Hari Paraak Column: ಟ್ರಂಪ್ ʼಕ್ರೆಡಿಟ್ʼ ತಗೊಂಡ್ರೆ ಅದು ಅಮೆರಿಕ ʼಸಾಲʼ ತಗೊಂಡಂತೆ
ನಿರ್ಮಾಪಕ ಅವನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್‌ಶೀಟ್ ಕೊಡು ಅಂತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ನಾಯಕಿಗೆ ಕೇಳೋದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗುತ್ತದೆ. ಇಷ್ಟೆ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ


ತುಂಟರಗಾಳಿ
ಸಿನಿಗನ್ನಡ
ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿ ಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿ ಬರುವ ಮಾತು ಅಂದ್ರೆ ಇಲ್ಲಿ ಎಲ್ಲವೂ ಪುರುಷ ಪ್ರಧಾನ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತು ಗಳು ಅನ್ವಯಿಸುತ್ತವೆ. ಅದಕ್ಕೂ ಕಾರಣಗಳು ಹಲವು. ಇಲ್ಲಿ ನಾಯಕರಿಗೆ ಸಿಕ್ಕಷ್ಟು ಸಂಭಾವನೆ ನಾಯಕಿಯರಿಗೆ ಸಿಗೋಲ್ಲ ಅನ್ನೋ ಮಾತಿದೆ. ಅದು ನಿಜ ಕೂಡಾ. ಅದಕ್ಕೆ ತಕ್ಕಂತೆ ಅವರಿಗೆ ಸಿಗೋ ಮರ್ಯಾದೆ ಕೂಡಾ ಇವರಿಗೆ ಸಿಗಲ್ಲ. ಆದರೆ ಕೆಲವೊಮ್ಮೆ ಇದು ನಾಯಕಿ ಯರಿಗೆ ವರದಾನ ಆಗಿರುವುದೂ ಉಂಟು. ಅದಕ್ಕೆ ಇಂಬು ಕೊಡುವಂತೆ ಇಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಹೊಸ ನಟಿಯೊಬ್ಬಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ.
ಆದರೆ ಒಬ್ಬ ಸ್ಟಾರ್ ಹೀರೋಯಿನ್ ಜತೆ ಹೊಸ ಹುಡುಗನಿಗೆ ಹೀರೋ ಆಗೋ ಅವಕಾಶ ಸಿಗುತ್ತಾ ಅನ್ನೋದು ಪ್ರಶ್ನೆ. ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ. ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋದಿಲ್ಲ.
ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ ನಾಯಕನ ಪರಿಸ್ಥಿತಿ ಹಾಗಲ್ಲ. ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ಮುಂದೈತೆ ಮಾರಿ ಹಬ್ಬ ಅನ್ನೋ ಪರಿಸ್ಥಿತಿ. ನಾಯಕಿಗೆ ಸಂಭಾವನೆ ಕಮ್ಮಿ ಸಿಕ್ರೂ ಆಕೆ ಆ ಫ್ಲಾಪ್ ಸಿನಿಮಾದಲ್ಲಿ ನಟಿಸಿದ್ದಳು ಅನ್ನೋದು ೩ ದಿನಕ್ಕೆ ಎಲ್ಲರಿಗೂ ಮರೆತುಹೋಗುತ್ತದೆ. ಅದೇ ನಾಯಕನಿಗೆ ಅದು ಜೀವನ ಪರ್ಯಂತ ಅವನೇ ಜವಾಬ್ದಾರಿ ಹೊರಬೇಕಾದ ಫ್ಲಾಪ್ ಸಿನಿಮಾ.
ಇದನ್ನೂ ಓದಿ: Hari Paraak Column: ಡಿ ಆರ್ ಎಸ್ ಅಂದ್ರೆ ಡ್ರೋನ್ ರಿವ್ಯೂ ಸಿಸ್ಟಮ್
ಅದರಿಂದ ಅವನ ಕೆರಿಯರ್ ಏರುಪೇರು ಆಗುತ್ತದೆ. ನಿರ್ಮಾಪಕ ಅವನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್‌ಶೀಟ್ ಕೊಡು ಅಂತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ನಾಯಕಿಗೆ ಕೇಳೋದಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗು ತ್ತದೆ. ಇಷ್ಟೆ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ.
ಲೂಸ್ ಟಾಕ್ - ನರೇಂದ್ರ ಮೋದಿ
ಏನ್ ಸರ್, ಸಿದ್ರಾಮಯ್ಯನೋರು ಸೇನೆಯ ಯಶಸ್ಸಿನ ಕ್ರೆಡಿಟ್ ಅನ್ನು ಮೋದಿಗೆ ಕೊಡಬಾರದು ಅಂತ ಹೇಳಿದ್ದಾರಲ್ಲ?
- ಆ ಅಮೆರಿಕದೋರು ಒಳಗೊಳಗೇ ಐಎಂಎಫ್ ನಿಂದ ಪಾಕಿಸ್ತಾನಕ್ಕೆ ಕ್ರೆಡಿಟ್ ಕೊಡಿಸಿದ್ದಾರಲ್ವಾ.. ಅದಕ್ಕೆ ಸಿದ್ರಾಮಯ್ಯನೋರು ಹಂಗ್ ಹೇಳಿದ್ದಾರೆ ಅನ್ಸುತ್ತೆ
ಆ ಕಡೆ ಟ್ರಂಪ್, ಯುದ್ಧ ನಿಲ್ಲಿಸಿದ ಕ್ರೆಡಿಟ್ ಎಲ್ಲಾ ತಾವೇ ತಗೋತಾ ಇದ್ದಾರ?
- ಅಯ್ಯೋ, ಹೋಗ್ಲಿ ಬಿಡಿ, ಅಮೆರಿಕನೂ ಕ್ರೆಡಿಟ್ ಅಂದ್ರೆ ಸಾಲ ತಗೊಳ್ಳೋ ಲೆವೆಲ್ಲಿಗೆ ಬಂದಿದೆ ಅಂತ ಅಪಪ್ರಚಾರ ಮಾಡಿಬಿಟ್ರೆ ಆಯ್ತು
ಅದೂ ಸರಿನೇ. ಹೋಗ್ಲಿ ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಕೊಡೋದನ್ನ ನೀವ್ಯಾಕೆ ತಡೀಲಿಲ್ಲ?
- ಅಯ್ಯೋ, ನಾನು ಐಎಂಎಫ್ ಅಂದ್ರೆ ಇಂಟರ್‌ನ್ಯಾಷನಲ್ ಮಿಲ್ಕ್ ಫೆಡರೇಷನ್ ಅಂದ್ಕೊಂಡ್ಬಿಟ್ಟೆ. ಹಾಲು ತಾನೇ, ಕೊಡ್ಲಿ ಬಿಡಿ ಅಂತ ಸುಮ್ನಾದೆ.
ಸರಿ ಹೋಯ್ತು. ಹೋಗ್ಲಿ, ಈ ಟ್ರಂಪ್ ಆಪಲ್ ಕಂಪನಿಯೋರಿಗೆ ಭಾರತದಲ್ಲಿ ಐಫೋನ್ ಉತ್ಪಾದನೆ ಮಾಡ್ಬೇಡಿ ಅಂತ ಕಿವಿ ಚುಚ್ಚಿದ್ದಾರಲ್ಲ?
- ಹಿಂಗೇ ಬಿಟ್ರೆ ಸೇಬು ಹಣ್ಣಿಗೆ ಫೇಮಸ್ ಆಗಿರೋ ಕಾಶ್ಮೀರದಲ್ಲಿ ಆಪಲ್ ಉತ್ಪಾದನೆ ಮಾಡಬೇಡಿ ಅಂತಾನೂ ಹೇಳ್ತಾರೆ. ಅವರ ಮಾತು ಯಾರೂ ಕೇಳಲ್ಲ ಬಿಡಿ.
ಹೋಗ್ಲಿ, ಜನಕ್ಕೆ ಕದನವಿರಾಮದ ಬಗ್ಗೆ ಗೊಂದಲ ಇದೆ. ನೀವೇ ಹೇಳ್ಬಿಡಿ, ಯುದ್ಧ ನಿಂತಿದೆಯಾ ಇಲ್ವಾ?
- ನ್ಯೂಸ್ ಚಾನಲ್‌ಗಳೆ ಈಗ ಹಾಂಕಾಂಗ್, ಸಿಂಗಾಪುರದಲ್ಲಿ ಕರೋನಾ ಅಂತ ಸುದ್ದಿ ಮಾಡ್ತಾ ಇದ್ದಾವೆ ಅಂದಮೇಲೆ ಅಧಿಕೃತವಾಗಿ ಯುದ್ಧ ನಿಂತಿದೆ ಅಂತಾನೇ ಅರ್ಥ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಇಂಡಿಯಾ ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದನವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅಫಿಷಿಯಲ್ ಆಗಿ ಕದನ ಆಗುತ್ತಿರಲಿಲ್ಲವಾದರೂ ಆಗಾಗ ಛಾನ್ಸ್ ಸಿಕ್ಕಾಗಲೆಲ್ಲ, ಸೈಕಲ್ ಗ್ಯಾಪ್‌ನಲ್ಲಿ ಕರಾಮತ್ತು ತೋರಿಸಲು ಎರಡೂ ಕಡೆಯವರು ಸಿದ್ಧವಾಗಿದ್ದರು. ಭಾರತೀಯ ಸೇನೆಯ ಮುಖ್ಯಸ್ಥ ಖೇಮು ತನ್ನ ಸೈನಿಕರೊಂದಿಗೆ ಗಡಿಭಾಗದಲ್ಲಿ ಸಣ್ಣ ಅಡಗುದಾಣದ ಹಿಂದೆ ಕೂತಿದ್ದ.
ಆ ಕಡೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅ-ಲ್ ಖಾನ್ ಕೂಡ ಅದೇ ರೀತಿ ಭಾರತೀಯ ಸೇನೆಗೆ ಕಾಣದಂತೆ ತನ್ನ ಸಂಗಡಿಗರೊಂದಿಗೆ ಕೂತಿದ್ದ. ಬಹಳ ಹೊತ್ತು ಎರಡೂ ಕಡೆ ಸದ್ದೇ ಇರಲಿಲ್ಲ. ಎರಡೂ ತಂಡಗಳಿಗೂ ಆ ಕಡೆ ಇರುವವರ ಬಗ್ಗೆ ಮಾಹಿತಿ ಇತ್ತು.
ಮಧ್ಯರಾತ್ರಿಯ ಹೊತ್ತಲ್ಲಿ ಖೇಮು ಇದ್ದಕ್ಕಿದ್ದಂತೆ ‘ಮನ್ಸೂರ್ ಖಾನ್’ ಅಂತ ಕೂಗಿದ. ಈ ದನಿ ಕೇಳಿ ಆ ಕಡೆಯಿಂದ ಮನ್ಸೂರ್ ಖಾನ್ ಏನು ಅಂತ ಎದ್ದು ನಿಂತ. ಖೇಮು ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಂದ. ಸ್ವಲ್ಪ ಹೊತ್ತು ನಿಶ್ಶಬ್ಧ. ನಂತರ ಖೇಮು, ‘ಅಬ್ದುಲ್ ರಜಾಕ್’ ಅಂತ ಕೂಗಿದ. ಆ ಕಡೆಯಿಂದ ರಜಾಕ್ ಏನು ಅಂತ ಎದ್ದು ನಿಂತ. ಖೇಮು ಮತ್ತೆ ಗುಂಡು ಹಾರಿಸಿ ಕೊಂದ.
ಆ ಕಡೆ ಸೇನಾ ಮುಖ್ಯಸ್ಥ, “ನನ್ಮಕ್ಳ ನಿಮಗೇನ್ ತಲೆ ಕೆಟ್ಟಿದೆಯಾ, ಅವ್ನು ಅಟೆಂಡೆ ಹಾಕೋನ್ ಥರಾ ಹೆಸರು ಕೂಗಿದ್ರೆ, ಸ್ಟೂಡೆಂಟ್ಸ್ ಥರ ಎದ್ದು ನಿಲ್ತೀರಲ್ಲ?!" ಅಂತ ಬೈದ. ಆಗ ಅವರಬ್ಬ ಸೈನಿಕ, “ಸರ್, ನಾವೂ ಅದೇ ಟೆಕ್ನಿಕ್ ಯೂಸ್ ಮಾಡೋಣ" ಅಂತ ಸಲಹೆ ಕೊಟ್ಟ. ಸರಿ ಅಂತ ಆ ಕಡೆ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್, “ಖೇಮು" ಎಂದು ಜೋರಾಗಿ ಕೂಗಿದ. ಈ ಕಡೆ ಖೇಮು ಏನೂ ಉತ್ತರಿಸದೆ ಸುಮ್ಮನೇ ಕುಳಿತಿದ್ದ. 5 ನಿಮಿಷ ಆಯ್ತು. ನಮ್ಮ ಪ್ಲ್ಯಾನ್ ವರ್ಕ್ ಆಗಲಿಲ್ಲ ಅನ್ನೋ ಸಿಟ್ಟಲ್ಲಿ ಅಫ್ಜಲ್ ಖಾನ್ ಕೂತಿದ್ದ. ಆಗ ಖೇಮು ಎದ್ದು ಯಾರಪ್ಪಾ ಅದು ನನ್ನ ಕರೆದಿದ್ದು ಅಂತ ಕೂಗಿದ. ಆಗ ಅಫ್ಜಲ್ ಖಾನ್, “ನಾನೇ ನಾನೇ" ಅಂತ ಎದ್ದು ನಿಂತ. ಖೇಮು ನೇರ ಅವನ ತಲೆಗೆ ಗುಂಡು ಹಾರಿಸಿ ಕೂತ್ಕೊಂಡ.
ಲೈನ್ ಮ್ಯಾನ್
ಆರ್ಟಿಫಿಶಿಯಲ್ ಪದದ ವಿರುದ್ಧ ಪದ ಯಾವುದು?
- ‘ಹಾರ್ಟಿ’ಫಿಶಿಯಲ್
ಫೋರ್ಜರಿ ಮಾಡಿ ಸಿಕ್ಕಿಬಿದ್ರೆ ಅದು
- ‘ಸಹಿ’ ಸುದ್ದಿ
ನೀವು ಫೋರ್ಜರಿ ಮಾಡಿಲ್ಲ ಅಂತ ಪ್ರೂವ್ ಮಾಡೋದು
- ‘ರುಜು’ವಾತು
ಅಪ್ಪ ಎಲ್ಲಾ ಆಸ್ತಿ ನನ್ನ ಹೆಸರಿಗೇ ‘ಬರೆಯಲಿ’ ಅಂತ ಆಸೆಪಡೋದು
- ‘ಸಹಿ’ತಾಸಕ್ತಿ
ಸಮಯಕ್ಕೆ ತಕ್ಕಂತೆ ಕಾಂಗ್ರೆಸ್, ಬಿಜೆಪಿ ಇಬ್ಬರ ಕಡೆಗೂ ಪ್ರೀತಿ ತೋರಿಸುವವರಿಗೊಂದು ಬಿರುದು
- ‘ಕಮಲಾ’ ‘ಕರ’
ಟ್ರೆಂಡ್ ಮ್ಯಾಟರ್ಸ್
- ಕೆಲವರು ‘ಐ ಸ್ಟಾಂಡ್ ವಿತ್’ ಅನ್ನೋಕೆ ‘ತುದಿಗಾಲ ನಿಂತಿರ್ತಾರೆ’
ಮಾತೆತ್ತಿದರೆ, ‘ಐ ಸ್ಟ್ಯಾಂಡ್ ವಿತ್’ ಅನ್ನೋರದ್ದು
- ‘ಸ್ಟ್ಯಾಂಡ್’ ಅಪ್ ಕಾಮಿಡಿ