ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ದೃಢಸಂಕಲ್ಪದಿಂದ ನಕ್ಷತ್ರವಾಗಿ ಮಿನುಗಿದ ಧ್ರುವ

ನಾರಾಯಣನು, ‘ರಾಜಕುಮಾರನೇ, ನಿನ್ನ ಎಲ್ಲಾ ಆಸೆಗಳು ಈಡೇರು ತ್ತವೆ. ನಿನ್ನ ಭಕ್ತಿಗೆ ಮೆಚ್ಚಿ ಜ್ಯೋತಿಷ್ಯ ಚಕ್ರ ಮತ್ತು ಅದರ ಸುತ್ತ ಸುತ್ತುವ ಎಲ್ಲಾ ಗ್ರಹಗಳು, ನಕ್ಷತ್ರಗಳು ಇದೆಲ್ಲಕ್ಕಿಂತ ಮಿಗಿಲಾಗಿ ಜಗತ್ತನ್ನು ನಾನು ನಿನಗೆ ದಯಪಾಲಿಸುತ್ತಿದ್ದೇನೆ. ಅದು ಮಹಾ ಪ್ರಳಯದ ಅವಧಿಯಲ್ಲಿಯೂ ಎಂದಿಗೂ ನಾಶವಾಗುವುದಿಲ್ಲ. ಸಪ್ತರ್ಷಿಗಳೂ ಸಹ ನಕ್ಷತ್ರ ಗಳೊಂದಿಗೆ ಅದನ್ನು ಪ್ರದಕ್ಷಿಣೆ ಮಾಡುತ್ತಾರೆ. ಈ ಲೋಕವನ್ನು ನಿನ್ನ ಹೆಸರಿನಿಂದ ಧ್ರುವ ಲೋಕ ಎಂದು ಕರೆಯಲಾಗುತ್ತದೆ.

Roopa Gururaj Column: ದೃಢಸಂಕಲ್ಪದಿಂದ ನಕ್ಷತ್ರವಾಗಿ ಮಿನುಗಿದ ಧ್ರುವ

-

ಒಂದೊಳ್ಳೆ ಮಾತು

ರಾಜ ಉತ್ತಾನಪಾದನಿಗೆ ಸುನೀತಿ ಮತ್ತು ಸುರುಚಿ ಎಂಬ ಇಬ್ಬರು ಹೆಂಡತಿಯರಿದ್ದರು. ರಾಜ ಉತ್ತಾನಪಾದನಿಗೆ ಸುನೀತಿಯಿಂದ ಧ್ರುವ ಮತ್ತು ಸುರುಚಿಯಿಂದ ಉತ್ತಮ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಸುನೀತಿ ಹಿರಿಯ ರಾಣಿಯಾಗಿದ್ದರೂ, ಉತ್ತಾನಪಾದನಿಗೆ ಸುರುಚಿಯ ಮೇಲಿನ ಪ್ರೀತಿ ಹೆಚ್ಚಾಗಿತ್ತು. ಒಮ್ಮೆ ಸುನೀತಿಯ ಮಗ ಧ್ರುವ ತನ್ನ ತಂದೆಯ ಮಡಿಲಿನಲ್ಲಿ ಆಟವಾಡುತ್ತಿದ್ದ.

ಅದನ್ನು ನೋಡಿ ಸುರುಚಿಗೆ ಕೋಪ ಉಕ್ಕೇರಿತು. ಅಸೂಯೆಯಿಂದ ಅವಳು ರಾಜನ ಮಡಿಲಿನಿಂದ ಮಗು ಧ್ರುವನನ್ನು ಎಳೆದು ತನ್ನ ಸ್ವಂತ ಮಗ ಉತ್ತಮನನ್ನು ಅವನ ಮಡಿಲಲ್ಲಿ ಕೂರಿಸಿದಳು. ಅವಳು ಮಗು ಧ್ರುವನಿಗೆ, ‘ಮೂರ್ಖ.. ನನ್ನ ಗರ್ಭದಿಂದ ಹುಟ್ಟಿದ ಮಗು ಮಾತ್ರ ರಾಜನ ಮಡಿಲಲ್ಲಿ ಕುಳಿತುಕೊಳ್ಳಲು ಸಾಧ್ಯ, ನೀನು ನನ್ನ ಗರ್ಭದಿಂದ ಹುಟ್ಟಿಲ್ಲ. ಆದ್ದರಿಂದ ನೀನು ತಂದೆಯ ಮಡಿಲಲ್ಲಿ ಅಥವಾ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಹಕ್ಕನ್ನು ಹೊಂದಿಲ್ಲ’ ಎಂದು ಕಟುವಾಗಿ ನುಡಿದಳು.

ಐದು ವರ್ಷದ ಧ್ರುವನು ತನ್ನ ಮಲತಾಯಿಯ ವರ್ತನೆಯಿಂದ ಕೋಪಗೊಂಡನು. ಅವನು ತನ್ನ ತಾಯಿ ಸುನೀತಿಯ ಬಳಿಗೆ ಓಡಿ ಹೋಗಿ ಎಲ್ಲವನ್ನೂ ಹೇಳಿದಾಗ ಸುನೀತಿ, ‘ಮಗನೇ, ನಿನ್ನ ತಂದೆ ನಿನ್ನ ಮಲತಾಯಿ ಸುರುಚಿಯ ಮೇಲಿನ ಅತಿಯಾದ ಪ್ರೀತಿಯಿಂದಾಗಿ ನಮ್ಮಿಂದ ದೂರವಾಗಿ ದ್ದಾರೆ.

ಇದನ್ನೂ ಓದಿ: Roopa Gururaj Column: ಗೀತಾ ಪಠಣದಲ್ಲಿ ಬರುವ ಸಂಜಯ ಉವಾಚ

ನೀನು ಭಗವಂತನನ್ನು ನಂಬು.. ಅವನು ನಿನಗೆ ಶಾಶ್ವತವಾದ ಸಿಂಹಾಸನವನ್ನು ಸ್ಥಾನವನ್ನು ನೀಡುತ್ತಾನೆ’ ಎಂದು ಹೇಳಿದಳು. ತಾಯಿಯ ಮಾತುಗಳನ್ನು ಕೇಳಿ ಧ್ರುವನು ಅರಮನೆ ತೊರೆದು ಭಗವಂತನನ್ನು ಅರಸುತ್ತಾ ಹೊರಟನು. ಕಾಡಿನಲ್ಲಿ ದೇವರನ್ನು ಕಂಡುಕೊಳ್ಳಲು ಹೊರಟಾಗ ದಾರಿಯಲ್ಲಿ ಅವನು ನಾರದ ಮುನಿಯನ್ನು ಭೇಟಿಯಾದನು.

ನಾರದ ಮಹರ್ಷಿಗಳು ಮಗು ಧ್ರುವನಿಗೆ ಬುದ್ಧಿ ಹೇಳಿ ಮರಳಿ ಕಳಿಸಲು ಪ್ರಯತ್ನಿಸಿದರು, ಆದರೆ ಧ್ರುವನು ನಿರಾಕರಿಸಿದನು. ಅವನ ದೃಢಸಂಕಲ್ಪವನ್ನು ನೋಡಿ ನಾರದರು ಧ್ರುವನಿಗೆ ಮಂತ್ರೋ ಪದೇಶ ಮಾಡಿದರು. ಧ್ರುವನ ನಿರ್ಗಮನದಿಂದ ರಾಜ ಉತ್ತಾನಪಾದನು ತೀವ್ರ ದುಃಖಿತನಾಗಿದ್ದನು. ನಾರದರು ರಾಜನನ್ನು ಕಾಣಲು ಬಂದರು. ಅವರೇ ರಾಜನಿಗೆ ಧ್ರುವನ ಬಗ್ಗೆ ಮಾಹಿತಿ ಕೊಟ್ಟು, ‘ಭವಿಷ್ಯದಲ್ಲಿ ಅವನ ಖ್ಯಾತಿ ವಿಶ್ವದಾದ್ಯಂತ ಹರಡುತ್ತದೆ’ ಎಂದರು.

ನಾರದರ ಈ ಮಾತುಗಳಿಂದ ರಾಜ ಉತ್ತಾನಪಾದನಿಗೆ ಸ್ವಲ್ಪ ಸಮಾಧಾನ ವಾಯಿತು. ಬಾಲಕ ಧ್ರುವನು ಯಮುನಾ ನದಿಯ ದಡವನ್ನು ತಲುಪಿ, ನಾರದ ಋಷಿಗಳು ನೀಡಿದ ಮಂತ್ರವನ್ನು ಪಠಿಸುತ್ತ ನಾರಾಯಣನನ್ನು ಧ್ಯಾನಿಸಲು ಪ್ರಾರಂಭಿಸಿದನು.

ಧ್ಯಾನಸ್ಥನಾಗುವಾಗ ಧ್ರುವನು ಹಲವಾರು ಸವಾಲುಗಳನ್ನು ಎದುರಿಸಿದನು, ಆದರೆ ಅವನು ದೃಢ ನಿಶ್ಚಯದಿಂದ ತಪಸ್ಸಿಗೆ ಇಳಿದನು. ಅವನ ತಪಸ್ಸಿನ ತೇಜಸ್ಸು ಮೂರು ಲೋಕಗಳಲ್ಲಿ ಹರಡಲು ಪ್ರಾರಂಭಿಸಿತು. ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರೋಚ್ಛಾರ ವೈಕುಂಠ ದಲ್ಲಿಯೂ ಪ್ರತಿಧ್ವನಿಸಿತು.

ಇವನ ತಪಸ್ಸಿಗೆ ನಾರಾಯಣ ತನ್ನ ಯೋಗ ನಿದ್ರೆಯಿಂದ ಎಚ್ಚರಗೊಂಡನು. ಧ್ರುವನು ಈ ಸ್ಥಿತಿ ಯಲ್ಲಿ ಧ್ಯಾನ ಮಾಡುತ್ತಿರುವುದನ್ನು ನೋಡಿ, ನಾರಾಯಣನು ಸಂತೋಷಗೊಂಡು ಅವನ ಮುಂದೆ ಪ್ರತ್ಯಕ್ಷನಾದನು. ನಾರಾಯಣನು, ‘ರಾಜಕುಮಾರನೇ, ನಿನ್ನ ಎಲ್ಲಾ ಆಸೆಗಳು ಈಡೇರು ತ್ತವೆ. ನಿನ್ನ ಭಕ್ತಿಗೆ ಮೆಚ್ಚಿ ಜ್ಯೋತಿಷ್ಯ ಚಕ್ರ ಮತ್ತು ಅದರ ಸುತ್ತ ಸುತ್ತುವ ಎಲ್ಲಾ ಗ್ರಹಗಳು, ನಕ್ಷತ್ರಗಳು ಇದೆಲ್ಲಕ್ಕಿಂತ ಮಿಗಿಲಾಗಿ ಜಗತ್ತನ್ನು ನಾನು ನಿನಗೆ ದಯಪಾಲಿಸುತ್ತಿದ್ದೇನೆ. ಅದು ಮಹಾ ಪ್ರಳಯದ ಅವಧಿಯಲ್ಲಿಯೂ ಎಂದಿಗೂ ನಾಶವಾಗುವುದಿಲ್ಲ. ಸಪ್ತರ್ಷಿಗಳೂ ಸಹ ನಕ್ಷತ್ರ ಗಳೊಂದಿಗೆ ಅದನ್ನು ಪ್ರದಕ್ಷಿಣೆ ಮಾಡುತ್ತಾರೆ. ಈ ಲೋಕವನ್ನು ನಿನ್ನ ಹೆಸರಿನಿಂದ ಧ್ರುವ ಲೋಕ ಎಂದು ಕರೆಯಲಾಗುತ್ತದೆ. ಈ ಲೋಕದಲ್ಲಿ ನೀನು ಮೂವತ್ತಾರು ಸಾವಿರ ವರ್ಷಗಳ ಕಾಲ ಭೂಮಿಯನ್ನು ಆಳುವೆ. ಎಲ್ಲಾ ಐಷಾರಾಮಿ ಬದುಕನ್ನೂ ಅನುಭವಿಸಿದ ನಂತರ, ನೀನು ನನ್ನ ಲೋಕವನ್ನು ಪಡೆಯು ತ್ತೀಯ’ ಎಂದು ಆಶೀರ್ವದಿಸಿದನು. ನಂತರ ಧ್ರುವನು ಧ್ರುವ ನಕ್ಷತ್ರ ವಾದನು, ಇಂದಿಗೂ ಆಗಸದಲ್ಲಿ ರಾರಾಜಿಸುತ್ತಿದ್ದಾನೆ.

ನಿಜವಾದ ಸಂಕಲ್ಪ ಶಕ್ತಿ ಮತ್ತು ಭಗವಂತನ ಮೇಲಿಟ್ಟರೆ ಹಾಗೂ ಬದುಕಿನಲ್ಲಿ ಅಚಲವಾದ ನಂಬಿಕೆ ಇದ್ದರೆ ಎಂತಹವರೂ ಕೂಡ ಧ್ರುವನಂತೆ ನಕ್ಷತ್ರವಾಗಿ ಮಿನುಗಬಹುದು. ಇಂತಹ ಸಂಕಲ್ಪ ಶಕ್ತಿ, ದೃಢ ಮನಸ್ಸು, ನಂಬಿಕೆ ನಮ್ಮನ್ನು ವರ್ಷಪೂರ್ತಿ ಮುನ್ನಡೆಸಲಿ. ಎಲ್ಲರಿಗೂ ಹೊಸ ವರ್ಷ-2026ರ ಹಾರ್ದಿಕ ಶುಭಾಶಯಗಳು..!