Harish Kera Column: ಮುದ್ದು ಪರ್ವತ ಪಿಶಾಚಿಗಳು ಕರೆಯುತ್ತಿವೆ!
‘ರಾತ್ರಿಯಾದರೆ ಇಲ್ಲೆಲ್ಲ ಹಿಮಚಿರತೆ ಓಡಾಡುತ್ತೆ ಸರ್’ ಎಂದು ಗೈಡ್ ತಶಿ ಹೇಳಿದ. ಅವನು ಹೇಳಿದ್ದು ನಿಜ ಎಂಬಂತೆ ಊರಿನ ರೈತರ ಮನೆಯ ಹಿಂಬದಿಯ ಹಸಿ ಮಣ್ಣಿನಲ್ಲಿ ಬಿದ್ದ ಹೆಜ್ಜೆ ಗುರುತುಗಳನ್ನು ತೋರಿಸಿದ. ರೈತರು ದನ, ಯಾಕ್, ಆಡು ಸಾಕಿದ್ದರು. ಅವುಗಳನ್ನು ತಿನ್ನಲು ಹಿಮಚಿರತೆ ದನದ ಕೊಟ್ಟಿಗೆಯ ಕಡೆಗೆ ರಾತ್ರಿ ಬಿಜಯಂಗೈಯುತ್ತಿತ್ತು
-
ಕಾಡುದಾರಿ
ಅದು 2010ರ ಒಂದು ಸಂಜೆ. ತುದಿಯಲ್ಲಿ ಹಿಮ ಹೊದ್ದ ಬೆಟ್ಟಗಳು ಮೌನವಾಗಿ ಕೂತಿದ್ದವು. ಅಲ್ಲಿಂದ ಕರಗಿದ ನೀರು ಸಣ್ಣ ಎಳೆಯಾಗಿ ಬಂದು ತೊರೆಯಾಗಿ ಕಣಿವೆಯಲ್ಲಿ ಹರಿಯುತ್ತಿತ್ತು. ದೂರದಲ್ಲಿ ಎಲ್ಲೋ ಹಸಿರು ಮೇಯುವ ಯಾವುದೋ ಪ್ರಾಣಿ ಸಣ್ಣದಾಗಿ ಕೂಗುತ್ತಿತ್ತು. ಸಂಜೆ ಯಾಗುತ್ತ, ಬೆಟ್ಟಗಳ ತಪ್ಪಲಿನಲ್ಲಿ ಬಿಸಿಲು ನಿಧಾನವಾಗಿ ಮರೆಯಾಗುತ್ತಿತ್ತು. ಗಂಡಸರು ಬಯಲಿಗೆ ಬಂದು ಸೋಮಾರಿಗಳಾಗಿ ಹಾಲಿಲ್ಲದ ಚಾಯ್ ಸವಿಯುತ್ತ ಬಿಸಿಲು ಕಾಯಿಸುತ್ತ ಕೂತಿದ್ದರು. ಹೆಂಗಸರು ಸಣ್ಣ ಮಕ್ಕಳನ್ನು ಬೆನ್ನಲ್ಲಿ ಕಟ್ಟಿಕೊಂಡು ಬಟ್ಟೆ ಹೊರೆ ಹೊತ್ತು ಓಡಾಡುತ್ತಿದ್ದರು. ಯಾಕ್‌ಗಳು, ಆಡುಗಳು ಅಲ್ಲಲ್ಲಿ ಮೇಯುತ್ತಿದ್ದವು. ನಮ್ಮಂತೆಯೇ ಹೊರಗಿನಿಂದ ಬಂದ ಒಂದೆರಡು ಅತಿಥಿಗಳು ಹೋಂಸ್ಟೇಯ ಕಟ್ಟೆಯಲ್ಲಿ ಇದನ್ನೆಲ್ಲ ನೋಡುತ್ತ ಕುಳಿತಿದ್ದೆೆವು. ಸಮಯ ಮುಂದಕ್ಕೆ ಹೋಗುವುದೇ ಬೇಡ ಎಂಬಂತೆ ತೆವಳುತ್ತಿತ್ತು.
‘ರಾತ್ರಿಯಾದರೆ ಇಲ್ಲೆಲ್ಲ ಹಿಮಚಿರತೆ ಓಡಾಡುತ್ತೆ ಸರ್’ ಎಂದು ಗೈಡ್ ತಶಿ ಹೇಳಿದ. ಅವನು ಹೇಳಿದ್ದು ನಿಜ ಎಂಬಂತೆ ಊರಿನ ರೈತರ ಮನೆಯ ಹಿಂಬದಿಯ ಹಸಿ ಮಣ್ಣಿನಲ್ಲಿ ಬಿದ್ದ ಹೆಜ್ಜೆ ಗುರುತುಗಳನ್ನು ತೋರಿಸಿದ. ರೈತರು ದನ, ಯಾಕ್, ಆಡು ಸಾಕಿದ್ದರು. ಅವುಗಳನ್ನು ತಿನ್ನಲು ಹಿಮಚಿರತೆ ದನದ ಕೊಟ್ಟಿಗೆಯ ಕಡೆಗೆ ರಾತ್ರಿ ಬಿಜಯಂಗೈಯುತ್ತಿತ್ತು. ಹಿಮಾಲಯದ ಚಳಿಗೆ ಒಂದು ಜೀವವೂ ರಾತ್ರಿ ಹೊರಗೆ ತಲೆ ಹಾಕುವುದಿಲ್ಲ. ನಾಯಿಗಳು ಕೂಡ ಒಳಗೆ ಬೆಚ್ಚಗೆ ಮಲಗಿರುತ್ತವೆ. ಚಿರತೆ ಬಂದು ಹೋದದ್ದು ಗೊತ್ತೇ ಆಗುವುದಿಲ್ಲ. ಬೆಳಗ್ಗೆ ದನವಿಲ್ಲದಿರುವುದು ನೋಡಿದ ಮೇಲೇ ಗೊತ್ತಾಗೋದು. ಇನ್ನ ಮೇಯಲು ಬಿಟ್ಟ ದನಗಳನ್ನು ಹಿಮಚಿರತೆ ಬೇಟೆ ಆಡುವುದು ಸಾಮಾನ್ಯ. ತನ್ನ ದೇಹದ ತೂಕದ ಮೂರು ಪಟ್ಟು ಭಾರದ ಪ್ರಾಣಿಗಳನ್ನ ಅದು ಸಲೀಸಾಗಿ ಕೊಂದು ಕಚ್ಚಿಕೊಂಡು ಹೋಗುತ್ತದೆ.
ಇದನ್ನೂ ಓದಿ: Harish Kera Column: ಕೊನೆಯಿರದ ಕಲಹ, ನರ-ವಾನರರಿಗೆ ಒಂದೇ ತರಹ
ಹಿಮಚಿರತೆ ಅಂದರೆ ಭೂತ, ಪ್ರೇತ, ಪಿಶಾಚಿ- ಏನು ಬೇಕಾದರೂ ಹೇಳಿ. ನಾವು ನೀವು ಬಿಡಿ, ಹಿಮಾಲಯದ ಕುಗ್ರಾಮಗಳಲ್ಲಿ, ಬೆಟ್ಟದ ಮೇಲಿನ ಊರುಗಳಲ್ಲಿ ವಾಸಿಸುವ ಎಷ್ಟೋ ಮಂದಿ ಕೂಡ ಅದನ್ನು ನೋಡಿರುವುದಿಲ್ಲ. ಗುಡ್ಡಗಳಲ್ಲಿ ಓಡಾಡುವ, ದನ ಮೇಯಿಸುವ ಕೆಲವು ಮಂದಿ ನೋಡುತ್ತಾರೆ. ಹಿಮವತ್ಪರ್ವತಗಳ ಬಂಡೆಗಳ ನಡುವೆ ಎಲ್ಲೋ ಅದು ವಾಸಿಸುತ್ತದೆ. ಅದರ ಹುಟ್ಟು, ಪ್ರೇಮ, ಸಂಸಾರ, ಸಾವು ಎಲ್ಲ ಅಲ್ಲೇ. ಹಿಮದ ರಾಶಿಯ ಮೇಲೆ ಅದು ಕುಳಿತಿದ್ದರೆ ಬೆಣ್ಣೆಯ ಮೇಲೆ ಬೆಣ್ಣೆ ಮುದ್ದೆ ಇಟ್ಟಂತಿರುತ್ತದೆ- ನರಮನುಷ್ಯರ ಕಣ್ಣಿಗೆ ಕಾಣಿಸುವ ಯಾವ ಸಾಧ್ಯತೆಯೂ ಇಲ್ಲ. ಹೀಗಾಗಿ ಅದು ಘೋಸ್‌ಟ್ ಆಫ್ ಮೌಂಟೈನ್‌ಸ್- ಹಿಮಪರ್ವತಗಳ ಭೂತ. ಕಂಡರೆ ನಿಮ್ಮ ಪುಣ್ಯ. ಆದರೆ ಬೆಕ್ಕಿನಂತೆಯೇ ತುಂಬ ಮುದ್ದಾದ ಮೃಗ ನೋಡನೋಡುತ್ತಿದ್ದಂತೆ ಕತ್ತಲಾಯಿತು. ಚಳಿ ದಟ್ಟವಾಯಿತು. ಪರ್ವತಗಳ ಮೇಲಿನಿಂದ ಸೂಜಿಯಿಂದ ಚುಚ್ಚಿದಂತೆ ತಂಗಾಳಿ. ತಶಿ ಕ್ಯಾಂಪ್ ಫೈರ್ ಹಾಕಿದ. ಹಿಮಬೆಟ್ಟಗಳಲ್ಲಿ ಉರುವಲು ಸಿಗುವುದು ಕಷ್ಟ. ಬೆರಣಿ ಬಳಸುವುದು ಹೆಚ್ಚು. ಬೆಂಕಿ ಸುತ್ತ ಕುಳಿತವರು ಕತೆ ಹೇಳತೊಡಗಿದರು. ಹಿಮಚಿರತೆ ಎಂದರೆ ಹಿಂದೆ ಸತ್ತವರ ಭೂತ. ಅದು ಕಲ್ಲುಗಳ ನಡುವೆ ಕಲ್ಲಾಾಗಿ ಕೂತಿರುತ್ತದೆ. ನೀವು ಏನಾದರೂ ಹಿರಿಯರು ಮೆಚ್ಚದಂಥ ಕೆಲಸ ಮಾಡಿದರೆ ಬೆಟ್ಟದಿಂದ ಕೆಳಗೆ ಬಂದು ನಿಮ್ಮ ಜಾನುವಾರುಗಳನ್ನು ಹೊತ್ತು ಕೊಂಡು ಹೋಗುತ್ತದೆ. ಅದಕ್ಕೇ ಬೆಟ್ಟದ ಕುರಿಗಳನ್ನು, ಐಬೆಕ್‌ಸ್‌ಗಳನ್ನು ಬೇಟೆ ಆಡಕೂಡದು. ಅದರ ಪಾಡಿಗೆ ಅವುಗಳನ್ನು ತಿಂದುಕೊಂಡು ಅಲ್ಲೇ ಇರುತ್ತದೆ ಎಂದ ಒಬ್ಬ.
ಅವನು ನಮ್ಮವರಲ್ಲೇ ಒಬ್ಬ. ಹಿಂದೆ ಯಾವತ್ತೋ ಅಣ್ಣನಿಗೂ ತಮ್ಮನಿಗೂ ಆಸ್ತಿ ಪಾಲು ಮಾಡು ವಲ್ಲಿ ಜಗಳವಾಯಿತು. ಅಣ್ಣನಿಗೆ ಎಲ್ಲ ಆಡುಗಳನ್ನು ಕೊಟ್ಟರು, ತಮ್ಮನಿಗೆ ಸಿಗಲಿಲ್ಲ. ಹತಾಶನಾದ ತಮ್ಮ ರಾತ್ರಿ ಬಂದು ಅಣ್ಣದ ದೊಡ್ಡಿಯಿಂದ ಆಡು ಕದ್ದ. ಅಣ್ಣ ಸಿಟ್ಟಿನಿಂದ ತಮ್ಮನನ್ನು ವಿಷ ವಿಟ್ಟು ಕೊಂದು ಹಾಕಿದ. ಅಂದಿನಿಂದ ತಮ್ಮ ಹಿಮಚಿರತೆಯಾಗಿ ರಾತ್ರಿ ಬಂದು ನಮ್ಮ ಜಾನುವಾರು ಕದ್ದೊಯ್ಯುತ್ತಾನೆ. ಅವನೂ ಬದುಕಬೇಕಲ್ವಾ ಸಾರ್ ಎಂದ ಇನ್ನೊಬ್ಬ. ಬಯಲು ಸೀಮೆಯ ತೋಳಗಳ ಬಗ್ಗೆ ಅಲ್ಲಿನ ಕುರಿಗಾಹಿಗಳೂ ಇಂಥದೇ ಕತೆ ಹೇಳುತ್ತಾರೆ. ಇಂಥ ನಂಬಿಕೆಗಳು ವಿಶ್ವವ್ಯಾಪಿ. ಇಂಥ ಕತೆಗಳು ಹಿಮಾಲಯದಲ್ಲಿ ಹಿಮಚಿರತೆಗಳು ಸಾಕಷ್ಟು ಇರುವ ಹಿಮಾಚಲ ಪ್ರದೇಶದ ಸ್ಪಿಟಿ ವ್ಯಾಲಿಯಿಂದ ಹಿಡಿದು ದೂರದ ನೇಪಾಳದ ಬೆಟ್ಟಗಾಡುಗಳವರೆಗೂ ವ್ಯಾಪಿಸಿದೆ.
ರಾತ್ರಿ ಟೆಂಟ್ ಒಳಗೆ ಮೈಚಾಚಿದೆವು. ಕೆಳಗೆ ಕಣಿವೆಯಲ್ಲಿ ಹರಿಯುವ ನದಿಯ ಸಪ್ಪಳ. ಗ್ರಾಮ ದೊಳಗಿನ ಕೆಲವು ಮನೆಗಳಿಂದ ಸಣ್ಣ ಗುಣುಗುಣು. ಬೆಟ್ಟಗಳ ಮೇಲಿನಿಂದ ಅಪರಿಚಿತ ಪ್ರಾಣಿಗಳ ಕೂಗುಗಳು. ಮಧ್ಯರಾತ್ರಿ ಯಾಕೋ ಎಚ್ಚರವಾಯಿತು. ಎದ್ದು ಟೆಂಟ್‌ನಿಂದ ಹೊರಗೆ ಬಂದರೆ ರಪ್ಪರಪ್ಪನೆ ಬೀಸುತ್ತಿದ್ದ ಕುಳಿರ್ಗಾಳಿಗೆ ಮೈ ಮರಗಟ್ಟಿತು. ಟೆಂಟ್ ಹೂಡಿದ ಬಯಲಿನಿಂದ ಆಚೆಗೆ ತುಸು ದೂರದಲ್ಲಿ ಎತ್ತರಕ್ಕೆೆ ನಿಂತಿದ್ದ ಬೆಟ್ಟದ ಮಗ್ಗುಲಲ್ಲಿ ಎರಡು ನಕ್ಷತ್ರಗಳು ಮಿನುಗಿದಂತಾದವು. ಯಾವುದೋ ಪ್ರಾಣಿಯ ಕಂಗಳು. ಅವು ಹಿಮಚಿರತೆಯ ಕಂಗಳಿರಬಹುದೆ? ಬೆನ್ನುಮೂಳೆಯಲ್ಲಿ ಮಿಂಚೊಂದು ಸಂಚರಿಸಿತು.
**
ಹಿಮಾಲಯದ ಎತ್ತರದ ಪರ್ವತಗಳ ನಡುವೆ ನೆಲೆಸಿರುವ ಸ್ಪಿಟಿ ಕಣಿವೆ ಇಂದು ವಿಶ್ವದ ವನ್ಯಜೀವಿ ಪ್ರಯರನ್ನು ಸೆಳೆಯುವ ತಾಣ. ಸಾಕಷ್ಟು ಜನ ಪ್ರವಾಸಿಗಳು ಇಲ್ಲಿ ಹಿಮಚಿರತೆ ನೋಡುವುದಕ್ಕೆ ಇಂದು ಧಾವಿಸಿ ಬರುತ್ತಾರೆ. ಆದರೆ ಕೆಲವೇ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಇದೇ ಪ್ರದೇಶದ ಜನ ಹಿಮ ಚಿರತೆಗಳನ್ನು ತಮ್ಮ ಶತ್ರುಗಳೆಂದು ಪರಿಗಣಿಸುತ್ತಿದ್ದರು. ಈಗ ಅದೇ ಹಿಮ ಚಿರತೆಗಳು ಗ್ರಾಮಸ್ಥರ ಪಾಲಿಗೆ ಕೃಪೆಯಾಗಿ, ಅನ್ನವಾಗಿ ಮಾರ್ಪಟ್ಟಿವೆ.
ಸ್ಪಿಟಿಯ ಹೆಚ್ಚಿನ ಜನರ ಆದಾಯದ ಮೂಲ ಪಶುಸಂಗೋಪನೆ ಮತ್ತು ಕೃಷಿ. ಕುರಿ, ಮೇಕೆ, ಯಾಕ್ ಅವರ ಸಾಕುಪ್ರಾಣಿಗಳು. ಆದರೆ ಹಿಮಚಿರತೆ ಮತ್ತು ತೋಳಗಳು ದಾಳಿಯೆಸಗಿ ಸಾಕಷ್ಟು ಜಾನುವಾರುಗಳನ್ನು ತಿನ್ನುತ್ತಿದ್ದವು. ಸಹಜವಾಗಿ ಇದರಿಂದ ನಷ್ಟ ಅನುಭವಿಸುತ್ತಿದ್ದ ಸ್ಥಳೀಯರು ಈ ಪ್ರಾಣಿಗಳನ್ನು ಮಾಂಸದಲ್ಲಿ ವಿಷವಿಕ್ಕಿಯೋ, ಉರುಳು ಇಟ್ಟೋ, ಗುಂಡಿಕ್ಕಿಯೋ ಕೊಲ್ಲು ತ್ತಿದ್ದರು. ಹಿಮ ಚಿರತೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂಬ ಅಭಿಪ್ರಾಾಯವೂ ಹಲವರಲ್ಲಿತ್ತು. 90ರ ದಶಕದಲ್ಲಿ ಪರಿಸ್ಥಿತಿ ಹೀಗಿತ್ತು.
ಸ್ಪಿಟಿಯ ಕೀ, ಕಾಝಾ, ಕಿಬ್ಬರ್, ತಾಬೋ ಮೊದಲಾದವು ಸೊಗಸಾದ ಬೆಟ್ಟದೂರುಗಳು. ಇಲ್ಲೆಲ್ಲ ಬೌದ್ಧರ ಸಮುದಾಯಗಳು ನೆಲೆಸಿವೆ. ಬೌದ್ಧ ವಿಹಾರಗಳು ಹೇರಳ. ಲಡಾಖ್‌ನಿಂದ ಬರುತ್ತಿದ್ದ ಬೌದ್ಧರು ಇಲ್ಲಿನ ಪ್ರಾಣಿಗಳ ಉಣ್ಣೆ ಮತ್ತಿತರ ಉತ್ಪನ್ನ ಖರೀದಿಸುತ್ತಿದ್ದರು. ದವಸಧಾನ್ಯ ಕೊಡು ತ್ತಿದ್ದರು. ನಿಧಾನವಾಗಿ ಇಲ್ಲಿ ಬಟಾಣಿ ಮೊದಲಾದ ಬೆಳೆ ಬೆಳೆಯತೊಡಗಿದರು. ಆದರೂ ಹಿಮ ಚಿರತೆ ಕೇಡಿಗ ಎಂಬ ಭಾವ ಹೋಗಲಿಲ್ಲ. ಈ ಪರಿಸ್ಥಿತಿಯಲ್ಲಿ 1996ರಲ್ಲಿ ಸಂಶೋಧಕ ಚಾರುದತ್ತ ಮಿಶ್ರಾ ಸ್ಪಿಟಿಗೆ ಆಗಮಿಸಿದರು. ಮಾನವ- ವನ್ಯಪ್ರಾಣಿ ಸಂಘರ್ಷವನ್ನು ಅಧ್ಯಯನ ಮಾಡಿದರು. ಸ್ಥಳೀಯರಿಗೆ ಒಂದು ಹೊಸ ಪ್ರಯೋಗವನ್ನು ಸೂಚಿಸಿದರು.
ಹಾಗೆ ಗ್ರಾಮದ ಕೆಲವು ಮೇವು ಪ್ರದೇಶಗಳನ್ನು ಕಾಡು ಪ್ರಾಣಿಗಳಿಗಾಗಿ ಮೀಸಲಿಡಲಾಯಿತು. ಅಲ್ಲಿ ಜಾನುವಾರುಗಳನ್ನು ಮೇಯಿಸದ ಕಾರಣ, ಕಾಡು ಕುರಿಗಳಾದ ಬ್ಲೂ ಶೀಪ್‌ಗಳ ಸಂಖ್ಯೆ ವೇಗವಾಗಿ ಹೆಚ್ಚಾಯಿತು. ಇದರೊಂದಿಗೆ ಅವುಗಳನ್ನು ಬೇಟೆಯಾಡುವ ಹಿಮ ಚಿರತೆಗಳೂ ಆ ಪ್ರದೇಶಕ್ಕೆ ಹೆಚ್ಚಾಗಿ ಬಂದು ಕಾಡು ಕುರಿಗಳನ್ನು ಕೊಂದು ತಿನ್ನಲಾರಂಭಿಸಿದವು. ಆದರೆ ಮಿಕ ಹೆಚ್ಚಾದಂತೆ ಬೇಟೆಗಾರ ಪ್ರಾಣಿಗಳೂ ಹೆಚ್ಚಬೇಕಲ್ಲ? ಹಿಮಚಿರತೆಗಳೂ ಹೆಚ್ಚಿದವು. ಹಾಗಾಗಿ ಜಾನುವಾರುಗಳ ಮೇಲಿನ ದಾಳಿಯೂ ಮುಂದುವರಿಯಿತು. ಇದನ್ನು ತಡೆಯಲು 2002ರಲ್ಲಿ ಸಮುದಾಯ ಆಧಾರಿತ ಜಾನುವಾರು ವಿಮಾ ಯೋಜನೆಯನ್ನು ಆರಂಭಿಸಲಾಯಿತು. ಹಿಮಚಿರತೆಗಳಿಂದ ಜಾನುವಾರು ಸತ್ತರೆ, ಗ್ರಾಮಸ್ಥರಿಗೆ ವಿಮೆ ದೊರೆಯಿತು.
ನಿಧಾನವಾಗಿ, ಹಿಮಚಿರತೆಗಳನ್ನು ಪ್ರವಾಸಿಗಳ ಆಕರ್ಷಣೆ ಯಾಕಾಗಿಸಬಾರದು, ಎಂಬ ಯೋಚನೆ ಬಂತು. ಪೀಟರ್ ಮ್ಯಾಾಥೀಸಿಯಾನ್ ಎಂಬ ಪರಿಸರವಾದಿ, ಇಂಗ್ಲಿಷ್ ಲೇಖಕ ಹಿಮಾಲಯದಲ್ಲಿ ಸಂಚರಿಸಿ ಬರೆದಿದ್ದ ‘ಸ್ನೋ ಲೆಪರ್ಡ್’ ಎಂಬ ಅನುಭವ ಕೃತಿ ಜನಪ್ರಿಯ. ಇದರಲ್ಲಿ ಹಿಮಚಿರತೆ ಯನ್ನು ಹುಡುಕುವುದು ಒಂದು ಆಧ್ಯಾತ್ಮಿಕ ಅನುಭವದಂತೆ ಎಂದು ಬರೆದುಕೊಂಡಿದ್ದಾರೆ. 1978ರಲ್ಲಿ ಇವರು ಬಂದು ಹಿಮಾಲಯದಲ್ಲಿ ತಂಗಿ, ಎರಡು ತಿಂಗಳ ಕಾಲ ಈ ಮಾಯಾಜೀವಿಯ ಶೋಧ ನಡೆಸಿದ್ದರು. ಅವರಿಗೆ ಇದು ದರ್ಶನ ನೀಡಿರಲೇ ಇಲ್ಲ. ಪೀಟರ್ ತಮ್ಮ ಗದ್ಯದಲ್ಲಿ ಹಿಮಾಲಯದ ಅನುಭವವನ್ನು ಹಿಮಚಿರತೆಯೊಂದಿಗೆ ಸಮೀಕರಿಸಿ ಬೇರೊಂದು ಎತ್ತರಕ್ಕೆ ಎತ್ತುತ್ತಾರೆ. ಹುಲಿ ನೋಡಲು ಭಾರತಕ್ಕೆ, ಸಿಂಹ ನೋಡಲು ಆಫ್ರಿಕಕ್ಕೆ ಹೋಗುವವರಂತೆ ಹಿಮ ಚಿರತೆ ನೋಡಲು ಹಿಮಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚತೊಡಗಿತ್ತು. ಅವರ ಗಮನ ಸೆಳೆಯಲು ಪ್ರಯತ್ನ ಮಾಡಲಾಯಿತು. ಸ್ಥಳೀಯರಿಗೆ ಶಿಕ್ಷಣ ನೀಡಿ ಗೈಡ್‌ಗಳನ್ನು ಸಿದ್ಧಪಡಿಸ ಲಾಯಿತು. ಸ್ಪಿಟಿಯಲ್ಲಿ ಹೋಂಸ್ಟೇಗಳು, ರೆಸಾರ್ಟ್‌ಗಳು, ಲೆಪರ್ಡ್ ಟ್ರಯಲ್‌ಗಳು ಹೆಚ್ಚಿದವು.
ಈ ಎಲ್ಲದರ ಪರಿಣಾಮವಾಗಿ ಗ್ರಾಮಸ್ಥರ ಮನೋಭಾವದಲ್ಲಿ ದೊಡ್ಡ ಬದಲಾವಣೆ ಕಂಡುಬಂತು. ಹಿಮ ಚಿರತೆಗಳನ್ನು ಶತ್ರುಗಳಾಗಿ ನೋಡುವ ಬದಲು ಅವುಗಳನ್ನು ಸಂರಕ್ಷಿಸುವ ಮನೋಭಾವ ಬೆಳೆಯಿತು. ಸ್ಪಿಟಿ, ಕಿಬ್ಬರ್ ಪ್ರದೇಶದಲ್ಲಿ ಹಿಮಚಿರತೆಗಳ ದರ್ಶನ ಸುಲಭವಾಗತೊಡಗಿದಂತೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸತೊಡಗಿದರು. ವಿಶೇಷವಾಗಿ ಈಗ ಚಳಿಗಾಲದಲ್ಲಿ ಹಿಮಚಿರತೆ ಗಳನ್ನು ನೋಡಲು ಸಾವಿರಾರು ವನ್ಯಜೀವಿ ಪ್ರೇಮಿಗಳು ಬರುತ್ತಾರೆ.
ಒಂದು ಕಾಲದಲ್ಲಿ ಕಿಬ್ಬರ್‌ನಲ್ಲಿ ಕೇವಲ ಒಂದು ಅಥವಾ ಎರಡು ಹೋಂಸ್ಟೇಗಳು ಮಾತ್ರ ಇದ್ದವು. ಇಂದು ಗ್ರಾಾಮದ ಅರ್ಧಕ್ಕೂ ಹೆಚ್ಚು ಮನೆಗಳು ಚಳಿಗಾಲದ ಹೋಂಸ್ಟೇಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಮಾರ್ಗದರ್ಶಕರು, ಟ್ರ್ಯಾಕರ್‌ಗಳು, ಪೋರ್ಟರ್‌ಗಳು ಸೇರಿದಂತೆ ಅನೇಕ ಉದ್ಯೋಗಗಳು ಸೃಷ್ಟಿಯಾಗಿವೆ. ಗ್ರಾಮದ ಮಹಿಳೆಯರೂ ಈ ಬದಲಾವಣೆಯ ಭಾಗವಾಗಿದ್ದಾರೆ. ಅವರು ತಯಾರಿಸುವ ಉಣ್ಣೆಯ ಮಫ್ಲರ್, ಕೈಗವಸು, ಸಾಕ್ಸ್ ಹಾಗೂ ಹಿಮಚಿರತೆ ಚಿತ್ರ-ಕಸೂತಿ ಇರುವ ಸ್ಮರಣಿಕೆಗಳಿಗೆ ಪ್ರವಾಸಿಗರಿಂದ ಒಳ್ಳೆಯ ಬೇಡಿಕೆ ಇದೆ. ಇದರಿಂದ ಅವರಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ.
ಕೆಲ ವರ್ಷಗಳ ಹಿಂದಿನ ಅಂದಾಜಿನ ಪ್ರಕಾರ, ಕಿಬ್ಬರ್ ಗ್ರಾಮ ಮಾತ್ರವೇ ಚಳಿಗಾಲದ ಎರಡು-ಮೂರು ತಿಂಗಳಲ್ಲಿ ಸುಮಾರು 1.25 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಈ ಪ್ರವಾಸೋದ್ಯಮದಿಂದ ಗ್ರಾಮದ ಬಹುತೇಕ ಕುಟುಂಬಗಳಿಗೆ ನೇರ ಅಥವಾ ಪರೋಕ್ಷ ಲಾಭವಿದೆ. ‘ಒಂದು ಕಾಲದಲ್ಲಿ ನಾವು ಹಿಮ ಚಿರತೆಯನ್ನು ದೆವ್ವದಂತೆ ನೋಡುತ್ತಿದ್ದೆವು. ಈಗ ಅದನ್ನು ದೇವರಂತೆ ಕಾಣುತ್ತೇವೆ’ ಎಂಬುದು ಸ್ಥಳೀಯ ಗೈಡ್ ಲಾರಾ ತ್ಸೆರಿಂಗ್ ಮಾತು.
ಸ್ಪಿಟಿಯ ಈ ಯಶೋಗಾಥೆಯಿಂದ ನಮಗೆ ಒಂದು ವಿಷಯ ಗೊತ್ತಾಗುತ್ತದೆ. ವನ್ಯಜೀವಿ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯಗಳ ಅಭಿವೃದ್ಧಿ ಒಂದೇ ಸಮಯದಲ್ಲಿ ಸಾಧ್ಯ ಎಂಬುದದು. ಒಮ್ಮೆ ಜನರ ಶತ್ರುವಾಗಿದ್ದ ಹಿಮಚಿರತೆ ಇಂದು ಸ್ಪಿಟಿಯ ಜನರ ಜೀವನೋಪಾಯ. ಹಾಗಂತ ಸ್ಪಿಟಿಗೆ ಧಾವಿಸಿ ಬರುತ್ತಿರುವ ಪ್ರವಾಸಿಗರ ಹಿಂಡು, ಆ ಸಂಖ್ಯೆೆ ನಿಧಾನವಾಗಿ ಬೆಟ್ಟದೂರಿನ ಒತ್ತಡ ಹೆಚ್ಚಾಗಲೂ ಕಾರಣವಾಗಿದೆ. ಆ ವಿಚಾರ ಇನ್ನೊಮ್ಮೆ.
ಅಂದು ನಮಗೆ ಹಿಮಚಿರತೆ ಕಂಡಿರಲಿಲ್ಲ. ಇಂದು ಹಿಮಚರತೆ ಕಾಣುವ ಸಾಧ್ಯತೆ ಹೆಚ್ಚು ಇದೆ. ಬೆಟ್ಟಗಳು, ಅವುಗಳ ನಡುವಿನಿಂದ ಹಿಮಚಿರತೆಗಳ ಕೂಗು ಕೇಳಿಸುತ್ತಿದೆ.