಾಖಲೆ ಮಟ್ಟ ತಲುಪಿದ್ದು, ಚಿನ್ನವನ್ನು ಹೂಡಿಕೆ ರೂಪದಲ್ಲಿಯೂ ಜನರು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಜತೆಗೆ ಆಮದು ಸುಂಕ, ಜಿಎಸ್‌ಟಿ ಮತ್ತು ವ್ಯಾಪಾರಿಗಳ ಮಾರ್ಜಿನ್‌ಗಳು ಚಿನ್ನದ ಚಿಲ್ಲರೆ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಚಿನ್ನವು ದಿನನಿತ್ಯದ ಬದುಕಿನಲ್ಲಿ ಅಗತ್ಯ ವಸ್ತುವಲ್ಲವಾದರೂ ಭಾರತೀಯ ಅರ್ಥವ್ಯವಸ್ಥೆಗೆ ಚಿನ್ನದ ಬೆಲೆಯೇರಿಕೆ ಪರಿಣಾಮವನ್ನು ಉಂಟುಮಾಡುತ್ತದೆ. ಮದುವೆ, ಸೀಮಂತದಿಂದ ಹಿಡಿದು ಪ್ರತಿಯೊಂದು ಹಬ್ಬ-ಹರಿದಿನಗಳಿಗೂ ಚಿನ್ನವನ್ನು ಕೊಂಡುಕೊಳ್ಳುವ ಮೋಹ ಇದೀಗ ಹೆಚ್ಚಾಗಿದೆ. ಇದು ಆಪದ್ಧನವಾದರೂ ಮನೆಯಲ್ಲಿ ಇರಿಸಿಕೊಂಡಷ್ಟೂ ಕಳ್ಳತನದ ಅಪಾಯಕ್ಕೆ ಹಾದಿ ಮಾಡಿಕೊಡುತ್ತದೆ. ಸರಗಳ್ಳತನ ಜಾಸ್ತಿಯಾಗುತ್ತಿದೆ.

ಬ್ಯಾಂಕಿನ ಲಾಕರಿನಲ್ಲಿ ಇರಿಸಿಕೊಳ್ಳಬಹುದಾದರೂ, ಇತ್ತೀಚಿನ ದಿನಗಳಲ್ಲಿ ಲಾಕರಿನ ಬಾಡಿಗೆ ವಿಪರೀತ ಏರಿದೆ. ಬೇಡಿಕೆ ಇರುವಷ್ಟು ಲಾಕರ್ ಲಭ್ಯವಿಲ್ಲ. ಗ್ರಾಹಕ ಲಾಕರಿನೊಳಗೆ ಏನನ್ನು ಇರಿಸುತ್ತಾನೆನ್ನುವುದನ್ನು ಬ್ಯಾಂಕು ಕೇಳುವುದಿಲ್ಲ. ಹಾಗಾಗಿ ಲಾಕರಿನಲ್ಲಿಟ್ಟ ಯಾವ ವಸ್ತುವನ್ನೇ ಇರಿಸಲಿ, ಅದರಲ್ಲಿ ಏನಾದರೂ ಹೆಚ್ಚುಕಡಿಮೆಯಾದರೆ, ಅದರೊಳಗೆ ಇಟ್ಟ ವಸ್ತು ಕಳೆದು ಹೋದರೆ, ನೈಸರ್ಗಿಕ ಹಾನಿಗೊಳಗಾದರೆ ಬ್ಯಾಂಕ್ ಹೊಣೆಗಾರನಾಗುವುದಿಲ್ಲ. ಇತ್ತೀಚೆಗೆ ವಾರ್ಷಿಕ ಬಾಡಿಗೆಯ ನೂರುಪಟ್ಟು ಮಾತ್ರ ಬ್ಯಾಂಕಿನಿಂದ ಪರಿಹಾರ ಪಡೆಯಬಹುದೆನ್ನುವ ಸವಲತ್ತನ್ನು ಕೆಲ ಬ್ಯಾಂಕುಗಳು ಪ್ರಾರಂಭಿಸಿವೆ. ಇದು ಅತ್ಯಲ್ಪ.

ಆಭರಣವನ್ನು ಮಾಡಿಸುವಾಗ ಚಿನ್ನದ ಜತೆಗೆ ವೇಸ್ಟೇಜ್ ಎಂದು ಶೇ.೪-೨೦ರವರೆಗೆ ಆಭರಣದ ಅಂಗಡಿಯವರು ಕೊಡಬೇಕಾಗುತ್ತದೆ. ಬೆಲೆಯೇರಿದಂತೆಲ್ಲ ಆಭರಣದ ತಯಾರಿಕಾ ಶುಲ್ಕವೂ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅದನ್ನು ತಿರುಗಿ ಮಾರಾಟ ಮಾಡುವಾಗ, ಹರಳು, ಮಜೂರಿ, ವೇಸ್ಟೇಜ್ ಮೊದಲಾದವುಗಳು ಸೇರಿ ಸುಮಾರು ಶೇ. ೧೫-೨೦ರಷ್ಟು ಮೌಲ್ಯ ಕಡಿಮೆಯಾಗುತ್ತದೆ.

ಹಾಗಾಗಿ ಭೌತಿಕ ಚಿನ್ನಕ್ಕಿಂತ ಪೇಪರ್ ಚಿನ್ನಗಳಾದ Gold ETF, ಪರಸ್ಪರ ನಿಧಿ ಮೊದಲಾದವುಗಳಿಗೆ ಬದಲಾಗುವುದು ಸೂಕ್ತವಾಗಿದೆ. ಇದರಲ್ಲಿ ಯಾವ ಅಪಾಯವೂ ಇರುವುದಿಲ್ಲ, ಜತೆಗೆ ಬೇಕಾದಾಗ ಮಾರುಕಟ್ಟೆ ಮೌಲ್ಯಕ್ಕೆ ಮಾರಿ ಚಿನ್ನವನ್ನು ಕೊಂಡುಕೊಳ್ಳಬಹುದು.

ಇದರಿಂದ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವದೂ ಕಡಿಮೆಯಾಗಿ ವಿದೇಶಿ ವಿನಿಮಯದಲ್ಲೂ ಉಳಿತಾಯವಾಗುತ್ತದೆ. ಭೌತಿಕ ಚಿನ್ನದಂತೆ ಇದರ ಮೇಲೆ ಸಾಲವನ್ನೂ ಪಡೆಯಬಹುದಾಗಿದೆ.

ಕೇಂದ್ರ ಸರಕಾರವು ಜನರಲ್ಲಿ ಪೇಪರ್ ಚಿನ್ನವನ್ನು ಜನಪ್ರಿಯಗೊಳಿಸಬೇಕೆಂದು ಸೊವೆರಿನ್ ಚಿನ್ನದ ಬಾಂಡ್‌ಗಳ ಸರಣಿಯನ್ನು ಪ್ರಾರಂಭಿಸಿತ್ತು. ಅದರಲ್ಲಿ ಹೂಡಿಕೆ ಮಾಡಿದವರಿಗೆ ಒಳ್ಳೆಯ ಮೌಲ್ಯವರ್ಧನೆಯಾಗಿದೆ. ಒಟ್ಟು 67 ಸರಣಿಗಳಲ್ಲಿ ಸುಮಾರು 72 ಸಾವಿರ ಕೋಟಿಗೂ ಮಿಕ್ಕಿ ಪೇಪರ್ ಚಿನ್ನವನ್ನು ಮಾರಾಟ ಮಾಡಲಾಗಿತ್ತು. ಆದರೆ ಭೌತಿಕ ಚಿನ್ನಕ್ಕೆ ಪರ್ಯಾಯವಾಗದೇ ಇನ್ನೊಂದು ಸಾಲಪತ್ರವಾಗಿ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿದ ಕಾರಣ ೨೦೨೪ರ ಫೆಬ್ರವರಿ ತಿಂಗಳ ನಂತರ ನಿಲ್ಲಿಸಲಾಗಿದೆ. ಮತ್ತೊಮ್ಮೆ ಅದನ್ನು ಜನಪ್ರಿಯಗೊಳಿಸುವುದು ಒಳಿತು.

ದೀರ್ಘಾವಧಿಯಲ್ಲಿ, ಚಿನ್ನದ ಬೆಲೆಗಳು ಸ್ಥಿರವಾಗುವ ಸಾಧ್ಯತೆ ಇದ್ದರೂ, ಪ್ರಸ್ತುತ ವಿಶ್ವದಲ್ಲಿ ಆರ್ಥಿಕ ಅಸ್ಥಿರತೆ ಮುಂದುವರಿದರೆ ಚಿನ್ನದ ಮೇಲೆ ಒತ್ತಡ ತಗ್ಗುವುದು ಕಷ್ಟ. ಸಾಮಾನ್ಯ ಹೂಡಿಕೆದಾರರ ದೃಷ್ಟಿಯಲ್ಲಿ, ಚಿನ್ನವು ಇನ್ನೂ ಅನಿಶ್ಚಿತ ಕಾಲದ ರಕ್ಷಕ ಎಂದೇ ಉಳಿಯುತ್ತದೆ. ಖ್ಯಾತ ಆರ್ಥಿಕ ತಜ್ಞ, ಬ್ಯಾಂಕರ್ ಜೆ.ಪಿ. ಮೋರ್ಗನ್ ಅವರ, Gold is money. Everything else is credit ಎಂಬ ಮಾತು ನಿಜವಾದರೂ ಭದ್ರತೆಯೆ ದೃಷ್ಟಿಯಿಂದ ಪೇಪರ್ ಚಿನ್ನಕ್ಕೆ ಮನಸ್ಸನ್ನು ಬದಲಾಯಿಸಲು ಇದು ಸೂಕ್ತಸಮಯ.

(ಲೇಖಕರು ಆರ್ಥಿಕ ತಜ್ಞರು)