Vinayaka M Bhat Column: ನಾನು ಯಾರು ಗೊತ್ತಾ ? ಎಂಬ ಅತ್ಯಂತ ಅಪಾಯಕಾರಿ ಪ್ರಶ್ನೆ
ಮುಖ್ಯಮಂತ್ರಿಗಳು ಅಲ್ಲಿನ ಮಹಿಳೆಯೊಬ್ಬರ ಬಳಿ ಮಾತನಾಡುವಾಗ, ಸರಕಾರದ ಗ್ಯಾರಂಟಿ ಯೋಜನೆ ಗಳ ಬಗ್ಗೆ ಮಾತನಾಡುತ್ತಾ ನಮ್ಮ ಯೋಜನೆಗಳು ನಿಮಗೆ ಸರಿಯಾಗಿ ತಲುಪುತ್ತಿದೆಯಾ? ಈ ಅನುಕೂಲ ಗಳನ್ನೆಲ್ಲ ಮಾಡಿದ್ದು ಯಾರು ಗೊತ್ತಾ? ಎಂದು ಕೇಳಿದರು. ಅದಕ್ಕೆ ಆ ಮಹಿಳೆ, ಓಹೋ ಗೊತ್ತಿಲ್ಲದೇ ಏನು! ಸಿದ್ದರಾಮಯ್ಯ ಮಾಡಿದ್ದು ಎಂದುಬಿಟ್ಟಳು!
-
ವಿದ್ಯಮಾನ
ಹಿಂದೆ ರಾಜರುಗಳು ಜನರ ನಾಡಿಮಿಡಿತ ತಿಳಿಯಲು ಮಾರು ವೇಷದಲ್ಲಿ ತಿರುಗುತ್ತಿದ್ದರು. ರಾಜನ ಹಾಗೂ ಆಡಳಿತದ ಬಗ್ಗೆ ಜನರ ಅಭಿಪ್ರಾಯವನ್ನು ನೇರವಾಗಿ ತಿಳಿಯುವುದು ಆ ಛದ್ಮವೇಷದ ಉದ್ದೇಶ ವಾಗಿರುತ್ತಿತ್ತು. ಈಗ ಮಂತ್ರಿಗಳು ಕಚೇರಿ, ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು ಮುಂತಾದ ಸಾರ್ವಜನಿಕ ಜಾಗಗಳಿಗೆ ಽಡೀರ್ ಭೇಟಿಯಿತ್ತು ‘ರಿಯಾಲಿಟಿ ಚೆಕ್’ ಮಾಡುವುದನ್ನು ನಾವು ನೋಡುತ್ತಿರುತ್ತೇವೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಬಿಜೆಪಿ ಶಾಸಕ ಪರಾಗ್ ಶಾ ಅವರು ತಮ್ಮ ಗುರುಗಳ ಆದೇಶದಂತೆ ಮುಂಬೈನಲ್ಲಿ ಭಿಕ್ಷುಕನ ವೇಷ ಧರಿಸಿ ಜನರ ಮಧ್ಯೆ ಓಡಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಮೊನ್ನೆಮೊನ್ನೆ ಕರ್ನಾಟಕದ ಮುಖ್ಯಮಂತ್ರಿಗಳು ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರು ಕಟ್ಟೆಗೆ ಹಠಾತ್ ಭೇಟಿ ನೀಡಿರುವುದನ್ನೂ ನಾವು ನೋಡಿದ್ದೇವೆ. ಡಿಕೆ ಶಿವಕುಮಾರ್ ಅವರ ಈ ಭೇಟಿಯ ಸಮಯದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆಯಿತು.
ಮುಖ್ಯಮಂತ್ರಿಗಳು ಅಲ್ಲಿನ ಮಹಿಳೆಯೊಬ್ಬರ ಬಳಿ ಮಾತನಾಡುವಾಗ, ಸರಕಾರದ ಗ್ಯಾರಂಟಿ ಯೋಜನೆ ಗಳ ಬಗ್ಗೆ ಮಾತನಾಡುತ್ತಾ ನಮ್ಮ ಯೋಜನೆಗಳು ನಿಮಗೆ ಸರಿಯಾಗಿ ತಲುಪುತ್ತಿದೆಯಾ? ಈ ಅನುಕೂಲ ಗಳನ್ನೆಲ್ಲ ಮಾಡಿದ್ದು ಯಾರು ಗೊತ್ತಾ? ಎಂದು ಕೇಳಿದರು. ಅದಕ್ಕೆ ಆ ಮಹಿಳೆ, ಓಹೋ ಗೊತ್ತಿಲ್ಲದೇ ಏನು! ಸಿದ್ದರಾಮಯ್ಯ ಮಾಡಿದ್ದು ಎಂದುಬಿಟ್ಟಳು! ನೀವೇ ಮಾಡಿದ್ದು ಅಥವಾ ಕಾಂಗ್ರೆಸ್ ಸರಕಾರ ಮಾಡಿದ್ದು ಎನ್ನುವ ಉತ್ತರವನ್ನು ಆಕೆಯಿಂದ ಮುಖ್ಯಮಂತ್ರಿಗಳು ನಿರೀಕ್ಷೆ ಮಾಡಿದ್ದರೋ ಏನೋ! ಮುಖ್ಯಮಂತ್ರಿ ಗಳು ಅಷ್ಟಕ್ಕೇ ಬಿಡದೆ, ನಾನು ಯಾರು ಗೊತ್ತಾಯ್ತಾ? ಎಂದು ಆಕೆಯನ್ನು ಪ್ರಶ್ನಿಸಿದರು.
ಇದನ್ನೂ ಓದಿ: Vinayak M Bhat Column: ವಿನಾಯಕನೇ ಸುಂದರ, ನಿಜಾರ್ಥದಲ್ಲಿ ಧುರಂಧರ
ಆ ಮುಗ್ಧ ಮಹಿಳೆಗೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬದಲಾವಣೆಗಳಾಗಲಿ, ಇವರೇ ಹೊಸ ಮುಖ್ಯಮಂತ್ರಿಗಳು ಎನ್ನುವುದಾಗಲಿ ತಿಳಿದಿರಲಿಲ್ಲ. ಆಕೆ ಎರಡೂ ಕೈಜೋಡಿಸಿ ನೀವು ಯಾರು ಅಂತ ಗೊತ್ತಿಲ್ಲ ಸ್ವಾಮಿ ಎಂದುಬಿಟ್ಟಳು! ಹತ್ತಾರು ಕ್ಯಾಮೆರಾ ಕಣ್ಣುಗಳ ಮುಂದೆ ಜನಪ್ರಿಯ ಮುಖ್ಯಮಂತ್ರಿ ಯಾದ ಡಿ.ಕೆ.ಶಿವಕುಮಾರ್ ಅವರಿಗೆ ಮುಜುಗರವಾದರೂ ಅದನ್ನ ತೋರಿಸಿಕೊಳ್ಳದೇ ಪರಿಸ್ಥಿತಿಯನ್ನು ನಗುಮುಖದಿಂದಲೇ ಎದುರಿಸಿ ಸೈ ಎನಿಸಿಕೊಂಡರು. ಇದೇ ರೀತಿ ಒಮ್ಮೆ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿದ್ದ ಟೋನಿ ಬ್ಲೇರ್ ಸಾಮಾನ್ಯ ಬಸ್ಸೊಂದರಲ್ಲಿ ಪ್ರಯಾಣಿಸಲು ನಿರ್ಧರಿಸಿದರು.
ಟಿಕೆಟ್ ನೀಡಲು ಬಂದ ಕಂಡಕ್ಟರ್ ಹತ್ತಿರ ಟೋನಿ ಬ್ಲೇರ್ ಹಸನ್ಮುಖಿಯಾಗಿ, ನಾನು ಯಾರು ಗೊತ್ತಾಯ್ತ ಎಂದರಂತೆ. ಕಂಡಕ್ಟರ್ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಅತ್ಯಂತ ಗಂಭೀರವಾಗಿ, ಯಾರಾದ್ರೂ ಸರಿ ಮೊದಲು ನಾಲ್ಕು ಪೌಂಡ್ ಕೊಟ್ಟು ಟಿಕೆಟ್ ತಗೊಳಿ ಎಂದುಬಿಟ್ಟನಂತೆ!
ತನ್ನ ಜನಪ್ರಿಯತೆ ಅಧಿಕಾರ ಇವುಗಳು ಕಂಡಕ್ಟರ್ ಮುಂದೆ ಕೆಲಸಕ್ಕೆ ಬಂದಿಲ್ಲ ಎನ್ನುವುದನ್ನರಿತ ಟೋನಿ ಬ್ಲೇರ್, ಮುಜುಗರದಿಂದ ಟಿಕೆಟ್ ಪಡೆದು ಸುಮ್ಮನೇ ಕುಳಿತರಂತೆ. ನನ್ನ ಪ್ರಕಾರ, ಒಬ್ಬ ಪ್ರಭಾವಿ ವ್ಯಕ್ತಿ ಮುಗ್ಧ ಜನರ ಮುಂದೆ ನಾನು ಯಾರು ಗೊತ್ತಾಯ್ತಾ? ಎಂದು ಕೇಳುವುದಂದರೆ ಅಪಾಯಕ್ಕೆ ಆಮಂತ್ರಣ ವಿತ್ತಂತೆ, ಅದೊಂದು ದೊಡ್ಡ ಸಾಹಸದ ಕೆಲಸವೇ ಸರಿ.
ಒಂದೊಮ್ಮೆ, ಡಿಕೆ ಶಿವಕುಮಾರ್ ಅವರಿಗೆ ಈ ಮಹಿಳೆ ಹೇಳಿದಂತೆ ‘ಗೊತ್ತಿಲ್ಲ’ ಅಂದುಬಿಟ್ಟರೆ ಆಗುವ ಅವಮಾನದ ಪ್ರಮಾಣ ಏನಿದೆ, ಅದು ‘ನೀವ್ಯಾರಿಗೆ ಗೊತ್ತಿಲ್ಲ ಹೇಳಿ’ ಎಂದಾಗ ಸಿಗುವ ಸನ್ಮಾನಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿರುತ್ತದೆ. ತನ್ನ ಖ್ಯಾತಿಯ ಭ್ರಮೆಯ ಇರುವ ಸಿಲೆಬ್ರಿಟಿಗಳಿಗೆ, ಜನ ಅವರನ್ನು ಗುರುತಿಸದಿzಗ ಆಗುವ ಅವಮಾನಕ್ಕಿಂತ ದೊಡ್ಡ ಅವಮಾನ ಬೇರೊಂದಿರುವು ದಿಲ್ಲ.
ಒಮ್ಮೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸೆಂಟರಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿ ನೀಡಿದ್ದರು. ಏನೋ ವಿಶೇಷ ಕಾರ್ಯಕ್ರಮವಿರುವುದರಿಂದ ಸಾವಿರಾರು ಜನ ಭಕ್ತರು ಆಶ್ರಮದಲ್ಲಿ ಸೇರಿದ್ದರು. ಆ ಸಾವಿರಾರು ಭಕ್ತರುಗಳ ಮಧ್ಯೆ ಶ್ರೀ ರವಿಶಂಕರ್ ಅವರು ಸಾಗಬೇಕಿತ್ತು ಅಂತ ಕಾಣುತ್ತೆ. ಆ ಸಂದರ್ಭದಲ್ಲಿ, ಶ್ರೀ ರವಿಶಂಕರ್ ಅವರು ಜೊತೆಯಾಗಿ ಬರುವಂತೆ ರಜನಿಕಾಂತ ಅವರನ್ನು ಕೇಳಿಕೊಂಡರಂತೆ.
ಇಲ್ಲ, ನಾನು ನಿಮ್ಮ ಜೊತೆಗೆ ಬಂದರೆ ಜನರ ಗಮನ ನನ್ನ ಕಡೆಗೆ ಹರಿಯುತ್ತೆ, ನನ್ನ ಪರ ಘೋಷಣೆ ಕೂಗುವುದು, ಕೈ ಬೀಸುವುದು, ಹಸ್ತಾಕ್ಷರ ಕೇಳುವುದು ಮುಂತಾದ ಅನಪೇಕ್ಷಿತ ಘಟನೆಗಳು ನಡೆಯುತ್ತವೆ, ನೀವೊಬ್ಬರೇ ಸಾಗುವುದು ಉಚಿತ ಎಂದರಂತೆ. ತೊಂದರೆ ಇಲ್ಲ ಬನ್ನಿ ಹೋಗೋಣ ಎಂದು ಶ್ರೀ ಶ್ರೀ ಅವರು ಒತ್ತಾಯ ಮಾಡಿದಾಗ ಅನ್ಯ ಉಪಾಯವಿಲ್ಲದೇ ರಜನಿಕಾಂತ್ ಅವರು ರವಿಶಂಕರ್ ಜೊತೆಗೆ ಸಾವಿರಾರು ಜನರ ಮಧ್ಯೆ ತೆರಳಿದರಂತೆ. ಆದರೆ ರಜನಿಕಾಂತ್ ನಿರೀಕ್ಷಿಸಿದಂತೆ ಯಾರೂ ರಜನಿ ಪರ ಘೋಷಣೆ ಕೂಗಲೇ ಇಲ್ಲ, ಅಥವಾ ರಜನಿಯನ್ನು ನೋಡಿ ರೋಮಾಂಚಿತ ರಾಗಲಿಲ್ಲ, ಕೈಬೀಸಲಿಲ್ಲ, ಅವರೇ ಜನರತ್ತ ಕೈಬೀಸಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ, ಅಂದು ರಜನಿಯನ್ನು ಜನ ಸಂಪೂರ್ಣವಾಗಿ ನಿರ್ಲಕ್ಷ ಮಾಡಿಬಿಟ್ಟಿದ್ದರು.
ಎಲ್ಲರ ಕಣ್ಣುಗಳು ಶ್ರೀ ರವಿಶಂಕರ್ ಮೇಲೆ ಇತ್ತು. Stardom is temporary, it comes today and goes tomorrow but spirituality is permanent, that is the power of spirituality. ನಾನು ರವಿಶಂಕರ್‌ಗಿಂತಲೂ ಜನಪ್ರಿಯನಿದ್ದೇನೆ ಅಂದುಕೊಂಡಿದ್ದೆ, ಆದರೆ ಅಂದು ನನ್ನ ಅಹಂಕಾರ ನುಚ್ಚುನೂರಾಗಿ ಹೋಯಿತು ಎಂದು ಹೇಳಿ ರಜನಿ ಆತ್ಮಾವಲೋಕನ ಮಾಡಿಕೊಂಡಿದ್ದರು. ಬಂಡಾಯ ಸಾಹಿತಿ ಸಿದ್ದಲಿಂಗಯ್ಯನವರು ತಮ್ಮ ಸಾಹಿತ್ಯದಿಂದ ಸದ್ದು ಮಾಡುತ್ತಿದ್ದ ಕಾಲ. ಆ ದಿನಗಳಲ್ಲಿ ಪತ್ರಿಕೆಗಳಲ್ಲಿ ಸಿದ್ದಲಿಂಗಯ್ಯನವರ ಬರಹಗಳು, ಫೋಟೋಗಳು ಹಾಗೂ ಸಂದರ್ಶನ ಗಳು ಆಗಾಗ ಪ್ರಕಟವಾಗುತ್ತಿದ್ದವು. ಆ ದಿನಗಳಲ್ಲಿ ಸಿದ್ದಲಿಂಗಯ್ಯನವರು ಹೋಟೆಲೊಂದರಲ್ಲಿ ಊಟಕ್ಕೆ ಕುಳಿತಿದ್ದರಂತೆ. ಎದುರಿನ ಟೇಬಲ್‌ನಲ್ಲಿದ್ದ ವ್ಯಕ್ತಿಯೊಬ್ಬ ಇವರನ್ನೇ ಎವೆಯಿಕ್ಕದೇ ನೋಡುತ್ತಿದ್ದ.
ಸಿದ್ದಲಿಂಗಯ್ಯನವರಿಗೆ ಮನಸ್ಸಿನ ಒಂದು ರೀತಿಯ ‘ಸೆಲೆಬ್ರಿಟಿ ಫೀಲಿಂಗ್’! ಈತ ಪತ್ರಿಕೆಗಳಲ್ಲಿ ನನ್ನ ಫೋಟೋ ನೋಡಿರಬೇಕು, ನನ್ನ ಸಾಹಿತ್ಯಿಕ ಧೋರಣೆಗಳ ಅಭಿಮಾನಿಯಾಗಿರಬೇಕು. ಅಬ್ಬಾ! ನಮ್ಮಂಥ ಪ್ರಖ್ಯಾತರಿಗೆ ಹೊರಗೆ ನೆಮ್ಮದಿಯಾಗಿ ಊಟ ಮಾಡಲು ಕೂಡಾ ಬಿಡುವುದಿಲ್ಲ ಈ ಜನ, ಖಾಸಗಿತನವನ್ನೇ ಕಸಿದುಕೊಳ್ಳುತ್ತಾರೆ ಎಂದುಕೊಳ್ಳುತ್ತಾ ಹಮ್ಮಿನಿಂದಲೇ ಊಟ ಮಾಡುತ್ತಿದ್ದರು. ಕೊನೆಗೆ ತಡೆಯಲಾರದೆ ಆತನಿಂದ ಪ್ರಶಂಸೆಯನ್ನು ನಿರೀಕ್ಷಿಸಿ, ನನ್ನನ್ನು ಮೊದಲು ಎಲ್ಲಿ ನೋಡಿದ್ದೀರಿ? ಪೇಪರಿನಲ್ಲಿರಬೇಕಲ್ಲವೇ? ಎಂದು ತಾವೇ ಮಾತುಕತೆಗೆ ಎಳೆದರು. ಅದಕ್ಕೆ ಅ ವ್ಯಕ್ತಿ ನೀನು ನಮ್ಮ ಹಾಸ್ಟೇಲಿಗೆ ತರಕಾರಿ ಹಾಕುವವನಲ್ಲವೇ? ಎಂದುಬಿಟ್ಟ!
ಸಿದ್ದಲಿಂಗಯ್ಯನವರ ಸೆಲೆಬ್ರಿಟಿ ಗುಂಗು ಕ್ಷಣಾರ್ಧದಲ್ಲಿ ಕರಗಿ ನೀರಾಗಿ ಹೋಯಿತು. ನಿನ್ನೆ ಯಾಕೆ ತರಕಾರಿ ಹಾಕಲಿಲ್ಲ? ಎಂದು ಆತ ಗದರುವ ಮುನ್ನವೇ ಕವಿವರ್ಯರು ಅಲ್ಲಿಂದ ಕಾಲು ಕಿತ್ತಿದ್ದ ರಂತೆ. ಸಿದ್ದಲಿಂಗಯ್ಯನವರು ಎಂಎಲ್ಸಿ ಆಗಿದ್ದ ಕಾಲವದು. ಹಿರಿಯ ಸಾಹಿತಿಗಳಾದ ಸುಮತೀಂದ್ರ ನಾಡಿಗರನ್ನು ಗೌರವದಿಂದ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕರೆದುಕೊಂಡು ಬರುತ್ತಿದ್ದರಂತೆ. ಎದುರಿನಿಂದ ಅಂದಿನ ಪಶುಸಂಗೋಪನಾ ಸಚಿವ ಕೃಷ್ಣ ಅವರು ಪಟಾಲಂ ಜೊತೆ ತಮ್ಮ ಕಚೇರಿಯತ್ತ ಬರುತ್ತಿದ್ದರು.
ಮಂತ್ರಿಗಳನ್ನು ತಡೆದು ನಿಲ್ಲಿಸಿದ ಸಿದ್ದಲಿಂಗಯ್ಯನವರು, ಇವರು ಸುಮತೀಂದ್ರ ನಾಡಿಗರು ಸರ್, ಕನ್ನಡದ ಹಿರಿಯ ಸಾಹಿತಿಗಳು, ನನ್ನ ಗುರುಸಮಾನರು ಎಂದು ಭರ್ಜರಿ ಬಿಲ್ಡಪ್ ಕೊಟ್ಟು ಪರಿಚಯಿಸಿದರಂತೆ. ಸ್ವಲ್ಪ ಅಧ್ಯಯನಶೀಲರಾಗಿದ್ದ ಮಂತ್ರಿಗಳು ಕನ್ನಡನಾಡಿನಲ್ಲಿ ನಾಡಿಗರು ಯಾರಿಗೆ ಗೊತ್ತಿಲ್ಲ ಹೇಳಿ? ಅಷ್ಟು ಪ್ರಸಿದ್ಧ ಸಾಹಿತಿಗಳು ಅವರು, ಪರಿಚಯವಿಲ್ಲದೆ ಇದ್ದೀತೆ? ಎಂದು ತಮ್ಮ ಘನತೆಗೆ ತಕ್ಕಂತೆ ಮಾತನಾಡಿದರು ಪಾಪ.
ನಾಡಿಗರು ಸುಮ್ಮನಿದ್ದರೂ ಆಗುತ್ತಿತ್ತು, ಆದರೆ ಅವರು ಕೃಷ್ಣರತ್ತ ತಿರುಗಿ ಅದೆಲ್ಲ ಸರಿ, ನೀವು ಯಾರು ಅಂತ ಗೊತ್ತಾಗಲಿಲ್ಲ? ಅಂದುಬಿಟ್ಟರಂತೆ! ಸ್ವತಃ ಕ್ಯಾಬಿನೆಟ್ ಮಂತ್ರಿಯಾಗಿದ್ದ ಅವರಿಗೆ ಮುಖ ಕೆಂಪಗಾ ಯಿತು, ತಾನು ಮಂತ್ರಿಯಾಗಿದ್ದೇವೇ ಅಂತ ಅನಿಸಿರಬೇಕು ಅವರಿಗೆ ಪಾಪ. ಅಲ್ಲಿಗೇ ಬಿಡದ ನಾಡಿಗರು, ಅಂದಹಾಗೆ ನೀವು ಈಗ ಎಲ್ಲಿ ಕೆಲಸ ಮಾಡ್ಕೊಂಡಿದೀರಾ? ಎಂದರಂತೆ. ಮಂತ್ರಿಗಳು ಮಾತೇ ಹೊರಡದೆ ಪಕ್ಕದ ಗೋಡೆಗೆ ನೇತುಹಾಕಿದ್ದ ತಮ್ಮದೇ ಕಚೇರಿಯ ನಾಮಫಲಕ ವನ್ನು ತೋರಿಸಿದರು.
ಅದರಲ್ಲಿ ಕೃಷ್ಣ, ಪಶುಸಂಗೋಪನಾ ಸಚಿವರು ಅಂತ ಬರೆದಿತ್ತು. ನಾಡಿಗರು ಸುಮ್ಮನಿರಬೇಕಲ್ಲ! ಓಹೋ! ನೀವು ನಮ್ಮ ನಮ್ಮ ಕೃಷ್ಣ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೀರಾ? ಎಂದು ಬಿಟ್ಟರಂತೆ! ಮಂತ್ರಿಗಳಿಗೆ ಈ ಯಪ್ಪ ನನ್ನನ್ನು ಗುರುತಿಸುತ್ತಿಲ್ಲ ಎನ್ನುವ ಅವಮಾನ ಒಂದು ಕಡೆಯಾದರೆ, ತಮ್ಮ ಪಟಾಲಂ ಮುಂದೆಯೇ ಅವಮಾನವಾಯಿತಲ್ಲ ಎನ್ನುವ ದುಮ್ಮಾನ ಇನ್ನೊಂದು ಕಡೆ. ಈ ಎರಡೂ ಘಟನೆಯನ್ನು ಸ್ವತಃ ಸಿದ್ದಲಿಂಗಯ್ಯನವರೇ ಧಾರವಾಡದ ಒಂದು ಸಭೆಯಲ್ಲಿ ಹೇಳಿದ್ದರು.
ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಬದುಕಿನಲ್ಲೂ ಇಂತಹ ಒಂದು ಘಟನೆ ನಡೆದಿತ್ತು. ಒಮ್ಮೆ ಅವರು ಹಳ್ಳಿಯ ಭಾಗದಲ್ಲಿ ಶೂಟಿಂಗ್ ಮುಗಿಸಿ ಮರದ ಕೆಳಗೆ ವಿಶ್ರಮಿಸುತ್ತಿದ್ದರು. ಆಗ ಆ ಕಡೆಯಿಂದ ದನ ಮೇಯಿಸುತ್ತಾ ಬಂದ ಒಬ್ಬ ಹಿರಿಯ ಹಳ್ಳಿಗ ರಾಜಕುಮಾರ್ ಅವರ ಪಕ್ಕದ ಬಂದು ಕುಳಿತ. ಬಿಳಿ ಪಂಚೆ ಅಂಗಿ ಧರಿಸಿ ಕುಳಿತಿದ್ದ ರಾಜಕುಮಾರ್ ಅವರನ್ನು ಸಾಮಾನ್ಯ ಹಳ್ಳಿಯ ವ್ಯಕ್ತಿ ಎಂದು ಭಾವಿಸಿದ ಆ ವೃದ್ಧ, ಯಾವ ಊರಣ್ಣ ನಿಂದು? ಏನು ಕೆಲಸ ಮಾಡ್ತೀಯಾ? ಎಂದು ಕೇಳಿದ. ಅದಕ್ಕೆ ಅಣ್ಣಾವ್ರು ಅತ್ಯಂತ ವಿನಮ್ರತೆಯಿಂದ, ನಾವು ಸಿನಿಮಾ ಮಾಡ್ತೀವಿ ಕಣಯ್ಯ, ಎಂದರು.
ವೃದ್ಧ ತಲೆ ಆಡಿಸಿ, ಇರಲಿ ಇರಲಿ, ಹೊಟ್ಟೆಪಾಡು ಏನಾದ್ರೂ ಮಾಡ್ಬೇಕಲ್ಲ ಅಂದುಬಿಟ್ಟ! ಇಡೀ ಕರ್ನಾಟಕವೇ ಯಾರನ್ನು ದೇವರೆಂದು ಪೂಜಿಸುತ್ತಿತ್ತೋ, ಅಂತಹ ಮಹಾನ್ ನಟನನ್ನು ಹೊಟ್ಟೆ ಪಾಡಿಗೆ ಏನೋ ಮಾಡ್ತಾ ಇದ್ದಾನೆ ಎಂದು ಆತ ಭಾವಿಸಿದಾಗ ಅಣ್ಣಾವ್ರು ಬೇಸರ ಮಾಡಿಕೊಳ್ಳದೆ ಆಮೇಲೆ ಆತನ ಮುಗ್ಧತೆಯನ್ನು ನೆನೆದು ಮನಸಾರೆ ನಕ್ಕಿದ್ದರಂತೆ.
ಒಮ್ಮೆ ವರಕವಿ ದ ರಾ ಬೇಂದ್ರೆಯವರನ್ನು ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸ ಲಾಗಿತ್ತು. ಅವರು ಎಂದಿನಂತೆ ತಮ್ಮ ಸಾಧಾರಣ ಧೋತಿ, ಸಾದಾ ಶರ್ಟ್ ಮತ್ತು ಮೈಮೇಲೊಂದು ಶಾಲು ಹೊದ್ದು, ಒಬ್ಬರೇ ನಡೆದುಕೊಂಡು ಸಭಾಂಗಣದ ಕಡೆಗೆ ಬಂದರು. ಸಭಾಂಗಣದ ಮುಖ್ಯ ದ್ವಾರದಲ್ಲಿ ಕಾವಲು ಕಾಯುತ್ತಿದ್ದ ದ್ವಾರಪಾಲಕನು ತುಂಬಾ ಕಟ್ಟುನಿಟ್ಟಾ ಗಿದ್ದ. ಆತ ಬೇಂದ್ರೆಯವರನ್ನು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಪ್ಪಾಗಿ ಭಾವಿಸಿದ. ಬೇಂದ್ರೆಯವರನ್ನು ಗೇಟಿನ ತಡೆದು ನಿಲ್ಲಿಸಿದ ದ್ವಾರಪಾಲಕ, ನೀವು ಒಳಗೆ ಹೋಗುವಂತಿಲ್ಲ.
ಇದು ಕೇವಲ ಗಣ್ಯರು ಮತ್ತು ವಿಶೇಷ ಅತಿಥಿಗಳಿಗೆ ಮಾತ್ರ ಮೀಸಲಾಗಿರುವ ಸಭಾಂಗಣ. ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಗದರಿಸಿದ. ತಮಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದಾಗಲಿ, ತಾವು ಮುಖ್ಯ ಅತಿಥಿ ಎಂದಾಗಲಿ ಬೇಂದ್ರೆಯವರು ಅಲ್ಲಿ ಯಾವುದೇ ‘ಸೀನ್ ಕ್ರಿಯೇಟ್’ ಮಾಡಲಿಲ್ಲ, ದ್ವಾರಪಾಲಕನ ಮಾತನ್ನು ಕೇಳಿ ಮುಗುಳ್ನಕ್ಕ ಅವರು, ಸಭಾಂಗಣದ ಹೊರಗಿನ ಮೆಟ್ಟಿಲುಗಳ ಮೇಲೆ ಶಾಂತವಾಗಿ ಕುಳಿತುಕೊಂಡರು.
ಇತ್ತ ಸಭಾಂಗಣದ ಒಳಗಡೆ ಕಾರ್ಯಕ್ರಮದ ಸಮಯ ಮೀರುತ್ತಾ ಬಂದರೂ ಮುಖ್ಯ ಅತಿಥಿಗಳು ಬಾರದ್ದನ್ನು ಕಂಡು ಒಬ್ಬ ಸಂಘಟಕ ಹೊರಗೆ ಬಂದು ನೋಡಿದಾಗ ಬೇಂದ್ರೆಯವರು ಹೊರಗಿನ ಮೆಟ್ಟಿಲ ಮೇಲೆ ಆರಾಮವಾಗಿ ಕುಳಿತುಕೊಂಡಿರುವುದು ಕಂಡುಬಂತು. ವಿಷಯ ತಿಳಿದು ಸಂಘಟಕರು ದ್ವಾರಪಾಲಕನಿಗೆ ಬೈದು, ಬೇಂದ್ರೆಯವರ ಬಳಿ ಕ್ಷಮೆ ಯಾಚಿಸಲು ಮುಂದಾದರು. ಆಗ ಬೇಂದ್ರೆಯವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾ ಆ ದ್ವಾರಪಾಲಕ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾನೆ.
ಅವನಿಗೆ ‘ಮುಖ್ಯ ಅತಿಥಿ’ ಡಾ.ಬೇಂದ್ರೆಯವರನ್ನು ಒಳಗೆ ಬಿಡಲು ಹೇಳಲಾಗಿತ್ತು. ಆದರೆ ಆತ ನನ್ನನ್ನು ನೋಡಿದಾಗ ಅವನಿಗೆ ಕಂಡಿದ್ದು ಸಾಧಾರಣ ಮನುಷ್ಯ ಮಾತ್ರ. ಅದಕ್ಕೇ ಆತ ನನ್ನನ್ನು ತಡೆದಿದ್ದಾನೆ. ನಿಜವಾದ ಡಾ.ಬೇಂದ್ರೆ ಕಾಣುವುದು ನನ್ನ ಸಾಹಿತ್ಯದಲ್ಲಿ ಮಾತ್ರ, ನನ್ನ ಶರೀರ ದಿಂದಲ್ಲ ಎಂದಿದ್ದರಂತೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ, ಕವಿಗಳಿಗೆ, ರಾಜಕಾರಣಿಗಳಿಗೆ ಹಾಗೂ ಚಲನಚಿತ್ರ ನಟನಟಿ ಯರಿಗೆ ಇಡೀ ಜಗತ್ತು ತಮ್ಮನ್ನು ಕಣ್ಣಿಟ್ಟು ನೋಡುತ್ತಿದೆ, ನಾನೊಬ್ಬ ಜನಪ್ರಿಯ ಸ್ಟಾರ್ ಎನ್ನುವ ಭ್ರಮೆ ಅಥವಾ ‘ಸೆಲೆಬ್ರಿಟಿ ಫೀಲಿಂಗ್’ ಇರುವುದು ಸಹಜ.
ಆದರೆ ಒಮ್ಮೊಮ್ಮೆ ಈ ಭ್ರಮೆಗೆ ಮುಗ್ಧ ಜನರಿಂದ ಎಂಥಾ ಮರ್ಮಾಘಾತವಾಗಿ ಬಿಡುತ್ತದೆ ಎನ್ನುವುದಕ್ಕೆ ಈ ಕೆಲವು ಸ್ವಾರಸ್ಯಕರ ಪ್ರಸಂಗಗಳೇ ಸಾಕ್ಷಿ. ತಾವು ಸಮಾಜದಲ್ಲಿ ಎಷ್ಟು ದೊಡ್ಡ ಸಾಧಕರಾಗಿದ್ದರೂ ಎಲ್ಲರಿಗೂ ತಮ್ಮ ಪರಿಚಯವಿರಬೇಕೆಂದಿಲ್ಲ ಎನ್ನುವ ವಾಸ್ತವದ ನೆಲೆಗಟ್ಟಿ ನಲ್ಲಿ ಬದುಕುವ ವರಕವಿ ದ ರಾ ಬೇಂದ್ರೆ ಹಾಗೂ ವರನಟ ರಾಜಕುಮಾರ್ ಅವರಂಥವರು ಇವುಗಳನ್ನು ಅವಮಾನವೆಂದು ಭಾವಿಸದೇ ಸ್ವಾಭಾವಿಕವೆಂದು ಸ್ವೀಕರಿಸಿ ಇನ್ನೂ ದೊಡ್ಡವರಾಗು ತ್ತಾರೆ.