ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

ಕತಾರ್ ದೇಶದಿಂದ ಆಮದು ಮಾಡಿಕೊಳ್ಳುವ ಎಲ್ʼಪಿಜಿಯು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕು. ಯುದ್ಧ ಆರಂಭವಾದ ದಿನದಿಂದಲೂ ಭಾರತವು ತಾನು ಶಾಂತಿ ಯನ್ನು ಬಯಸುತ್ತಿರುವ ಮಾತನ್ನು ಹೇಳುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ರಾಜಮನೆತನದ ಜತೆ ಪ್ರಧಾನಿ ಮೋದಿಯವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

Mohan Vishwa Column: ಮೋದಿ ಯುಗದಲ್ಲಿ ಭಾರತದ ರಾಜತಾಂತ್ರಿಕತೆ

-

ವೀಕೆಂಡ್‌ ವಿತ್‌ ಮೋಹನ್

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ನಿಲ್ಲುವ ಸಮಯದ ನಿಖರತೆ ಬಗ್ಗೆ ಜಗತ್ತಿನ ಯಾವ ದೇಶಕ್ಕೂ ಸ್ಪಷ್ಟತೆ ಇಲ್ಲ. ಇರಾನ್ ಅಧ್ಯಕ್ಷ ಖಮೇನಿ ಸಾವಿನ ನಂತರ ಯುದ್ಧ ನಿಲ್ಲಬಹುದೆಂಬ ಅಮೆರಿಕದ ಲೆಕ್ಕಾಚಾರ ಉಲ್ಟಾ ಆಗಿದೆ. ಜಗತ್ತಿನ ಸುರಕ್ಷಿತ ಪ್ರದೇಶವೆಂದು ಬಿಂಬಿತವಾಗಿದ್ದ ದುಬೈ, ಅಬುಧಾಬಿ, ಶಾರ್ಜಾ, ಕತಾರ್ ದೇಶಗಳ ಮೇಲೂ ಇರಾನ್ ನಿರಂತರವಾಗಿ ದಾಳಿ ನಡೆಸುತ್ತಿದೆ.

ಏಷ್ಯಾದ ದೇಶಗಳಿಗೆ ತೈಲ ಪೂರೈಕೆಯಾಗುವ ಸಮುದ್ರಮಾರ್ಗದ ‘ಹಾರ್ಮುಜ್ ಜಲಸಂಧಿ’ ಯನ್ನು ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳೊಂದಿಗೆ ಭಾರತ ವಿವಿಧ ರೀತಿಯ ಸಂಬಂಧಗಳನ್ನು ಹೊಂದಿದೆ.

ಅಮೆರಿಕವು ಭಾರತದ ಅತಿ ದೊಡ್ಡ ವ್ಯಾಪಾರದ ಪಾಲುದಾರನಾದರೆ, ಇಸ್ರೇಲ್ ದೇಶವಂತೂ ಹಲವು ದಶಕಗಳಿಂದ ಭಾರತದೊಂದಿಗೆ ನಿಂತಿದೆ. ರಕ್ಷಣಾ ವಲಯದಲ್ಲಿ ಅನೇಕ ತಂತ್ರಜ್ಞಾನಗಳನ್ನು ಇಸ್ರೇಲ್ ಭಾರತಕ್ಕೆ ಒದಗಿಸುತ್ತಿದೆ. ಮತ್ತೊಂದೆಡೆ ಭಾರತಕ್ಕೆ ತೈಲ ಸರಬರಾಜು ಮಾಡುವುದರಲ್ಲಿ ಇರಾನ್ ದೇಶದ ಪಾತ್ರ ದೊಡ್ಡದಿದೆ.

ಕತಾರ್ ದೇಶದಿಂದ ಆಮದು ಮಾಡಿಕೊಳ್ಳುವ ಎಲ್ʼಪಿಜಿಯು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕು. ಯುದ್ಧ ಆರಂಭವಾದ ದಿನದಿಂದಲೂ ಭಾರತವು ತಾನು ಶಾಂತಿಯನ್ನು ಬಯಸುತ್ತಿರುವ ಮಾತನ್ನು ಹೇಳುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿನ ರಾಜಮನೆತನದ ಜತೆ ಪ್ರಧಾನಿ ಮೋದಿಯವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತೀಯ ಹಡಗುಗಳು ಭಾರತಕ್ಕೆ ತೆರಳುವು ದಕ್ಕೆ ಇರಾನ್ ಅನುಮತಿ ನೀಡಿದ್ದು, ಇದು ಮೋದಿಯವರ ರಾಜತಾಂತ್ರಿಕತೆಯ ಗೆಲುವಿಗೆ ಮತ್ತೊಂದು ಸೇರ್ಪಡೆಯಾಗಿದೆ.

ಇದನ್ನೂ ಓದಿ: ‌Mohan Vishwa Column: ನೋಟ್‌ ಬ್ಯಾನ್ ನೆನಪಿಸಿದ ದುರಂಧರ್‌

ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕತೆ/ಬಾಂಧವ್ಯಗಳ ವಿಚಾರದಲ್ಲಿ ಭಾರತದ ವಿದೇಶಾಂಗ ನೀತಿ ಕಳೆದ ದಶಕದಲ್ಲಿ ಮಹತ್ವದ ಬದಲಾವಣೆಯನ್ನು ಕಂಡಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವ ರಾಷ್ಟ್ರದ ಸ್ತರದಿಂದ, ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವ ರಾಷ್ಟ್ರವಾಗಿ ರೂಪಾಂತರ ಗೊಂಡಿದೆ.

ಜಗತ್ತಿನ ವಿವಿಧ ಸಂಕಷ್ಟ ಪೀಡಿತ/ಸಂತ್ರಸ್ತ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತ ವಾಗಿ ಮರಳಿ ತರುವಲ್ಲಿ ಭಾರತವು ಕೈಗೊಂಡ ದಿಟ್ಟ ಕಾರ್ಯಾಚರಣೆಗಳು ಇದಕ್ಕೆ ಉದಾಹರಣೆಯಾಗಿವೆ. ಜಾಗತಿಕ ಭೂರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದ ಸಮಯದಲ್ಲಿ, ವಿಶೇಷವಾಗಿ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ, ಜಿ-20 ದೇಶಗಳ ನಡುವೆ ಒಮ್ಮತ ಸಾಧಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಭಾರತ ತನ್ನ ರಾಜತಾಂತ್ರಿಕ ಕೌಶಲದಿಂದ ಎಲ್ಲ ರಾಷ್ಟ್ರಗಳನ್ನೂ ಒಂದೇ ವೇದಿಕೆಗೆ ತರುವಲ್ಲಿ ಯಶಸ್ವಿಯಾಯಿತು.

ಒಂದು ಕಾಲದಲ್ಲಿ ಗಲಭೆಪೀಡಿತ ಪ್ರದೇಶವಾಗಿದ್ದ ಕಾಶ್ಮೀರದ ದಾಲ್ ಸರೋವರದಲ್ಲಿ ಜಗತ್ತಿನ ದೊಡ್ಡ ದೊಡ್ಡ ನಾಯಕರು ‘ಶಿಖರ ಸವಾರಿ’ ಮಾಡುವುದಕ್ಕೆ ಅನುವಾಗುವ ಮೂಲಕ ಭಾರತದ ತಾಕತ್ತಿನ ಪ್ರದರ್ಶನವಾಯಿತು. ಈ ಶೃಂಗಸಭೆಯ ಮತ್ತೊಂದು ಪ್ರಮುಖ ಸಾಧನೆಯೆಂದರೆ ಆಫ್ರಿಕನ್ ಯೂನಿಯನ್‌ಗೆ ನೀಡಿದ ಶಾಶ್ವತ ಸದಸ್ಯತ್ವ.

ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಜಾಗತಿಕ ವೇದಿಕೆಯಲ್ಲಿ ಬಲಪಡಿಸಿದ ಮಹತ್ವದ ನಿರ್ಧಾರವಾಗಿದೆ. ಭಾರತವು ಕೇವಲ ತನ್ನ ಹಿತಾಸಕ್ತಿಗಳನ್ನು ಮಾತ್ರವಲ್ಲದೆ, ‘ಗ್ಲೋಬಲ್ ಸೌತ್’ ರಾಷ್ಟ್ರಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಯಕತ್ವವನ್ನು ಪ್ರದರ್ಶಿಸಿದೆ.

2022ರಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತ ಕೈಗೊಂಡ ‘ಆಪರೇಷನ್ ಗಂಗಾ’ ಸಂರಕ್ಷಣಾ ಕಾರ್ಯಾಚರಣೆಯು ವಿಶ್ವದ ಗಮನ ಸೆಳೆಯಿತು. ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಯುದ್ಧಭೂಮಿಯಲ್ಲಿ ಸಿಲುಕಿಕೊಂಡಿದ್ದಾಗ, ಭಾರತವು ತ್ವರಿತ ಕ್ರಮ ಕೈಗೊಂಡು ಸುಮಾರು 25000 ಜನರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದಿತು.

PM Narendra Modi

ಇದು ಕೇವಲ ವಿಮಾನ ಸೌಲಭ್ಯಗಳ ಪ್ರಶ್ನೆಯಾಗಿರಲಿಲ್ಲ; ಪಕ್ಕದ ದೇಶಗಳೊಂದಿಗೆ ಸಮನ್ವಯ, ಸುರಕ್ಷಿತ ಮಾರ್ಗಗಳ ವ್ಯವಸ್ಥೆ, ನೆಲಮಟ್ಟದಲ್ಲಿ ಕಾರ್ಯನಿರ್ವಹಿಸಿದ ಕೇಂದ್ರ ಸಚಿವರು- ಇವೆಲ್ಲವೂ ಒಟ್ಟುಗೂಡಿ ಭಾರತದ ರಾಜತಾಂತ್ರಿಕ ಶಕ್ತಿಯನ್ನು ಜಗತ್ತಿನ ಎದುರು ಸಾಬೀತುಪಡಿಸಿತು.

ಭಾರತೀಯರನ್ನು ಸ್ಥಳಾಂತರಿಸುವ ಸಲುವಾಗಿ ಎರಡೂ ದೇಶಗಳು ಯುದ್ಧವನ್ನು 48 ಗಂಟೆಗಳ ಕಾಲ ನಿಲ್ಲಿಸಿದ್ದವು. ಎರಡೂ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭ ದಲ್ಲಿ ಮೋದಿಯವರು ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಭೇಟಿ ನೀಡಿ ಪುಟಿನ್ ಮತ್ತು ಜಿಲೆನ್ಸ್ಕಿ ಇಬ್ಬರೊಂದಿಗೂ ಸಮಾಲೋಚನೆ ನಡೆಸಿ, ಭಾರತದ ನಿಲುವನ್ನು ಸ್ಪಷ್ಟವಾಗಿ ಜಗತ್ತಿಗೆ ತಿಳಿಸಿದ್ದರು.

2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಭಾರತ ಕೈಗೊಂಡ ‘ಆಪರೇಷನ್ ದೇವಿ ಶಕ್ತಿ’ ಕೂಡ ಮಹತ್ವದ ಕಾರ್ಯಾಚರಣೆಯಾಗಿತ್ತು. ಭಾರತೀಯರ ಜತೆಗೆ ಅಲ್ಪಸಂಖ್ಯಾತ ಸಮುದಾಯದ ಆಫ್ಘನ್ ನಾಗರಿಕರನ್ನೂ ರಕ್ಷಿಸಿ ಭಾರತ ತನ್ನ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿತ್ತು.

2023ರಲ್ಲಿ ಸುಡಾನ್‌ನಲ್ಲಿ ನಡೆಯುತ್ತಿದ್ದ ಆಂತರಿಕ ಸಂಘರ್ಷದ ಸಂದರ್ಭದಲ್ಲಿ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯ ಮೂಲಕ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲಾಯಿತು. ಈ ವೇಳೆ ಭಾರತವು ತನ್ನ ನಾಗರಿಕರಿಗೆ ಮಾತ್ರವಲ್ಲದೆ ಇತರ ದೇಶಗಳವರಿಗೂ ಸಹಾಯ ಮಾಡಿತ್ತು. ಅದೇ ವರ್ಷ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ಏರ್ಪಟ್ಟ ವೇಳೆ ‘ಆಪರೇಷನ್ ಅಜಯ್’ ಮೂಲಕ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಸ್ಥಳಾಂತರಿಸಲಾಯಿತು.

ಭಾರತದ ರಾಜತಾಂತ್ರಿಕತೆಯ ಮತ್ತೊಂದು ಮಹತ್ವದ ವಿಷಯವೆಂದರೆ, ‘ಕೋವಿಡ್-19’ ಕಾಲಘಟ್ಟದಲ್ಲಿ ನಡೆದ ‘ವಂದೇ ಭಾರತ ಮಿಷನ್’. ಇದು ಭಾರತದ ಇತಿಹಾಸದ ಅತಿ ದೊಡ್ಡ ಸ್ಥಳಾಂತರ ಕಾರ್ಯಾಚರಣೆಯಾಗಿದೆ. ಲಕ್ಷಾಂತರ ಭಾರತೀಯರನ್ನು ವಿಶ್ವದ ವಿವಿಧ ದೇಶಗಳಿಂದ ಮರಳಿ ತರಲು ಭಾರತ ಕೈಗೊಂಡ ಈ ಕಾರ್ಯಾಚರಣೆಯು, ಲಾಜಿಸ್ಟಿಕ್ಸ್ ಮತ್ತು ರಾಜತಾಂತ್ರಿಕ ಸಮನ್ವಯದ ಅದ್ಭುತ ಉದಾಹರಣೆಯಾಗಿದೆ. ‌

ಯೆಮನ್‌ನ ‘ಆಪರೇಷನ್ ರಾಹತ್’, ದಕ್ಷಿಣ ಸುಡಾನ್‌ನ ‘ಸಂಕಟ ಮೋಚನ್’ ಮುಂತಾದ ಅನೇಕ ಕಾರ್ಯಾಚರಣೆಗಳು, ‘ಸಂಕಷ್ಟದಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯ ನನ್ನೂ ಸುರಕ್ಷಿತವಾಗಿ ವಾಪಾಸ್ ಕರೆದುಕೊಂಡು ಬರುತ್ತೇವೆ’ ಎಂಬ ನೀತಿಯನ್ನು ಕೇಂದ್ರ ಸರಕಾರವು ಕಟ್ಟುನಿಟ್ಟಾಗಿ ಅನುಸರಿಸುತ್ತಿರುವುದನ್ನು ತೋರಿಸುತ್ತವೆ.

ಈ ಎಲ್ಲಾ ಕಾರ್ಯಾಚರಣೆಗಳು ಕೇವಲ ರಕ್ಷಣಾ ಕಾರ್ಯಗಳಲ್ಲ, ಜತೆಗೆ ಅವು ಭಾರತದ ಜಾಗತಿಕ ಪ್ರತಿಷ್ಠೆಯನ್ನು ಹೆಚ್ಚಿಸಿದ ರಾಜತಾಂತ್ರಿಕ ಸಾಧನೆಗಳಾಗಿವೆ. ವಿಶ್ವದ ಯಾವ ಭಾಗದಲ್ಲಿದ್ದರೂ ಭಾರತೀಯರು ‘ನಮಗೆ ನಮ್ಮ ದೇಶದ ಬೆಂಬಲ ಇದೆ’ ಎಂಬ ವಿಶ್ವಾಸ ವನ್ನು ತಳೆಯಲು ಈ ಕ್ರಮಗಳು ಅನುವುಮಾಡಿಕೊಟ್ಟಿವೆ ಹಾಗೂ ಅಂಥ ವಿಶ್ವಾಸವನ್ನು ಬಲಪಡಿಸಿವೆ.

ಇದರ ಜತೆಗೆ ಭಾರತವು ಮಾನವೀಯತೆ ಮೆರೆದು ಇತರ ದೇಶಗಳಿಗೆ ಸಹಾಯ ಮಾಡುವು ದರಲ್ಲಿಯೂ ಮುಂಚೂಣಿಯಲ್ಲಿದೆ. ನೇಪಾಳದ ಭೂಕಂಪದ ಸಮಯದಲ್ಲಿ ಕ್ಷಿಪ್ರ ನೆರವು ನೀಡಿದ ಭಾರತವು, ಟರ್ಕಿ-ಸಿರಿಯಾ ಭೂಕಂಪದ ಸಂದರ್ಭದಲ್ಲಿ ವೈದ್ಯಕೀಯ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿತು.

ಕೋವಿಡ್ ಸಮಯದಲ್ಲಿ ‘ವ್ಯಾಕ್ಸಿನ್ ಮೈತ್ರಿ’ ಮೂಲಕ ಅನೇಕ ದೇಶಗಳಿಗೆ ಲಸಿಕೆ ಪೂರೈಕೆ ಮಾಡಿತು, ಅಮೆರಿಕ ದೇಶಕ್ಕೆ ‘ಹೈಡ್ರೋಕ್ಲೋರೋಕಿನ್’ ಅನ್ನು ಪೂರೈಕೆ ಮಾಡುವ ಮೂಲಕ ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿತು.

ಭಾರತದ ರಾಜತಾಂತ್ರಿಕ ಯಶಸ್ಸಿನ ಮತ್ತೊಂದು ಪ್ರಮುಖ ಅಂಶವೆಂದರೆ ‘ಸ್ಟ್ರಾಟೆಜಿಕ್ ಆಟೋನಮಿ’- ಅಂದರೆ ಯಾವುದೇ ಒಂದು ಶಕ್ತಿಯ ಪರವಾಗಿ ನಿಲ್ಲದೇ, ತನ್ನ ದೇಶದ ಜನರ ಹಿತಾಸಕ್ತಿಯನ್ನು ಆಧರಿಸಿ ನಿರ್ಧಾರಗಳನ್ನು ಕೈಗೊಳ್ಳುವುದು. ಅಮೆರಿಕದ ಜತೆಗಿನ ಬಲವಾದ ಸಂಬಂಧಗಳನ್ನು ಮಾತ್ರವಲ್ಲದೆ, ರಷ್ಯಾದ ಜತೆಗಿನ ಸಹಕಾರವನ್ನು ಮುಂದು ವರಿಸಿರುವುದು ಇದಕ್ಕೆ ಉದಾಹರಣೆ.

ಮತ್ತೊಂದೆಡೆ ಚೀನಾ ಜತೆಗಿನ ಗಡಿವಿವಾದಗಳ ಸಂದರ್ಭದಲ್ಲಿ ಭಾರತವು ದಿಟ್ಟ ನಿಲುವು ತಾಳಿರುವುದು ನಮ್ಮ ಭದ್ರತಾ ಬದ್ಧತೆಯನ್ನು ತೋರಿಸುತ್ತದೆ. ಆರ್ಥಿಕ ರಾಜತಾಂತ್ರಿ ಕತೆಯಲ್ಲಿಯೂ ಭಾರತ ಮಹತ್ವದ ಸಾಧನೆಗಳನ್ನು ಮಾಡಿದೆ. 18 ವರ್ಷಗಳಿಂದ ಮಾತು ಕತೆಯ ಹಂತದಲ್ಲಿದ್ದ ಐರೋಪ್ಯ ಒಕ್ಕೂಟದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ (FTA) ಚರ್ಚೆಯು ವೇಗವನ್ನು ಪಡೆದುಕೊಂಡು, ಭಾರತ ಮತ್ತು ಐರೋಪ್ಯ ಒಕ್ಕೂಟದ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯು ತ್ತಿವೆ.

ಇದು ಭಾರತೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುವುದರ ಜತೆಗೆ, ಐರೋಪ್ಯ ಒಕ್ಕೂಟದ ದೇಶಗಳ ಹೂಡಿಕೆಗಳನ್ನು ಭಾರತಕ್ಕೆ ಆಕರ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಕ್ಷಣಾ ಕ್ಷೇತ್ರದಲ್ಲಿ, ಇಸ್ರೇಲ್ ಜತೆಗಿನ ಭಾರತದ ಸಹಭಾಗಿತ್ವವು ಅತ್ಯಂತ ಮಹತ್ವದ್ದಾಗಿದೆ. ಇಸ್ರೇಲ್ ನಿಂದ ಅತ್ಯಾಧುನಿಕ ಡ್ರೋನ್‌ಗಳು, ಕ್ಷಿಪಣಿ ವ್ಯವಸ್ಥೆ ಗಳು ಮತ್ತು ಗುಪ್ತಚರ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವ ಮೂಲಕ ಭಾರತವು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಂಡಿದೆ.

ಈ ಸಹಕಾರವು ಖರೀದಿಗೆ ಮಾತ್ರ ಸೀಮಿತವಾಗಿರದೆ ಪರಸ್ಪರ ಅಭಿವೃದ್ಧಿ ಮತ್ತು ತಂತ್ರಜ್ಞಾನ ಹಂಚಿಕೆಯ ವಲಯಕ್ಕೂ ವಿಸ್ತರಣೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತ ವನ್ನು ಪ್ರಾದೇಶಿಕ ಶಕ್ತಿಯಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಷ್ಟ್ರವಾಗಿಯೂ ರೂಪಿಸುತ್ತಿವೆ.

ಭಾರತದ ಮೇಲೆ ವಿಶ್ವದ ನಂಬಿಕೆ ಹೆಚ್ಚಾಗಿದೆ. ಸಂಕಷ್ಟದ ಸಮಯದಲ್ಲಿ ನೆರವು ನೀಡುವ, ತನ್ನ ನಾಗರಿಕರನ್ನು ರಕ್ಷಿಸುವ ಮತ್ತು ಜಾಗತಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಭಾರತದ ರಾಜತಾಂತ್ರಿಕತೆ ಹೊಸ ಗುರಿಗಳನ್ನು ತಲುಪಿದೆ. ಯುದ್ಧಭೂಮಿಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಸಾಮರ್ಥ್ಯದಿಂದ ಹಿಡಿದು, ಜಾಗತಿಕ ವೇದಿಕೆಯಲ್ಲಿ ಒಮ್ಮತ ನಿರ್ಮಿಸುವ ನಾಯಕತ್ವದವರೆಗೆ ಭಾರತ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.

ಇಂದಿನ ಜಗತ್ತಿನಲ್ಲಿ ಭಾರತ ಕೇವಲ ಪಾಲ್ಗೊಳ್ಳುವ ರಾಷ್ಟ್ರವಲ್ಲ, ಜಾಗತಿಕ ರಾಜಕೀಯದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಶಕ್ತಿಯೂ ಆಗಿದೆ. ಮುಂದಿನ ದಿನಗಳಲ್ಲಿ ಈ ದಿಟ್ಟ ಮತ್ತು ಸಮತೋಲನದ ರಾಜತಾಂತ್ರಿಕ ಧೋರಣೆಯು ಮುಂದುವರಿದು, ಭಾರತವು ಜಾಗತಿಕ ನಾಯಕತ್ವದ ಸಿಂಹಾಸನವನ್ನು ಇನ್ನಷ್ಟು ಬಲವಾಗಿ ಅಲಂಕರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ..