Ravi Sajangadde Column: ನನ್ನ ದನಿಗೆ ನಿನ್ನ ದನಿಯು...
‘ಕೇಳುಗರು, ನೋಡುಗರು ಮತ್ತು ಗ್ರಾಹಕರ ಮನಸು ಮತ್ತು ಹೃದಯವನ್ನು ತಲುಪುವ ಜಾಹೀರಾತುಗಳು ಮಾತ್ರ ಜನರ ನಡುವೆ ಮೋಡಿ ಮಾಡಬಲ್ಲವು, ಸಂಚಲನ ಸೃಷ್ಟಿಸಬಲ್ಲವು. ಜಾಹೀರಾತು ನೀಡುವ ಸಂಸ್ಥೆಯ ದೃಷ್ಟಿಕೋನದ ಬದಲಾಗಿ, ಜನರ ದೃಷ್ಟಿಕೋನಕ್ಕೆ ಒಪ್ಪುವ ಮತ್ತು ಹೃದಯಕ್ಕೆ ಮುಟ್ಟುವ ಕಂಟೆಂಟ್ ಯಾವತ್ತಿಗೂ ಸೋತ ಉದಾಹರಣೆ ಇಲ್ಲ.’
-
Ashok Nayak
Oct 26, 2025 12:25 PM
ರವೀ ಸಜಂಗದ್ದೆ
ಜಾಹೀರಾತು ಎಂದಾಕ್ಷಣ ಅಬ್ಬರದ ಪ್ರಚಾರ ಮಾತ್ರವಲ್ಲ, ಅದರಲ್ಲೂ ಕಲಾತ್ಮಕ ಕೌಶಲಕ್ಕೆ ಮತ್ತು ಜನರ ಗಮನವನ್ನು ವಿಭಿನ್ನವಾಗಿ ಸೆಳೆಯುವಂತೆ ಮಾಡಲು ಅವಕಾಶವಿದೆ ಎಂದು ತೋರಿಸಿ ಕೊಟ್ಟವರು ಪಿಯೂಷ್ ಪಾಂಡೆ. ಅವರ ಜಾಹೀರಾತುಗಳು ಟಿವಿಯಲ್ಲಿ ಪ್ರಸಾರ ವಾಗತೊಡಗಿದರೆ, ವೀಕ್ಷಕರು ತಕ್ಷಣ ಚಾನೆಲ್ ಬದಲಾಯಿಸದೇ, ಆ ಜಾಹೀರಾತಿನಲ್ಲಿರುವ ಹಾಸ್ಯವನ್ನೋ, ಸಂದೇಶ ವನ್ನೋ ಮತ್ತೆ ಮತ್ತೆ ನೋಡುತ್ತಾರೆ. ಜಾಹೀರಾತಿನಲ್ಲೂ ಸೃಜನ ಶೀಲತೆಯನ್ನು ತಂದ ಪಿಯೂಷ್ ಪಾಂಡೆ (1955-2025) ಮೊನ್ನೆ ಇಹಲೋಕ ತ್ಯಜಿಸಿದ್ದಾರೆ.
‘ಕೇಳುಗರು, ನೋಡುಗರು ಮತ್ತು ಗ್ರಾಹಕರ ಮನಸು ಮತ್ತು ಹೃದಯವನ್ನು ತಲುಪುವ ಜಾಹೀರಾತುಗಳು ಮಾತ್ರ ಜನರ ನಡುವೆ ಮೋಡಿ ಮಾಡಬಲ್ಲವು, ಸಂಚಲನ ಸೃಷ್ಟಿಸಬಲ್ಲವು. ಜಾಹೀರಾತು ನೀಡುವ ಸಂಸ್ಥೆಯ ದೃಷ್ಟಿಕೋನದ ಬದಲಾಗಿ, ಜನರ ದೃಷ್ಟಿಕೋನಕ್ಕೆ ಒಪ್ಪುವ ಮತ್ತು ಹೃದಯಕ್ಕೆ ಮುಟ್ಟುವ ಕಂಟೆಂಟ್ ಯಾವತ್ತಿಗೂ ಸೋತ ಉದಾಹರಣೆ ಇಲ್ಲ.’
ಇದು ಮೊನ್ನೆ ನಿಧನರಾದ ಜಾಹೀರಾತು ಜಗತ್ತಿನ ಕಂಟೆಂಟ್ ಬ್ರಹ್ಮ, ಹೊಸತನದ ಹರಿಕಾರ, ಪದ್ಮಶ್ರೀ ಪಿಯೂಷ್ ಪಾಂಡೆ ಹೇಳಿದ ಮಾತುಗಳು. ಟೀವಿ ಜಾಹೀರಾತು ಮತ್ತು ಇತರ ಜಾಹೀರಾತು ವಿಭಾಗದಲ್ಲಿ ೪ ದಶಕಗಳ ಕಾಲ ವಿಶಿಷ್ಟ ಆಲೋಚನೆಗಳು ಮತ್ತು ಜಾಹೀರಾತು ಕಂಟೆಂಟ್ ಮೂಲಕ, ಹೊಸತನ ತೋರಿ, ಮನೆಮಾತಾಗಿರುವ ‘ಆಡ್ ಮ್ಯಾನ್’ ಇವರು!
ಅದೊಂದು ಕ್ರಿಕೆಟ್ ಪಂದ್ಯ. ಆಟಗಾರ 99 ರನ್ನಿನೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾನೆ. ಬಾರಿಸಿದ ಮುಂದಿನ ಎಸೆತ ಗಾಳಿಯಲ್ಲಿ ಹೋಗಿ ಕೊನೆಗೆ ಸಿಕ್ಸರ್ ಆಗಿ ಪರಿವರ್ತನೆಯಾಗಿ ಶತಕ ದಾಖಲಾದಾಗ ಗ್ಯಾಲರಿಯಲ್ಲಿ ಕ್ಯಾಡ್ಬರಿ ಚಾಕೋಲೇಟ್ ಚಪ್ಪರಿಸುತ್ತಿದ್ದ ಆತನ ಗೆಳತಿ, ಭದ್ರತಾ ಸಿಬ್ಬಂದಿಯ ತಡೆಯನ್ನು ಲೆಕ್ಕಿಸದೇ ಮೈದಾನದೊಳಕ್ಕೆ ಬಂದು ಡ್ಯಾನ್ಸ್ ಮಾಡುವಾಗ ಬರುವ ಹಿನ್ನೆಲೆ ಸಂಗೀತ ಮತ್ತು ‘ಕ್ಯಾ ಸ್ವಾದ್ ಹೇ ಝಿಂದಗೀ ಮೇ’ ಸಾಲುಗಳ ಟೀವಿ ಜಾಹೀರಾತು ಇಂದಿಗೂ ಎಲ್ಲರ ನೆನಪಿನಲ್ಲಿದೆ!
ಇದನ್ನೂ ಓದಿ: Ravi Sajangadde Column: ಜಿಎಸ್ʼಟಿ 2.0: ಲಾಭ ಜನರಿಗೆ ತಲುಪಿದೆಯೇ ?
ಕೋಲಿಗೆ ಅಂಟಿದ ಮೀನು!: ಇವರ ಪರಿಕಲ್ಪನೆಯ ಇನ್ನೊಂದು ವಿನೂತನ ಜಾಹೀರಾತು ಕೆಲವು ವರ್ಷಗಳ ಹಿಂದೆ ಪ್ರದರ್ಶನಗೊಂಡಿತು. ದಕ್ಷಿಣ ಭಾರತದವ ನಂತೆ ಕಾಣುವ ಒಬ್ಬ ವ್ಯಕ್ತಿ ಸಣ್ಣ ಕೋಲಿಗೆ ಫೆವಿಕ್ವಿಕ್ ಅಂಟಿಸಿ ಕೆಲವೇ ಸೆಕೆಂಡುಗಳಲ್ಲಿ ಮೀನು ಹಿಡಿದ, ಆತನ ಪಕ್ಕದಲ್ಲಿ ಆಧುನಿಕ ಪರಿಕರ ಇದ್ದೂ ಗಂಟೆಗಳಿಂದ ಮೀನು ಹಿಡಿಯಲಾಗದೆ ಈತನನ್ನು ನೋಡಿ ಆಶ್ಚರ್ಯ ಪಡುವವನ ಜಾಹೀರಾತನ್ನು ನೋಡಿ ನಿಬ್ಬೆರಗಾಗದವರೇ ಇಲ್ಲ!
ಈ ಜಾಹೀರಾತು ನಮ್ಮ ದೇಶದ ಅತಿ ಜನಪ್ರಿಯ ಜಾಹೀರಾತುಗಳಲ್ಲಿ ಒಂದು! ಇದೇ ರೀತಿ ಬಸ್ಸಿನ ಮೇಲೆ ಕುಳಿತು ಪ್ರಯಾಣಿಸುವ ಜನರು ಒಂಚೂರೂ ಅಲುಗಾಡದೇ ಇರುವ ಫೆವಿಕಾಲ್ ಬಸ್, ಮೂರು ತಲೆಮಾರುಗಳಿಂದ ಗಟ್ಟಿಯಾಗಿ ಜೋಡಣೆ ಇರುವ ಫೆವಿಕಾಲ್ ಸೋಫಾ ಜಾಹೀರಾತು, ಮೊಟ್ಟೆ ಒಡೆಯಲು ಹರಸಾಹಸ ಪಡುವ ಫೆವಿಕಾಲ್ ಎಗ್ ಜಾಹೀರಾತು ಕೂಡ ಗಮನ ಸೆಳೆಯುವ ಜಾಹೀರಾತುಗಳು. ಇವೆಲ್ಲ ವಿನೂತನ ಕಂಟೆಂಟ್‌ನ ಹಿಂದೆ ಪಿಯೂಷ್ ಪಾಂಡೆಯವರ ಮಂಡೆ ಕೆಲಸ ಮಾಡಿದೆ!
ನಾಯಿಗಳು ನಿಷ್ಠೆ ಮತ್ತು ನಂಬಿಕೆಯ ಸಂಕೇತ. ಅದರಲ್ಲೂ ಪಗ್ ತಳಿಯ ನಾಯಿಯ ನಿಷ್ಠೆ ಶ್ರೇಷ್ಠ. ಈ ನಿಷ್ಠೆಯ ಪರಿಕಲ್ಪನೆಯನ್ನು ಬಳಸಿ, ಮೊಬೈಲ್ ಸಂಸ್ಥೆಯೊಂದಕ್ಕೆ ಅವರು ತಯಾರಿಸಿದ ಹಲವು ‘ಪಗ್’ ಜಾಹೀರಾತುಗಳು ಸಂಸ್ಥೆಯ ವ್ಯವಹಾರವನ್ನು ಹೆಚ್ಚಿಸಿ, ಜನರ ಮೆಚ್ಚುಗೆಯನ್ನೂ ಗಳಿಸಿದವು!
ಕ್ರಿಕೆಟ್ ನೇರ ಪ್ರಸಾರದ ಸಂದರ್ಭದಲ್ಲಿ ತೆರೆಗೆ ಬಂದ, ಯಾವುದೋ ಅನ್ಯಗ್ರಹದಿಂದ ಬಂದಂತೆ ಕಾಣುವ, ಕಾರ್ಟೂನ್ ಪಾತ್ರ ಅಥವಾ ಕಂಪ್ಯೂಟರ್ ಅನಿಮೇಶನ್ ಬಳಸಿ ನಿರ್ಮಾಣ ಮಾಡಿದ ಪಾತ್ರಗಳಂತೆ ಕಂಡರೂ ಝೂಝೂ ಪಾತ್ರಗಳಿರುವ ಜಾಹೀರಾತು ಸಹ ತನ್ನ ಕಂಟೆಂಟ್‌ನಿಂದಾಗಿ ಗಮನ ಸೆಳೆಯಿತು.
ಮಿಲೇ ಸುರ್ ಮೇರಾ ತುಮ್ಹಾರಾ: 90ರ ದಶಕದಲ್ಲಿ ‘ಹಮಾರಾ ಬಜಾಜ್’ ಸ್ಲೋಗನ್ನಿನೊಂದಿಗೆ ಬಂದು, ಜನರ ಹೃದಯದಲ್ಲಿ ಜಾಗ ಪಡೆದು ದೇಶದ ಮಧ್ಯಮ ವರ್ಗದ ಆತ್ಮವಿಶ್ವಾಸ ಮತ್ತು ಪ್ರಗತಿಯನ್ನು ಬಿಂಬಿಸಿದ ಜಾಹೀರಾತದು. ಅದೇ ವರ್ಷಗಳಲ್ಲಿ ದೂರದರ್ಶನದಲ್ಲಿ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಪ್ರಸಾರಗೊಳ್ಳುತ್ತಿದ್ದ ‘ಮಿಲೇ ಸುರ್ ಮೇರಾ ತುಮ್ಹಾರಾ, ಏ ಸೂರ್ ಬನೇ ಹಮಾರಾ’ ಹಾಡು ಜನರ ದೇಶಪ್ರೇಮವನ್ನು ಮತ್ತಷ್ಟು ಹಿಗ್ಗಿಸಿದ ಹಾಡು. ಅಬಾಲವೃದ್ಧರಾಗಿ ಎಲ್ಲರೂ ಆ ಹಾಡಿನ ಸಾಲುಗಳನ್ನು ತಂತಮ್ಮ ಭಾಷೆಗಳಲ್ಲಿ ಗುನುಗುತ್ತಿದ್ದರು.
ಹಿಂದಿಯ ಸಾಲಿನ ನಂತರ ‘ನನ್ನ ದನಿಗೆ ನಿನ್ನ ದನಿಯು ಸೇರಿದಂತೆ ನಮ್ಮ ಧ್ವನಿಯು’ ಸಾಲು ಗಳನ್ನು ನಾವು ಮನೆಯವರೆಲ್ಲರೂ ತಪ್ಪದೇ ಗುನುಗುತ್ತಿದ್ದೆವು. ಆ ಸಂಪೂರ್ಣ ಹಾಡು ನನ್ನ ನೆನಪಿನ ಪಟಲದಲ್ಲಿ ಇನ್ನೂ ಹಾಗೇ ಇದೆ.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾಜಪ ಬಳಸಿದ, ಅತ್ಯಂತ ಗರಿಷ್ಠ ಜನರನ್ನು ತಲುಪಿದ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಘೋಷಣೆಯ ಸೃಷ್ಟಿಕರ್ತರು ಇದೇ ಪಿಯೂಷ್ ಪಾಂಡೆ! ನಂತರ ಅದನ್ನು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ (2019), ‘ಇಸ್ ಬಾರ್ ಚಾರ್ಸೋ ಪಾರ್’ (2024) ಎಂಬಿತ್ಯಾದಿ ರೀತಿಯಲ್ಲಿ ಬಳಸಿಕೊಳ್ಳಲಾಯಿತು. ಟ್ರಂಪ್ ಮೊದಲ ಬಾರಿ ಅಧ್ಯಕ್ಷ ರಾಗಿ ಆಯ್ಕೆಯಾದ ಚುನಾವಣೆ ಸಂದರ್ಭದಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಮೆಚ್ಚಿಸಲು ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂದು ಘೋಷಣಾ ವಾಕ್ಯ ತಯಾರಿಸಿದ್ದು ಪಿಯೂಷ್ ಅವರ ವಾಕ್ಯದ ಆಧಾರದ ಮೇಲೆಯೇ!
ಇವರ ಸೃಜನಶೀಲ ಹೆಗ್ಗುರುತು ಇನ್ನೂ ಕೆಲವು ಜಾಹೀರಾತು ಮತ್ತು ಸಾಮಾಜಿಕ ಸಂದೇಶಗಳ ವೀಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಅಮಿತಾಬ್ ಬಚ್ಚನ್ ಜೊತೆಗೂಡಿ ಮಾಡಿದ ‘ಪೋಲಿಯೋ ಮುಕ್ತ ಅಭಿಯಾನ’ ಸಂದೇಶ, ಲೂನಾ ದ್ವಿಚಕ್ರ ವಾಹನಕ್ಕಾಗಿ ‘ಚಲ್ ಮೇರಿ ಲೂನಾ’, ಕ್ಯಾಡ್‌ಬರಿಯವರ ಈಗಿನ ‘ಕುಛ್ ಮೀಠಾ ಹೋಜಾಯೆಂ’ ಮೊದಲಾದ ಜಾಹೀರಾತುಗಳು, ಆಯಾ ಬ್ರಾಂಡುಗಳನ್ನೂ ಮೀರಿದ ವಿರಳ-ಸೃಜನಶೀಲ ಪರಂಪರೆ ಹೊಂದಿದ್ದ ಅಪರೂಪದ ‘ಜಾಹೀರಾತು ಬ್ರಹ್ಮ’ನ ಕೊಡುಗೆಗಳು!
ಮಹಿಳೆ ಮತ್ತು ಹೆಣ್ಮಕ್ಕಳ ದೌರ್ಜನ್ಯ ತಡೆಯಲು ‘ಬೆಲ್ ಬಜಾವೋ’ ಆಂದೋಲನ ಜಾಹೀರಾತು ಸಂಚಲನ ಮೂಡಿಸುವ ಜತೆಗೆ, ವಿವಿಧ ಶಾಲಾ-ಕಾಲೇಜುಗಳು ಮತ್ತು ಎನ್‌ಜಿಓಗಳು ಅದೇ ಧ್ಯೇಯದೊಂದಿಗೆ ದೇಶಾದ್ಯಂತ ಬೀದಿ ನಾಟಕ ಪ್ರದರ್ಶಸಿ ಜಾಗೃತಿ ಮೂಡಿಸಿದ್ದನ್ನು ಮರೆಯು ವಂತಿಲ್ಲ.
ಕಂಟೆಂಟ್ ದೊರೆ ಪಿಯೂಷ್: ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸದ್ಯಕ್ಕೆ ದೇಶದ ದೊಡ್ಡ ಮತ್ತು ಪ್ರಭಾವೀ ಏಜೆನ್ಸಿಯಾಗಿರುವ ಒಗಿಲ್ವಿ ಇಂಡಿಯಾ ಕಂಪೆನಿಯನ್ನು ಆ ಮಟ್ಟಕ್ಕೇರಿಸಿದ ಕೀರ್ತಿ ಪಾಂಡೆ ಅವರಿಗೆ ಸಲ್ಲುತ್ತದೆ. ಜಾಹೀರಾತಿನ ಮೂಲ ಆಶಯಕ್ಕೆ ಧಕ್ಕೆ ಯಾಗದಂತೆ, ಜನರಿಗೆ ಯಾವುದೇ ತಪ್ಪು ಮಾಹಿತಿ ನೀಡದಂತೆ, ಜನರನ್ನು ಬ್ರ್ಯಾಂಡ್‌ನೆಡೆಗೆ ಸೆಳೆಯಲು, ಹೇಳಬೇಕಿರುವುದನ್ನು ನವಿರಾಗಿ, ಕಚಗುಳಿ ಇಟ್ಟಂತೆ, ವಿಶಿಷ್ಟವಾದ ಶೈಲಿ ಮತ್ತು ಸ್ಲೋಗನ್‌ಗಳ ಮೂಲಕ ವ್ಯಕ್ತಪಡಿಸುವ ಅವರ ಜಾಹೀರಾತು ಶೈಲಿಗಳು ಭಾರತೀಯರಿಗೆ ಇಷ್ಟ ವಾದವು.
ಪ್ರಪಂಚದ ಜಾಹೀರಾತು ಪಿತಾಮಹನ ಹೆಸರು ಡೇವಿಡ್ ಒಗೆಲ್ವಿ. ನಂತರದ ಸ್ಥಾನ ಪಿಯೂಷ್ ಪಾಂಡೆ ಅವರಿಗೆ. ಈಗಿನ ಸಂಪರ್ಕ ಕ್ರಾಂತಿ ಮತ್ತು ಸಾಮಾಜಿಕ ಮಾಧ್ಯಮಗಳ ಕ್ರಾಂತಿಯಿಂದಾಗಿ ಗಲ್ಲಿಗೊಬ್ಬ ‘ಕಂಟೆಂಟ್ ಕ್ರಿಯೇಟರ್’ ಹುಟ್ಟುವ ಹಲವು ದಶಕಗಳ ಮೊದಲೇ ಜಾಹೀರಾತು ಕ್ಷೇತ್ರದ ಅನಭಿಷಿಕ್ತ ‘ಕಂಟೆಂಟ್ ದೊರೆ’ಯಾಗಿ ಮೆರೆದವರು ಪಿಯೂಷ್!
ಅಮೆರಿಕಾದಲ್ಲಿ ಅತ್ಯುತ್ತಮ ಜಾಹೀರಾತುಗಳು, ಪುಸ್ತಕ ಮತ್ತು ವೀಡಿಯೋಗಳ ರೂಪದಲ್ಲಿ ಸಂಗ್ರಹ ವಾಗಿ ಸಿಗುತ್ತವೆ. ಆ ಪ್ರಯೋಗ ಭಾರತದಲ್ಲಿ ಇನ್ನೂ ಇದ್ದಂತಿಲ್ಲ. ಪಿಯೂಷ್ ಪಾಂಡೆ ಅವರ ಜಾಹೀರಾತುಗಳ ಸಂಗ್ರಹದ ಪುಸ್ತಕ ಮತ್ತು ವೀಡಿಯೋ ಮಾಡಿ ಜನರಿಗೆ ಉಣಬಡಿಸಿದರೆ ಅದುವೇ ಈ ಶ್ರೇಷ್ಠ ‘ಜಾಹೀರಾತು ಭೀಮ’ನಿಗೆ ಕೊಡಬಹುದಾದ ನಿಜವಾದ ಪ್ರಶಸ್ತಿ ಮತ್ತು ಶ್ರದ್ಧಾಂಜಲಿ. ಅವರ ನಾಲ್ಕು ದಶಕಗಳ ಸೃಜನಶೀಲ ಬದುಕು ‘ಜಾಹೀರಾತು ವಿಶ್ವವಿದ್ಯಾಲಯ’.
ನಮ್ಮ ದೇಶದ ಜಾಹೀರಾತು ಜಗತ್ತನ್ನು ನಾಲ್ಕು ದಶಕಗಳ ಕಾಲ ಮುನ್ನಡೆಸಿದ ಪಾಂಡೆ, ಈಗ ಅಗಲಿದ್ದಾರೆ. ಪಿಯೂಷ್ ಪಾಂಡೆ ಮಂಡೆಗೆ ಪಿಯೂಷ್ ಪಾಂಡೆ ಹಂಡೆ ಮಾತ್ರ ಸಾಟಿ!