ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ನಳಪಾಕನ ಸಂಚನ್ನು ಗ್ರಹಿಸಿ ಜಾಗೃತಳಾದ ಶಾರದೆ

‘ದುಡುಕಬಾರದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು; ಹೆಣ್ಣಿನ ಜೀವನವು ಮುಳ್ಳಿನ ಬೇಲಿಯ ಮೇಲೆ ಹರಡಿರುವ ಬಟ್ಟೆಯಂತೆ, ಹುಷಾರಾಗಿ ಬಿಡಿಸಿಕೊಳ್ಳಬೇಕು’ ಎಂದುಕೊಳ್ಳುತ್ತಾ ಶಾರದೆಯೂ ಸಣ್ಣಗೆ ನಾಟಕವಾಡತೊಡಗಿದಳು- ‘ಅಣ್ಣಾ, ಪೂಜೆಯ ನಂತರ ಪ್ರಸಾದ ತಗೊಂಡು ಬರ‍್ತಾ ಇದ್ದೆ, ಕತ್ತಲಲ್ಲಿ ಕಾಣದೆ ಕಲ್ಲನ್ನು ಎಡವಿ ಬಿದ್ದುಬಿಟ್ಟೆ. ಪ್ರಸಾದವೆಲ್ಲಾ ನೆಲದ ಮೇಲೆ ಚೆಲ್ಲಿಹೋಯ್ತು, ಒಂದು ಕಾಳನ್ನೂ ತಿನ್ನಲಾಗಲಿಲ್ಲ. ನೋಡಿಲ್ಲಿ, ಎಡವಿದ ಭರಕ್ಕೆ ಕಾಲಿನ ಹೆಬ್ಬೆರಳು ಗಾಯವಾಗಿ ರಕ್ತ ಸುರಿಯುತ್ತಿದೆ. ಬಿದ್ದ ಭರಕ್ಕೆ ಮಂಡಿಯ ಬಳಿ ಬಟ್ಟೆ ಹರಿದುಹೋಯ್ತು’ ಎನ್ನುತ್ತಾ ನಡೆದ ಘಟನೆಯನ್ನು ಮರೆಮಾಚಿ ಬೇರೆಯದೇ ಕಥೆ ಕಟ್ಟಿದಳು.

ನಳಪಾಕನ ಸಂಚನ್ನು ಗ್ರಹಿಸಿ ಜಾಗೃತಳಾದ ಶಾರದೆ

-

ರಸದೌತಣ

naadigru@gmail.com

ಇಷ್ಟೂ ದಿನಗಳವರೆಗೆ ಶಾರದೆಯ ಕಥನಕ್ಕೆ ಕಿವಿಯಾಗಿದ್ದ ಶಿಷ್ಯರಿಗೆ, ಅದು ಆಗಾಗ ತಳೆಯುತ್ತಿದ್ದ ತಿರುವು, ಥಟ್ಟನೆ ಪ್ರವೇಶಿಸುತ್ತಿದ್ದ ಪಾತ್ರಗಳು, ನೇಪಥ್ಯದಲ್ಲಿ ಅವು ಹೊಂದಿರುತ್ತಿದ್ದ ಪ್ರಭಾವ ಇವನ್ನೆಲ್ಲ ಕಂಡು ಬೆರಗಾಗುತ್ತಿತ್ತು, ಕುತೂಹಲವೂ ಹೆಚ್ಚುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಅವರಲ್ಲಿ ಒಂದು ತೆರನಾದ ‘ಭಯದ ಸೆಳಕು’ ಚಿಮ್ಮಿತು. ಅದಕ್ಕೆ ಕಾರಣ, ‘ಶಾರದೆಗೆ ನೀಡಲಾಗಿದ್ದ ಪ್ರಸಾದದ ಉಸಲಿಯಲ್ಲಿ ದುರುಳ ನಳಪಾಕ ಅದೇನೋ ಮದ್ದು ಬೆರೆಸಿಬಿಟ್ಟಿದ್ದ’ ಎಂಬ ಅವಧೂತರ ಉಲ್ಲೇಖ. ‘ಧರ್ಮವನ್ನು ಬೋಧಿಸುವ ಮಠವನ್ನೂ, ಸಹಜೀವನ-ಸಹಭೋಜನದ ದ್ಯೋತಕವೇ ಆಗಿರುವ ವಿದ್ಯಾರ್ಥಿನಿಲಯವನ್ನೂ ಮಡಿಲಲ್ಲೇ ಇಟ್ಟುಕೊಂಡಿರುವ, ಸಮಾಜಸೇವೆ ಯನ್ನೇ ಉಸಿರಾಗಿಸಿಕೊಂಡಿರುವ ಸಂಸ್ಥೆಯಲ್ಲೂ ಇಂಥ ಅಪಸವ್ಯಗಳು ನಡೆಯಲು ಸಾಧ್ಯವೇ? ಹೀಗಾದರೆ ಜನ ಸಾಮಾನ್ಯರು ನಂಬೋದು ಯಾರನ್ನು?..’ ಎಂಬ ಆಲೋಚನೆ ಶಿಷ್ಯರ ಮನದಲ್ಲಿ ಗಿರಕಿ ಹೊಡೆಯುತ್ತಿತ್ತು...

“ಯಾಕೆ ಸಾಧ್ಯವಿಲ್ಲ? ’ಕಾಂಚಾಣ’ ಎಂಬುದು ‘ಕಾರ್ಯಸಿದ್ಧಿ’ಯ ಅಸ್ತ್ರವೇ ಆಗಿಬಿಟ್ಟಾಗ ಅಪಸವ್ಯ ಗಳು ಎಲ್ಲಿ ಬೇಕಾದರೂ ಜರುಗಬಹುದು. ‘ಸರ್ವಸಂಗ ಪರಿತ್ಯಾಗಿಗಳು’ ಎಂದೇ ಕರೆಸಿಕೊಳ್ಳುವ ಮಠಾಧೀಶರಿಂದ ಮೊದಲ್ಗೊಂಡು, ರಾಜಕಾರಣಿಗಳು, ಜನರಕ್ಷಕರು ಹೀಗೆ ಯಾರು ಬೇಕಾದರೂ ಇಂಥ ‘ಅಪಸವ್ಯ’ಕ್ಕೆ ರತ್ನಗಂಬಳಿ ಹಾಸಿ ಒಳಗೆ ಕರೆಯಬಹುದು" ಎಂದುಬಿಟ್ಟರು ಅವಧೂತರು, ಶಿಷ್ಯರ ಮನದಾಳವನ್ನು ಹೊಕ್ಕು, ಅಲ್ಲಿನ ಚಿತ್ತಭಿತ್ತಿಯಲ್ಲಿ ಅಗಷ್ಟೇ ಕೆತ್ತಲ್ಪಟ್ಟಿದ್ದ ಆಲೋಚನೆ ಯನ್ನು ಓದಿದವರಂತೆ...

ಶಿಷ್ಯರು ವಾಸ್ತವ ಪ್ರಪಂಚಕ್ಕೆ ಬಂದರು, ಅವಧೂತರು ಕಥೆಯನ್ನು ಮುಂದುವರಿಸಿದರು...

ಇದನ್ನೂ ಓದಿ: Yagati Raghu Naadig Column: ಜಿಂಕೆಮರಿಯ ಬೇಟೆಗೆ ಬಲೆ ಬೀಸಿದ ಅಡುಗೆಭಟ್ಟ...

“ನಾಯಿಯು ಹಾಗೆ ವಿಲಕ್ಷಣವಾಗಿ ಒದ್ದಾಡಿ ಪ್ರಜ್ಞಾಶೂನ್ಯವಾಗಿ ಬಿದ್ದಿದ್ದನ್ನು ಕಂಡು ಶಾರದೆಗೆ ಗಾಬರಿಯಾಗಿದ್ದು, ನಂತರದಲ್ಲಿ ಅವಳ ಮೈ ಒಂದೇ ಸಮನೆ ಬೆವರತೊಡಗಿದ್ದು ಸಹಜವೇ ಆಗಿತ್ತು. ತಾನು ನೀಡಿದ ಆಹಾರದಿಂದ ಒಂದು ಅಮಾಯಕ ಪ್ರಾಣಿ ಇಂಥ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂತಲ್ಲ ಎಂಬುದು ಅದಕ್ಕೆ ಕಾರಣವಾಗಿತ್ತು; ಅವಳ ಆಲೋಚನೆ ಮುಂದುವರಿಯುತ್ತಾ ಹೋದಂತೆ, ‘ಒಂದೊಮ್ಮೆ ನಾನೂ ಇದನ್ನು ಸೇವಿಸಿ ಬಿಟ್ಟಿದ್ದರೆ, ನನ್ನ ಗತಿಯೂ ಹೀಗೆಯೇ.... ಶಿವ ಶಿವಾ..! ಏನು ನಡೆಯುತ್ತಿದೆ ಇಲ್ಲಿ? ಯಾಕೆ ಹೀಗಾಯಿತು?’ ಎಂದುಕೊಂಡು, ಮಿಕ್ಕ ಸಹಪಾಠಿ ಗಳನ್ನೂ ಒಮ್ಮೆ ನೋಡಿಕೊಂಡು ಬರಲು, ಅವರಿದ್ದ ಕೊಠಡಿಗಳ ಬಳಿ ತೆರಳಿ, ಕಿಟಕಿಯಲ್ಲಿ ಇಣುಕಿದಳು. ಆದರೆ, ಅವರೆಲ್ಲ ಏನೂ ತೊಂದರೆಯಿಲ್ಲದಂತೆ ಪಾಠ ಓದಿಕೊಳ್ಳುತ್ತಲೋ, ಪರಸ್ಪರ ಹರಟುತ್ತಲೋ ಕೂತಿದ್ದರು. ಸಹಪಾಠಿಗಳು ಸುರಕ್ಷಿತವಾಗಿದ್ದುದನ್ನು ಕಂಡು ಶಾರದೆಗೆ ಸಮಾಧಾನ ವಾಗಿದ್ದು ಹೌದಾದರೂ, ಒಂದೊಮ್ಮೆ ತಾನೂ ಉಸಲಿ ತಿಂದಿದ್ದರೆ ನಾಯಿಗಾದ ಪರಿಸ್ಥಿತಿ ತನಗೂ ಒದಗುತ್ತಿತ್ತಲ್ಲವೇ? ಎಂದು ಕಲ್ಪಿಸಿಕೊಂಡು ಹಾಗೆ ವಿಪರೀತ ಬೆವರತೊಡಗಿದಳು. ಜತೆಗೆ ಮನದಲ್ಲಿ- ‘ತಂತಿಯನ್ನು ಮೀಟುವ ಬೆರಳು ಯಾವಾಗಲೂ ‘ಸುಮಧುರ ಸ್ವರ’ವನ್ನೇ ಹೊರಡಿಸುತ್ತದೆ ಎಂಬುದಕ್ಕೆ ಖಾತ್ರಿಯಿಲ್ಲ, ಬೆರಳು ಜಾರಿದರೆ ಅಥವಾ ಬೆರಳ ಹಿಂದಿನ ಮನಸ್ಸು ಜಾರಿದರೆ ‘ಅಸಸ್ವರ’ವೂ ಹೊಮ್ಮಬಹುದಲ್ಲವೇ? ಉಸಲಿಯನ್ನು ಸಿದ್ಧಪಡಿಸಿಕೊಟ್ಟಿದ್ದು ಅಡುಗೆಭಟ್ಟ ನಳಪಾಕ. ನನ್ನ ಪಾಲಿಗೆ ಬಂದಿದ್ದರಲ್ಲಿ ಮಾತ್ರವೇ ಹೀಗೆ ವ್ಯತ್ಯಯವಾಗಿರುವುದು ಆಕಸ್ಮಿಕವಾಗಿ ಆಗಿರುವಂಥದ್ದೋ, ಇಲ್ಲವೇ ಇದರ ಹಿಂದೆ ಏನಾದರೂ ಮಸಲತ್ತು ಇದೆಯೋ ಎಂಬುದನ್ನು ಮೊದಲಿಗೆ ಖಾತ್ರಿ ಮಾಡಿಕೊಳ್ಳಬೇಕು. ಅಲ್ಲಿಯವರೆಗೆ ಈ ವಿಷಯವನ್ನು ಯಾರಲ್ಲೂ ಬಾಯಿ ಬಿಡಬಾರದು. ಹೀಗಾಗಿದ್ದರ ಕುರಿತು ನಾನು ಬಾಯಿಬಿಟ್ಟು ಹೇಳಿದರೂ ಯಾರೂ ನಂಬುವುದಿಲ್ಲ, ಹಾಗೆ ಹೇಳಿ ನಾನು ದಕ್ಕಿಸಿಕೊಳ್ಳಲಿಕ್ಕೂ ಆಗುವುದಿಲ್ಲ. ಏಕೆಂದರೆ, ಇಲ್ಲಿರುವವರೆಲ್ಲರೂ ದೊಡ್ಡವರು, ಪ್ರಭಾವಿಗಳು. ಯಾವುದಕ್ಕೂ ನಾನು ಹುಷಾರಾಗಿರಬೇಕು’ ಎಂದು ಲೆಕ್ಕಾಚಾರ ಹಾಕಿದಳು ಶಾರದೆ..." ಎಂದು ಹೇಳಿ ಅರೆಕ್ಷಣ ನಿಲ್ಲಿಸಿದರು ಅವಧೂತರು.

Screenshot_2 R

ಆಗ ಶಿಷ್ಯರೊಬ್ಬರು, “ಅಷ್ಟಕ್ಕೂ, ನಳಪಾಕ ಹೂಡಿದ್ದ ಕುತಂತ್ರವೇನು ಗುರುಗಳೇ?" ಎಂದು ಪ್ರಶ್ನಿಸಿದರು.

ಅದಕ್ಕೆ ಅವಧೂತರು, “ಉಸಲಿಯನ್ನು ಸೇವಿಸಿದ ಕೆಲವೇ ಕ್ಷಣಕ್ಕೆ ಆ ನಾಯಿ ಪ್ರಜ್ಞೆ ತಪ್ಪಿತು ಎಂದರೆ ನೀವೇ ಊಹಿಸಿಕೊಳ್ಳಿ. ಅದನ್ನು ಸೇವಿಸಿದವರು ಕನಿಷ್ಠಪಕ್ಷ ೨ ತಾಸಾದರೂ ಎಚ್ಚರಗೊಳ್ಳಬಾರದು, ಅಂಥ ಕಟುವಾದ, ಪರಿಣಾಮಕಾರಿಯಾದ ಮದ್ದನ್ನು ನಳಪಾಕ ಅದಕ್ಕೆ ಬೆರೆಸಿಬಿಟ್ಟಿದ್ದ. ಅದನ್ನು ಸೇವಿಸಿದ ಕೆಲ ಕ್ಷಣದಲ್ಲೇ ಶಾರದೆ ಮೈಮೇಲಿನ ಜ್ಞಾನವನ್ನು ಕಳೆದುಕೊಳ್ಳುತ್ತಾಳೆ. ಆಗ ಅವಳನ್ನು ಕಳ್ಳಬೆಕ್ಕಿನ ಕೋಣೆಗೆ ಹೊತ್ತೊಯ್ದು ಬಿಟ್ಟು, ತಾನು ಮತ್ತಷ್ಟು ನೋಟಿನ ಕಂತೆಗಳನ್ನು ಕಿತ್ತುಕೊಳ್ಳ ಬಹುದು. ಒಂದು ಸಲ ಹಸಿಮಾಂಸದ ರುಚಿ ನೋಡಿದ ಕಳ್ಳಬೆಕ್ಕು, ಆ ಪ್ರಸಂಗವನ್ನೇ ಬಳಸಿಕೊಂಡು ಶಾರದೆಯು ತನ್ನ ತೆಕ್ಕೆಯಿಂದ ತಪ್ಪಿಸಿಕೊಳ್ಳದಂತಿರಲು ‘ಬ್ಲ್ಯಾಕ್‌ಮೇಲ್’ ಮಾಡುವುದು ಖಾತ್ರಿ. ಎಷ್ಟೆಂದರೂ ಗತಿಗೆಟ್ಟ ಹುಡುಗಿ ಅವಳು, ಆ ‘ಬ್ಲ್ಯಾಕ್‌ಮೇಲ್’ ಬೆದರಿಕೆಗೆ ಬೆದರಿಯೋ ಇಲ್ಲವೇ ಕಳ್ಳಬೆಕ್ಕು ಎಸೆವ ನೋಟಿನ ಕಂತೆಗಳನ್ನು ಆರಿಸಿಕೊಂಡೋ ಸುಮ್ಮನಿರುತ್ತಾಳೆ. ಕಳ್ಳಬೆಕ್ಕಿನ ಕಾಮಕಾಂಡಕ್ಕೆ ಮತ್ತಷ್ಟು ಅಧ್ಯಾಯಗಳು ಸೇರಿಕೊಳ್ಳುವುದಕ್ಕೆ ತಾನೂ ಸಹಕರಿಸುತ್ತಾ ಹೋಗುತ್ತಾಳೆ. ಆಕೆಯ ಅಪ್ಪ-ಅಮ್ಮನಿಗೂ ಒಂದಷ್ಟು ದುಡ್ಡು ಬಿಸಾಕಿದರೆ, ಅವರೂ ತೆಪ್ಪಗಾಗು ತ್ತಾರೆ. ಈ ಧಾರಾವಾಹಿ ನಡೆಯುತ್ತಿರುವವರೆಗೂ ತಾನೂ ನೋಟಿನ ಕಂತೆಗಳನ್ನು ಪುಷ್ಕಳವಾಗಿ ಜೇಬಿಗೆ ಇಳಿಸಬಹುದು ಎಂಬುದು ನಳಪಾಕನ ಲೆಕ್ಕಾಚಾರವಾಗಿತ್ತು. ಅದೇ ಗ್ರಹಿಕೆಯಲ್ಲೇ ಅವನು, ಶಾರದೆಯನ್ನು ಅವಳ ಕೊಠಡಿಯಿಂದ ಎತ್ತಿ ತಂದು ಕಳ್ಳಬೆಕ್ಕಿನ ಕೋಣೆಗೆ ಬಿಡಲು ಅಡುಗೆಮನೆ ಯಿಂದ ಹೊರಟ. ಆತ ವಿದ್ಯಾರ್ಥಿನಿಲಯದ ಬ್ಲಾಕ್‌ನೆಡೆಗೆ ನಡೆದು ಬರುವಾಗ ಒಣಗಿದ ತರಗೆಲೆಗಳ ಮೇಲೆ ಅವನಿಡುತ್ತಿದ್ದ ಹೆಜ್ಜೆಯ ಸಪ್ಪಳ ಆ ನೀರವ ರಾತ್ರಿಯಲ್ಲಿ ಶಾರದೆಗೆ ಸ್ಪಷ್ಟವಾಗಿ ಕೇಳತೊಡಗಿತು. ಹೆಣ್ಣು ಮಕ್ಕಳಿರುವ ಕೊಠಡಿಗಳ ಕಡೆಗೆ ಗಂಡಸರು ಹಾಗೆಲ್ಲಾ ಹೋಗುವಂತಿರ ಲಿಲ್ಲ, ಆದರೆ ನಳಪಾಕ ತನ್ನ ಕೊಠಡಿಯೆಡೆಗೇ ಬರುತ್ತಿರುವುದನ್ನು ಕಂಡು ಶಾರದೆ ಬೆಚ್ಚಿಬಿದ್ದಳು. ಅವಳ ಆರನೇ ಇಂದ್ರಿಯ ಜಾಗೃತವಾಯಿತು. ಕೆಲ ಕ್ಷಣಕ್ಕೂ ಮುಂಚೆ ಆದ ಆಘಾತಕಾರಿ ಬೆಳವಣಿಗೆಯ ಹಿಂದೆ ಇರಬಹುದಾದ ಸಂಚಿನ ಎಳೆಯನ್ನು ಶಾರದೆ ಗ್ರಹಿಸಿಬಿಟ್ಟಳು. ಪ್ರಜ್ಞೆ ತಪ್ಪಿ ಬಿದ್ದಿದ್ದ ನಾಯಿಯನ್ನು ಒಂದು ಮೂಲೆಗೆ ಎಳೆತಂದು ಹಾಕಿ, ಅದು ಯಾರಿಗೂ ಗೋಚರಿಸದಂತೆ ಅದರ ಮೇಲೊಂದು ದೊಡ್ಡ ಗೋಣಿಚೀಲವನ್ನು ಹೊದಿಸಿದಳು. ನಾಯಿಗೆ ಹಾಕಿದ ನಂತರ ದೊನ್ನೆಯಲ್ಲಿ ಒಂದಿಷ್ಟು ಉಸಲಿ ಹಾಗೇ ಉಳಿದಿತ್ತು, ಥಟ್ಟನೆ ಏನೋ ಹೊಳೆದಂತಾಗಿ ಅದನ್ನೂ ನೆಲದ ಮೇಲೆ ಚೆಲ್ಲಾಡಿದಳು... ನಂತರ ಸ್ವತಃ ಕಾಲಿನ ಹೆಬ್ಬೆಟ್ಟಿಗೆ ಕಲ್ಲಿನಲ್ಲಿ ಜಜ್ಜಿಕೊಂಡು ಸಣ್ಣ ಗಾಯ ಮಾಡಿಕೊಂಡಳು, ಧರಿಸಿದ್ದ ಬಟ್ಟೆಯನ್ನು ಮಂಡಿಯ ಭಾಗದಲ್ಲಿ ಹರಿದುಕೊಂಡಳು. ಇಷ್ಟು ಆಗುವ ಹೊತ್ತಿಗೆ ನಳಪಾಕ ಅವಳ ಕೊಠಡಿಯನ್ನು ಸಮೀಪಿಸಿದ್ದ. ಬಾಗಿಲ ಬಳಿ ಬರುತ್ತಿದ್ದಂತೆಯೇ ಅಲ್ಲಿ ಶಾರದೆ ನಿಂತಿದ್ದು ನೋಡಿ ನಳಪಾಕ ದಿಗ್ಭ್ರಾಂತನಾದ. ‘ಇಷ್ಟು ಹೊತ್ತಿಗಾಗಲೇ ಪ್ರಜ್ಞೆ ತಪ್ಪಿ ಬಿದ್ದಿರುತ್ತಾಳೆ, ಎತ್ತಿಕೊಂಡು ಬರೋದೇ...’ ಎಂಬ ಎಣಿಕೆಯಲ್ಲಿದ್ದ ಆತನಿಗೆ ಶಾರದೆ ಹಾಗೆ ಎಚ್ಚರವಾಗಿರೋದು ಕಂಡು ಹಾಗಾಗಿದ್ದು ಸಹಜವೇ. ಆದರೆ, ಎಷ್ಟೇ ಆದರೂ ಅವನು ಗುಳ್ಳೆನರಿಯಂಥವನು, ತಕ್ಷಣ ಸಾವರಿಸಿಕೊಂಡು, ‘ಏನು ಶಾರದವ್ವಾ? ಓದ್ಕಂಡಿದ್ದು ಆಯ್ತಾ... ನಿದ್ದೆ ಬರಲಿಲ್ವಾ...?’ ಎಂದು ಕೇಳಿದ. ಅವನು ಹಾಗೆ ಮಾತಾಡುವಾಗ ಲಘುವಾಗಿ ತೊದಲುತ್ತಿದ್ದುದನ್ನು ಶಾರದೆ ಫಟ್ಟನೆ ಗ್ರಹಿಸಿಬಿಟ್ಟಳು. ಅವನ ಮುಖದಲ್ಲಿದ್ದುದು ‘ಮಾಲುಸಮೇತ ಸಿಕ್ಕಿಬಿದ್ದ’ ಕಳ್ಳನ ಭಾವ. ಸಂಚಿನ ಮತ್ತೊಂದು ಎಳೆ ಬಿಚ್ಚಿಕೊಂಡಿತು. ‘ದುಡುಕಬಾರದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು; ಹೆಣ್ಣಿನ ಜೀವನವು ಮುಳ್ಳಿನ ಬೇಲಿಯ ಮೇಲೆ ಹರಡಿರುವ ಬಟ್ಟೆಯಂತೆ, ಹುಷಾರಾಗಿ ಬಿಡಿಸಿಕೊಳ್ಳಬೇಕು’ ಎಂದುಕೊಳ್ಳುತ್ತಾ ಶಾರದೆಯೂ ಸಣ್ಣಗೆ ನಾಟಕವಾಡತೊಡಗಿದಳು- ‘ಅಣ್ಣಾ, ಪೂಜೆಯ ನಂತರ ಪ್ರಸಾದ ತಗೊಂಡು ಬರ‍್ತಾ ಇದ್ದೆ, ಕತ್ತಲಲ್ಲಿ ಕಾಣದೆ ಕಲ್ಲನ್ನು ಎಡವಿ ಬಿದ್ದುಬಿಟ್ಟೆ. ಪ್ರಸಾದವೆಲ್ಲಾ ನೆಲದ ಮೇಲೆ ಚೆಲ್ಲಿಹೋಯ್ತು, ಒಂದು ಕಾಳನ್ನೂ ತಿನ್ನಲಾಗಲಿಲ್ಲ. ನೋಡಿಲ್ಲಿ, ಎಡವಿದ ಭರಕ್ಕೆ ಕಾಲಿನ ಹೆಬ್ಬೆರಳು ಗಾಯವಾಗಿ ರಕ್ತ ಸುರಿಯುತ್ತಿದೆ. ಬಿದ್ದ ಭರಕ್ಕೆ ಮಂಡಿಯ ಬಳಿ ಬಟ್ಟೆ ಹರಿದುಹೋಯ್ತು’ ಎನ್ನುತ್ತಾ ನಡೆದ ಘಟನೆಯನ್ನು ಮರೆಮಾಚಿ ಬೇರೆಯದೇ ಕಥೆ ಕಟ್ಟಿದಳು. ತನ್ನ ಉಪಾಯ ಬುಡಮೇಲಾಗಿದ್ದಕ್ಕೆ ನಳಪಾಕನಿಗೆ ಕೊಂಚ ನಿರಾಸೆಯಾದರೂ, ಸದ್ಯ ಇವಳಿಗೆ ತನ್ನ ಮೇಲೆ ಅನುಮಾನ ಬಂದಿಲ್ಲವಲ್ಲ ಎಂಬ ಸಮಾಧಾನ ದಲ್ಲೇ, ‘ಹುಷಾರಾಗಿ ನೋಡ್ಕೊಂಡು ಬರೋದಲ್ವೇನಮ್ಮಾ, ಸರಿ ಸರಿ ಮಲಕ್ಕೋ’ ಎಂದು ನಾಟಕೀಯವಾಗಿ ಹೇಳಿ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಅಡುಗೆಮನೆಗೆ ಮರಳಿದ. ಕೊಠಡಿಗೆ ಬಂದು ಹಾಸಿಗೆಯಲ್ಲಿ ಉರುಳಿಕೊಂಡ ಶಾರದೆ, ಈ ಸಮಸ್ಯೆಗೆ ಮದ್ದು ಅರೆಯವ ಬಗೆ ಹೇಗೆ ಎಂಬುದರ ಕುರಿತು ತೀವ್ರ ಆಲೋಚನೆಯಲ್ಲಿ ತೊಡಗಿ ದಳು" ಎಂದು ಹೇಳಿ ನಿಟ್ಟುಸಿರುಬಿಟ್ಟರು.

(ಮುಂದುವರಿಯಲಿದೆ, ಆದರೆ ಇಲ್ಲಲ್ಲ!)

ನಲ್ಮೆಯ ಓದುಗರೇ,

ಶಾರದೆಯ ಕಥಾನಕ ಇನ್ನೂ ಮುಗಿದಿಲ್ಲ, ಆದರೂ ತಾತ್ಕಾಲಿಕ ಅಂತ್ಯವನ್ನು ಹಾಡಬೇಕಿದೆ. ‘ತನಗೆ ಒದಗಿದ್ದ ಅಪಾಯವನ್ನು ಶಾರದೆ ಹೇಗೆ ನಿವಾರಿಸಿಕೊಂಡಳು? ಕಳ್ಳಬೆಕ್ಕಿನ ಗತಿ ಏನಾಯಿತು? ಸಂತ್ರಸ್ತ ಮಹಿಳೆ ಕಳ್ಳಬೆಕ್ಕಿಗೆ ತನ್ನ ಜಮೀನನ್ನು ಕಳಕೊಂಡಿದ್ದು ಏಕೆ? ಆಕೆಗೂ ಶಾರದೆಗೂ ಸಂಬಂಧವಿದೆಯೇ? ಹಿಂದೊಮ್ಮೆ ಭೇಟಿಯಾಗಲು ಬಂದಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಅವಧೂತ ರಿಂದ ಬೈಸಿಕೊಂಡಿದ್ದು ಏಕೆ? ಮಠದ ಸ್ವಾಮೀಜಿ ವಾರಾಣಸಿಗೆ ತೆರಳಿದರಾ? ತನ್ನಿಂದಾದ ಕರ್ತವ್ಯಲೋಪಕ್ಕೆ ಸಂಸ್ಥೆಯ ಮ್ಯಾನೇಜರ್ ಪ್ರಾಯಶ್ಚಿತ್ತ ಮಾಡಿಕೊಂಡರಾ? ಮುಂತಾದ ಪ್ರಶ್ನೆಗಳು ಮಾತ್ರವಲ್ಲದೆ ಇನ್ನೂ ಅನೇಕ ಗೊಂದಲಗಳು ನಿಮ್ಮನ್ನು ಕಾಡುತ್ತಿರಬಹುದು. ಇವೆಲ್ಲಕ್ಕೂ ಉತ್ತರ ರೂಪದಲ್ಲಿರುವ ಶಾರದೆಯ ಕಥನವು ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ದಯವಿಟ್ಟು ನಿರೀಕ್ಷಿಸಿ...