Shashidhara Halady Column: ಹಾಡಿ ಹಕ್ಕಲಿನಲ್ಲಿರುವ ಹಲವು ಹಣ್ಣುಗಳು !
ಹಲಸಿನ ಹಣ್ಣುಗಳು ಆರೆಂಟು ಕಿಲೋ ತೂಗಿದರೆ, ಹೆಬ್ಬಲಸಿನ ತೂಕ ನೂರಿನ್ನೂರು ಗ್ರಾಂಗಳಿಗೆ ಸೀಮಿತ. ಹಳ್ಳಿಯಲ್ಲಿದ್ದ ನಮ್ಮ ಮನೆ ಹತ್ತಿರ, ದರೆಗೆ ತಾಗಿಕೊಂಡು ಹೆಬ್ಬಲಸಿನ ಐದು ಮರಗಳಿದ್ದವು. ಇವುಗಳಲ್ಲಿ ಎರಡು ಒಂದೇ ರೀತಿಯ ಹಣ್ಣು ಕೊಡುತ್ತಿದ್ದವು, ಇನ್ನೆರಡೂ ಸಹ ತುಸು ಭಿನ್ನ ರುಚಿಯ ಹಣ್ಣನ್ನು ಕೊಡುತ್ತಿದ್ದವು, ಇನ್ನೊಂದು ಬೃಹದಾಕಾರದ ಮರ ಹೆಚ್ಚು ಕಾಯಿಗಳನ್ನೇ ಬಿಡುತ್ತಿರಲಿಲ್ಲ.
-
ಶಶಾಂಕಣ
ಎದುರು ಕಥೆ ಎಂದರೆ ನಿಮಗೆ ಗೊತ್ತೇ? ನಮ್ಮ ಹಳ್ಳಿಯಲ್ಲಿ ಬಳಕೆಯಲ್ಲಿರುವ ಒಗಟುಗಳನ್ನು ಪರಸ್ಪರ ಹೇಳಿಕೊಳ್ಳುವಾಗ, ‘ಎದುರು ಕಥೆ’ ಎಂದೇ ಅದನ್ನು ಕರೆಯುವುದು. ಒಬ್ಬರು ಒಂದು ಒಂದು ಒಗಟನ್ನು ಹೇಳಿದಾಗ, ಅದಕ್ಕೆ ಉತ್ತರ ಹೇಳಿದ ಎದುರಿದ್ದವರು, ಪ್ರತಿಯಾಗಿ ತಾವೂ ಒಂದು ಒಗಟನ್ನು ಹೇಳುವರು. ಇದೇ ರೀತಿ ಹಲವು ಒಗಟುಗಳ ಪರಸ್ಪರ ವಿನಿಮಯ, ಸವಾಲುಗಳು ಮುಂದುವರಿಯುತ್ತವೆ. ಕೊನೆಗೆ ಒಬ್ಬರ ಬಳಿಯಿರುವ ‘ಎದುರು ಕಥೆ’ (ಒಗಟು)ಗಳು ಖಾಲಿಯಾಗು ತ್ತವೆ; ಆಗ ಅವರು ಸೋತಂತೆ; ಅಲ್ಲಿಗೆ ಆ ದಿನದ ಎದುರುಕಥೆಯ ಸವಾಲಿನ ಸರಪಣಿ ಕೊನೆಗೊಳ್ಳುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಈ ಒಗಟು ಹೇಳುವುದು, ಒಡಪು ಹೇಳುವುದು, ಎದುರುಕಥೆ ಹೇಳುವುದು- ಇಂತಹ ಜನಪದ ಸಾರಸ್ವತ ಸವಾಲುಗಳು ಕ್ರಮೇಣ ಇಂದಿನ ಅಂತರ್ಜಾಲ ಯುಗದಲ್ಲಿ ಅಂತರ್ಧಾನವಾಗುತ್ತಿವೆ! ಇರಲಿ.
ನಮ್ಮ ಹಳ್ಳಿಯಲ್ಲಿ ಬಹಳ ಜನಪ್ರಿಯಾಗಿದ್ದ ಒಂದು ಎದುರು ಕಥೆ ಹೀಗಿದೆ: ‘ಅಂಗಾರ ಅಂಗಾರ ಅಪ್ಪಯ್ಯ, ತಗ್ಗಿಗೆ ಬಿದ್ದರೆ ಕುಪ್ಪಯ್ಯ, ಒತ್ತಿ ಕಂಡರೆ ಕೆಂಪಯ್ಯ’ ಇದು ಹೆಬ್ಬಲಸಿನ ಹಣ್ಣಿನ ಬಗ್ಗೆ ಇರುವ ಒಂದು ಎದುರುಕಥೆ (ಒಗಟು). ಬಯಲು ಸೀಮೆಯವರಿಗೆ ಹಲಸು ಗೊತ್ತು, ಆದರೆ ಹೆಬ್ಬಲಸು ಎಂಬ ಮರದ ಪರಿಚಯ ಕಡಿಮೆಯೇ. ದಟ್ಟ ಕಾಡಿನಲ್ಲಿ ಮತ್ತು ಕಾಡಂಚಿನ ಊರು ಗಳಲ್ಲಿ ಇರುವ ಬೃಹತ್ ಮರ. ಪ್ರಭೇದದಲ್ಲಿ ಹಲಸಿನ ಸಹೋದರ ಸಸ್ಯ. ಆದರೆ ಹಣ್ಣಿನ ವಿಚಾರಕ್ಕೆ ಬಂದರೆ, ಹಲಸಿನ ಹಣ್ಣಿನ ಮೀನಿಯೇಚರ್ ಸ್ವರೂಪದ ಹಣ್ಣುಗಳು.
ಇದನ್ನೂ ಓದಿ: Shashidhara Halady Column: ಅಬ್ಲಿ ಹೂ ಮುಡಕಂಡು ಅಬ್ಬಿ ಮನೆಗೆ ಹ್ವಾಪಂಗೆ
ಹಲಸಿನ ಹಣ್ಣುಗಳು ಆರೆಂಟು ಕಿಲೋ ತೂಗಿದರೆ, ಹೆಬ್ಬಲಸಿನ ತೂಕ ನೂರಿನ್ನೂರು ಗ್ರಾಂಗಳಿಗೆ ಸೀಮಿತ. ಹಳ್ಳಿಯಲ್ಲಿದ್ದ ನಮ್ಮ ಮನೆ ಹತ್ತಿರ, ದರೆಗೆ ತಾಗಿಕೊಂಡು ಹೆಬ್ಬಲಸಿನ ಐದು ಮರಗಳಿದ್ದವು. ಇವುಗಳಲ್ಲಿ ಎರಡು ಒಂದೇ ರೀತಿಯ ಹಣ್ಣು ಕೊಡುತ್ತಿದ್ದವು, ಇನ್ನೆರಡೂ ಸಹ ತುಸು ಭಿನ್ನ ರುಚಿಯ ಹಣ್ಣನ್ನು ಕೊಡುತ್ತಿದ್ದವು, ಇನ್ನೊಂದು ಬೃಹದಾಕಾರದ ಮರ ಹೆಚ್ಚು ಕಾಯಿಗಳನ್ನೇ ಬಿಡುತ್ತಿರಲಿಲ್ಲ.
ಮುಷ್ಟಿಗಿಂತ ತುಸು ದೊಡ್ಡ ಗಾತ್ರದ ಹೆಬ್ಬಲಸಿನ ಹಣ್ಣನ್ನು, ನಗರದವರು, ಬಯಲುಸೀಮೆಯವರು ನೋಡಿರುವ ಸಾಧ್ಯತೆ ಕಡಿಮೆ. ಈಚಿನ ವರ್ಷಗಳಲ್ಲಿ ಬೆಂಗಳೂರಿನ ಬೀದಿಗಳಲ್ಲಿ, ಈ ಹಣ್ಣುಗಳಲ್ಲಿ ಗಾಡಿಯವರು ಮಾರುವುದನ್ನು ಅಲ್ಲಲ್ಲಿ ಕಂಡಿದ್ದೆ; ಆದರೂ ತುಸು ಅಪೂರ್ವ. ಎತ್ತರವಾದ ಹೆಬ್ಬಲಸಿನ ಮರದ ತುದಿಯಲ್ಲಿ ಬಿಡುವ ನೂರಾರು ಹಣ್ಣುಗಳು ಬೆಳಗಿನ ಬಿಸಿಲಿಗೆ ಹೊಳೆಯುವ ಸೊಗಸನ್ನು ಕಂಡೇ, ಜನಪದರು ಮೇಲಿನ ಎದುರುಕಥೆಯನ್ನು ಕಟ್ಟಿರಬೇಕು. ಸಾಮಾನ್ಯವಾಗಿ, ಬಹು ಎತ್ತರವಾಗಿ ಬೆಳೆಯುವ ಹೆಬ್ಬಲಸಿನ ಮರಗಳಲ್ಲಿ ನೂರಾರು ಹಣ್ಣುಗಳು ಬಿಡುತ್ತವೆ.
ಹಣ್ಣೊಂದರಲ್ಲಿ ಐವತ್ತರಿಂದ ನೂರು ತೊಳೆಗಳು. ಚಿನ್ನದ ಬಣ್ಣದ ಒಂದೊಂದೇ ತೊಳೆಯನ್ನು ಬಾಯಿಗೆ ಹಾಕಿಕೊಂಡು, ರುಚಿ ಸವಿದು, ಬೀಜ ಉಗಿಯಬೇಕು. ಹೆಬ್ಬಲಸಿನ ಮರದ ತುದಿಯಿಂದ ಬಲಿತ, ರುಚಿಕರ ಹಣ್ಣುಗಳನ್ನು ಸಂಗ್ರಹಿಸುವುದೇ ಒಂದು ಕಲೆ. ಏಕೆಂದರೆ, ಮರ ಹತ್ತಿ ಹಣ್ಣನ್ನು ಕೊಯ್ದು ಕೆಳಕ್ಕೆ ಎಸೆದರೆ, ಮುದ್ದೆಯಾಗಿ ತೊಳೆಗಳೆಲ್ಲ ಮಣ್ಣು ಸೇರುತ್ತವೆ. ಬುಟ್ಟಿ ಅಥವಾ ಗೋಣಿಚೀಲ ಹಿಡಿದು ಮರಹತ್ತಿ ಕಾಯಿ ಕೊಯ್ದು ಕೆಳಗಿಳಿಸಿದರೆ ಮಾತ್ರ ರುಚಿ ರುಚಿಯಾದ ಹಣ್ಣನ್ನು ತಿನ್ನಬಹುದು.
ನಮ್ಮೂರಿನ ಕೆಲವು ಸಾಹಸಿ ಯುವಕರು, ಹಲವು ‘ನ್ಯಾಗಾಳ ಬಳ್ಳಿ’ (ಸಸ್ಯ) ಗಳನ್ನು ಒಂದಕ್ಕೊಂದು ಬಿಗಿದು, ಮೂವತ್ತು ಅಡಿ ಉದ್ದದ ದಾರ ಮಾಡಿ, ಅದರ ಒಂದು ತುದಿಗೆ ಹಣ್ಣನ್ನು ಕಟ್ಟಿ, ಕೆಳಗೆ ನಿಂತವರ ಕೈಗೆ ಸಿಗುವಂತೆ ನಿಧಾನವಾಗಿ ಕೆಳಗಿಳಿಸುತ್ತಿದ್ದರು! ಬಲಿತ ಹೆಬ್ಬಲಸಿನ ಕಾಯಿಗಳನ್ನು ತಂದು, ಮನೆ ಎದುರಿನ ಹುಲ್ಲುಕುತ್ರಿಯ ಅಡಿ ಇಟ್ಟರೆ, ನಾಲ್ಕಾರು ದಿನಗಳಲ್ಲಿ ಹಣ್ಣಾಗುತ್ತದೆ. ಆದರೆ ಮರದಲ್ಲಿ ಹಣ್ಣಾದ ರುಚಿ ಇದಕ್ಕೆ ಬರುವುದಿಲ್ಲ. ಈ ಹಣ್ಣಿನ ಬೀಜಗಳನ್ನು ಹೆಡಿಗೆಗಟ್ಟಲೆ ಸಂಗ್ರಹಿಸಿ, ಎಣ್ಣೆಯನ್ನು ತಯಾರಿಸುತ್ತಿದ್ದರೆಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು. ಅದನ್ನು ದೀಪ ಬೆಳಗಲೂ ಉಪಯೋಗಿಸಬಹುದಿತ್ತು.
ಇದೇ ರೀತಿ, ಹಿಂದಿನ ದಿನಗಳಲ್ಲಿ, ಅಂದರೆ ಸೀಮೆ ಎಣ್ಣೆ ಅಂಗಡಿಗಳಿಗೆ ಬರುವ ಮುಂಚೆ, ಹೊನ್ನೆ ಕಾಯಿಯಿಂದಲೂ ಎಣ್ಣೆ ಮಾಡಿ, ದೀಪ ಹಚ್ಚುತ್ತಿದ್ದರಂತೆ. ಕಾಡಿನ ಅಂಚಿನಲ್ಲಿ ಬೆಳೆದು, ರುಚಿಕರ ಹಣ್ಣುಗಳನ್ನು ನೀಡುತ್ತಿದ್ದ ಇನ್ನೊಂದು ಮರವೆಂದರೆ ಚೇಂಪಿಮರ. ಇದನ್ನು ಕೆಲವು ಕಡೆ ಸಂಪಿಗೆ ಹಣ್ಣಿನ ಮರ ಎನ್ನುವುದುಂಟು. ದ್ರಾಕ್ಷಿ ಹಣ್ಣಿನ ಗಾತ್ರ, ದಟ್ಟ ಗುಲಾಬಿ ಬಣ್ಣವಿರುವ ಚೇಂಪಿ ಹಣ್ಣುಗಳು ಬೇಸಿಗೆಯಲ್ಲಿ ಜಾಸ್ತಿ. ನಮ್ಮ ಶಾಲೆಗೆ ಹೋಗುವ ದಾರಿಯಲ್ಲಿ ಎರಡು ಕಡೆ ಚೇಂಪಿ ಮರಗಳಿದ್ದವು. ಒಂದು ಮರ ಕಟ್ಟೆಮಕ್ಕಿ ಉಬ್ಬಿನಿಂದಾಚೆ, ದಾರಿಯಿಂದ ಸ್ವಲ್ಪ ದೂರದಲ್ಲಿ ಒಂದು ಹಕ್ಕಲಿನಲ್ಲಿತ್ತು.
ಇನ್ನೊಂದು ನಮ್ಮೂರಿನ ಹಂಚಿನ ಕಾರ್ಖಾನೆ ಹತ್ತಿರ ತಗ್ಗಿನಲ್ಲಿ, ಕುರುಚಲು ಗಿಡದ ನಡುವೆ ಬೆಳೆದಿತ್ತು. ಹೆಚ್ಚು ಎತ್ತರವಲ್ಲದ, ಸುಮಾರು 15-20 ಅಡಿ ಎತ್ತರದ ಚೇಂಪಿ ಮರಗಳಿಂದ ಹಣ್ಣುಗಳನ್ನು ಸಂಗ್ರಹಿಸುವಾಗ, ಅದರಲ್ಲಿದ್ದ ಮುಳ್ಳುಗಳಿಂದ ತಪ್ಪಿಸಿಕೊಳ್ಳಬೇಕಿತ್ತು. ಮಾಗಿದ ಚೇಂಪಿ ಹಣ್ಣುಗಳು ದ್ರಾಕ್ಷಿಯಂತೆಯೇ, ಕೆಲವೊಮ್ಮೆ ದ್ರಾಕ್ಷಿಗಿಂತಲೂ ಹೆಚ್ಚು ರುಚಿಕರ. ಈ ಸಸ್ಯಕ್ಕೆ ಇರುವ ಹೆಸರು ಮತ್ತು ಅದು ಬೇರೆ ಬೇರೆ ಪ್ರದೇಶಗಳಲ್ಲಿ ತಳೆದಿರುವ ಸ್ವರೂಪ ಬಹಳ ಕುತೂಹಲ ಕಾರಿ ಮತ್ತು ಭಾಷಾಶಾಸದ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಉತ್ತಮ ವಿಷಯವೇ ಸರಿ.
ನಮ್ಮ ಹಳ್ಳಿಯ ಜನಪದರು ಚೇಂಪಿ ಎಂದು ಕರೆಯುವ ಈ ಹಣ್ಣನ್ನು ಘಟ್ಟದ ಮೇಲಿನವರು ಕಲ್ಲು ಸಂಪಿಗೆ, ಸಂಪಿಗೆ ಎನ್ನುವರು. ನಮ್ಮ ಹಳ್ಳಿಯವರು ಇಟ್ಟಿರುವ ಹೆಸರಾದ ‘ಚೇಂಪಿ’ಯಲ್ಲಿ ಚಂಪಕಾ ಹೆಸರಿನ ಸೂಚನೆ ಇದೆ. ‘ಚಂಪಕಾ’ ಎಂಬ ಶಿಷ್ಟ ಪದದ ಪರಿಚಯವೇ ಇಲ್ಲದ ಗ್ರಾಮೀಣರು, ಚೇಂಪಿ ಎಂದು ಆ ಹಣ್ಣನ್ನು ಕರೆದಿದ್ದೇಕೆ ಮತ್ತು ಆ ಪ್ರಕ್ರಿಯೆಯ ಹಿನ್ನೆಲೆಯು ಬಹಳ ಕುತೂಹಲಕಾರಿ. ಕಪ್ಪು ದ್ರಾಕ್ಷಿಯನ್ನೇ ತದ್ವತ್ ಹೋಲುವ, ಅದೇ ಬಣ್ಣ-ಗಾತ್ರದ ಮತ್ತೊಂದು ಹಣ್ಣು ಎಂದರೆ ಗರ್ಚನ ಹಣ್ಣು. (ಕವಳಿ ಕಾಯಿ). ಈ ಹಣ್ಣಿನ ರುಚಿ ಸಹ ಕಪ್ಪುದ್ರಾಕ್ಷಿಯನ್ನು ಹೋಲುತ್ತದೆ.
ಗುಡ್ಡದಲ್ಲಿ, ಕಾಡಿನ ಅಂಚಿನಲ್ಲಿ ಬೆಳೆಯುವ ಗರ್ಚನ ಗಿಡಗಳಲ್ಲಿ ಜೊಂಪೆ ಜೊಂಪೆ ಹಣ್ಣುಗಳು; ಮುಳ್ಳಿನ ಸಂದಿಯಿಂದ ಅವುಗಳನ್ನು ಬಿಡಿಸಿ ತಿನ್ನುವ ಮಜವೇ ಮಜ.. ವಿಶೇಷವೆಂದರೆ, ಮಲ್ಲಿಗೆ ಹೂವನ್ನು ಹೋಲುವ ಗರ್ಚನ ಹೂವುಗಳನ್ನು ಸಹಾ ನಾವು ಮಕ್ಕಳು ತಿನ್ನುತ್ತಿದ್ದೆವು. ಇದರ ಕಾಯಿಯನ್ನು, ಹೂವನ್ನು, ಎಲೆಯನ್ನು ಕಿತ್ತರೆ ಬಿಳಿ ಹಾಲಿನಂತರ ದ್ರವ ಸೂಸುತ್ತಿದ್ದುದು ಮತ್ತೊಂದು ಅಚ್ಚರಿ. ಹುಳಿ ರುಚಿಯ ಹೂ ಬಿಡುವ ಗರ್ಚನ ಗಿಡವು, ಉಪ್ಪಿನ ಕಾಯಿ ಮಾಡ ಬಲ್ಲಂತಹ ಕಾಯಿಗಳನ್ನೂ ಕೊಡುತ್ತವೆ.
ಆ ಕಾಯಿಗಳನ್ನು ಬುಟ್ಟಿಗಟ್ಟಲೆ ಸಂಗ್ರಹಿಸಿ ಉಪ್ಪಿನ ಕಾಯಿ ಮಾಡುವುದೆಂದರೆ, ಕೆಲವು ಹೆಂಗೆಳೆಯರಿಗೆ ಅತೀವ ಆಸಕ್ತಿ. ನಮ್ಮ ಹಳ್ಳಿಯ ಮಹಿಳೆಯರು ಉಪ್ಪಿನ ಕಾಯಿಗೆ ಈ ಕಾಯಿಗಳನ್ನು ಬುಟ್ಟಿಗಟ್ಟಲೆ ಕೊಯ್ದ ನಂತರ, ಗಿಡದಲ್ಲೇ ಉಳಿದ ಕಾಯಿಗಳು ಮಾಗಿದಾಗಲೇ ದ್ರಾಕ್ಷಿ ರುಚಿಯ ಹಣ್ಣುಗಳು ದೊರೆಯುವುದು. ಕುರುಚಲು ಗಿಡವಾಗಿ ಬೆಳೆಯುವ ಈ ಗಿಡಗಳನ್ನು ಹಾಗೆಯೇ ಬೆಳೆಯಗೊಟ್ಟರೆ, ಆರೆಂಟು ಅಡಿಯ ಪುಟ್ಟ ಮರವಾಗಿ ಬೆಳೆಯುತ್ತವೆ- ಬಿಳಿದಾಸವಾಳದ ಗಿಡದ ರೀತಿ. ಅಂತಹ ಕೆಲವು ಗರ್ಚನ ಗಿಡಗಳು ಮರದ ಸ್ವರೂಪ ಪಡೆದದ್ದನ್ನು ಕೆಲವು ಕಡೆ ಕಾಣಬಹುದಿತ್ತು.
ನಮ್ಮೂರಿನಿಂದ ತಟ್ಟುವಟ್ಟು ಮಾರ್ಗವಾಗಿ ಗುಡ್ಡೆಟ್ಟಿಗೆ ಹೋಗುವ ದಾರಿಯಲ್ಲಿ, ನೂರಾರು ಕಾಯಿಗಳನ್ನು ಬಿಡುತ್ತಿದ್ದ ಎರಡು ಗರ್ಚನ ಮರಗಳನ್ನು ನಾನು ಕಂಡಿದ್ದೆ. ಇಂತಹ ಕಾಡುಗಿಡಗಳ ಹಣ್ಣುಗಳನ್ನು ತಿನ್ನುವುದೆಂದರೆ ಬಹಳ ಖುಷಿಯ ವಿಚಾರವಾಗಿತ್ತು. ಹಕ್ಕಲು, ಹಾಡಿ, ಬ್ಯಾಣಗಳಲ್ಲಿ ದೊರೆಯುತ್ತಿದ್ದ ಚೇಂಪಿ, ಹೆಬ್ಬಲಸು, ಕಾಟು ಮಾವಿನ ಹಣ್ಣು, ಬುಕ್ಕಿ, ಕಾಡು ನೇರಳೆ, ಪನ್ನೇರಳೆ, ಸಳ್ಳೆ ಹಣ್ಣು (ಚಳ್ಳೆ ಹಣ್ಣು), ಜುಳಕ, ಮುರಿನ ಹಣ್ಣು ಇವೆಲ್ಲವೂ ಅಂದು ನಮ್ಮ ಬಾಲ್ಯದ ಬಾಯಿರುಚಿಯನ್ನು ತಣಿಸಿದ್ದವು!
ನಮ್ಮ ಮನೆ ಹಿಂದಿನ ಸೇಡಿಮಣ್ಣಿನ ದರೆಯನ್ನು ಹತ್ತಿ ಹೋದರೆ, ಒಂದು ಹಕ್ಕಲು ಇದೆ. ಒಂದೆರಡು ಎಕರೆ ವಿಸ್ತೀರ್ಣವಿರುವ ಆ ಜಾಗದಲ್ಲಿ ನೂರಾರು ಗಿಡಮರಬಳ್ಳಿಗಳ ಸಂತೆ. ಹಕ್ಕಲು ಎಂದರೆ, ದೊಡ್ಡ ಗಾತ್ರದ ಮರಗಳಿಲ್ಲದ, ಮಧ್ಯಮ ಗಾತ್ರದ ಮರಗಳ ತಾಣ. ನಾನು ಹೈಸ್ಕೂಲಿಗೆ, ಕಾಲೇಜಿಗೆ ಹೋಗುವಾಗ ಇದು ನನಗೆ ಬಹು ಇಷ್ಟದ ಜಾಗ. ಪರೀಕ್ಷೆಯ ಸಮಯದಲ್ಲಿ ಓದಲಿಕ್ಕೆಂದು ಒಂದರಿಂದ ಎರಡು ತಿಂಗಳುಗಳ ರಜಾ ಕೊಡುತ್ತಿದ್ದರಲ್ಲ, ಆಗ ನಾನು ಕುಳೀತು ‘ಓದುತ್ತಿದ್ದುದು’ ಇಲ್ಲೇ. ತಾಲೂಕು ಕೇಂದ್ರದಲ್ಲಿದ್ದ ಕಾಲೇಜಿಗೆ ಹೋಗಲೆಂದು ಮಾಡಿದ್ದ ರೂಮನ್ನು ಖಾಲಿ ಮಾಡಿ, ಹಳ್ಳಿಗೆ ವಾಪಸಾದೆ ಎಂದರೆ, ಪರೀಕ್ಷೆಯ ತನಕ ನನ್ನ ಠಿಕಾಣಿ ಮನೆಯಲ್ಲೇ! ಪ್ರತಿದಿನ ಓದಲೆಂದು ದಪ್ಪನೆಯ ಇಂಗ್ಲಿಷ್ ಪುಸ್ತಕ ಹಿಡಿದು ಹಕ್ಕಲಿಗೆ ಬರುತ್ತಿದ್ದ ನನಗೆ, ಕಂಬೈನ್ಡ್ ಸ್ಟಡಿಗೆ ಸಹಕಾರ ನೀಡುತ್ತಿದ್ದುದೇ ಅಲ್ಲಿದ್ದ ಮರಗಳು.
ಹಕ್ಕಲಿನ ತುದಿಯಲ್ಲಿ ಕೆಲವು ಮಧ್ಯಮ ಗಾತ್ರದ ಮರಗಳಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿ, ಹಕ್ಕಲಿಗೆ ಬಂದು 15 ಅಡಿ ಎತ್ತರವಿದ್ದ ಒಂದು ಮರವನ್ನು ಹತ್ತಿ ಕುಳಿತರೆ, ಮಧ್ಯಾಹ್ನದ ಊಟದ ತನಕವೂ ಅದೇ ನನ್ನ ಸ್ಟಡಿ ಟೇಬಲ್. ಕಾಲೇಜಿನ ಲೈಬ್ರರಿಯಿಂದ ತಂದ ದಪ್ಪನೆಯ ಫಿಸಿಕ್ಸ್ ಪುಸ್ತಕ ಹಿಡಿದು, ಪುಟಬಿಡಿಸಿ, ಆಗಸ ನೋಡುತ್ತಾ ಕುಳಿತಿರುತ್ತಿದ್ದೆ! ಇಂಗ್ಲಿಷ್ ಪಠ್ಯಗಳು ನನ್ನ ತಲೆಗೆ ಇಳಿಯುತ್ತಿದ್ದುದು ತುಂಬಾ ನಿಧಾನ. ಆ ದಪ್ಪನೆಯ ಇಂಗ್ಲಿಷ್ ಪುಸ್ತಕದ ಅಕ್ಷರಗಳಿಗಿಂತಾ, ಸುತ್ತಮುತ್ತಲೂ ಹಾರಾಡುತ್ತಿದ್ದ ಹಕ್ಕಿಗಳ ಚಿಲಿಪಿಲಿಯೇ ನನಗೆ ಹೆಚ್ಚು ಅರ್ಥವಾಗುತ್ತಿತ್ತು.
ಓದಿ ಓದಿ ಬೇಸರವಾದಾಗ, ಕುಳಿತಿದ್ದ ಗಿಡದಿಂದ ಇಳಿದು ಅತ್ತಿತ್ತ ಸುತ್ತಾಡಿದರೆ ಕೆಲವು ಕಾಡು ಹಣ್ಣುಗಳು ದೊರಕುತ್ತಿದ್ದವು! ಯಾವುದು ಸಿಗದಿದ್ದರೂ, ಕಿಸ್ಕಾರ ಹಣ್ಣುಗಳಂತೂ (ಇಕ್ಸೋರಾ) ಇದ್ದೇ ಇರುತ್ತಿದ್ದವು. ಬಟಾಣಿ ಗಾತ್ರದ ಕಿಸ್ಕಾರ ಹಣ್ಣುಗಳು ಕೆಂಪನೆಯ ಬಣ್ಣ; ತುಸು ಸಿಹಿ. ನೆಲ ಮಟ್ಟದ ಪೊದೆಯಲ್ಲಿರುವ ಆ ಹಣ್ಣುಗಳು ಜೊಂಪೆಜೊಂಪೆಯಾಗಿರುತ್ತಿದ್ದವು.
ನಾಲ್ಕೆಂಟು ಹಣ್ಣು ತಿಂದ ನಂತರ, ತುಸು ಬೋರ್ ಹೊಡೆಸುವ ಹಣ್ಣುಗಳು ಅವು; ಆಗ ಬುಕ್ಕಿ, ಚೇಂಪಿ ಮೊದಲಾದ ಹಣ್ಣುಗಳು ದೊರಕುತ್ತವೋ ಎಂದು ಹುಡುಕಲು ಹೊರಡುತ್ತಿದ್ದೆವು. ಈ ರೀತಿಯ ಕಾಡುಗಿಡಗಳ ಹಣ್ಣುಗಳು ಇಂದು ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ; ಅಂತಹ ಕುರುಚಲು ಪ್ರದೇಶಗಳೆಲ್ಲವೂ ಕೃಷಿ ಅಥವಾ ಬೇರೆ ವಾಣಿಜ್ಯಕ ಉದ್ದೇಶಕ್ಕೆ ಬಳಕೆಯಾಗು ವುದು ಒಂದೆಡೆಯಾದರೆ, ಮಕ್ಕಳ ಬಾಯಿ ರುಚಿ ತಣಿಸಲು ಇಂದು ಜಂಕ್ ಫುಡ್ ಎಂದೇ ಕರೆಯಬಹುದಾದ ಚಿಪ್ಸ್, ಚಾಕೊಲೇಟ್ ಮತ್ತು ಇತರ ರೀತಿಯ ತಿನಿಸುಗಳು ಶಾಲೆಯ ಪಕ್ಕದ ಅಂಗಡಿಗಳಲ್ಲಿ ದೊರಕುವುದರಿಂದಾಗಿ, ಇಂತಹ ಹಣ್ಣುಗಳು ಅವರಿಗೆ ಹಿಡಿಸುವುದಿಲ್ಲ!
ಇಲ್ಲಿ ಇನ್ನೊಂದು ವಿಚಾರವನ್ನು ಪ್ರಸ್ತಾಪಿಸಬಹುದು: ಕಾಡು ಹಣ್ಣುಗಳ ರೂಪದಲ್ಲಿ ಮಾತ್ರ ಪರಿಚಯ ಗೊಂಡಿದ್ದ ಕೆಲವು ಹಣ್ಣುಗಳು, ಸಸ್ಯಗಳು ಇಂದು ವಾಣಿಜ್ಯಕ ಬಳಕೆಗೂ ದಾರಿ ಮಾಡಿಕೊಟ್ಟಿವೆ. ಇದರಲ್ಲಿ ಎದ್ದು ಕಾಣುವುದೆಂದರೆ, ಕೋಕಂ. ನಮ್ಮೂರಿನಲ್ಲಿ ಇದನ್ನು ಮುರಿನ ಹಣ್ಣು ಎನ್ನುತ್ತಿದ್ದರು; ಹಣ್ಣಿನ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡು ಸಾರು ತಯಾರಿಸುತ್ತಿದ್ದರು; ಊಟಕ್ಕೆ ಅನುಕೂಲವಾಗುತ್ತಿತ್ತು. ಈಚಿನ ದಿನಗಳಲ್ಲಿ ಕೋಕಂ ಜ್ಯೂಸ್ ಎಂದು ನಗರದಲ್ಲೂ ಜನಪ್ರಿಯವಾಗಿದೆ; ಕೋಕಂ ಜ್ಯೂಸ್ನ್ನು ಡಬ್ಬಿಗಳಲ್ಲಿ ತುಂಬಿ ನಗರಕ್ಕೆ ಕಳಿಸುತ್ತಿದ್ದಾರೆ. ಇದೇ ರೀತಿ ವಾಣಿಜ್ಯಕ ಮೌಲ್ಯ ಪಡೆದಿರುವ ಇನ್ನೊಂದು ಹಣ್ಣು ಎಂದರೆ, ನೇರಳೆ ಹಣ್ಣು. ನಾನಾ ರೀತಿಯ ಔಷಧಿಯ ಗುಣಗಳನ್ನು ಹೊಂದಿದೆ ಎಂಬ ಪ್ರಚಾರ ಹೊಂದಿರುವು ದರಿಂದಾಗಿ, ಇದು ನಗರಿಗರ ನಾಲಗೆಯ ರುಚಿ ತಣಿಸುತ್ತಿದೆ!