ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cherkady Sachhidanand Shetty Column: ದಿವಾಳಿ ಅಂಚಿನಲ್ಲಿ ಭಯೋತ್ಪಾದಕ ಪಾಕ್

ಭಯೋತ್ಪಾದನೆಯ ಸಂತಾನಗಳ ನೆಲವೇ ಪಾಕಿಸ್ತಾನ. ಅದು ‘ನಾಗರಿಕ ರಾಷ್ಟ್ರ’ ಎನಿಸಿಕೊಳ್ಳುವು ದಕ್ಕೆ ನಾಲಾಯಕ್ ಎಂದು ಜಗತ್ತಿಗೆ ಎಂದೋ ಗೊತ್ತಾಗಿದೆ. ಪಾಕ್‌ನ ಭಯೋತ್ಪಾದಕ ಕೃತ್ಯ ಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿದೆ. ಆದ್ದರಿಂದ ಅಂತಾರಾಷ್ಟ್ರೀಯ ಸಮುದಾಯವು ಆರ್ಥಿಕ ನೆರವು ಮತ್ತು ಸಾಲವನ್ನು ನಿಲ್ಲಿಸಿ ಪಾಕಿಸ್ತಾನದ ವಿರುದ್ಧ ಕಠಿಣಕ್ರಮ ಜರುಗಿಸಬೇಕು.

ದಿವಾಳಿ ಅಂಚಿನಲ್ಲಿ ಭಯೋತ್ಪಾದಕ ಪಾಕ್

Profile Ashok Nayak May 19, 2025 6:34 AM

ನೆೆರೆಹೊರೆ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಪಾಕಿಸ್ತಾನವು ಕಳೆದ 6 ದಶಕಗಳಲ್ಲಿ ಐಎಂಎಫ್‌ ನಿಂದ 24 ಸಲ ಸಾಲ ಪಡೆದುಕೊಂಡಿದೆ. 2024ರಲ್ಲಿ ಪಾಕಿಸ್ತಾನದ ಬಾಹ್ಯಸಾಲದ ಪ್ರಮಾಣ 130 ಶತಕೋಟಿ ಡಾಲರ್‌ನಷ್ಟಿತ್ತು. ಪಾಕಿಸ್ತಾನಕ್ಕೆ ಚೀನಾ 2024ರವರೆಗೆ 2.42 ಲಕ್ಷ ಕೋಟಿ ರುಪಾಯಿಯಷ್ಟು ಸಾಲ ನೀಡಿದೆ. ತಮಾಷೆಯೆಂದರೆ, ಯಾವುದೇ ದೇಶದಿಂದ ಎಷ್ಟೇ ನೆರವು ಸಿಕ್ಕಿದರೂ, ಪಾಕಿಸ್ತಾನದಲ್ಲಿ ಒಂದಿನಿತೂ ಸುಧಾರಣೆ ಯಾಗಿಲ್ಲ. ಆದರೆ ಭಯೋತ್ಪಾದನೆಗೆ ಸರಕಾರದ ಪ್ರಾಯೋಜಕತ್ವ ಮುಂದುವರಿದೇ ಇದೆ, ಭಯೋತ್ಪಾದಕರ ಕಾರ್ಖಾನೆ ಎನಿಸಿ‌ ಬಿಟ್ಟಿದೆ ಪಾಕಿಸ್ತಾನ. ಪಾಕಿಸ್ತಾನವು ಭಯೋತ್ಪಾದನೆಯ ರಫ್ತು ರಾಷ್ಟ್ರ ಎಂಬ ಕಟುವಾಸ್ತವವು ಇಡೀ ಜಗತ್ತಿಗೆ ಗೊತ್ತಿರುವಾಗ, ‘ಅಂತಾರಾಷ್ಟ್ರೀಯ ಹಣಕಾಸು ನಿಧಿ’ (ಐಎಂಎಫ್) ಸೇರಿದಂತೆ ಇತರೆ ದೇಶಗಳು ಅದಕ್ಕೆ ಹಣಕಾಸಿನ ಬೆಂಬಲ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕಿತ್ತು.

ಆದರೆ ಇದಕ್ಕೆ ತದ್ವಿರುದ್ಧವಾಗಿ, ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲೂ ಐಎಂಫ್ ಪಾಕಿಸ್ತಾನಕ್ಕೆ 1 ಶತಕೋಟಿ ಡಾಲರ್ ಸಾಲವನ್ನು ಮಂಜೂರು ಮಾಡಿದೆ. ಇದಲ್ಲದೆ, ಹವಾಮಾನ ಸಂಬಂಧಿ ಕಾರ್ಯಕ್ರಮಗಳಿಗಾಗಿ 1.4 ಶತಕೋಟಿ ಡಾಲರ್ ಹೊಸಸಾಲ ನೀಡುವು ದಕ್ಕೂ ಐಎಂಫ್ ಅನುಮೋದಿಸಿದೆ ಮತ್ತು ಸುಮಾರು 7 ಶತಕೋಟಿ ಡಾಲರ್ ವಿಸ್ತರಿತ ಸಾಲಕ್ಕಾಗಿ ಕೋರಿದ ಪಾಕಿಸ್ತಾನದ ಮೇಲೆ ಎಂದಿನಂತೆ ಕೃಪೆ ತೋರಿ ಗಮನ‌ ಹರಿಸಿದೆ.

ಇದೀಗ ಪಾಕಿಸ್ತಾನಕ್ಕೆ ಷರತ್ತುಬದ್ಧ ಸಾಲ ನೀಡಲು ಸಮ್ಮತಿಸಿ, ಅದರ ಎರಡನೇ ಕಂತಿನ 1023 ಶತಕೋಟಿ ಡಾಲರ್ (8735 ಕೋಟಿ ರು.) ಹಣ ನೀಡಿದೆ. ಹಿಂದಿನ ಸಾಲವನ್ನು ತೀರಿಸಲಾಗದೆ ಪ್ರತಿ ಬಾರಿಯೂ ಹೊಸ ಸಾಲಕ್ಕೆ ಕೈಯೊಡ್ಡುತ್ತಿರುವ ಪಾಕಿಸ್ತಾನವು ದಿವಾಳಿ ಯಂಚಿನಲ್ಲಿದ್ದರೂ ಐಎಂಎ-ನ ಕದತಟ್ಟಿ ಸಾಲ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪಾಕ್‌ನ ಕುಮ್ಮಕ್ಕಿನಿಂದಲೇ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದರೂ, ಈ ಚಟುವಟಿಕೆ ಗಳಿಗೆ ಸಾಲದ ಹಣವನ್ನು ಅದು ವಿನಿಯೋಗಿಸುತ್ತಿರುವುದು ಗೊತ್ತಿದ್ದರೂ ಐಎಂಎಫ್ ಹೀಗೇಕೆ ನಡೆದುಕೊಳ್ಳುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಇದರಿಂದಾಗಿ ವಿಚ್ಛಿದ್ರಕಾರಿ ಶಕ್ತಿಗಳಿಗೆ ಮಾನ್ಯತೆ ನೀಡಿದಂತಾಗಿದೆ. ಇದು ಕೇವಲ ಆರ್ಥಿಕ ನೆರವಿನ ವಿಷಯವಲ್ಲ; ಜಾಗತಿಕ ಭದ್ರತೆ ಮತ್ತು ಶಾಂತಿಯ ಮೇಲೆ ನೇರವಾಗಿ ಪರಿಣಾಮ ಬೀರುವ ಸಂಗತಿ.

ಇದನ್ನೂ ಓದಿ: Cherkady Sachhidanand Shetty Column: ಬೂಮ್‌ರ್ಯಾಂಗ್‌ ಆಗಲಿರುವ ಟ್ರಂಪ್‌ ಸುಂಕನೀತಿ

ಪಾಕಿಸ್ತಾನಕ್ಕೆ ಹೊಸದಾಗಿ ಸಾಲ ಮಂಜೂರು ಮಾಡುವ ಮುನ್ನ, ಆ ಹಣ ದುರುಪಯೋಗ ವಾಗದಂತೆ ಐಎಂಎಫ್‌ ಷರತ್ತುಗಳನ್ನೂ ವಿಧಿಸಿದೆ; ಆದರೆ ಅವನ್ನು ಪಾಕಿಸ್ತಾನ ಪಾಲಿಸುತ್ತದೆಯೇ? ಕಳೆದ 6 ದಶಕಗಳಲ್ಲಿ ಪಾಕಿಸ್ತಾನವು ಐಎಂಎಫ್‌ ನಿಂದ ಸುಮಾರು 24 ಬಾರಿ ಸಾವಿರಾರು ಕೋಟಿ ಡಾಲರ್ ಸಾಲ ಪಡೆದಿದೆ. ಇಷ್ಟಾಗಿಯೂ ಅದರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬದಲು ಕ್ಷೀಣಿಸು ತ್ತಲೇ ಇದೆ.

ಯಾವಾಗಲೂ ಸಾಲವನ್ನು ತೀರಿಸಲಾಗದೆ, ಹೊಸಸಾಲದ ಮೊರೆ ಹೋಗಿ ಸಾಲದ ಸುಳಿಗೆ
ಸಿಲುಕಿದ್ದರೂ ಪಾಕಿಸ್ತಾನವು ಈ ಸಾಲದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬದಲಾಗಿ ಗಡಿಯಾಚೆಗಿನ ಭಯೋತ್ಪಾದನೆಗೆ ಬಳಸುತ್ತಿರುವುದು ಖೇದಕರ. ಭಯೋತ್ಪಾದನೆಯು ಇಡೀ ಜಗತ್ತಿಗೇ ಕಂಟಕವಾಗಿ ಪರಿಣಮಿಸಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಅಂಥ ಭಯೋತ್ಪಾದನೆಯ ಸಂತಾನಗಳ ನೆಲವೇ ಪಾಕಿಸ್ತಾನ. ಅದು ‘ನಾಗರಿಕ ರಾಷ್ಟ್ರ’ ಎನಿಸಿಕೊಳ್ಳುವುದಕ್ಕೆ ನಾಲಾಯಕ್ ಎಂದು ಜಗತ್ತಿಗೆ ಎಂದೋ ಗೊತ್ತಾಗಿದೆ. ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿದೆ.

ಆದ್ದರಿಂದ ಅಂತಾರಾಷ್ಟ್ರೀಯ ಸಮುದಾಯವು ಆರ್ಥಿಕ ನೆರವು ಮತ್ತು ಸಾಲವನ್ನು ನಿಲ್ಲಿಸಿ ಪಾಕಿಸ್ತಾನದ ವಿರುದ್ಧ ಕಠಿಣಕ್ರಮ ಜರುಗಿಸಬೇಕು. ಕಳೆದ 3 ದಶಕಗಳಿಂದ ಉಗ್ರವಾದವನ್ನು ಬೆಂಬಲಿಸುತ್ತಿರುವುದಾಗಿ ಪಾಕ್ ಬಹಿರಂಗವಾಗಿ ಒಪ್ಪಿಕೊಂಡಿದ್ದು, ವಿಶ್ವಸಂಸ್ಥೆ ಇದನ್ನು ಗಂಭೀರ ವಾಗಿ ಪರಿಗಣಿಸಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಕ್ರಮ ಕೈಗೊಳ್ಳ ಬೇಕು.

ಪಾಕಿಸ್ತಾನವು ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿರುವುದನ್ನು ಹಲವು ವರದಿಗಳೇ ತಿಳಿಸಿವೆ. 2024ರ ಇಂಥದೊಂದು ವರದಿಯಂತೆ, ಪಾಕಿಸ್ತಾನದ ಒಟ್ಟಾರೆ ಸಾಲದ ಪ್ರಮಾಣವು 256 ಬಿಲಿಯನ್ ಡಾಲರ್‌ಗೆ (ಆಂದರೆ 21.6 ಲಕ್ಷ ಕೋಟಿ ರುಪಾಯಿಗೆ) ತಲುಪಿದೆ. 2029ರ ಹೊತ್ತಿಗೆ ಪಾಕ್ 100 ಬಿಲಿಯನ್ ಡಾಲರ್ (8.4 ಲಕ್ಷ ಕೋಟಿ ರು.) ವಿದೇಶಿ ಸಾಲ ಮತ್ತು ಬಡ್ಡಿಯನ್ನು ಪಾವತಿಸ ಬೇಕಿದೆ.

ತೈಲ, ಗ್ಯಾಸ್, ಆಮದು ಶುಲ್ಕ, ಸಂಬಳ, ಸಬ್ಸಿಡಿಯಂಥ ಸರಕಾರದ ದೈನಂದಿನ ವೆಚ್ಚಗಳು, ಒಟ್ಟಾರೆ ಹೇಳುವುದಾದರೆ ಸಂಪೂರ್ಣ ಆರ್ಥಿಕತೆಯೇ ಸಾಲದಿಂದಲೇ ನಿರ್ವಹಿಸಲ್ಪಡಬೇಕಾದ ಸ್ಥಿತಿ ಅಲ್ಲಿದೆ. ಪಾಕ್‌ನ ಬಡತನದ ಪ್ರಮಾಣ ಶೇ.40.5ಕ್ಕೆ, ಹಣದುಬ್ಬರ ಶೇ.38ಕ್ಕೆ, ನಿರುದ್ಯೋಗದ ಪ್ರಮಾಣ ಶೇ.9.7ಕ್ಕೆ ತಲುಪಿದೆ. ಶೇ. 82ರಷ್ಟು ಜನರಿಗೆ ಆಹಾರವನ್ನು ಕೊಡುವ ಶಕ್ತಿ ಆ ದೇಶಕ್ಕಿಲ್ಲ.

ಪಾಕಿಸ್ತಾನಕ್ಕೆ ದುಡ್ಡಿನ ಅಗತ್ಯ ಎದುರಾದಾಗಲೆಲ್ಲ ನೆರವಿಗೆ ಧಾವಿಸುತ್ತದೆ ಚೀನಾ; ಹೀಗಾಗಿ ಪಾಕ್ ದೊಡ್ಡ ಮಟ್ಟದಲ್ಲಿ ಚೀನಾದ ಋಣದಲ್ಲಿ ಬಿದ್ದಿದೆ. ಹಿಂದಿನ ಸಾಲದ ಮರುಪಾವತಿಯಲ್ಲಿ ವಿಫಲ
ವಾದುದರ ಬಗ್ಗೆ ಚೀನಾಕ್ಕೆ ಈಗಾಗಲೇ ಪಾಕ್ ಮೇಲೆ ಅಸಮಾಧಾನವಿದೆ.

ಚೀನಾದಿಂದ ಹೆಚ್ಚುವರಿ ಶಸ್ತ್ರಾಸ್ತ್ರಗಳು ಮತ್ತು ಸಾಲ ಸಿಗದೇ ಹೋದರೆ ಪಾಕಿಸ್ತಾನದ ಯಾವ ಕುತಂತ್ರವೂ ನಡೆಯುವುದಿಲ್ಲ. ಹಲವು ಸಣ್ಣ ಪುಟ್ಟ ರಾಷ್ಟ್ರಗಳನ್ನು ತನ್ನ ಸಾಲದ ಬಲೆಯಲ್ಲಿ ಸಿಲುಕಿಸಿ, ಅವುಗಳಿಗೆ ಭಾರಿ ಪ್ರಮಾಣದ ಬಡ್ಡಿ ವಿಧಿಸಿ ರಕ್ತಹೀರುವುದು ಚೀನಾದ ಪರಿಪಾಠ; ಇಂಥ ರಾಷ್ಟ್ರಗಳು ಸಾಲದ ಮರುಪಾವತಿಯಲ್ಲಿ ವಿಫಲವಾದರೆ, ಅಲ್ಲಿನ ದ್ವೀಪಗಳು, ವಿಮಾನ ನಿಲ್ದಾಣ ಗಳು ಅಥವಾ ಇತರ ಸ್ವತ್ತುಗಳನ್ನು ಚೀನಾ ‘ಕಬ್ಜಾ’ ಮಾಡಿಕೊಂಡು ಬಿಡುತ್ತದೆ. ಈ ವಾಸ್ತವ ಪಾಕಿಸ್ತಾನಕ್ಕೂ ಗೊತ್ತಿದ್ದರೂ, ಬೇರೆಡೆಗಿಂತ ಚೀನಾದಿಂದ ಸುಲಭವಾಗಿ ಸಾಲ ಸಿಗುವುದರಿಂದ ಅದರ ಎದುರೇ ಪಾಕ್ ಮಂಡಿಯೂರುತ್ತಿದೆ.

2024ರವರೆಗೆ ಪಾಕಿಸ್ತಾನಕ್ಕೆ 2087 ಬಿಲಿಯನ್ ಡಾಲರ್ (ಅಂದರೆ ಸುಮಾರು 2.42 ಲಕ್ಷ ಕೋಟಿ ರು.) ಸಾಲವನ್ನು ಚೀನಾ ನೀಡಿರುವುದು ಈ ಮಾತಿಗೆ ಸಾಕ್ಷಿ. ಐಎಂಎಫ್ ವತಿಯಿಂದ ಪಾಕಿಸ್ತಾನಕ್ಕೆ ನೀಡ ಲಾಗುತ್ತಿರುವ ಸಾಲವು ಭಯೋತ್ಪಾದನೆಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂಬ ಸಂಗತಿ ಯನ್ನು ಭಾರತವು ಈ ಬಾರಿಯೂ ಎಲ್ಲಾ ಸದಸ್ಯ ರಾಷ್ಟ್ರಗಳ ಗಮನಕ್ಕೆ ತಂದಿತ್ತು.

ಆದರೆ, ಅಮೆರಿಕ ಮತ್ತು ಐಎಂಎಫ್‌ ನ ಕೆಲವು ಸದಸ್ಯ ರಾಷ್ಟ್ರಗಳು ತಮ್ಮ ಸ್ವಹಿತಾಸಕ್ತಿಯ ಸಾಧನೆ ಗಾಗಿ ಪಾಕಿಸ್ತಾನಕ್ಕೆ ಸಾಲ ದೊರೆಯುವಲ್ಲಿ ಬೆಂಬಲ ನೀಡಿರುವುದು ದುರದೃಷ್ಟವೇ ಸರಿ. ಇದು
ಜಾಗತಿಕ ಶಾಂತಿಗೆ ಧಕ್ಕೆ ತರುವಂಥ ನಡೆಯಾಗಿದೆ. ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ವಿರುದ್ಧ ಕಠಿಣ‌ ಕ್ರಮ ಕೈಗೊಳ್ಳಬೇಕಾದ ಸಂದರ್ಭದಲ್ಲೂ ಇಂಥ ಬೆಂಬಲವೇ?! ಆದರೆ, ಈ ವಿಷಯಕ್ಕೆ ಸಂಬಂಧಿಸಿ ಭಾರತದ ನಿಲುವು ಸ್ಪಷ್ಟವಾಗಿದೆ; ಎಲ್ಲಿಯವರೆಗೆ ಪಾಕಿಸ್ತಾನವು ಉಗ್ರವಾದವನ್ನು ಪ್ರಾಯೋಜಿಸಿ ಒತ್ತಾಸೆಯಾಗಿ ನಿಂತಿರುತ್ತದೋ, ಅಲ್ಲಿಯವರೆಗೆ ಅದರ ಜತೆಗೆ ಯಾವುದೇ ಹಣಕಾಸಿನ ವ್ಯವಹಾರವಿರಲಿ, ಯಾವುದೇ ರೀತಿಯ ಮಾತುಕತೆಗೂ ಅವಕಾಶವಿಲ್ಲ ಎಂದು ಭಾರತ ಕಟ್ಟುನಿಟ್ಟಾಗಿ ಹೇಳಿದೆ. ಈ ತಿಂಗಳು ನಡೆಯಲಿರುವ ಐಎಂಎಫ್ ಮಂಡಳಿಯ ಮಹತ್ವದ ಸಭೆಯಲ್ಲಿ ಭಾರತವು ಭಯೋತ್ಪಾದನೆಯ ವಿಷಯವನ್ನು ಪ್ರಸ್ತಾಪಿಸಿ, ಪಾಕಿಸ್ತಾನಕ್ಕೆ ಹೊಸಸಾಲ ನೀಡುವುದನ್ನು ವಿರೋಧಿಸಲಿದೆ. ಇದು ಸಮಂಜಸವೂ ಅನಿವಾರ್ಯವೂ ಆಗಿದೆ.

ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಸಂದರ್ಭದಲ್ಲೂ ಪಾಕಿಸ್ತಾನವು ಅಶಾಂತಿ ಮತ್ತು ಭಯೋ ತ್ಪಾದನೆಯ ಸೃಷ್ಟಿಗೆ ಯತ್ನಿಸುತ್ತಲೇ ಬಂದಿದ್ದು, ಭಾರತವು ಇದಕ್ಕೆ ಕಾಲಾನುಕಾಲಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಲೇ ಬಂದಿದೆ. ಇಂಥ ಎಲ್ಲ ಸಂದರ್ಭಗಳಲ್ಲೂ ಪಾಕಿಸ್ತಾನದ ಮಾನ ಹರಾಜಾಗಿದ್ದುಂಟು. ಇಷ್ಟಾಗಿಯೂ ಅದು ತನ್ನ ಎಡಬಿಡಂಗಿತನವನ್ನು ಇನ್ನೂ ಬಿಡುತ್ತಿಲ್ಲ. ಈ ಧೋರಣೆಯೇ ಪಾಕಿಸ್ತಾನದ ವಿನಾಶಕ್ಕೆ ಮುನ್ನುಡಿಯಾಗಲಿದೆ, ನೋಡುತ್ತಿರಿ!

(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ

ಪ್ರಬಂಧಕರು)