R T VittalMurthy Column: ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ
ನಾವು ಕುಮಾರಣ್ಣನ ಹಿಂದೆ ನಿಲ್ಲುವುದು ಬೇರೆ, ನಿಖಿಲ್ ಕುಮಾರಸ್ವಾಮಿಯವರ ಹಿಂದೆ ನಿಲ್ಲುವುದು ಹೇಗೆ? ಅಂತ ಅವರು ಕಿರಿಕಿರಿ ಮಾಡಿಕೊಂಡಿದ್ದಾರೆ ಎಂಬಂಥ ಮಾತುಗಳು ಹರಿದಾಡತೊಡಗಿವೆ. ಯಾವಾಗ ಇಂಥ ಕಲಸುಮೇಲೋಗರ ಶುರುವಾಯಿತೋ, ಆಗ ದೊಡ್ಡ ಗೌಡರು ಕುಮಾರಸ್ವಾಮಿ ಯವರಿಗೆ ಸಿಗ್ನಲ್ಲು ಕೊಟ್ಟು, “ರಾಜ್ಯ ರಾಜಕಾರಣದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದನ್ನು ಬಿಟ್ಟು ದಿಲ್ಲಿ ಯಲ್ಲಿ ಸೆಟ್ಲಾಗುವುದು ಒಳ್ಳೆಯದು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟು ಕೇಂದ್ರ ಸಂಪುಟದಲ್ಲಿ ದೊಡ್ಡ ಖಾತೆ ಕೊಟ್ಟಿದ್ದಾರೆ. ಅ ಕಡೆ ಗಮನ ಕೊಟ್ಟು ಕೆಲಸ ಮಾಡಿದರೆ ಒಳ್ಳೆಯದು" ಎಂದಿದ್ದಾರೆ.


ಮೂರ್ತಿಪೂಜೆ
ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರ ಪಟ್ಟಾಭಿಷೇಕ ಯಾತ್ರೆಗೆ ಮಾಜಿ ಪ್ರಧಾನಿ
ಎಚ್.ಡಿ.ದೇವೇಗೌಡರು ಅಳೆದೂ-ಸುರಿದೂ ಗ್ರೀನ್ ಸಿಗ್ನಲ್ ತೋರಿಸಿದ್ದಾರಂತೆ. ಹಾಗೆಂಬ ವರ್ತ ಮಾನ ಪಕ್ಷದ ಹೆಡ್ಡಾಫೀಸಿನಿಂದ ಹೊರ ಬೀಳುತ್ತಿದ್ದಂತೆಯೇ ಜೆಡಿಎಸ್ ಪಾಳಯದಲ್ಲಿ ಸಂಚಲನ ಶುರುವಾಗಿದೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕುಮಾರಸ್ವಾಮಿ ದಿಲ್ಲಿಗೆ ಹೋದ ನಂತರ ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ನಿಖಿಲ್ ಕುಮಾರಸ್ವಾಮಿಯವರಿಗೆ ನೀಡಬೇಕು ಎಂಬ ಲೆಕ್ಕಾಚಾರ ಪದ್ಮನಾಭ ನಗರದ ಗೌಡರ ನಿವಾಸದಲ್ಲಿ ಶುರುವಾಗಿತ್ತು. ಇದಕ್ಕೆ ಪೂರಕವಾಗಿ ಕುಮಾರಸ್ವಾಮಿಯವರು ಸಿದ್ದು ಸರಕಾರದ ವಿರುದ್ಧ ಅಗ್ರೆಸಿವ್ ಆಗಿ ದಾಳಿ ಪ್ರಾರಂಭಿಸಿದ್ದರು. ಈ ದಾಳಿ ರಾಜ್ಯದ ಗಮನ ಸೆಳೆಯುವ ಕಾಲಕ್ಕೆ ಸರಿಯಾಗಿ ನಿಖಿಲ್ ಪಟ್ಟಾಭಿಷೇಕ ಕಾರ್ಯ ಮುಗಿದರೆ, ಈ ಜಾಗದಲ್ಲಿ ಅವರು ಸೆಟ್ಲಾಗುವುದು ಸುಲಭ ಎಂಬುದು ಈ ದಾಳಿಯ ಹಿಂದಿನ ಲೆಕ್ಕಾಚಾರ ವಾಗಿತ್ತು.
ಆದರೆ ಕುಮಾರಸ್ವಾಮಿಯವರು ಒಂದು ಕಡೆಯಿಂದ ದಾಳಿ ಪ್ರಾರಂಭಿಸುತ್ತಿದ್ದಂತೆಯೇ ಇತ್ತ ಸಿಎಂ
ಸಿದ್ದು ಮತ್ತು ಡಿಸಿಎಂ ಡಿಕೆಶಿ ತಿರುಗಿ ಬಿದ್ದು ಜೆಡಿಎಸ್ ಪಾಳಯವನ್ನೇ ಛಿದ್ರ ಮಾಡಲು ಹೊರಟರು. ಪರಿಣಾಮ? ಇನ್ನೇನು ಜೆಡಿಎಸ್‌ನ ಹನ್ನೆರಡೋ, ಹದಿಮೂರೋ ಶಾಸಕರು ಪಕ್ಷ ತೊರೆದು ಅಸೆಂಬ್ಲಿ ಯಲ್ಲಿ ಪ್ರತ್ಯೇಕವಾಗಿ ಕೂರಲು ಸಜ್ಜಾಗುತ್ತಿದ್ದಾರೆ ಎಂಬ ವರ್ತಮಾನ ಹರಡಿಕೊಂಡಿತು.
ಇದನ್ನೂ ಓದಿ: R T Vittalmurthy Column: ವಿಜಯ ಯಾತ್ರೆ, ಇವರಿಗೆಲ್ಲ ಮಾತ್ರೆ !
ಇದಕ್ಕೆ ಸರಿಯಾಗಿ ನಿಖಿಲ್ ಪಟ್ಟಾಭಿಷೇಕದ ವಿಷಯದಲ್ಲಿ ಪಕ್ಷದ ಹಿರಿಯ ಶಾಸಕರಿಗೆ ಅಸಮಾಧಾನ ಶುರುವಾಗಿದೆ. ನಾವು ಕುಮಾರಣ್ಣನ ಹಿಂದೆ ನಿಲ್ಲುವುದು ಬೇರೆ, ನಿಖಿಲ್ ಕುಮಾರಸ್ವಾಮಿಯವರ ಹಿಂದೆ ನಿಲ್ಲುವುದು ಹೇಗೆ? ಅಂತ ಅವರು ಕಿರಿಕಿರಿ ಮಾಡಿಕೊಂಡಿದ್ದಾರೆ ಎಂಬಂಥ ಮಾತುಗಳು ಹರಿದಾಡತೊಡಗಿವೆ. ಯಾವಾಗ ಇಂಥ ಕಲಸುಮೇಲೋಗರ ಶುರುವಾಯಿತೋ, ಆಗ ದೊಡ್ಡ ಗೌಡರು ಕುಮಾರಸ್ವಾಮಿಯವರಿಗೆ ಸಿಗ್ನಲ್ಲು ಕೊಟ್ಟು, “ರಾಜ್ಯ ರಾಜಕಾರಣದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದನ್ನು ಬಿಟ್ಟು ದಿಲ್ಲಿಯಲ್ಲಿ ಸೆಟ್ಲಾಗುವುದು ಒಳ್ಳೆಯದು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟು ಕೇಂದ್ರ ಸಂಪುಟದಲ್ಲಿ ದೊಡ್ಡ ಖಾತೆ ಕೊಟ್ಟಿದ್ದಾರೆ. ಅ ಕಡೆ ಗಮನ ಕೊಟ್ಟು ಕೆಲಸ ಮಾಡಿದರೆ ಒಳ್ಳೆಯದು" ಎಂದಿದ್ದಾರೆ. ಹೀಗೆ ದೊಡ್ಡ ಗೌಡರು ಸಿಗ್ನಲ್ಲು ಕೊಟ್ಟ ನಂತರ ಕುಮಾರಣ್ಣ ಕರ್ನಾಟಕದ ಮೇಲೆ ಗಮನ ಕಡಿಮೆ ಮಾಡಿದ್ದಾರೆ. ಅದೇ ಕಾಲಕ್ಕೆ ನಿಖಿಲ್ ಪಟ್ಟಾಭಿಷೇಕ ಕಾರ್ಯವೂ ಮುಂದಕ್ಕೆ ಹೋಗಿದೆ. ಆದರೆ ಇದಾಗಿ ಆರೆಂಟು ತಿಂಗಳು ಕಳೆದ ಮೇಲೆ ಚಿತ್ರ ಬದಲಾಗಿದೆ.
ಒಂದು ಕಡೆಯಿಂದ ದೊಡ್ಡ ಗೌಡರು ಮತ್ತು ಕುಮಾರಸ್ವಾಮಿಯವರಿಗೆ ನಿಖಿಲ್ ಪಟ್ಟಾಭಿಷೇಕದ ಮುಹೂರ್ತ ಹತ್ತಿರವಾಗಿದೆ ಅನ್ನಿಸುತ್ತಿದ್ದರೆ, ಮತ್ತೊಂದೆಡೆಯಿಂದ ಜೆಡಿಎಸ್‌ನ ಬಹುತೇಕ ಶಾಸಕ ರಿಗೆ, ‘ಪಕ್ಷ ಕಟ್ಟುತ್ತಿರುವವರೇ ದೊಡ್ಡ ಗೌಡರು ಮತ್ತು ಕುಮಾರಸ್ವಾಮಿ. ಅದಕ್ಕೆ ಅಗತ್ಯವಾದ ಬಂಡವಾಳ ಹಾಕುವವರೂ ಅವರೇ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಪಕ್ಷಾಧ್ಯಕ್ಷರಾಗಿ ಬಂದು ಕೂತರೆ ತಪ್ಪೇನು?’ ಅನ್ನಿಸತೊಡಗಿದೆ.
ಇದೇ ರೀತಿ, ಪಕ್ಷ ತೊರೆದು ಕೈ ಪಾಳಯ ಸೇರುವ ಲೆಕ್ಕಾಚಾರದಲ್ಲಿದ್ದ ಹಲವರಿಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿದೆ. ಕಾರಣ? ಇವತ್ತು ಕಾಂಗ್ರೆಸ್ಸಿನಲ್ಲಿ ದಿನ ಕಳೆದಂತೆ ಸಿದ್ದರಾಮಯ್ಯ ಬಲಿಷ್ಠ ರಾಗುತ್ತಿರುವಾಗ ತಾವು ಕಾಂಗ್ರೆಸ್ಸಿಗೆ ಹೋದರೂ ಶಕ್ತಿ ಹೆಚ್ಚಾಗುವುದಿಲ್ಲ. ಹಾಗೆಯೇ ತಾವು ಪಕ್ಷ ತೊರೆದರೂ ಜೆಡಎಸ್ ಕಾರ್ಯಕರ್ತರ ಪಡೆ ತಪ್ಪಿಯೂ ತಮ್ಮ ಹಿಂದೆ ಬರುವುದಿಲ್ಲ.
ಹೀಗಾಗಿ ಜೆಡಿಎಸ್ ತೊರೆಯುವುದು ಎಂದರೆ ರಾಜಕೀಯ ಭವಿಷ್ಯಕ್ಕೆ ಫಾಲಿಡಾಲ್ ಕೊಡುವು ದೆಂದೇ ಅರ್ಥ ಎಂಬ ಲೆಕ್ಕಾಚಾರ. ಅರ್ಥಾತ್, ಈಗ ಸನ್ನಿವೇಶ ಕೂಡಿ-ಕಳೆದು ನಿಖಿಲ್ ಕುಮಾರ ಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ಪ್ರಶಸ್ತವಾಗತೊಡಗಿದೆ. ಹಾಗಂತ ಏಕಾಏಕಿ ತಲೆಯ ಮೇಲೆ ಕಿರೀಟ ಇಟ್ಟರೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಅದರ ಭಾರ ಹೊರುವುದು ಕಷ್ಟ ಆಗಬಾರದಲ್ಲ? ಹಾಗಂತಲೇ ದೊಡ್ಡ ಗೌಡರು ಪಟ್ಟಾಭಿಷೇಕಕ್ಕೂ ಮುನ್ನ ಇಡೀ ರಾಜ್ಯದುದ್ದ ಪ್ರವಾಸ ಮಾಡು ವಂತೆ ಮೊಮ್ಮಗ ನಿಗೆ ಸೂಚಿಸಿದ್ದಾರೆ.
ಜೆಡಿಎಸ್ ಪಾಳಯದ ಪ್ರಕಾರ, ಜೂನ್ ತಿಂಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ರಾಜ್ಯ ಪ್ರವಾಸ ಆರಂಭವಾಗಲಿದೆ. ಕುತೂಹಲದ ಸಂಗತಿ ಎಂದರೆ ನಿಖಿಲ್ ಅವರನ್ನು ಹೊತ್ತೊಯ್ಯುವ ರಥ ಮೊದಲು ಎಲ್ಲಿಂದ ಹೊರಡಬೇಕು. ರಾಜ್ಯದ ಯಾವ್ಯಾವ ಭಾಗಗಳಲ್ಲಿ ಸಂಚರಿಸಬೇಕು? ಅನ್ನುವು ದರ ನೀಲನಕ್ಷೆ ದೊಡ್ಡ ಗೌಡರ ಕಣ್ಣಳತೆಯ ಸಿದ್ಧವಾಗುತ್ತಿದೆ.
ಅಗರ್ವಾಲ್ ಅವರಿಗೇಕೆ ಕೋಪ?
ಈ ಮಧ್ಯೆ ರಾಜ್ಯ ಬಿಜೆಪಿಯ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಅವರಿಗೆ ಮಿತಿ ಮೀರಿದ ಕೋಪ ಬಂದಿದೆ. ಕಾರಣ? ಭಾರತ-ಪಾಕಿಸ್ತಾನದ ನಡುವಣ ‘ಮಿನಿ ವಾರ್’ ನಂತರ ಸಿದ್ದರಾಮಯ್ಯ ಬ್ರಿಗೇಡ್‌ನ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಮತ್ತಿತರರು ಕೇಂದ್ರ ಸರಕಾರದ ವಿರುದ್ದ ಮುಗಿಬಿದ್ದಿzರೆ. ಇಡೀ ಎಪಿಸೋಡಿನಲ್ಲಿ ಕೇಂದ್ರ ಸರಕಾರ ಹೇಗೆ ವಿಫಲವಾಗಿದೆ? ನಾಲ್ಕು ದಿನ ಯುದ್ಧ ನಡೆಸಿದ ನರೇಂದ್ರ ಮೋದಿ ಅವರಿಗಿಂತ, ಪಾಕಿಸ್ತಾನವನ್ನು ಹೋಳು ಮಾಡಿ 93 ಸಾವಿರ ಸೈನಿಕರನ್ನು ಸೆರೆ ಹಿಡಿಯುವಂತೆ ಮಾಡಿದ ಇಂದಿರಾ ಗಾಂಧಿ ಎಷ್ಟು ಗ್ರೇಟು ಎಂಬಲ್ಲಿಯ ತನಕ ಅವರು ಬಾರಿಸುತ್ತಿದ್ದರೆ ರಾಜ್ಯ ಬಿಜೆಪಿ ತಕ್ಕ ಉತ್ತರ ನೀಡುತ್ತಿಲ್ಲ ಎಂಬುದು ರಾಧಾ ಮೋಹನ ದಾಸ್ ಅಗರ್ವಾಲ್ ಅವರ ಸಿಟ್ಟು.
ಬಿಜೆಪಿ ಮೂಲಗಳ ಪ್ರಕಾರ, ಅಗರ್ವಾಲ್ ಅವರ ಆಕ್ರೋಶಕ್ಕೆ ಅಮಿತ್ ಶಾ ತೆಗೆದುಕೊಂಡ ಕ್ಲಾಸು ಕಾರಣ. “ಅಲ್ರೀ ನಿಮ್ಮ ಉಸ್ತುವಾರಿಯಲ್ಲಿರುವ ಕರ್ನಾಟಕದ ಬಿಜೆಪಿ ಘಟಕ ಯಾಕೆ ನಿರುತ್ಸಾಹ ದಿಂದಿದೆ? ಅಲ್ಲಿರುವ ನಮ್ಮ ಸೋಷಿಯಲ್ ಮೀಡಿಯಾ ಘಟಕ ಎಲ್ಲಿ ನಾಪತ್ತೆಯಾಗಿದೆ? ಈ ಬಗ್ಗೆ ಅಲ್ಲಿಂದಲೇ ನನಗೆ ದೂರುಗಳು ಬರುತ್ತಿವೆ. ಹೀಗಾಗಿ ಅಲ್ಲಿಗೆ ಹೋಗಿ ಸರಿ ಮಾಡಿ ಬನ್ನಿ" ಅಂತ ಅಮಿತ್ ಶಾ ಅವರು ಅಗರ್ವಾಲ್ ಅವರಿಗೆ ಕ್ಲಾಸು ತೆಗೆದುಕೊಂಡಿದ್ದಾರೆ.
ಹೀಗೆ ಅವರು ಕ್ಲಾಸು ತೆಗೆದುಕೊಂಡ ನಂತರ ತಿರಂಗಾ ಯಾತ್ರೆಗೆ ಅಂತ ಕರ್ನಾಟಕಕ್ಕೆ ಬಂದಿದ್ದ ಅಗರ್ವಾಲ್ ಗುರ್ರ್ ಅಂದಿದ್ದಾರೆ. “ನೋಡ್ರೀ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಆಡಿದ ಆಟ ಎಷ್ಟು? ಭಯೋತ್ಪಾದಕರನ್ನು ಬಳಸಿ ಜನರನ್ನು ಕೊಲ್ಲಿಸಿದ ಘಟನೆ ಗಳೆಷ್ಟು? ಆ ಬಗ್ಗೆ ಮಾತನಾಡ್ರೀ" ಎಂದು ಗುಡುಗಿದ್ದಾರೆ.
ಅಷ್ಟೇ ಅಲ್ಲ, 1971ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಿದ ಇಂದಿರಾ ಗಾಂಧಿ ಗ್ರೇಟು ಅಂತ ಕಾಂಗ್ರೆಸ್‌ನವರು ಕೊಚ್ಚಿಕೊಳ್ಳುತ್ತಾರಲ್ಲ? ಹಾಗಿದ್ದರೆ ಸೆರೆ ಹಿಡಿದ 93 ಸಾವಿರ ಸೈನಿಕರನ್ನೇಕೆ ಬಿಡುಗಡೆ ಮಾಡಿದರು? ಯುದ್ಧ ನಡೆಸಿ ಗೆದ್ದರು ಅಂದ ಮೇಲೆ ಪಾಕ್ ಆಕ್ರಮಿತ ಕಾಶ್ಮೀರವನ್ನೇಕೆ ವಶಪಡಿಸಿಕೊಳ್ಳಲಿಲ್ಲ? ಎಂಬುದನ್ನೂ ಕೇಳಿ" ಎಂದು ತಾಕೀತು ಮಾಡಿದ್ದಾರೆ. ಯಾವಾಗ ರಾಧಾ ಮೋಹನದಾಸ್ ಅಗರ್ವಾಲ್ ಅವರು ಈ ರೀತಿ ತಾರಾಮಾರಾ ಬಡಿದು ಹೋದರೋ, ರಾಜ್ಯ ಬಿಜೆಪಿ ಯ ನಾಯಕರು ಭಾರಿ ಏರ್ ಸ್ಟ್ರೈಕಿಗೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ಕಳೆದ ಶುಕ್ರವಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರು ಯುದ್ಧದ ಬಗ್ಗೆ ಎಕ್ಸ್ ಪರ್ಟ್ ಒಪೀನಿಯನ್ ಕೊಟ್ಟಿದ್ದೇ ತಡ, ರಮ್ಮಂತ ಏರ್‌ಸ್ಟ್ರೈಕು ಮಾಡಿ ತಮ್ಮ ಬತ್ತಳಿಕೆಯಲ್ಲಿದ್ದ ಬ್ರಹ್ಮೋಸ್ ಕ್ಷಿಪಣಿಗಳನ್ನು ಅವರ ಮೇಲೆ ಉದುರಿಸಿ ಸಮಾಧಾನ ಪಟ್ಟುಕೊಂಡಿದ್ದಾರೆ.
ಕುಮಾರಣ್ಣನಿಗೆ ರೆಡ್ಡಿಗಾರು ಟಾನಿಕ್
ಈ ಮಧ್ಯೆ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಖುಷಿಯಾಗಿದ್ದಾರೆ. ಅವರ ಖುಷಿಗೆ ಕರ್ನಾಟಕದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕಾರಣ. ಯಾಕೆಂದರೆ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಹತ್ತತ್ತಿರ ಒಂದು ವರ್ಷ ಕಳೆಯುತ್ತಾ ಬಂದರೂ ಸಿಎಂ ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರ‍್ಯಾರೂ ಅವರ ಬಳಿ ಸುಳಿದಿರಲಿಲ್ಲ. ವೈಯಕ್ತಿಕ ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಸಂಘರ್ಷ ನಡೆಯುತ್ತಿರುವುದೇನೋ ಸರಿ,
ಆದರೆ ರಾಜಕೀಯವನ್ನು ರಾಜಕೀಯ ಎಂದು ನೋಡಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರು ತಮ್ಮ ಬಳಿ ಪ್ರಪೋಸಲ್ಲು ತರಬಹುದಿತ್ತು ಎಂಬುದು ಕುಮಾರಸ್ವಾಮಿ ಯೋಚನೆ. ಅಂದ ಹಾಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ, ಅಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೆಲ್ಲ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಪ್ರಪೋಸಲ್ಲುಗಳನ್ನು ಕೊಟ್ಟಿರುವು ದಷ್ಟೇ ಅಲ್ಲ, ಪಾಸಿಟಿವ್ ರಿಸಲ್ಟನ್ನೂ ಪಡೆದುಕೊಂಡಿದ್ದಾರೆ. ಈ ಪೈಕಿ ರೇವಂತತೆಡ್ಡಿ ಅವರು ತಮ್ಮ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಪ್ರಪೋಸಲ್ಲು ಕೊಟ್ಟರೆ, ನಾಯ್ಡುಗಾರು ತಮ್ಮ
ರಾಜ್ಯದ ಕೈಗಾರಿಕೆಗಳಿಂದ ಹಿಡಿದು ಹಲವು ವಿಷಯಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಪ್ರಪೋ ಸಲ್ಲುಗಳನ್ನು ಕೊಟ್ಟಿದ್ದಾರೆ.
ಹೀಗಾಗಿ ಕರ್ನಾಟಕ ಸರಕಾರ ಕೂಡಾ ತಮ್ಮಿಂದ ಕೆಲಸ ಮಾಡಿಸಿಕೊಳ್ಳಲಿ ಎಂಬುದು ಕುಮಾರ ಸ್ವಾಮಿ ಇಚ್ಛೆ. ಆದರೆ ಈ ವಿಷಯದಲ್ಲಿ ಕುಮಾರಸ್ವಾಮಿ ಬರೀ ಎದುರು ನೋಡಿದ್ದೇ ಬಂತು. ಇದ್ದುದರಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಎರಡು ಬಾರಿ ಕುಮಾರಣ್ಣ ಅವರನ್ನು ಭೇಟಿ ಮಾಡಿ, “ಕೇಂದ್ರದ ಮುಂದಿರುವ ನಮ್ಮ ಪೆಂಡಿಂಗ್ ಪ್ರಪೋಸಲ್ಲುಗಳ ಕಡೆ ನೋಡಿ. ಕರ್ನಾಟಕ ದಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬನ್ನಿ" ಅಂತ ಆಹ್ವಾನಿಸಿ ದರೇ ಹೊರತು, ಯಾರೊಬ್ಬರೂ ಕಾಂಕ್ರಿಟ್ ಆಗಿ ಪ್ರಪೋಸಲ್ಲು ಕೊಟ್ಟಿಲ್ಲ ಎಂಬುದು
ಕುಮಾರಣ್ಣನ ನೋವು.
ಇಂಥ ಟೈಮಿನ ಕುಮಾರಸ್ವಾಮಿ ಅವರನ್ನು ದಿಲ್ಲಿಯ ಉದ್ಯೋಗ ಭವನದಲ್ಲಿ ಭೇಟಿ ಮಾಡಿದ ರಾಮಲಿಂಗಾರೆಡ್ಡಿ ಒಂದು ಪ್ರಪೋಸಲ್ಲು ಕೊಟ್ಟಿದ್ದಾರೆ. ದೇಶದ ವಿವಿಧ ರಾಜ್ಯಗಳಿಗೆ ಕೇಂದ್ರ ಸರಕಾರ ಕೊಡಲುದ್ದೇಶಿಸಿರುವ 14500 ಇಲೆಕ್ಟ್ರಿಕಲ್ ಬಸ್ಸುಗಳ ಪೈಕಿ ಕರ್ನಾಟಕಕ್ಕೆ ಸಿಂಹ ಪಾಲು ಸಿಗಬೇಕು ಎಂಬುದು ಅವರ ಪ್ರಪೋಸಲ್ಲು. ಹೀಗೆ ಪ್ರಪೋಸಲ್ಲು ಕೊಡುವಾಗ ಮೂರು ಬೇಡಿಕೆ ಗಳನ್ನು ಮಂಡಿಸಿರುವ ರಾಮಲಿಂಗಾರೆಡ್ಡಿ, “ಇವನ್ನು ಈಡೇರಿಸಿದರೆ ಇಲೆಕ್ಟ್ರಿಕ್ ಬಸ್ಸುಗಳನ್ನು ನಿರ್ವಹಿಸು ವುದು ಸುಲಭ" ಎಂದಿದ್ದಾರೆ.
ಹೀಗೆ ಅವರು ತಮ್ಮನ್ನು ಭೇಟಿಯಾಗಿ ಪ್ರಪೋಸಲ್ಲು ಕೊಟ್ಟ ಬೆಳವಣಿಗೆಯಿಂದ ಕುಮಾರಸ್ವಾಮಿ ಎಷ್ಟು ಖುಷಿಯಾಗಿದ್ದಾರೆಂದರೆ, ಅದನ್ನು ಇಲಾಖೆಯ ಮಟ್ಟದಲ್ಲಿ ಮೂವ್ ಮಾಡಿರುವುದಷ್ಟೇ ಅಲ್ಲದೆ ಮೇಲಿಂದ ಮೇಲೆ ಅದರ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಅಷ್ಟೇ ಅಲ್ಲ, “ರಾಜಕೀಯಕ್ಕೂ ಅಭಿವೃದ್ಧಿಗೂ ಸಂಬಂಧ ಜೋಡಿಸದೆ ಇರುವುದನ್ನು ರೆಡ್ಡಿಗಾರು ಅವರಿಂದ ನೋಡಿ ಕಲಿಯಬೇಕು ಕಣ್ರೀ" ಎನ್ನುತ್ತಿದ್ದಾರಂತೆ.