INDW vs SLW: ದೀಪ್ತಿ ಆಲ್‌ರೌಂಡರ್ ಪ್ರದರ್ಶನ; ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗೆಲುವಿನ ಶುಭಾರಂಭ
ಲಂಕಾ ಪರ ನಾಯಕಿ ಚಾಮರಿ ಅಟಪಟ್ಟು(43) ಅವರದ್ದೇ ಅತ್ಯಧಿಕ ಗಳಿಕೆ. ಉಳಿದಂತೆ ನೀಲಾಕ್ಷಿ ಡಿ ಸಿಲ್ವಾ(35) ಮತ್ತು ಹರ್ಷಿತಾ ಸಮರವಿಕ್ರಮ(29) ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಇನೋಕಾ ರಣವೀರ 4 ವಿಕೆಟ್ ಉರುಳಿಸಿ ಮಿಂಚಿದರು. ಆದರೆ ತಂಡದ ಸೋಲಿನಿಂದ ಇವರ ಪ್ರದರ್ಶನ ವ್ಯರ್ಥವಾಯಿತು.

-

ಗುವಾಹಟಿ: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ(INDW vs SLW) ತಂಡ ಗೆಲುವಿನ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ಉದ್ಘಾಟನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಡಕ್‌ವರ್ತ್ –ಲೂಯಿಸ್ ನಿಯಮದಡಿ 59 ರನ್ ಅಂತರದ ಗೆಲುವು ಸಾಧಿಸಿತು. ಮುಂದಿನ ಪಂದ್ಯವನ್ನು ಅ.5 ರಂದು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.
ಇಲ್ಲಿನ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆಯಿತು. ಆದರೆ 10 ಓವರ್ ಆಡುವಷ್ಟರಲ್ಲಿ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಮಳೆ ಸುರಿಯಲಾರಂಭಿಸಿತು. ಸರಿ ಸುಮಾರು ಎರಡು ಗಂಟೆ ಅಡಚಣೆ ಉಂಟಾಯಿತು. ಡಕ್‌ವರ್ತ್ ಲೂಯಿಸ್ ನಿಯಮದ ಅನುಸಾರ ಭಾರತ 47 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 269 ರನ್ ಬಾರಿಸಿತು. ಆದರೆ ಮತ್ತೆ ಮಳೆ ಅಡ್ಡಿಪಡಿಸಿದ ಕಾರಣ, ಪರಿಷ್ಕೃತ ಡಿಎಲ್‌ಎಸ್ ನಿಯಮದ ಪ್ರಕಾರ ಲಂಕಾಗೆ 47 ಓವರ್‌ಗೆ 271 ಗೆಲುವಿನ ಗುರಿ ನೀಡಲಾಯಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 211ರನ್‌ಗೆ ಸರ್ವಪನ ಕಂಡು ಶರಣಾಯಿತು.
ಭಾರತ ಪರ ಆಲ್‌ರೌಂಡರ್ ಪ್ರದರ್ಶನ ತೋರಿದ ದೀಪ್ತಿ ಶರ್ಮ 3 ವಿಕೆಟ್ ಕಿತ್ತು ಮಿಂಚಿದರು. ಇದೇ ವೇಳೆ ಏಕದಿನದಲ್ಲಿ ಭಾರತ ಪರ ಅತ್ಯಧಿಕ ವಿಕೆಟ್ ಕಿತ್ತ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೂಲನ್ ಗೋಸ್ವಾಮಿ(255) ಮೊದಲ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ದೀಪ್ತಿ, 53 ರನ್ ಬಾರಿಸಿ ಅರ್ಧಶತಕ ಗಳಿಸಿದರು. ಉಳಿದಂತೆ ಸ್ನೇಹ ರಾಣ ಮತ್ತು ಶ್ರೀ ಚರಣಿ ತಲಾ 2 ವಿಕೆಟ್ ಕೆಡವಿದರು.
Deepti Sharma shines as India begin their #CWC25 campaign in style with a commanding win over Sri Lanka 🔥#INDvSL 📝: https://t.co/QmU0lW8d7a pic.twitter.com/1hLwq8CD4D
— ICC (@ICC) September 30, 2025
ಲಂಕಾ ಪರ ನಾಯಕಿ ಚಾಮರಿ ಅಟಪಟ್ಟು(43) ಅವರದ್ದೇ ಅತ್ಯಧಿಕ ಗಳಿಕೆ. ಉಳಿದಂತೆ ನೀಲಾಕ್ಷಿ ಡಿ ಸಿಲ್ವಾ(35) ಮತ್ತು ಹರ್ಷಿತಾ ಸಮರವಿಕ್ರಮ(29) ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಇನೋಕಾ ರಣವೀರ 4 ವಿಕೆಟ್ ಉರುಳಿಸಿ ಮಿಂಚಿದರು. ಆದರೆ ತಂಡದ ಸೋಲಿನಿಂದ ಇವರ ಪ್ರದರ್ಶನ ವ್ಯರ್ಥವಾಯಿತು.
ಅಮನ್‌ಜೋತ್ ಕೌರ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ಬೌಲಿಂಗ್ ಆಲ್‌ರೌಂಡರ್ ಅಮನ್‌ಜೋತ್ ಕೌರ್ 8ನೇ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 56 ಎಸೆತ ಎದುರಿಸಿದ ಅಮನ್‌ಜೋತ್, 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿದರು. ಕಳೆದ ಆಸೀಸ್ ಏಕದಿನ ಸರಣಿಯಲ್ಲಿ ಮಿಂಚಿದ್ದ ಸ್ಮೃತಿ ಮಂಧಾನ(8), ಜೆಮಿಮಾ ರಾಡ್ರಿಗಸ್(0) ಮತ್ತು ರಿಚಾ ಘೋಷ್(2) ಇಲ್ಲಿ ವೈಫಲ್ಯ ಕಂಡರು.
ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್(37), ಹರ್ಲಿನ್ ಡಿಯೋಲ್(48), ನಾಯಕಿ ಹರ್ಮನ್‌ಪ್ರೀತ್ ಕೌರ್(21) ಮತ್ತು ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ನೇಹಾ ರಾಣಾ ಅಜೇಯ 28 ರನ್ ಬಾರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ಒಳಗೊಂಡಿತ್ತು.
ಇದನ್ನೂ ಓದಿ ಮಹಿಳಾ ವಿಶ್ವಕಪ್ ಉದ್ಘಾಟನ ಪಂದ್ಯ ವೀಕ್ಷಿಸಿದ ನಿರಾಶ್ರಿತ ಆಘ್ಘಾನ್ ಮಹಿಳಾ ಕ್ರಿಕೆಟ್ ತಂಡ