ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಮೆಚ್ಚಬೇಕು ಇಲ್ಲ ಚಚ್ಚಬೇಕು: ಇದು ಸಾ.ಜಾ.ಡೆಮೋಕ್ರಸಿ

ಕ್ರಿಸ್ ರಾಕ್’ ಎಂಬ ಕಾಮೆಡಿಯನ್ (ಹಾಸ್ಯಗಾರ) ಆ ವರ್ಷದ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಕಾರ್ಯಕ್ರಮ ವನ್ನು ನಡೆಸಿಕೊಡುತ್ತಿದ್ದ. ವೇದಿಕೆಯ ಎದುರಿಗೆ ಪ್ರಶಸ್ತಿಗೆ ನಾಮನಿರ್ದೇಶಿತರಾದ ನಟನಟಿಯರೆಲ್ಲ ಕೂತಿದ್ದರು. ಕ್ರಿಸ್ ಮಾತಿನ ಮಧ್ಯೆ ಅವರಿವರ ಮೇಲೆ ತಮಾಷೆ ಮಾಡುತ್ತಿದ್ದ. ಎದುರಿಗೆ ಆ ವರ್ಷದ ಆಸ್ಕರ್ ಪ್ರಶಸ್ತಿಯ ಸಂಭವನೀಯರ ಪಟ್ಟಿಯಲ್ಲಿದ್ದ ‘ವಿಲ್ ಸ್ಮಿತ್’ ಕೂಡ ಕೂತಿದ್ದ.

ಮೆಚ್ಚಬೇಕು ಇಲ್ಲ ಚಚ್ಚಬೇಕು: ಇದು ಸಾ.ಜಾ.ಡೆಮೋಕ್ರಸಿ

ಶಿಶಿರಕಾಲ

shishirh@gmail.com

ಕೆಲವೊಂದಿಷ್ಟು ವಾರ್ಷಿಕ ಟಿವಿ ಕಾರ್ಯಕ್ರಮಗಳನ್ನು ನೋಡುವುದನ್ನು ನಾನು ತಪ್ಪಿಸಿಕೊಳ್ಳುವು ದಿಲ್ಲ. ಅವುಗಳಲ್ಲಿ ಸಿನಿಮಾ ಜಗತ್ತಿನ ಪರಮ ಪ್ರತಿಷ್ಠೆಯ ‘ಆಸ್ಕರ್ ಪ್ರಶಸ್ತಿ’ ಪ್ರದಾನ ಸಮಾರಂಭ ಕೂಡ ಒಂದು. ಆಸ್ಕರ್ ಸಮಾರಂಭದ ಕಾರ್ಯಕ್ರಮದ ಆಂಕರಿಂಗ್- ‘ನಿರ್ವಹಣೆ’ ಮಾಡುವವ ರನ್ನು ಸಮಿತಿ ಅಳೆದು ತೂಗಿ ಆಯ್ಕೆಮಾಡಿಕೊಂಡಿರುತ್ತದೆ. ಸಾಮಾನ್ಯವಾಗಿ ಹಾಲಿವುಡ್‌ನ ಹಾಸ್ಯ ಗಾರರು ಅಥವಾ ಹಾಸ್ಯನಟರೇ ಈ ಕಾರ್ಯಕ್ರಮವನ್ನು ನಡೆಸಿಕೊಡುವುದು. ನಿರ್ವಹಣಾ ಕಾರ ಸಭೆಯಲ್ಲಿ ನೆರೆದಿರುವ ಜನಪ್ರಿಯ ನಟ-ನಟಿಯರ ಕಾಲೆಳೆಯುವುದು ಸಾಮಾನ್ಯ.

ಇದು ರಂಜನೆಯ ಭಾಗ. ನಟ-ನಟಿಯರ ತೀರಾ ವೈಯಕ್ತಿಕ ವಿಷಯವನ್ನೂ ಇಲ್ಲಿ ಬಿಡುವುದಿಲ್ಲ. ಆದರೆ ಎಷ್ಟೇ ಮುಜುಗರವಾದರೂ ಅದನ್ನು ಹಾಗೆಯೇ ನಕ್ಕು ಬಿಡುವುದು ಅಲ್ಲಿನ ಶಿಷ್ಟಾಚಾರ. ಯಾರೂ ಆ ವೇದಿಕೆಯ ಹಾಸ್ಯಕ್ಕೆ, ಅಪಹಾಸ್ಯಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಆಗೀಗ ಕೆಲವರಿಗೆ ಸಿಟ್ಟು ನೆತ್ತಿಗೇರಿಬಿಡುತ್ತದೆ.

ಆಗ ಅವರು ಎದ್ದು ನಿಂತು ಕೂಗಾಡುವುದು ಇತ್ಯಾದಿ ಸಾಮಾನ್ಯ. ಆದರೆ ಇಲ್ಲಿ ಸುಮ್ಮನೆ ನಕ್ಕು ಸುಮ್ಮನಾಗುವುದು ಬುದ್ಧಿವಂತಿಕೆ. ಕೂಗಾಡಿ ಸಿಟ್ಟು ಪ್ರದರ್ಶಿಸಿದರೆ ಮಾರನೆಯ ದಿನ ಅದೇ ವಿಷಯ ಎಡೆಯೂ ಚರ್ಚೆಯಾಗಿ ಇನ್ನಷ್ಟು ಮರ್ಯಾದೆ ಹೋಗುತ್ತದೆ ಎಂದು ಬಹುತೇಕರು ಸುಮ್ಮನಾಗಿ ಬಿಡುತ್ತಾರೆ. ಈಗೊಂದೆರಡು ವರ್ಷದ ಹಿಂದೆ ಇಂಥದ್ದೇ ಒಂದು ಘಟನೆ ನಡೆದದ್ದು ನಿಮಗೆ ತಿಳಿದಿರಬಹುದು. ‘ಕ್ರಿಸ್ ರಾಕ್’ ಎಂಬ ಕಾಮೆಡಿಯನ್ (ಹಾಸ್ಯಗಾರ) ಆ ವರ್ಷದ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ. ವೇದಿಕೆಯ ಎದುರಿಗೆ ಪ್ರಶಸ್ತಿಗೆ ನಾಮನಿರ್ದೇಶಿತ ರಾದ ನಟನಟಿಯರೆಲ್ಲ ಕೂತಿದ್ದರು. ಕ್ರಿಸ್ ಮಾತಿನ ಮಧ್ಯೆ ಅವರಿವರ ಮೇಲೆ ತಮಾಷೆ ಮಾಡು ತ್ತಿದ್ದ. ಎದುರಿಗೆ ಆ ವರ್ಷದ ಆಸ್ಕರ್ ಪ್ರಶಸ್ತಿಯ ಸಂಭವನೀಯರ ಪಟ್ಟಿಯಲ್ಲಿದ್ದ ‘ವಿಲ್ ಸ್ಮಿತ್’ ಕೂಡ ಕೂತಿದ್ದ.

ಇದನ್ನೂ ಓದಿ: Shishir Hegde Column: ಊರವರೆಲ್ಲ ಉಗ್ರಗಾಮಿಗಳಾದರೆ ಏನು ಮಾಡಬೇಕು ?

ವಿಲ್ ಸ್ಮಿತ್ ಮತ್ತು ಅವನ ಪತ್ನಿಯ ಮೇಲೆ ಕ್ರಿಸ್ ಏನೋ ಒಂದು ಹಾಸ್ಯ ಮಾಡಿದ. ಆ ಕ್ಷಣಕ್ಕೆ ವಿಲ್ ಸ್ಮಿತ್ ಕೂಡ ಹಾಸ್ಯಕ್ಕೆ ನಕ್ಕ. ಅದಾದ ಒಂದೆರಡು ಕ್ಷಣ ಕಳೆದಿರಬೇಕು- ಸಭೆಯ ಕೆಳಗೆ ಕೂತಿದ್ದ ವಿಲ್ ಸ್ಮಿತ್ ವೇದಿಕೆಯನ್ನೇರಿ ಕ್ರಿಸ್ ರಾಕ್‌ಗೆ ಫಟಾರ್ ಎಂದು ಕಪಾಳಮೋಕ್ಷ ಮಾಡಿಬಿಟ್ಟ. ಪೆಟ್ಟೆಂದರೆ ಸಮಾ ಹೊಡೆತವೇ ಕೊಟ್ಟದ್ದು, ಹಲ್ಲು ಅಲುಗಾಡುವಷ್ಟು.

ಎಲ್ಲ ನಡೆದದ್ದು ಒಂದೂವರೆ ನಿಮಿಷದಲ್ಲಿ. ಈ ಕಾರ್ಯಕ್ರಮವನ್ನು ಕೋಟ್ಯಂತರ ಜನರು ಲೈವ್ ನೋಡುತ್ತಿದ್ದರು. ಕ್ರಿಸ್ ರಾಕ್‌ಗೂ ಈ ಕಾರ್ಯಕ್ರಮ ಅವನ ವೃತ್ತಿಯ ಒಂದು ಮುಖ್ಯಘಟ್ಟವಾಗಿತ್ತು. ಅದೇ ರೀತಿ ಅವನ ಕೆನ್ನೆಗೆ ಹೊಡೆದ ವಿಲ್ ಸ್ಮಿತ್‌ಗೂ ಆ ಕಾರ್ಯಕ್ರಮ ಅಷ್ಟೇ ಮಹತ್ವದ್ದಾಗಿತ್ತು.

ಏಕೆಂದರೆ ಅದು ಅವನ ಮೊದಲ ಆಸ್ಕರ್ ಗೆದ್ದ ಕಾರ್ಯಕ್ರಮ. ಆ ಆಸ್ಕರ್ ಪ್ರಶಸ್ತಿಗೆ ಆತ ಎರಡು ದಶಕಕ್ಕೂ ಹೆಚ್ಚು ವರ್ಷದಿಂದ ಕಾಯುತ್ತಿದ್ದ. ಆದರೆ ವಿಲ್ ಸ್ಮಿತ್- ಕ್ರಿಸ್‌ನ ಕೆನ್ನೆಗೆ ಬಾರಿಸುತ್ತಿದ್ದಂತೆ ಇಡೀ ಸಭೆ ಒಂದು ಕ್ಷಣ ಸ್ತಬ್ಧವಾಯಿತು. ಸಂಭಾವಿತ ವಿಲ್ ಸ್ಮಿತ್ ನಿಂದ ಈ ರೀತಿಯ ನಡವಳಿಕೆ ಯನ್ನು ಯಾರೂ ನಿರೀಕ್ಷಿಸಿರಲೇ ಇಲ್ಲ.

ಆದರೆ ಹಾಗೆ ಪೆಟ್ಟು ತಿಂದ ಕ್ರಿಸ್ ರಾಕ್ ವಾಪಸ್ ವಿಲ್ ಸ್ಮಿತ್‌ಗೆ ಹೊಡೆಯಲಿಲ್ಲ, ಕೈಯಲ್ಲಿ ಮೈಕ್ ಇದ್ದರೂ ಬಾಯಿಗೆ ಬಂದಂತೆ ಕೂಗಲಿಲ್ಲ. ಆತ ಆ ಕ್ಷಣದಲ್ಲಿ ಏನು ಬೇಕಾದರೂ ಹೇಳಬಹುದಿತ್ತು. ಬದಲಿಗೆ ಹಲ್ಲು ಕಿರಿದು ನಕ್ಕು ಬಿಟ್ಟ. ಅಷ್ಟೇ ಅಲ್ಲ- “ವಾವ್.. ಇದು ಟಿವಿ ಇತಿಹಾಸದಲ್ಲಿಯೇ ಒಂದು ಮಹತ್ವದ ದಿನ" ಎಂದ. ವಿಲ್ ಸ್ಮಿತ್ ಜಗತ್ಪ್ರಸಿದ್ಧ ನಟ- ಅದೇ ಮೊದಲ ಬಾರಿ ಆಸ್ಕರ್ ಗೆದ್ದದ್ದು.

ಆದರೆ ಮಾರನೆಯ ದಿನ ಇಡೀ ಜಗತ್ತಿನ ಮಾಧ್ಯಮಗಳಲ್ಲ ಆಸ್ಕರ್ ಯಾರಿಗೆ ಬಂತು ಎನ್ನುವುದು ಚರ್ಚೆಯಾಗಲಿಲ್ಲ. ಬದಲಿಗೆ ಆತನ ಕಪಾಳಮೋಕ್ಷ ಕ್ರಿಯೆಯೇ ಕಾರ್ಯಕ್ರಮದ ಹೈಲೈಟ್ ಆಗಿಬಿಟ್ಟಿತು. ಪೆಟ್ಟು ತಿಂದ ಕ್ರಿಸ್ ರಾಕ್, ವಿಲ್ ಸ್ಮಿತ್ ಮೇಲೆ ಕೇಸ್ ಹಾಕಲಿಲ್ಲ. ‘ನಾನು ಅವನನ್ನು ಕ್ಷಮಿಸಿದ್ದೇನೆ’ ಎಂದ, ಬಿಟ್ಟು ಬಿಟ್ಟ. ಆನಂತರದಲ್ಲಿ ವಿಲ್ ಸ್ಮಿತ್ ಸಾರ್ವಜನಿಕರಲ್ಲಿ ಕ್ಷಮೆಯಾಚಿ ಸಿದ,

ಕ್ಯಾಮರಾ ಮುಂದೆ ಬಂದು ‘ನಾನು ಮಾಡಿದ್ದು ತಪ್ಪು’ ಎಂದು ಅತ್ತ. ಆದರೆ ಅದಾಗಲೇ ಹಾನಿ ಆಗಿಯಾಗಿತ್ತು. ಈ ಘಟನೆ ಹೇಳಲು ಕಾರಣವಿದೆ. ಒಬ್ಬ ವ್ಯಕ್ತಿ ಅದೆಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಸಾಧನೆ ಗೈದಿರಲಿ, ಧೈರ್ಯಶಾಲಿಯೇ ಆಗಿರಲಿ, ಸಂಭಾವಿತ, ಸ್ಥಿತಪ್ರಜ್ಞನಾಗಿರಲಿ, ಕೆಲವೊಂದಿಷ್ಟು ಸಮಯ ಸಂದರ್ಭಗಳಲ್ಲಿ ತನ್ನ ಮೇಲಿನ ಹಿಡಿತವನ್ನು ಕಳೆದುಕೊಂಡುಬಿಡುತ್ತಾನೆ.

ಎಂಥವರಿಗೂ ಕೆಲವೊಂದು ರೀತಿಯ ಒತ್ತಡಗಳನ್ನು ಸಹಿಸಿಕೊಳ್ಳುವುದಕ್ಕಾಗುವುದಿಲ್ಲ. ಅದೆಷ್ಟೇ ಸಮಾಧಾನಿಯಾಗಿರಲಿ, ತನಗೇ ನಂತರದಲ್ಲಿ ನಾಚಿಕೆಯಾಗುವಂತೆ, ಬೇಸರವಾಗುವಂತೆ ನಡೆದು ಕೊಂಡುಬಿಡುತ್ತಾನೆ. ಆ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿದ್ದರೆ, ಸಿನಿಮಾ ನಟನಾಗಿದ್ದರೆ, ಹಾಡುಗಾರ ನಾಗಿದ್ದರೆ, ರಾಜಕಾರಣಿಯಾಗಿದ್ದರೆ ಕಥೆ ಮುಗಿದೇಹೋಯಿತು.

ಇಡೀ ಸಾಮಾಜಿಕ ಜಾಲತಾಣ (ಸಾ.ಜಾ.) ಸಜಾ ಕೊಡಲು ತಯಾರಾಗಿ ನಿಂತುಬಿಡುತ್ತದೆ. ಅಲ್ಲಿಂದ ಮುಂದೆ ಆತ ಮಾಡಿದ್ದೆಲ್ಲವೂ ತಪ್ಪೇ ತಪ್ಪು. ಹಿಂದೆಯೂ ಇವನು ಹೀಗೆಯೇ ಮಾಡಿದ್ದ- ಇದು ಇವನ ಹುಟ್ಟುಗುಣ- ಗೋಮುಖ ವ್ಯಾಘ್ರ ಎಂಬಿತ್ಯಾದಿ ನಿರೂಪಣೆಗಳು. ಮೊನ್ನೆ ನಡೆದ ಸೋನು ನಿಗಮ್ ಸಂಬಂಧಿಸಿದ ಗಲಾಟೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಆತ ಆಡಿದ ಮಾತು, ಕನ್ನಡಿಗರ ಹೋಲಿಕೆ ಅವೆಲ್ಲ ತಪ್ಪು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ.

ಆದ ಘಟನೆ ಇಷ್ಟು: ಆ ದಿನ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಯಾರೋ ನಾಲ್ಕು ಮಂದಿ ‘ಕನ್ನಡ ಹಾಡು ಹಾಡಿ’ ಎಂದು ವೇದಿಕೆಯ ಮೇಲಿದ್ದ ಸೋನು ನಿಗಮ್‌ಗೆ ಕೆಳಗಿಂದ ಆವಾಜ್ ಹಾಕಿದ್ದಾರೆ. ಅವರ ನಡವಳಿಕೆಯಿಂದ ಸೋನು ನಿಗಮ್ ಸಿಟ್ಟು ನೆತ್ತಿಗೇರಿದೆ. ಅದಾದ ಮೇಲೆ ಸೋನು ನಿಗಮ್ ಇಂಥ ನಡವಳಿಕೆಯೇ ಪಹಲ್ಗಾಮ್ ಘಟನೆಯಾಗಲಿಕ್ಕೆ ಕಾರಣ ಎಂದು ತನ್ನ ಬಾಯಿ ಹರಿಬಿಟ್ಟಿದ್ದಾನೆ- ವೇದಿಕೆಯಲ್ಲಿಯೇ ಹಾಗೆ ಹೇಳಿದ್ದಾನೆ.

ತೀರಾ ಕೆಟ್ಟ ವ್ಯಾಖ್ಯೆ ಅದು. ಖಂಡನೀಯವೇ ಹೌದು. ಶುದ್ಧ ನಾನ್ಸೆ. ಆದರೆ ಇಲ್ಲಿ ಗಮನಿಸಲೇ ಬೇಕಾದ, ಪ್ರಶ್ನಿಸಲೇಬೇಕಾದ ಇನ್ನೊಂದಿಷ್ಟು ಅಂಶಗಳಿವೆ. ಮೊದಲನೆಯದಾಗಿ ಪ್ರಶ್ನಿಸಬೇಕಾದ್ದು ಆ ದಿನ ಅಲ್ಲಿ ಸೇರಿದ ನಾಲ್ಕು ಪುಂಡು ಕನ್ನಡಿಗರ ನಡವಳಿಕೆಯನ್ನು. ಅವರು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಳ್ಳಬಾರದೋ ಆ ರೀತಿ ನಡೆದುಕೊಂಡಿದ್ದರು. ಕೆಳಗಿನಿಂದ ಈ ರೀತಿ ಕೂಗುವುದು ಈಗೀಗ ಹೀರೋಗಿರಿ ಎಂಬಂತಾಗಿದೆ.

ಅವರದು ಆ ದಿನ ಅನಾಗರಿಕ ನಡವಳಿಕೆ. ಅವರ ಆ ನಡವಳಿಕೆ ಮತ್ತು ಸೋನು ನಿಗಮ್‌ರ ನಡವಳಿಕೆಯಲ್ಲಿ ನನಗಂತೂ ಏನೂ ವ್ಯತ್ಯಾಸ ಕಾಣಿಸಲಿಲ್ಲ. ಸೋನು ನಿಗಮ್ ಕನ್ನಡಿಗರ ಬಗ್ಗೆ ಅಂಥ ಮಾತನಾಡಿzದರೆ ಈ ನಾಲ್ವರು ತಮ್ಮ ನಡವಳಿಕೆಯಿಂದ ಕನ್ನಡಿಗರ ಮರ್ಯಾದೆ ತೆಗೆದರು. ಸಭೆಯಲ್ಲಿ ಅನುಚಿತವಾಗಿ ನಡೆದುಕೊಳ್ಳುವುದು ಎಲ್ಲಿಯ ಸೌಜನ್ಯ? ಅವರ ಮೇಲೆ ಕೇಸ್ ಏಕಿಲ್ಲ? ಆನೆ ಮಾಡಿದರೆ ಅದು ತಪ್ಪು, ಇರುವೆ ಮಾಡಿದರೆ ಮಾಫಿಯೇ? ಇಲ್ಲಿ ನ್ಯಾಯ ನೀತಿಯದೇ ಪ್ರಶ್ನೆಯಾಗಿದ್ದರೆ ಸೋನು ನಿಗಮ್‌ರಷ್ಟೇ ತಪ್ಪಿತಸ್ಥರು ಅಂದು ಅಲ್ಲಿ ಅನಾಗರಿಕವಾಗಿ ವರ್ತಿಸಿದ ಆ ನಾಲ್ಕಾರು ಕನ್ನಡಿಗರು. ಅವರು ನಮ್ಮವರೆಂಬ ಏಕೈಕ ಕಾರಣಕ್ಕೆ “ಅವರು ಮಾಡಿದ್ದು ತಪ್ಪಲ್ಲ- ಸೋನು ನಿಗಮ್ ದೊಡ್ಡ ಮನುಷ್ಯನಲ್ಲವೇ, ಅವನು ಸರಿಯಾಗಿ ವರ್ತಿಸಬೇಕಿತ್ತು" ಎಂದರೆ ಅದು ಯಾವ ಬೆಣ್ಣೆ ನ್ಯಾಯ? ಅಷ್ಟಕ್ಕೇ ಈ ಘಟನೆಯನ್ನು ಬಿಡುವಂತಿಲ್ಲ.

ಇದಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ (ಸಾ.ಜಾ.)ದಲ್ಲಿ ಅಸಮಾಧಾನಗಳು ಭುಗಿಲೆದ್ದವು, ‘ಟ್ರೆಂಡ್’ ಪಡೆದುಕೊಂಡವು. ತಕ್ಷಣ ಇದನ್ನು ವಾಹಿನಿಗಳು ಸುದ್ದಿಯಾಗಿ ಎತ್ತಿಕೊಂಡವು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ನ್ಯಾಯ-ಅನ್ಯಾಯದ ಚರ್ಚೆ ಶುರುವಾಯಿತು. ಇದೇ ಅವಕಾಶ ವೆಂಬಂತೆ ಕೆಲವು ಸಂಘಟನೆಗಳು ಸೋನು ನಿಗಮ್ ಮೇಲೆ ಮುಗಿಬಿದ್ದವು.

ಅವನು ಇಡೀ ಕನ್ನಡಿಗರಿಗೇ ಅವಮಾನ ಮಾಡಿದ್ದಾನೆ, ಅವನನ್ನು ಕನ್ನಡದಿಂದ ಬ್ಯಾನ್ ಮಾಡ ಬೇಕು ಎಂಬ ಒತ್ತಾಯ ಆರಂಭವಾಯಿತು. ಕನ್ನಡ ಫಿಲಂ ಚೇಂಬರಿನವರು ಇಂಥ ಘಟನೆಗೇ ಕಾಯುತ್ತಿದ್ದವರಂತೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಸೋನು ನಿಗಮ್‌ರನ್ನು ಬಹಿಷ್ಕರಿಸಿದರು. ಒಬ್ಬ ವ್ಯಕ್ತಿಗೆ ಬಹಿಷ್ಕಾರ ಹಾಕುವುದು ಇಂದು ನಿನ್ನೆಯ ಪದ್ಧತಿಯಲ್ಲ. ಊರಿನವರು ಒಬ್ಬನ ಕುಟುಂಬ ವನ್ನು ಬಹಿಷ್ಕರಿಸುವುದು ಹಿಂದೆಲ್ಲ ಇತ್ತು. ಆದರೆ ಸಮಾಜ ಸುಧಾರಿಸುತ್ತಿದ್ದಂತೆ ಸಾರ್ವಜನಿಕ ಬಹಿಷ್ಕಾರಗಳನ್ನು ಕಾನೂನು ಬಹಿಷ್ಕರಿಸಿದೆ.

ಜನರು ಗುಂಪುಗೂಡಿ ಬಹಿಷ್ಕರಿಸುವುದು ಅಸಾಂವಿಧಾನಿಕ ಕ್ರಿಯೆ ಎಂದೇ ಕಾನೂನು ಹೇಳುತ್ತದೆ. ಕಾನೂನು ಹೋರಾಟದ ಹಕ್ಕನ್ನು ಸಾರ್ವಜನಿಕರಿಗೆ ನೀಡಿದೆ, ಆದರೆ ಶಿಕ್ಷಿಸುವ ಹಕ್ಕು ಸಾರ್ವಜನಿಕ ರದ್ದಲ್ಲ. ಇಂಥ ಬಹಿಷ್ಕಾರಗಳನ್ನು ಕಾನೂನು ಒಪ್ಪುವುದಿಲ್ಲ. ಏನೋ ಒಂದು ಕೆಲಸ ಮಾಡದಂತೆ ಬಹಿಷ್ಕರಿಸುವುದು ಬ್ರಿಟಿಷರು ಮಾಡುತ್ತಿದ್ದ ಕೆಲಸ. ಆದರೆ ಇಂದು ಸಂಘಟನೆಗಳು ಆ ಕೆಲಸವನ್ನು ಮಾಡಿದರೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಸೋನು ನಿಗಮ್ ಬಹಿಷ್ಕಾರವೂ ಹಾಗೆಯೇ. ಇದು ಕಾನೂನಾತ್ಮಕವಲ್ಲ. ಆದರೆ ಸಂಘಟನೆ ಇಂಥ ನಿರ್ಧಾರ ತೆಗೆದುಕೊಂಡರೆ ಅದನ್ನು ಮೀರಿ ಸಿನಿಮಾದವರು ನಡೆಯುವುದಿಲ್ಲ.

ಸೋನು ನಿಗಮ್ ಈ ಕಾರಣಕ್ಕೆ ಕೋರ್ಟಿಗೆ ಹೋಗಿ ಅಲ್ಲಿಂದ ಸ್ಟೇ ತಂದರೂ ಸಿನಿಮಾ ನಿರ್ಮಾಪ ಕರು ಅವರಿಗೆ ಅವಕಾಶ ಕೊಟ್ಟು ಕರೆಯಲಿಕ್ಕಿಲ್ಲ. ಪಬ್ಲಿಕ್ ಪ್ರಾಸಿಕ್ಯೂಷನ್- ತಪ್ಪು ಮಾಡಿದವರನ್ನು ಕಾನೂನು ವ್ಯವಸ್ಥೆಯ ಹೊರಗಡೆ ಸಾರ್ವಜನಿಕರೇ ಶಿಕ್ಷಿಸುವುದು ಅನಾಗರಿಕ ಸಮಾಜದಲ್ಲಿ ಮಾತ್ರ. ತಪ್ಪು ಮಾಡಿದಾಗ ಕಲ್ಲು ಹೊಡೆದು ಕೊಲ್ಲುವುದು, ಊಟ ನೀರು ಕೊಡದೇ ಊರಿನ ಮಧ್ಯದ ಮರಕ್ಕೆ ಕಟ್ಟಿ ಹಾಕುವುದು ಇತ್ಯಾದಿ ಸಭ್ಯ ಸಮಾಜದ ನಡವಳಿಕೆಯಲ್ಲ.

ಆದರೂ ಇಂಥ ಬಹಿಷ್ಕಾರ ಹಾಕುವ ಹಕ್ಕನ್ನು ಕೆಲವೊಂದು ಸಂಘಟನೆಗಳು ಮಾತ್ರ ಅದು ಹೇಗೋ ಪಡೆದುಕೊಂಡುಬಿಟ್ಟಿವೆ. ಅದು ಕೂಡ ಪ್ರಶ್ನಾರ್ಹವೇ ಅಲ್ಲವೇ? ಅವರ ಉದ್ದೇಶವೂ ಪ್ರಶ್ನಾರ್ಹವೇ. ಒಬ್ಬ ವ್ಯಕ್ತಿ ತಮ್ಮ ವಿರುದ್ಧ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ವಕೀಲರು, ವೈದ್ಯರು, ಪೊಲೀಸರು, ಐಎಎಸ್ ಅಧಿಕಾರಿಗಳು ಹೀಗೆ ಒಬ್ಬೊಬ್ಬರೇ ಸಂಘಟನೆ ಕಟ್ಟಿಕೊಂಡು ಅವರದೇ ಸಂಘಟನೆಯಡಿ ಯಲ್ಲಿ ಬಹಿಷ್ಕರಿಸಲು ಶುರುಮಾಡಿಕೊಂಡರೆ ಏನಾಗಬಹುದು? ಇಂಥ ಘಟನೆ ಆಗೀಗ ನಡೆಯು ತ್ತಲೇ ಇರುತ್ತದೆ- ನಾಗರಿಕ ಸಮಾಜದ ದೃಷ್ಟಿಬೊಟ್ಟಿನಂತೆ.

ಎಲ್ಲರಿಗೂ ಇಂದು ನಿರಂತರ ಸೆನ್ಸೇಷನಲ್- ಅತಿರಂಜನೆಯ ಸುದ್ದಿಗಳು ಬೇಕು. ಸಾಮಾಜಿಕ ಜಾಲತಾಣವಂತೂ ಸಾರ್ವಜನಿಕ ನ್ಯಾಯಾಲಯವೇ ಆಗಿಹೋಗಿದೆ. ಆ ನ್ಯಾಯಾಲಯ ಮಜವಾ ಗಿದೆ. ನೀವು ಯಾವುದೋ ಒಂದು ಆಟದಲ್ಲಿ ಮೆಡಲ್ ಗೆದ್ದಿರೆಂದಿಟ್ಟುಕೊಳ್ಳಿ. ಅಥವಾ ಏನೋ ಒಂದು ಸಾಧನೆ ಮಾಡಿದಿರೆಂದಿಟ್ಟುಕೊಳ್ಳಿ. ಎಲ್ಲರೂ ಹೊಗಳುವವರೇ, ಉಪ್ಪರಿಗೆಗೆ ಏರಿಸುವವರೇ. ನೀವು ಆ ದಿನವೇ ದೇಶಭಕ್ತ.

ಅದೇ ವ್ಯಕ್ತಿ ಮಾರನೆಯ ದಿನ ಬಾಯಿತಪ್ಪಿನಿಂದ ಏನೋ ಒಂದು ಮಾತನಾಡಿಬಿಟ್ಟರೆ ಮುಗಿದೇ ಹೋಯಿತು. ಸಾಮಾಜಿಕ ಜಾಲತಾಣದಲ್ಲಿ ಅಂಥವನನ್ನು ಚಚ್ಚಿ ಚಚ್ಚಿ ಬಿಸಾಕಲಾಗುತ್ತದೆ. ತಪ್ಪು ಮಾಡಿದರೆ ಈ ರೀತಿ ಸಾ.ಜಾ.ದಲ್ಲಿ ಸಾರ್ವಜನಿಕರು ತರಾಟೆ ತೆಗೆದುಕೊಳ್ಳುವುದು ತಪ್ಪೆನ್ನುತ್ತಿಲ್ಲ. ಆದರೆ ಇಲ್ಲಿ ಕ್ಷಮಿಸುವ ಮಾತೇ ಇಲ್ಲ. ಖುದ್ದು ಆತನೇ ತಾನು ಮಾಡಿದ್ದು ತಪ್ಪು ಎಂದು ಅಂಗಲಾಚಿದರೂ ಕರುಣೆಯ ಮಾತಿಲ್ಲ.

ಬದಲಿಗೆ “ನೋಡಿ ನಾವು ಅವನಿಗೆ ಹೇಗೆ ಬುದ್ಧಿ ಕಲಿಸಿದೆವು. ಈಗ ಹೆದರಿ ಕ್ಷಮೆಯಾಚಿಸುತ್ತಿದ್ದಾನೆ, ಅವನಿಗೆ ಅವಶ್ಯಕತೆಯಿದೆ ಹಾಗಾಗಿ ಕ್ಷಮೆಯ ನಾಟಕವಾಡುತ್ತಿದ್ದಾನೆ. ಆತ ಇಷ್ಟೂ ದಿನ ಮಾಡಿ ದ್ದೆಲ್ಲ ನಾಟಕ" ಎನ್ನಲಾಗುತ್ತದೆ. ಕ್ಷಮೆ ಕೇಳದಿದ್ದರೆ ಇನ್ನೊಂದು ರೀತಿ. ಸೋನು ನಿಗಮ್ ಅದೆಷ್ಟೋ ಬಾರಿ ಸಾರ್ವಜನಿಕ ವೇದಿಕೆಯಲ್ಲಿ “ಮುಂದೊಂದು ಜನ್ಮವಿದ್ದರೆ ಕನ್ನಡಿಗನಾಗಿ ಹುಟ್ಟುತ್ತೇನೆ, ಕನ್ನಡ ನನ್ನ ಎರಡನೇ ಮಾತೃಭಾಷೆ" ಇತ್ಯಾದಿ ಹೇಳಿದ್ದಿದೆ. ಕನ್ನಡದೆಡೆಗಿನ ಅವನ ಇಷ್ಟೂ ವರ್ಷದ ಮಾತನ್ನು ಕೇಳಿದರೆ ಅಭಿಮಾನ ನಾಟಕವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಘಟನೆ ನಡೆದಾದ ನಂತರ ಆತ ಸ್ಪಷ್ಟನೆ ನೀಡಿದ್ದಾನೆ.

ನಾಲ್ಕು ಪುಂಡರು ಗಲಾಟೆ ಮಾಡುತ್ತಿದ್ದರು, ನಾನು ಸ್ಥಿಮಿತ ಕಳೆದುಕೊಂಡೆ ಎಂದು ಕ್ಷಮೆಯನ್ನೂ ಕೇಳಿದ್ದಾನೆ. ಆದರೆ ಇದೆಲ್ಲವೂ ಯಥಾಪ್ರಕಾರ “ಬಹಿಷ್ಕರಿಸಿದ ನಂತರ ಹೆದರಿ ಹೀಗೆ ಹೇಳಿಕೆ ಕೊಟ್ಟಿzನೆ" ಎಂಬಂತೆಯೇ ಬಿಂಬಿತವಾಗುತ್ತಿದೆ. ಆತ ಹಾಗೆ ಮಾತನಾಡಿದ್ದು ಬೇಜವಾಬ್ದಾರಿ, ತಪ್ಪು ಎಲ್ಲವೂ ಹೌದು. ಆದರೆ ಯಾವುದೇ ಮಾತಿನ ಹಿಂದಿನ ಉದ್ದೇಶ, ಅಥವಾ ಆ ದಿನದ ಕಾರಣ ಏನೆಂಬುದು ಈಗ ಯಾರಿಗೂ ಬೇಕಿಲ್ಲ. ಕನ್ನಡಿಗರು ಇಷ್ಟೆ ಅವಕಾಶ ಕೊಟ್ಟರೂ ಸೋನು ನಿಗಮ್ ಹೀಗೆ ಹೇಳಿದ್ದಾನೆ ಎಂಬ ನಿರೂಪಣೆಯೇ ಮುಂದುವರಿದಿದೆ. ಅಸಲಿಗೆ ಸೋನು ನಿಗಮ್ ನನ್ನು ಕನ್ನಡಕ್ಕೆ ಕರೆಸಿ ಹಾಡಿಸಿದವರು ಕನ್ನಡ ಸಿನಿಮಾ ರಂಗದವರು.

ಅವನನ್ನು ಇನ್ನಷ್ಟು ಬಾರಿ ಕರೆಸಲು ಕಾರಣ ಅವನ ಸ್ವರವನ್ನು ಜನರು ಮೆಚ್ಚಿದ್ದು. ಕನ್ನಡಿಗರು ಸೋನು ನಿಗಮ್‌ಗೆ ಉದಾರತೆಯಿಂದ ಕೊಟ್ಟ ಅವಕಾಶವಲ್ಲ, ಬದಲಿಗೆ ಕನ್ನಡಿಗರ ಅವಶ್ಯಕತೆ ಯಿಂದ ಆತನಿಗೆ ದೊರಕಿದ ಅವಕಾಶಗಳು ಅವು. ಕನ್ನಡಿಗರು ಅವನ ಸ್ವರವನ್ನು ಇಷ್ಟಪಟ್ಟದ್ದು. ಕನ್ನಡ ಸೂಪರ್ ಹಿಟ್ ಹಾಡುಗಳ ಪಟ್ಟಿಯಲ್ಲಿ ಅದೆಷ್ಟೋ ಹಾಡುಗಳನ್ನು ಹಾಡಿರುವುದು ಸೋನು ನಿಗಮ. ಜಯಂತ್ ಕಾಯ್ಕಿಣಿ ಸಾಹಿತ್ಯ, ಸೋನು ನಿಗಮ್ ಸ್ವರದ ಹಾಡು ಎಂದರೆ ಕನ್ನಡಿ ಗರಿಗೆ ಇಷ್ಟ. ಈಗ ಈ ಬಹಿಷ್ಕಾರದಿಂದ ಸಂಗೀತಪ್ರಿಯರಿಗಂತೂ ನಷ್ಟವಾಗಿದೆ.

ಸಾರ್ವಜನಿಕವಾಗಿ ಬಹಿಷ್ಕರಿಸುವುದು ಬೇರೆ- ಒಂದು ಗುಂಪಿನವರು ಅಂಥ ನಿರ್ಧಾರವನ್ನು ತೆಗೆದುಕೊಂಡು ಅದನ್ನು ಸಾರ್ವಜನಿಕರ ಮೇಲೆ ಹೇರುವುದು ಇನ್ನೊಂದು. ಹಾಗಾದರೆ ಆತ ಮಾಡಿದ ಒಂದು ತಪ್ಪನ್ನು ಕ್ಷಮಿಸದಷ್ಟು ಕನ್ನಡಿಗರು ನಿರ್ದಯಿಗಳೇ? ಅದೆಲ್ಲ ಬಿಡಿ- ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಆ ಬಹಿಷ್ಕರಿಸುವ ಹಕ್ಕು ಕೊಟ್ಟ ಕಾನೂನು ಯಾವುದು? ಇಂಥ ನಿರ್ಧಾರವನ್ನು ಅವರು ತೆಗೆದುಕೊಂಡಾಗ ಸಾರ್ವಜನಿಕರು ಹೇಗೆ ಮತ್ತು ಏಕೆ ಒಪ್ಪಬೇಕು? ಅವರಿಗೆ ಆ ಅಧಿಕಾರ, ಹಕ್ಕು, ಕರ್ತವ್ಯ ಎಲ್ಲವನ್ನೂ ಕೊಟ್ಟವರು ಯಾರು? ಪ್ರೀತಿಸಿದ ಕಾರಣಕ್ಕೆ, ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣಕ್ಕೆ ಮೈದಾನದ ಮಧ್ಯ ನಿಲ್ಲಿಸಿ ಕಲ್ಲು ಹೊಡೆದು ಕೊಲ್ಲುವುದು, ಶಿಕ್ಷಿಸುವುದು, ಬಹಿಷ್ಕಾರ ಹಾಕುವುದು ಇವೆಲ್ಲ ಅನಾಗರಿಕ ಅಲೆಮಾರಿ ಸಮಾಜದ ಲಕ್ಷಣಗಳು.

ನಾವು ಮಾಡಿಕೊಂಡ ಸರಕಾರಿ ವ್ಯವಸ್ಥೆಯಲ್ಲಿ ಪ್ರಜೆಗಳದ್ದೇ ಪರಮಾಧಿಕಾರ. ಆದರೆ ಒಬ್ಬ ವ್ಯಕ್ತಿಗೆ ಶಿಕ್ಷಿಸುವ ಅಧಿಕಾರವನ್ನು ಕಾನೂನು ಸಾರ್ವಜನಿಕರಿಗೆ ಕೊಡಲೇಬಾರದು. ಸಭ್ಯ ಸಮಾಜ ಹಾಗಿರ ಬೇಕು. ಇಲ್ಲದಿದ್ದಲ್ಲಿ ಸಾಮೂಹಿಕ ವರ್ತನೆ ಅನ್ಯಾಯಕ್ಕೆ ಎಡೆಮಾಡಿಕೊಡಬಹುದು. ಈಗೀಗ ಹೇಗಾಗಿದೆ ಎಂದರೆ ಯಾವುದೇ ವಿಷಯ ಸಾಮಾಜಿಕ ಜಾಲತಾಣದ ನ್ಯಾಯಾಲಯಕ್ಕೆ ಬರಬೇಕು. ಸಾ.ಜಾ. ಪ್ರಜಾಪ್ರಭುತ್ವದಲ್ಲಿ ಒಂದೋ ಅತಿಯಾಗಿ ಮೆಚ್ಚಬೇಕು, ಇಲ್ಲವೇ ಹಿಡಿದು ಇನ್ನು ಮೇಲೇಳ ದಂತೆ ಚಚ್ಚಬೇಕು.

ಈ ಘಟನೆ ನಡೆದಾದ ಮೇಲೆ ವಿಶ್ವೇಶ್ವರ ಭಟ್ಟರು ಹೀಗೊಂದು ಕಾಮೆಂಟ್ ಅನ್ನು ಸಾ.ಜಾ. ಫೇಸ್‌ ಬುಕ್‌ನಲ್ಲಿ ಬರೆದಿದ್ದರು. “ಕನ್ನಡ ಪುಸ್ತಕಗಳನ್ನು ಕೊಟ್ರೆ, ‘ನನಗೆ ಕನ್ನಡ ಓದಲು ಬರೊಲ್ಲ, ವಾಪಸ್ ತಗೊಳ್ಳಿ’ ಎನ್ನುವ ವಿದ್ಯಾಮಂತ್ರಿ ಒಂದೆಡೆ, ‘ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಇಲ್ಲ, ಹೀಗಾಗಿ ಮುಚ್ಚುತ್ತೇವೆ’ ಎನ್ನುವ ಸರಕಾರ ಇನ್ನೊಂದೆಡೆ.. ಸೋನು ನಿಗಮ್‌ನನ್ನು ಚಚ್ಚಿ ಹಾಕಿ, ಕನ್ನಡ ಉಳಿಸಿದೆವು ಅಂತ ಸಮಾಧಾನ ಪಟ್ಟುಕೊಳ್ಳುವವರು ಮತ್ತೊಂದೆಡೆ. ಎಲ್ಲ ವಿಚಿತ್ರವಾಗಿ ಕಾಣುತ್ತಿದೆ! ಜೈ ಭುವನೇಶ್ವರಿ".