ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಪರಿಸರ ರಕ್ಷಿಸಲು ಇಂಥ ಕೆಲಸ ಮಾಡಬೇಕಾಗಿದೆ !

ಮುಂಗಾರಿನಲ್ಲಿ ಬಿತ್ತಿದ ಮತ್ತು ನಾಟಿ ಮಾಡಿದ ಬೆಳೆಯು, ಸಮಪ್ರಮಾಣದಲ್ಲಿ ಬೆಳೆದಿಲ್ಲ, ಫಸಲು ಸಹ ಬಹಳ ಕಡಿಮೆಯಾಗಿದೆ ಎಂಬ ವರದಿಗಳು ವ್ಯಾಪಕವಾಗಿದೆ. ಹಲವು ಧಾನ್ಯಗಳ ಬೆಳೆಯೇ ಕುಂಠಿತವಾಗಿ, ಮುಂದಿನ ದಿನಗಳಲ್ಲಿ ಹೆಸರು, ಉದ್ದು, ಬೆಳ್ಳುಳ್ಳಿ ಮೊದಲಾದ ಕೃಷಿ ಉತ್ಪನ್ನಗಳ ಬೆಲೆ ವಿಪರೀತವಾಗಿ ಏರಿಕೆಯಾಗುತ್ತದೆ ಎಂದು ಈಗಾಗಲೇ ಭವಿಷ್ಯ ನುಡಿಯಲಾಗಿದೆ.

ಪರಿಸರ ರಕ್ಷಿಸಲು ಇಂಥ ಕೆಲಸ ಮಾಡಬೇಕಾಗಿದೆ !

-

ಶಶಾಂಕಣ

ಮತ್ತೊಂದು ದೀಪಾವಳಿ ಬಂದಿದೆ; ಪ್ರತಿ ವರ್ಷ ದೀಪಾವಳಿ ಬಂತು ಎಂದರೆ, ಅದು ರೈತರಿಗೆ ಖಷಿ ತರುವ ದಿನಗಳು; ಹೊಲ ಗದ್ದೆಗಳಲ್ಲಿ ಬೆಳೆದ ಫಸಲು ಕೈಗೆ ಬರುವ ಸಮಯ; ಮುಂದಿನ ಕೆಲವು ತಿಂಗಳುಗಳ ತನಕ ಆಹಾರ ಧಾನ್ಯ ಮತ್ತು ಇತರ ಕೃಷಿ ಉತ್ಪನ್ನಗಳು ಸಮೃದ್ಧವಾಗಿ ತಮ್ಮ ಬಳಿ ಇರುತ್ತದೆ ಎಂದು ತಿಳಿಯುವ ರೈತರು, ನೆಮ್ಮದಿಯಿಂದ, ಸಂಭ್ರಮದಿಂದಲೇ ದೀಪಾವಳಿಯನ್ನು ಆಚರಿಸುವ ಋತು ಇದು. ಆದರೆ, ಈ ವರ್ಷ, ಪರಿಸರದ ವೈಪರೀತ್ಯದಿಂದ ಮತ್ತು ಎಲ್ ನಿನೋ ಎಂಬ ವಾತಾವರಣ ಪ್ರಕೋಪದಿಂದಾಗಿ, ನಮ್ಮ ನಾಡಿನ ಬಹುಪಾಲು ಭಾಗದ ಕೃಷಿ ನಲುಗಿದೆ.

ಮುಂಗಾರಿನಲ್ಲಿ ಬಿತ್ತಿದ ಮತ್ತು ನಾಟಿ ಮಾಡಿದ ಬೆಳೆಯು, ಸಮಪ್ರಮಾಣದಲ್ಲಿ ಬೆಳೆದಿಲ್ಲ, ಫಸಲು ಸಹ ಬಹಳ ಕಡಿಮೆಯಾಗಿದೆ ಎಂಬ ವರದಿಗಳು ವ್ಯಾಪಕವಾಗಿದೆ. ಹಲವು ಧಾನ್ಯಗಳ ಬೆಳೆಯೇ ಕುಂಠಿತವಾಗಿ, ಮುಂದಿನ ದಿನಗಳಲ್ಲಿ ಹೆಸರು, ಉದ್ದು, ಬೆಳ್ಳುಳ್ಳಿ ಮೊದಲಾದ ಕೃಷಿ ಉತ್ಪನ್ನಗಳ ಬೆಲೆ ವಿಪರೀತವಾಗಿ ಏರಿಕೆಯಾಗುತ್ತದೆ ಎಂದು ಈಗಾಗಲೇ ಭವಿಷ್ಯ ನುಡಿಯಲಾಗಿದೆ.

ಅಷ್ಟೇಕೆ, ಬಹುಪಾಲು ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಲಭ್ಯತೆಯೂ ಕುಂಠಿತವಾದೀತು ಮತ್ತು ಅಕ್ಕಿಯ ಬೆಲೆ ಏರಿಕೆಯಾದೀತು ಎಂಬ ಕಳವಳ ಈಗಾಗಲೇ ವ್ಯಕ್ತವಾಗಿದೆ. ಇವೆಲ್ಲಕ್ಕೂ ಮುಖ್ಯ ಕಾರಣ, ಮಳೆಯ ಕೊರತೆ, ಹವಾಮಾನ ವೈಪರೀತ್ಯ ಮತ್ತು ಪರಿಸರದಲ್ಲಾದ ಏರುಪೇರು. ಮಳೆ ಸಕಾಲ ದಲ್ಲಿ ಆಗಲು ನಮ್ಮ ಪರಿಸರ, ಕಾಡು ಆರೋಗ್ಯವಾಗಿರಬೇಕು ಎಂಬ ಪ್ರಾಥಮಿಕ ಸತ್ಯ ಎಲ್ಲರಿಗೂ ತಿಳಿದಿರುವಂಥದ್ದೇ.

ಇದನ್ನೂ ಓದಿ: Shashidhara Halady Column: ನಿಮ್ಮೂರಲ್ಲೂ ಇವೆಯೇ ದೆವ್ವದ ಕಥೆಗಳು ?

ಕಾಡಿದ್ದರೆ ನಾಡು, ಕಾಡಿದ್ದರೆ ಮಳೆ, ಮಳೆ ಇದ್ದರೆ ಬೆಳೆ ಎಂಬ ಅರ್ಥ ಬರುವ ಹಲವು ನುಡಿಗಟ್ಟು ಗಳನ್ನು ಸ್ವತಃ ಸರಕಾರದ ಇಲಾಖೆಗಳೇ ಎಲ್ಲೆಡೆ ಆಗಾಗ ಪ್ರಚುರಪಡಿಸಿದ್ದಾವೆ. ಅಂದರೆ, ನಮ್ಮಲ್ಲಿ ಇರುವ ಕಾಡನ್ನು ರಕ್ಷಿಸಿಕೊಳ್ಳಬೇಕು, ಹಾಗಾದಾಗ ಮಾತ್ರ ಸಕಾಲಕ್ಕೆ ಮಳೆಯಾಗುತ್ತದೆ ಎಂಬ ಅರ್ಥ; ಆ ರೀತಿ ಸೂಕ್ತ ಪ್ರಮಾಣದಲ್ಲಿ ಮಳೆಯಾದಾಗ, ಬೆಳೆ ಸಮೃದ್ಧವಾಗಿರುತ್ತದೆ. ಆದರೆ ಈ ವರ್ಷ ಮಳೆ ಕೊರತೆಯಾಗಿದೆ; ಅದರಿಂದಾಗಿ, -ಸಲಿನ ಪ್ರಮಾಣ ತೀವ್ರವಾಗಿ ಕುಂಠಿತವಾಗಿದೆ.

ನಮ್ಮಲ್ಲಿ ಈ ವರ್ಷದ ಮಟ್ಟಿಗೆ ಇನ್ನೊಂದು ವೈಪರೀತ್ಯವಿದೆ; ಅದೇ ಎಲ್ ನಿನೋ ಪರಿಣಾಮ. ಇದರಿಂದಾಗಿ ಮಳೆ ಮಾರುತಗಳ ವೈಪರೀತ್ಯವಾಗಿದೆ, ಮುಂಬರುವ ದಿನಗಳಲ್ಲಿ ಇನ್ನೂ ತೀವ್ರವಾಗಿ ಆಗಲಿದೆ ಎಂದು ಹಲವು ತಜ್ಞರು, ಇಲಾಖೆಗಳು ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ಯೋಚಿಸುವು ದಾದರೆ, ನಮ್ಮ ಪರಿಸರವು ಆರೋಗ್ಯಕರವಾಗಿದ್ದ ಪಕ್ಷದಲ್ಲಿ, ಎಲ್ ನಿನೋದಂತಹ ವೈಪರೀತ್ಯದ ದುಷ್ಪರಿಣಾಮ ಗಳ ತೀವ್ರತೆಯು ಕಡಿಮೆಯಾಗಬಲ್ಲದು.

ಒಂದು ದೃಷ್ಟಾಂತ ನೀಡುವುದಾದರೆ, ಕಾಡನ್ನು ಸುಸ್ಥಿತಿಯಲ್ಲಿಟ್ಟುಕೊಂಡಿದ್ದರೆ, ಅಂತರ್ಜಲವು ಮೇಲ್ಮಟ್ಟದಲ್ಲಿರುತ್ತದೆ; ಹವಾಮಾನವೂ ಬೆಳೆಗಳಿಗೆ ಸೂಕ್ತವಾಗಿರುತ್ತದೆ; ಹಾಗಿದ್ದಾಗ, ಎಲ್ ನಿನೋ ಪರಿಣಾಮವು ತೀವ್ರವಾಗಿರುವುದಿಲ್ಲ, ಅದರ ತೀವ್ರತೆಯನ್ನು ಸುಸ್ಥಿತಿಯಲ್ಲಿರುವ ಕಾಡು, ಹುಲ್ಲುಗಾವಲು, ನದಿಗಳು ಕಡಿಮೆ ಮಾಡುತ್ತವೆ. ಅಷ್ಟರ ಮಟ್ಟಿಗೆ ಕೃಷಿಗೆ ಕಂಟಕವಾಗುವುದಿಲ್ಲ. ಆದರೆ, ಈಗೇನಾಗುತ್ತಿದೆ? ಕಳೆದ ಹಲವು ದಶಕಗಳಿಂದ ಕಾಡನ್ನು ರಕ್ಷಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ, ನಿಜ; ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಸರಕಾರದ ಇಲಾಖೆಗಳೇ ಪ್ರಚಾರ ಮಾಡಿವೆ; ಅದು ನಿಜವೂ ಹೌದು.

71 o

ಜನಸಾಮಾನ್ಯರೆಲ್ಲರೂ ಪರಿಸರ ರಕ್ಷಣೆಗೆ ಟೊಂಕಕಟ್ಟಬೇಕು ಎಂಬ ಅಭಿಪ್ರಾಯವು ಎಲ್ಲಾ ಇಲಾಖೆ ಗಳಲ್ಲಿ, ವಲಯಗಳಲ್ಲಿ ಇದೆ; ಇದು ಅಧಿಕೃತ ಅಭಿಪ್ರಾಯ ಎಂದೇ ಹೇಳಬಹುದು. ವಿಜ್ಞಾನಿಗಳು, ಚಿಂತಕರು, ಪರಿಸರ ತಜ್ಞರು, ಕೃಷಿ ತಜ್ಞರು ಎಲ್ಲರೂ ಕಾಡನ್ನು ರಕ್ಷಿಸಬೇಕು, ಕುರುಚಲು ಕಾಡನ್ನು ಸಹ ರಕ್ಷಿಸಬೇಕು, ನಮ್ಮ ನದಿಗಳನ್ನು ರಕ್ಷಿಸಬೇಕು, ನದಿ ಮೂಲಗಳನ್ನು ರಕ್ಷಿಸಬೇಕು ಎಂದು ಪದೇ ಪದೆ ಹೇಳಿದ್ದಾರೆ, ಹೇಳುತ್ತಲೇ ಇದ್ದಾರೆ. ಆದರೆ ಕಾಡಿನ ನಾಶ, ಮರಗಳ ಅನವಶ್ಯಕ ಹರಣ, ಹುಲ್ಲುಗಾವಲುಗಳ ನಾಶ ನಿರಂತರವಾಗಿ ನಡೆದೇ ಇದೆ. ವಿಪರ್ಯಾಸವೆಂದರೆ, ಈ ಪರಿಸರ ನಾಶವು, ಈಚಿನ ಒಂದೆರಡು ದಶಕಗಳಲ್ಲಿ ಹೆಚ್ಚು ವೇಗವಾಗಿ ನಡೆದಿದೆ!

ಅಂದರೆ, ಪರಿಸರ ರಕ್ಷಿಸಿ ಎಂಬ ಕೂಗು ದೊಡ್ಡದಾಗಿ ಒಂದೆಡೆ ಕೇಳಿಬರುತ್ತಿದ್ದರೂ, ಇನ್ನೊಂದೆಡೆ ಪರಿಸರ ನಾಶ ಮತ್ತು ಕಾಡಿನ ನಾಶ ಇನ್ನಷ್ಟು ವೇಗವಾಗಿ ನಡೆದಿದೆ. ಇದೊಂದು ಪುಟ್ಟ ದುರಂತವೇ ಅಲ್ಲವೇ? ತಜ್ಞರು, ಚಿಂತಕರು, ಸರಕಾರದ ಇಲಾಖೆಗಳು ಪರಿಸರ ರಕ್ಷಿಸಿ ಎಂದು ಹೇಳುತ್ತಲೇ ಇರುವಾಗಲೇ, ಪರಿಸರ ನಾಶದ ವೇಗವು ಅಽಕವಾಗಿರುವುದು ಏನನ್ನು ಸೂಚಿಸುತ್ತದೆ? ಪರಿಸರ ರಕ್ಷಿಸಿ ಎಂಬ ಕೂಗು ಕೇವಲ ಢಾಂಬಿಕ ಆಚರಣೆ ಮಾತ್ರ, ನಿಜವಾದ ಆಚರಣೆ ಅದಕ್ಕೆ ವ್ಯತಿರಿಕ್ತ ಎಂದೇ ಅರ್ಥವಲ್ಲವೆ? ಪರಿಸರ ರಕ್ಷಣೆಯ ಕಾಳಜಿಯು ಒಂದು ರೀತಿಯ ವ್ಯರ್ಥ ರೋದನವಾಗು ತ್ತಿದೆಯೇ? ಇದೇ ಹಿನ್ನೆಲೆಯಲ್ಲಿ, ವಿಶ್ವ ಪರಿಸರ ದಿನದ ಸಂದರ್ಭದಲ್ಲಿ, ‘ಪರಿಸರ ದಿನದ ಪ್ರಲಾಪ ಗಳು’ ಎಂಬ ಬರಹವನ್ನು ಈ ಅಂಕಣಕಾರ ಬರೆದಿದ್ದುಂಟು; ಪರಿಸರ ರಕ್ಷಿಸಿ ಎಂಬುದು ಕೇವಲ ಪ್ರಲಾಪವಾಗುತ್ತಿದೆ, ಅತ್ತ ಪರಿಸರ ನಾಶವು ವೇಗವಾಗಿ ಸಾಗಿದೆ ಎಂಬ ಕಾಳಜಿಯ ಬರಹ ಅದು. ಅಂದರೆ, ಪರಿಸರ ದಿನದ ಕಾಳಜಿಯು ಕೇವಲ ಪ್ರಲಾಪವಾಗಬಾರದು, ಅದಕ್ಕೆ ವಿರುದ್ಧವಾದ ಪರಿಣಾಮ ಬೀರಿ, ನಿಜವಾಗಿಯೂ ಪರಿಸರ ರಕ್ಷಣೆ ಆಗಲಿ ಎಂಬ ಕಳಕಳಿಯಿಂದ ಬರೆದ ಬರಹ ಅದು.

ಆದರೆ, ಈಚಿನ ಒಂದೆರಡು ದಶಕಗಳಲ್ಲಿ, ವಿವಿಧ ಕಾರಣಗಳಿಗಾಗಿ, ನೆಪಗಳನ್ನೂ ಒಡ್ಡಿ ಪರಿಸರ ವನ್ನು ವೇಗವಾಗಿ ನಾಶ ಮಾಡುತ್ತಿರುವುದಂತೂ ನಿಜ; ಅದೊಂದು ಕಹಿ ಸತ್ಯ. ಮೆಟ್ರೋಗಾಗಿ ಮರಗಳ ಹರಣ, ಹೆದ್ದಾರಿಗಾಗಿ ಮರಗಳ ಹರಣ, ಎತ್ತಿನಹೊಳೆಯಂತಹ ಬಹುಕೋಟಿ ಯೋಜನೆ ಗಾಗಿ ಕಾಡಿನ ದೊಡ್ಡ ಭಾಗ ನಾಶ, ಜಲವಿದ್ಯುತ್ ಯೋಜನೆಗಳಿಗಾಗಿ ಕಾಡಿನ ನಾಶ, ಬೇರೆ ಬೇರೆ ಕಾಮಗಾರಿಗಳಿಗಾಗಿ ವಿವೇಚನಾ ರಹಿತವಾಗಿ ಕಾಡಿನ ಭಾಗಗಳ ನಾಶ, ಟ್ರೀಪಾರ್ಕ್ ಎಂಬ ಕಾಂಕ್ರೀಟು ಕಾಮಗಾರಿಯೇ ಪ್ರಧಾನವಾಗಿರುವ ಚಟುವಟಿಕೆಗಾಗಿ ಸಹಜ ಕಾಡುಗಿಡಗಳಿರುವ ಜಾಗದ ನಾಶ, ಈ ರೀತಿ ಪರಿಸರ ನಾಶ ಮುಂದುವರಿದೇ ಇದೆ!

ಇದು ಹೀಗೆಯೇ ಮುಂದುವರಿದರೆ, ನಾವು ಎಲ್ಲಿಗೆ ಹೋಗಿ ಮುಟ್ಟುತ್ತೇವೆ? ಪರಿಸರ ರಕ್ಷಣೆಯ ಕುರಿತಾಗಿ, ಪ್ರಾಮಾಣಿಕ ಕಾಳಜಿ ಇರುವವರೇ ಇಲ್ಲವೇ? ನಮ್ಮ ಜನರು ಸಹ ಪರಿಸರ ರಕ್ಷಣೆಯ ಪರವಾದ ಹೋರಾಟಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಿದರೇ? ಹಾಗೆಂದು ತೀರಾ ನಿರಾಶಾಭಾವ ವನ್ನು ತಳೆಯು ವಂತಿಲ್ಲ; ನಮ್ಮಲ್ಲಿ ಪರಿಸರದ ಕುರಿತು ಸಾಕಷ್ಟು ಕಾಳಜಿ ಇತ್ತು, ಈಗಲೂ ಇದೆ ಎಂದೇ ತಿಳಿಯಬೇಕು. ಅದೇ ಸಕಾರಾತ್ಮಕ ಚಿಂತನೆ.

ನಮ್ಮ ಪರಿಸರವನ್ನು ರಕ್ಷಿಸಬೇಕು ಎಂಬ ಕೂಗು, ಕಳಕಳಿ ನಮ್ಮ ದೇಶದಲ್ಲಿ ಆರಂಭವಾಗಿ ನಾಲ್ಕಾರು ದಶಕಗಳೇ ಕಳೆದವು; ದೇಶಕ್ಕೆ ಸ್ವಾತಂತ್ರ್ಯ ದೊರಕಿ ಸುಮಾರು ಮೂರು ದಶಕಗಳ ನಂತರ, ಪರಿಸರದ ಪ್ರಾಮುಖ್ಯತೆ ಕುರಿತು ಜನರಲ್ಲಿ ಕಾಳಜಿ ಬೆಳೆಸುವ ಕೆಲಸವು ಅಲ್ಲಲ್ಲಿ ಆರಂಭ ವಾಯಿತು; ದಟ್ಟ ಅರಣ್ಯದ ನಡುವೆ ಸ್ಥಾಪನೆಗೊಂಡ ಕೈಗಾ ಯೋಜನೆಯ ವಿರುದ್ಧ ನಡೆದ ಹೋರಾಟವು ಇಂತಹ ಕಾಳಜಿಯನ್ನು ಎತ್ತಿ ತೋರಿಸಿದ ಒಂದು ಪ್ರಮುಖ ಹೋರಾಟ.

ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿ ತಲೆ ಎತ್ತಿರುವ ಕೈಗಾ ಅಣುಸ್ಥಾವರವನ್ನು ವಿರೋಧಿಸಿ ಶಿವರಾಮ ಕಾರಂತರಂತಹ ಹಿರಿಯ ಸಾಹಿತಿಗಳು ಸಹ ದನಿ ಎತ್ತಿದರು; ಅವರ ಜೊತೆ ಸಾವಿರಾರು ಜನ ಹೆಜ್ಜೆ ಹಾಕಿದರು; ಉತ್ತರ ಕನ್ನಡದಲ್ಲಿ ಅದೇ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಪರಿಸರ ಪರವಾದ ದನಿ ಎತ್ತಿದ ಶಿವರಾಮ ಕಾರಂತರು ಸ್ಪರ್ಧಿಸಿದರು; ಆನೆಯ ಚಿನ್ಹೆಯನ್ನು ಬಳಸಿ ನಡೆದ ಆ ಚುನಾವಣೆಯಲ್ಲಿ, ಅವರು ಜಯ ಗಳಿಸಲಿಲ್ಲ ಎಂಬುದು ಬೇರೆ ಮಾತು; ಆದರೆ, ಆ ಒಂದು ಸ್ಪರ್ಧೆಯಿಂದ, ಜನಸಾಮಾನ್ಯರಲ್ಲಿ ಪರಿಸರ ಕಾಳಜಿಯನ್ನು ಬೆಳೆಸಲು ಅನುಕೂಲವಾಯಿತು.

ಇದೇ ಸಮಯದಲ್ಲಿ ದೂರದ ಹಿಮಾಲಯದಲ್ಲಿ ಸುಂದರ್ ಲಾಲ್ ಬಹುಗುಣ ಮೊದಲಾದವರು ಆ ಪ್ರದೇಶದ ಕಾಡನ್ನು, ನದಿಗಳನ್ನು ರಕ್ಷಿಸಲು ಹೋರಾಟ ನಡೆಸಿದರು. ಬಹುಗುಣ ಅವರು ತಪಸ್ವಿಯಂತೆ, ಪರಿಸರ ನಿಷ್ಠೆಯಿಂದ ಹೋರಾಟ ನಡೆಸಿದರು. ಆದರೆ, ಈ ಎರಡೂ ಹೋರಾಟಗಳು, ತಮ್ಮ ಪ್ರತ್ಯಕ್ಷ ಗುರಿಯನ್ನು ಸಾಧಿಸಲು ಯಶಸ್ಸು ಗಳಿಸಲಿಲ್ಲ; ಆದರೆ, ಈ ಪರಿಸರ ಹೋರಾಟ ಗಳಿಂದಾಗಿ ದೇಶದಾದ್ಯಂತ ಜನಸಾಮಾನ್ಯರ ಗಮನವು ಪರಿಸರದ ಪ್ರಾಮುಖ್ಯತೆಯ ಕುರಿತು ಹರಿಯಿತು; ಕಾಡು, ಬೆಟ್ಟ, ಗುಡ್ಡ, ನದಿ, ಜಲಪಾತ, ಕಡಲ ಕಿನಾರೆ, ಹುಲ್ಲುಗಾವಲು, ಶೋಲಾ ಕಾಡು, ಕುರುಚಲು ಕಾಡು, ಕಲ್ಲುಮುಳ್ಳುಗಳಿಂದಾವೃತವಾದ ಭೂಮಿ, ಮರುಭೂಮಿಯಂಚಿನ ಹಸುರು ಪ್ರದೇಶ- ಇಂತಹ ಎಲ್ಲಾ ಪ್ರಾಕೃತಿಕ ತಾಣಗಳನ್ನು ರಕ್ಷಿಸುವುದು ಎಷ್ಟು ಮುಖ್ಯ ಎಂದು ಜನಸಾಮಾನ್ಯರು ತಿಳಿಯುವಂತಾಯಿತು.

ಸುಮಾರು ಇದೇ ಸಮಯದಲ್ಲಿ (ಇದಕ್ಕಿಂತ ತುಸು ಮುಂಚೆ ಎನ್ನಬಹುದು) ಕೇರಳದ ಸೈಲೆಂಟ್ ವ್ಯಾಲಿಯಲ್ಲಿರುವ ಕಾಡನ್ನು ನಾಶ ಪಡಿಸುವ ಬೃಹತ್ ಯೋಜನೆಯನ್ನು ವಿರೋಧಿಸಿದ ಜನಸಾಮಾನ್ಯರು, ತಮ್ಮ ಹೋರಾಟದಲ್ಲಿ ಅಭೂತಪೂರ್ವ ಜಯ ಗಳಿಸಿದರು! ಅಲ್ಲಿ ಜನರು ಹೋರಾಟದ ಮೂಲಕ ತಂದ ಒತ್ತಡದ ಫಲವಾಗಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸೈಲೆಂಟ್ ವ್ಯಾಲಿ ರಕ್ಷಿಸುವ ನಿರ್ಧಾರ ತೆಗೆದುಕೊಂಡರು. ಅದರ ಫಲವಾಗಿ, ಸೈಲೆಂಟ್ ವ್ಯಾಲಿ ಸುತ್ತಮುತ್ತಲಿನ ಕಾಡು ಪ್ರದೇಶವು ಇಂದಿಗೂ ಉಳಿದುಕೊಂಡಿದೆ, ಪಶ್ಚಿಮ ಘಟ್ಟಗಳ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ!

ಇಂತಹ ಪರಿಸರ ಪ್ರೇಮ ಮತ್ತು ತಮ್ಮ ಸುತ್ತಲಿನ ಪ್ರಕೃತಿಯನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿಯು ಎಲ್ಲರ ಮನದಲ್ಲೂ ಸ್ಥಿರವಾಗಬೇಕಾಗಿದೆ. ನಮ್ಮ ನಾಡು, ನಮ್ಮದೇಶ ಅಭಿವೃದ್ಧಿ ಹೊಂದಲು, ಪರಿಸರವನ್ನು ನಾಶ ಮಾಡದೇ ಇರುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕಾಲ ಇದಾಗಿದೆ. ಇಷ್ಟು ವರ್ಷಗಳ ಕಾಲ, ಪರಿಸರ ರಕ್ಷಣೆಯನ್ನು ನಿರ್ಲಕ್ಷಿಸಿ, ಹಲವು ಕಾಮಗಾರಿಗಳನ್ನು ಕೈಗೊಂಡು, ಅಭಿವೃದ್ಧಿ ಪಥದಲ್ಲಿ ಸಾಗಿದ್ದೇವೆ; ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಹೊಸದರಲ್ಲಿ, ಪರಿಸರ ರಕ್ಷಣೆ ಗಿಂದ ನೀರಾವರಿ ಯೋಜನೆಗಳಂತಹ ಕೆಲಸಗಳಿಗೆ ಹೆಚ್ಚಿನ ಪ್ರಾಮುಖ್ಯ ಇತ್ತು; ಆಗಿನ ದಿನಮಾನಕ್ಕೆ ಅದು ಅನಿವಾರ್ಯವೂ ಆಗಿತ್ತು. ಆದರೆ, ಇನ್ನು ಮುಂದೆ, ಈಗ ಉಳಿದಿರುವ ಪರಿಸರವನ್ನು ಪೂರ್ತಿಯಾಗಿ ರಕ್ಷಿಸಿಕೊಂಡೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಿದೆ.

ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕದಲ್ಲಿರುವ ನಾವು, ಈಗ ಉಳಿದುಕೊಂಡಿರುವ ಪರಿಸರವನ್ನು ರಕ್ಷಿಸಬೇಕಾಗಿದೆ, ಹೊರತು, ಅಭಿವೃದ್ಧಿ ಯೋಜನೆಯ ನೆಪದಲ್ಲಿ ನಾಶ ಮಾಡುವಂತೆಯೇ ಇಲ್ಲ. ಈ ಒಂದು ಕಳಕಳಿಯು ನಮ್ಮ ನಾಡಿನ ಎಲ್ಲರಲ್ಲೂ ಅಂದರೆ, ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳಲ್ಲಿ, ಆಡಳಿತಗಾರರಲ್ಲಿ, ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಮೂಡಬೇಕು.

ಇಂತಹ ಒಂದು ವಾತಾವರಣ, ಸನ್ನಿವೇಶ, ಅಭಿಪ್ರಾಯ ಸೃಷ್ಟಿಯಾಗಬೇಕಾದರೆ, ಎಲ್ಲರಲ್ಲೂ ಪರಿಸರ ಪ್ರೀತಿ ಇರಬೇಕು, ಎಲ್ಲರಲ್ಲೂ ಪರಿಸರ ಪ್ರೀತಿಯನ್ನು ಬೆಳೆಸಬೇಕು, ಎಲ್ಲರೂ ಪ್ರಕೃತಿಯ ಕುರಿತು ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಈ ದಾರಿಯಲ್ಲಿ ಸಾಗಲು, ನಾವು ಕೈಗೊಳ್ಳಬಹುದಾದ ಒಂದು ಸಕಾರಾತ್ಮಕ ಉಪಕ್ರಮವೆಂದರೆ, ನಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸುವುದು.

ಬಾಲ್ಯದಿಂದಲೇ ಮಕ್ಕಳಿಗೆ ಪರಿಸರದ ಪ್ರಾಮುಖ್ಯ ತಿಳಿಸಿ, ಪರಿಸರ ರಕ್ಷಣೆಯ ಮಹತ್ವವನ್ನು ತಿಳಿಹೇಳಬೇಕು, ಅದರ ಆರಂಭಿಕ ಹೆಜ್ಜೆಯಾಗಿ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಪ್ರೀತಿಯನ್ನು ಬೆಳೆಸಬೇಕು. ಉದಾಹರಣೆ ನೀಡುವುದಾದರೆ, ಪಕ್ಷಿವೀಕ್ಷಣೆಯಂತಹ ಹವ್ಯಾಸವನ್ನು ಬೆಳೆಸಿಕೊಂಡವರು, ಖಂಡಿತವಾಗಿಯೂ ಕಾಡಿನ ರಕ್ಷಣೆಗೆ ಬೆಲೆ ಕೊಡುತ್ತಾರೆ; ಆನೆ, ಹುಲಿಯಂತಹ ಪ್ರಾಣಿಗಳ ಕುರಿತು ಸಹಾನುಭೂತಿ ಹೊಂದಿದವರು, ಅವುಗಳ ವಾಸಸ್ಥಾನದ ರಕ್ಷಣೆಗೆ ಮುಂದಾಗುತ್ತಾರೆ; ಮೀನು, ಆಮೆಗಳ ಕುರಿತು ಕಾಳಜಿ ಹೊಂದಿದವರು, ನದಿಗಳ ಮತ್ತು ಸಮುದ್ರಗಳ ಆರೋಗ್ಯ ಕಾಪಾಡಲು ಟೊಂಕಕಟ್ಟುತ್ತಾರೆ; ಕಾಂಡ್ಲಾ ಕಾಡಿನಲ್ಲಿ ಜೀವಿಸುವ ಹಲವಾರು ಸಸ್ಯಪ್ರಾಣಿಗಳ ಕುರಿತು ತಿಳಿದವರು, ಕಡಲ ಕಿನಾರೆಯನ್ನು ರಕ್ಷಿಸಲು ಮುಂದಾಗುತ್ತಾರೆ.

ಇಂತಹ, ವಿವಿಧ ಆಯಾಮದ ಪರಿಸರ ಕಾಳಜಿಯನ್ನು ಇಂದಿನ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಬೆಳೆಸಿದರೆ, ಮುಂದೆ ಅವರು ದೊಡ್ಡವರಾದಾಗ, ಜವಾಬ್ದಾರಿಯುತ ಜೀವನ ನಡೆಸುವಾಗ, ನಮ್ಮ ಸುತ್ತಲಿನ ಪ್ರಕೃತಿ ಯನ್ನು, ಪರಿಸರವನ್ನು ರಕ್ಷಿಸಲು, ಶುದ್ಧವಾಗಿಡಲು ಅಪಾರ ಮಹತ್ವವನ್ನು ನೀಡುತ್ತಾರೆ. ಆದ್ದರಿಂದ, ಇಂದಿನ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ ಬೆಳೆಸುವುದು ಎಂದರೆ, ಮುಂದಿನ ದಿನಗಳಲ್ಲಿ ಪರಿಸರವನ್ನು ರಕ್ಷಿಸಲು ಒಂದು ಉತ್ತಮ ಬುನಾದಿ ಹಾಕಿದಂತೆ ಎಂದೇ ತಿಳಿಯಬಹುದು.

ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಗಾದೆಯಿದೆ. ಅಂತಹ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸಲು, ತೀವ್ರವಾದ ಪರಿಸರ ಪ್ರೀತಿಯನ್ನು ಬೆಳೆಸಲು ಸಂಬಂಧ ಪಟ್ಟ ಇಲಾಖೆಗಳು, ಸಿಲಬಸ್ ತಯಾರಕರು, ಪಠ್ಯಪುಸ್ತಕ ಸಮಿತಿಯಲ್ಲಿರುವವರು ಗಂಭೀರವಾಗಿ ತೊಡಗಿಕೊಳ್ಳಬೇಕಾಗಿದೆ. ಘೋಷಣೆಯ ಮಟ್ಟಕ್ಕಿಂತ ಮೇಲ್ಮಟ್ಟಕ್ಕೆ ಏರಿ, ಕ್ರಿಯಾತ್ಮಕವಾಗಿ ನಾವೆಲ್ಲರೂ ತೊಡಗಿಕೊಳ್ಳಬೇಕಿದೆ. ಈ ದೀಪಾವಳಿಗೆ, ನಮ್ಮೆಲ್ಲರ ಆಶಯ ಇದೇ ಆಗಿರಲಿ; ನಮ್ಮ ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಇನ್ನಷ್ಟು ಬೆಳೆಸೋಣ, ಮುಂದಿನ ದಶಕಗಳಲ್ಲಿ ಪ್ರಕೃತಿ, ಪರಿಸರ ಉಳಿದುಕೊಂಡಿರಬೇಕೆಂದರೆ, ಇಷ್ಟಾದರೂ ನಾವು ಮಾಡಬೇಕಾಗಿದೆ.