Raghava Sharma Nidle Column: ಕಳಸಾ-ಬಂಡೂರಿಯ ಗ್ರಹಣ ಬಿಡುವುದು ಯಾವಾಗ ?
ಒಂದು ವೇಳೆ ರಾಜ್ಯ ಸರಕಾರ ಯಾವುದೇ ಅನುಮತಿಯಿಲ್ಲದೆ ಕಾಮಗಾರಿ ಶುರು ಮಾಡಿದಲ್ಲಿ ಅದು ರಾಜ್ಯಕ್ಕೆ ಕಾನೂನಾತ್ಮಕವಾಗಿ ತಿರುಗುಬಾಣವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ರಾಜ್ಯದ ಕ್ರಮವನ್ನು ಗೋವಾ ಖಂಡಿತವಾಗಿಯೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ, ಅಲ್ಲಿಂದ ಕರ್ನಾಟಕಕ್ಕೆ ಪ್ರತಿಕೂಲ ಆಗಬಲ್ಲ ಆದೇಶ ಪಡೆದುಕೊಳ್ಳಲು ಮುಂದಾಗಬಹುದು.


ಅಭಿಮತ
ರಾಘವ ಶರ್ಮ ನಿಡ್ಲೆ
ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ 2018ರಲ್ಲಿ ಮಹದಾಯಿ ನ್ಯಾಯಾಧೀಕರಣ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿ ಐತೀರ್ಪು ಪ್ರಕಟಿಸಿತ್ತು. ಅದಾಗಿ 7 ವರ್ಷಗಳು ಸಂದಿವೆ. ನ್ಯಾಯಾಧೀಕರಣದ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಸಿವಿಲ್ ಮೇಲ್ಮನವಿ ಸಲ್ಲಿಸಿದ್ದರೂ, ಕೇಂದ್ರ ಸರಕಾರ ಐತೀರ್ಪಿನ ಅಧಿಸೂಚನೆ ಪ್ರಕಟಿಸಿರುವುದರಿಂದ ಮೂರು ರಾಜ್ಯಗಳು ನೀರನ್ನು ಹಂಚಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬಹುದು. ಆದರೆ, ಕಳಸಾ-ಬಂಡೂರಿ ನಾಲೆಗಳ ಮೂಲಕ ಮಹದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ನೀರು ಹರಿಸುವ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಗೊಳಿಸಲು ಪರಿಸರ, ಅರಣ್ಯ ಹಾಗೂ ಸಕ್ಷಮ ಪ್ರಾಧಿಕಾರಗಳ ಸಮ್ಮತಿ ಪಡೆದುಕೊಳ್ಳಬೇಕು ಎಂದು ನ್ಯಾ.ಜೆ.ಎಂ.ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧೀಕರಣ ಹೇಳಿದ್ದರಿಂದ ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರಗಳ ಅನುಮತಿಗಾಗಿ ರಾಜ್ಯ ಸರಕಾರ ಪ್ರಯತ್ನಿಸುತ್ತಲೇ ಇದೆ.
ಸಂಸದ ಬಸವರಾಜ ಬೊಮ್ಮಾಯಿ ಕಳೆದ ಸರಕಾರದಲ್ಲಿ ಸಿಎಂ ಆಗಿದ್ದಾಗಲೂ ಕೇಂದ್ರದ ಅನುಮತಿಗಾಗಿ ಯತ್ನಿಸಿದ್ದರು. ಯೋಜನೆಗೆ ಅನುಮತಿ ನೀಡಬೇಕೆ/ಬೇಡವೇ ಎಂಬ ಬಗ್ಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯೀ ಸಮಿತಿ ಪರಿಶೀಲನೆ ನಡೆಸುತ್ತಿದ್ದರೂ, ಅಲ್ಲಿ ನಡೆದಿರುವ ಇದುವರೆಗಿನ ಚರ್ಚೆಗಳು ರಾಜ್ಯಕ್ಕೆ ಅನುಕೂಲಕರವಾಗಿರುವಂತೆ ಕಂಡುಬಂದಿಲ್ಲ.
ಸ್ಥಾಯಿ ಸಮಿತಿಯ 79ನೇ ಸಭೆಯಲ್ಲೂ ಈ ವಿಚಾರದ ಕುರಿತ ತೀರ್ಮಾನವನ್ನು ಮುಂದಕ್ಕೆ ಹಾಕಲಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಎನ್ನುವುದು ಗಮನಾರ್ಹ.
ಇದನ್ನೂ ಓದಿ: Raghav Sharma Nidle Column: ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?
ಕೆಲ ದಿನಗಳ ಹಿಂದೆ ಗೋವಾ ಸಿಎಂ ಪ್ರಮೋದ್ ಸಾವಂತ್, ಗೋವಾ ವಿಧಾನಸಭೆಯಲ್ಲಿ. ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡುವುದಿಲ್ಲ ಎಂಬುದಾಗಿ ಕೇಂದ್ರ ಅರಣ್ಯ-ಪರಿಸರ ಸಚಿವ ಭೂಪೇಂದ್ರ ಯಾದವ್ ತಮಗೆ ತಿಳಿಸಿದ್ದಾರೆ ಎಂಬುದಾಗಿ ರಾಜ್ಯದ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದರು. ಗೋವಾ ಸಿಎಂ ಮಾತಿಗೆ ಕೆಂಡಕಾರಿರುವ ಡಿಸಿಎಂ ಡಿಕೆ ಶಿವಕುಮಾರ್, “ಪ್ರಮೋದ್ ಸಾವಂತ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ" ಎಂದು ಗುಡುಗಿ, ಸುಪ್ರೀಂ ಕೋರ್ಟ್‌ನಿಂದ ನಮ್ಮ ಅರ್ಜಿಯನ್ನು ವಾಪಸ್ ಪಡೆದು, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದಿದ್ದಾರೆ.
ಸುಪ್ರೀಂಕೋರ್ಟ್‌ನಿಂದ ಕರ್ನಾಟಕದ ಯಾವ ಅರ್ಜಿ ವಾಪಸ್ ಪಡೆಯುತ್ತಾರೆ ಎಂಬ ಸ್ಪಷ್ಟತೆ ಯಿಲ್ಲದಿದ್ದರೂ, ನ್ಯಾಯಾಧೀಕರಣದ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಿವಿಲ್ ಅಪೀಲ್ ಗಳನ್ನು ವಾಸ್ತವದಲ್ಲಿ ವಾಪಸ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಸಿವಿಲ್ ಅರ್ಜಿಗಳ ಮೇಲೆ ಸುಪ್ರೀಂಕೋರ್ಟ್ ನೀಡುವ ತೀರ್ಪೇ ಅಂತಿಮ.
ಹೀಗಾಗಿ, ಆಕ್ರೋಶದ ಭರದಲ್ಲಿ ಶಿವಕುಮಾರ್ ಅರ್ಜಿ ವಾಪಸ್ ಪಡೆದುಕೊಳ್ಳುತ್ತೇವೆ ಎಂದಿರ ಬಹುದು ಅಥವಾ ಇದಕ್ಕೆ ಸಂಬಂಧಿಸಿದ ಬೇರೆ ಯಾವುದಾದರೂ ಅರ್ಜಿ ವಾಪಸ್ ಪಡೆದುಕೊಳ್ಳು ತ್ತಾರೋ ಗೊತ್ತಿಲ್ಲ. ಮೇಲಾಗಿ, ಕಳಸಾ-ಬಂಡೂರಿ ಯೋಜನೆಗೆ ನ್ಯಾಯಾಧೀಕರಣ ತನ್ನ ತಾತ್ವಿಕ ಒಪ್ಪಿಗೆ ನೀಡಿದರೂ, ಅರಣ್ಯ-ಪರಿಸರ ಪರಿಣಾಮದ ಅಧ್ಯಯನ ಹಾಗೂ ಅರಣ್ಯ ಸಂರಕ್ಷಣೆಗೆ ಕೈಗೊಳ್ಳುವ ಯೋಜನೆಗಳ ವರದಿ ಸಲ್ಲಿಸಿ, ಆ ಮೂಲಕ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆದು ಯೋಜನೆ ಕೈಗೆತ್ತಿಕೊಳ್ಳಬಹುದು ಎಂದು ನ್ಯಾಯಾಧೀಕರಣ ಸ್ಪಷ್ಟವಾಗಿ ತಿಳಿಸಿವುದರಿಂದ ಕೇಂದ್ರ ಸರಕಾರದ ಅನುಮತಿ ಇಲ್ಲಿ ಅನಿವಾರ್ಯ ಎನ್ನುವುದು ವಾಸ್ತವವೂ ಹೌದು. ಈ ವಿಚಾರ ಡಿಸಿಎಂ ಡಿಕೆಶಿ ಅವರಿಗೆ ಗೊತ್ತಿಲ್ಲದೇನಿಲ್ಲ.
ಒಂದು ವೇಳೆ ರಾಜ್ಯ ಸರಕಾರ ಯಾವುದೇ ಅನುಮತಿಯಿಲ್ಲದೆ ಕಾಮಗಾರಿ ಶುರು ಮಾಡಿದಲ್ಲಿ ಅದು ರಾಜ್ಯಕ್ಕೆ ಕಾನೂನಾತ್ಮಕವಾಗಿ ತಿರುಗುಬಾಣವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ರಾಜ್ಯದ ಕ್ರಮವನ್ನು ಗೋವಾ ಖಂಡಿತವಾಗಿಯೂ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ, ಅಲ್ಲಿಂದ ಕರ್ನಾಟಕಕ್ಕೆ ಪ್ರತಿಕೂಲ ಆಗಬಲ್ಲ ಆದೇಶ ಪಡೆದುಕೊಳ್ಳಲು ಮುಂದಾಗಬಹುದು.
ಹೀಗಾಗಿ, ಮಾಧ್ಯಮದ ಮುಂದೆ ಗೋವಾ ಸಿಎಂ ಅಥವಾ ರಾಜ್ಯದ ಡಿಸಿಎಂ ಭಾವಾವೇಶದಿಂದ ಗುಡುಗಿದರೂ, ಕಾನೂನಿನ ಅಂಗಳದಲ್ಲಿ ವಾಸ್ತವಾಂಶಗಳನ್ನಷ್ಟೇ ಚರ್ಚಿಸಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ, ರಾಜ್ಯ ಸರಕಾರದ ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ರಾಜ್ಯದ ಸಂಸದರ ಪಾತ್ರ ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.
ರಾಜ್ಯದ ಸಿಎಂ, ಡಿಸಿಎಂ, ಕೇಂದ್ರ ಸಚಿವರು ನಮ್ಮ ಎಲ್ಲಾ ಸಂಸದರನ್ನೊಳಗೊಂಡ ನಿಯೋಗ ವನ್ನು ಕೇಂದ್ರ ಜಲಶಕ್ತಿ ಮತ್ತು ಅರಣ್ಯ-ಪರಿಸರ ಸಚಿವರಿಬ್ಬರ ಬಳಿ ಕರೆದೊಯ್ಯಬೇಕು. “ನೀವು ಗೋವಾ ಸಿಎಂ ಬಳಿ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬುದಾಗಿ ತಿಳಿಸಿದ್ದೀರಾ? ಇಲ್ಲ, ನೀಡಿಲ್ಲ ಎನ್ನುವುದಾದರೆ ಈ ವಿಷಯದ ಬಗ್ಗೆ ರಾಷ್ಟ್ರೀಯ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿ ಗೊಂದಲ ನಿವಾರಿಸಿ" ಎಂದು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವರಲ್ಲಿ ಕೇಳಿಕೊಳ್ಳಬೇಕು.
ಕಳಸಾ-ಬಂಡೂರಿ ಯೋಜನೆಗಳಿಗೆ ಸಂಬಂಧಿಸಿ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಅನುಮತಿ ಗಾಗಿ ಕರ್ನಾಟಕ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಪರಿಗಣಿಸಲು ಕೇಂದ್ರ ಪರಿಸರ, ಅರಣ್ಯ ಸಚಿವಾಲಯ ಅಥವಾ ವನ್ಯಜೀವಿ ಮಂಡಳಿಗಳಂತಹ ಕೇಂದ್ರೀಯ ಏಜೆನ್ಸಿಗಳಿಗೆ ಯಾವ ಅಡಚಣೆ ಇರದಿದ್ದರೂ, ಈ ಪರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಹಜವಾಗಿಯೇ ಮಹದಾಯಿ ಕಣಿವೆ ಜನರಲ್ಲಿ ಅನುಮಾನ ಹುಟ್ಟಿಸಿದೆ. ಕೇಂದ್ರ ಸರಕಾರ ಗೋವಾದ ಒತ್ತಡಕ್ಕೆ ಮಣಿದಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
2022ರ ಡಿ.22ರಂದು ಕೇಂದ್ರ ಜಲ ಆಯೋಗ ಕಳಸಾ-ಬಂಡೂರಿ ಯೋಜನೆಗಳ ಪರಿಷ್ಕೃತ ಯೋಜನಾ ವರದಿಗಳಿಗೆ ಅನುಮತಿ ನೀಡಿತ್ತು. 2023ರ ಏಪ್ರಿಲ್ 18ರಂದು ಸುಪ್ರೀಂಕೋರ್ಟ್ ಕೂಡ ಕಳಸಾ ಯೋಜನೆಗೆ ಸಂಬಂಧಿಸಿ ಕರ್ನಾಟಕದ ವಿರುದ್ಧ ಗೋವಾ ಕೋರಿದ್ದ ತಡೆಯಾಜ್ಞೆ ಮನವಿ ಯನ್ನು ಬದಿಗೆ ಸರಿಸಿತ್ತು.
2024ರ ಜನವರಿ ತಿಂಗಳಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪತ್ರ ಬರೆದಿದ್ದ ಗೋವಾ ಸರಕಾರ, ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಬೇಡಿ. ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ (ಚೀಫ್ ವೈಲ್ಡ್‌ಲೈಫ್ ವಾರ್ಡನ್) ಕಳಸಾ-ಬಂಡೂರಿ ನಾಲೆ ನಿರ್ಮಿಸುವ 2023ರ ಮಾರ್ಚ್ 29ರ ಕರ್ನಾಟಕ ಸರಕಾರದ ಆದೇಶವನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ಸೆಕ್ಷನ್ 29ರ ಅಡಿಯಲ್ಲಿ ನಿರ್ಬಂಧಿಸಿದ್ದಾರೆ ಎಂದು ವಿವರಿಸಿತ್ತು.
ಆದರೆ, ಇದಕ್ಕೆ ಆಕ್ಷೇಪಿಸಿದ್ದ ಕರ್ನಾಟಕ ; “ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸುವುದನ್ನು ಒಪ್ಪಲ ಸಾಧ್ಯ. ನಮ್ಮ ಮೇಲೆ ನಿರ್ಬಂಧ ಹೇರುವ ವಿಶೇಷಾಧಿಕಾರ ಅವರಿಗಿಲ್ಲ" ಎಂದಿತ್ತು. ಈ ಬಗೆಗಿನ ಲಿಖಿತ ಮಾಹಿತಿಯನ್ನು ಸುಪ್ರೀಂಕೋರ್ಟಿಗೂ ಕರ್ನಾಟಕ ನೀಡಿದೆ.
ನ್ಯಾಯಾಧೀಕರಣದ ಐತೀರ್ಪಿನ ಪ್ರಕಾರ, ಕೇಂದ್ರ ಜಲ ಆಯೋಗ ಮಹದಾಯಿ ನದಿಯಿಂದ ಕಳಸಾ ತಿರುವು ಯೋಜನೆ ಮುಖಾಂತರ 1.72 ಟಿಎಂಸಿ ನೀರು ಮತ್ತು ಬಂಡೂರಿ ತಿರುವು ಯೋಜನೆ ಯಡಿ 2.18 ಟಿಎಂಸಿ ನೀರನ್ನು ಮಲಪ್ರಭಾಕ್ಕೆ ತಿರುಗಿಸುವ ಕುರಿತ ಯೋಜನಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಅಂತೆಯೇ, 2020ರಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸಿತ್ತು.
ಆದರೆ, 2022ರಲ್ಲಿ ಪರಿಷ್ಕೃತ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ರಾಜ್ಯ ಸರಕಾರ, ‘ಪರ್ಯಾಯ ಬಂಡೂರಿ ಏತ ನೀರಾವರಿ’ ಯೋಜನೆ ಅಡಿಯಲ್ಲಿ ಆಣೆಕಟ್ಟಿನ ಎತ್ತರ ಇಳಿಕೆಯಾಗಲಿದ್ದು, ಪೈಪ್ ಸಿಸ್ಟಮ್ ಮೂಲಕ ನೀರು ಹರಿಯಲಿದೆ. ಬಂಡೂರಿ ಯೋಜನಾ ವೆಚ್ಚ ರೂ. 7991.50 ಕೋಟಿಯಿಂದ ರೂ.470 ಕೋಟಿಗೆ ಇಳಿಯಲಿದೆ ಎಂದು ತಿಳಿಸಿತ್ತು.
ಮುಖ್ಯವಾಗಿ, ಅರಣ್ಯ ಭೂಮಿ ಬಳಕೆ 183.8 ಹೆಕ್ಟೇರ್ ಗಳಿಂದ 21.62 ಹೆಕ್ಟೇರ್‌ಗಳಿಗೆ ಕಡಿಮೆ ಯಾಗಲಿದ್ದು, ಇದರಿಂದ ಯೋಜನೆ ಕಾರ್ಯಗತಗೊಳಿಸುವುದು ಸುಲಭವಾಗಲಿದೆ ಎಂದು ವಿವರಿಸಿತ್ತು. ಅದೇ ರೀತಿಯಾಗಿ, ‘ಪರ್ಯಾಯ ಕಳಸಾ ಏತ ನೀರಾವರಿ’ ಯೋಜನೆ ಅಡಿಯಲ್ಲಿ, ಕಳಸಾ ಅಣೆಕಟ್ಟಿನ ಎತ್ತರವೂ ತಗ್ಗಿ, ಯೋಜನಾ ವೆಚ್ಚ ರೂ 259.80 ಕೋಟಿಯಿಂದ ರೂ.885 ಕೋಟಿಗೆ ತಗ್ಗಲಿದೆ. ಇಲ್ಲಿಯೂ ಅರಣ್ಯ ಭೂಮಿ ಬಳಕೆ 166.38 ಹೆಕ್ಟೇರ್‌ಗಳಿಂದ 37.79 ಹೆಕ್ಟೇರ್ ಗಳಿಗೆ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿತ್ತು.
ಈ ಪರಿಷ್ಕೃತ ಡಿಪಿಆರ್‌ನ್ನು ಪರಿಗಣಿಸಿದ್ದ ಕೇಂದ್ರ ಜಲ ಆಯೋಗ, 2022ರ ಮಧ್ಯಭಾಗದಲ್ಲಿ ರಾಜ್ಯದ ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ಸೂಚಿಸಿತು. ಈ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯದೊಂದಿಗೂ ಹಂಚಿಕೊಂಡಿತ್ತು. ಜಲ ಆಯೋಗದ ವರದಿ ಪರಿಗಣಿಸಿದ್ದ ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯದ ಮಹದಾಯಿ ಯೋಜನೆಗೆ ಅನುಮತಿ ನೀಡಿರುವುದಾಗಿ 2022ರ ಡಿ.22ರಂದು ಅಧಿಸೂಚನೆ ಪ್ರಕಟಿಸಿತ್ತು.
ಆದರೆ, ಕೇಂದ್ರ ಪರಿಸರ-ಅರಣ್ಯ ಇಲಾಖೆಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳು ಅರಣ್ಯ-ಹಸಿರು ಸಮ್ಮತಿಯನ್ನು (ಗ್ರೀನ್ ಕ್ಲಿಯರೆನ್ಸ್) ಇದುವರೆಗೂ ನೀಡದಿರುವುದರಿಂದ ಕಳಸಾ-ಬಂಡೂರಿ ಯೋಜನೆ ಜಾರಿ ಸಾಧ್ಯವಾಗಿಲ್ಲ. ಮಹದಾಯಿ ನದಿಯಲ್ಲಿ ವಾರ್ಷಿಕವಾಗಿ 188 ಟಿಎಂಸಿ ನೀರು ಹರಿಯುತ್ತದೆ ಎಂದು ನ್ಯಾಯಾಧೀಕರಣ ಅಂದಾಜಿಸಿದ್ದರೂ, ಮೂರು ರಾಜ್ಯಗಳಿಗೆ 37 ಟಿಎಂಸಿ ನೀರಿನಲ್ಲಿ ಮಾತ್ರ ಪರಸ್ಪರ ಹಂಚಿಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ, ಮಹದಾಯಿ ವಿಷಯದಲ್ಲಿ ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ ಗೊಂದಲ ಸೃಷ್ಟಿಸಲೆಂದೇ ಗೋವಾ ಸಿಎಂ ಕೇಂದ್ರ ಅನುಮತಿ ನೀಡುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎನ್ನುವುದು ಸುಸ್ಪಷ್ಟ. ಕಳಸಾ-ಬಂಡೂರಿ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶವಾಗಲಿದೆ ಎನ್ನುವುದು ನಿಜಕ್ಕೂ ಕೇಂದ್ರ ಸರಕಾರದ ಕಳವಳವಾಗಿದ್ದರೆ, ಇದನ್ನು ನೇರವಾಗಿ ತಿಳಿಸಬೇಕು.
ವಿನಾಕಾರಣ ವಿಳಂಬ ಧೋರಣೆ ಅನುಸರಿಸುವಲ್ಲಿ ಅರ್ಥವಿಲ್ಲ. ಐತೀರ್ಪು ಬಂದು 7 ವರ್ಷ ಕಳೆದರೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವಾಲಯವೊಂದು ಒಪ್ಪಿಗೆ ನೀಡಲು ಮೀನಾಮೇಷ ಎಣಿಸುವುದು ರಾಜ್ಯವೊಂದರ ಜನರಿಗೆ ಮಾಡುವ ಅನ್ಯಾಯ. ಅನುಮತಿ ನೀಡು ವುದು ಕಷ್ಟ ಎನ್ನುವುದೇ ನಿಲುವಾಗಿದ್ದರೆ ಅದನ್ನು ಖಚಿತವಾಗಿ ತಿಳಿಸುವ ಧೈರ್ಯವನ್ನಾದರೂ ಪ್ರದರ್ಶಿಸಬೇಕು.
ಈ ಕಾರಣಕ್ಕಾಗಿಯೇ, ಕರ್ನಾಟಕ ಪರ್ಯಾಯ ಯೋಜನೆಗಳ ಬಗ್ಗೆಯೂ ಆಲೋಚಿಸಬೇಕು ಎನ್ನುವುದು ಸುಪ್ರೀಂಕೋರ್ಟ್ ಹಿರಿಯ ವಕೀಲ ಮೋಹನ್ ಕಾತರಕಿ ಅಭಿಮತ. ವಾಯುವ್ಯ ಕರ್ನಾಟಕದಲ್ಲಿ ನದಿಗಳ ಜೋಡಣೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಎನ್ನುವ ಅವರು, ಕೃಷ್ಣಾ ನದಿಯಿಂದ ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ನೀರನ್ನು ವರ್ಗಾಯಿಸಬಹುದು. ಘಟಪ್ರಭಾ ಮತ್ತು ಮಲಪ್ರಭಾ ಎರಡೂ ನೀರಿನ ಅಭಾವ ಎದುರಿಸುತ್ತಿರುವ ಕೃಷ್ಣಾ ನದಿಯ ಉಪ-ಜಲಾನಯನ ಪ್ರದೇಶಗಳಾಗಿವೆ.
ನದಿ ಜೋಡಣೆ ಯೋಜನೆಯು ಹಿಡಕಲ್ ಆಣೆಕಟ್ಟು, ಬೆಳಗಾವಿ ಕುಡಿಯುವ ನೀರು, ಮಲಪ್ರಭಾ ಉಪ-ಜಲಾನಯನ ಪ್ರದೇಶ ಮತ್ತು ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳ ನೀರಿನ ಅಗತ್ಯಗಳನ್ನು ಪೂರೈಸಬಹುದು. ಇದಕ್ಕಾಗಿ ಕೃಷ್ಣಾ ನದಿಯಿಂದ ನೀರನ್ನು ವರ್ಗಾಯಿಸುವ ಮೂಲಕ ಎರಡೂ ಉಪ-ಜಲಾನಯನ ಪ್ರದೇಶಗಳ ನೀರಿನ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ವಿವರಿಸುತ್ತಾರೆ.
ಕಳಸಾ ಬಂಡೂರಿ ಯೋಜನೆಯಿಂದ ಮಲಪ್ರಭಾದಲ್ಲಿ 3.9 ಟಿಎಂಸಿ ನೀರು ಹೆಚ್ಚಿಸುವುದು ಸ್ವಲ್ಪ ಮಟ್ಟಿಗೆ ಸಹಾಯ ಮಾಡಲಿದೆ. ಆದರೆ, ಮಲಪ್ರಭಾದಲ್ಲಿನ ಪೂರ್ಣ ಕೊರತೆ ಮತ್ತು ಘಟಪ್ರಭಾ ದಲ್ಲಿನ ಕೆಲ ಮಟ್ಟಿನ ಕೊರತೆಯನ್ನು ಕೃಷ್ಣಾ ನ್ಯಾಯಾಧೀಕರಣದಿಂದ ಕರ್ನಾಟಕಕ್ಕೆ ಹಂಚಿಕೆ ಯಾದ ಪಾಲಿನ ಘಟಪ್ರಭಾ ಮತ್ತು ಮಲಪ್ರಭಾವನ್ನು ಕೃಷ್ಣಾದೊಂದಿಗೆ ಜೋಡಿಸುವ ಮೂಲಕ ಪೂರೈಸಬಹುದು ಎನ್ನುತ್ತಾರೆ ಕಾತರಕಿ.
ಅವರ ಅಭಿಪ್ರಾಯಗಳನ್ನು ರಾಜ್ಯ ಸರಕಾರ ಪರಿಗಣಿಸುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿನ ಗೊಂದಲ ಮತ್ತು ವಿಳಂಬಗಳು ರಾಜ್ಯದ ಮಹದಾಯಿ-ಮಲಪ್ರಭಾ ಕಣಿವೆ ಜನರ ಹತಾಶೆಯನ್ನು ವಿಸ್ತರಿಸುತ್ತಲೇ ಇದೆ.
(ಲೇಖಕರು ಹಿರಿಯ ಪತ್ರಕರ್ತರು)