ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiran Upadhyay Column: ಮುನಿಸು ತರವೇ...? ಮಲೇಶಿಯಾ...?

ಕೆಲವೊಮ್ಮೆ ಯಾರೋ ಮಾಡುವ ಎಡವಟ್ಟಿನಿಂದ ಕೆಲವು ಸೌಲಭ್ಯಗಳು, ಸಂಬಂಧಗಳು ಎಕ್ಕುಟ್ಟು ಹೋಗುತ್ತವೆ. ಇದನ್ನು ಈ ಸಂದರ್ಭದಲ್ಲಿ ಯಾಕೆ ಹೇಳುತ್ತಿದ್ದೇನೆ ಎಂದರೆ, ಇತ್ತೀಚೆಗೆ ಒಂದು ಸುದ್ದಿಯನ್ನು ನೋಡಿದೆ. ಭಾರತೀಯ ಪ್ರವಾಸಿಗರಿಗೆ ಸುಖದಾಯಿನಿ ತಾಣವಾದ ಮಲೇಷಿಯಾ, ಭಾರತೀಯರಿಗೆ ನೀಡುತ್ತಿದ್ದ ವೀಸಾ ಸೌಲಭ್ಯದಲ್ಲಿ ಬದಲಾವಣೆ ತರುತ್ತಿದೆ. ‘ವೀಸಾ’ ಎಂದರೆ ಏನು ಎಂಬುದು ಬಹುತೇಕ ಜನರಿಗೆ ತಿಳಿದಿದ್ದರೂ, ಇನ್ನೊಮ್ಮೆ ಹೇಳಿ ಬಿಡುತ್ತೇನೆ.

Kiran Upadhyay Column: ಮುನಿಸು ತರವೇ...? ಮಲೇಶಿಯಾ...?

-

ವಿದೇಶವಾಸಿ

‘ಒಳ್ಳೆಯತನ ಬಹಳ ಹೆಚ್ಚಾದರೆ ನಮ್ಮವರೇ ನಮಗೆ ಶತ್ರುಗಳಾಗುತ್ತಾರೆ.’ ಈ ಮಾತಿನಲ್ಲಿರುವ ಸತ್ಯಾಂಶದ ನಿಜ ತಿಳಿಯಬೇಕೆಂದರೆ ಕಾಲ ಒದಗಿ ಬರಬೇಕು. ಕೆಲವರ ಒಳ್ಳೆಯತನವನ್ನು ಉಪಯೋಗಿಸಿಕೊಂಡು ಇನ್ನು ಕೆಲವರು ತಮ್ಮ ಕಾರ್ಯವನ್ನು ಸಿದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿರು ತ್ತಾರೆ. ಅದು ಸರಿಯೋ ತಪ್ಪೋ ಎಂಬ ವಿವೇಚನೆಗೂ ಇಳಿಯುವುದಿಲ್ಲ. ಒಟ್ಟಾರೆ ತಮ್ಮ ಕೆಲಸವಾಗಬೇಕು ಅಷ್ಟೇ.

ಇದರಿಂದ ಬೇರೆಯವರಿಗೆ ತೊಂದರೆಯಾದರೆ, ಅವರದ್ದೇನೂ ಬಿದ್ದು ಹೋಗುವುದಿಲ್ಲ ಎಂಬ ಭಾವನೆ. ಒಟ್ಟಾರೆ ತಮಗೆ ಲಾಭವಾಗಬೇಕು. ಇತ್ತೀಚಿಗೆ ಈ ಮನಸ್ಥಿತಿ ಹೆಚ್ಚಾಗುತ್ತಿದೆ. ಯಾರೋ ಸದುದ್ದೇಶದಿಂದ ನೀಡಿದ ಸೌಲಭ್ಯವನ್ನು ತಮ್ಮ ದುರುದ್ದೇಶಕ್ಕಾಗಿ ಬಳಸಿಕೊಳ್ಳುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಮಾನವೀಯ ಸಂಬಂಧಗಳ ನಡುವೆಯೂ ಹೌದು, ದೇಶ ದೇಶಗಳ ನಡುವೆ ಇರುವ ಸಂಬಂಧಗಳೂ ಹೌದು.

ಕೆಲವೊಮ್ಮೆ ಯಾರೋ ಮಾಡುವ ಎಡವಟ್ಟಿನಿಂದ ಕೆಲವು ಸೌಲಭ್ಯಗಳು, ಸಂಬಂಧಗಳು ಎಕ್ಕುಟ್ಟು ಹೋಗುತ್ತವೆ. ಇದನ್ನು ಈ ಸಂದರ್ಭದಲ್ಲಿ ಯಾಕೆ ಹೇಳುತ್ತಿದ್ದೇನೆ ಎಂದರೆ, ಇತ್ತೀಚೆಗೆ ಒಂದು ಸುದ್ದಿಯನ್ನು ನೋಡಿದೆ. ಭಾರತೀಯ ಪ್ರವಾಸಿಗರಿಗೆ ಸುಖದಾಯಿನಿ ತಾಣವಾದ ಮಲೇಷಿಯಾ, ಭಾರತೀಯರಿಗೆ ನೀಡುತ್ತಿದ್ದ ವೀಸಾ ಸೌಲಭ್ಯದಲ್ಲಿ ಬದಲಾವಣೆ ತರುತ್ತಿದೆ. ‘ವೀಸಾ’ ಎಂದರೆ ಏನು ಎಂಬುದು ಬಹುತೇಕ ಜನರಿಗೆ ತಿಳಿದಿದ್ದರೂ, ಇನ್ನೊಮ್ಮೆ ಹೇಳಿ ಬಿಡುತ್ತೇನೆ.

ಇದನ್ನೂ ಓದಿ: Kiran Upadhyay Column: ಶೌಚಾಲಯಕ್ಕೂ ಬೇಕು ತಂತ್ರಜ್ಞಾನ

ಏಕೆಂದರೆ ‘ಪಾಸ್ ಪೋರ್ಟ್’ ಮತ್ತು ‘ವೀಸಾ’ ನಡುವಿನ ವ್ಯತ್ಯಾಸ ಗೊತ್ತಿಲ್ಲದ ಕೆಲವರು ಇನ್ನೂ ನಮ್ಮ ನಡುವೆ ಇದ್ದಾರೆ. ಪಾಸ್‌ಪೋರ್ಟ್ ಮಾಡಿಸಲು ಕೊಟ್ಟು, ಕೈಗೆ ಸಿಕ್ಕ ಕೂಡಲೇ, ‘ನನಗೆ ಪಾಸ್‌ಪೋರ್ಟ್ ಸಿಕ್ಕಿದೆ, ನಾನು ಇನ್ನು ಯಾವ ದೇಶಕ್ಕಾದರೂ ಹೋಗಬಹುದು’ ಎಂದು ಹೇಳುವವರಿದ್ದಾರೆ. ಅದೇನು ಮಹಾ ಅಪರಾಧವೂ ಅಲ್ಲ, ಪಾಪವೂ ಅಲ್ಲ. ಅವರಿಗೆ ಪಾಸ್‌ ಪೋರ್ಟ್ ಮತ್ತು ವೀಸಾ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ ಎಂಬ ಕಾರಣಕ್ಕೆ ಈ ವಿವರಣೆ.

ಪಾಸ್‌ಪೋರ್ಟ್ ಎಂದರೆ, ಒಬ್ಬ ವ್ಯಕ್ತಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ಸ್ಥಳ, ಜನ್ಮ ದಿನಾಂಕ, ವಿಳಾಸ, ಹುಟ್ಟಿದ ಸ್ಥಳ, ಮುಖಚರ್ಯೆ ಇತ್ಯಾದಿ ವಿವರಗಳನ್ನು ತಿಳಿಸುವ ಮಾಹಿತಿ ಪುಸ್ತಕ. ವೀಸಾ ಎಂದರೆ ಒಂದು ನಿರ್ದಿಷ್ಟ ದೇಶಕ್ಕೆ, ನಿರ್ದಿಷ್ಟ ಸಮಯಕ್ಕೆ ಹೋಗಿ ಬರಲು ಬೇಕಾದ ಪರವಾನಿಗೆ. ಪಾಸ್ ಪೋರ್ಟ್ ಇದ್ದ ಮಾತ್ರಕ್ಕೆ ಯಾವುದಾದರೂ ದೇಶಕ್ಕೆ ಹೋಗಿ ಬರುತ್ತೇನೆ ಎಂದರೆ ಸಾಧ್ಯವಿಲ್ಲ, ವೀಸಾ ಪಡೆಯಲೇಬೇಕಾಗುತ್ತದೆ.

ವೀಸಾ ಪಡೆಯಲು ಬೇಕಾಗುವ ಪ್ರಮುಖ ಮತ್ತು ಅತ್ಯವಶ್ಯಕ ಗುರುತಿನ ಪತ್ರ ಪಾಸ್‌ಪೋರ್ಟ್. ಹಾಗಂತ ವೀಸಾ ಸಿಕ್ಕ ನಂತರವೂ ಆ ದೇಶದ ಒಳಗೆ ಪ್ರವೇಶಿಸದಂತೆ ತಡೆಯುವ ಅಧಿಕಾರ ಆ ದೇಶಕ್ಕೆ ಅಥವಾ ಅಲ್ಲಿಯ ಅಧಿಕಾರಿಗಳಿಗೆ ಇರುತ್ತದೆ. ಕಳೆದ ಮೂರು ವರ್ಷಗಳಿಂದ ಭಾರತೀಯರು ಮಲೇಷಿಯಾ ಪ್ರವಾಸಕ್ಕೆ ಹೋಗಬೇಕು ಎಂದರೆ, ಮುಂಚಿತವಾಗಿ ಯಾವುದೇ ವೀಸಾ ಪಡೆಯುವ ಅವಶ್ಯಕತೆ ಇರಲಿಲ್ಲ.

K U 23

ಮಲೇಷಿಯಾ ತಲುಪುವ ಎಪ್ಪತ್ತೆರಡು ಗಂಟೆ ಮುಂಚಿತವಾಗಿ, ಆ ದೇಶಕ್ಕೆ ತಲುಪುವ ಮತ್ತು ಅಲ್ಲಿ ಉಳಿಯುವ ಮಾಹಿತಿಯನ್ನು ಮಲೇಶಿಯಾ ಡಿಜಿಟಲ್ ಎರೈವಲ್ ಕಾರ್ಡ್ ಮೂಲಕ ತಿಳಿಸ ಬೇಕಾಗಿತ್ತೇ ವಿನಃ ಉಳಿದ ಕೆಲವು ದೇಶಗಳಂತೆ, ರಾಯಭಾರ ಕಚೇರಿಗೆ (ಅಥವಾ ಅವರು ನಿಯೋಜಿಸಿದ ಏಜೆಂಟ್ ಬಳಿ) ಹೋಗಿ, ಪಾಸ್ ಪೋರ್ಟ್ ಕೊಟ್ಟು, ಭಾವಚಿತ್ರ, ಬೆರಳ ಗುರುತು, ಕಣ್ಣಿನ ಗುರುತು (ಬಯೋಮೆಟ್ರಿಕ್ಸ್) ಇತ್ಯಾದಿ ನೀಡಿ, ವಾರಗಟ್ಟಲೆ ವೀಸಾಕ್ಕೆ ಕಾದು, ಪಾಸ್‌ಪೋರ್ಟ್‌ ನಲ್ಲಿ ವೀಸಾ ಚೀಟಿ ಅಂಟಿಸಿಕೊಂಡು ಬರಬೇಕಾಗಿರಲಿಲ್ಲ. ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ತುಂಬಿ, ಪಾಸ್ ಪೋರ್ಟ್, ಬ್ಯಾಂಕ್ ವಿವರ, ಫೋಟೋ ಇತ್ಯಾದಿಗಳನ್ನು ಅಪ್ಲೋಡ್ ಮಾಡಿ, ಹಣ ಕಟ್ಟಿ, ವಾರಗಟ್ಟಲೆ ಕಾಯುತ್ತಾ ಕೂರಬೇಕಾಗಿರಲಿಲ್ಲ.

ಸುಮ್ಮನೆ ಒಂದು ಪುಟದ ಆನ್‌ಲೈನ್ ಅರ್ಜಿಯನ್ನು ತುಂಬಿದರೆ ಸಾಕಾಗಿತ್ತು. ಪ್ರಯಾಣಿಕರ ಪಾಸ್‌ಪೋರ್ಟ್ ನಂಬರ್, ಇತರೆ ಮಾಹಿತಿ, ಅವರು ಮಲೇಷಿಯಾದಲ್ಲಿ ಉಳಿದುಕೊಳ್ಳುವ ವಿಳಾಸ, ಎಷ್ಟು ದಿನಕ್ಕಾಗಿ ಹೋಗುತ್ತಿದ್ದಾರೆ, ಎಷ್ಟು ಹಣವನ್ನು ತಮ್ಮ ಜತೆ ತೆಗೆದುಕೊಂಡು ಹೋಗುತ್ತಿzರೆ, ಇತ್ಯಾದಿ ವಿವರಗಳನ್ನು ತುಂಬಿ ಕಳುಹಿಸಿದರೆ ಸಾಕಾಗಿತ್ತು.

ಅರ್ಜಿ ತುಂಬಿದ ಕೆಲವೇ ಸೆಕೆಂಡುಗಳಲ್ಲಿ ಮಲೇಷಿಯಾ ದೇಶದ ಒಳಗೆ ಹೋಗುವ ಪರವಾನಿಗೆ ಪತ್ರ ಇಮೇಲ್ ಮಡಿಲಲ್ಲಿ ಬಂದು ಪವಡಿಸುತ್ತಿತ್ತು. ಅದಕ್ಕೆ ಯಾವುದೇ ಮೊತ್ತ ಕಟ್ಟಬೇಕಾಗಿರಲಿಲ್ಲ. ವೀಸಾಕ್ಕೆ ಎಂದು ಒಂದು ರೂಪಾಯಿಯನ್ನೂ ತುಂಬದೇ ಮೂವತ್ತು ದಿನ ಉಚಿತವಾಗಿ ಮಲೇಷಿ ಯಾದಲ್ಲಿ ಉಳಿದುಕೊಂಡು ಬರಬಹುದಾಗಿತ್ತು. ಇನ್ನು ಮುಂದೆ ಈ ಸೌಲಭ್ಯ ಇರುವುದಿಲ್ಲ.

ಇತ್ತೀಚಿಗೆ ಬಂದ ಒಂದು ಮಾಹಿತಿಯ ಪ್ರಕಾರ ಮಲೇಷಿಯಾಕ್ಕೆ ಹೋಗುವ ಭಾರತೀಯ ಪ್ರವಾಸಿ ಗರು ಇನ್ನು ಮುಂದೆ ಆನ್‌ಲೈನ್‌ನಲ್ಲಿ ವೀಸಾಕ್ಕೆ ಅರ್ಜಿ ತುಂಬಿ, ಹಣ ಕಟ್ಟಿ ವೀಸಾ ಬರುವವರೆಗೂ ಕಾಯಬೇಕು. ಈ ನಿಯಮ 2027ರ ಜನವರಿ ಒಂದರಿಂದ ಜಾರಿಯಾಗಲಿದೆ. ಅಂದರೆ, 2026ರ ಡಿಸೆಂಬರ್ ಒಂದರಿಂದಲೇ ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಅದಕ್ಕಾಗಿ ಎಷ್ಟು ಹಣ ತುಂಬಬೇಕು, ವೀಸಾಕ್ಕಾಗಿ ಎಷ್ಟು ದಿನ ಕಾಯಬೇಕು ಎಂಬುದರ ನಿಖರ ಮಾಹಿತಿ ಇನ್ನೂ ಬರಲಿಲ್ಲವಾದರೂ, ಅದಕ್ಕಾಗಿ ಹೆಚ್ಚು ಕಾಯಬೇಕಾಗಿಲ್ಲ.

ಇನ್ನು ಒಂದು ವಾರದಲ್ಲಿ ಆ ಮಾಹಿತಿಯೂ ಲಭ್ಯವಾಗುತ್ತದೆ. ಅಲ್ಲಿಗೆ, ಮಲೇಷಿಯಾ ಕಳೆದ ಮೂರು ವರ್ಷದಿಂದ ಭಾರತೀಯ ಪ್ರವಾಸಿಗರಿಗೆ ನೀಡಿದ್ದ ಸೌಲಭ್ಯವನ್ನು ಹಿಂದೆ ಪಡೆಯುತ್ತಿದೆ. ‘ಮಲೇಷಿಯಾ- Sಛ್ಝಿqs ಅoಜಿZ’ ಎಂಬ ಘೋಷವಾಕ್ಯದೊಂದಿಗೆ, ಆಗ್ನೇಯ ಏಷ್ಯಾದಲ್ಲಿ ಪ್ರವಾಸೋದ್ಯಮದಲ್ಲಿ ಸಂಚಾರ ಮೂಡಿಸಿದ ದೇಶ, ಮಲೇಷಿಯಾ. ಅಲ್ಲಿರುವ ಪೆಟ್ರೊನಾಸ್ ಟ್ವಿನ್ ಟಾವರ್ಸ್, ಕೆ ಎಲ್ ಟಾವರ್, ಲಿಟಲ್ ಇಂಡಿಯಾ, ಬಾಟು ಕೇ, ಇತ್ಯಾದಿಗಳು ಪ್ರವಾಸಿಗರನ್ನು ಸೆಳೆಯುತ್ತಿದ್ದವು.

ಕೌಲಾಲಂಪುರದಿಂದ ಸ್ವಲ್ಪವೇ ದೂರದಲ್ಲಿರುವ ಗೆಂಟಿಂಗ್ ಹೈಲ್ಯಾಂಡ್ ಕೇಬಲ್ ಕಾರ್, ಕ್ಯಾಸಿನೋ, ಅಮ್ಯೂಸ್‌ಮೆಂಟ್ ಪಾರ್ಕ್, ಶಾಪಿಂಗ್ ಮಾಲ್ ಸಿರಿವಂತರ ತಾಣವೆಂದು ಹೆಸರಾಯಿತು. ಶಾಪಿಂಗ್ ಮತ್ತು ಊಟೋಪಹಾರಗಳಿಗೆ ಪೆನಾಂಗ್, ಪ್ರಕೃತಿ, ನಿಸರ್ಗಕ್ಕೆ ಇಪೋ ಹೆಸರಾದರೆ, ದ್ವೀಪದ ಗಮ್ಮತ್ತು, ಸಮುದ್ರ ತಟಗಳ ಬೇಡಿಕೆಯನ್ನು ಲಂಗ್ಕಾವಿ ಪೂರೈಸುತ್ತಿತ್ತು.

ಎಲ್ಲಕ್ಕಿಂತ ಹೆಚ್ಚಾಗಿ, ಮಲೇಷಿಯಾಕ್ಕೆ ಹೋಗಿಬರುವ ಖರ್ಚು ಉಳಿದ ದೇಶಕ್ಕೆ ಹೋಲಿಸಿದರೆ ಕಡಿಮೆ ಯಾಗಿದ್ದು, ಇಪ್ಪತ್ತೈದು ಸಾವಿರ ರೂಪಾಯಿಗೆ ವಿಮಾನದಲ್ಲಿ ಹೋಗಿ ಬರುವ ಟಿಕೆಟ್ ಖರೀದಿಸಬಹುದಾಗಿತ್ತು. ಅವೆಲ್ಲ ಈಗಲೂ ಹಾಗೆಯೇ ಇದ್ದು, ಯಾವುದೇ ಬದಲಾವಣೆಯಾಗಲಿಲ್ಲ ಅನ್ನಿ. ಅಂಕಿ ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಿಂದ ಮಲೇಷಿಯಾಕ್ಕೆ ಭೇಟಿ ನೀಡುತ್ತಿದ್ದ ಭಾರತೀಯರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಹತ್ತು ಲಕ್ಷಕ್ಕಿಂತಲೂ ಹೆಚ್ಚಾಗಿತ್ತು. ಕಳೆದ ವರ್ಷ, 2025ರಲ್ಲಿ ಮಲೇಶಿಯಾಕ್ಕೆ ಸುಮಾರು ಹದಿನೈದೂವರೆ ಲಕ್ಷಕ್ಕೂ ಹೆಚ್ಚು ಜನ ಪ್ರವಾಸಕ್ಕೆ ಎಂದು ಹೋಗಿ ಬಂದಿದ್ದಾರೆ. 2026ರಲ್ಲಿ, ಇಪ್ಪತ್ತು ಲಕ್ಷ ಭಾರತೀಯರು ಮಲೇಷಿಯಾಕ್ಕೆ ಬರಬಹುದು ಎಂದು ಅಲ್ಲಿಯ ಸರಕಾರ ಅಂದಾಜಿಸಿತ್ತು. ಅದಕ್ಕೆ ತಕ್ಕಂತೆ ಮೊದಲ ಆರು ತಿಂಗಳಿನಲ್ಲಿಯೇ ಸುಮಾರು ಹದಿಮೂರು ಲಕ್ಷಕ್ಕೂ ಹೆಚ್ಚು ಭಾರತೀಯರು ಮಲೇಷಿಯಾ ಪ್ರವಾಸ ಕೈಗೊಂಡಿದ್ದರು.

2026ರ ಮೊದಲ ಆರು ತಿಂಗಳಲ್ಲಿಯೇ ಭಾರತೀಯ ಪ್ರವಾಸಿಗರ ಸಂಖ್ಯೆ ಹದಿಮೂರು ಲಕ್ಷ ದಾಟಿತ್ತು. ಉಳಿದ ಆರು ತಿಂಗಳಿನಲ್ಲಿ ಏಳು ಲಕ್ಷ ಜನ ಹೋಗಿಬಂದಿರಬಹುದು ಬಿಡಿ. ಒಟ್ಟಿನಲ್ಲಿ, ಮಲೇಷಿಯಾಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತ ಮೊದಲ ಐದು ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಹಾಗಾದರೆ ಮಲೇಷಿಯಾ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂದು ಹುಡುಕಿದರೆ, ನಿರ್ದಿಷ್ಟವಾಗಿ ಯಾವ ಕಾರಣವೂ ದೊರಕದಿದ್ದರೂ ಒಂದು ಅಂಶ ಪ್ರಮುಖವಾಗಿ ಕಾಣುತ್ತದೆ.

ಇತ್ತೀಚಿನ ದಿನಗಳಲ್ಲಿ ಭಾರತದ ಜನರು ಉದ್ಯೋಗದ ಅವಕಾಶವನ್ನು ಹುಡುಕಿಕೊಂಡು ಮಲೇಷಿಯಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದುದು ಕಂಡು ಬಂತು. ಭಾರತದಲ್ಲಿರುವ ಕೆಲವು ಏಜೆಂಟರು ಉದ್ಯೋಗದ ಆಮಿಷ ಒಡ್ಡಿ ಉದ್ಯೋಗ ಆಕಾಂಕ್ಷಿಗಳನ್ನು ಮಲೇಷಿಯಾಕ್ಕೆ ಕಳಿಸಿ ಕೊಡುತ್ತಿದ್ದುದೂ, ಕೆಲವರು ತಮ್ಮ ಸಂಬಂಧಿಕರ ಭೇಟಿಗೆಂದು ಹೋಗಿ ಅವರ ಮನೆಯಲ್ಲಿಯೇ ಉಳಿದುಕೊಂಡು, ಅಲ್ಲಿ ಉದ್ಯೋಗ ಹುಡುಕುತ್ತಿದ್ದುದೂ ತಿಳಿದುಬಂತು. ಹಾಗೆ ಹೋದವರು ಉದ್ಯೋಗ ಸಿಗುವವರೆಗೆ ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಆದರೆ ಇವರೆಲ್ಲ ಉದ್ಯೋಗದ ಹುಡುಕಾಟಕ್ಕೆ ಪ್ರವಾಸಿಗರ ವೀಸಾ ಪಡೆದು ಮಲೇಷಿಯಾ ಪ್ರವೇಶಿಸುತ್ತಿದ್ದರು. ಕೆಲವು ಏಜೆಂಟರೂ ಕೆಲಸದ ಪ್ರಮಾಣಪತ್ರವಾಗಲೀ, ಉದ್ಯೋಗದ ಅನುಮತಿಯಾಗಲೀ ಇಲ್ಲದಿದ್ದರೂ ಪ್ರಯಾಣಿಸು ವಂತೆ ದಾರಿ ತಪ್ಪಿಸುತ್ತಿದ್ದರು.

ಸಮಯ ಮೀರಿದ ನಂತರವೂ ಉಳಿಯುವುದು ಶೋಷಣೆಗೆ, ಬಂಧನಕ್ಕೆ ಮತ್ತು ಕಾನೂನು ಕ್ರಮಕ್ಕೆ ಎಡೆ ಮಾಡಿಕೊಡುತ್ತದೆ ಎಂದು ತಿಳಿದಿದ್ದರೂ ಉದ್ಯೋಗದ ಆಕಾಂಕ್ಷಿಗಳಾಗಿ ಹೋದವರು ಕೆಲ್ಸ ಹುಡುಕುತ್ತ ಅಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಇದು ಮಲೇಷಿಯಾ ಸರಕಾರದ ಗಮನಕ್ಕೆ ಬಂದಾಗ, ಅವರು ಭಾರತೀಯ ದೂತಾವಾಸಕ್ಕೆ ವಿಷಯ ತಿಳಿಸಿದರು.

ಭಾರತೀಯ ದೂತವಾಸವು ಒಂದು ಪ್ರಕಟಣೆಯನ್ನು ಹೊರಡಿಸಿ, ಈ ಕುರಿತು ಎಚ್ಚರಿಕೆಯನ್ನೂ ನೀಡಿತು. ಕೌಲಾಲಂಪುರದಲ್ಲಿರುವ ಭಾರತೀಯ ಹೈ ಕಮಿಷನ್, ಭಾರತದಲ್ಲಿರುವ ಕೆಲವು ಮಾನಗೆಟ್ಟ ಏಜೆಂಟರಿಂದ ದೂರ ಇರುವಂತೆ ಎಚ್ಚರಿಕೆಯನ್ನೂ ನೀಡಿತು. ಉದ್ಯೋಗದ ಟೊಳ್ಳು ಭರವಸೆಗಳನ್ನು ನಂಬದಂತೆ ಜನರಲ್ಲಿ ಕೇಳಿಕೊಂಡಿತು.

ಭಾರತೀಯರಿಗೆ ವೀಸಾ ವಿನಾಯಿತಿ ನಿಲ್ಲಿಸಲು ಇದೇ ಕಾರಣ ಎಂದು ಮಲೇಷಿಯಾ ಖಡಾಖಡಿ ಹೇಳಿಲ್ಲವಾದರೂ, ಮೇಲ್ನೋಟಕ್ಕೆ ಇದೇ ಕಾರಣ ಎಂದು ಊಹಿಸಲಾಗುತ್ತಿದೆ. ಆದ್ದರಿಂದ ಮಲೇಷಿಯಾ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮಲೇಷಿಯಾ ಮತ್ತು ಭಾರತದ ನಡುವೆ ಮೊದಲಿನಷ್ಟು ಪ್ರೀತಿ ಇಲ್ಲ ಎನ್ನುವುದಂತೂ ಸತ್ಯ. ಈ ವಿಷಯದಲ್ಲಿ ಮಲೇಷಿಯಾದ ಮುನಿಸು ತರವೇ...? ಎಂದರೆ, ತರವೇ! ಅದಕ್ಕೆ ಕಾರಣ ಭಾರತದ ಕೆಲವೇ ಕೆಲವು ಧನಪಿಪಾಸುಗಳು. ಅಂಥವರು ಬೆರಳೆಣಿಕೆಯಷ್ಟೇ ಇರಬಹುದು, ಆದರೆ ಅವರು ಮಾಡಿದ ಕೆಲಸ, ಭಾರತಕ್ಕೆ ಕೊಟ್ಟ ಕಾಣಿಕೆ ಏನು, ಎಷ್ಟು? ಇಲ್ಲಿ ಇನ್ನೂ ಒಂದು ವಿಷಯ ಹೇಳುತ್ತೇನೆ. ಈ ರೀತಿ ಪ್ರವಾಸಿಗರ ವೀಸಾ ಪಡೇದು, ಒಂದು ದೇಶಕ್ಕೆ ಹೋಗಿ ಅಲ್ಲಿ ಉದ್ಯೋಗ ಹುಡುಕುವ ಪದ್ಧತಿ ಮಲೇಷಿಯಾಕ್ಕೆ ಸೀಮಿತವಾಗಿಲ್ಲ.

ಕೊಲ್ಲಿಯ ಬಹುತೇಕ ದೇಶಗಳಿಗೆ, ಯುರೋಪಿನ ಕೆಲವು ದೇಶಗಳಿಗೆ ಹೋಗಿ ಜನ ಈ ರೀತಿ ಮಾಡುವುದಿದೆ. ಹಾಗಾದರೆ ಉಚಿತ ವೀಸಾ ನೀಡುವುದನ್ನು ನಿಲ್ಲಿಸಿದಾಕ್ಷಣ ಆ ದೇಶಕ್ಕೆ ಹೋಗಿ ಉದ್ಯೋಗ ಹುಡುಕುವವರ ಸಂಖ್ಯೆ ಕಡಿಮೆಯಾಗುತ್ತದೆಯೇ? ಇಲ್ಲ, ಆದರೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಬಹುದೇನೋ ಅಷ್ಟೇ. ಭಾರತೀಯರಿಗೆ ಉಚಿತ ವೀಸಾ ನೀಡುತ್ತಿದ್ದ ದೇಶಗಳಲ್ಲಿ ಮಲೇಶಿಯಾ ಪ್ರಥಮವೂ ಅಲ್ಲ, ಏಕ ಮಾತ್ರವೂ ಅಲ್ಲ.

ನೇಪಾಳ, ಭೂತಾನ್, ಥೈಲ್ಯಾಂಡ್, ಫಿಲಿಪೈ, ಮಾಲ್ಡೀ, ಮಾರಿಷಿಯಸ್ ಸೇರಿದಂತೆ ಸುಮಾರು ಇಪ್ಪತ್ತೇಳು ದೇಶಗಳು ಭಾರತೀಯರಿಗೆ ವೀಸಾ ರಹಿತ (ಆನ್ ಎರೈವಲ) ಅಥವಾ ಉಚಿತ ವೀಸಾ ಸೌಲಭ್ಯ ನೀಡುತ್ತಿವೆ. ಆದರೆ ಅವುಗಳಲ್ಲಿ ಆಫ್ರಿಕಾ, ಏಷ್ಯಾ, ಅಮೇರಿಕಾ ಖಂಡಗಳಲ್ಲಿರುವ ಸಣ್ಣ-ಪುಟ್ಟ ದೇಶಗಳ ಸಂಖ್ಯೆಯೇ ಹೆಚ್ಚು. ಅಲ್ಲಿ ತಲುಪಲು ಸರಿಯಾದ ವಿಮಾನದ ವ್ಯವಸ್ಥೆಯೂ ಇಲ್ಲ, ನೋಡುವ ಸ್ಥಳಗಳೂ ಇಲ್ಲ. ಆದ್ದರಿಂದ ಬಹುತೇಕ ದೇಶಗಳಿಗೆ ಭಾರತೀಯ ಪ್ರವಾಸಿಗರು ಹೋಗುವುದು ಕಡಿಮೆಯೇ. ಹಾಗೆಯೇ, ಉಚಿತ ವೀಸಾ ಸೌಲಭ್ಯವನ್ನು ಹಿಂಪಡೆದ ದೇಶಗಳಲ್ಲಿಯೂ ಮಲೇಷಿಯಾ ಮೊದಲ ದೇಶವಲ್ಲ.

ಒಂದು ವರ್ಷದ ಹಿಂದೆ ಮಾತ್ರ ಇರಾನ್ ಭಾರತೀಯರಿಗೆ ನೀಡುತ್ತಿದ್ದ ಈ ಸೌಲಭ್ಯವನ್ನು ಹಿಂಪಡೆದಿದೆ. ಆ ಸಂದರ್ಭದಲ್ಲಿ ಭಾರತೀಯ ಪ್ರವಾಸಿಗರನ್ನು ಹಣಕ್ಕಾಗಿ ಅಪಹರಿಸಲಾಗುತ್ತಿತ್ತು ಎಂಬ ವದಂತಿ ಇತ್ತು. ಇರಾನ್‌ನಂತಹ ದೇಶಕ್ಕೆ ಅದರ ಅವಶ್ಯಕತೆ ಇದೆ ಎಂದು ಅನಿಸುವುದಿಲ್ಲ. ಆದರೂ ನಂತರದ ಬೆಳವಣಿಗೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಈಗಂತೂ ಬಿಡಿ, ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದಾ ಗಿನಿಂದ ಅಲ್ಲಿ ಪ್ರವಾಸಿಗರು ಹೋಗುತ್ತಿಲ್ಲ. ಆದರೆ ಜನರು ಪ್ರವಾಸಕ್ಕೆ ಹೋಗದೆ ಇರೋದಕ್ಕೂ ಒಂದು ದೇಶ ಉಚಿತ ವೀಸಾ ಒದಗಿಸದೆ ಇರುವುದಕ್ಕೂ ವ್ಯತ್ಯಾಸವಿದೆ. ‘ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಇದೆ.

ಭಾರತಕ್ಕೆ ಮಲೇಷಿಯಾದೊಡನೆ ಸಂಬಂಧ ಸುಧಾರಿಸಲು, ಮೊದಲಿನಂತಾಗಲು ಇನ್ನು ಎಷ್ಟು ಸಮಯ ಬೇಕಾದೀತೋ ಗೊತ್ತಿಲ್ಲ. ಒಟ್ಟಿನಲ್ಲಿ, ಕೆಲವೇ ಕೆಲವು ಜನರ ಅತಿಯಾದ ಆಸೆ ಬಹಳ ಜನರಿಗೆ ಸಿಗುವ ಸೌಲಭ್ಯಕ್ಕೆ ಹೇಗೆ ಮಾರಕವಾಗುತ್ತದೆ ಎನ್ನುವುದಕ್ಕೆ ಮಲೇಷಿಯಾ ಒಂದು ಉತ್ತಮ ಉದಾಹರಣೆ.