Roopa Gururaj Column: ವಿಧಿಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ
ಗರುಡನಿಗೆ ಪುಟ್ಟ ಗುಬ್ಬಿಯ ಮೇಲೆ ಕನಿಕರ ಬಂದಿತು. ‘ಪಾಪ ಇವನು ನನ್ನ ಜಾತಿಯ ಪುಟ್ಟ ಪಕ್ಷಿ, ಯಾಕೆ ನಡುಗುತ್ತಿದ್ದಾನೆ? ಸಮಾಧಾನ ಮಾಡಬೇಕು’ ಎಂದುಕೊಂಡು ಅದರ ಬಳಿ ಹೋಗಿ, ‘ಗುಬ್ಬಿ ನೀನು ಯಾಕೆ ನಡುಗುತ್ತಿರುವೆ’ ಎಂದು ಕೇಳಿದ, ಗುಬ್ಬಿ ಹೇಳಿತು, ‘ಈಗ ತಾನೆ ಯಮರಾಜನನ್ನು ನೋಡಿದೆ, ಅವನ ಕಣ್ಣಿನಲ್ಲಿ ನನ್ನ ಚಿತ್ರ ಕಾಣುತ್ತಿತ್ತು. ನನ್ನ ಜೀವಿತಾವಧಿ ಮುಗಿದಿದೆ, ಯಮ ನನ್ನನ್ನು ಕರೆದೊಯ್ಯಲು ಬಂದಿದ್ದಾನೆ ಅಂತ ನನಗೆ ತುಂಬಾ ಭಯವಾಗಿದೆ’ ಎಂದಿತು.

-

ಒಂದೊಳ್ಳೆ ಮಾತು
ಒಮ್ಮೆ ಕೈಲಾಸದಲ್ಲಿ ಒಂದು ಸಭೆ ಕರೆಯಲಾಯಿತು. ಆ ಸಭೆಗೆ ದೇವಾನುದೇವತೆಗಳು ಸೇರಿದ್ದರು. ಯಮ ತನ್ನ ವಾಹನ ಕೋಣನ ಮೇಲೆ ಸಭೆಗೆ ಬಂದನು. ಸಭಾಭವನದ ಒಳಗೆ ಹೋಗುವ ಮೊದಲು ಕೋಣವನ್ನು ಒಂದೆಡೆ ನಿಲ್ಲಿಸಿ ಇಳಿದು ಆ ಕಡೆ ಈ ಕಡೆ ನೋಡಿದ. ಅಲ್ಲಿಯೇ ಒಂದು ಕೈಲಾಸ ವೃಕ್ಷದ ಮೇಲೆ ಪುಟ್ಟ ಗುಬ್ಬಚ್ಚಿ ಕುಳಿತಿತ್ತು.
ಯಮ ಅದರ ಕಡೆಗೆ ದೃಷ್ಟಿ ಇಟ್ಟು ಕ್ಷಣಕಾಲ ನೋಡಿ, ಸಭಾಭವನದ ಒಳಗೆ ಹೋದನು. ಗುಬ್ಬಿಗೆ ಭಯವಾಯಿತು. ಯಮ ಯಾಕೆ ತನ್ನ ಮೇಲೆ ದೃಷ್ಟಿ ಬೀರಿದ. ಇನ್ನು ತನ್ನ ಕಥೆ ಮುಗಿಯಿತು. ತನ್ನ ಸಾವು ಹತ್ತಿರ ಬಂದಿದೆ ಎಂದುಕೊಂಡ ಗುಬ್ಬಿ ಹೆದರಿಕೆಯಿಂದ ನಡುಗುತ್ತಿತ್ತು.
ಸ್ವಲ್ಪ ಹೊತ್ತಿಗೆ ಮಹಾವಿಷ್ಣು ತನ್ನ ವಾಹನ ಗರುಡನ ಮೇಲೆ ಬಂದು ಇಳಿದು ಸಭೆಯ ಕಲಾಪಕ್ಕೆ ಒಳಗೆ ಹೋದನು. ಅ ನಿಂತಿದ್ದ ಗರುಡ ಸುತ್ತಮುತ್ತ ತಿರುಗಿದಾಗ ಪುಟ್ಟ ಗುಬ್ಬಿ ಹೆದರಿ ನಡುಗುವುದನ್ನು ನೋಡಿದ.
ಇದನ್ನೂ ಓದಿ: Roopa Gururaj Column: ಸಂಬಂಧಗಳ ನಿಭಾವಣೆ: ನಾನು ಬೇಡ, ನಾವು ಇರಲಿ
ಗರುಡನಿಗೆ ಪುಟ್ಟ ಗುಬ್ಬಿಯ ಮೇಲೆ ಕನಿಕರ ಬಂದಿತು. ‘ಪಾಪ ಇವನು ನನ್ನ ಜಾತಿಯ ಪುಟ್ಟ ಪಕ್ಷಿ, ಯಾಕೆ ನಡುಗುತ್ತಿದ್ದಾನೆ? ಸಮಾಧಾನ ಮಾಡಬೇಕು’ ಎಂದುಕೊಂಡು ಅದರ ಬಳಿ ಹೋಗಿ, ‘ಗುಬ್ಬಿ ನೀನು ಯಾಕೆ ನಡುಗುತ್ತಿರುವೆ’ ಎಂದು ಕೇಳಿದ, ಗುಬ್ಬಿ ಹೇಳಿತು, ‘ಈಗ ತಾನೆ ಯಮರಾಜನನ್ನು ನೋಡಿದೆ, ಅವನ ಕಣ್ಣಿನಲ್ಲಿ ನನ್ನ ಚಿತ್ರ ಕಾಣುತ್ತಿತ್ತು. ನನ್ನ ಜೀವಿತಾವಧಿ ಮುಗಿದಿದೆ, ಯಮ ನನ್ನನ್ನು ಕರೆದೊಯ್ಯಲು ಬಂದಿದ್ದಾನೆ ಅಂತ ನನಗೆ ತುಂಬಾ ಭಯವಾಗಿದೆ’ ಎಂದಿತು.
ಗರುಡ ಅದನ್ನು ಸಮಾಧಾನಪಡಿಸಿ ‘ನೀನು ಹೆದರಬೇಡ. ಯಮನ ಕಣ್ಣಿಗೆ ಬೀಳದಂತೆ ನಿನ್ನನ್ನು ಸುರಕ್ಷಿತವಾಗಿ ದೂರದ ಹಿಮಾಲಯದ ತಪ್ಪಲಿನ ಪರ್ವತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯಾರಿಗೂ ಕಾಣದಂತೆ ಅಲ್ಲಿ ಭದ್ರವಾದ ಜಾಗದಲ್ಲಿ ಇಡುವೆ’ ಎಂದ.
ಗುಬ್ಬಚ್ಚಿಯನ್ನು ತನ್ನ ಮೇಲೆ ಕೂರಿಸಿಕೊಂಡು ಹಾರಿ ಪರ್ವತದ ಬಳಿ ಬಂದು ಅಲ್ಲಿದ್ದ ಒಂದು ಗುಹೆಯೊಳಗೆ ಅದನ್ನು ಬಿಟ್ಟು ಗರುಡ ಮರಳಿದ. ಇಷ್ಟು ಆಗುವುದರೊಳಗೆ ಒಳಗೆ ಸಭೆ ಮುಗಿದಿತ್ತು. ಸಭೆಯ ಕಲಾಪ ಮುಗಿಸಿ ಯಮ ಹೊರಗೆ ಬಂದು ಗರುಡನನ್ನು ನೋಡಿ ನಕ್ಕನು. ಗರುಡನಿಗೆ ಯಮನ ನಗು ಹಿಡಿಸಲಿಲ್ಲ, ಅವನು ಹೇಳಿದ- ‘ನೀನು ಗುಬ್ಬಚ್ಚಿಯನ್ನು ನೋಡಿದಂತೆ ನನ್ನ ನೋಡಿ ನಕ್ಕ ಮಾತ್ರಕ್ಕೆ ನಾನೇನು ಹೆದರುವುದಿಲ್ಲ. ನನ್ನ ಮೇಲೆ ಮಹಾವಿಷ್ಣು ಕುಳಿತುಕೊಳ್ಳುತ್ತಾನೆ, ನಿನಗೂ ಗೊತ್ತಿರಬೇಕಲ್ಲ?’.
ಯಮರಾಜ ಮತ್ತೂ ಜೋರಾಗಿ ನಗುತ್ತಾ ‘ನಾನು ನಕ್ಕಿದ್ದು ಅದಕ್ಕಲ್ಲ, ನೀನು ನನ್ನ ಹತ್ತಿರವೇ ನಾಟಕ ಆಡುವೆಯಲ್ಲ’ ಎಂದಾಗ ಗರುಡ, ‘ಏನೀಗ ಆ ಪುಟ್ಟ ಪಕ್ಷಿಯ ಮೇಲೆ ನಿನ್ನ ದೃಷ್ಟಿ ನೆಟ್ಟು ಹೆದರಿಸಿದಿಯಲ್ಲ, ಅದನ್ನು ನಾನು ಜೋಪಾನ ಮಾಡಿ ಬಂದಿರುವೆ, ಇನ್ನು ಗುಬ್ಬಚ್ಚಿಗೆ ನಿನ್ನ ಭಯವಿಲ್ಲ’ ಎಂದ.
ಯಮ ಇನ್ನಷ್ಟು ಜೋರಾಗಿ ನಕ್ಕ, ಗರುಡನಿಗೆ ಮತ್ತೂ ಆಶ್ಚರ್ಯವಾಯಿತು. ಯಮ ಹೇಳಿದ, ‘ನಾನು ಆ ಗುಬ್ಬಿಯನ್ನು ಮೊದಲು ನೋಡಿದಾಗ ನನಗನ್ನಿಸಿತು, ಇದಕ್ಕೆ ಸಾವು ಇನ್ನು ಸ್ವಲ್ಪ ಹೊತ್ತಿಗೆ ಬರುವುದು. ಅದೂ ಹಿಮಾಲಯ ಪರ್ವತದ ಗುಹೆಯೊಳಗೆ ಒಂದು ಹಾವಿನ ಬಾಯಲ್ಲಿ ಎಂದು ಲಿಖಿತವಿತ್ತು ಎಂಬುದನ್ನು ತಿಳಿದು ಆಶ್ಚರ್ಯವಾಯಿತು.
ಈ ಪುಟ್ಟ ಗುಬ್ಬಿ ಹಿಮಾಲಯ ಪರ್ವತಕ್ಕೆ ಇಷ್ಟೇ ಸಮಯದಲ್ಲಿ ಹೋಗುವುದು ಹೇಗೆ? ಅದರ ಸಾವು ಅಲ್ಲಿರುವ ಹಾವಿನ ಬಾಯಲ್ಲಿ ಎಂದರೇನು? ಎಂದು ನನಗೇ ಆಶ್ಚರ್ಯವಾಗಿತ್ತು. ಮಾತ್ರವಲ್ಲ, ಆ ಪುಟ್ಟ ಪಕ್ಷಿಯನ್ನು ಹಾವಿನ ಬಾಯಿಗೆ ಹಾಕಲು ಆ ವಿಧಿಯು ನಿನ್ನನ್ನೇ ಬಳಸಿಕೊಂಡಿತಲ್ಲ, ಅದನ್ನು ಕಂಡು ನನಗೆ ಆಶ್ಚರ್ಯವಾಗಿದ್ದು’.
ಕಥೆ ಕಾಲ್ಪನಿಕವಾದರೂ ಅದರಿಂದ ಸಿಗುವ ಪಾಠ ನಮ್ಮೆಲ್ಲರಿಗೂ ಜೀವನದಲ್ಲಿ ದೊಡ್ಡ ಅರಿವು ಮೂಡಿಸುತ್ತದೆ. ನಾವ್ಯಾರೂ ಅಮರರಲ್ಲ. ಆಯಸ್ಸು ಮುಗಿದ ಕೂಡಲೇ ಮುಂದಿನ ದಾರಿ ಹಿಡಿಯ ಲೇಬೇಕು. ಇರುವಷ್ಟು ದಿನ ಬದುಕನ್ನು ಒಳ್ಳೆಯ ರೀತಿಯಲ್ಲಿ ಬದುಕುವ ಪ್ರಯತ್ನ ಮಾಡೋಣ.