Kiran Upadhyay Column: ಹಾಗಾದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು
ಭಾರತದಲ್ಲಿ ಹೇರಳವಾಗಿರುವ ತೆಂಗಿನ ಮರ, ಹಲಸಿನ ಮರ, ಪೊಪ್ಪಳೆ ಮರಗಳೊಂದಿಗೆ, ಇತ್ತೀಚೆಗೆ ಚಾಲ್ತಿಯಲ್ಲಿರುವ ಡ್ರ್ಯಾಗನ್ ಫ್ರೂಟ್ ಸೇರಿದಂತೆ, ಒಟ್ಟೂ ಹದಿನೈದು ಮರಗಳ ಮೂಲ ತನ್ನದು ಎಂದು ಹೇಳಿಕೊಳ್ಳುವ ದೇಶಕ್ಕೆ ಭೇಟಿ ಕೊಟ್ಟರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಆ ದೇಶದ ಯಾವುದೇ ಪ್ರಮುಖ ನಗರದ ಫುಟ್ ಪಾತ್ ಮೇಲೆ ಬಿಳಿಯ ಬಣ್ಣದ ಎರಡು ಇಂಚಿನ ಬಿಯಂತಹ ಸಣ್ಣ ಗುರುತು ಕಂಡರೆ, ಅದನ್ನು ಭೂಮಿಯೊಳಗೆ ಇರುವ ಎಲೆಕ್ಟ್ರಿಕ್ ಕೇಬಲ್ ಹಾದುಹೋಗುವ ಜಾಗ ಎಂದು ಗುರುತಿಸಲು ಹಾಕಿದ್ದಾರೆ ಎಂದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
-
ವಿದೇಶವಾಸಿ
ರಸ್ತೆ ಕಿರಿದಾಗಿರಲಿ ಅಥವಾ ರಾಜಮಾರ್ಗದಂತೆ ಅಗಲವೇ ಆಗಿರಲಿ, ಎರಡೂ ಬದಿಯಲ್ಲಿ ನೆಟ್ಟ ಮರಗಳು ಗಗನಮುಖಿಯಾಗಿ ನೇರವಾಗಿ ಬೆಳೆದು, ರಸ್ತೆಯಿಂದ ನಲವತ್ತು ಐವತ್ತು ಅಡಿ ಮೇಲೆ ಹೋದ ನಂತರ ಬಾಲ್ಯ ಸ್ನೇಹಿತರಿಬ್ಬರು ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಹಾಕಿಕೊಂಡು ಹೋಗುವಂತೆ, ರಸ್ತೆಯ ಈ ಕಡೆ ಇರುವ ಮರದ ಟೊಂಗೆಯೊಂದು ಇನ್ನೊಂದು ಕಡೆ ಇರುವ ಮರದ ಟೊಂಗೆಯನ್ನು ಬಳಸಿ ನಿಂತು, ಕೆಳಗೆ ಸಾಗುವ ವಾಹನಗಳಿಗೆ ನೆರಳು ನೀಡುತ್ತಿರುವ ದೃಶ್ಯ ನಿಮಗೆ ಕಂಡರೆ, ನೀವು ವಿಯೆಟ್ನಾಂನ ಆರ್ಥಿಕ ರಾಜಧಾನಿಯಾದ ಹೊ ಚಿ ಮಿ ಸಿಟಿಯಲ್ಲಿದ್ದೀರಿ ಎನ್ನಬಹುದು.
ಪರಸ್ಪರ ನಾಲ್ಕರಿಂದ ಐದು ಅಡಿ ದೂರದಲ್ಲಿ ನಿಂತ, ಒಂದೂವರೆಯಿಂದ ಎರಡೂವರೆ ಅಡಿ ದಪ್ಪದ ಮರಗಳ ರೆಂಬೆ-ಕೊಂಬೆಗಳು ಮಧ್ಯದಲ್ಲಿ ಟಿಸಿಲೊಡೆದು, ಸಿಗ್ನಲ್ ಲೈಟ್‌ಗೆ ಅಡ್ಡವಾಗದೆ, ಬಸ್ಸು-ಲಾರಿಗಳ ಮೇಲ್ಛಾವಣಿಗೆ ಹೊಸೆಯದೇ, ರಸ್ತೆಯಿಂದ ಹದಿನೈದು ಇಪ್ಪತ್ತು ಮೀಟರ್ ಮೇಲೆ ಹೋಗಿ, ಸುಡುವ ಸೂರ್ಯನಿಗೆ ಹಸಿರು ಪರದೆಯಾಗಿ ನಿಂತು, ಕೆಳಗೆ ಕಪ್ಪು ನೆರಳನ್ನು ನೀಡುತ್ತಿದ್ದರೆ, ಆ ದೇಶವನ್ನು ವಿಯೆಟ್ನಾಂ ಎನ್ನಬಹುದು. ರಸ್ತೆ ಬದಿಯಲ್ಲಿ ಬೆಳೆದು ನಿಂತ ಮರದ ಬೇರು ಅಡ್ಡಡ್ಡ ಬೆಳೆದು, ರಸ್ತೆಯನ್ನೂ, ಪಾದಚಾರಿಗಳು ನಡೆಯುವ ಫುಟ್‌ಪಾತ್ ಅನ್ನೂ, ಮರಕ್ಕೆ ಕಟ್ಟಿದ ಕಟ್ಟೆಯನ್ನೂ ಸೀದುಕೊಂಡು ಬರದೇ, ಯಾರ ಕಣ್ಣಿಗೂ ಬೀಳದಂತೆ ಭೂಮಿಯ ಕೆಳಗೆ ಇಳಿದು ಹೋಗುತ್ತಿದೆ ಎಂದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ರಸ್ತೆಯ ಬದಿಯಲ್ಲಿ ನೆಟ್ಟ ಗಿಡವೊಂದು ಗಾಳಿ-ಮಳೆಗೆ ಮುರಿದು ಬೀಳದಂತೆ, ಮರವಾಗಿ ಬೆಳೆದು ತನ್ನ ಬಲದ ಮೇಲೆ ತಾನು ನಿಲ್ಲುವಂತಾಗುವವರೆಗೆ ನಾಲ್ಕೂ ಕಡೆಗಳಿಂದ ಹಿಡಿದಿಟ್ಟುಕೊಳ್ಳುವಂತೆ ಲೋಹದ ನಳಿಕೆ ಅಥವಾ ಮರದ ಬೊಡ್ಡೆಯ ಆಧಾರ ಕಂಡರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ರಸ್ತೆ ಬದಿ ಮಾತ್ರವಲ್ಲ, ಸರಕಾರಿ ಸ್ವಾಧೀನದಲ್ಲಿರುವ ಅಡವಿ, ಪಾರ್ಕ್, ಗಾರ್ಡನ್, ಸರಕಾರಿ ಕಚೇರಿಗಳ ಆವರಣದಲ್ಲಿರುವ ಮರಗಳ ಮೇಲೆ ಸಂಖ್ಯೆ ಕಂಡರೆ, ಆ ಮರದ ಆರೋಗ್ಯ, ಆಯುಷ್ಯ ಇತ್ಯಾದಿಯಾಗಿ ಮರದ ಜಾತಕವೇ ಅಲ್ಲಿಯ ಉಸ್ತುವಾರಿ ವಹಿಸಿಕೊಂಡವರಿಗೆ ತಿಳಿದಿದೆಯೆಂದೂ, ಅಂತಹ ವ್ಯವಸ್ಥೆ ಇರುವ ದೇಶದಲ್ಲಿ ನೀವಿದ್ದೀರಿ ಎಂದರೆ, ನೀವು ವಿಯೆಟ್ನಾಂ ನಲ್ಲಿದ್ದೀರಿ ಎನ್ನಬಹುದು.
ಇದನ್ನೂ ಓದಿ: Kiran Upadhyay Column: ಮುಂದೊಂದು ದಿನ ಮರಳಿಗಾಗಿ ಯುದ್ಧ !
ಭಾರತದಲ್ಲಿ ಹೇರಳವಾಗಿರುವ ತೆಂಗಿನ ಮರ, ಹಲಸಿನ ಮರ, ಪೊಪ್ಪಳೆ ಮರಗಳೊಂದಿಗೆ, ಇತ್ತೀಚೆಗೆ ಚಾಲ್ತಿಯಲ್ಲಿರುವ ಡ್ರ್ಯಾಗನ್ ಫ್ರೂಟ್ ಸೇರಿದಂತೆ, ಒಟ್ಟೂ ಹದಿನೈದು ಮರಗಳ ಮೂಲ ತನ್ನದು ಎಂದು ಹೇಳಿಕೊಳ್ಳುವ ದೇಶಕ್ಕೆ ಭೇಟಿ ಕೊಟ್ಟರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಆ ದೇಶದ ಯಾವುದೇ ಪ್ರಮುಖ ನಗರದ ಫುಟ್ ಪಾತ್ ಮೇಲೆ ಬಿಳಿಯ ಬಣ್ಣದ ಎರಡು ಇಂಚಿನ ಬಿಯಂತಹ ಸಣ್ಣ ಗುರುತು ಕಂಡರೆ, ಅದನ್ನು ಭೂಮಿಯೊಳಗೆ ಇರುವ ಎಲೆಕ್ಟ್ರಿಕ್ ಕೇಬಲ್ ಹಾದುಹೋಗುವ ಜಾಗ ಎಂದು ಗುರುತಿಸಲು ಹಾಕಿದ್ದಾರೆ ಎಂದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಹತ್ತು ವರ್ಷಗಳ ಕಾಲ ಆಂತರಿಕ ಯುದ್ಧದಲ್ಲಿ ಬಳಲಿ, ನಂತರದ ಹತ್ತು ವರ್ಷ ಬಲಿಷ್ಠ ಎಂದು ಕರೆಸಿ ಕೊಳ್ಳುವ ಅಮೆರಿಕದೊಂದಿಗೆ ಸೆಣಸಿ, ಪರಿಣಾಮವಾಗಿ ಅಮೆರಿಕವನ್ನು ಹಿಮ್ಮೆಟ್ಟಿಸಿ, ಯುದ್ಧದಿಂದಾದ ನಷ್ಟದ ಯಾವ ಕುರುಹೂ ಕಾಣದಂತೆ, ತನ್ನ ಸ್ವಂತ ಬಲದಿಂದ ತನ್ನದೇ ಆದ ಸುಂದರ ದೇಶವನ್ನು ಕಟ್ಟಿಕೊಂಡ ದೇಶದಲ್ಲಿ ನೀವು ಇದ್ದೀರಿ ಎಂದು ನಿಮ್ಮ ಟೂರ್ ಗೈಡ್ ಹೇಳಿದರೆ, ನೀವು ಖಂಡಿತವಾಗಿಯೂ ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಅಮೆರಿಕ ವಿಯೆಟ್ನಾಂ ಮೇಲೆ ನಡೆಸಿದ ಬರ್ಬರ ದಾಳಿಯನ್ನು ತೋರಿಸುವ ವಸ್ತುಸಂಗ್ರಹಾಲಯ ದಲ್ಲಿ, ಅಮೆರಿಕದ ದೌರ್ಜನ್ಯ ಕಂಡು ಅಮೆರಿಕದ ಪ್ರಜೆಗಳೇ ಕಣ್ಣೀರು ಹಾಕುವುದು ಕಂಡರೆ, ನೀವು ವಿಯೆಟ್ನಾಮ್ ದೇಶದ ದಕ್ಷಿಣದಲ್ಲಿರುವ ಹೊ ಚಿ ಮಿ ಸಿಟಿಯಲ್ಲಿರುವ War Remnants Museum’ ನಲ್ಲಿದ್ದೀರಿ ಎನ್ನಬಹುದು.
ವಿಮಾನ ನಿಲ್ದಾಣದಲ್ಲಿ ಇಳಿದು, ಭಾರತದ ಒಂದು ರೂಪಾಯಿಗೆ ಇನ್ನೂರ ಎಪ್ಪತ್ತು ಅಥವಾ ಭಾರತದ ಮೂವತ್ತೇಳು ಸಾವಿರ ರೂಪಾಯಿಗೆ ಅಲ್ಲಿಯ ಒಂದು ಕೋಟಿಗೂ ಹೆಚ್ಚಿನ ಮೊತ್ತ ಸಿಕ್ಕರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ವಿಮಾನ ನಿಲ್ದಾಣದಿಂದ ಮಾತ್ರವಲ್ಲ, ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲು ಭಾರತದ ಓಲಾ, ಊಬರ್‌ನಂತೆ ಅಲ್ಲಿಯ ಗ್ರ್ಯಾಬ್ ಬುಕ್ ಮಾಡಿದರೆ, ಬುಕಿಂಗ್ ಕ್ಯಾನ್ಸಲ್ ಮಾಡದೇ, ನೀವು ಹೋಗಬೇಕಾಗಿದ್ದ ಸ್ಥಳ ಒಂದು ಕಿಲೋ ಮೀಟರ್‌ಗಿಂತ ಕಮ್ಮಿ ಇದ್ದು, ಗ್ರ್ಯಾಬ್ ಡ್ರೈವರ್ ಮೂರು ಕಿಲೋಮೀಟರ್ ದೂರ ಇದ್ದರೂ ಬಂದು (ಮೀಟರ್ ಮೇಲೆ ಅಷ್ಟು-ಇಷ್ಟು ಎಂದು ಕೇಳದೆ) ನಿಮ್ಮ ಸೇವೆಗೆ ಬಂದರೆ ನೀವು ವಿಯೆಟ್ನಾಂ ನಲ್ಲಿದ್ದೀರಿ ಎನ್ನಬಹುದು.
ನೀವು ಕ್ಯಾಬ್ ಬುಕ್ ಮಾಡಿ, ಡ್ರೈವರ್ ನೀವು ಹೇಳಿದ ಸ್ಥಳಕ್ಕೆ ಬಂದು ನಿಂತು ಐದು ನಿಮಿಷ ಕಾದರೂ ನೀವು ಅಲ್ಲಿ ಹೋಗದಿದ್ದಾಗ ಯಾವ ಮುಲಾಜಿಲ್ಲದೇ ನಿಮ್ಮ ಬುಕಿಂಗ್ ಆತನೇ ಕ್ಯಾನ್ಸಲ್ ಮಾಡಿ ಹೊರಟು ಹೋದರೂ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಒಂದು ಕಡೆಯಿಂದ ಇನ್ನೊಂದು ಕಡೆ ನೀವು ಕ್ಯಾಬ್‌ನಲ್ಲಿ ಹೋದ ನಂತರ, ನಿಮ್ಮ ಬಳಿ ಕೊಡಲು ಒಂದು ಮೊತ್ತದ ಮೇಲಿನ ಚಿಲ್ಲರೆ ಇಲ್ಲದಿದ್ದರೆ, ಅಥವಾ ಸ್ವಲ್ಪ ಮೊತ್ತ ಕಡಿಮೆ ಬಿದ್ದರೆ, ‘ಇದ್ದಷ್ಟು ಕೊಡಿ’ ಎಂದು ಸ್ವೀಕರಿಸಿದ ಡ್ರೈವರ್ ನಗುತ್ತ ಹೊರಟು ಹೋದರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಒಂದು ವೇಳೆ ಪ್ರಮಾದವಶಾತ್ ನೀವು ಹೋಗಬೇಕಾಗಿದ್ದ ಜಾಗದ ಬದಲು ಇನ್ನೆ ಹೋಗಿ, ಅದರಿಂದಾಗಿ ನಿಮ್ಮ ಸಮಯ ವ್ಯರ್ಥವಾಯಿತು ಎಂದು ನಿಮ್ಮನ್ನು ಸರಿಯಾದ ಸ್ಥಾನಕ್ಕೆ ತಲುಪಿಸಿ, ಪ್ರಾಯಶ್ಚಿತ್ತ ಎಂಬಂತೆ ಚಾಲಕ ನಿಮ್ಮಿಂದ ಹಣವನ್ನೇ ಪಡೆಯದೆ ಹೋದ ಎಂದರೆ ಆಗಲೂ ನೀವು ವಿಯೆಟ್ನಾಂ ನಲ್ಲಿದ್ದೀರಿ ಎನ್ನಬಹುದು. ಬಾಡಿಗೆ ವಾಹನ ನಡೆಸುವವರು ಬರೀ ಕಾರು ಮಾತ್ರವಲ್ಲ, ಮೋಟರ್ ಬೈಕ್ ಕೂಡ ಬಾಡಿಗೆಗೆ ನಡೆಸುತ್ತಿದ್ದಾರೆ, ಹಾಗೆ ನಡೆಸುವವರಲ್ಲಿ ಬರೀ ಗಂಡಸರು ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೂ ನಡೆಸುತ್ತಿದ್ದಾರೆ, ಅಂತಹ ವಾಹನಗಳು ಮಹಿಳೆಯರಿಗೆ ಮಾತ್ರ ಸೀಮಿತವಲ್ಲ ಎನ್ನುವಂತಿದ್ದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಮಹಾನಗರಗಳ ಪ್ರಮುಖ ರಸ್ತೆಯಲ್ಲಿ ಒಂದು ನಿಮಿಷದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೋಟರ್ ಬೈಕ್ ಕಂಡರೆ, ಅವರೆಲ್ಲರೂ ನಿಯಮವನ್ನು ಪಾಲಿಸುತ್ತ ಬೈಕ್ ಓಡಿಸುತ್ತಿದ್ದರೆ, ಸಿಗ್ನಲ್ ನಲ್ಲಿ ಪಾದಚಾರಿಗಳು ದಾಟಲು ಇರುವ ಝೀಬ್ರಾ ಕ್ರಾಸಿಂಗ್‌ನಿಂದ ಕೆಲವು ಅಡಿ ದೂರದ ಬೈಕ್ ನಿಲ್ಲಿಸಿಕೊಂಡಿ ದ್ದರೆ, ಲೇನ್ ಬಿಟ್ಟು ಹೊರಗೆ ಬರದೇ ಇದ್ದರೆ, ಒಂದೇ ರಸ್ತೆಯಲ್ಲಿ ಬಸ್-ಟ್ರಕ್‌ಗೆ ಒಂದು, ಕಾರುಗಳಿಗಾಗಿ ಒಂದು, ಮೋಟರ್ ಬೈಕ್‌ಗೆ ಒಂದು, ಹೀಗೆ ಬೇರೆ ಲೇನ್‌ಗಳಿದ್ದು, ಒಂದರಲ್ಲಿ ಸಾಕಷ್ಟು ವಾಹನಗಳಿದ್ದು, ಪಕ್ಕದಲ್ಲಿ ಖಾಲಿ ಇದ್ದರೂ, ಲೇನ್ ಬಿಡದೆ, ರಸ್ತೆಯ ಮೇಲಿನ ಬಿಳಿಯ ಬಣ್ಣದ ರೇಖೆಯನ್ನು ಲಕ್ಷ ಣ ರೇಖೆ ಎಂದು ತಿಳಿದು ನಡೆಯುವವರನ್ನು ಕಂಡರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಹತ್ತು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಶೇಕಡಾ ತೊಂಬತ್ತಕ್ಕೂ ಹೆಚ್ಚು ಮನೆಗಳಲ್ಲಿ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನವಿದ್ದು, ಅದರಲ್ಲಿ ಇಪ್ಪತ್ತೈದು ಲಕ್ಷದಷ್ಟು ಕಾರುಗಳೂ ಮೂರೂ ವರೆ ಕೋಟಿಗೂ ಹೆಚ್ಚು ಮೋಟರ್ ಬೈಕ್‌ಗಳೂ ಇದ್ದು, ಕಳೆದ ಹತ್ತು ವರ್ಷದಲ್ಲಿ ಪ್ರತಿ ವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಮಾರಾಟವಾಗುತ್ತಿರುವ ಜಾಗದಲ್ಲಿ ನೀವು ಇದ್ದೀರಿ ಎಂದರೆ ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಅಷ್ಟೊಂದು ಟ್ರಾಫಿಕ್ ಇದ್ದರೂ ರಸ್ತೆಯಲ್ಲಿ ನಿಮಗೆ ಪೊಲೀಸ್ ವಾಹನಗಳಾಗಲಿ, ಪೊಲೀಸ್ ಸಿಬ್ಬಂದಿಯಾಗಲಿ ಕಾಣದಿದ್ದರೆ, ಆದರೂ ದ್ವಿಚಕ್ರ ವಾಹನ ನಡೆಸುವವರು ‘ಗಾಳಿ ತಾಗುವುದಿಲ್ಲ’, ‘ಸೆಖೆಯಾಗುತ್ತದೆ’, ‘ತಲೆ ಬೆವರುತ್ತದೆ’, ‘ಗುಟ್ಕಾ ಉಗುಳಲು ಆಗುವುದಿಲ್ಲ’, ಇತ್ಯಾದಿ ಸಬೂಬು ಹೇಳದೇ, ಪ್ರತಿಯೊಬ್ಬರ ತಲೆಯ ಮೇಲೂ ಹೆಲ್ಮೆಟ್ ಕಂಡರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಮಳೆ ಬಂದಾಗ ಮನುಷ್ಯನೊಂದಿಗೆ ಮೋಟರ್ ಬೈಕ್‌ಗೂ ಸೇರಿ ರೈನ್‌ಕೋಟ್ ತೊಡಿಸಿ, ನಡೆಸುವವರಾಗಲಿ, ಮೋಟರ್ ಬೈಕ್ ಆಗಲೀ ಒದ್ದೆಯಾಗದಂತೆ ತಮ್ಮ ಸ್ಥಳ ಸೇರಿ ಕೊಳ್ಳುವುದನ್ನು ಕಂಡರೆ ನೀವು ವಿಯೆಟ್ನಾಂ ನಲ್ಲಿದ್ದೀರಿ ಎನ್ನಬಹುದು.
ಕಟ್ಟಡ ನಿರ್ಮಾಣದ ಗಾವಡಿ ಕೆಲಸ ಮಾಡುವವರಲ್ಲಿ, ಮೇಸಿ ಕೆಲಸದಲ್ಲಿ, ಯಂತ್ರೋಪಕರಣ ಗಳನ್ನು ರಿಪೇರಿ ಮಾಡುವವರಲ್ಲಿ, ರಸ್ತೆ ರಿಪೇರಿ ನಡೆಯುವಲ್ಲಿ, ಪ್ಲಂಬಿಂಗ್ ಕೆಲಸ ಮಾಡುವವರಲ್ಲಿ, ಅಂಗಡಿಯ ವ್ಯಾಪಾರದಲ್ಲಿ ಸೀಯರು ಪುರುಷರಿಗೆ ಸಮಾನವಾಗಿ ಕಂಡರೆ, ನೀವು ವಿಯೆಟ್ನಾಂ ನಲ್ಲಿದ್ದೀರಿ ಎನ್ನಬಹುದು.
ತೊಗಲು ಗೊಂಬೆಯಾಟವನ್ನು ನೀರಿನ ಕೊಳದೊಳಗೆ ಮಾಡಿ ತೋರಿಸುವ, ಅದಕ್ಕಾಗಿ ಒಂದು ರಂಗಮಂಟಪವನ್ನೇ ಸಿದ್ಧಪಡಿಸಿದ ಜಾಗದಲ್ಲಿ ಕುಳಿತು ಪ್ರದರ್ಶನ ನೋಡುತ್ತಿದ್ದೀರಿ ಎಂದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಒಂದು ದ್ವೀಪ ಹಾಗೂ ಒಂದು ಗುಡ್ಡವನ್ನು ಪ್ರವಾಸೋ ದ್ಯಮಕ್ಕೆ ಬೇಕಾಗಿ, ಆಧುನಿಕವಾಗಿ ಸಿದ್ಧಗೊಳಿಸಿ, ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳು ವಂತೆ ನಿರ್ಮಿಸಿದ ಜಾಗಕ್ಕೆ ಹೋದರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಅಂತಹ ಜಾಗದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನವೂ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ, ಸಾಹಸಭರಿತ ಮನರಂಜನೆಯ ಕಾರ್ಯಕ್ರಮಗಳನ್ನೂ ಕಾಣುತ್ತೀರಿ ಎಂದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ಆ ದೇಶದ ತಿಂಡಿ-ತಿನಿಸುಗಳ ಜತೆಗೆ, ವಿಶ್ವದ ಎಲ್ಲ ಪ್ರಮುಖ ಊಟ-ತಿಂಡಿಗಳೂ, ಭಾರತೀಯ ಆಹಾರ ಉಣಬಡಿಸುವ ಹೋಟೆಲ್‌ಗಳೂ ಸಾಕಷ್ಟು ಕಂಡರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ರಾತ್ರಿಯಾಗುತ್ತಿದ್ದಂತೆ ಬೀದಿ ಬದಿಯಲ್ಲಿರುವ ಸಣ್ಣ ಸಣ್ಣ ಮನೆಗಳು ಮುಂದೆ ಎರಡೋ-ಮೂರೋ ಟೇಬಲ, ಕುರ್ಚಿ ಹಾಕಿ ಸಣ್ಣ ಪ್ರಮಾಣದ ಹೋಟೆಲ್ ಉದ್ಯಮ ನಡೆಸಿ, ತಿಂಡಿ-ತಿನಿಸು-ಪಾನೀಯಗಳನ್ನು ಕೊಟ್ಟು, ಪುಟ್ಟ ವ್ಯಾಪಾರ ಮಾಡಿ, ಬೆಳಗಾಗುವುದರೊಳಗೆ ಅದರ ಕುರುಹೂ ಸಿಗದಂತೆ ಎಲ್ಲವನ್ನೂ ಸ್ವಚ್ಛಗೊಳಿಸಿದ್ದನ್ನು ಕಂಡರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು.
ವಿಶ್ವದಾದ್ಯಂತ ಜನಪ್ರಿಯವೂ, ಅನಿವಾರ್ಯವೂ ಆದ ಇಂಗ್ಲಿಷ್ ಭಾಷೆ ಬರದಿದ್ದರೂ, ತಮಗೆ ಸಂಬಂಧ ವಿಲ್ಲ, ಅವಶ್ಯಕತೆಯೂ ಇಲ್ಲ ಎಂಬಂತೆ ಕೈ ತಿರುಗಿಸಿ, ತಲೆ ಕೊಡವಿಕೊಂಡು ಹೋಗದೇ, ಗೂಗಲ್ ಟ್ರಾನ್ಸ್‌ಲೇಟರ್ ಮುಖಾಂತರ ನಿಮ್ಮೊಂದಿಗೆ ಸಂಹವನ ನಡೆಸುವ ಜನರನ್ನು ನೋಡಿದರೆ ನೀವು ವಿಯೆಟ್ನಾಂ ನಲ್ಲಿದ್ದೀರಿ ಎನ್ನಬಹುದು.
ತಮ್ಮ ಕೆಲಸದಲ್ಲಿ ಬದ್ಧತೆ, ಪ್ರಾಮಾಣಿಕತೆ, ಶಿಸ್ತನ್ನು ಪಾಲಿಸಿಕೊಂಡು, ಜತೆಗೆ ವಿಧೇಯತೆಯನ್ನೂ ಮೈಗೂಡಿಸಿಕೊಂಡಿರುವ ಜನರು ನಿಮಗೆ ಸಿಕ್ಕಿದರೆ, ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು. ಮೊದಲ ಭೇಟಿಯಲ್ಲೇ Love at First Sight ಆಗಿ, ನಂತರ ಮತ್ತೆ ಮತ್ತೆ ನಿಮ್ಮ ಮನಸ್ಸು ಆ ದೇಶಕ್ಕೆ ಹೋಗಲು ಹೇಳುತ್ತಿದೆ, ಮನಸ್ಸಿನ ಮಾತು ಕೇಳಿ ನೀವು ಹೋಗುತ್ತಿದ್ದೀರಿ ಎಂದರೆ ಅದು ವಿಯೆಟ್ನಾಂಗೆ ಎನ್ನಬಹುದು.
ಹಾಗೆ ಹೋಗಿ ಬಂದ ನಂತರ, ಅದರ ಬಗ್ಗೆ ಒಂದೆರಡು ಸಾಲು ಗೀಚುವುದು, ಲೇಖನ ಬರೆಯುವುದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಳ್ಳುವುದು, ಇತ್ಯಾದಿಗಳನ್ನು ಮಾಡಿದರೆ, ಖಂಡಿತ ವಾಗಿಯೂ ನೀವು ವಿಯೆಟ್ನಾಂಗೆ ಸಾಕಷ್ಟು ಸಲ ಭೇಟಿ ಕೊಟ್ಟಿದ್ದೀರಿ, ಆ ದೇಶವನ್ನು ಇಷ್ಟಪಟ್ಟಿದ್ದೀರಿ ಎನ್ನಬಹುದು!