Vinayaka M Bhat Column: ಮನೆಯ ಹಿರಿಯರ ವೃದ್ಧಾಪ್ಯವನ್ನು ಸಹನೀಯವಾಗಿಸೋಣ
ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮ ಹೆತ್ತವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅವರ ಆದ್ಯ ಕರ್ತವ್ಯ, ಪ್ರಕೃತಿಯ ನಿಯಮ ಹಾಗೂ ಮಾನವೀಯತೆಯ ಲಕ್ಷಣ. ಆದರೆ ಇಂದಿನ ಆಧುನಿಕ ಯುಗದಲ್ಲಿ ವೃದ್ಧರ ಸ್ಥಾನಮಾನ ಕುಸಿ ಯುತ್ತಾ ಸಾಗಿದೆ. ಭಾರತದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆ ದಿನನಿತ್ಯ ಹೆಚ್ಚುತ್ತಿರು ವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ, ಎರಡನೇ ಹಾಗೂ ಮೂರನೇ ದರ್ಜೆಯ ಪಟ್ಟಣಗಳಲ್ಲೂ ವೃದ್ಧಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.
-
ವಿದ್ಯಮಾನ
ಒಂದು ಸಮಾಜದ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಅಳೆಯುವುದು ಅದು ತನ್ನ ದೇಶದಲ್ಲಿ ಮಹಿಳೆ ಯರನ್ನು ಹಾಗೂ ಹಿರಿಯ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ. ಭಾರತೀಯ ಸಂಸ್ಕೃತಿಯಲ್ಲಿ ‘ಮಾತೃದೇವೋ ಭವ, ಪಿತೃದೇವೋ ಭವ’ ಎಂದು ಹೆತ್ತವ ರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಪರಂಪರೆ ಇದೆ.
ವೃದ್ಧರ ಸೇವೆ ಅಥವಾ ಹಿರಿಯ ನಾಗರಿಕರ ಆರೈಕೆಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದರೆ, ಇಂದಿನ ನಗರೀಕರಣ, ಜಾಗತೀಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಮನೆಯ ಶಕ್ತಿ ಸ್ತಂಭಗಳಾಗಿದ್ದ ವೃದ್ಧರು ಮೂಲೆಗುಂಪಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವಾಗ ವೃದ್ಧರ ಸೇವೆ ಎನ್ನುವುದು ಕೇವಲ ಕೌಟುಂಬಿಕ ಜವಾಬ್ದಾರಿಯಷ್ಟೇ ಅಲ್ಲದೆ, ಪ್ರಮುಖ ಸಾಮಾಜಿಕ ಅಗತ್ಯವೂ ಆಗಿದೆ.
ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮ ಹೆತ್ತವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಅವರ ಆದ್ಯ ಕರ್ತವ್ಯ, ಪ್ರಕೃತಿಯ ನಿಯಮ ಹಾಗೂ ಮಾನವೀಯತೆಯ ಲಕ್ಷಣ. ಆದರೆ ಇಂದಿನ ಆಧುನಿಕ ಯುಗದಲ್ಲಿ ವೃದ್ಧರ ಸ್ಥಾನಮಾನ ಕುಸಿ ಯುತ್ತಾ ಸಾಗಿದೆ. ಭಾರತದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆ ದಿನನಿತ್ಯ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ, ಎರಡನೇ ಹಾಗೂ ಮೂರನೇ ದರ್ಜೆಯ ಪಟ್ಟಣಗಳಲ್ಲೂ ವೃದ್ಧಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.
ಹಿರಿಯರ ಮೇಲಿನ ಕೌಟುಂಬಿಕ ದೌರ್ಜನ್ಯ, ನಿಂದನೆ ಅಥವಾ ವೃದ್ಧಾಶ್ರಮಗಳಿಗೆ ತಳ್ಳಲ್ಪಡುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ವೃದ್ಧಾಶ್ರಮಗಳು ಮತ್ತು ಡೇ-ಕೇರ್ ಸೆಂಟರ್‌ಗಳು ನಿರ್ಗತಿಕ ಹಿರಿಯರಿಗೆ ಸುರಕ್ಷಿತ ಆಶ್ರಯ ನೀಡುತ್ತಿವೆ ಎನ್ನುವುದು ಸಮಾಧಾನದ ವಿಷಯವೇ. ನಿರಾಶ್ರಿತ ವೃದ್ಧರನ್ನು ಸಾಕಿ, ಅವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ಮಾಡುವ ಸಂಸ್ಥೆಗಳಿವೆ, ಅವರ ಕಾರ್ಯ ಶ್ಲಾಘನೀಯವೇ. ಆದರೆ ಅನುಕೂಲವಿರುವವರೂ ತಮ್ಮ ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು, ಅಂತ್ಯಸಂಸ್ಕಾರವನ್ನೂ ಮಾಡದಿರುವುದು ಅತ್ಯಂತ ಖೇದಕರ ವಿಷಯವಾಗಿದೆ.
ಇದನ್ನೂ ಓದಿ: Vinayaka M Bhat Column: ಸಂಭಾಷಣೆಯ ಮೌಲ್ಯ ವೃದ್ಧಿಸುವ ನ್ಯಾಯದ ನುಡಿಗಟ್ಟುಗಳು
ಅಚ್ಚರಿಯೆಂದರೆ, ಮನೆಯಲ್ಲಿದ್ದು ಮಕ್ಕಳಿಂದ ಅವಮಾನಕ್ಕೊಳಗಾಗುವುದಕ್ಕಿಂತ ವೃದ್ಧಾಶ್ರಮವೇ ಲೇಸು ಎನ್ನುವ ಭಾವನೆಯಿಂದ ಇಂದು ಅನೇಕ ಹಿರಿಯರೇ ಸ್ವತಃ ವೃದ್ಧಾಶ್ರಮ ವಾಸಕ್ಕೆ ಮನ ಮಾಡುತ್ತಿದ್ದಾರೆ. ಡಾ.ಕೆ.ಎಸ್.ನಾರಾಯಣಾಚಾರ್ಯರು ಯಾವಾಗಲೂ ತಮ್ಮ ಪ್ರವಚನಗಳಲ್ಲಿ ಒಂದು ಕಥೆ ಹೇಳ್ತಾ ಇದ್ರು. ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಮೇಲುಕೋಟೆಯಲ್ಲಿ ವರ್ಷಕ್ಕೊಮ್ಮೆ ವೈರಮುಡಿ ಉತ್ಸವ ಆಗುತ್ತೆ, ವಜ್ರಖಚಿತವಾದ ಕಿರೀಟದಿಂದ ಕಂಗೊಳಿಸುವ ಚಲುವನಾರಾಯಣ ನನ್ನು ನೋಡುವುದೇ ಅಷ್ಟು ಚಂದ.
ಉತ್ಸವದಲ್ಲಷ್ಟೇ ಅಲ್ಲದೇ, ಚಲುವನಾರಾಯಣನ ಶಿಲಾಮಯ ಮೂರ್ತಿಯೂ ಚಂದವೇ, ಇನ್ನು ಆಭರಾಣಾದಿಗಳಿಂದ ಶರಂಗಾರವಾದ ಉತ್ಸವಮೂರ್ತಿಯ ಬಗ್ಗೆ ಕೇಳಬೇಕೆ? ಅಷ್ಟು ಚಂದ ಇರುವ ಕಾರಣಕ್ಕೇ ಆತ ಚಲುವ ನಾರಾಯಣ.
ಅದಲ್ಲದಿದ್ದರೆ ಬರೇ ನಾರಾಯಣ ಎನ್ನುತ್ತಿದ್ದರೇನೊ! ಇರಲಿ ಈ ವೈರಮುಡಿ ಉತ್ಸವವನ್ನು ನೋಡಲು ದೇಶ-ವಿದೇಶಗಳಿಂದ ಜನ ಬರುತ್ತಾರೆ, ಜೀವನದಲ್ಲಿ ಒಂದು ಬಾರಿಯಾದರೂ ವೈರಮುಡಿ ಉತ್ಸವವನ್ನು ನೋಡಬೇಕು ಎನ್ನುವ ಆಸೆ ಎಲ್ಲರಿಗಿರುವಷ್ಟು ಪ್ರಸಿದ್ಧ ಉತ್ಸವ ಅದು. ಅದೇ ಊರಿನ ಜನರಿಗಂತೂ ದೇವರೇ ಅವರ ಮನೆಬಾಗಿಲಿಗೆ ಬರುವ ವಿಶೇಷ ಸಂದರ್ಭ ಅದು. ಮನೆಮಂದಿ, ನೆಂಟರಿಷ್ಟರು ಎಲ್ಲರೂ ಈ ಸಂದರ್ಭಕ್ಕಾಗಿ ವರ್ಷಪೂರ್ತಿ ಕಾಯುವ ದಿನ ಅದು.
ಹೀಗೆ ಒಂದು ವರ್ಷ ವೈರಮುಡಿ ಉತ್ಸವ ಮನೆಯ ಮುಂದೆ ಹಾದು ಹೋಗುವ ಸಂದರ್ಭ ಬಂತು, ಅಚ್ಚರಿ ಅಂದರೆ ಆ ವರ್ಷ ಆ ಮನೆಯ ಯಜಮಾನ ಉತ್ಸವವನ್ನು ನೋಡಲು ಹೊರಗೆ ಬರಲೇ ಇಲ್ಲ. ಆತ ಮನೆಯೊಳಗಡೆ ಕೊನೆಯುಸಿರೆಳೆಯುತ್ತಿದ್ದ ತನ್ನ ತಂದೆಯನ್ನು ಶುಶ್ರೂಷೆ ಮಾಡುತ್ತಿದ್ದ. ಯಾರು ಬಂದು ಹೇಳಿದರೂ, ಸ್ವತಃ ಆತನ ತಂದೆಯೇ ಒಂದು ಕ್ಷಣ ಹೋಗಿ ದೇವರ ದರ್ಶನ ಮಾಡಿ ಬಾರಪ್ಪಾ ಎಂದು ಹೇಳಿದರೂ ಆತ ತಾನು ಮಾಡುತ್ತಿದ್ದ ತಂದೆಯ ಸೇವೆಯನ್ನು ಬಿಟ್ಟು ಮನೆಯ ಮುಂದೆ ಬಂದು ಚಲುವನಾರಾಯಣನ ಉತ್ಸವವನ್ನು ನೋಡುವ ಮನಸ್ಸು ಮಾಡಲಿಲ್ಲ.
ವೃದ್ಧ ತಂದೆ ತಾಯಿಯರ ಸೇವೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಆ ಚಲುವನಾರಾಯಣನೂ ಮೆಚ್ಚಲಾರ ಎನ್ನುವದು ಆತನ ಭಾವನೆಯಾಗಿತ್ತು. ತಂದೆ ತಾಯಿಗಿಂತ ದೊಡ್ಡ ದೇವರು ಯಾರಿzರೆ ಅಲ್ಲವೇ? ತಂದೆತಾಯಿಯರ ಹಾ ಗೂ ವೃದ್ಧರ ಸೇವೆ ಶುಶ್ರೂಷೆಯ ವಿಷಯದಲ್ಲಿ ನಮ್ಮ ದೇಶದಲ್ಲಿ ದೊಡ್ಡ ಪರಂಪ ರೆಯೇ ಇದೆ. ಅಂಧ ತಂದೆ ತಾಯಿಯರನ್ನು ಹೊತ್ತು ತೀರ್ಥಯಾತ್ರೆಗೆ ಹೋದ ಶ್ರವಣಕುಮಾರನ ಕಥೆ ಯನ್ನು ನಾವು ಕೇಳಿಯೇ ಇದ್ದೇವೆ. ವಾಲ್ಮೀಕಿ ರಾಮಾಯಣದಲ್ಲಿ ಸೀತಾ ದೇವಿಯು ಲಕ್ಷ್ಮಣನ ಗುಣಗಾನ ಮಾಡುವಾಗ ವೃದ್ಧೋಪಸೇವಿ ಲಕ್ಷ್ಮೀ ವಾನ್ ಶಕ್ತೋ ನ ಬಹುಭಾಷಿತಾ ಎಂದು ವರ್ಣಿಸುತ್ತಾಳೆ.
ಇದರರ್ಥ ಲಕ್ಷ್ಮಣನು ನಿತ್ಯವೂ ಹಿರಿಯರ ಸೇವೆ ಮಾಡುವ ವನು, ಶ್ರೇಷ್ಠನು, ಸಮರ್ಥನು ಮತ್ತು ಅತಿಯಾಗಿ ಮಾತನಾ ಡದವನು ಎಂದಾಗುತ್ತದೆ. ಅಂದರೆ, ವೃದ್ಧರ ಸೇವೆ ಎನ್ನುವಂಥಾದ್ದನ್ನು ರಾಮಾಯಣ ಕಾಲದಲ್ಲಿ ಒಂದು ಗುಣ ಅಂತ ಪರಿಗಣಿಸಲ್ಪಡುತ್ತಿತ್ತು ಅಂದ ಹಾಗಾಯಿತು. ನಮಗೆ ಸಂಬಂಧವಿಲ್ಲದ ಯಾರೇ ವೃದ್ಧರಾದರೂ ಸರಿ, ಅವಕಾಶ ಸಿಕ್ಕಿದರೆ ಅವರಿಗೂ ನಮಸ್ಕರಿಬೇಕು ಅವರ ಸೇವೆ ಮಾಡಬೇಕು ಎನ್ನುವುದು ನಮ್ಮ ಭಾರತೀಯ ಸಂಸ್ಕೃತಿ.
‘ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾ ಯಶೋ ಬಲಮ’ ಯಾವ ವ್ಯಕ್ತಿಯು ನಿತ್ಯವೂ ಹಿರಿಯರಿಗೆ ಗೌರವದಿಂದ ನಮಸ್ಕರಿಸುತ್ತಾನೋ ಹಾಗೂ ಅವರ ಸೇವೆ ಮಾಡುತ್ತಾನೋ, ಅಂತಹ ವ್ಯಕ್ತಿಗೆ ಆಯಸ್ಸು, ವಿದ್ಯೆ, ಕೀರ್ತಿ ಮತ್ತು ಶಕ್ತಿ ಎಂಬ ನಾಲ್ಕು ಶ್ರೇಷ್ಠ ಸಂಪತ್ತುಗಳು ನಿರಂತರವಾಗಿ ವೃದ್ಧಿಯಾಗುತ್ತವೆ.
ಇದು ಮನುಸ್ಮೃತಿಯಲ್ಲಿ ಉಖವಾಗಿರುವ ಅತ್ಯಂತ ಪ್ರಸಿದ್ಧ ನೀತಿ ಶ್ಲೋಕವಾಗಿದೆ. ನಮಗೆ ಮನು ಸ್ಮೃತಿಯೇ ಅಪಥ್ಯವಾಗಿ ರುವಾಗ ಅದರೊಳಗಡಕವಾಗಿರುವ ಹಿತವಚನ ಯಾರಿಗೆ ಬೇಕು ಹೇಳಿ. ಕಾಲ ಬದಲಾಗಿದೆ, ಈಗ ಮನೆಯಲ್ಲಿ ಆಣ್ಣ ತಮ್ಮಂದಿರ ನಡುವೆ ಅಸ್ತಿ ಪಾಲು ಮಾಡುವ ಸಂದರ್ಭ ದಲ್ಲಿ ಮುಖ್ಯವಾಗಿ ಚರ್ಚೆಯಾಗುವ ವಿಷ್ಯ ಯಾವುದು ಗೊತ್ತ? ವೃದ್ಧ ತಂದೆತಾಯಿಯರನ್ನು ಯಾರ ಪಾಲಿಗೆ ಕೊಡುವುದು ಅಂತ? ವಾಸ್ತವಿಕವಾಗಿ ಅವರು ಯಾರಿಗೂ ಬೇಡವಾದವರು, ವೃದ್ಧ ತಂದೆ ತಾಯಿಯರ ಸೇವೆ ಯಾರಿಗೂ ಬೇಡದ್ದು, ಕಾರಣ ಅದು ಕೀರ್ತಿ ಹಣ ಪ್ರಚಾರ ಯಾವುದನ್ನೂ ತಂದು ಕೊಡುವಂಥಾದ್ದಲ್ಲವಲ್ಲ.
‘ಒಂದು ವಯಸ್ಸಾದ ಮೇಲೆ ಮನುಷ್ಯ ಇರಬಾ ರದು, ಇದ್ದರೆ ಅದು ಬೇರೆಯವರಿಗೆ ತೋದರೆ ಕೊಡಲು ಮಾತ್ರ’ ಅಂತ ಮನೆಯಲ್ಲಿರುವ ವಯೋವೃದ್ಧರೆದುರೇ ಆಡಿಕೊಂಡರೆ? ಆ ಹಿರಿಯ ಜೀವಗಳ ಸ್ಥಿತಿಯನ್ನು ಕಲ್ಪನೆ ಮಾಡಿನೋಡಿ!
ವಾಸ್ತವಿಕವಾಗಿ ಹಿರಿಯರಿಗೆ ಮಕ್ಕಳಿಂದ ಯಾವುದೇ ನಿರೀಕ್ಷೆಗಳಿರುವುದಿಲ್ಲ, ಸಣ್ಣಪುಟ್ಟ ಅಗತ್ಯ ಗಳಿಗೂ ಅವರು ಮಕ್ಕಳಿಗೆ ತೊಂದರೆ ಕೊಡಲು ಬಯಸುವುದಿಲ್ಲ, ಪಾಪ ಅವರಿಗೆ ಏನು ತೊಂದರೆ ಇದೆಯೋ ಗೊತ್ತಿಲ್ಲ, ನನ್ನ ಅಗತ್ಯಗಳನ್ನು ಹೇಳಿ ಅವರಿಗೆ ಹೊರೆಯಾಗಬಾರದು ಎಂದೇ ಯೋಚಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳಿಗೆ ತೊಂದರೆಯಿದ್ದಾಗ ತಮ್ಮಲ್ಲಿ ಅಳಿದುಳಿದಿರುವ ಹಣವನ್ನೂ ಕೊಡುವ ಮನಸ್ಸು ಮಾಡುತ್ತಾರೆ, ಕೈಲಾದ ಸಣ್ಣ ಸಣ್ಣ ಮನೆಕೆಲಸ ವನ್ನಾದರೂ ಮಾಡಿ ಅಷ್ಟರ ಮಟ್ಟಿಗೆ ಸಹಾಯಮಾಡಬೇಕು ಎನ್ನುವ ಮನಸ್ಥಿತಿ ಅವರಿಗಿರುತ್ತದೆ.
ಕೀಲು ನೋವು, ಮಧುಮೇಹ, ರಕ್ತದೊತ್ತಡ ಮುಂತಾದ ದೈಹಿಕ ಕಾಯಿಲೆಗಳು ವಯೋಸಹಜವಾಗಿ ವೃದ್ಧರನ್ನು ಕಾಡುತ್ತವೆ. ಜೊತೆಗೆ ಮರೆವಿನ ಕಾಯಿಲೆ (ಡಿಮೆನ್ಶಿಯಾ) ಮುಂತಾದ ಅನಾರೋಗ್ಯ ಪೀಡಿತರಾಗಿರುತ್ತಾರೆ. ಇವರಿಗೆ ವಿಶೇಷ ಆರೈಕೆ ಸಂತೈಕೆ ಬೇಕಾಗು ತ್ತದೆ. ಕೆಲಸದ ಒತ್ತಡ, ಮೊಮ್ಮಕ್ಕಳ ವ್ಯಾಸಂಗದ ಮುಂ ತಾದ ಕಾರಣಗಳಿಂದ ನಮಗೆ ನಮ್ಮ ಹಿರಿಯರಿಗೆ ಸಮಯ ಕೊಡಲಾಗುತ್ತಿಲ್ಲ.
ಎಲ್ಲರೂ ಇ ದ್ದರೂ ಹಿರಿಯರು ಮನೆಯಲ್ಲಿ ಒಂಟಿ ಯಾಗಿ ಅನಾಥ ಭಾವದಿಂದ ಕಾಲ ಕಳೆಯ ಬೇಕಾಗುತ್ತದೆ. ಅವರ ದಿನನಿತ್ಯದ ಚಟುವಟಿಕೆಗಳಲ್ಲಿ ಸಹಾಯ ಮಾಡುವುದು, ಸಮಯಕ್ಕೆ ಸರಿಯಾಗಿ ಔಷಧ ನೀಡುವುದು ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಮುಖ್ಯ. ಇವೆಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಭಾವನಾತ್ಮಕ ಬೆಂಬಲದ ಅಗತ್ಯವಿರುತ್ತದೆ. ಪ್ರತಿದಿನ ಅವರೊಂ ದಿಗೆ ಕುಳಿತು ನಾಲ್ಕು ಮಾತುಗಳನ್ನಾಡುವುದು, ಅವರ ಅನುಭ ವದ ಮಾತುಗಳನ್ನು ಆಲಿಸುವುದು, ಮನೆಯಲ್ಲಿ ಮುಖ್ಯವಾದ ತೀರ್ಮಾನಗಳಾಗುವಾಗ ಅವರ ಸಲಹೆ ಪಡೆಯುವುದು ಮಾಡಿದರೆ ಅವರಿಗೆ ಹೊಸ ಚೈತನ್ಯ ನೀಡುತ್ತದೆ. ಹಿರಿಯರಿಗೆ ಕುಟುಂಬದಿಂದ ಬೇಕಿರುವುದು ಸ್ವಲ್ಪ ಸಮಯ. ಗೌರವ ಹಾಗೂ ಪ್ರೀತಿಯ ನಾಲ್ಕು ಮಾತು. ವೃದ್ಧರ ಆರೈಕೆ ಎಂದರೆ ಕೇವಲ ಅವರಿಗೆ ಅನ್ನ, ವಸತಿ ನೀಡುವುದಷ್ಟೇ ಅಲ್ಲ. ಅದು ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಅಗತ್ಯಗಳನ್ನು ಗೌರವಯುತವಾಗಿ ಪೂರೈಸುವುದಾಗಿದೆ.
ಇಂದು ವೃದ್ಧರಾಗಿರುವವರು ನಿನ್ನೆ ನಮ್ಮಂತೆ ಯುವಕರಾಗಿದ್ದವರು ಮತ್ತು ದುಡಿದು ನಮ್ಮನ್ನು ಸಾಕಿದವರು, ನಮಗಾಗಿ ಅನೇಕ ತ್ಯಾಗ ಮಾಡಿದವರು. ನಾವು ನಾಳೆ ವೃದ್ಧರಾಗಲಿದ್ದೇವೆ ಎನ್ನುವುದು ಪ್ರಕೃತಿಯ ಅಲಿಖಿತ ನಿಯಮ. ನಾವು ಇಂದು ನಮ್ಮ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತೇವೆಯೋ, ನಮ್ಮ ಮುಂದಿನ ಪೀಳಿಗೆಯೂ ನಮ್ಮನ್ನು ಹಾಗೆಯೇ ನಡೆಸಿಕೊಳ್ಳುತ್ತದೆ. ನಾವು ವೃದ್ಧರಾದಾಗ ನಮ್ಮ ಮಕ್ಕಳು ಮೊಮ್ಮಕ್ಕಳು ನಮ್ಮನ್ನು ಹೇಗೆ ನೋಡಿಕೊಳ್ಳಬೇಕು ಎಂದು ಬಯಸುತ್ತೇವೋ, ಇಂದು ನಮ್ಮ ಮನೆಯ ಹಿರಿಯರ ಜೊತೆಗೆ ನಾವು ಹಾಗೆ ನಡೆದುಕೊಳ್ಳಬೇಕಾಗುತ್ತದೆ. ಅದನ್ನು ನಮ್ಮ ಮನೆಯ ಮಕ್ಕಳು ನೋಡುತ್ತಿರುತ್ತಾರೆ ಎನ್ನುವುದನ್ನು ಮರೆಯಬಾರದು.
ಒಂದು ಮನೆಯಲ್ಲಿ ಗಂಡ ಹೆಂಡತಿ ತಮ್ಮ ಪಾಲಕರಿಗೆ ಅಲ್ಯುಮಿನಿಯಮ್ ತಟ್ಟೆಯಲ್ಲಿ ದಿನನಿತ್ಯ ಹೊರಗೆ ಕೂಡ್ರಿಸಿ ಊಟ ಹಾಕುತ್ತಿದ್ದರು, ಹರುಕುಮುರುಕು ಹಾಸಿಗೆಯಲ್ಲಿ ಹೊರಗೆ ಮಲಗಿಸು ತ್ತಿದ್ದರು, ಒಟ್ಟಾರೆಯಾಗಿ ಹೇಳುವು ದಾದರೆ ಅವರನ್ನು ಅತ್ಯಂತ ನಿಕೃಷ್ಟವಾಗಿ ನೋಡಿಕೊಳ್ಳು ತ್ತಿದ್ದರು.
ವಯೋಸಹಜವಾಗಿ ಅವರು ನಿಧನರಾದ ಮೇಲೆ ಒಂದುದಿನ ಅವರ ಹಾಸಿಗೆ, ಊಟದ ತಟ್ಟೆಗಳನ್ನು ಭಿಕ್ಷುಕರಿಗೆ ಕೊಡಲನುವಾದಾಗ, ಆ ಸಣ್ಣ ಹುಡುಗ ಕೇಳುತ್ತಾನೆ, ಅಪ್ಪಾ ಅವುಗಳನ್ನು ಭಿಕ್ಷುಕರಿಗೆ ಕೊಟ್ಟರೆ, ನಿಮಗೆ ವಯಸ್ಸಾದಾಗ ಯಾವುದರಲ್ಲಿ ಊಟ ಮಾಡುತ್ತೀರಿ? ಎಲ್ಲಿ ಮಲಗುತ್ತೀರಿ? ಅರ್ಥವಾಯಿತಲ್ಲ, ನೀವು ನಿಮ್ಮ ತಂದೆ ತಾಯಿಯರಿಗೆ ಮಾಡಿದ್ದನ್ನೇ ನಾಳೆ ನಾನೂ ನಿಮಗೆ ಮಾಡಬೇಕಲ್ಲವೇ? ಎನ್ನುವುದು ಆ ಚಿಕ್ಕ ಬಾಲಕನ ಚಿಂತನೆ. ಮೊದಲೆಲ್ಲ ಒಬ್ಬರಿಗೆ ನಾಲ್ಕಾರು ಜನ ಮಕ್ಕಳಿರುತ್ತಿದ್ದರು, ಒಂದೆರಡು ಜನ ಕೆಲಸಕಾರ್ಯಗಳಿಗಾಗಿ ಹೊರಗಿದ್ದರೂ, ಮನೆಯಲ್ಲಿದ್ದ ಒಂದೆರಡು ಮಕ್ಕಳು ತಂದೆತಾಯಿಯರನ್ನು ನೋಡಿಕೊಳ್ಳುತ್ತಿದ್ದರು. ಬದಲಾದ ಕಾಲಘಟ್ಟದಲ್ಲೀಗ ಸಮಾಜವಿದೆ.
ಒಬ್ಬನೇ ಮಗ ಅಥವಾ ಮಗಳು, ಅವರೂ ದೂರದೂರಿನಲ್ಲಿ ಕೆಲಸಮಾಡುತ್ತಿರುತ್ತಾರೆ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಬೇಕು, ಅದು ಅನಿವಾರ್ಯವೂ ಹೌದು ಎನ್ನಿ, ಆಗ ತಂದೆ ತಾಯಿಯನ್ನು ನೋಡಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಸಹಜ. ಅದಕ್ಕೂ ಸಮಂಜಸವಾದ ಒಂದು ವ್ಯವಸ್ಥೆಯನ್ನು ತಮ್ಮ ಮಿತಿಯೊಳಗೆ ಕಂಡುಕೊಳ್ಳಲು ಸಾಧ್ಯವಿದೆ. ಮೊನ್ನೆಮೊನ್ನೆ ದೇವೇಗೌಡರ ಪತ್ನಿ ಚೆನ್ನಮ್ಮನವರು ತೀರಿಕೊಂಡಾಗ ಅವರ ಅಳಿಯ ಡಾ.ಮಂಜುನಾಥ್ ಅವರು ಹೇಳುತ್ತಿದ್ದುದ್ದನ್ನು ಕೇಳುತ್ತಿದ್ದೆ.
ಅವರಿಗೆ ಮನೆಯ ‘ಐಸಿಯು’ ಮಾದರಿಯ ವ್ಯವಸ್ಥೆ ಮಾಡಿದ್ವಿ ಅಂತಾ ಹೇಳ್ತಾ ಇದ್ರು. ಇಂಥಾ ಏನಾದರೂ ಪರ್ಯಾಯವನ್ನು ಎಲ್ಲರೂ ಕಂಡುಕೊಳ್ಳಬಹುದೇನೋ! ವೃದ್ಧರ ಸೇವೆ ಮಾಡಬೇಕು ಎನ್ನುವುದೇನೋ ನಿಜ. ಆದರೆ ಅದು ನಾವು ತಿಳಿದುಕೊಂಡಷ್ಟು ಸುಲಭವಲ್ಲ. ಅದಕ್ಕೆ ಬಹಳ ತಾಳ್ಮೆ, ಸಂಯಮ, ಸೇವಾಭಾವ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಕರ್ತವ್ಯಪ್ರಜ್ಞೆ ಇರಬೇಕಾಗುತ್ತೆ.
ಎರಡು ವಾರಗಳ ಹಿಂದೆ ಶಿಶಿರ ಹೆಗಡೆಯವರು ತಮ್ಮ ಅಂಕಣದಲ್ಲಿ ಬರೆದಂತೆ, ರೋಗಿಗಳನ್ನು, ವೃದ್ಧರನ್ನು ನೋಡಿಕೊಳ್ಳಲು ಕೊಳಕು ಅಸಹ್ಯಗಳನ್ನು ಮೀರಿ ನಿಲ್ಲುವ ಮಾನವೀಯತೆಯ ಅಗತ್ಯವಿರುತ್ತೆ. ಸಣ್ಣ ಮಕ್ಕಳ ಮಲಮೂತ್ರವನ್ನು ಸ್ವಚ್ಛ ಮಾಡುವುದರಲ್ಲಿ ಏನೋ ಸಂತೋಷ, ಅದೇ ಕೆಲಸವನ್ನು ಅನ್ಯರ ಸಹಾಯದಿಂದಲೇ ಜೀವನ ನಡೆಸಬೇಕಾದ ವೃದ್ಧರ ವಿಷಯದಲ್ಲಿ ಮಾಡಬೇ ಕಾದಾಗ ಏನೋ ಅಸಹ್ಯ, ಗಲೀಜು, ಯಾತನೆ. ಮನುಷ್ಯ ಸ್ವಭಾವದ ವೈಪರೀತ್ಯ ನೋಡಿ! ಮುದ್ದು ಚಿನ್ನ ಬಂಗಾರ ಎನ್ನುತ್ತ ಕೈತುತ್ತಿಕ್ಕಿದವರು, ತಮ್ಮ ವೃದ್ಧಾಪ್ಯದಲ್ಲಿ ಗೌರವದ ತುತ್ತು ಅನ್ನವನ್ನು ಮಕ್ಕಳಿಂದ ನಿರೀಕ್ಷೆ ಮಾಡಬಾರದೇ? ಶ್ರವಣಕುಮಾರನಂತೆ ನಾವು ಪಾಲಕರನ್ನು ಹೆಗಲಲ್ಲಿ ಹೊತ್ತು ಯಾತ್ರೆಗೆ ಕರೆದುಕೊಂಡು ಹೋಗಬೇಕಾಗಿಲ್ಲ, ಅವರ ಜೊತೆ ನಗುತ್ತಾ ನಾಲ್ಕು ಹೆಜ್ಜೆ ಹಾಕಿದರೆ, ಅವರು ಜಾರದಂತೆ ಕೈಹಿಡಿದರೆ ಅಷ್ಟೇ ಸಾಕಾಗುತ್ತದೆ.
ವೃದ್ಧಾಪ್ಯ ಎನ್ನುವುದು ಶಾಪವಲ್ಲ, ಅದು ಜೀವನದ ಮತ್ತೊಂದು ಹಂತ. ಹಾಗಾಗಿ ಹಿರಿಯರನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ. ಅವರ ಮುಖದಲ್ಲಿ ಮೂಡುವ ಒಂದು ಸಣ್ಣ ನಗು, ನಾವು ಮಾಡುವ ಕೋಟಿ ಪೂಜೆಗಳಿಗಿಂತ ಮಿಗಿಲಾದzಗಿದೆ. ಮಕ್ಕಳೇ ಸ್ವತಃ ಪಕ್ಕ ನಿಂತು ಶುಶ್ರೂಷೆ ಮಾಡುವುದು ಇಂದಿನ ಕಾಲದಲ್ಲಿ ‘ಪ್ರ್ಯಾಕ್ಟಿಕಲಿ’ ಕಷ್ಟವೇ ಎನ್ನುವುದನ್ನು ಒಪ್ಪೋಣ.
ಆದ್ರೆ ಮನೆಯ ಏನಾದ್ರೂ ಪರ್ಯಾಯ ವ್ಯವಸ್ಥೆ ಮಾಡಿ, ವೃದ್ಧಾಶ್ರಮಕ್ಕೆ ಮಾತ್ರ ಕಳಿಸಬೇಡಿ. ವಯಸ್ಸಾದ ತಂದೆತಾಯಿಯರನ್ನು ವೃದ್ಧಾಶ್ರಮಕ್ಕೆ ಕಳಿಸುವುದಕ್ಕೂ, ಹಾಲುಕರೆಯದ ಬರಡು ಹಸುವನ್ನು ಕಸಾಯಿಖಾನೆಗೆ ಕಳುಹಿಸುವುದಕ್ಕೂ ಬಹಳ ವ್ಯತ್ಯಾಸವಿಲ್ಲ. ನಾಲ್ಕು ಜನ ಓದುಗರ ಮನಸ್ಸು ಪರಿವರ್ತಿತವಾದರೆ ನನ್ನ ಈ ಅಂಕಣ ಬರಹ ಸಾರ್ಥಕವಾದಂತೆ.