ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Nadoja Manu Baligar Column: ವಿಶಿಷ್ಟ ಅನುಭವ ನೀಡಿದ ಕೃತಿಗಳ ಬಿಡುಗಡೆ ಸಮಾರಂಭ

ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರು ಸೇರಿದಂತೆ ಐವರು ಲೇಖಕರು ರಚಿಸಿದ ಒಟ್ಟು 8 ಪುಸ್ತಕಗಳ ಲೋಕಾರ್ಪಣೆ ಸಮಾರಂಭವು ಶನಿವಾರ (ಜು.26) ಅದ್ದೂರಿಯಾಗಿ ನೆರವೇರಿತು. ನನ್ನ ಅರ್ಧ ಶತಮಾ ನದ ಸಾಹಿತ್ಯಿಕ ಜೀವನದಲ್ಲಿ ಇಂಥ ಅನನ್ಯ, ಅರ್ಥಪೂರ್ಣ ಮತ್ತು ಆತ್ಮೀಯ ಪುಸ್ತಕ ಬಿಡುಗಡೆ ಸಮಾರಂಭವನ್ನು ನಾನು ಕಂಡಿಲ್ಲ ಎಂಬುದನ್ನು ಅಂದು ಮನಗಂಡೆ.

ವಿಶಿಷ್ಟ ಅನುಭವ ನೀಡಿದ ಕೃತಿಗಳ ಬಿಡುಗಡೆ ಸಮಾರಂಭ

Ashok Nayak Ashok Nayak Jul 28, 2025 10:29 AM

ಮೆಲುಕು

ನಾಡೋಜ ಮನು ಬಳಿಗಾರ್

ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರು ಸೇರಿದಂತೆ ಐವರು ಲೇಖಕರು ರಚಿಸಿದ ಒಟ್ಟು 8 ಪುಸ್ತಕಗಳ ಲೋಕಾರ್ಪಣೆ ಸಮಾರಂಭವು ಶನಿವಾರ (ಜು.26) ಅದ್ದೂರಿಯಾಗಿ ನೆರವೇರಿತು. ನನ್ನ ಅರ್ಧ ಶತಮಾನದ ಸಾಹಿತ್ಯಿಕ ಜೀವನದಲ್ಲಿ ಇಂಥ ಅನನ್ಯ, ಅರ್ಥಪೂರ್ಣ ಮತ್ತು ಆತ್ಮೀಯ ಪುಸ್ತಕ ಬಿಡುಗಡೆ ಸಮಾರಂಭವನ್ನು ನಾನು ಕಂಡಿಲ್ಲ ಎಂಬುದನ್ನು ಅಂದು ಮನಗಂಡೆ.

ವಿಶ್ವೇಶ್ವರ ಭಟ್ಟರೊಂದಿಗೆ ಪುಸ್ತಕ ಬಿಡುಗಡೆ ಮಾಡಿದ ಇತರ ಲೇಖಕರೆಂದರೆ, ಬಹ್ರೈನ್‌ನ ಕಿರಣ್ ಉಪಾಧ್ಯಾಯ, ಎಸ್.ಷಡಕ್ಷರಿ, ರಾಜು ಅಡಕಳ್ಳಿ ಮತ್ತು ರೂಪಾ ಗುರುರಾಜ್. ಕನ್ನಡದ ಶಿಖರಪ್ರಾಯ ಲೇಖಕ ಡಾ. ಎಸ್.ಎಲ್.ಭೈರಪ್ಪ ಅವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಿದ್ದರು. ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ನಲ್ಲಿರುವ ಎಫ್‌ ಕೆಸಿಸಿಐನ ಸುಂದರ ಸಭಾಂಗಣ ದಲ್ಲಿ ನಡೆದ ಈ ಕಾರ್ಯಕ್ರಮವು ಅಭೂತಪೂರ್ವವಾಗಿತ್ತು. ಅಲ್ಲಿನ ಶಿಸ್ತು, ಸಂಯಮ ಮತ್ತು ಸುಂದರ ವಾತಾವರಣವು ವೇದಿಕೆಗೆ ಮಾತ್ರವೇ ಸೀಮಿತವಾಗಿರಲಿಲ್ಲ; ನೆರೆದಿದ್ದ ಐದು ನೂರು ಜನ ಪ್ರೇಕ್ಷಕವರ್ಗಕ್ಕೂ ಅದು ಅನ್ವಯಿಸಿತ್ತು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಈ ಸುದೀರ್ಘ ಕಾರ್ಯಕ್ರಮದಲ್ಲಿ ಎಲ್ಲಿಯೂ ಅಸ್ತವ್ಯಸ್ತತೆಯಾಗಲಿ, ಆಭಾಸದ ಪ್ರಸಂಗವಾಗಲಿ ನಡೆಯಲಿಲ್ಲ. ಒಟ್ಟಾರೆ, ಸಭಾಂಗಣವೆಲ್ಲ ಶಿಸ್ತು-ಸಂಯಮ-ಸೌಂದರ್ಯದಿಂದ ತುಂಬಿ ತುಳುಕಿತ್ತು.

ಇದನ್ನೂ ಓದಿ: Hari Paraak Column: ಅಕ್ವೇರಿಯಂನಲ್ಲಿ ಮೀನು ಸಾಕುವವನು : ವೆಜಿಟೇರಿಯನ್

ಪ್ರಭಾವಶಾಲಿ ಭಾಷಣಗಳು

ವೇದಿಕೆಯಲ್ಲಿದ್ದ ಗಣ್ಯರು ಮತ್ತು ಸಾಹಿತಿಗಳು ಆಡಿದ ಮಾತುಗಳು ಅತೀವ ಮೆಚ್ಚುಗೆಗೆ ಪಾತ್ರ ವಾದವು. ಲೇಖಕರು, ಉದ್ಘಾಟಕರು, ಅಧ್ಯಕ್ಷರ ಮಾತುಗಳು, ಮತ್ತು ಮುಖ್ಯವಾಗಿ 95 ವರ್ಷ ವಯಸ್ಸಿನ ‘ಸಾಹಿತ್ಯ ಭೀಷ್ಮ’ ಭೈರಪ್ಪನವರು ಸ್ವಯಂಪ್ರೇರಿತರಾಗಿ ಆಡಿದ ನಾಲ್ಕೇ ನಾಲ್ಕು ಮಾತು ಗಳು- ಇವೆಲ್ಲವೂ ಸೇರಿ ಮೂರೂವರೆ ಗಂಟೆಗಳ ಅವಧಿಯಲ್ಲಿ ಹೊರಹೊಮ್ಮಿದ ವೈವಿಧ್ಯಮಯ ವಾಗ್ಝರಿಗಳು ಕೇಳುಗರ ಮನಗಳನ್ನು ಗಾಢವಾಗಿ ಆವರಿಸಿದವು.

ಸಭಾಂಗಣದಲ್ಲಿ ಕಂಡುಬರುತ್ತಿದ್ದ ‘ಪಿನ್-ಡ್ರಾಪ್ ಸೈಲೆನ್ಸ್’ ವಾತಾವರಣ ಇದಕ್ಕೆ ಸಾಕ್ಷಿಯಾಗಿತ್ತು. ಸಮಾರಂಭದ ಆರಂಭದಲ್ಲಿ ಮಾತನಾಡಿದ ಲೇಖಕರು ತಮ್ಮ ಪುಸ್ತಕಗಳ ಕುರಿತು ಸ್ವತಃ ವಿವರಿಸಿದರು. ಪ್ರತಿಯೊಬ್ಬರಿಗೂ ನಿಗದಿತ ಸಮಯವನ್ನು ನೀಡಲಾಗಿತ್ತು. ಓಪನಿಂಗ್ ಬ್ಯಾಟ್ಸ್‌ ಮನ್‌ನಂತೆ ಬಂದ ಪ್ರಸಿದ್ಧ ಅಂಕಣಕಾರ ಕಿರಣ್ ಉಪಾಧ್ಯಾಯ ಅವರು ತಮಗೆ ನೀಡಿದ ಕೇವಲ ಐದು ನಿಮಿಷಗಳಲ್ಲಿ 25 ವಿಷಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಪ್ರೇಕ್ಷಕರ ಮನಸ್ಸಿಗೆ ನಾಟುವಂತೆ ಮನವರಿಕೆ ಮಾಡಿಕೊಟ್ಟರು.

ಅತ್ಯುತ್ತಮ ಲೇಖಕರಾದ ಕಿರಣ್ ಇಷ್ಟೊಂದು ಅದ್ಭುತವಾಗಿ ಮಾತನಾಡುತ್ತಾರೆ ಎಂಬುದನ್ನು ನಾನು ಈ ಕಾರ್ಯಕ್ರಮದಲ್ಲಿ ಮನಗಂಡೆ. ಈ ಹಿಂದೆ ಬಹ್ರೈನ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಅಲ್ಲಿನ ಕರ್ನಾಟಕ ಸಂಘದೊಡನೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಸಿದ ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಕಿರಣ್ ಮಾಡಿದ ಪ್ರಾಸ್ತಾವಿಕ ಭಾಷಣ ನನಗೆ ತುಂಬಾ ಹಿಡಿಸಿತ್ತು.

ಮೊನ್ನಿನ ಕಾರ್ಯಕ್ರಮದಲ್ಲಿನ ಕಿರಣ್‌ರ ಮಾತುಗಳಿಂದ, ಇವರು ಇನ್ನೂ ಉತ್ತಮವಾಗಿ ಮಾತನಾಡಬಲ್ಲರು ಎಂಬುದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಾಗಿದೆ. ತದನಂತರ ಬಂದವರು ಎಸ್.ಷಡಕ್ಷರಿ. ತಮ್ಮ ಹಾಸ್ಯಪೂರಿತ ಭಾಷಣಗಳಿಂದ, ‘ಕ್ಷಣ ಹೊತ್ತು ಆಣಿಮುತ್ತು’ ಎಂಬ ಅಂಕಣಬರಹಗಳ ಮೂಲಕ ಈಗಾಗಲೇ ನಾಡಿನಲ್ಲೆಲ್ಲಾ ಪ್ರಸಿದ್ಧರಾದ ಶ್ರೀಯುತರು, ಭಾಷಣದಲ್ಲಿ ಹಾಸ್ಯವನ್ನು ವಿದ್ವತ್ಪೂರ್ಣವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ರುಜುವಾತು ಮಾಡಿ ತೋರಿಸಿದರು.

ಡಿವಿಜಿಯವರ ‘ನಕ್ಕು ನಲಿಸುವ ವರವ ನೀ ಪಡೆದುಕೋ’ ಎಂಬ ಮಾತಿನಂತೆ, ಅವರು ಇಡೀ ಸಭೆಯನ್ನು ಅತ್ಯಂತ ಹರ್ಷದಾಯಕವನ್ನಾಗಿ ಪರಿವರ್ತಿಸಿಬಿಟ್ಟರು. ಮುಂದೆ ಬಂದ ರಾಜು ಅಡಕಳ್ಳಿ, ತಮ್ಮ ಪುಸ್ತಕದಲ್ಲಿನ ಸಾಧಕರ ಬಗ್ಗೆ ಬಹಳ ಸುಲಲಿತವಾಗಿ ಮತ್ತು ಜನಕ್ಕೆ ಹಿಡಿಸುವಂತೆ ವಿವರಿಸಿದರು, ಪುಸ್ತಕ ಓದುವುದನ್ನು ಒಂದು ಖುಷಿ ಯಾಗಿ ಅನುಭವಿಸಬೇಕು ಎಂದು ಹೇಳಿ ಪ್ರೇಕ್ಷಕರ ಗಮನ ಸೆಳೆದರು.

ಇನ್ನೊಬ್ಬ ಲೇಖಕಿ ಹಾಗೂ ಕಾರ್ಯಕ್ರಮದ ನಿರೂಪಕಿ ರೂಪಾ ಗುರುರಾಜ್ ಅವರು ತಮ್ಮ ‘ಒಂದೊಳ್ಳೆ ಮಾತು’ ಪುಸ್ತಕವನ್ನು ತಾವು ಯಾಕೆ ಮತ್ತು ಹೇಗೆ ಬರೆದದ್ದು ಎಂಬುದನ್ನು ಪ್ರೇಕ್ಷಕರಿಗೆ ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಶೋಭಾ ಮಳವಳ್ಳಿ ಅವರು ಪ್ರಸ್ತುತ ರಿಪಬ್ಲಿಕ್ ಟಿವಿ ವಾಹಿನಿಯ ಮುಖ್ಯಸ್ಥರಾಗಿದ್ದಾರೆ. ಸುವರ್ಣ ಟಿವಿಯಲ್ಲಿ ತಾವು ಕೆಲಸ ಮಾಡುತ್ತಿದ್ದಾಗ, ಅದರ ಸಿಇಒ ಆಗಿ ವಿಶ್ವೇಶ್ವರ ಭಟ್ ಅವರು ಹೇಗೆ ತಮಗೆಲ್ಲ ಮಾರ್ಗದರ್ಶನ ನೀಡಿದರು,

ತಮ್ಮನ್ನು ಹಾಗೂ ಇತರ ಸಹೋದ್ಯೋಗಿಗಳನ್ನು ಒಬ್ಬ ಶ್ರೇಷ್ಠ ಪತ್ರಕರ್ತ, ನಿರೂಪಕ, ವರದಿಗಾರ, ನ್ಯೂಸ್ ರೀಡರ್ ಇತ್ಯಾದಿಯಾಗಲು ಕಲಿಸಿದರು ಎಂಬುದನ್ನು ಅವರು ವಿವರಿಸಿದರು. ಹಾಗೆಯೇ, ಸುದ್ದಿ ವಾಹಿನಿಯೊಂದನ್ನು ಹೇಗೆ ನಡೆಸಬೇಕು ಎಂಬುದನ್ನು ಅವರು ಬಹಳ ದಕ್ಷತೆಯಿಂದ ಸಾಧಿಸಿ, ತಮಗೆಲ್ಲ ಮಾದರಿಯಾದರು ಎಂದು ನೆನಪಿಸಿಕೊಂಡರು. ಭಟ್ಟರು ತಮಗೆ ಮತ್ತು ತಮ್ಮಂಥವರಿಗೆ ನಿಜಾರ್ಥದಲ್ಲಿ ಗುರುಗಳು ಎಂದು ಹೇಳಿ, ತಮ್ಮ ಕೃತಜ್ಞತಾಪೂರ್ವಕ ಮಾತು ಗಳನ್ನು ಮುಗಿಸಿದರು.

ಶೋಭಾ ಮಳವಳ್ಳಿ ಅವರ ಮಾತಿನುದ್ದಕ್ಕೂ ವಿನಯ ಮತ್ತು ಲಾಲಿತ್ಯ ಎದ್ದು ಕಾಣುತ್ತಿತ್ತು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವಸಂಸದರಾದ ತೇಜಸ್ವಿ ಸೂರ್ಯ ಅವರು ತಮ್ಮ ಅತಿಥಿ ಭಾಷಣದಲ್ಲಿ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿದರು. ವಿಶ್ವೇಶ್ವರ ಭಟ್ಟರು ತಮ್ಮನ್ನು ಒಬ್ಬ ಲೇಖಕ ನಾಗಿ, ಉತ್ತಮ ಭಾಷಣಕಾರನಾಗಿ ರೂಪಿಸಿದ ಗುರು ಎಂಬುದನ್ನು ಬಹಳ ವಿನಯ ಮತ್ತು ಶ್ರದ್ಧೆಯಿಂದ ಕಟ್ಟಿಕೊಟ್ಟರು.

ಇಂದಿನ ರಾಜಕಾರಣದಲ್ಲಿ ತೇಜಸ್ವಿ ಸೂರ್ಯರಷ್ಟು ಓದಿಕೊಂಡು, ಸಮರ್ಥವಾಗಿ ವಿಷಯ ಮಂಡಿಸುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಅವರ ವಿದ್ವತ್ಪೂರ್ಣ ಭಾಷಣ ಸಾಬೀತುಪಡಿಸಿತು. ಈ ಯುವಸಂಸದರಿಗೆ ಮಹೋನ್ನತವಾದ ಭವಿಷ್ಯ ಕಾದುಕುಳಿತಿದೆ ಎಂದು ಕೇಳುಗರಿಗೆ ಖಾತ್ರಿಯಾಗುವಂತೆ ಅವರ ಮಾತಿನ ಲಹರಿ ಹರಿದು ಬಂತು.

ಗಣ್ಯರ ಮೆಚ್ಚುಗೆ

ಡಾ.ವೀರೇಂದ್ರ ಹೆಗ್ಗಡೆ ಅವರು ತಾವು ಪ್ರತಿದಿನ ‘ವಿಶ್ವವಾಣಿ’ ಓದುವುದಾಗಿ ಹೇಳಿ, ಪುಸ್ತಕ ಪ್ರೀತಿ ಯಿಂದಾಗಿ ವಿಶ್ವೇಶ್ವರ ಭಟ್ಟರು ತಮಗೆ ಅತಿ ಆತ್ಮೀಯರಾಗಿದ್ದನ್ನು ಸಭೆಯ ಮುಂದೆ ಪ್ರಾಂಜಲವಾಗಿ ಒಪ್ಪಿಕೊಂಡರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಾವ ಹಮ್ಮು-ಬಿಮ್ಮುಗಳಿಲ್ಲದೆ, ಸರಳ ಸುಂದರವಾಗಿ, ತಮ್ಮನ್ನು ಒಬ್ಬ ಲೇಖಕನನ್ನಾಗಿ ರೂಪಿಸಿದ್ದು, ಪ್ರತಿದಿನ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವಂತೆ ಮಾಡಿದ್ದು ವಿಶ್ವೇಶ್ವರ ಭಟ್ಟರೇ ಎಂದು ತಿಳಿಹಾಸ್ಯದೊಂದಿಗೆ ತಮ್ಮ ವಿಚಾರಗಳನ್ನು ಮಂಡಿಸಿದರು.

ತಾವು ‘ಕಾಮನ್‌ಮ್ಯಾನ್ ಸಿಎಂ’ ಎಂದು ಆ ಕುರ್ಚಿಯಲ್ಲಿ ಕುಳಿತಾಗಲೇ ಹೇಳುತ್ತಿದ್ದುದನ್ನು ಅಂದಿನ ಕಾರ್ಯಕ್ರಮದಲ್ಲಿ ಸಾಬೀತುಪಡಿಸಿದರು. ಸಮಾರೋಪ ನುಡಿಗಳಂತಿದ್ದ ವಿಶ್ವೇಶ್ವರ ಭಟ್ಟರ ಮಾತುಗಳು ಎಲ್ಲರನ್ನೂ ಮೈತುಂಬ ಕಿವಿಯಾಗಿಸಿ ಕೇಳುವಂತೆ ಮಾಡಿದವು. ತಮ್ಮ ಇಡೀ ವ್ಯಕ್ತಿತ್ವದ ಬೆಳವಣಿಗೆ, ಮಾಧ್ಯಮ ಕ್ಷೇತ್ರದಲ್ಲಿನ ತಮ್ಮ ಕೆಲಸ ಕಾರ್ಯಗಳು, ಸಹೋದ್ಯೋಗಿಗಳೊಡನೆ ಹಾಗೂ ಓದುಗರೊಡನೆ ತಾವು ಸಂಪಾದಕರು, ಪ್ರಧಾನ ಸಂಪಾದಕರಾಗಿ ಮಾಡಿಕೊಂಡ ಅನುಸಂಧಾನಗಳ ಬಗೆಗಿನ ಅನುಭವದ ಬುತ್ತಿಯನ್ನು ಬಹಳ ಸ್ವಾರಸ್ಯಕರವಾಗಿ ಬಿಚ್ಚಿಟ್ಟರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಯುವ ಜಾದೂಗಾರ ಅಯೂಬ್ ಜಮಾಲ್ ಸಾಬ್ ದನ್ನೂರ್ ಅವರ ಕೈಚಳಕವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಒಟ್ಟಾರೆಯಾಗಿ, ಕಾರ್ಯಕ್ರಮವು ಇಷ್ಟೊಂದು ಅಭೂತಪೂರ್ವವಾಗಿ ನೆರವೇರಿದ್ದನ್ನು ನಾವೆಲ್ಲ ಪ್ರೇಕ್ಷಕರು ಕಣ್ತುಂಬಿಕೊಳ್ಳುವಂತಾಯಿತು. ಇದಕ್ಕಾಗಿ ವಿಶ್ವೇಶ್ವರ ಭಟ್ಟರು, ಪುಸ್ತಕಗಳ ಲೇಖಕರು ಮತ್ತು ಒಟ್ಟಾರೆ ವಿಶ್ವವಾಣಿಯ ಬಳಗವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು)