ಭಾರತೀಯ ಸ್ತ್ರೀ ಶಕ್ತಿ ಇತ್ಯಾದಿ
ಗಂಡಂದಿರು ತಂತಮ್ಮ ಹೆಂಡತಿಯರನ್ನು ಎತ್ತಿಕೊಂಡು ಓಡುವ ಸ್ಪರ್ಧೆ ಇದು (‘ತಂತಮ್ಮ’ ಎಂದು ನಾನು ಬರೆಯದಿದ್ದರೆ, ಸ್ಕಾಚ್ ಭಟ್ಟರು, ‘ಯಾರ ಹೆಂಡತಿಯನ್ನು?’ ಎಂದು ಕೇಳಿ ಯಾರು!). ಇರಲಿ. ಈಗ ವಿಷಯಕ್ಕೆ ಬರುತ್ತೇನೆ. ‘ಮಹಿಳೆಯರು ಭಾರ ಎತ್ತುವ’ ಸ್ಪರ್ಧೆ ಎಂಬ ಆಭಾಸರಹಿತ ಅರ್ಥ ಹಿಡಿದು ಮುಂದುವರಿಯುತ್ತೇನೆ.
-
ಎಚ್.ಆನಂದರಾಮ ಶಾಸ್ತ್ರೀ
ಸಂಸ್ಕೃತ ಆಕರಗಳ ‘ಸಾಹಿತ್ಯ’ವನ್ನು (ವಸ್ತುವನ್ನು ಮತ್ತು ವಿಷಯವನ್ನು) ಎಂದಿನಂತೆ ಸರಳವಾಗಿ ಮತ್ತು ಸ್ಪಷ್ಟವಾಗಿ ವಿವರಿಸುತ್ತ ಶ್ರೀವತ್ಸ ಜೋಶಿಯವರು ತಮ್ಮ ‘ತಿಳಿರು ತೋರಣ’ ಅಂಕಣದಲ್ಲಿ (ಮಾರ್ಚ್ 8) ‘ಸ್ತ್ರೀ’ ಎಂಬ ‘ಪದ’ದ (ಶಬ್ದದ, ಪದವಿಯ ಮತ್ತು ಚೇತನದ) ವೈವಿಧ್ಯಪೂರ್ಣ ಇತಿವೃತ್ತಾಂತವನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದಾರೆ.
ತಥಾಕಥಿತ ಸ್ತ್ರೀವಾದಿಗಳ ಹಲವು ಅಜ್ಞಾನ-ಅಪಕಲ್ಪನೆಗಳನ್ನು ನಿವಾರಿಸಿದ್ದಾರೆ ಕೂಡ (‘ಸ್ತ್ರೀ’ವಾದಕ್ಕೆ ಇಸಿ ತೀಡಿ ಸರಿಮಾಡಿದ್ದಾರೆ!).‘ಮಹಿಳೆಯರ ಭಾರ ಎತ್ತುವ ಸ್ಪರ್ಧೆ’ ಎಂದು ಆಭಾಸವನ್ನು ಉಂಟುಮಾಡುತ್ತೇವೆ ಎಂಬುದಾಗಿ ಅವರು ಲೇಖನದಲ್ಲಿ ಒಂದು ಕಡೆ ಹೇಳಿದ್ದಾರಷ್ಟೆ. ಈ ನುಡಿಗಟ್ಟಿನ ಸುತ್ತ ನಾನು ಹೆಣೆದ ಲಘುಧಾಟಿಯ ಚಿಂತನ ಇಲ್ಲಿದೆ.
‘ಮಹಿಳೆಯರ ಭಾರ’ ಎತ್ತುವ ಸ್ಪರ್ಧೆ(ಯೂ) ಅಧಿಕೃತ ವಿಶ್ವ ಚಾಂಪಿಯನ್‌ಷಿಪ್ ಆಗಿ ಫಿನ್ಲೆಂಡ್ ದೇಶದಲ್ಲಿ ಹಾಗೂ ಅಮೆರಿಕ, ಆಸ್ಟ್ರೇಲಿಯಾ, ಯುಕೆ, ಜರ್ಮನಿ, ಸ್ವೀಡನ್, ಹಾಂಕಾಂಗ್, ಎಸ್ಟೋನಿಯಾ, ಲಾತ್ವಿಯಾ ಮೊದಲಾದ ದೇಶಗಳಲ್ಲಿ ವಾರ್ಷಿಕವಾಗಿ ನಡೆಯುತ್ತಿದೆ. ಭಾರತದಲ್ಲೂ ಇದು ಆರಂಭವಾಗಿದೆ.
ಇದನ್ನೂ ಓದಿ: Srivathsa Joshi Column: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?
ಗಂಡಂದಿರು ತಂತಮ್ಮ ಹೆಂಡತಿಯರನ್ನು ಎತ್ತಿಕೊಂಡು ಓಡುವ ಸ್ಪರ್ಧೆ ಇದು (‘ತಂತಮ್ಮ’ ಎಂದು ನಾನು ಬರೆಯದಿದ್ದರೆ, ಸ್ಕಾಚ್ ಭಟ್ಟರು, ‘ಯಾರ ಹೆಂಡತಿಯನ್ನು?’ ಎಂದು ಕೇಳಿಯಾರು!). ಇರಲಿ. ಈಗ ವಿಷಯಕ್ಕೆ ಬರುತ್ತೇನೆ. ‘ಮಹಿಳೆಯರು ಭಾರ ಎತ್ತುವ’ ಸ್ಪರ್ಧೆ ಎಂಬ ಆಭಾಸರಹಿತ ಅರ್ಥ ಹಿಡಿದು ಮುಂದುವರಿಯುತ್ತೇನೆ.
ಮಹಿಳೆಯರು ಭಾರವನ್ನು 9+ ತಿಂಗಳು ಹೊತ್ತು ಅನಂತರ ಭೂಮಿಗೆ ಇಳಿಸುತ್ತಾರೆ. ಆ ಕ್ಷಣದಿಂದ, ಆ ಭಾರವನ್ನು ಎತ್ತುವ ಸ್ಪರ್ಧೆ ಆರಂಭವಾಗುತ್ತದೆ. ‘ವಿನಯಂತು ಸುತಾನ್ ಸಂತಃ’ ಎಂಬ ‘ಹರಿಹರ ಸುಭಾಷಿತ’ದಂತೆ, ತಮ್ಮ ಮಕ್ಕಳಿಗೆ (ಉತ್ತಮ) ಶಿಕ್ಷಣ ನೀಡುವುದು ತಮ್ಮ ಕರ್ತವ್ಯವೆಂಬುದನ್ನು ಮನಗಂಡು, ಸಜ್ಜನರಾದ ತಂದೆ-ತಾಯಿಯರು ಶಿಕ್ಷಣದ ಭಾರವನ್ನು, ತನ್ಮೂಲಕ ಮಗುವಿನ (ಭವಿಷ್ಯದ) ಭಾರವನ್ನು ಎತ್ತಲು, ಮನಃಪೂರ್ವಕ ವಾಗಿ, ಪೈಪೋಟಿಯಿಂದ ದುಡಿಯುತ್ತಾರೆ.
‘ಮಾತಾ ಗುರುತರಾ ಭೂಮೇಃ ಖಾತ್ ಪಿತೋಚ್ಚತರಸ್ತಥಾ’, ಅರ್ಥಾತ್- ‘ತಾಯಿಯು ಭೂಮಿಗಿಂತಲೂ ಹೆಚ್ಚು ತೂಕದವಳು, ತಂದೆಯು ಆಕಾಶಕ್ಕಿಂತಲೂ ಹೆಚ್ಚು ಉನ್ನತ ನಾದವನು’ ಎಂಬ ‘ಮಹಾಭಾರತ’ದ ನುಡಿಗೆ ತಕ್ಕಂತೆ ನಡೆಯುತ್ತಾರೆ. ವಿದ್ಯೆಯು ‘ಮಾತೇವ ರಕ್ಷತಿ ಪಿತೇವ ಹಿತೇ ನಿಯುಕ್ತೇ’, ಅಂದರೆ- ‘ವಿದ್ಯೆಯು ತಾಯಿಯಂತೆ ಪಾಲಿಸುತ್ತದೆ, ತಂದೆಯಂತೆ ಸನ್ಮಾರ್ಗದಲ್ಲಿ ನಿಯೋಜಿಸುತ್ತದೆ’ ಎಂಬ ‘ಸಮಯೋಚಿತ ಪದ್ಯರತ್ನ ಮಾಲಿಕಾ’ ಮಾತಿಗೆ ಸಾಕ್ಷಿಯಾಗುತ್ತಾರೆ.
ಹೀಗೆ, ಮಕ್ಕಳ ಭಾರವನ್ನು-ಭವಿಷ್ಯವನ್ನು ಎತ್ತುವುದರಲ್ಲಿ ತಂದೆ-ತಾಯಿ ಎಂಬ ಪುರುಷ-ಸ್ತ್ರೀ ಇಬ್ಬರೂ, ಸ್ಪರ್ಧಾಭಾವದಿಂದೆಂಬಂತೆ, ಹೆಗಲೆಣೆಯಾಗಿ ಹೆಗಲು ನೀಡಿದರೆ, ಶಿಕ್ಷಕ-ಶಿಕ್ಷಕಿ ಎಂಬ ಗುರುಗಳು ಈ ಭಾರ ಎತ್ತುವಲ್ಲಿ ಕೈಜೋಡಿಸುತ್ತಾರೆ. ಆದರೆ, ಕೊನೆಯಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯರಿಗೆ ಆಭಾರಿಗಳಾಗಿರುತ್ತಾರೋ ಅಥವಾ ಭಾರ ಹೆಚ್ಚಾಯಿತು ಎಂದು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ‘ಬಿಡು’ತ್ತಾರೋ ಅದು ಆಯಾ ಸಂಸಾರದ ನಸೀಬು!
ಹೀಗೆ, ಮಹಿಳೆಯರು ಭಾರ ಎತ್ತುವ ಸ್ಪರ್ಧೆಯಲ್ಲಿ ಪುರುಷರೊಡನೆ ಸೆಣಸುತ್ತಾರೆ. ಅಂದಹಾಗೆ, ಮಗ-ಮಗಳು ಎಂಬ ಭಾರಗಳು 9+ ತಿಂಗಳು ಮಹಿಳೆಯರಿಂದ ಹೊರಲ್ಪಡುವ ವಾದ್ದರಿಂದ ಅವನ್ನು ‘ಮಹಿಳೆಯರ ಭಾರ’ ಎಂದು ಕರೆಯಬಹುದಷ್ಟೆ.
ಕೊನೆಯಂದು ವಿಷಯಾಂತರದ ಮಾತು: ‘ಶಾಸ್ತ್ರೀಯ ಸಂಗೀತ ಕಲಿತಿಲ್ಲ’ ಎಂದು ಹೇಳುತ್ತಲೇ, ಒ.ಪಿ. ನಯ್ಯರ್, ಉಷಾ ಖನ್ನಾ ಇವರು, ಶಾಸೀಯವೂ ಅಮೋಘವೂ ಆಗಿರುವಂಥ ಹಿಂದಿ ಚಿತ್ರಗೀತೆಗಳನ್ನು ನಮಗೆ ನೀಡಿದರು. ಅದೇ ರೀತಿ, ಅಂಕಣಕಾರ ಶ್ರೀವತ್ಸ ಜೋಶಿ ಅವರು, ‘ನಾನು ಅಷ್ಟಾಧ್ಯಾಯಿ ಪೂರ್ತಿ ಓದಿಲ್ಲ, ಅಮರಕೋಶ ಪೂರ್ತಿ ಓದಿಲ್ಲ, (ಸಂಸ್ಕೃತ) ಪಂಡಿತನಲ್ಲ’ ಎಂದು ಹೇಳುತ್ತಲೇ ಸಂಸ್ಕೃತದ ಮುಕ್ತಕಗಳನ್ನು ಹೆಕ್ಕಿಹೆಕ್ಕಿ ತೆಗೆದು ನಮ್ಮ ದೃಷ್ಟಿಯ ನಿಲುವಿಗೆ ನೀಡುತ್ತಿದ್ದಾರೆ.
ಒಂದು ವೇಳೆ ಇವರೇನಾದರೂ ಸಂಸ್ಕೃತಭಾಷಾ ಮಹಾಮಹೋಪಾಧ್ಯಾಯರಾಗಿದ್ದಿದ್ದರೆ, ಸಕಲ ಸಂಸ್ಕೃತ ಗ್ರಂಥಗಳನ್ನೂ ಅರೆದು ಕುಡಿದು, ಬರೆದು-ಒರೆದು ನಮಗೆಲ್ಲ ‘ಕಂಠಪೂರ್ತಿ ಕುಡಿ’ಸುತ್ತಿದ್ದರೇನೋ! ಈಗಲೂ, ನಮ್ಮ ಆ ಅಮೃತಪಾನಕ್ಕೆ ಚ್ಯುತಿಯಾಗದಂತೆ ನೋಡಿ ಕೊಳ್ಳುತ್ತಿದ್ದಾರೆನ್ನಿ. ಜೋಶಿ ಅವರು ಹೀಗೇ ಜೋಷ್ ಸಹಿತ ಬರೆಯುತ್ತಿರಲಿ.
(ಲೇಖಕರು ಹಿರಿಯ ಸಾಹಿತಿ)