ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಸಿದ್ದು ಹೇಳಿದ್ದೇನು ?

ಸಿದ್ದರಾಮಯ್ಯ ಅವರ ಈ ಮಾತಿಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ರಣತಂತ್ರ ನಿಪುಣರು ನೀಡಿರುವ ಸಲಹೆಯ ಪ್ರಕಾರ ಕೆಲ ಹಿರಿಯ ಸಚಿವರನ್ನು ಸಂಪುಟ ದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು ಎಂದಿದ್ದಾರೆ. ಯಾವಾಗ ಸಿದ್ದು-ರಾಹುಲ್ ಮಧ್ಯೆ ಇಂಥ ಮಾತುಕತೆ ನಡೆದಿದೆ ಎಂಬುದು ಸಾಬೀತಾಯಿತೋ, ಆಗ ಅವರ ಆಪ್ತರ ಪಡೆ ಹೊಸ ಉತ್ಸಾಹದಿಂದ ತಿರುಗಾಡುತ್ತಿದೆ.

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಸಿದ್ದು ಹೇಳಿದ್ದೇನು ?

-

ಮೂರ್ತಿಪೂಜೆ

ಕೆಲವು ಸಚಿವರಿಗೆ ಗೇಟ್‌ಪಾಸ್ ಕೊಡಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರು, ಭವಿಷ್ಯ ದಲ್ಲಿ ಸರಕಾರಕ್ಕೆ ಬಲ ತುಂಬಿ, ಅದರ ಇಮೇಜ್ ಹೆಚ್ಚಿಸಬಲ್ಲಂಥವರನ್ನು ಮಂತ್ರಿ ಮಂಡಲಕ್ಕೆ ತೆಗೆದು ಕೊಳ್ಳಲು ಬಯಸಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರಿಡು ತ್ತಿರುವ ಈ ಹೆಜ್ಜೆಗೆ ‘ಯಸ್’ ಅನ್ನದೆ ವರಿಷ್ಠರಿಗೂ ಬೇರೆ ದಾರಿ ಇಲ್ಲ. ಯಾಕೆಂದರೆ 2029ರ ಸಂಸತ್ ಚುನಾವಣೆಗೆ ಹೋಗುವ ಮುನ್ನ ಕರ್ನಾಟಕ ಎಂಬ ಸೇನಾನೆಲೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅವರ ಮುಂದಿದೆ.

ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನವು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿದೆ. ಅದರ ಪ್ರಕಾರ ರಾಹುಲ್ ಗಾಂಧಿಯವರಿಗೆ ಕೊಡಬೇಕಾದ ಮೆಸೇಜನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ. ಯಾವಾಗ ರಾಹುಲ್ ಗಾಂಧಿ ಅವರಿಗೆ ಈ ಮೆಸೇಜನ್ನು ಸಿದ್ದರಾಮಯ್ಯ ತಲುಪಿಸಿದ್ದಾರೆ ಎಂಬ ವರ್ತಮಾನ ಸಿಕ್ಕಿತೋ, ಆಗ ಸಿದ್ದು ಆಪ್ತರ ಪಡೆ ಸಂಪುಟ ಪುನಾರಚನೆಯ ದಿನವನ್ನು ಎದುರು ನೋಡುತ್ತಿದೆ.

ಮೂಲಗಳ ಪ್ರಕಾರ, ಇತ್ತೀಚೆಗೆ ರಾಹುಲ್ ಗಾಂಧಿ ಅವರ ಜತೆ ಮಾತನಾಡಿದ ಸಿದ್ದರಾಮಯ್ಯ ಅವರು, “ಸರಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗುತ್ತಾ ಬಂದಿದೆ. ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟವನ್ನು ಪುನಾರಚಿಸಲೇಕು" ಎಂದಿದ್ದಾರೆ. ವಾಸ್ತವವಾಗಿ ಸಚಿವ ಸಂಪುಟ ದಲ್ಲಿರುವ ಹಲವರ ವಿಷಯದಲ್ಲಿ ಸಿದ್ದರಾಮಯ್ಯ ಅವರು ಸಮಾಧಾನದಿಂದಿಲ್ಲ. ಕಾರಣ? ಈ ಮಂತ್ರಿಗಳು ಅಧಿಕಾರಶಾಹಿಯ ಕಪಿಮುಷ್ಟಿಗೆ ಸಿಲುಕಿ ಕೆಲಸ ಮಾಡುತ್ತಿದ್ದಾರೆಯೇ ವಿನಾ ಅವರಿಗೆ ತಮ್ಮದೇ ದೃಷ್ಟಿಕೋನವಿಲ್ಲ. ಹೀಗಾಗಿ ತಮಗೆ ಕೊಟ್ಟ ಖಾತೆಯ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೆ ಹಾಕಿ, ಅವರು ಹೇಳಿದ ಜಾಗದಲ್ಲಿ ಸಹಿ ಮಾಡಿ ನಿರುಮ್ಮಳವಾಗಿದ್ದಾರೆ.

ಇವತ್ತು ತನ್ನ ಮೇಲಿರುವ ಸಾಲ, ಗ್ಯಾರಂಟಿ ಯೋಜನೆಗಳಿಗೆ ಕೊಡಬೇಕಾದ ಹಣ, ನೌಕರರ ವೇತನ, ಪಿಂಚಣಿಗೆ ನೀಡಬೇಕಾದ ಹಣ ಸೇರಿದಂತೆ ವಿವಿಧ ಬಾಬ್ತುಗಳ ಹೊಡೆತದಿಂದಾಗಿ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಸರಕಾರಕ್ಕೆ ಟಾನಿಕ್ ಆಗುವಂಥ ಸಲಹೆ ಗಳನ್ನು ಕೊಡಬೇಕಾದ ಮಂತ್ರಿಗಳ ಪೈಕಿ ಬಹುತೇಕರು ‘ಡೆಡ್ ಕ್ಯಾಪಿಟಲ್’ ಆಗಿ ಹೋಗಿದ್ದಾರೆ.

ಇದನ್ನೂ ಓದಿ: R T Vittalmurthy Column: ಸುರ್ಜೇವಾಲ ಬೆಚ್ಚಿ ಬಿದ್ದಿದ್ದು ಏಕೆ ?

ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸಂಕಷ್ಟದಲ್ಲಿದೆ ಎಂದರೆ ಇದೊಂದೇ ರಾಜ್ಯದಿಂದ ಇಡೀ ದೇಶದಲ್ಲಿ ಪಕ್ಷವನ್ನು ಬಲಪಡಿಸುವ ಅನಿವಾರ್ಯತೆ ಇದೆ. ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ದಯನೀಯವಾಗಿತ್ತು. ದಿಲ್ಲಿ ಗದ್ದುಗೆಯಿಂದ ಉರುಳಿ ಬಿದ್ದ ಸಂಕಟವಿತ್ತು. ಆ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದ ಎಸ್.ಎಂ.ಕೃಷ್ಣ ತಮ್ಮಿಂದ ಸಾಧ್ಯವಾದಷ್ಟು ನೆರವನ್ನು ಹರಿಸಿ 2004ರ ಹೊತ್ತಿಗೆ ಕಾಂಗ್ರೆಸ್ ದಿಲ್ಲಿ ಗದ್ದುಗೆ ಹಿಡಿಯಲು ನೆರವಾಗಿದ್ದರು.

ಆದರೆ ಆ ಸಂದರ್ಭದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಕೆಲ ರಾಜ್ಯಗಳಾದರೂ ಕಾಂಗ್ರೆಸ್ ಕೈಲಿದ್ದವು. ಹೀಗಾಗಿ ಎಸ್.ಎಂ. ಕೃಷ್ಣ ಅವರು ಪಕ್ಷ ಸಂಘಟನೆಗೆ ಮೇಜರ್ ಷೇರು ಕೊಟ್ಟರೂ ಇನ್ನೂ ಕೆಲವು ರಾಜ್ಯಗಳಿಂದ ‘ಓಕೆ’ ಅನ್ನುವಷ್ಟು ಶಸ್ತ್ರಾಸ್ತ್ರಗಳು ಸರಬರಾಜಾಗಿದ್ದವು. ಆದರೆ ಈಗ ಪರಿಸ್ಥಿತಿ ಎಷ್ಟು ಕಠಿಣವಾಗಿದೆ ಎಂದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಕರ್ನಾಟಕವೇ ‘ಒನ್ ಆಂಡ್ ಓನ್ಲಿ’ ಸ್ಟೇಟು. ಉಳಿದಂತೆ ತೆಲಂಗಾಣ, ಹಿಮಾಚಲ ಪ್ರದೇಶದಂಥ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ದಲ್ಲಿದೆಯಾದರೂ ಅಲ್ಲಿಂದ ನೆರವು ಹರಿದು ಬರುತ್ತಿಲ್ಲ.

ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಮಾತೆತ್ತಿದರೆ ತಮ್ಮ ದಾರುಣ ಆರ್ಥಿಕತೆಯ ಬಗ್ಗೆ ಮಾತನಾಡುತ್ತಾರೆ, ಹಿಮಾಚಲ ಪ್ರದೇಶದಲ್ಲಿ ಸರಕಾರ ದುಡ್ಡಿಗೆ ಲಾಟರಿ ಹೊಡೆಯುವ ಪರಿಸ್ಥಿತಿ ಯಲ್ಲಿದೆ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಕಟ್ಟಲು ಕರ್ನಾಟಕವೇ ಏಕೈಕ ದಾರಿ. ಆದರೆ ಇಲ್ಲಿರುವ ಮತ್ತೊಂದು ಸಮಸ್ಯೆ ಎಂದರೆ ಹಾಲಿ ಸರಕಾರದ ಅವಧಿ 2028ಕ್ಕೆ ಮುಗಿಯುತ್ತದೆ.

Screenshot_2 R

ಆದರೆ ದಿಲ್ಲಿ ಗದ್ದುಗೆಗಾಗಿ ನಡೆಯುವ ಹೋರಾಟಕ್ಕೆ 2029 ಡೆಡ್‌ಲೈನ್. ಅರ್ಥಾತ್, ಅಲ್ಲಿಯವರೆಗೆ ಕರ್ನಾಟಕದಲ್ಲಿ ಪಕ್ಷ ಅಧಿಕಾರ ಹಿಡಿದಿರಬೇಕು. ಅಂದರೆ ೨೦೨೮ರ ವಿಧಾನಸಭಾ ಚುನಾವಣೆ ಯಲ್ಲೂ ಗೆದ್ದು ಕಾಂಗ್ರೆಸ್ ಅಧಿಕಾರ ಹಿಡಿಯಬೇಕು. ಆದರೆ ಈಗಿರುವ ಸ್ಥಿತಿಯೇ ಮುಂದುವರಿದರೆ ೨೦೨೮ರಲ್ಲಿ ಪಕ್ಷ ಅಧಿಕಾರಕ್ಕೆ ಬರುವುದಿರಲಿ, ಅದಕ್ಕೆ ಸಣ್ಣ ಇಮೇಜೂ ಇಲ್ಲದಂತಾಗುತ್ತದೆ. ಹೀಗಾಗಿ ತಮ್ಮ ಸರಕಾರಕ್ಕೆ ಹೊಸ ಇಮೇಜ್ ಬರುವಂತೆ ಮಾಡುವುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಹಾಗಂತಲೇ ರಾಹುಲ್ ಗಾಂಧಿ ಅವರಿಗೆ ಈ ಎಲ್ಲವನ್ನೂ ವಿವರಿಸಿರುವ ಸಿದ್ದರಾಮಯ್ಯ, “ಬಿಹಾರ ವಿಧಾನಸಭಾ ಚುನಾವಣೆಯ ನಂತರ ಸಂಪುಟ ಪುನಾರಚನೆ ಮಾಡಲೇಬೇಕು" ಎಂದಿದ್ದಾರೆ.

ಸಿದ್ದರಾಮಯ್ಯ ಅವರ ಈ ಮಾತಿಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ರಣತಂತ್ರ ನಿಪುಣರು ನೀಡಿರುವ ಸಲಹೆಯ ಪ್ರಕಾರ ಕೆಲ ಹಿರಿಯ ಸಚಿವರನ್ನು ಸಂಪುಟ ದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು ಎಂದಿದ್ದಾರೆ. ಯಾವಾಗ ಸಿದ್ದು-ರಾಹುಲ್ ಮಧ್ಯೆ ಇಂಥ ಮಾತುಕತೆ ನಡೆದಿದೆ ಎಂಬುದು ಸಾಬೀತಾಯಿತೋ, ಆಗ ಅವರ ಆಪ್ತರ ಪಡೆ ಹೊಸ ಉತ್ಸಾಹದಿಂದ ತಿರುಗಾಡುತ್ತಿದೆ.

12 ಹೊರಕ್ಕೆ, 12 ಒಳಕ್ಕೆ

ಹೀಗೆ ರಾಹುಲ್ ಗಾಂಧಿ ಅವರ ಬಳಿ ತಮ್ಮ ಮನದಿಂಗಿತವನ್ನು ತೋಡಿಕೊಂಡಿರುವ ಸಿದ್ದರಾಮಯ್ಯ ಅವರು ತಮ್ಮ ಮಂತ್ರಿಮಂಡಲದಿಂದ ಹೊರಗೆ ಹೋಗಬೇಕಾದವರ ಪಟ್ಟಿಯನ್ನು ರೆಡಿ ಮಾಡಿದ್ದಾರೆ. ಕುತೂಹಲದ ಸಂಗತಿ ಎಂದರೆ ಹೀಗೆ ಸಂಪುಟದಿಂದ ಹೊರಬೀಳುತ್ತಿರುವವರ ಪೈಕಿ ಸಿದ್ದು ಬೆಂಬಲಿಗರು ಮಾತ್ರವಲ್ಲ, ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಆಪ್ತರಾದವರೂ ಇದ್ದಾರೆ. ಹೀಗೆ ಸುರ್ಜೇವಾಲಾ ಅವರಿಗೆ ಆಪ್ತರಾದ ಸಚಿವರೊಬ್ಬರು ತಮ್ಮ ಖಾತೆಯ ಜುಟ್ಟನ್ನೇ ಸುರ್ಜೇವಾಲಾ ಅವರ ಕೈಗೆ ನೀಡಿದ್ದಾರೆ ಎಂಬುದು ಸಿದ್ದು ಅಸಮಾ ಧಾನ. ತಾವು ಮಂತ್ರಿಮಂಡಲದಲ್ಲಿ ಸೇಫ್ ಆಗಿರಬೇಕು ಎಂಬ ಕಾರಣಕ್ಕಾಗಿ ಸುರ್ಜೇವಾಲಾ ಅವರಿಗೆ ಈ ಸಚಿವರು ಅಂಟಿಕೊಂಡಿದ್ದರೆ, ತಮಗೆ ಬೇಕಾದ ಕೆಲ ಅಧಿಕಾರಿಗಳ ಮೂಲಕ ಸುರ್ಜೇವಾಲಾ ಈ ಸಚಿವರ ಖಾತೆಯ ಆಗುಹೋಗುಗಳನ್ನು ನಿಯಂತ್ರಿಸುತ್ತಿದ್ದಾರೆ.

ಪರಿಣಾಮ? ನಾಡಿನ ಭವಿಷ್ಯವನ್ನು ರೂಪಿಸಬೇಕಾದ ಈ ಖಾತೆಯು ಪರರಾಜ್ಯದವರ ಭವಿಷ್ಯ ಬೆಳಗುತ್ತಿದೆ ಎಂಬುದು ಸಿದ್ದು ಅಸಮಾಧಾನ. ಹೀಗಾಗಿ ಇಂಥ ಸಚಿವರಿಗೆ ಗೇಟ್‌ಪಾಸ್ ಕೊಡಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರು, ಭವಿಷ್ಯದಲ್ಲಿ ಸರಕಾರಕ್ಕೆ ಬಲ ತುಂಬಿ, ಅದರ ಇಮೇಜ್ ಹೆಚ್ಚಿಸಬಲ್ಲಂಥವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಲು ಬಯಸಿದ್ದಾರೆ.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರಿಡುತ್ತಿರುವ ಈ ಹೆಜ್ಜೆಗೆ ‘ಯಸ್’ ಅನ್ನದೆ ವರಿಷ್ಠರಿಗೂ ಬೇರೆ ದಾರಿ ಇಲ್ಲ. ಯಾಕೆಂದರೆ ೨೦೨೯ರ ಸಂಸತ್ ಚುನಾವಣೆಗೆ ಹೋಗುವ ಮುನ್ನ ಕರ್ನಾಟಕ ಎಂಬ ಸೇನಾನೆಲೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅದರ ಮುಂದಿದೆ. ಹೀಗಿರು ವಾಗ ಯಾವುದೋ ಒತ್ತಡಕ್ಕೆ ಸಿಲುಕಿ ದುಡುಕಿದರೆ ೨೦೨೮ಕ್ಕೂ ಮುನ್ನವೇ ಸರಕಾರ ಪತನವಾದರೆ ಗತಿ ಏನು? ಎಂಬುದು ರಾಹುಲ್ ಯೋಚನೆ.

ಹೀಗಾಗಿ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಅಲ್ಲವಾದರೂ ಡಿಸೆಂಬರ್ ಹೊತ್ತಿಗೆ ಸಂಪುಟ ಪುನಾರಚನೆ ನಿಶ್ಚಿತ. ಇಂಥ ಪುನಾರಚನೆಯ ಸಂದರ್ಭದಲ್ಲಿ ೧೨ ಮಂದಿಯನ್ನು ಸಂಪುಟದಿಂದ ತೆಗೆದು, ೧೨ ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಿದ್ದು ಲೆಕ್ಕಾಚಾರ.

ಬಿಜೆಪಿ ಗೋಳು ತಪ್ಪುತ್ತಿಲ್ಲ

ಈ ಮಧ್ಯೆ ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟ ನಿರಾತಂಕವಾಗಿ ಮುಂದುವರಿದಿದೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಲೇಟೆಸ್ಟು ಹೆಜ್ಜೆಯೇ ಈಗ ಪಕ್ಷದಲ್ಲಿ ಚರ್ಚೆಯ ವಿಷಯ. ಅಂದ ಹಾಗೆ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಆಯಿತಲ್ಲ? ಈ ಸಂದರ್ಭದಲ್ಲಿ ವಿಜಯೇಂದ್ರ ಅವರು ತಕ್ಷಣ ಎಚ್ಚೆತ್ತು ಛಲವಾದಿ ನಾರಾಯಣಸ್ವಾಮಿ ಅವರ ಜತೆ ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ ಜಿಲ್ಲೆಗಳಿಗೆ ಹೋಗಿದ್ದಾರೆ.

ಹೀಗೆ ಹೋದವರು ಅಲ್ಲಿನ ಪರಿಸ್ಥಿತಿಯನ್ನು ನೋಡಿ ಸರಕಾರದ ಮೇಲೆ ವಾಗ್ದಾಳಿ ನಡೆಸಿದ ಮೇಲೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚೆತ್ತಿದ್ದಾರೆ. ವಾಸ್ತವವಾಗಿ ಇಂಥ ಸಂದರ್ಭಗಳಲ್ಲಿ ಮೊದಲು ಎಚ್ಚೆತ್ತುಕೊಳ್ಳಬೇಕಾದ್ದೇ ಪ್ರತಿಪಕ್ಷ ನಾಯಕರು. ಆದರೆ ಅವರು ಎಚ್ಚೆತ್ತುಕೊಳ್ಳುವ ಮುಂಚೆ ವಿಜಯೇಂದ್ರ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಿದ್ದಾರೆ.

ಆದರೆ ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿದೆಯಲ್ಲದೆ, ಪರಸ್ಪರ ಹೊಂದಾಣಿಕೆ ಇಲ್ಲದೆ ಕಾರ್ಯ ನಿರ್ವಹಿಸಿದರೆ ನಾವು ಆಡಳಿತ ಪಕ್ಷಕ್ಕೆ ಕೊಡುವ ಸಂದೇಶವೇನು? ಎಂದು ಚಿಂತಿಸುವಂತೆ ಮಾಡಿದೆ. ಇದೇ ರೀತಿ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಹೋಳುಗಳಾಗಿ ವಿಭಜಿಸಲಾಗಿದೆಯಲ್ಲ? ಈ ಕುರಿತು ಕಳೆದ ವಾರ ಮುಖ್ಯಮಂತ್ರಿಗಳು ಜಿಬಿಎ ಸಭೆ ಕರೆದಿದ್ದರು. ಹೀಗೆ ಮುಖ್ಯಮಂತ್ರಿಗಳು ಕರೆದ ಸಭೆಗೆ ಹೋಗಿ ಪಕ್ಷದ ವಿರೋಧವನ್ನು ದಾಖಲಿಸುವ ಬದಲು, ಸಭೆಗೆ ಬಹಿಷ್ಕಾರ ಹಾಕುವ ಕೆಲಸ ಬಿಜೆಪಿಯಿಂದ ಅಯಿತು.

ಹೀಗೆ ಮಾಡುವ ಬದಲು ಸಭೆಯಲ್ಲಿ ಭಾಗವಹಿಸಿದ್ದರೆ, ತನ್ನ ಅಭಿಪ್ರಾಯವನ್ನು ದಾಖಲಿಸಿದ್ದರೆ ಆಟ ಬೇರೆಯಾಗುತ್ತಿತ್ತು. ಆದರೆ ಸಭೆಗೆ ಗೈರು ಹಾಜರಾಗುವ ಮೂಲಕ ಉದ್ದೇಶಪೂರ್ವಕವಾಗಿ ಸರಕಾರಕ್ಕೆ ಬೆಂಬಲ ಕೊಟ್ಟಂತಾಯಿತು. ಈಗ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಬೆಂಗಳೂರಿನ ಅಭಿವೃದ್ದಿಯೇ ಬಿಜೆಪಿಗೆ ಬೇಕಾಗಿಲ್ಲ ಅಂತ ಸರಕಾರ ದೂರುತ್ತಿದೆ.

ಹೀಗೆ ಒಂದು ಕಡೆಯಿಂದ ತಮ್ಮದು ದುರ್ಬಲ ಪ್ರತಿಪಕ್ಷ ಎಂದು ತೋರಿಸಿಕೊಳ್ಳುವ ಕೆಲಸ ರಾಜ್ಯದ ಬಿಜೆಪಿ ನಾಯಕರಿಂದಾಗುತ್ತಿದ್ದರೆ, ಭವಿಷ್ಯದಲ್ಲಿ ನಾವು ಅಧಿಕಾರಕ್ಕೆ ಬರುವುದಾದರೂ ಹೇಗೆ? ಎಂಬುದು ಬಿಜೆಪಿಗರ ಚಿಂತೆ. ಸಂಜಯ್ ಜೋಷಿಗೆ ಸಾರಥ್ಯ? ಈ ಮಧ್ಯೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಸಂಜಯ್ ಜೋಷಿ ಆಯ್ಕೆಯಾಗುತ್ತಾರಾ? ಎಂಬ ಕುತೂಹಲ ರಾಜ್ಯ ಬಿಜೆಪಿಗರಲ್ಲಿ ಕಾಣಿಸಿಕೊಂಡಿದೆ.

ಅಂದ ಹಾಗೆ, ರಾಜ್ಯ ಬಿಜೆಪಿಯ ಗೊಂದಲ ಬಗೆಹರಿಯಬೇಕೆಂದರೆ ಮೊದಲು ರಾಷ್ಟ್ರೀಯ ಬಿಜೆಪಿಯ ಗೊಂದಲ ಬಗೆಹರಿಯಬೇಕು. ಹಾಗಂತಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬಹುದು? ಎಂಬ ಕುತೂಹಲ ರಾಜ್ಯ ಬಿಜೆಪಿಯ ನಾಯಕರಲ್ಲಿದೆ. ಅಂದ ಹಾಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬೇಕು? ಎಂಬ ವಿಷಯದಲ್ಲಿ ಮೋದಿ-ಅಮಿತ್ ಶಾ ಧೋರಣೆ ಬದಲಾಗಿಲ್ಲ. ಒಂದೋ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಈ ಜಾಗಕ್ಕೆ ಬರಲಿ ಎಂಬುದು ಮೋದಿ-ಅಮಿತ್ ಶಾ ಜೋಡಿಯ ಬಯಕೆ.

ಆದರೆ ಅವರ ಬಯಕೆಗೆ ಶತಾಯಗತಾಯ ಒಪ್ಪಿಗೆ ನೀಡದ ಅರೆಸ್ಸೆಸ್ ವರಿಷ್ಠರು ಶಿವರಾಜ್‌ಸಿಂಗ್ ಚೌಹಾಣ್ ಅವರ ಹೆಸರನ್ನು ಮುಂಚೂಣಿಗೆ ತಂದುಬಿಟ್ಟಿದ್ದರು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸ್ವತಃ ಸಿವರಾಜ್‌ಸಿಂಗ್ ಚೌಹಾಣ್ ಅವರು “ನನಗೆ ಅಧ್ಯಕ್ಷ ಪಟ್ಟ ಬೇಡ. ಬದಲಿಗೆ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸಂಜಯ್ ಜೋಷಿ ಬರಲಿ" ಎಂದಿದ್ದಾರೆ.

ಅವರ ಈ ಮಾತಿಗೆ ಕೇಂದ್ರ ಸಚಿವರಾದ ರಾಜ್‌ನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ಹಲ ನಾಯಕರು ಕೋರಸ್ ಕೊಟ್ಟಿದ್ದಾರೆ. ಹೀಗೆ ಸಂಜಯ್ ಜೋಷಿ ಅವರ ಹೆಸರನ್ನು ಈ ನಾಯಕರು ಮುಂದಕ್ಕೆ ತರಲು, ಅವರಿಗಿರುವ ಸಾಮರ್ಥ್ಯವೇ ಕಾರಣ. ಆರೆಸ್ಸೆಸ್ ಸಿದ್ಧಾಂತಕ್ಕೆ ಪೂರಕವಾಗಿ ಹೆಜ್ಜೆ ಇಡಬಲ್ಲರು ಮತ್ತು ಅತ್ಯಂತ ಕ್ರಿಯಾಶೀಲರು ಎಂಬುದು ಸಂಜಯ್ ಜೋಷಿ ಅವರ ಪ್ಲಸ್ ಪಾಯಿಂಟು. ಆದರೆ ಇಂಥ ಸಂಜಯ್ ಜೋಷಿ ವಿಷಯದಲ್ಲಿ ಮೋದಿ-ಅಮಿತ್ ಶಾ ಜೋಡಿಗೆ ಆಸ್ಥೆ ಕಡಿಮೆ. ಆದರೆ ಬದಲಾದ ಸನ್ನಿವೇಶದಲ್ಲಿ ಆರೆಸ್ಸೆಸ್ ಪವರ್ರು ಹೆಚ್ಚಾಗಿದೆಯಲ್ಲ? ಇದರ ಪರಿಣಾಮವಾಗಿ ಸಂಜಯ್ ಜೋಷಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಬಹುದು ಎಂಬುದು ಒಂದು ಲೆಕ್ಕಾಚಾರ. ಬಿಹಾರ ವಿಧಾನಸಭಾ ಚುನಾವಣೆಯ ನಂತರ ಈ ಕುರಿತ ಚಿತ್ರ ಸ್ಪಷ್ಟವಾಗಲಿದೆ. ಅದು ಸ್ಪಷ್ಟವಾದರೆ ರಾಜ್ಯ ಬಿಜೆಪಿಯ ಚಿತ್ರವೂ ಸ್ಪಷ್ಟವಾಗಲಿದೆ.

ಲಾಸ್ಟ್ ಸಿಪ್: ಅಂದ ಹಾಗೆ, ಕರ್ನಾಟಕದ ರಾಜಕಾರಣ ದಿನದಿಂದ ದಿನಕ್ಕೆ ಎಷ್ಟು ಕಟುವಾಗುತ್ತಾ ನಡೆದಿದೆ ಎಂಬುದಕ್ಕೆ ಇತ್ತೀಚಿನ ಎರಡು ಘಟನೆಗಳು ಸಾಕ್ಷಿ. ಅದೆಂದರೆ ಕರ್ನಾಟಕ ಕಂಡ ಇಬ್ಬರು ಮಹಾನ್ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟು ಆಸ್ಪತ್ರೆ ಸೇರಿದರು. ಹೀಗೆ ಆಸ್ಪತ್ರೆ ಸೇರಿದವರು ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ಸೌಜನ್ಯಕ್ಕಾಗಿ ಗೌಡರ ಆರೋಗ್ಯ ವಿಚಾರಿಸುವ ಕೆಲಸವು ಕಾಂಗ್ರೆಸ್‌ನ ಘಟಾನುಘಟಿ ನಾಯಕರಿಂದ ಆಗಿಲ್ಲ. ಇದೇ ರೀತಿ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ವಿಚಾರಿಸುವ ಸೌಜನ್ಯವು ಬಿಜೆಪಿ ನಾಯಕರಿಂದಲೂ ವ್ಯಕ್ತವಾಗಿಲ್ಲ. ಕರ್ನಾಟಕದ ರಾಜಕಾರಣ ಎಷ್ಟು ಕಟುವಾಗುತ್ತಾ ನಡೆದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?