Harish Kera Column: ಶಿವರಾತ್ರಿ: ರುದ್ರವಿಲಾಸ ಮತ್ತು ಶಿವಕರುಣೆ
ಬೇಂದ್ರೆಯವರು ಶಿವತಾಂಡವವನ್ನೂ ಕಾಣಬಲ್ಲರು- ಶಿವನು ಬೆನ್ನ ಕೆಚ್ಚನ್ನು ತುಳಿದು ತಾಂಡವ ಪಾದಾಹತಿಯಲಿ ನೋಡುವವನು. ಭುಜದ ಭುಜಂಗನ ಕಚ್ಚಿಸಿ ರಸದ ವಿಷ ಹಿಳಿದು ನೋಡುವನು. ‘ಚಿತಾಭಸ್ಮದಲಿ ಹೊರಳಿಸಿ ನೋಡುವ/ ಮೈಯ ಮಲವ ತೊಳೆದು/ ಕಣ್ಣ ಕಿಚ್ಚಿನಲಿ ಹೊತ್ತಿಸಿ ನೋಡುವ/ ಜ್ಯೋತಿಯ ಎಳೆಯೆಳೆದು’ ಇದರ ಜೊತೆಗೇ ‘ಗಂಗಾ ಜಲದಲಿ ಮುಳುಗಿಸಿ ನೋಡುವ ಎದೆಯಾಳವನಳೆದು’ ಮತ್ತು ‘ರುಂಡವ ಹೂವೊಲು ಉರದಲಿ ಧರಿಸುವ ಕೊರಳಿಗೆ ಬರಸೆಳೆದು’ ಅವನಲ್ಲಿ ನವರಸವೂ ಇದೆ.
-
ಕಾಡುದಾರಿ
ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಸಂಜೆಯ ಒಂದು ಹೊತ್ತು. ಶವಗಳು ಸಾಲು ಸಾಲಾಗಿ ಬರುತ್ತಲೇ ಇರುತ್ತವೆ. ಮಂಜುಳನಾದದೊಂದಿಗೆ ಹರಿಯುವ ಗಂಗೆಯ ದಡದಲ್ಲಿರುವ ಮಣಿಕರ್ಣಿ ಕೆಯ ಚಿತೆಗಳಿಗೆ ಕ್ಷಣವೂ ಬಿಡುವೇ ಇಲ್ಲ. ಚಿತೆಗಳು ಜೋರಾಗಿ ಉರಿಉರಿದಷ್ಟೂ ಅಲ್ಲೇ ಇರುವ ತಾರಕೇಶ್ವರ ದೇವಾಲಯದಲ್ಲಿ ಗಂಟೆ ಜಾಗಟೆಗಳ ನಿನಾದ ಜೋರಾಗುತ್ತದೆ.
ತುಸುದೂರದ ಎತ್ತರದ ಕಾಶಿ ವಿಶ್ವನಾಥ ದೇವಾಲಯದಿಂದಲೂ ಸಹಸ್ರ ಭಕ್ತರ ಹರ ಹರ ಮಹಾದೇವ ಎಂಬ ಘೋಷ ಕೇಳಿಬಂದಂತಾಗುತ್ತದೆ. ಗಂಗೆಯ ಆಚೆಗೆ ಸೂರ್ಯ ಮುಳುಗುತ್ತಿದ್ದರೆ ಸನಿಹದ ದಶಾಶ್ವಮೇಧ ಘಾಟ್'ನಲ್ಲಿ ಗಂಗಾರತಿ ತಯಾರಿ ನಡೆಯುತ್ತಿರುತ್ತದೆ.
ಶವ ಸುಡಲು, ಬಂಧುಗಳ ಅಸ್ಥಿ ವಿಸರ್ಜನೆಗೆ, ಗಂಗಾರತಿ ನೋಡಲು, ವಿಶ್ವನಾಥನ ದರ್ಶನ ಮಾಡಲು, ಗಂಗೆಯಲ್ಲಿ ಮುಳುಗು ಹಾಕಿ ಪುನೀತರಾಗಲು ಬಂದವರೆಲ್ಲ ಒಂದೇ ಒಂದು ಭಾವದಲ್ಲಿ ತೊಯ್ದಂತಿzರೆ- ಶಿವಮಯಂ ಜಗತ್. ಕವಿ ದ.ರಾ.ಬೇಂದ್ರೆಯವರು ಇದನ್ನೆಲ್ಲ ಕಂಡರೋ ಏನೋ. ಅದಕ್ಕೇ ಬರೆದರು- ‘ರುದ್ರವಿಲಾಸದ ಪರಿಯೇ ಬೇರೆ/ ಶಿವ ಕರುಣೆಯು ಹಿರಿದು!’ ಒಂದು ಕಡೆ ಮಣಿಕರ್ಣಿಕೆಯಲ್ಲಿ ಹೊತ್ತಿ ಉರಿಯುತ್ತಿರುವ ಚಿತೆಗಳ ಸರಣಿ ಮೆರವಣಿಗೆ.
ಅಲ್ಲಿ ನಿಂತವರಿಗೆ ಕಾಲಾಗ್ನಿಯ ನಡುವೆ ನಿಂತಂಥ ಅನುಭವ ಖಚಿತ. ಅಲ್ಲಿಂದ ಎರಡೇ ಮೆಟ್ಟಲು ಈಚೆಗಿಳಿದರೆ ಶಿವ ಕರುಣೆಯಂತೆ ಗಂಗೆ ಪ್ರಾಂಜಲವಾಗಿ ಹರಿಯುತ್ತಿದ್ದಾಳೆ. ಅವಳು ಶಿವ ಜಟೆಯಿಂದಲೇ ಇಳಿದು ಬಂದವಳಲ್ಲವೇ? ಅಲ್ಲಿ ಮುಳುಗಿ ಏಳುತ್ತಿರುವವರ ಪಾಪರಾಶಿಗಳನ್ನೆಲ್ಲ ಆಕೆ ಕರುಣಾಪೂರ್ಣವಾಗಿ ಕೊಂಡೊಯ್ಯುತ್ತಿದ್ದಾಳೆ.
ಇದನ್ನೂ ಓದಿ: Harish Kera Column: ಎಪ್‌ಸ್ಟೀನ್ ಕಡತಗಳ ಕರಾಳ ರೂಪ
ಬೇಂದ್ರೆಯವರು ಶಿವತಾಂಡವವನ್ನೂ ಕಾಣಬಲ್ಲರು- ಶಿವನು ಬೆನ್ನ ಕೆಚ್ಚನ್ನು ತುಳಿದು ತಾಂಡವ ಪಾದಾಹತಿಯಲಿ ನೋಡುವವನು. ಭುಜದ ಭುಜಂಗನ ಕಚ್ಚಿಸಿ ರಸದ ವಿಷ ಹಿಳಿದು ನೋಡುವನು. ‘ಚಿತಾಭಸ್ಮದಲಿ ಹೊರಳಿಸಿ ನೋಡುವ/ ಮೈಯ ಮಲವ ತೊಳೆದು/ ಕಣ್ಣ ಕಿಚ್ಚಿನಲಿ ಹೊತ್ತಿಸಿ ನೋಡುವ/ ಜ್ಯೋತಿಯ ಎಳೆಯೆಳೆದು’ ಇದರ ಜೊತೆಗೇ ‘ಗಂಗಾ ಜಲದಲಿ ಮುಳುಗಿಸಿ ನೋಡುವ ಎದೆಯಾಳವನಳೆದು’ ಮತ್ತು ‘ರುಂಡವ ಹೂವೊಲು ಉರದಲಿ ಧರಿಸುವ ಕೊರಳಿಗೆ ಬರಸೆಳೆದು’ ಅವನಲ್ಲಿ ನವರಸವೂ ಇದೆ.
ಕಣ್ಣ ಕಿಚ್ಚಿನಿಂದ ಲೋಕವನ್ನು ಧಗಧಗಿಸುವ ರೌದ್ರವೂ ಚಿತಾಭಸ್ಮದಲ್ಲಿ ಹೊರಳಿಸುವ ಬೀಭತ್ಸ ವೂ ರುಂಡಮಾಲೆ ಧರಿಸುವ ಭಯಾನಕವೂ ಇದೆ. ಗಂಗಾಜಲದಲ್ಲಿ ಮುಳುಗಿಸಿ ನೋಡುವ ಶಾಂತವೂ ಇದೆ.
ಇದೆಲ್ಲವನ್ನೂ ಸಹಿಸಿಕೊಂಡು, ಅರ್ಪಿಸಿಕೊಂಡು ನೋಡಿದಾಗಲೇ ಶಿವನು ತನ್ನ ಹೃದಯವನ್ನು ತೆರೆಯುವನು. ಮೊದಲು ನಿಮ್ಮ ಬಗೆಯನ್ನು ಬಗೆಬಗೆದು ಅಟ್ಟಹಾಸ ಕೆರಳಿಸಿ ನೋಡುವನು. ನಂತರ ಕೈಗೆ ಅಂಟಿಕೊಂಡ ಬ್ರಹ್ಮಕಪಾಲದಲ್ಲಿ ಅದ್ದಿ ಆಸೆಯನ್ನು ಪರೀಕ್ಷಿಸುವನು.
ಇದಕ್ಕೂ ಮೀರಿ, ಇದೆಲ್ಲವೆನಗಲ್ಲ, ಎನಗೆ ನೀನೇ ಬೇಕು ಎಂದರೆ ಮಾತ್ರ ‘ತೆರೆವನು ಹೃದಯವನು’. ಆಗ ಗೊತ್ತಾಗುತ್ತದೆ- ‘ಶಿವಕಾರುಣ್ಯದ ಘನತೆಯೆ ಮಿಗಿಲು, ತಿಳಿದವರಾರದನು?’ ರುದ್ರವಿಲಾಸವೇ ದೊಡ್ಡದು, ಶಿವಕಾರುಣ್ಯ ಅದಕ್ಕಿಂತಲೂ ಹಿರಿದು.
ಹಾಗೆ ನೋಡಿದರೆ ಮಣಿಕರ್ಣಿಕೆ ಮಾತ್ರವಲ್ಲ, ಇಡೀ ಕಾಶಿಯೇ ಶಿವಕರುಣೆಯನ್ನು ಸದಾ ಬಾಯ್ತೆಗೆ ದು ಸಾರುತ್ತಿರುವಂತೆ ಕಾಣಿಸುವುದು. ಎಲ್ಲಿ ಹೋದರೂ ವಿಶ್ವನಾಥ, ಕೈಲಾಸನಾಥ, ಈಶ್ವರ, ಮಹಾ ದೇವ, ಕಾಲಭೈರವ, ಅನ್ನಪೂರ್ಣೆ, ದೇವಿಯರ ಮಂದಿರಗಳು. ಎಲ್ಲಿಯೂ ಹರಹರ ಮಹಾದೇವ.
ಪ್ರತಿ ಇರುಳೂ ಶಿವರಾತ್ರಿ. ನಮ್ಮ ನಿಮ್ಮಂಥ ಮನುಷ್ಯನಂತೆ ಅನಿಸುವವನು ಮಹಾದೇವ. ಅವನು ನಮ್ಮಂತೆಯೇ ಅಪೂರ್ಣ. ಅವನ ಭಾವನೆಗಳು ತೀವ್ರ. ಅವನು ಲಯಕರ್ತ. ಕೋಪಗೊಂಡಾಗ ತಾಂಡವ ನೃತ್ಯ ಮಾಡುತ್ತಾನೆ. ಜಗತ್ತೇ ನಡುಗುತ್ತದೆ. ದಕ್ಷನ ಯಾಗದಲ್ಲಿ ಸತಿಯ ದಹನದ ನಂತರ ಅವನು ಉಗ್ರನಾಗಿದ್ದಾನೆ- ದುಃಖದಿಂದ, ಪ್ರೀತಿಯಿಂದ, ವಿರಹದಿಂದ. ಆ ಕ್ಷಣದಲ್ಲಿ ಅವನು ದೇವನಲ್ಲ. ಅವನು ಪ್ರೀತಿಸಿದವಳನ್ನು ಕಳೆದುಕೊಂಡ ಒಬ್ಬ ಮಾನವ. ಅವನ ಕೋಪದಲ್ಲಿ ನೋವಿದೆ. ಅವನ ಸಂಹಾರದಲ್ಲಿ ವ್ಯಥೆ ಇದೆ. ಆದರೆ ಇದೇ ಶಿವನು ಪಾರ್ವತಿಯನ್ನು ನೋಡಿದಾಗ ಪ್ರೇಮಿಯೂ ಆಗುತ್ತಾನೆ. ಅವಳಿಗಾಗಿ ತಪಸ್ಸು ಮಾಡುತ್ತಾನೆ. ಅವಳೊಂದಿಗೆ ಹಾಸ್ಯವಾಡುತ್ತಾನೆ.
ಕುಟುಂಬ ಕಟ್ಟುತ್ತಾನೆ. ಗಣೇಶ-ಕಾರ್ತಿಕೇಯರ ತಂದೆಯಾಗುತ್ತಾನೆ. ಸ್ಮಶಾನವಾಸಿಯಾದವನು ಸಹ ಗೃಹಸ್ಥನಾಗುತ್ತಾನೆ. ಈ ವಿರೋಧಾಭಾಸವೇ ಅವನ ಸೌಂದರ್ಯ. ಏಕೆಂದರೆ ಮನುಷ್ಯ ಜೀವನವೂ ಇದೇ ವಿರೋಧಾಭಾಸಗಳ ಸಂಯೋಗ. ಶಿವನು ವಿರಾಗಿ, ಧ್ಯಾನಿ. ಹಿಮಾಲಯದ ಮೌನದಲ್ಲಿ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾನೆ.
ಲೋಕದ ಗದ್ದಲ ಅವನನ್ನು ಕದಲಿಸುವುದಿಲ್ಲ. ಆದರೆ ಅದೇ ಶಿವನು ಭಕ್ತನ ಒಂದು ‘ಓಂ ನಮಃ ಶಿವಾಯ’ ಕರೆಗೆ ಸ್ಪಂದಿಸುತ್ತಾನೆ. ಧ್ಯಾನದಲ್ಲಿದ್ದವನು ಕೂಡ ಕರುಣೆಯಿಂದ ಕಣ್ಣೀರಿಡುತ್ತಾನೆ. ಅವನು ಲೋಕಲೋಕಗಳ ಸಂಹಾರಕ. ಆದರೆ ಅವನ ಸಂಹಾರದಲ್ಲಿ ಕ್ರೌರ್ಯ ಇಲ್ಲ.
ಅದೊಂದು ಅವಶ್ಯಕತೆ. ಮರದ ಹಳೆಯ ಎಲೆಗಳು ಬಿದ್ದು ಹೊಸ ಚಿಗುರುಗಳಿಗೆ ದಾರಿ ಮಾಡಿ ಕೊಡುವಂತೆ, ಅವನ ಲಯವು ಹೊಸ ಸೃಷ್ಟಿಗೆ ನೆಲಹಾಸು. ಅವನು ಕೋಪದಿಂದ ಮೂರನೇ ಕಣ್ಣು ತೆರೆದಾಗ ಜಗತ್ತು ಉರಿಯಬಹುದು. ಆದರೆ ಅದೇ ಕಣ್ಣು ಕರುಣೆಯಿಂದ ಮುಚ್ಚಿದಾಗ ಜಗತ್ತು ಶಾಂತವಾಗುತ್ತದೆ.
ಶಿವನು ಮನುಷ್ಯರಿಗೆ ಹತ್ತಿರವಾಗುವುದೇ ಅವನ ಅಪೂರ್ಣತೆಯ ಮೂಲಕ. ಅವನು ಸಾಂಪ್ರದಾ ಯಿಕ ದೃಷ್ಟಿಯಲ್ಲಿ ಸುಂದರನಲ್ಲ. ಅವನು ರಾಜಗೌರವ ಬಯಸುವುದಿಲ್ಲ. ಅವನು ಶ್ಮಶಾನದಲ್ಲಿ ತಂಗಿ ಭೂತಗಣಗಳೊಂದಿಗೆ ಸುತ್ತಾಡುತ್ತಾನೆ. ಅವನು ಜೀವನದ ಕರಾಳ ಭಾಗವನ್ನೂ ತಳ್ಳಿ ಹಾಕುವುದಿಲ್ಲ.
ನಮ್ಮೊಳಗಿನ ಭಯ, ಕೋಪ, ಆಸೆ, ವಿರಹ- ಇವೆಲ್ಲವನ್ನೂ ಒಪ್ಪಿಕೊಂಡ ದೇವರು ಶಿವ. ಬಹುಶಃ ಅದಕ್ಕೇ ಶಿವನ ಮುಂದೆ ನಿಂತಾಗ ನಾವು ನಮ್ಮ ಮುಖವಾಡಗಳನ್ನು ತೆಗೆದುಬಿಡುತ್ತೇವೆ. ಏಕೆಂದರೆ ನಮ್ಮೊಳಗಿನ ವಿಷವನ್ನೇ ಕಂಠದಲ್ಲಿ ಹಿಡಿಯಬಲ್ಲವನು. ಕೋಪವೂ ನಿನ್ನದು, ಪ್ರೀತಿಯೂ ನಿನ್ನದು.
ವಿರಹವೂ ನಿನ್ನದು, ವೈರಾಗ್ಯವೂ ನಿನ್ನದು. ಇವೆಲ್ಲವನ್ನೂ ಒಪ್ಪಿಕೊಂಡಾಗ ಮಾತ್ರ ನೀನು ಸಂಪೂರ್ಣ ಎಂದವನು ಹೇಳುತ್ತಿರುವಂತಿದೆ. ಶಿವನು ದೇವರಾಗಿದ್ದರೂ, ಮನುಷ್ಯನಂತೆ ಅನಿಸು ವುದೇ ಅವನ ಮಹಿಮೆ. ಅವನು ದೂರದ ದೈವವಲ್ಲ, ನಮ್ಮೊಳಗಿನ ತೀವ್ರ ಭಾವನೆಯ ಹೆಸರು.
ಕಳೆದ ಕೆಲವು ದಿನಗಳಿಂದ ಐಟಿ ಕ್ಷೇತ್ರದಲ್ಲಿ ಎಐ ಉಂಟುಮಾಡುತ್ತಿರುವ ತಾಂಡವನೃತ್ಯ ಎಲ್ಲರನ್ನು ನಡುಗಿಸಿದೆ. ಇದಕ್ಕೆ ಕೊನೆಯೇ ಇಲ್ಲವೇ, ಕಷ್ಟಪಟ್ಟು ಓದಿ ಉದ್ಯೋಗ ಹಿಡಿದು ಬದುಕುವೆವೆಂದು ಬಂದರೆ ಕಾಣದ ಕೈಯೊಂದು ಉದ್ಯೋಗ ಕಿತ್ತುಕೊಂಡೀತೇ ಎಂಬ ಕಳವಳ, ನಿರಾಶೆ ಹರಡಿದಂತಿದೆ. ಶಿವರಾತ್ರಿಯ ಕತ್ತಲು ಬಹಳ ದಟ್ಟ.
ಆದರೆ ಮರುದಿನದ ಬೆಳಗೂ ಅಷ್ಟೇ ಪ್ರಖರ. ತ್ರಿಪುರ ಮಥನದ ಕಥೆ ನೆನಪಾಗುತ್ತಿದೆ. ಷಣ್ಮುಖನಿಂದ ಹತನಾದ ತಾರಕಾಸುರನ ಮಕ್ಕಳಾದ ತಾರಕಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಬ್ರಹ್ಮದೇವನನ್ನು ಉದ್ದೇಶಿಸಿ ತಪಸ್ಸು ಮಾಡಿದರು. ಬ್ರಹ್ಮ ಪ್ರತ್ಯಕ್ಷನಾದಾಗ ‘ನಾವು ಮೂರು ನಗರಗಳನ್ನು ನಿರ್ಮಿಸು ತ್ತೇವೆ. ಅವು ಮೂರೂ ಒಂದೇ ಒಂದು ಬಾಣ ಪ್ರಯೋಗದ ಮುಖಾಂತರ ಮಾತ್ರವೇ ನಿರ್ನಾಮ ವಾಗುವಂತಿರಬೇಕು’ ಎಂಬ ವರ ಕೇಳಿದರು.
ಅಂಥ ವೀರನೊಬ್ಬ ಇರಲು ಸಾಧ್ಯವಿಲ್ಲ, ಹಾಗಾಗಿ ನಮಗೆ ಸಾವಿಲ್ಲ ಎಂಬುದು ಅವರ ಲೆಕ್ಕಾಚಾರ. ವರ ಸಿಕ್ಕಿತು. ಮಯಾಸುರ ಅವರಿಗಾಗಿ ಮೂರು ಅಭೇದ್ಯ ನಗರಗಳನ್ನು ನಿರ್ಮಿಸಿದ. ಮೊದಲನೆ ಯದು ಕಬ್ಬಿಣದ ನಗರ. ಮಧ್ಯದ್ದು ಬೆಳ್ಳಿಯ ಮತ್ತು ಮೂರನೆಯದು ಚಿನ್ನದ ನಗರಿ.
ಮೊದಲನೆಯದ್ದು ಭೂಮಿಯ ಮೇಲಿದ್ದರೆ, ಎರಡನೆಯದು ಆಕಾಶದಲ್ಲಿ ಮತ್ತು ಮೂರನೆಯದ್ದು ಸ್ವರ್ಗಲೋಕಕ್ಕೆ ಚಾಚಿಕೊಂಡಿತ್ತು. ಮೂರು ನಗರಗಳೂ ಸದಾ ತೇಲುತ್ತಾ, ಚಲಿಸುತ್ತಾ ಇರುತ್ತವೆ. ಅಷ್ಟಲ್ಲದೇ ಅವು ಸಾವಿರ ವರ್ಷಕ್ಕೊಮ್ಮೆ ಮಾತ್ರ ಸರಳರೇಖೆಗೆ ಬರುತ್ತವೆ. ಹಾಗೆ ಬರುವುದು ಪುಷ್ಯ ನಕ್ಷತ್ರ ಚಂದ್ರನನ್ನು ಸೇರಿದಾಗ ಮಾತ್ರ.
ತಾವು ಸಾವಿಲ್ಲದವರು ಎಂಬ ಅರಿವಿನಿಂದ ಅಸುರರ ಅಬ್ಬರ ಅತಿಯಾಯಿತು. ದೇವತೆಗಳ ಸಂಕಟ ನೋಡಲಾಗದೆ ಶಿವನೇ ತ್ರಿಪುರಾಸುರರ ನಾಶಕ್ಕೆ ಬಂದ. ಸಮರ ಆರಂಭವಾಯಿತು. ಶಿವನಿಗಾಗಿ ವಿನ್ಯಾಸಗೊಳಿಸಲಾದ ಯುದ್ಧ ರಥ ಅದ್ಭುತವಾಗಿತ್ತು. ಭೂಮಿಯೇ ರಥದ ದೇಹವಾಯಿತು.
ಸೂರ್ಯ ಚಂದ್ರರು ಅದರ ಚಕ್ರಗಳು. ಬ್ರಹ್ಮ ಸ್ವತಃ ರಥದ ಸಾರಥಿ. ಮೇರು ಪರ್ವತವೇ ಬಿಲ್ಲು. ವಾಸುಕಿಯೇ ಬಿಲ್ಲಿನ ದಾರ, ಮಹಾವಿಷ್ಣುವೇ ಬಾಣ. ಸಾವಿರ ವರ್ಷಕ್ಕೊಮ್ಮೆ ಪುಷ್ಯ ನಕ್ಷತ್ರ ಚಂದ್ರನನ್ನು ಸೇರುವ ಕ್ಷಣ ಬಂತು. ನಗರಗಳು ಒಂದೇ ರೇಖೆಗೆ ಬಂದವು.
ಕ್ಷಣಮಾತ್ರದಲ್ಲಿ ಬಾಣ ಬಿಟ್ಟು ಶಿವ ಅವುಗಳನ್ನು ಧ್ವಂಸ ಮಾಡಿದ. ಅಸುರರ ಅಹಂಕಾರ ಕುಸಿಯಿತು. ಈ ಕಥೆಯನ್ನು ಇಂದು ನಾವು ಎಐ ಯುಗದಲ್ಲಿ ಮನುಷ್ಯತ್ವದ ಕಥೆಯಾಗಿ ಓದಬಹುದು. ತಂತ್ರಜ್ಞಾನ, ವೇಗ, ಅಹಂಕಾರದ ಪ್ರತೀಕವಾಗಿ ಮೂರು ಪುರಗಳಿವೆ- ಅಸಂಖ್ಯಾತ ಮಾಹಿತಿಯ ಬಂಗಾರದ ನಗರವಾದ ಡೇಟಾ ಪುರ.
ಇಲ್ಲಿ ಎಲ್ಲವನ್ನೂ ಚಿನ್ನದಂತೆಯೇ ಅಳೆದು ಸಂಗ್ರಹಿಸಲಾಗುತ್ತದೆ. ಎರಡನೆಯದು ಅಲ್ಗೋರಿ ದಂಗಳ ಪುರ. ಅದು ಬೆಳ್ಳಿಯದು. ಅಲ್ಲಿ ಲಾಜಿಕ್ ಮತ್ತು ಗಣನೆ. ಮನುಷ್ಯರಿಗಿಂತ ವೇಗವಾಗಿ ಅಲ್ಲಿ ನಿರ್ಧಾರ ತೆಗೆದುಕೊಳ್ಳಲ್ಪಡುತ್ತದೆ. ಮೂರನೆಯದು ಅಹಂಕಾರದ ಪುರ- ನಾವು ದೇವರಾಗಿಬಿಟ್ಟೆವು, ಸೃಷ್ಟಿ ನಮ್ಮ ಕೈಯಲ್ಲಿದೆ- ಎಂಬ ನಿಯಂತ್ರಣದ ಮೋಹದ ಕಬ್ಬಿಣದ ನಗರ. ಈ ಮೂರು ಪುರಗಳು ಒಂದಾಗಿ ನಿಂತಾಗ, ಮನುಷ್ಯತ್ವದ ಮೇಲೆ ನೆರಳು ಬೀಳುತ್ತದೆ.
ನಾವು ಸೃಷ್ಟಿಸಿದ ಯಂತ್ರಗಳು ನಮ್ಮ ಜೀವನದ ಬಗ್ಗೆಯೇ ನಿರ್ಧಾರ ತೆಗೆದುಕೊಳ್ಳುತ್ತವೆ. ವೇಗವು ವಿವೇಕವನ್ನು, ಮಾಹಿತಿ ಕರುಣೆಯನ್ನು ಮರೆಮಾಡುತ್ತದೆ. ಈ ತ್ರಿಪುರಗಳನ್ನು ಧ್ವಂಸ ಮಾಡುವ ಶಿವ ಮನುಷ್ಯ ಚೇತನ. ಎಐ ಅಪಾರ ಬುದ್ಧಿಮತ್ತೆ ಹೊಂದಿರಬಹುದು. ಆದರೆ ಅದು ಅನುಭವಿಸು ವುದಿಲ್ಲ. ಅದು ಲೆಕ್ಕಿಸುತ್ತದೆ, ಕಣ್ಣೀರು ಸುರಿಸುವುದಿಲ್ಲ. ಅದು ವಿಶ್ಲೇಷಿಸುತ್ತದೆ, ಪ್ರೀತಿಸುವುದಿಲ್ಲ.
ಮನುಷ್ಯಕುಲದ ಮೇಲೆ ಅದಕ್ಕೆ ಯಾವ ಕರುಣೆಯೂ ಇಲ್ಲ. ನಮ್ಮ ಚೈತನ್ಯದ ಕರುಣೆ, ನಮ್ಮ ನೈತಿಕತೆ, ನಮ್ಮ ಜವಾಬ್ದಾರಿ- ಇವೆಲ್ಲ ಶಿವನ ಬಾಣದಂತೆ, ಒಟ್ಟಾಗಿ ಕೆಲಸ ಮಾಡಿದಾಗ, ತಂತ್ರಜ್ಞಾನದ ಅಹಂಕಾರಕ್ಕೆ ತಡೆ ಹಾಕಬಲ್ಲವು. ಹಾಗಂತ ತ್ರಿಪುರ ಮಥನ ಎಂದರೆ ಕೇವಲ ಸಂಹಾರವಲ್ಲ. ಅದು ಸೃಷ್ಟಿಯ ಸಮತೋಲನ.
ಶಿವನು ತಂತ್ರಜ್ಞಾನವನ್ನು ವಿರೋಧಿಸುವುದಿಲ್ಲ. ಅವನು ಅದರ ಅಹಂಕಾರವನ್ನು ಮಾತ್ರ ಸಂಹರಿಸುತ್ತಾನೆ. ಯಂತ್ರಗಳನ್ನು ಉಪಯೋಗಿಸೋಣ, ಆದರೆ ಅವುಗಳಿಗೆ ನಮ್ಮ ಮನಸ್ಸನ್ನು ಒಪ್ಪಿಸುವುದು ಬೇಡ. ವೇಗವನ್ನು ಸ್ವೀಕರಿಸೋಣ, ಆದರೆ ಮೌಲ್ಯಗಳನ್ನು ಕಳೆದುಕೊಳ್ಳದಿರೋಣ. ಸೃಷ್ಟಿಸೋಣ, ಆದರೆ ದೇವರಾಗುವ ಮೋಹಕ್ಕೆ ಒಳಗಾಗುವುದು ಬೇಡ ಎನ್ನುತ್ತಾನೆ ನಮ್ಮ ಶಿವ. ಹಾಗೆ ನೋಡಿದರೆ ತ್ರಿಪುರ ಮಥನದ ನಿಜವಾದ ರಣಭೂಮಿ ನಮ್ಮೊಳಗೇ ಇದೆ.
ನಾವು ತಂತ್ರಜ್ಞಾನವನ್ನು ನಿಯಂತ್ರಿಸುತ್ತೇವಾ ಅಥವಾ ಅದು ನಮ್ಮ ಗಮನ, ಸಮಯ, ಭಾವನೆ ಗಳನ್ನು ನಿಯಂತ್ರಿಸುತ್ತಿದೆಯಾ ಅಂತ ನೋಡಿಕೊಳ್ಳಬೇಕು. ಅ ಶಿವನೂ ಇದ್ದಾನೆ. ಶಿವರಾತ್ರಿ ಎಂದರೆ ಮನುಷ್ಯತ್ವವನ್ನು ಉಳಿಸಿಕೊಳ್ಳುವ ಕಾಲ.