Vishweshwar Bhat Column: ಜಪಾನಿಯರ ಹೆಸರುಗಳು
ಜಪಾನಿ ಸಂಸ್ಕೃತಿಯು ಪ್ರಾಚೀನತೆಯೊಂದಿಗೆ ನಾವೀನ್ಯದ ಸಮನ್ವಯವನ್ನು ತೋರಿಸುವ ವಿಶಿಷ್ಟ ದೇಶವಾಗಿರುವಂತೆ, ಜಪಾನಿಯರ ಹೆಸರುಗಳು ಕೂಡ ಸಂಸ್ಕೃತಿ, ಪರಂಪರೆ ಮತ್ತು ಅರ್ಥ ಪೂರ್ಣತೆಯ ಪ್ರತಿರೂಪವಾಗಿವೆ. ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ ಹಿಂದೆಯೂ ಒಂದು ಕಥೆ, ಒಂದು ಅರ್ಥ ಮತ್ತು ಒಂದು ನುಡಿಮುತ್ತು ಇರುವಂತಿದೆ. ಜಪಾನಿನಲ್ಲಿ ಸಾಮಾನ್ಯವಾಗಿ ವ್ಯಕ್ತಿಯ ಹೆಸರಿ ನಲ್ಲಿ ಎರಡು ಅಂಶಗಳಿರುತ್ತವೆ


ಸಂಪಾದಕರ ಸದ್ಯಶೋಧನೆ
ಜಪಾನಿನ ಭಾಷೆ ಮತ್ತು ಆಹಾರದಂತೆ ಅಲ್ಲಿಗೆ ಹೋದಾಗ ವ್ಯಕ್ತಿಗಳ ಹೆಸರನ್ನು ಹೇಳಲು ಆಗದೇ ತಡವರಿಸುವುದುಂಟು. ವ್ಯಕ್ತಿಗಳು ಮತ್ತು ಅವರ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಮೊದಲು ಅಲ್ಲಿಗೆ ಹೋದಾಗ, ಸುಜುಕಿ ಮತ್ತು ನಕಮುರಾ ಎಂಬ ಹೆಸರಿನವರೇ ಹೆಚ್ಚಿನವರು ಸಿಕ್ಕರೆ, ಎಲ್ಲರ ಹೆಸರುಗಳೂ ಹಾಗೇ ಎಂದು ಭಾವಿಸ ಬೇಕಿಲ್ಲ. ಜಪಾನಿ ಸಂಸ್ಕೃತಿಯು ಪ್ರಾಚೀನತೆಯೊಂದಿಗೆ ನಾವೀನ್ಯದ ಸಮನ್ವಯವನ್ನು ತೋರಿಸುವ ವಿಶಿಷ್ಟ ದೇಶವಾಗಿರುವಂತೆ, ಜಪಾನಿಯರ ಹೆಸರುಗಳು ಕೂಡ ಸಂಸ್ಕೃತಿ, ಪರಂಪರೆ ಮತ್ತು ಅರ್ಥ ಪೂರ್ಣತೆಯ ಪ್ರತಿರೂಪವಾಗಿವೆ. ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ ಹಿಂದೆಯೂ ಒಂದು ಕಥೆ, ಒಂದು ಅರ್ಥ ಮತ್ತು ಒಂದು ನುಡಿಮುತ್ತು ಇರುವಂತಿದೆ. ಜಪಾನಿನಲ್ಲಿ ಸಾಮಾನ್ಯವಾಗಿ ವ್ಯಕ್ತಿಯ ಹೆಸರಿ ನಲ್ಲಿ ಎರಡು ಅಂಶಗಳಿರುತ್ತವೆ.
ಮೊದಲನೆಯದು, ಕುಟುಂಬದ ಹೆಸರು ಮತ್ತು ಎರಡನೆಯದು, ವೈಯಕ್ತಿಕ ಹೆಸರು. ಉದಾಹರಣೆಗೆ, ‘ಸಾಕುರಾ ತಾನಾಕಾ’ ಎಂಬ ಹೆಸರಿನಲ್ಲಿ ‘ತಾನಾಕಾ’ ಕುಟುಂಬದ ಹೆಸರು ಆಗಿದ್ದು, ‘ಸಾಕುರಾ’ ವ್ಯಕ್ತಿಯ ಹೆಸರು. ಜಪಾನಿ ಭಾಷೆಯಲ್ಲಿ ಹೆಸರು ಬರೆಯುವಾಗ ಸಾಮಾನ್ಯವಾಗಿ ಕುಟುಂಬದ ಹೆಸ ರನ್ನು ಮೊದಲು ಬರೆಯುತ್ತಾರೆ ಮತ್ತು ನಂತರ ವೈಯಕ್ತಿಕ ಹೆಸರನ್ನು. ಜಪಾನಿ ಭಾಷೆಯಲ್ಲಿ ಮೂರು ಮುಖ್ಯ ಲಿಪಿಗಳನ್ನು ಬಳಸಲಾಗುತ್ತದೆ. ಚೀನಿ ಮೂಲದ ಲಿಪಿ ಕಾಂಜಿ, ಜಪಾನಿ ಮೂಲದ ಶಬ್ದಲಿಪಿ ಹಿರಾಗಾನ ಮತ್ತು ವಿದೇಶಿ ಶಬ್ದಗಳನ್ನು ಬರೆಯಲು ಬಳಸುವ ಲಿಪಿ ಕಟಕಾನ. ಹೆಸರಿನಲ್ಲಿ ಹೆಚ್ಚು ವೇಳೆ ಕಾಂಜಿ ಅಕ್ಷರಗಳನ್ನೇ ಬಳಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಜಪಾನಿಯರ ವ್ಯವಹಾರ ಬುದ್ದಿ
ಏಕೆಂದರೆ ಪ್ರತಿ ಕಾಂಜಿ ಅಕ್ಷರಕ್ಕೂ ತನ್ನದೇ ಆದ ಅರ್ಥವಿದೆ. ಒಂದು ಹೆಸರಿನಲ್ಲಿ ಬಳಸುವ ಕಾಂಜಿ ಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ಆಯ್ಕೆ ಮಾಡಲಾಗುತ್ತವೆ. ಜಪಾನಿ ಹೆಸರುಗಳಿಗೆ ಅರ್ಥ ಮತ್ತು ಸಂಕೇತಗಳಿವೆ. ಉದಾಹರಣೆಗೆ, ಹರು ಅಂದ್ರೆ ವಸಂತ ಋತು, ಕೈ ಅಂದ್ರೆ ಸಮುದ್ರ, ಯುಕಿ ಅಂದ್ರೆ ಹಿಮ, ಹಾನಾ ಅಂದ್ರೆ ಹೂವಿನ ನೆಲ. ಹೆಸರಿನಲ್ಲಿ ಎರಡು ಅಥವಾ ಹೆಚ್ಚು ಕಾಂಜಿ ಅಕ್ಷರಗಳನ್ನು ಬಳಸಿದರೆ, ಅವು ಒಟ್ಟಾಗಿ ಹೊಸ ಅರ್ಥವನ್ನೂ ನೀಡಬಹುದು.
ಉದಾಹರಣೆಗೆ, ಹಾರೂಕಿ ಹೆಸರಿನಲ್ಲಿ ‘ಹಾರು’ (ವಸಂತ) + ‘ಕಿ’ (ಮರ)= ‘ವಸಂತದ ಮರ’. ಪಾನಿ ನಲ್ಲಿ ಹೆಸರನ್ನು ಎಷ್ಟೊಂದು ಅರ್ಥಪೂರ್ಣವಾಗಿ ಆಯ್ಕೆ ಮಾಡಲಾಗುತ್ತದೋ, ಅಷ್ಟೇ ಮುಖ್ಯ ವಾಗಿ ಅದು ಶುಭ ಸಂಕೇತವಾಗಿರುವಂತೆ ನೋಡಿಕೊಳ್ಳುತ್ತಾರೆ. ಅನೇಕ ಪೋಷಕರು ತಮ್ಮ ಮಕ್ಕಳಿಗೆ ಪ್ರಕೃತಿ, ನದಿ, ನೀರು, ಭೂಮಿ, ಮರ, ಪ್ರೀತಿ, ಸಾಮರ್ಥ್ಯ, ಶಾಂತಿ, ಅಥವಾ ಯಶಸ್ಸಿನ ಸಂಕೇತ ಗಳಿರುವ ಹೆಸರುಗಳನ್ನು ಆಯ್ಕೆ ಮಾಡುತ್ತಾರೆ.
ಪ್ರತಿಯೊಂದು ದಶಕದಲ್ಲಿಯೂ ಜನಪ್ರಿಯ ಹೆಸರಗಳು ಬದಲಾಗುತ್ತವೆ. ಉದಾಹರಣೆಗೆ, 2020ರ ದಶಕದಲ್ಲಿ ಪುರುಷರ ಹೆಸರುಗಳಾದ ‘ಹಾರುಕಿ’, ‘ಸೋಟಾ’, ‘ರೀನ್’, ‘ಹಿನಾಟೋ’ ಜನಪ್ರಿಯ ವಾಗಿದ್ದರೆ, ಮಹಿಳೆಯರ ಹೆಸರುಗಳಾದ ‘ಹಾನಾ’, ‘ಯುಜು’, ‘ಐ’, ‘ಹೋನೋಕಾ’ ಮುಂತಾದ ಹೆಸರುಗಳು ಜನಪ್ರಿಯವಾಗಿದ್ದವು. ಜಪಾನಿನಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ವಿಭಿನ್ನ ಕುಟುಂಬ ಹೆಸರಗಳಿವೆ. ಇವು ಬಹುಪಾಲು ಪ್ರಕೃತಿ ಅಥವಾ ಭೌಗೋಳಿಕ ಅಂಶಗಳ ಮೇಲೆ ಆಧಾರಿತವಾಗಿವೆ.
ಉದಾಹರಣೆಗೆ, ತಾನಾಕಾ (ತೋಟದ ಮಧ್ಯೆ), ಯಾಮಾಮೋಟೋ (ಪರ್ವತದ ತಳಭಾಗ), ಕಾವಾ ಮುರಾ (ನದಿಯ ಹಳ್ಳಿ), ಇಶಿಕಾವಾ (ನದಿ ತೀರ). ಈ ಹೆಸರುಗಳಿಂದ ವ್ಯಕ್ತಿಯ ಮೂಲ ಪ್ರದೇಶ, ಕುಟುಂಬದ ಇತಿಹಾಸ ಅಥವಾ ಉದ್ಯೋಗ ತಿಳಿಯಬಹುದು. ಜಪಾನಿನಲ್ಲಿ ಹೆಸರನ್ನು ಬದಲಾಯಿ ಸುವ ಪದ್ಧತಿಯಿದೆ. ಆದರೆ ಅದು ಅತಿ ವಿರಳ. ಸಾಮಾನ್ಯವಾಗಿ ವಿವಾಹವಾದ ನಂತರ ಮಹಿಳೆ ಯರು ತಮ್ಮ ಪತಿಯ ಕುಟುಂಬದ ಹೆಸರನ್ನು ಅಳವಡಿಸಿಕೊಳ್ಳುತ್ತಾರೆ.
ಆದರೆ ಇತ್ತೀಚಿನ ವರ್ಷಗಳಲ್ಲಿ, ಕೆಲವೊಮ್ಮೆ ಮಹಿಳೆಯರು ತಮ್ಮ ಮೂಲ ಕುಟುಂಬದ ಹೆಸರನ್ನು ಉಳಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಜಪಾನಿ ಹೆಸರಿನಲ್ಲಿ ಪುರುಷ ಮತ್ತು ಮಹಿಳಾ ಹೆಸರುಗಳು ಸ್ಪಷ್ಟವಾಗಿ ವಿಭಜನೆಯಲ್ಲದಿದ್ದರೂ, ಕೆಲವೊಂದು ಅಕ್ಷರಗಳು ಅಥವಾ ಅಂತಿಮ ಧ್ವನಿಗಳು ಲಿಂಗ ಸೂಚಿಸುತ್ತವೆ.
ಪುರುಷ ಹೆಸರುಗಳು ‘ರಿ’, ‘ಕಿ’, ‘ಟೋ’, ‘ಸಿಗೆ’, ‘ತಾಕಾ’ ಮುಂತಾದವು. ಉದಾಹರಣೆ, ಶಿನಜಿ, ತಾಕೇಶಿ, ಹಾರೂಕಿ. ಮಹಿಳಾ ಹೆಸರುಗಳು ‘ಕೊ’ (ಅರ್ಥ ಮಗು), ‘ಮಿ’, ‘ನಾ’, ‘ಯು’, ‘ಕಾ’ ಮುಂತಾದವು. ಉದಾಹರಣೆ, ಯುಮಿಕೋ, ಸಾಈಕಾ, ಹಾರುಕಾ. ಇತ್ತೀಚಿನ ವರ್ಷಗಳಲ್ಲಿ ಜಪಾನಿ ಪಾಪ್ ಸಂಸ್ಕೃತಿ, ಅನಿಮೆ, ಮತ್ತು ಸಿನಿಮಾಗಳ ಪ್ರಭಾವದಿಂದ ಜಪಾನಿ ಹೆಸರುಗಳು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿವೆ. ಅನೇಕ ಅಪರಿಚಿತರು ಸಹ ‘ನಾರುಟೋ’, ‘ಸಾಕುರಾ’, ‘ಇಚಿಗೋ’, ‘ಲೂಫಿ’ ಮುಂತಾದ ಹೆಸರಗಳನ್ನು ಪರಿಚಿತವಾಗಿ ಉಚ್ಚರಿಸುತ್ತಾರೆ.