ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kumar Column: ಹಾವಿಗೆ ಹಾಲೆರೆದರೇ ಪ್ರಧಾನಿ ನರೇಂದ್ರ ಮೋದಿ ?

ಅಮೆರಿಕದಿಂದ ರಫ್ತಾಗುವ ಸರಕಿನ ಮೇಲೆ ಭಾರತವು ಅಧಿಕ ಸುಂಕವನ್ನು ವಿಧಿಸುತ್ತಿದೆ ಎಂಬ ಆಕ್ಷೇಪ ಹಿಂದಿನಿಂದಲೂ ಇದೆ (ಇದು ಭಾರತವು ತನ್ನ ಕೃಷಿಕರು ಮತ್ತು ಹೈನುಗಾರರ ಹಿತದೃಷ್ಟಿಯಿಂದ ಬಹಳ ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ ಕ್ರಮ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ). ಜತೆಗೆ, ಭಾರತವು ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಅಮೆರಿಕದ ಕೆಂಗಣ್ಣಿಗೆ ಇನ್ನೊಂದು ಕಾರಣ.

ಹಾವಿಗೆ ಹಾಲೆರೆದರೇ ಪ್ರಧಾನಿ ನರೇಂದ್ರ ಮೋದಿ ?

Ashok Nayak Ashok Nayak Aug 11, 2025 10:46 AM

ಮಂತ್ರಾಲೋಚನೆ

ಹರೀಶ್‌ ಕುಮಾರ್‌ ಕುಡ್ತಡ್ಕ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತದಿಂದ ತಮ್ಮಲ್ಲಿಗೆ ಆಮದಾಗುವ ಸರಕುಗಳ ಮೇಲೆ ಕೊನೆಗೂ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿಯೇ ಬಿಟ್ಟರು. ಈ ಬಗ್ಗೆ ಅನೇಕ ಸಲ ಒತ್ತಡ/ಬೆದರಿಕೆಯ ತಂತ್ರ ಹೂಡಿ ಭಾರತವನ್ನು ಬಗ್ಗಿಸಲು ಯತ್ನಿಸಿದ್ದ ಟ್ರಂಪ್, ಈ ಬಾರಿ ಅದನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟರು. ಇದಕ್ಕೆಲ್ಲ ಪ್ರತೀಕಾರವೆಂಬಂತೆ ಅಮೆರಿಕ ಈಗ ಹೆಚ್ಚುವರಿ ಸುಂಕದ ಬರೆ ಎಳೆದಿದೆ. ಅಮೆರಿಕದ ಈ ನಿರ್ಧಾರದ ಬಿಸಿಯನ್ನು ಭಾರತೀಯ ರಫ್ತಾ ಉದ್ಯಮ ಈಗ ಅನುಭವಿಸಬೇಕಾಗಿ ಬಂದಿದೆ. ಏಕೆಂದರೆ, ಈಗ ರಫ್ತುದಾರರು ಒಟ್ಟು ಶೇ.50ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ. ಅಮೆರಿಕದ ಈ ಸೇಡಿನ ಕ್ರಮವು ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ವನ್ನು ನೀಡಲಿದೆ ಎನ್ನಲಾಗುತ್ತಿದೆ. ‘ಈ ಕ್ರಮವು ಅನ್ಯಾಯ, ಅಸಮರ್ಥನೀಯ ಮತ್ತು ಅತಾರ್ಕಿಕ’ ಎಂದು ಭಾರತ ಪ್ರತಿಕ್ರಿಯಿಸಿದೆ. ಆದರೆ ಇಂಥ ಯಾವುದೇ ಪ್ರತಿಕ್ರಿಯೆಯೂ ಟ್ರಂಪ್‌ರಂಥ ವಿಲಕ್ಷಣ ವ್ಯಕ್ತಿತ್ವದವರನ್ನು ತಟ್ಟಲು ಸಾಧ್ಯವೇ? ಈ ಬೆಳವಣಿಗೆಯು ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಬಾಂಧವ್ಯಕ್ಕೊಂದು ನಕಾರಾತ್ಮಕ ತಿರುವು ನೀಡಿದೆ.

ಮೋದಿ-ಟ್ರಂಪ್ ನಡುವಿನ ಸ್ನೇಹ ಮೊದಲಿನಿಂದಲೂ ಸುಪ್ರಸಿದ್ಧ. ಇಬ್ಬರೂ ಪರಸ್ಪರರ ಹೆಸರನ್ನು ಸಂಬೋಧಿಸುವಾಗ ‘ಮೈ ಫ್ರೆಂಡ್’ ಎಂಬ ಪದಗುಚ್ಛವನ್ನು ಅದಕ್ಕೆ ಲಗತ್ತಿಸುತ್ತಿದ್ದುದನ್ನು, ಭೇಟಿಯ ವೇಳೆ ಅಪ್ಪುಗೆ ನೀಡುತ್ತಿದ್ದುದನ್ನು ಜಗತ್ತು ನೋಡಿಕೊಂಡೇ ಬಂದಿದೆ. 2019ರಲ್ಲಿ ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯವರು ಭಾಷಣ ಮಾಡುತ್ತ ಟ್ರಂಪ್‌ರನ್ನು ಹೊಗಳಿದ್ದೇ ಹೊಗಳಿದ್ದು!

ಇದನ್ನೂ ಓದಿ: Vishweshwar Bhat Column: ದೂರ ಮಾಪನ ಉಪಕರಣ

ಭಾಷಣದ ಕೊನೆಯಲ್ಲಿ ಅವರು, ‘ಅಬ್ ಕಿ ಬಾರ್, ಟ್ರಂಪ್ ಸರ್ಕಾರ್’ ಎಂದಿದ್ದನ್ನು ಮರೆಯ ಲಾದೀತೇ? ಅದು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರ್ಮಿಕವಾಗಿ ನುಡಿದ ಮಾತಾಗಿತ್ತು (ಇದು ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದು ಬೇರೆ ವಿಷಯ!). ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಮೀರಿದ ಈ ನಡೆಯು ಟ್ರಂಪ್-ಮೋದಿ ನಡುವಿನ ಸಂಬಂಧದ ಸಲಿಗೆ ಹಾಗೂ ಆಪ್ತತೆಯನ್ನು ತೆರೆದು ತೋರಿಸಿದ್ದು ಸತ್ಯ.

ತರುವಾಯದಲ್ಲಿ, ಈ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆ ಎಂಬಂತೆ ಮೋದಿಯವರ ತವರು ರಾಜ್ಯ ಗುಜರಾತಿನ ಅಹಮದಾಬಾದ್‌ನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಎರಡೂ ಕಾರ್ಯಕ್ರಮಗಳಲ್ಲಿ ಮೋದಿಯವರು ಮತ್ತು ಅವರ ಅಭಿಮಾನಿಗಳು ತೋರಿದ ಪ್ರೀತ್ಯಾದರಗಳನ್ನು ಟ್ರಂಪ್ ನೆನಪಿಡಬೇಕಾಗಿತ್ತು.

ಇಂಥ ಕಾರ್ಯಕ್ರಮಗಳಿಂದಾಗಿ ಟ್ರಂಪ್ ಅವರಿಂದ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬ ನಿರೀಕ್ಷೆ ಭಾರತೀಯರಲ್ಲಿ ಮೂಡಿದ್ದರೆ ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ, ಇಂಥ ಕಾರ್ಯಕ್ರಮ ಗಳಿಂದ ಭಾರತಕ್ಕಾಗಿರುವ ಪ್ರಯೋಜನವಾದರೂ ಏನೆಂಬುದು ಇವತ್ತಿಗೂ ಗೊತ್ತಾಗುತ್ತಿಲ್ಲ. ಇದೊಂದು ಚರ್ಚಾಸ್ಪದ ವಿಷಯವಾಗಿ ಉಳಿದಿದ್ದಂತೂ ಹೌದು.

ಆ ವರ್ಷಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್ ಪರಾಭವಗೊಂಡರು; ಅಲ್ಲಿಗೆ ಮೋದಿ-ಟ್ರಂಪ್ ಸ್ನೇಹಕ್ಕೆ ಒಂದು ತಾತ್ಕಾಲಿಕ ತಡೆ ಬೀಳುವಂತಾಯಿತು. 2024ರ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಗೆದ್ದುಬಂದಾಗ, ‘ಇವರಿಬ್ಬರ ಸ್ನೇಹದ ಹೊಸಶಕೆ ಆರಂಭವಾಗಿ, ಭಾರತಕ್ಕೆ ಅನುಕೂಲ ವೇನಾದರೂ ಆಗಬಹುದೇ?’ ಎಂಬ ಕುತೂಹಲವಿತ್ತು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇವರಿಬ್ಬರ ಬಾಂಧವ್ಯ ಆರಂಭದಲ್ಲಿಯೇ ಹಳ್ಳ ಹಿಡಿದಿದ್ದು ಸ್ಪಷ್ಟ ವಾಗಿ ಗೋಚರಿಸಿತು. ‘ಅಮೆರಿಕ ಮೊದಲು’ ಎಂಬ ಮಂತ್ರದೊಂದಿಗೆ ಈ ಸಲ ಅಧಿಕಾರ ಹಿಡಿದ ಟ್ರಂಪ್, ‘ಮೊದಲಿನ ಟ್ರಂಪ್’ ಆಗಿರಲಿಲ್ಲ. ಅವರ ನಡೆಗಳನ್ನು ಗಮನಿಸಿದರೆ, ಅವರು ಜಗತ್ತಿನ ದೊಡ್ಡಣ್ಣನ ಪಾತ್ರವನ್ನು ‘ಅತಿರೇಕವಾಗಿ’ ಆವಾಹಿಸಿಕೊಂಡಂತಿತ್ತು. ಟ್ರಂಪ್ ಅವರ ಪ್ರಮಾಣ ವಚನಕ್ಕೆ ಭಾರತದ ಪ್ರಧಾನಿಗೆ ಆಹ್ವಾನವಿರಲಿಲ್ಲ ಎಂಬುದು ಸುದ್ದಿಯಾಯಿತು.

ಪ್ರಮಾಣವಚನದ ಬಳಿಕ ‘ಜಾಗತಿಕ ಪಾಳೇಗಾರ’ನ ಗತ್ತು ಹಾಗೂ ಠೇಂಕಾರದಲ್ಲಿ ಟ್ರಂಪ್ ಕೆಲವು ರಾಷ್ಟ್ರಗಳ ಮುಖ್ಯಸ್ಥರನ್ನು ವ್ಯವಹಾರ ಸಂಬಂಧಿತ ಚರ್ಚೆಗೆ ಅಮೆರಿಕಕ್ಕೆ ಬರುವಂತೆ ಸೂಚಿಸಿ ದರು. ಉಳಿದ ರಾಷ್ಟ್ರಗಳ ಮುಖ್ಯಸ್ಥರನ್ನು ಟ್ರಂಪ್ ಸ್ವತಃ ಬಾಗಿಲ ಬಳಿ ನಿಂತು ಸ್ವಾಗತಿಸಿದರೆ, ಮೋದಿ ಯವರನ್ನು ಎದುರುಗೊಳ್ಳುವ ಹೊಣೆಗಾರಿಕೆಯನ್ನು ರಾಜತಾಂತ್ರಿಕರೊಬ್ಬರಿಗೆ ವಹಿಸಲಾಗಿತ್ತು!

ನಂತರ ಶುರುವಾಗಿದ್ದೇ ಟ್ರಂಪ್‌ರ ಅಸಲಿ ಆಟ! ಮೊದಲಿಗೆ, ಅಮೆರಿಕದ ಹೊರಗಿನ ವಿದ್ಯಾರ್ಥಿಗಳು ಮತ್ತು ಪ್ರಜೆಗಳಿಗೆ ನೀಡಲಾಗುವ ‘ಎಚ್ 1-ಬಿ’ ವೀಸಾಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಗಳ ಸೂಚನೆ ಯನ್ನು ಟ್ರಂಪ್ ನೀಡಿದರು. ಇದು ಅಮೆರಿಕದ ಕನಸು ಕಾಣುತ್ತಿದ್ದಂಥ ಭಾರತೀಯರಲ್ಲಿ ಆತಂಕ ವನ್ನು ಸೃಷ್ಟಿಸಿತು. ತರುವಾಯದಲ್ಲಿ ಅವರು, ಅಮೆರಿಕದ ಹಿತಾಸಕ್ತಿಯನ್ನು ಕಾಪಾಡು ವಂಥ ಸುಂಕಗಳ ಕುರಿತು ಪ್ರಸ್ತಾಪಿಸುತ್ತ, ಅಮೆರಿಕದೊಡನೆ ವ್ಯಾಪಾರ ಮಾಡುವಂಥ ದೇಶಗಳ ಆತಂಕ, ಚಿಂತೆಗಳನ್ನು ಹೆಚ್ಚಿಸುವಂಥ ಹೇಳಿಕೆಗಳನ್ನು ನೀಡುತ್ತಾ ಮುಂದುವರಿದರು.

ಅವರ ನಂತರದ ಕ್ರಮಗಳೆಲ್ಲ ಭಾರತೀಯರಿಗೆ ಸರಣಿ ಆಘಾತವನ್ನು ಉಂಟು ಮಾಡುತ್ತಾ ಸಾಗಿದವು. ಪಹಲ್ಗಾಮ್‌ನಲ್ಲಾದ ಉಗ್ರರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಅಸುನೀಗಿದ ಸಂದರ್ಭದಲ್ಲಿ ಟ್ರಂಪ್ ನಿಲುವು ತುಂಬಾ ನಿರಾಸೆಯನ್ನು ಉಂಟು ಮಾಡಿತು. “ಈ ದಾಳಿ ಕೆಟ್ಟದ್ದು" ಎಂದಷ್ಟೇ ಹೇಳಿದ ಅವರು, “ನಾನು ಏಕಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಹತ್ತಿರದವನಾಗಿದ್ದೇನೆ" ಎಂದರು. ಅವರು ಕನಿಷ್ಠಪಕ್ಷ, “ಉಗ್ರಗಾಮಿ ಚಟುವಟಿಕೆಗಳಿಗೆ ಯಾವುದೇ ಬೆಂಬಲವನ್ನು ನೀಡಬಾರದು" ಎಂದು ಪಾಕಿಸ್ತಾನಕ್ಕೆ ಬುದ್ಧಿ ಹೇಳಲಿಲ್ಲ. ಇದು ಮೋದಿ-ಟ್ರಂಪ್ ಬಾಂಧವ್ಯದ ಟೊಳ್ಳುತನಕ್ಕೆ ಹಿಡಿದ ಕನ್ನಡಿಯಂತಿತ್ತು!

ಭಾರತ ತನ್ನ ಸುರಕ್ಷತೆಗಾಗಿ ಕೈಗೊಂಡ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಬಳಿಕ, “ಈ ಘರ್ಷಣೆಯನ್ನು ನಾನೇ ನಿಲ್ಲಿಸಿದೆ" ಎಂದು ಘೋಷಿಸಿಕೊಂಡ ಟ್ರಂಪ್ ಅಷ್ಟಕ್ಕೇ ಸುಮ್ಮನಾಗಲಿಲ್ಲ; “ಪಾಕಿಸ್ತಾನದ ಕೋರಿಕೆ ಮೇರೆಗೆ ಕಾರ್ಯಾಚರಣೆಯನ್ನು ನಿಲ್ಲಿಸ ಲಾಯಿತು" ಎಂದು ಭಾರತ ಸರಕಾರವು ಸ್ಪಷ್ಟೀಕರಣವನ್ನು ನೀಡಿದ ನಂತರವೂ ಟ್ರಂಪ್ ಮಹಾಶಯರ ಬಡಿವಾರ ಮುಂದುವರಿಯಿತು.

ಇದೇ ಮಾತನ್ನು ಟ್ರಂಪ್ ಪುನರಾವರ್ತಿಸುತ್ತಲೇ ಸಾಗಿದರು. ಇಷ್ಟು ಸಾಲದೆಂಬಂತೆ, ಅದಾಗಲೇ ಆಗಿದ್ದ ಗಾಯಕ್ಕೆ ಉಪ್ಪು ಸವರುವಂತೆ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಅಮೆರಿಕಕ್ಕೆ ಆಹ್ವಾನಿಸಿ ಒಂದೇ ಮೇಜಿನಲ್ಲಿ ಭೋಜನವನ್ನು ಸವಿದರು. “ಭಾರತ-ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ನಾನೇ" ಎಂಬ ಟ್ರಂಪ್‌ರ ಮಾತನ್ನು ಪ್ರತಿಪಕ್ಷ ಕಾಂಗ್ರೆಸ್ ನೆನಪಿಟ್ಟುಕೊಂಡು, “ಆ ಮಾತನ್ನು ಟ್ರಂಪ್ 33 ಬಾರಿ ಪುನರುಚ್ಚರಿಸಿದ್ದಾರೆ" ಎಂದು ಹೇಳಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹವಣಿಸಿತು.

ಆಗ ಕೆಲದಿನ ಮೌನಕ್ಕೆ ಶರಣಾದ ಮೋದಿಯವರು, ಈ ಮಾತನ್ನು ಕೊನೆಗೂ ನೇರವಾಗಿ ನಿರಾಕರಿ ಸದೆ ಅಲ್ಲಿಂದ ಅಲ್ಲಿಗೇ ತೇಪೆ ಹಚ್ಚಿದರು. ವಾಸ್ತವಾಂಶ ಏನೇ ಇರಲಿ, ಕನಿಷ್ಠಪಕ್ಷ ಮೋದಿಯವರ ಗೆಳೆತನಕ್ಕೆ ಬೆಲೆ ಕೊಟ್ಟಾದರೂ ಟ್ರಂಪ್ ಸುಮ್ಮನಾಗಬಹುದಿತ್ತು. ಟ್ರಂಪ್ ಉದ್ದೇಶ, ಅಮೆರಿಕದ ಸರಕುಗಳ ಮೇಲಿನ ಭಾರತದ ಸುಂಕವನ್ನು ಕಡಿತಗೊಳಿಸಲು ಹೂಡಿದ ಒತ್ತಡ ತಂತ್ರವೇ ಇರಬಹುದು.

ಆದರೆ ಬಹುಕಾಲದ ಗೆಳೆಯರಾಗಿರುವ ಮೋದಿಯವರನ್ನು ಬೇಕಂತಲೇ ಇಕ್ಕಟ್ಟು, ಮುಜುಗರಗಳಿಗೆ ಸಿಲುಕಿಸುವ ಅವರ ನಡೆ ಎಷ್ಟರಮಟ್ಟಿಗೆ ಸರಿ? ಟ್ರಂಪ್ ಅವರ ಮಾತು ಮತ್ತು ವರ್ತನೆಗಳ ನಡುವೆ ತಾಳ-ಮೇಳವಿಲ್ಲ. “ಭಾರತವು ವ್ಯವಹಾರಗಳಿಗೆ ಉತ್ತಮ ಪಾಲುದಾರ ರಾಷ್ಟ್ರವಲ್ಲ; ಭಾರತದ್ದು ಸತ್ತ ಆರ್ಥಿಕತೆ" ಎಂದೆಲ್ಲಾ ಅವಮಾನ ಮಾಡಿದರು ಟ್ರಂಪ್. ಅಲ್ಲಿಗೆ, ಟ್ರಂಪ್ ಗೆಳೆತನದ ಸಾಚಾತನ ವನ್ನು ಅಂದಾಜಿಸುವಲ್ಲಿ ಮೋದಿ ಎಡವಿದ್ದು ಸ್ಪಷ್ಟವಾದಂತಾಯಿತು.

ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಅವಮಾನವನ್ನು ಅನುಭವಿಸಬೇಕಾಗಿ ಬಂತು. ಸ್ವತಃ ಒಂದು ದೇಶದ ಅಧ್ಯಕ್ಷರಾಗಿರುವ ಟ್ರಂಪ್, ಭಾರತದಂಥ ಪ್ರಜಾಸತ್ತಾತ್ಮಕ ದೇಶವನ್ನು ನಡೆಸಿಕೊಳ್ಳುವ ರೀತಿಯೇ ಇದು? ಭಾರತ ಸರಕಾರ ಕೂಡ ಟ್ರಂಪ್ ಅವರ ನಡೆಯನ್ನು ದಿಟ್ಟತನ ದಲ್ಲಿ ಎದುರಿಸಲು ವಿಫಲವಾಗಿರುವಂಥದ್ದು ಚರಿತ್ರೆಯಲ್ಲಿ ದಾಖಲಾಗಲಿದೆ.

ವಾಸ್ತವದಲ್ಲಿ ಮೋದಿಯವರ ಸರಕಾರವು, ಅಮೆರಿಕದ ವಿದೇಶಾಂಗ ನೀತಿಯನ್ನು ತಪ್ಪಾಗಿ ಅಂದಾ ಜಿಸಿತು ಎನ್ನಬಹುದು. ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿಯವರಿಗೆ ಕಾಶ್ಮೀರದಲ್ಲಿ ‘ಪಾಕಿಸ್ತಾನ-ಪ್ರಾಯೋಜಿತ’ ಉಗ್ರಗಾಮಿ ಚಟುವಟಿಕೆಗಳನ್ನು ಪೂರ್ಣವಾಗಿ ಕೊನೆಗಾಣಿಸುವ ಇರಾದೆಯಿತ್ತು. ಪಾಕಿಸ್ತಾನವನ್ನು ಮಣಿಸದೆಯೇ ಇದು ಸಾಧ್ಯವಾಗುವ ಗುರಿಯಲ್ಲ ಎಂದೂ ಗೊತ್ತಿತ್ತು.

ಬಹುಶಃ ಇದಕ್ಕಾಗಿಯೇ ಭಾರತ ಸರಕಾರವು ಅಮೆರಿಕದ ಜತೆಗಿನ ಸಂಬಂಧಕ್ಕೆ ಅತಿಯಾದ ಪ್ರಾಮುಖ್ಯವನ್ನು ನೀಡಿತು ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅಮೆರಿಕದ ನೀತಿಯನ್ನು ತಪ್ಪಾಗಿ ಅರ್ಥಮಾಡಿಕೊಂಡಂತೆ, ಅಧ್ಯಕ್ಷ ಟ್ರಂಪ್ ವ್ಯಕ್ತಿತ್ವವನ್ನು ಅರಿಯುವಲ್ಲಿಯೂ ಮೋದಿ ಯವರು ಸೋತರು ಎನ್ನಬಹುದು. ಟ್ರಂಪ್ ಅವರ ವೈಯಕ್ತಿಕ ದೌರ್ಬಲ್ಯಗಳು, ಪ್ರಬುದ್ಧ ವಲ್ಲದ ವರ್ತನೆ ಮತ್ತು ಆಕ್ರಮಣಕಾರಿ ನಡವಳಿಕೆಗಳು, ಅವರ ಕುರಿತು ಸದಭಿಪ್ರಾಯ ಮೂಡಿಸುವಂತಿರಲಿಲ್ಲ.

ಹೀಗಿದ್ದೂ ಟ್ರಂಪ್ ಅವರ ಮೇಲೆ ಅತಿಯಾದ ನಂಬಿಕೆಯಿಟ್ಟಿದ್ದು ಭಾರತಕ್ಕೆ ಮುಳುವಾಯಿತು ಎನ್ನಬಹುದೇ? ಅಮೆರಿಕವು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಪಾದಕ ಎಂಬುದನ್ನು ಹೊರತು ಪಡಿಸಿದರೆ, ಮಿಕ್ಕಂತೆ ಅದಕ್ಕೆ ವ್ಯಾವಹಾರಿಕ ಹಿತಾಸಕ್ತಿಗಳೇ ಆದ್ಯತೆಯ ವಿಷಯ ಎಂಬುದು ಇಡೀ ಜಗತ್ತಿಗೇ ಗೊತ್ತು.

ನ್ಯಾಯ, ಮಾನವೀಯತೆ, ನಿಷ್ಪಕ್ಷಪಾತಿ ವರ್ತನೆ ಇತ್ಯಾದಿ ಮೌಲ್ಯಗಳೆಲ್ಲ ಅದಕ್ಕೆ ಮುಖ್ಯವಲ್ಲ. ಯುದ್ಧೋಪಕರಣಗಳು, ಶಸ್ತ್ರಾಸ್ತ್ರಗಳ ಮಾರಾಟದಂಥ ವ್ಯವಹಾರಕ್ಕೇ ಅದರ ಆದ್ಯತೆ. ಜತೆಗೆ, ಮಿತ್ರ ದೇಶಗಳ ನೈಸರ್ಗಿಕ ಸಂಪತ್ತನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸುವಂಥ ತಂತ್ರಗಾರಿಕೆಯೂ ಅದಕ್ಕೆ ಕರಗತ.

ತನಗೆ ಲಾಭವಿಲ್ಲದೆ ಮಿತ್ರದೇಶಗಳಿಗೆ ನೆರವು ನೀಡುವುದು ಅಮೆರಿಕಕ್ಕೆ ಒಗ್ಗದ ವಿಷಯ! ಹಾಗೆಯೇ ಜಗತ್ತಿನ ಇತರ ದೇಶಗಳ ವಿಷಯಗಳಲ್ಲಿ ಮೂಗು ತೂರಿಸಿ ತನ್ನ ಬೇಳೆ ಬೇಯಿಸಿಕೊಳ್ಳುವಲ್ಲಿಯೂ ಅದು ಯಾವತ್ತೂ ಹಿಂದೆ ಬಿದ್ದಿಲ್ಲ. ಇಂಥ ದೇಶ ಮತ್ತು ಅದರ ಅಧ್ಯಕ್ಷ ಟ್ರಂಪ್ ಜತೆಗಿನ ಮಿತ್ರತ್ವವು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಸುಂಕ ಹೆಚ್ಚಿಸಿದ ಎರಡು ದಿನಗಳ ಬಳಿಕವೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯವರು, “ಭಾರತ-ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದ್ದು ನಾವೇ" ಎಂಬ ಹೇಳಿಕೆ ನೀಡಿದ್ದಾರೆ.

ಈ ಬೆಳವಣಿಗೆ ನಮಗೆ ಪಾಠವಾಗಬೇಕಿದೆ ಹಾಗೂ ಭಾರತವು ಮುಂದಿನ ದಿನಗಳಲ್ಲಿ ಅಮೆರಿಕ ದೊಂದಿಗೆ ಒಂದು ಅಂತರ ಕಾಯ್ದುಕೊಂಡು ಎಚ್ಚರದ ಹಾಗೂ ವಿವೇಕದ ಹೆಜ್ಜೆಗಳನ್ನು ಇಡಬೇಕಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)