ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Harish Kera Column: ಎಪ್‌ಸ್ಟೀನ್ ಕಡತಗಳ ಕರಾಳ ರೂಪ

2009ರ ಆಗಸ್ಟ್‌ನ ಒಂದು ರಾತ್ರಿ ಮೆಕ್ಸಿಕೋದ ಮಾಂಟೆರಿಯ ಫಿಯೆಸ್ತಾ ಇನ್ ಎಂಬ ಹೋಟೆಲ್ʼ ನಿಂದ ಹೊರಗೆ 21 ವರ್ಷದ ಗೇಬ್ರಿಯೆಲಾ ರಿಕೊ ಜಿಮೆನಜ್ ಎಂಬ ಮಾಡೆಲ್ ಗಾಬರಿಯಿಂದ ಓಡಿ ಬಂದಳು. ಅವಳ ಮುಖದಲ್ಲಿ ಪಿಶಾಚಿಯನ್ನು ನೋಡಿದ ಕಳೆಯಿತ್ತು. ‘ಒಳಗೆ ಮನುಷ್ಯರನ್ನು ಭಕ್ಷಿಸುತ್ತಿದ್ದಾರೆ. ನಂಗಿವೆಲ್ಲ ಗೊತ್ತೇ ಇರಲಿಲ್ಲ. ನನ್ನನ್ನು ಹೋಗೋಕೆ ಬಿಡಿ’ ಎಂದು ಚೀರಿಕೊಳ್ಳು ತ್ತಿದ್ದಳು.

Harish Kera Column: ಎಪ್‌ಸ್ಟೀನ್ ಕಡತಗಳ ಕರಾಳ ರೂಪ

-

ಹರೀಶ್‌ ಕೇರ
ಹರೀಶ್‌ ಕೇರ Feb 5, 2026 8:40 AM

ಕಾಡುದಾರಿ

ಶ್ರೀಮಂತರು ಬಿಟ್ಟು ಬೇರೆ ಯಾರೂ ತಲುಪಲಾಗದ ಖಾಸಗಿ ದ್ವೀಪಗಳು. ಅಲ್ಲಿ ಕರಾಳ ಪಾರ್ಟಿಗಳು. ಎಲ್ಲಾ ನಾಪತ್ತೆಯಾದ ಬಾಲಕಿಯರು ಅಲ್ಲಿನ ಪಾರ್ಟಿಗಳಲ್ಲಿ ಕೋಟ್ಯಧೀಶರಿಗೆ ಬಳಕೆಯ ತುತ್ತಾಗು ವುದು. ಶಿಶುಕಾಮಿಗಳು, ವಿಕೃತರು ತುಂಬಿರುವ ಪಾರ್ಟಿಗಳು, ಮಕ್ಕಳ ಮಾಂಸ ಬೇಯಿಸಿ ಸವಿಯು ವವರು.

ಶಿಶುಗಳ ಹೊಟ್ಟೆ ಬಗೆದು ಕರುಳಿನಲ್ಲಿದ್ದ ಮಲವನ್ನು ಡೆಸರ್ಟ್ ಮಾಡಿಕೊಂಡು ಚಪ್ಪರಿಸುವರು. ಈ ರಹಸ್ಯಗಳನ್ನೆಲ್ಲ ಬಹಿರಂಗಪಡಿಸಿದವರು ರಾತ್ರೋರಾತ್ರಿ ಅಡ್ರೆಸ್ಸಿಲ್ಲದೇ ಮಾಯವಾಗುವುದು. ಇದನ್ನೆಲ್ಲ ಏರ್ಪಡಿಸುವವನ ಜೊತೆ ಪ್ರಬಲ ದೇಶಗಳ ಆಳುವವರೇ ಸಂಬಂಧ ಹೊಂದಿದ್ದಾರೆ ಎಂದು ಬಹಿರಂಗವಾದರೆ ಆತನೇ ಲಾಕಪ್‌ನಲ್ಲಿ ನಿಗೂಢವಾಗಿ ಸಾಯುವುದು.

ಹಾಲಿವುಡ್‌ನ ಕಾನ್ಸ್ಪಿರಸಿ, ಸೈಕೋ ಥ್ರಿಲ್ಲರ್ ಫಿಲಂಗಳಲ್ಲಿ ಮಾತ್ರ ಇದೆಲ್ಲ ನಡೆಯುತ್ತದೆ ಎಂದು ಕೊಂಡಿದ್ದೆವು. ನಿಜವಾಗಿಯೂ ಸಂಭವಿಸುತ್ತದೆ ಎಂದು ಜೆಫ್ರಿ ಎಪ್‌ಸ್ಟೀನ್ ಫೈಲುಗಳು ತೋರಿಸಿ ಕೊಟ್ಟಿವೆ. ಇದು ಮನುಷ್ಯರು ತಲುಪಬಹುದಾದ ಹೊಸ ರಸಾತಳದ ಪರಿಚಯ ಮಾಡಿಸಿದೆ.

2009ರ ಆಗಸ್ಟ್‌ನ ಒಂದು ರಾತ್ರಿ ಮೆಕ್ಸಿಕೋದ ಮಾಂಟೆರಿಯ ಫಿಯೆಸ್ತಾ ಇನ್ ಎಂಬ ಹೋಟೆಲ್ʼ ನಿಂದ ಹೊರಗೆ 21 ವರ್ಷದ ಗೇಬ್ರಿಯೆಲಾ ರಿಕೊ ಜಿಮೆನಜ್ ಎಂಬ ಮಾಡೆಲ್ ಗಾಬರಿ ಯಿಂದ ಓಡಿ ಬಂದಳು. ಅವಳ ಮುಖದಲ್ಲಿ ಪಿಶಾಚಿಯನ್ನು ನೋಡಿದ ಕಳೆಯಿತ್ತು. ‘ಒಳಗೆ ಮನುಷ್ಯರನ್ನು ಭಕ್ಷಿಸುತ್ತಿದ್ದಾರೆ. ನಂಗಿವೆಲ್ಲ ಗೊತ್ತೇ ಇರಲಿಲ್ಲ. ನನ್ನನ್ನು ಹೋಗೋಕೆ ಬಿಡಿ’ ಎಂದು ಚೀರಿಕೊಳ್ಳು ತ್ತಿದ್ದಳು.

ಇದನ್ನೂ ಓದಿ: Harish Kera Column: ನಿಧಿಗಳೂ ನಮ್ಮ ನಿಮ್ಮೊಳಗಿನ ನಿಧಿಚೋರರೂ...

ಒಳಗೆ ಜೆಫ್ರಿ ಎಪ್‌ಸ್ಟೀನ್ ಏರ್ಪಡಿಸಿದ ವಿವಿಐಪಿಗಳ ರಹಸ್ಯ ಪಾರ್ಟಿ ನಡೆಯುತ್ತಿತ್ತು. ಗೇಬ್ರಿಯೆಲಾ ಳನ್ನು ಪೊಲೀಸರು ಕರೆದೊಯ್ದರು. ಆಮೇಲೆ ಆಕೆ ಏನಾದಳು ಎಂಬುದು ನಿಗೂಢವಾಗಿದೆ. ‘ಅವಳು ಅಂದೇ ಎಚ್ಚರಿಸಿದ್ದಳು’ ಎಂದು ಈಗ ಹೇಳಲಾಗುತ್ತಿದೆ. ಎಪ್ʼಸ್ಟೀನ್ ಯಾರಿಗೋ ಕಳಿಸಿದ ಇಮೇಲ್‌ ನಲ್ಲಿ ‘ಟಾರ್ಚರ್’ ಉಲ್ಲೇಖ ಇದೆ.

ಟೆಕ್ ಕುಬೇರ ಬಿಲ್ ಗೇಟ್ಸ್ ರಷ್ಯನ್ ಲೈಂಗಿಕ ಕಾರ್ಯಕರ್ತೆಯರೊಂದಿಗೆ ಸಂಪರ್ಕ ಹೊಂದಿದ್ದ. ಅದರಿಂದ ಅವನಿಗೆ ಲೈಂಗಿಕ ರೋಗ ಅಂಟಿಕೊಂಡಿತ್ತು. ಇದನ್ನು ಅವನು ಪತ್ನಿ ಮೆಲಿಂಡಾಗೂ ದಾಟಿಸಿದ್ದ- ಎಂದು ಎಪ್‌ಸ್ಟೀನ್ ಒಂದೆರಡು ಇಮೇಲ್‌ಗಳಿಂದ ಗೊತ್ತಾಗುತ್ತದೆ.

2021ರಲ್ಲಿ ಬಿಲ್ ಹಾಗೂ ಪತ್ನಿ ಮೆಲಿಂಡಾಗೆ ಡೈವೋರ್ಸ್ ಆಯ್ತು. 21 ವರ್ಷಗಳ ಅವರ ದಾಂಪತ್ಯ ಧೂಳೀಪಟವಾಗಲು ಎಪ್‌ಸ್ಟೀನ್ ಕಾರಣವೇ ಎಂಬುದು ಸ್ಪಷ್ಟವಿಲ್ಲ. ಮೈಕ್ರೋಸಾಫ್ಟ್‌ʼನ ಒಬ್ಬ ಸಹೋದ್ಯೋಗಿ ಜೊತೆ 2019ರಲ್ಲಿ ಸಂಬಂಧ ಹೊಂದಿದ್ದೆ ಎಂಬುದನ್ನಂತೂ ಬಿಲ್ ಅಂದೇ ಒಪ್ಪಿಕೊಂಡಿದ್ದ. ಡೈವೋಸ್ ಗೆ ಇದೇ ಕಾರಣವಿರಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು. ಆಗ ಮೆಲಿಂಡಾ ಏನೂ ಹೇಳಿರಲಿಲ್ಲ; ಇದೀಗ ಎಪ್‌ಸ್ಟೀನ್ ಫೈಲುಗಳ ಎರಡನೇ ಕಡತದಲ್ಲಿ ಈ ವಿವರ ಹೊರಬೀಳುತ್ತಿದ್ದಂತೆ, ತೀವ್ರ ಬೇಸರವಾಗಿದೆ, ಇದಕ್ಕೆ ಬಿಲ್ ಉತ್ತರ ಕೊಡಬೇಕು ಎಂದಿದ್ದಾಳೆ.

ಮುಂದಿನ ವಿವರಗಳಿಗೆ ಹೋಗುವ ಮೊದಲು ಎಪ್‌ಸ್ಟೀನ್ ಯಾರು, ಇವನೆಬ್ಬಿಸಿದ ಬಿರುಗಾಳಿ ಎಂಥದು ಎಂಬುದನ್ನೂ ನೋಡಬೇಕು. ನ್ಯೂಯಾರ್ಕ್‌ನಲ್ಲಿ ಹುಟ್ಟಿ ಬೆಳೆದ ಇವನು ಕಟ್ಟಿದ ಇವನದೇ ಹೆಸರಿನ ಕಂಪನಿ ಷೇರು ಮಾರ್ಕೆಟ್‌ನಲ್ಲಿ ಬಿಲಿಯಗಟ್ಟಲೆ ಲಾಭ ಮಾಡಿದ ಬಳಿಕ ಇವನು ದೊಡ್ಡ ಫೈನಾನ್ಶಿಯರ್ ಆದ. ಆಗಲೇ ಅಮೆರಿಕದ ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿ ಗಳನ್ನೆ ಬುಟ್ಟಿಗೆ ಹಾಕಿಕೊಂಡ. ಆಗ ಡೊನಾಲ್ಡ್ ಟ್ರಂಪ್ ಕೂಡ ಇವನ ಆತ್ಮೀಯರಬ್ಬನಾಗಿದ್ದ. ‌

ಎಪ್‌ಸ್ಟೀನ್ ದೇಹಸುಖ ಒದಗಿಸುವ ದಂಧೆಯ ಫಲಾನುಭವಿಗಳಲ್ಲಿ ಟ್ರಂಪ್ ಒಬ್ಬ ಎನ್ನುವುದಕ್ಕೆ ನೇರ ಆಧಾರಗಳಿಲ್ಲ, ಅಥವಾ ಇದ್ದರೂ ಟ್ರಂಪ್ ಆಡಳಿತ ಅದನ್ನು ಬಿಡುಗಡೆ ಮಾಡಗೊಟ್ಟಿಲ್ಲ. ಆದರೆ ‘ನಮಗಿಬ್ಬರಿಗೂ ಹೊಸ, ಯಂಗ್ ಹುಡುಗಿಯರು ಅಂದ್ರೆ ಇಷ್ಟ’ ಎಂದು ಟ್ರಂಪ್ ಒಂದೆಡೆ ಹೇಳಿದ್ದು ದಾಖಲಾಗಿದೆ. ಮುಂದೆ ಟ್ರಂಪ್‌ನ ಕಂಪನಿಯ ಹುಡುಗಿಯೊಬ್ಬಳನ್ನು ಇವನು ಹಾರಿಸಿ ದಾಗಲೇ ಇಬ್ಬರಿಗೂ ಗೆಳೆತನ ಮುರಿದುಬಿತ್ತು.

Screenshot_3 ಋ

ಮುಂದೆ ನಡೆದ ಇವನ ಚಿದ್ವಿಲಾಸ ಅಂತಿಂಥದಲ್ಲ. ಅಮೆರಿಕದ ಬಹಳಷ್ಟು ದೊಡ್ಡ ಬಿಲಿಯನೇರು ಗಳು ಇವನ ಗಿರಾಕಿಗಳಾದರು. ಕೆರಿಬಿಯನ್ ಸಮುದ್ರದಲ್ಲಿದ್ದ ಲಿಟಲ್ ಸೇಂಟ್ ಜಾನ್ ದ್ವೀಪವನ್ನು ಖರೀದಿಸಿ ಅಲ್ಲಿ ಭವ್ಯ ಬಂಗಲೆ ಕಟ್ಟಿಸಿ ತನ್ನ ರಹಸ್ಯ ದಂಧೆಯನ್ನು ಅಲ್ಲಿಗೆ ವರ್ಗಾಯಿಸಿದ.

ಇಂಗ್ಲೆಂಡ್‌ನ ರಾಜಕುಮಾರ ಆಂಡ್ರ್ಯೂ ಸೇರಿದಂತೆ ಹಲವರು ಅಲ್ಲಿಗೆ ಹಲವು ಬಾರಿ ಹೋಗಿ ಬಂದರು. ಅಲ್ಲಿ ಚಿತ್ರವಿಚಿತ್ರ ಪಾರ್ಟಿಗಳು ನಡೆಯುತ್ತಿದ್ದವು. ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಎಲ್ಲಿಂದಲೋ ಹೇಗೋ ಸಂಪಾದಿಸಿ ಅಲ್ಲಿಗೆ ತಂದು ಅವರಿಗಿಷ್ಟವಿಲ್ಲದಿದ್ದರೂ ಬಳಸಿಕೊಳ್ಳ ಲಾಗುತ್ತಿತ್ತು.

ಹೀಗಾಗಿಯೇ ಅದನ್ನು ‘ಪೀಡೋ ಐಲ್ಯಾಂಡ್’ ಎಂದೂ ಕರೆಯಲಾಗುತ್ತದೆ. ಹಾಗೆ ದೌರ್ಜನ್ಯಕ್ಕೆ ಈಡಾದವರಲ್ಲಿ ಹಲವರು ಇದೀಗ ಮಾತಾಡುತ್ತಿದ್ದಾರೆ. ತಮಗಾದ ಕರಾಳ ಅನುಭವಗಳನ್ನು ಹೇಳಿಕೊಂಡು ನ್ಯಾಯ ಕೇಳುತ್ತಿದ್ದಾರೆ. 2005ರಲ್ಲಿ ಎಪ್‌ಸ್ಟೀನ್ ಅದೃಷ್ಟ ತಿರುಗಿ ಬಿತ್ತು. ಬಾಲಕಿ ಯೊಬ್ಬಳ ಮೇಲೆ ಕೈಹಾಕಿದ ಎಂದು ಆಕೆಯ ಹೆತ್ತವರು ಕೇಸು ದಾಖಲಿಸಿದರು. ಎಪ್‌ಸ್ಟೀನ್ ಮನೆ ಶೋಧಿಸಿದ ಪೊಲೀಸರಿಗೆ ನೂರಾರು ಹುಡುಗಿಯರನ್ನು ಬಳಸಿಕೊಂಡ ದಾಖಲೆಗಳು, ಫೋಟೋಗಳು ದೊರೆತವು.

ಜೇನುಹುಟ್ಟಿಗೆ ಕೈಹಾಕಿದಂತಾಯಿತು. ಸಭ್ಯ ಮುಖವಾಡ ಧರಿಸಿದವರೆ ಬೆತ್ತಲಾಗತೊಡಗಿದರು. ಎಪ್‌ಸ್ಟೀನ್ ಜೈಲಿಗೆ ಹೋದ. ಅಲ್ಲೂ ಬಿಡದೆ ವಕೀಲರ ಮೂಲಕ ಕಕ್ಷಿದಾರರ ಜೊತೆ ರಾಜಿ ಪಂಚಾ ತಿಕೆ ಮಾಡಿಕೊಂಡು ಹೊರಗೆ ಬಂದ. ಆದರೆ ಎಫ್‌ʼಬಿಐ ಕಡತಗಳಲ್ಲಿ ಅವನು ಮೂರನೇ ದರ್ಜೆಯ ಲೈಂಗಿಕ ಅಪರಾಧಿಯಾಗಿಯೇ ದಾಖಲಾದ.

ಅಂದರೆ ಯಾವುದೇ ಹಂತದಲ್ಲಿ ಮರಳಿ ಅಂಥ ಅಪರಾಧ ಮಾಡಬಹುದಾದ ಆಸಾಮಿ ಅಂತ. ಇದಾದ ಬಳಿಕವೂ ಅವನ ಜೊತೆ ಹಲವು ಜಾಗತಿಕ ಗಣ್ಯರು ಸಂಪರ್ಕ ಮುಂದುವರಿಸಿದರು. ಅವರ ಪಟ್ಟಿ ಆಮೇಲೆ ನೋಡೋಣ.

2018ರಲ್ಲಿ ಇವನಿಂದ ಪೀಡಿತರಾಗಿದ್ದ 80 ಮಹಿಳೆಯರು ಒಟ್ಟಾಗಿ ಮೀಡಿಯಾದ ನೆರವು ಪಡೆದು ಜೆಫ್ರಿಯ ಕರಾಳ ದಿನಗಳನ್ನು ಮತ್ತೆ ಮುನ್ನೆಲೆಗೆ ತಂದರು. 2019ರ ಜುಲೈನಲ್ಲಿ ಮತ್ತೆ ಅವನನ್ನು ಬಂಧಿಸಲಾಯಿತು. ಇದೀಗ ಅವನನ್ನು ಜೈಲಿನೊಳಗೆ ತಳ್ಳಲು ಎಫ್‌ʼಬಿಐ ಪೂರ್ತಿ ದಾಖಲೆಗಳ ಸಹಿತ ಸನ್ನದ್ಧವಾಗಿತ್ತು. ವಿಚಾರಣೆಗೆ ದಿನ ನಿಗದಿಯಾಗಿತ್ತು.

ಆಗಸ್ಟ್ 9ರ ರಾತ್ರಿ ಇವನಿದ್ದ ಲಾಕಪ್ ಸೆಲ್‌ನಲ್ಲಿ ಜೊತೆಗಿದ್ದ ಸಹಕೈದಿಯನ್ನು ಅಲ್ಲಿಂದ ಬೇರೆಡೆ ಒಯ್ಯಲಾಯಿತು. ಅಂದಿನವರೆಗೂ ಸರಿಯಿದ್ದ ಸಿಸಿಟಿವಿ ಕ್ಯಾಮೆರಾಗಳು ಅಂದು ಯಾಕೋ ಹಾಳಾಗಿ ದ್ದವು. ಪ್ರತಿ ಅರ್ಧ ಗಂಟೆಗೊಮ್ಮೆ ಚೆಕ್ ಮಾಡಬೇಕಾದ ಬೀಟ್ ಪೊಲೀಸರು ಮೂರು ಗಂಟೆ ಕಾಲ ಅವನ ಲಾಕಪ್ ಕಡೆ ಸುಳಿಯಲೇ ಇಲ್ಲ. ಮರುದಿನ ಅವನ ಶವ ಲಾಕಪ್‌ನ ತೊಲೆಗೆ ನೇಣು ಹಾಕಿದ ಸ್ಥಿತಿಯಲ್ಲಿತ್ತು. ಆದರೆ ಕತ್ತಿನಲ್ಲಿ ಆದ ಗಾಯ ಬೇರೆಯೇ ಕತೆ ಹೇಳುತ್ತಿತ್ತು.

ನೋಡನೋಡುತ್ತ ಎಪ್‌ಸ್ಟೀನ್ ಸಂತ್ರಸ್ತರ ಸಂಖ್ಯೆ 1000ಕ್ಕೂ ಮಿಕ್ಕಿದೆ. ಅವರೆಲ್ಲರ ಆಗ್ರಹ, ಪಕ್ಷ ದೊಳಗಿನವರ ಹಾಗೂ ವಿರೋಧಿಗಳೆಲ್ಲರ ಒತ್ತಡದ ಪರಿಣಾಮ ಎಪ್‌ಸ್ಟೀನ್ ಕಡತಗಳನ್ನು ಬಿಡುಗಡೆ ಮಾಡಲು ಟ್ರಂಪ್ ಒಪ್ಪಿದ್ದು, ನ್ಯಾಯಾಂಗ ಇಲಾಖೆ ಅವುಗಳನ್ನು ಎರಡು ಕಂತುಗಳಲ್ಲಿ ರಿಲೀಸ್ ಮಾಡಿದೆ. ಇನ್ನಷ್ಟು ಲಕ್ಷ ಪುಟಗಳು ಇವೆ ಎನ್ನಲಾಗಿದೆ. ಈ ಕಡತಗಳಲ್ಲಿ ಕಂಡುಬಂದ ಹೆಸರುಗಳು, ಫೊಟೋಗಳನ್ನು ಕಂಡು ಜಗತ್ತೆಲ್ಲ ಬೆಚ್ಚಿ ಬಿದ್ದಿದೆ.

ಬಿಲ್ ಕ್ಲಿಂಟನ್, ಪ್ರಿನ್ಸ್ ಆಂಡ್ರ್ಯೂ ಮುಂತಾದವರು ನೇರವಾಗಿಯೇ ಈತನ ಪಾತಕಗಳಲ್ಲಿ ಭಾಗಿ ಯಾದವರು ಎಂದು ಹೇಳಬಹುದಾದಷ್ಟು ಸಾಕ್ಷ್ಯಗಳಿವೆ. ಇನ್ನು ಕೆಲವರ ಬಗ್ಗೆ ನೇರ ಸಾಕ್ಷ್ಯಗಳಿಲ್ಲ, ಆಪಾದನೆ ಮಾಡಬಹುದು. ಇನ್ನು ಹಲವಷ್ಟು ಜನರ ಉಲ್ಲೇಖ ಇವನ ಇಮೇಲ್‌ಗಳಲ್ಲಿ ಇದೆ. ಹೆಸರು ಇದ್ದ ಮಾತ್ರಕ್ಕೆ ಅವರು ಆತನ ಲೈಂಗಿಕ ಅಪರಾಧಗಳಲ್ಲಿ ಪಾಲುದಾರರೆಂದು ಹೇಳಲಾ ಗದು. ಆದರೆ ಜಗತ್ತು ಈ ವ್ಯಕ್ತಿಗಳತ್ತ ಒಮ್ಮೆ ನೋಡಿ ಇವನೂ ಇಂಥವನಾ ಎಂದು ಕಣ್ಣರಳಿಸು ವಂತಾಗಿದೆ.

ಅನಿಲ್ ಅಂಬಾನಿ ಜೊತೆಗೆ ಹಲವು ಮೆಸೇಜ್ ಹಾಗೂ ಇಮೇಲ್ ವ್ಯವಹಾರ ನಡೆಸಿದ್ದಾನೆ ಎಪ್ʼ ಸ್ಟೀನ್. ಅದರಲ್ಲಿ ಹಲವು ಕಡೆ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖವಿದೆ. ಮೋದಿ ಇಸ್ರೇಲ್ ಭೇಟಿಯ ದಿನಾಂಕ ಹೊರತುಪಡಿಸಿದರೆ ಇನ್ನುಳಿದದ್ದೆಲ್ಲವೂ ಕಟ್ಟುಕತೆ ಎಂದು ಭಾರತ ಸರಕಾರ ಪ್ರತಿಕ್ರಿಯಿಸಿದೆ.

ಮೋದಿ ಮತ್ತು ಟ್ರಂಪ್ ಹೆಸರನ್ನು ಪದೇಪದೇ ಎಳೆದು ತರುವ ಮೂಲಕ ತಾನು ಪ್ರಭಾವಿ ಎಂದು ತೋರಿಸಿಕೊಳ್ಳಲು ಎಪ್‌ಸ್ಟೀನ್ ಯತ್ನಿಸಿದ್ದಾನೆ. ಕೇಂದ್ರ ಸಚಿವ ಹರ್ದೀಪ್ ಪುರಿ ಕೂಡ ಇಮೇಲ್ ವ್ಯವಹಾರ ನಡೆಸಿದ್ದಾರೆ. ಅದೂ ಬ್ಯುಸಿನೆಸ್‌ಗೆ ಸಂಬಂಧಿಸಿದ್ದು ಎಂದಿದ್ದಾರೆ ಪುರಿ.

ದಲಾಯಿಲಾಮಾ 2012ರಲ್ಲಿ ಎಪ್‌ಸ್ಟೀನ್‌ನ ಮನೆಯಲ್ಲಿ ಕಂಡುಬಂದಿದ್ದರು. ಇತರರ ಜತೆ ಎಪ್‌ ಸ್ಟೀನ್ ನಡೆಸಿದ ಸಂವಾದದಲ್ಲಿ 169 ಬಾರಿ ಲಾಮಾ ಹೆಸರು ಉಲ್ಲೇಖವಾಗಿದೆ. ಬಹುಶಃ ಅವರು ಟಿಬೆಟಿಯನ್ನರ ಕಲ್ಯಾಣಕ್ಕಾಗಿ ಧನಸಹಾಯ ಪಡೆಯಲು ಆಗಮಿಸಿರುವ ಸಾಧ್ಯತೆ ಇದೆ.

ಚಿತ್ರ ನಿರ್ದೇಶಕಿ ಮೀರಾ ನಾಯರ್, ವ್ಯಕ್ತಿತ್ವ ವಿಕಸನ ಗುರು ದೀಪಕ್ ಚೋಪ್ರಾ, ಅನುರಾಗ್ ಕಶ್ಯಪ್, ನಂದಿತಾ ದಾಸ್ ಹೆಸರಿನ ಉಲ್ಲೇಖಗಳಿವೆ. 2015ರಲ್ಲಿ ವರ್ಜಿನ್ ದ್ವೀಪದಲ್ಲಿ ನಡೆದ ಮಾದಕ ಪಾರ್ಟಿಯೊಂದರಲ್ಲಿ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಭಾಗಿಯಾಗಿದ್ದ ಎಂಬಂಥ ಉಲ್ಲೇಖಗಳನ್ನೂ ಎಪ್‌ಸ್ಟೀನ್ ಮಾಡಿದ್ದಾನೆ.

ಪೀಡೋ ದ್ವೀಪದಲ್ಲಿ ಮೈಕೆಲ್ ಜಾಕ್ಸನ್ ಕಂಡುಬಂದಿದ್ದ ಎಂದು ಕೂಡ ಸಂತ್ರಸ್ತೆಯೊಬ್ಬಳು ಹೇಳಿದ್ದಾಳೆ. ಇದನ್ನೆಲ್ಲ ರುಜುವಾತುಪಡಿಸಲು ಯಾವುದೇ ಸಾಕ್ಷ್ಯವಿಲ್ಲ. ಆದರೆ ಎಡಪಂಥೀಯರ ಫೇವರಿಟ್ ಚಿಂತಕ ನೋಮ್ ಚಾಮ್‌ಸ್ಕಿ ಮಾತ್ರ ಜೆಫ್ರಿ ಸಾಯುವವರೆಗೂ ಆತನ ಸಿಂಪತೈಸರ್ ಆಗಿದ್ದುದು ಇದೀಗ ಹಲವರಿಗೆ ಉಗುಳಲಾಗದ ನುಂಗಲಾಗದ ಬಿಸಿ ತುಪ್ಪವಾಗಿದೆ.

ಸಿಕ್ಕಷ್ಟು ಫೈಲುಗಳಿಂದಲೇ ಹೊಸ ಹೊಸ ಕಾನ್ʼಸ್ಪಿರಸಿ ಥಿಯರಿ, ಘನಘೋರ ಸಂಗತಿಗಳನ್ನು ಹುಟ್ಟಿಸಿ ಹೇಳುತ್ತಿರುವವರಿಗೂ ಕಡಿಮೆಯೇನಿಲ್ಲ. ಪೀಡೋ ಐಲ್ಯಾಂಡ್‌ನಲ್ಲಿ ಚೌಕಾಕಾರದ, ಬಿಳಿ- ನೀಲಿ ಬಣ್ಣದ ಪಟ್ಟಿಗಳಿಂದ ಕೂಡಿದ ಹಾಳುಬಿದ್ದ ಭವನವೊಂದು ಇದೆ. ಇದೊಂದು ‘ಗುಡಿ’ ಎಂದೂ, ಅಲ್ಲಿ ಮಕ್ಕಳನ್ನು ಬಲಿ ಕೊಡಲಾಗುತ್ತಿತ್ತು ಎಂದೂ, ನಂತರ ಆ ಮಕ್ಕಳ ಮಾಂಸಭಕ್ಷಣೆ ಮಾಡಲಾಗುತ್ತಿತ್ತು ಎಂದೂ ಆರೋಪಗಳೆದ್ದಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಎಪ್ʼಸ್ಟೀನ್‌ನ ಇಮೇಲ್‌ಗಳಂದರಲ್ಲಿ ‘ಬಾಲ್’ ಎಂಬ ಉಲ್ಲೇಖ ಹಾಗೂ ಅದೇ ಹೆಸರಿನಲ್ಲಿ ಅವನ ಖಾತೆಯಿದೆ. ‘ಬಾಲ್’ ಎಂಬುದು ಇಸ್ರೇಲ್ ಮೂಲದ ರಾಕ್ಷಸಸ್ವರೂಪಿ ದೈವವೊಂದರ ಹೆಸರು. ಅದಕ್ಕೆ ಮಕ್ಕಳ ಬಲಿ ಇಷ್ಟ. ದ್ವೀಪದಲ್ಲಿರುವ ಭವನದ ಒಳಾಂಗಣ ಚಿತ್ರಗಳು ಹಾಳು ದೆವ್ವದ ಮನೆಯನ್ನು ಹೋಲುತ್ತವೆ. ಪೊಲೀಸರು ಇದನ್ನು ದೃಢಪಡಿಸಿಲ್ಲ.

ಆದರೆ ವದಂತಿಗಳಿಗೆ ಮಿಂಚಿನ ವೇಗ. ‘ಇಲಿ ಹೋದರೆ ಹುಲಿ ಹೋಯಿತು’ ಎನ್ನುವುದು ಮನುಷ್ಯನ ಜಾಯಮಾನ. ಶ್ರೀಮಂತರೆಲ್ಲರೂ ಖೂಳರು ಎಂಬ ಸಂಚು ಥಿಯರಿಯನ್ನು ಜನ ಬಹಳ ನಂಬು ತ್ತಾರೆ. ಎಪ್‌ಸ್ಟೀನ್ ಫೈಲುಗಳು ಭಯಾನಕವಾಗಿವೆ ನಿಜ. ಆದರೆ ಅವು ಅಗತ್ಯಕ್ಕಿಂತ ಹೆಚ್ಚು ಅಪಾರ್ಥ ಕ್ಕೀಡಾಗಲೂ ಸಾಧ್ಯವಿದೆ. ಇಲ್ಲಿ ಹೆಸರು ಉಲ್ಲೇಖವಾದವರೆಲ್ಲ ಅಪರಾಧಿಗಳಲ್ಲ; ಆದರೆ ಸೋಶಿ ಯಲ್ ಮೀಡಿಯಾ ಜಮಾನಾದಲ್ಲಿ ಎಲ್ಲರೂ ದೇವತೆಗಳೇ; ಎಲ್ಲರೂ ಪಿಶಾಚಿಗಳೇ. ಮಾಹಿತಿ ಪಡೆಯುವ, ಮೀಡಿಯಾ ಬಳಸುವ ಎಚ್ಚರ ಮುಖ್ಯ.