ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಪವರ್‌ ಆಫ್‌ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಖೊಟ್ಟಿ ಸಹಿ ಮೂಲಕ GPA ರಚಿಸಿ ಆಸ್ತಿಗಳ ವರ್ಗಾವಣೆಗೆ ಯತ್ನಿಸಿದ ಅನೇಕ ಪ್ರಕರಣಗಳಿವೆ. ಉದಾ: ‘ದಿಲ್ಲಿ ಸರಕಾರ ವರ್ಸಸ್ ಜನ್ಮಯ ಸಿಂಗ್’, ‘ಗುರುಚರಣ್ ಸಿಂಗ್ ವರ್ಸಸ್ ದಿಲ್ಲಿ ಸರಕಾರ’ ಮುಂತಾದವು. ತಂದೆ ತಾಯಿಯರ, ಸೋದರರ ಸಹಿ ಫೋರ್ಜರಿ ಮಾಡಿ GPA ರಚಿಸಿ ನೋಟರಿಯ ಸಹಿ ಮತ್ತು ಮುದ್ರೆಗಳನ್ನೂ ಫೋರ್ಜರಿ ಮಾಡಿದ ಪ್ರಕರಣಗಳಿವೆ.

ಪವರ್‌ ಆಫ್‌ ಅಟಾರ್ನಿ ದುರುಪಯೋಗ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

Ashok Nayak Ashok Nayak Jul 22, 2025 8:14 AM

ಕಾನೂನ್‌ ಸೆನ್ಸ್‌‌ (ಭಾಗ-2)

ತಿಮ್ಮಣ್ಣ ಭಾಗ್ವತ್

ಬಹುತೇಕ ರಾಜ್ಯಗಳು ಸ್ಥಿರಾಸ್ತಿ ವಿಷಯದಲ್ಲಿ ನೀಡಲಾಗುವ GPA ನೋಂದಣಿಯಾಗುವು ದನ್ನು ಕಡ್ಡಾಯಗೊಳಿಸಿವೆ. ಆದರೂ ಈಗ ಕೂಡಾ ಪವರ್ ಆಫ್ ಅಟಾರ್ನಿ ಆಧಾರದಲ್ಲಿ ಸ್ಥಿರಾಸ್ತಿಗಳ‌ ಮಾರಾಟ ಬಹಳ ಕಡೆ ನಡೆಯುತ್ತಿದೆ. ಇದು ಕಾಯಿದೆ ಬಾಹಿರ ವಲ್ಲವಾದರೂ ಆದಾಯಕರ, ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಶುಲ್ಕದ ವಂಚನೆಗೆ ದಾರಿ ಮಾಡಿ ಕೊಡುತ್ತಿದೆ.

ಪವರ್ ಆಫ್ ಅಟಾರ್ನಿ ( POA) ಮೂಲಕ ಅಧಿಕಾರ‌ ನೀಡುವುದು ಮತ್ತು ಕಾರ್ಯನಿರ್ವಹಿಸುವುದು ಸಂಪೂರ್ಣವಾಗಿ ಕಾಯಿದೆಬದ್ಧವಾಗಿದ್ದರೂ POA ಯನ್ನು ದುರುಪಯೋಗಪಡಿಸಿಕೊಂಡು ಅಮಾಯಕರಿಗೆ ಮೋಸ ಮಾಡುವ ಸಾಧ್ಯತೆಗಳಿವೆ. ಸುಪ್ರೀಂ ಕೋರ್ಟಿನ ಮುಂದೆ ವಿಚಾರಣೆಗೆ ಬಂದ ಅಂಥ ಕೆಲವು ಪ್ರಕರಣಗಳು ಹೀಗಿವೆ:

ಸೂರಜ್ ಲ್ಯಾಂಪ್ ವರ್ಸಸ್ ಹರಿಯಾಣ ಸರಕಾರ: 2009ರ ಈ ಪ್ರಕರಣದಲ್ಲಿ ಆಸ್ತಿಯ ಮಾಲೀಕರು ಸೂರಜ್ ಲ್ಯಾಂಪ್ ಎಂಬ ಕಂಪನಿಗೆ ಒಂದು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ನೋಂದಣಿ ಯಾಗದ, ಸ್ಟ್ಯಾಂಪ್ ಶುಲ್ಕ ನೀಡದ GPA, ಮಾರಾಟದ ಕರಾರುಪತ್ರ ಮತ್ತು ಒಂದು ವಿಲ್ ಬರೆದುಕೊಟ್ಟು ಆಸ್ತಿ ಮಾರಾಟದ ಹಣ ಪಡೆದಿದ್ದರು.

ಖರೀದಿದಾರ ಕಂಪನಿಯು ಆ ಆಸ್ತಿಯನ್ನು ಪ್ಲಾಟ್ ಮಾಡಿ ಮಾರಲು ಯಾವುದೇ ಕಾಗದಪತ್ರಗಳ ಅಥವಾ ಕಾಯಿದೆಯ ತೊಡಕು ಇರಲಿಲ್ಲ. ಆದರೆ ಆಸ್ತಿಯ ಮಾಲೀಕರು ಕಂಪನಿಗೆ ನೀಡಿದ್ದ GPA ಯನ್ನು ರದ್ದು ಪಡಿಸಿ ಸದರಿ ಆಸ್ತಿಯ ಒಂದು ಭಾಗವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ದರು. ಈ ಕುರಿತು ಉಂಟಾದ ವ್ಯಾಜ್ಯದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟು ಹೀಗೆ ‘ಪವರ್ ಆಫ್ ಅಟಾರ್ನಿ ಮಾರಾಟ’ವೆಂದು ಕರೆಯಲ್ಪಡುತ್ತಿರುವ ವ್ಯವಹಾರಗಳ ಕುರಿತು ಈ ಕೆಳಗಿನ ಅವಲೋಕನ ಮಾಡಿತು:‌ ೧. ಇಂಥ ವ್ಯವಹಾರಗಳಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿರುವವರು ಎಕರೆಗಟ್ಟಲೆ ಆಸ್ತಿಯನ್ನು GPA ಆಧಾರದಲ್ಲಿ ಪಡೆದು, ಲೇ ಔಟ್ ಮಾಡಿ ಮಾಲೀಕರ ಹೆಸರಿ ನಲ್ಲಿಯೇ ಪ್ಲಾಟ್ ಗಳನ್ನು ಮಾರಾಟಮಾಡುವ ಮೂಲಕ ಸ್ಟ್ಯಾಂಪ್ ಶುಲ್ಕ ಮತ್ತು ನೋಂದಣಿ ಶುಲ್ಕದ ವಂಚನೆ ಮಾಡುತ್ತಿದ್ದಾರೆ. ಇದರಿಂದ ಸರಕಾರಗಳಿಗೆ ಅಪಾರ ಹಾನಿ ಯಾಗುತ್ತದೆ.

ಇದನ್ನೂ ಓದಿ:T‌himmanna Bhagwat Column: ರಾಮಪಾದುಕಾ ಪ್ರದಾನ ಪವರ್-ಆಫ್-ಅಟಾರ್ನಿ ಅಲ್ಲವೇ?

೨. ಇಂಥ ವ್ಯವಹಾರಗಳಲ್ಲಿ ಕಪ್ಪು ಹಣವನ್ನು ಬೇನಾಮಿಯಾಗಿ ತೊಡಗಿಸಲು ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ.

೩. ಕಡಿಮೆ ಮೊತ್ತಕ್ಕೆ ಆಸ್ತಿಗಳನ್ನು ಪಡೆದು ಹೆಚ್ಚಿನ ಮೊತ್ತಕ್ಕೆ ಮಾರಿದರೂ ಅದರಿಂದ ಆದ ಲಾಭ ಲೆಕ್ಕಕ್ಕೆ ಸಿಗದೆ ಆದಾಯಕರವನ್ನು ವಂಚಿಸಲಾಗುತ್ತದೆ.

೪. ಕೆಲವು ಪ್ರಕರಣಗಳಲ್ಲಿ ಆಸ್ತಿಯ ಮಾಲೀಕರಿಗೆ ಪೂರ್ತಿ ಹಣ ಸಂದಾಯ ಮಾಡದ ಕಾರಣಕ್ಕೆ ಅವರು ತಮ್ಮ ಆಸ್ತಿಯನ್ನು ತಾವೇ ಮಾರಲು ಪ್ರಯತ್ನಿಸಿದರೆ ತೋಳ್ಬಲದ ಮೂಲಕ ಅವರನ್ನು ಹೆದರಿಸಿ ಸುಮ್ಮನಾಗಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಫಿಯಾ ಅಥವಾ ಗೂಂಡಾಗಿರಿ ಆಗುತ್ತಿದೆ.

೫. ನೋಂದಣಿ ಆಗದ ಕಾಗದಪತ್ರಗಳ ಮೂಲಕ ವ್ಯವಹಾರ ನಡೆಯುವುದರಿಂದ ಪ್ರಾಮಾಣಿಕ ಖರೀದಿದಾರರಿಗೆ ಆಸ್ತಿಯ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಸುಪ್ರೀಂ ಕೋರ್ಟು ಕೇವಲ ಪವರ್ ಆಫ್ ಅಟಾರ್ನಿ, ಖರೀದಿ ಒಪ್ಪಂದ ಮತ್ತು ವಿಲ್‌ಗಳಿಂದ ಆಸ್ತಿಯ‌ ಹಕ್ಕು ವರ್ಗಾವಣೆ ಆಗುವುದಿಲ್ಲ ಮತ್ತು ನೋಂದಣಿ ಆದ ದಸ್ತಾವೇಜು ಅತ್ಯಗತ್ಯ ಎಂಬ ಕಾಯಿದೆಯ ಅಂಶವನ್ನು ಒತ್ತಿಹೇಳಿತು. ಆದರೆ ನೈಜ ಅವಶ್ಯಕತೆಗಳಿಗಾಗಿ ತಮ್ಮ ಆಸ್ತಿಯ ನಿರ್ವಹಣೆ ಅಥವಾ ಮಾರಾಟಕ್ಕಾಗಿ GPA ನೀಡುವುದು ಈ ತೀರ್ಪಿನಿಂದ ಬಾಧಿತ ವಾಗುವುದಿಲ್ಲ ಎಂದು ಕೋರ್ಟು ಸ್ಪಷ್ಟ ಪಡಿಸಿತು. ಈ ತೀರ್ಪಿನ ಬಳಿಕ ಬಹುತೇಕ ರಾಜ್ಯಗಳು ಸ್ಥಿರಾಸ್ತಿ ವಿಷಯದಲ್ಲಿ ನೀಡಲಾಗುವ GPA ನೋಂದಣಿಯಾಗುವುದನ್ನು ಕಡ್ಡಾಯಗೊಳಿಸಿವೆ. ಆದರೂ ಈಗ ಕೂಡಾ ಪವರ್ ಆಫ್ ಅಟಾರ್ನಿ ಆಧಾರದಲ್ಲಿ ಸ್ಥಿರಾಸ್ತಿಗಳ ಮಾರಾಟ ಬಹಳ ಕಡೆ‌ ನಡೆಯುತ್ತಿದೆ.

POA R

ಇದು ಕಾಯಿದೆ ಬಾಹಿರವಲ್ಲವಾದರೂ ಆದಾಯಕರ, ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಶುಲ್ಕದ ವಂಚನೆಗೆ ದಾರಿ ಮಾಡಿಕೊಡುತ್ತಿದೆ.

ಇಂದರ್ ಮೋಹನ ಗೋಸ್ವಾಮಿ ವರ್ಸಸ್ ಉತ್ತರಾಂಚಲ ಸರಕಾರ: ಈ ಪ್ರಕರಣದಲ್ಲಿ ಪಂಡಿತ್ ಮದನ ಮೋಹನ ಮಾಲವೀಯ ಅವರು ಸ್ಥಾಪಿಸಿದ ‘ಸನಾತನ ಧರ್ಮ ಪ್ರತಿನಿಧಿ ಸಭಾ’ದ ಆಸ್ತಿಯ ವಿಷಯದಲ್ಲಿ ನೀಡಲಾದ ಪವರ್ ಆಫ್ ಅಟಾರ್ನಿಯನ್ನು ದುರುಪಯೋಗ ಪಡಿಸಿ ಕೊಂಡು ಸದರಿ‌ ಸಭಾದ ಇತರ ಆಸ್ತಿಗಳನ್ನೂ ಮಾರಾಟ ಮಾಡಲಾಗಿತ್ತು. ಅಂಥ ಮಾರಾಟವನ್ನು ಅಸಿಂಧುಗೊಳಿಸಿದ ಸುಪ್ರೀಂ ಕೋರ್ಟು, ‘ಪವರ್ ಆಫ್ ಅಟಾರ್ನಿ ಪ್ರಿನ್ಸಿಪಾಲ್ ಅಥವಾ ಮುಖ್ಯಸ್ಥನ‌ ಪರವಾಗಿ ಕೆಲಸ ಮಾಡಲು ಅಧಿಕಾರ ನೀಡುತ್ತದೆಯೇ ಹೊರತು ಪ್ರತಿನಿಧಿಗೆ ಯಾವುದೇ ಆಸ್ತಿಯ ಹಕ್ಕು ಅಥವಾ ಹಿತಾಸಕ್ತಿಯನ್ನು ಒದಗಿಸುವುದಿಲ್ಲ’ ಎಂದು ತೀರ್ಪನ್ನಿತ್ತಿತು.

ಖೊಟ್ಟಿ ಸಹಿ ಮೂಲಕ GPA ರಚಿಸಿ ಆಸ್ತಿಗಳ ವರ್ಗಾವಣೆಗೆ ಯತ್ನಿಸಿದ ಅನೇಕ ಪ್ರಕರಣಗಳಿವೆ. ಉದಾ: ‘ದಿಲ್ಲಿ ಸರಕಾರ ವರ್ಸಸ್ ಜನ್ಮಯ ಸಿಂಗ್’, ‘ಗುರುಚರಣ್ ಸಿಂಗ್ ವರ್ಸಸ್ ದಿಲ್ಲಿ ಸರಕಾರ’ ಮುಂತಾದವು. ತಂದೆ ತಾಯಿಯರ, ಸೋದರರ ಸಹಿ ಫೋರ್ಜರಿ ಮಾಡಿ GPA ರಚಿಸಿ ನೋಟರಿಯ ಸಹಿ ಮತ್ತು ಮುದ್ರೆಗಳನ್ನೂ ಫೋರ್ಜರಿ ಮಾಡಿದ ಪ್ರಕರಣಗಳಿವೆ.

“ GPA ನೀಡಿದ ನಂತರ ಅದನ್ನು ಪಡೆದವರು ಆಸ್ತಿ ಮಾರಾಟ ಮತ್ತು ಅದರ ಅಭಿವೃದ್ಧಿಗಾಗಿ ವೆಚ್ಚ ಮಾಡಿದ ಪ್ರಕರಣದಲ್ಲಿ 25 ವರ್ಷದ ನಂತರ GPAಯನ್ನು ರದ್ದು ಪಡಿಸಿರುವುದು ಒಪ್ಪತಕ್ಕದ್ದಲ್ಲ" (ಮುನಿಯಮ್ಮ ವರ್ಸಸ್ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನೌಕರರ ಸೊಸೈಟಿ). “ GPA ನೀಡಿದ ಬಳಿಕ ಆಸ್ತಿಯ ಕುರಿತು ಹಿತಾಸಕ್ತಿ ಉಂಟಾದ ಪ್ರಕರಣಗಳಲ್ಲಿ ಅದನ್ನು ರದ್ದುಪಡಿಸುವುದು ಸಾಧ್ಯವಿಲ್ಲ" (ದಾಹಿಬೆನ್ ವರ್ಸಸ್ ಅರವಿಂದಬೈ ಕಲ್ಯಾಣಜಿ, ಸುಬ್ರಿದ್ ಸಿಂಗ್ ವರ್ಸಸ್ ರಣಧಿರ್ ಸಿಂಗ್).

ಈ ಎಲ್ಲ ಪ್ರಕರಣಗಳ ಹಿನ್ನೆಲೆಯಲ್ಲಿ POA ಆಧಾರದಲ್ಲಿ ನಡೆಸುವ ವ್ಯವಹಾರಗಳ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ:

POA ನೀಡುವವರು: POA ಯನ್ವಯ ನೀಡಬೇಕಾದ ಅಧಿಕಾರಗಳನ್ನು ಯಾವದೇ ಗೊಂದಲಕ್ಕೆಡೆ ಯಿಲ್ಲದೆ ಸ್ಪಷ್ಟವಾಗಿ ನಮೂದಿಸಬೇಕು. Vicarious Liability ಎಂಬ ತತ್ವದ ಆಧಾರದಲ್ಲಿ ಪ್ರತಿನಿಧಿ ಯ ಕಾರ್ಯಗಳಿಗೆ POA ನೀಡಿದ ವ್ಯಕ್ತಿಯು ಹೊಣೆಗಾರನಾಗುತ್ತಾನೆ. ಆದ್ದರಿಂದ ಪ್ರತಿನಿಧಿಯ ವಿಶ್ವಾಸಾರ್ಹತೆಯ ಜತೆಗೆ ಆತನ ಸಾಮರ್ಥ್ಯ ಕೂಡಾ ಮುಖ್ಯವಾಗುತ್ತದೆ. ಪ್ರಮುಖ ನಿರ್ಧಾರಗಳ ಅಧಿಕಾರವನ್ನು ಪ್ರತಿನಿಧಿಗಳಿಗೆ ನೀಡದೇ ಮಾಲೀಕರೇ ಕೈಗೊಳ್ಳುವುದು ಸೂಕ್ತ. ಜತೆಗೆ ಪ್ರತಿನಿಧಿಯ ಕಾರ್ಯಗಳನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕು. ಯಾವುದೇ ಸಂಶಯ ಬಂದಲ್ಲಿ ತಕ್ಷಣ POA ಯ ರದ್ದತಿಗೆ ಕ್ರಮ ಕೈಗೊಳ್ಳಬೇಕು.

POA ಪಡೆದವರು: ನಿಮಗೆ POA ನೀಡಲು ನಿಮ್ಮ ಒಪ್ಪಿಗೆ ಅಗತ್ಯ. ಅದರನ್ವಯ ಚಲಾಯಿಸ ಬಹುದಾದ ಅಧಿಕಾರಗಳನ್ನು ಸ್ಪಷ್ಟವಾಗಿ ತಿಳಿದಿರಬೇಕು. ಅದನ್ನು ಮೀರಿ ನಡೆದರೆ ಅಥವಾ POA ಯ ಷರತ್ತುಗಳಿಗೆ ವ್ಯತಿರಿಕ್ತವಾಗಿ ನಡೆದರೆ ಅದನ್ನು ನೀಡಿದವರು ಬಾಧ್ಯಸ್ಥರಲ್ಲ, ಯಾಕೆಂದರೆ ಇದು ಏಜೆನ್ಸಿ ಒಪ್ಪಂದ. POA ಪಡೆದವರು ಅದನ್ನು ನೀಡಿದವರ ಹೆಸರಿನಲ್ಲಿ ಮತ್ತು ಅವರ ಪರವಾಗಿ ವ್ಯವಹಾರ ಮತ್ತು ಸಹಿ ಮಾಡಬೇಕಾಗುತ್ತದೆಯೇ ಹೊರತು ತಮ್ಮ ವೈಯಕ್ತಿಕ ನೆಲೆಯಲ್ಲಲ್ಲ. ಸಹಿಯ ಮೇಲುಗಡೆ POA ನೀಡಿದವರ ಹೆಸರು ಬರೆದು, ಅವರ ಪರವಾಗಿ ಎಂದು ಬರೆದು ಸಹಿ ಹಾಕಬೇಕು ಮತ್ತು ಕೆಳಗಡೆ ತಮ್ಮ ಹೆಸರು ಬರೆದು, POA holder ಎಂದು ಬರೆಯಬೇಕು. POA ನೀಡಿದ ನಂತರವೂ ಯಾವುದೇ ವ್ಯವಹಾರವನ್ನು ಸ್ವತಃ ಮಾಡುವ ಅಧಿಕಾರ ಮಾಲೀಕರಿಗೆ ಇರುತ್ತದೆ. POA ರದ್ದಾದರೆ, ಹಿಂಪಡೆದುಕೊಂಡರೆ ಏಜೆನ್ಸಿ ಒಪ್ಪಂದ ರದ್ದಾಗುತ್ತದೆ. ಆದ್ದರಿಂದ ಅದರನ್ವಯ ನಡೆಯುವ ಎಲ್ಲಾ ವ್ಯವಹಾರವನ್ನು ತಕ್ಷಣ ನಿಲ್ಲಿಸಬೇಕು. ನೀಡಿದವರಿಗೆ ಆವರೆಗೆ ನಡೆದ ವ್ಯವಹಾರಗಳ ವಿವರ ಸಲ್ಲಿಸಬೇಕು.

POA ಆಧಾರದಲ್ಲಿ ಅದನ್ನು ಪಡೆದವರೊಂದಿಗೆ ವ್ಯವಹರಿಸುವವರು: ವಿಶೇಷವಾಗಿ POA ಯ ಬಳಕೆ ಕಾಣುವುದು ಸ್ಥಿರಾಸ್ತಿಯ ಖರೀದಿಯ ವಿಷಯದಲ್ಲಿ. ಬೆಂಗಳೂರಿನಂಥ ನಗರದಲ್ಲಿ ಅಪಾರ್ಟ್‌ ಮೆಂಟ್‌ಗಳ ಡೆವಲಪರ್ ಕಂಪನಿಗಳು ಭೂಮಾಲೀಕರ ಜತೆಗೆ ಡೆವಲಪ್‌ಮೆಂಟ್ ಒಪ್ಪಂದ ಮಾಡಿ ಕೊಳ್ಳುತ್ತವೆ ಮತ್ತು ಮಾಲೀಕರ ಪರವಾಗಿ ಸಹಿ ಮಾಡಲು ಕಂಪನಿಗಳು POA ಪಡೆದಿರುತ್ತವೆ. ಕಂಪನಿಯ ಅಧಿಕಾರಿಗಳು ಕಂಪನಿ ಹಾಗೂ ಮಾಲೀಕರು ಇಬ್ಬರ ಪರವಾಗಿಯೂ ಸಹಿ ಮಾಡು ತ್ತಾರೆ. ಇಂಥ ವ್ಯವಹಾರಗಳಲ್ಲಿ ಕೈಗೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ:

೧. ಸ್ಥಿರಾಸ್ತಿಗೆ ಸಂಬಂಧಿಸಿದ POA ಕಡ್ಡಾಯವಾಗಿ ನೋಂದಣಿಯಾಗಿರಬೇಕು. ನೋಟರಿಯ ಎದುರು ಅಥವಾ ಸ್ಟ್ಯಾಂಪ್ ಪೇಪರಿನಲ್ಲಿ ಮಾಡಿದ POA ಆಧಾರದಲ್ಲಿ ವ್ಯವಹರಿಸಬಾರದು.

೨. Puಅಯಲ್ಲಿ ನೀಡಲಾದ ಅಧಿಕಾರಗಳು ಡೆವಲಪ್ ಮೆಂಟ್ ಒಪ್ಪಂದದ ಷರತ್ತುಗಳಿಗೆ ವ್ಯತಿರಿಕ್ತ ವಾಗಿರಬಾರದು.

೩. Puಅಯ ಮೂಲ ದಾಖಲೆಯನ್ನು ಪರಿಶೀಲಿಸಬೇಕು. ಕೇವಲ ಝರಾಕ್ಸ್ ಪ್ರತಿಯ ಆಧಾರದಲ್ಲಿ ವ್ಯವಹರಿಸಲಾಗದು.

೪. POA ನೀಡಿದವರು ಜೀವಂತ ಇರುವ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿರದ ಕುರಿತು ದಾಖಲೆ ಕೇಳಬೇಕು. ಅದನ್ನು ಖರೀದಿ ಒಪ್ಪಂದ ಅಥವಾ ಕ್ರಯಪತ್ರ ಮಾಡುವ ದಿನ ಕೂಡಾ ಖಚಿತಪಡಿಸಿ ಕೊಳ್ಳಬೇಕಾಗುತ್ತದೆ. ನೋಂದಣಿ ಕಾಯಿದೆಯ ತಿದ್ದುಪಡಿ (ಕರ್ನಾಟಕ) ಮಸೂದೆ 2025ರ ಪ್ರಕಾರ POA ನೀಡಿರುವ ವ್ಯಕ್ತಿ ಜೀವಂತ ಇರುವ ಬಗ್ಗೆ ಪುರಾವೆಯನ್ನು ಹಾಜರು ಪಡಿಸಬೇಕಾಗುತ್ತದೆ. ಆದರೆ ಮಾನಸಿಕ ಸ್ವಸ್ಥತೆ ಕುರಿತು ದಾಖಲೆ ಪಡೆಯುವುದು ಕಷ್ಟ. ಹೀಗಾಗಿ Durable POA ಹೆಚ್ಚು ಸುರಕ್ಷಿತ.

೫. POA ಯನ್ನು ಹಿಂಪಡೆಯಲಾಗಿಲ್ಲ ಅಥವಾ ರದ್ದುಪಡಿಸಲಾಗಿಲ್ಲ ಎಂಬುದನ್ನು ಸಂಬಂಧಿತ ನೋಂದಣಿ ಕಚೇರಿಗೆ ಹೋಗಿ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಪರ್ಯಾಯವಾಗಿ, ಅಂಥ ವ್ಯವಹಾರವನ್ನು POA ಆಧಾರದಲ್ಲಿ ನಡೆಸುತ್ತಿರುವುದಾಗಿಯೂ, ಒಂದುವೇಳೆ ಸದರಿ POAರದ್ದು ಮಾಡಿದಲ್ಲಿ ಮುಂಚಿತವಾಗಿ ತಮಗೆ ತಿಳಿಸಬೇಕಾಗಿಯೂ, ಇಲ್ಲವಾದಲ್ಲಿ ಅಂಥ POA ಊರ್ಜಿತ ವಿದೆಯೆಂದು ಭಾವಿಸಿ ಅದರನ್ವಯ ಮುಂದುವರಿಯುವುದಾಗಿಯೂ POA ನೀಡಿದವರಿಗೆ ನೋಟೀಸು ನೀಡಬಹುದು ಅಥವಾ ಈ ಕುರಿತು ಅವರ ನೋಟರೀಕೃತ ದೃಢೀಕರಣ ಪತ್ರವನ್ನು ಪಡೆಯುವುದು ಸೂಕ್ತ.

೬. ಕಂಪನಿಗಳು ತಮ್ಮ ಪರವಾಗಿ ಸಹಿ ಮಾಡಲು ಅನೇಕ ಅಧಿಕಾರಿಗಳಿಗೆ POA ನೀಡಿರುತ್ತವೆ ಅಥವಾ ಕೆಲವು ಸಲ ನಿರ್ದೇಶಕ ಮಂಡಳಿಯ ಠರಾವಿನ ಮೂಲಕ ಅಧಿಕಾರ ನೀಡಲಾಗುತ್ತದೆ. ಅಂಥ ಅಧಿಕಾರ ನೀಡಿಕೆಯ ಔಚಿತ್ಯ ಮತ್ತು ಕಾನೂನುಬದ್ಧತೆಯನ್ನು ನ್ಯಾಯವಾದಿಗಳಿಂದ ಖಚಿತಪಡಿಸಿಕೊಳ್ಳಬೇಕು.

೭. POA ಆಧಾರದಲ್ಲಿ ಕಂಪನಿಯ ಅಧಿಕಾರಿಗಳು ಸಹಿ ಮಾಡುವಾಗ ಕಂಪನಿಯ ಮುದ್ರೆಯನ್ನು ಒತ್ತಬೇಕು.

೮. ಆಸ್ತಿ ವರ್ಗಾವಣೆಯು ಸಾಗಿಬರುವಾಗ ನಡುವೆ ಎಲ್ಲೋ ಒಂದು ಹಂತದಲ್ಲಿ POA ಮೂಲಕ ಸಹಿಮಾಡಿರುವುದು ಗಮನಕ್ಕೆ ಬರಬಹುದು. ಅಂಥ ವ್ಯವಹಾರ ಇತ್ತೀಚಿನದಾಗಿದ್ದರೆ ಆ ಕುರಿತು ಪೂರ್ತಿ ವಿವರವಾದ ಪರಿಶೀಲನೆ ಅಗತ್ಯ.

೯. Puಅ ಆಧಾರದಲ್ಲಿ ಸಹಿ ಮಾಡುವವರಿಗೆ ಯಾವ ಕಾಗದಪತ್ರಗಳಿಗೆ ಸಹಿ ಮಾಡುವ ಅಧಿಕಾರ ನೀಡಲಾಗಿದೆ ಮತ್ತು ಯಾವುದಾದರೂ ಕಾಗದಪತ್ರಗಳಿಗೆ ಮಾಲೀಕರೇ ಸಹಿ ಮಾಡಬೇಕಾಗಿದೆಯೋ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು

ಪವರ್ ಆಫ್ ಅಟಾರ್ನಿ ಮೂಲಕ ವ್ಯವಹರಿಸುವುದು‌ ಕಾನೂನು ರೀತ್ಯಾ ಸಿಂಧುವಾಗಿರುತ್ತದೆ; ಆದರೆ ಕಾಯಿದೆಯ ನಿಬಂಧನೆಗಳನ್ನು ಪಾಲಿಸದಿದ್ದಲ್ಲಿ ಮತ್ತು ಜಾಗರೂಕರಾಗಿರದಿದ್ದಲ್ಲಿ ಮೋಸ ಮಾಡುವ ಜನ ಜಗದ ತುಂಬೆಲ್ಲ ಇದ್ದಾರೆ ಎಂಬುದನ್ನು ಮರೆಯಬಾರದು.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)