ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shishir Hegde Column: ಧ್ಯಾನವೆಂದರೆ ರುಚಿಗೆ ತಕ್ಕಷ್ಟು ಉಪ್ಪು!

ವ್ಯಾಪಾರಿ ಉಪಕಾರ ಮರೆಯಲಿಲ್ಲ. ಕೆಲ ದಿನಗಳ ನಂತರ ಕಾಡಿನ ಮುಖ್ಯಸ್ಥನನ್ನು ಕರೆತರಲು ನಾಲ್ಕು ಜನರನ್ನು ಕಳುಹಿಸಿ ಕೊಟ್ಟ. ಅವರ ಜೊತೆಯಾದ ಕಾಡುಜನರ ಮುಖ್ಯಸ್ಥ ವ್ಯಾಪಾರಿಯ ಊರು, ಮನೆಗೆ ಬಂದುಮುಟ್ಟಿದ. ಅಲ್ಲಿ ಅವನಿಗೆ ಭವ್ಯ ಸ್ವಾಗತ, ಭೂರಿ ಭೋಜನ ಎಲ್ಲಾ ವ್ಯವಸ್ಥೆ ಯಾಗಿತ್ತು. ಊಟದ ಪ್ರತಿಯೊಂದು ಪದಾರ್ಥವೂ ಕಾಡುಜನರ ಮುಖ್ಯಸ್ಥನಿಗೆ ಹೊಸ ಅನುಭವ, ಪರಮಾದ್ಭುತ ರುಚಿ. ಊಟ ಮಾಡುವಾಗ ಅವನದು ಒಂದೇ ಪ್ರಶ್ನೆ- ಆಹಾರಕ್ಕೆ ಈ ದಿವ್ಯ ರುಚಿ ಯಾವುದರಿಂದ? ವ್ಯಾಪಾರಿಗೆ ಅವನ ಪ್ರಶ್ನೆ ಅರ್ಥವಾಯಿತು

ಧ್ಯಾನವೆಂದರೆ ರುಚಿಗೆ ತಕ್ಕಷ್ಟು ಉಪ್ಪು!

-

ಶಿಶಿರಕಾಲ

ತಲೆ-ಹರಟೆ- 4

ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ ಇದ್ದ. ಅವನೊಮ್ಮೆ ತನ್ನ ಜೊತೆಗಾರರೊಂದಿಗೆ ದಟ್ಟಾರಣ್ಯದ ಮೂಲಕ ಇನ್ನೊಂದು ಊರಿಗೆ ಪ್ರಯಾಣ ಮಾಡುತ್ತಿದ್ದ. ಆಗ, ಕಾಡದಾರಿಯಲ್ಲಿ ವ್ಯಾಪಾರಿ ತನ್ನ ಜೊತೆಗಾರರಿಂದ ಬೇರೆಯಾಗಿಬಿಟ್ಟ. ಅವನಿಗೆ ದಾರಿ ತಪ್ಪಿ ಹೋಯಿತು. ವ್ಯಾಪಾರಿ ಮತ್ತು ಉಳಿದವರು ಪರಸ್ಪರ ‘ಇಲ್ಲಿದ್ದೇವೆ, ನಾವಿಲ್ಲಿದ್ದೇವೆ’ ಎಂದು ಕೂಗಿದರೆ ಪ್ರತಿಧ್ವನಿ ದಿಕ್ಕು ತಪ್ಪಿಸಿಬಿಟ್ಟಿತು. ಅವರು ತೆಂಕಣಕ್ಕೆ, ವ್ಯಾಪಾರಿ ಬಡಗಣಕ್ಕೆ - ಕಾಡಿನ ಮಾಯಾವಿ ‘ದಿಕ್ಕು ಬಳ್ಳಿ’ ದಾಟಿದವನಂತೆ! ಬೇರೆಯಾಗಿಬಿಟ್ಟರು. ವ್ಯಾಪಾರಿಗೆ ಎ ಸುತ್ತು ಹೊಡೆದು ಸಂಜೆಯಾದರೂ ಜೊತೆಯವರು ಮತ್ತು ಊರಿನ ದಾರಿ ಸಿಗಲೇ ಇಲ್ಲ. ಸಂಜೆಯಾಗಿಹೋಗಿದೆ. ಕಾಡಿನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಬಚಾವಿಲ್ಲ.

ಅಷ್ಟಾಗುವಾಗ ವ್ಯಾಪಾರಿಗೆ ಅ ದೂರದಲ್ಲಿ, ಕಾಡಿನ ಮಧ್ಯೆ ಕಪ್ಪು ಹೊಗೆ ಕಾಣಿಸಿತು. ಹುಡುಕಿ ಕೊಂಡು ಹೋಗಿ ನೋಡಿದರೆ ಕಾಡು ಜನರು. ಅವರು ವ್ಯಾಪಾರಿಯನ್ನು (ಫಾರ್ ಅ ಚೆಂಜ್) ಹಿಡಿದು ತಿನ್ನಲಿಲ್ಲ! ಬದಲಿಗೆ ಪ್ರೀತಿಯಿಂದ ಸ್ವಾಗತಿಸಿದರು. ಊಟ ಕೊಟ್ಟರು. ಮಲಗಲು ಬೆಚ್ಚನೆಯ ಜಾಗ ಕೊಟ್ಟರು. ವ್ಯಾಪಾರಿಗಂತೂ ಅವರ ಆದರಾತಿಥ್ಯ ಬಹಳ ಇಷ್ಟವಾಗಿ ಹೋಯ್ತು. ಎಷ್ಟೆಂದರೆ ಅವನು ಒಂದೆರಡು ದಿನ ಅಲ್ಲಿಯೇ ಉಳಿದುಕೊಂಡುಬಿಟ್ಟ. ಪ್ರಕೃತಿಯ ಮಧ್ಯೆ ಅಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಒಂದೇ ದೊಡ್ಡ ಸಮಸ್ಯೆ. ಅವರು ಕೊಟ್ಟ ಊಟ ಮಾತ್ರ ಅವನಿಗೆ ತಿನ್ನಲಿಕ್ಕಾಗುತ್ತಿರಲಿಲ್ಲ. ಪ್ರತಿಯೊಂದು ಆಹಾರವೂ ಸಪ್ಪೆ ಸಪ್ಪೆ. ಉಪ್ಪಿಲ್ಲದ ಆಹಾರ. ವ್ಯಾಪಾರಿ ‘ಉಪ್ಪು ಎಲ್ಲಿ? ಸ್ವಲ್ಪ ಕೊಡಿ’ ಎಂದು ಕೇಳಿದರೆ ಅವರಿಗೆ ಆ ಶಬ್ದವೇ ಹೊಸತು. ‘ಉಪ್ಪು’ ಎಂದರೇನು ಎಂದೇ ಗೊತ್ತಿಲ್ಲ. ಆ ಗೊಂಡಾರಣ್ಯ ಮಧ್ಯೆ ಅವರಿಗೆಲ್ಲಿ ಉಪ್ಪು ಸಿಗಬೇಕು? ಹಾಗಾಗಿ ಅವರು ಯಾರೂ ಉಪ್ಪನ್ನು ಜೀವಮಾನದಲ್ಲಿ ರುಚಿಸಿಯೂ ಇರಲಿಲ್ಲ, ನೋಡಿಯೂ ಇರಲಿಲ್ಲ. ಎರಡು ಮೂರು ದಿನ ಅಲ್ಲಿ ಕಳೆದ ಮೇಲೆ ವ್ಯಾಪಾರಿಯನ್ನು ಊರಿನ ದಾರಿಗೆ ಮುಟ್ಟಿಸಲು ಅಲ್ಲಿನ ನಾಲ್ಕು ಜನರು ತಯಾರಾದರು. ಹೊರಡುವಾಗ ವ್ಯಾಪಾರಿ ಅಲ್ಲಿನ ಮುಖ್ಯಸ್ಥನಲ್ಲಿ ‘ನಿಮ್ಮ ಆದರಾತಿಥ್ಯಕ್ಕೆ ನಾನು ಮನಸೋತಿದ್ದೇನೆ. ನೀವು ಒಮ್ಮೆ ನಮ್ಮೂರಿಗೆ ಬರಬೇಕು, ಬಂದು ನನ್ನ ಆತಿಥ್ಯವನ್ನು ಕೂಡ ಸ್ವೀಕರಿಸಬೇಕು. ನಾನು ಊರಿಗೆ ಹೋದ ಮೇಲೆ ನಮ್ಮವರನ್ನು ಕಳುಹಿಸಿ ಕೊಡುತ್ತೇನೆ. ನೀವು ಅವರ ಜೊತೆ ಬನ್ನಿ’ ಎಂದು ಹೊರಟ.

ಇದನ್ನೂ ಓದಿ: Shishir Hegde Column: ತಲೆಯೊಳಗೆ ಇನ್ನೊಬ್ಬಳಿದ್ದಾಳೆ, ಹೆಸರು ಸಾಕ್ಷಿ !

ವ್ಯಾಪಾರಿ ಉಪಕಾರ ಮರೆಯಲಿಲ್ಲ. ಕೆಲ ದಿನಗಳ ನಂತರ ಕಾಡಿನ ಮುಖ್ಯಸ್ಥನನ್ನು ಕರೆತರಲು ನಾಲ್ಕು ಜನರನ್ನು ಕಳುಹಿಸಿ ಕೊಟ್ಟ. ಅವರ ಜೊತೆಯಾದ ಕಾಡುಜನರ ಮುಖ್ಯಸ್ಥ ವ್ಯಾಪಾರಿಯ ಊರು, ಮನೆಗೆ ಬಂದುಮುಟ್ಟಿದ. ಅಲ್ಲಿ ಅವನಿಗೆ ಭವ್ಯ ಸ್ವಾಗತ, ಭೂರಿ ಭೋಜನ ಎಲ್ಲಾ ವ್ಯವಸ್ಥೆ ಯಾಗಿತ್ತು. ಊಟದ ಪ್ರತಿಯೊಂದು ಪದಾರ್ಥವೂ ಕಾಡುಜನರ ಮುಖ್ಯಸ್ಥನಿಗೆ ಹೊಸ ಅನುಭವ, ಪರಮಾದ್ಭುತ ರುಚಿ. ಊಟ ಮಾಡುವಾಗ ಅವನದು ಒಂದೇ ಪ್ರಶ್ನೆ- ಆಹಾರಕ್ಕೆ ಈ ದಿವ್ಯ ರುಚಿ ಯಾವುದರಿಂದ? ವ್ಯಾಪಾರಿಗೆ ಅವನ ಪ್ರಶ್ನೆ ಅರ್ಥವಾಯಿತು. ಅಸಾಮಿ ಉಪ್ಪಿನ ಬಗ್ಗೆ ಕೇಳುತ್ತಿzನೆ ಎಂದು. ಅಲ್ಲಿಯೇ ದೊಡ್ಡ ಪಾತ್ರೆಯತ್ತ ಕೈ ಮಾಡಿ, ಇದೇ ಉಪ್ಪು ಎಂದು ತೋರಿಸಿದ. ವ್ಯಾಪಾರಿ ಮಾತು ಮುಗಿಸಿಲ್ಲ, ಮುಖ್ಯಸ್ಥ ಒಂದು ಹಿಡಿ ಉಪ್ಪನ್ನು ಬಾಚಿ ಬಾಯಿಗೆ ಹಾಕಿಕೊಂಡುಬಿಟ್ಟ! ಮುಂದೇನಾಯಿತು? ಮುಷ್ಟಿ ಉಪ್ಪು ಬಾಯಿಗೆ ಬಾಚಿಕೊಂಡರೆ ಏನಾಗಬೇಕಿತ್ತೋ ಅದುವೇ ಆಯಿತು.

ಧ್ಯಾನವೂ ಥೇಟ್ ಉಪ್ಪಿನ ಹಾಗೆಯೇ. ಹೇಗೆ ದೇಹಕ್ಕೆ ವ್ಯಾಯಾಮವೋ ಹಾಗೆ ಮನಸ್ಸಿಗೆ ಧ್ಯಾನ ಎಂದೆನಲ್ಲ. ವ್ಯಾಯಾಮವನ್ನು ಒಳ್ಳೆಯದೆಂದು ಇಡೀ ದಿನ, ಹಗಲು ರಾತ್ರಿ ವ್ಯಾಯಾಮ ಮಾಡಬೇಕಿಲ್ಲವಲ್ಲ. ಹಾಗೆಯೇ ಧ್ಯಾನ. ನಿತ್ಯ ಸ್ವಲ್ಪ ಹೊತ್ತಿನ ಕಸರತ್ತು ಸಾಕು. ಆದರೆ ಇಲ್ಲಿಯೂ ಕಸರತ್ತಿನ ಕೌಶಲ್ಯದೊಂದಿಗೆ, ನಿಯಮಿತತೆ ಎಲ್ಲಕ್ಕಿಂತ ಮುಖ್ಯ.

ಯೋಗ ಪಶ್ಚಿಮಕ್ಕೆ ಹೋಗುವಾಗ ಒಂದು ದೊಡ್ಡ ಯಡವಟ್ಟಾಗಿದೆ. ಯೋಗವೆಂದರೆ ಹೆಚ್ಚಿನ ಕಡೆ ಕೇವಲ ವ್ಯಾಯಾಮವಾಗಿ ಹೋಗಿ, ಈಗ ಅದುವೆ ನಮ್ಮಲ್ಲಿ ವಾಪಸ್ ಬಂದು ಯೋಗವೆಂದರೆ ಕೇವಲ ದೈಹಿಕ ಕಸರತ್ತು ಎಂದಾಗಿಬಿಟ್ಟಿದೆ. ಯೋಗಾಸನ ಮಾಡುವುದು ಬೇರೆ - ಯೋಗ ಬೇರೆ. ಯೋಗವೆಂದರೆ ಅದರಲ್ಲಿ ಹಠ ಯೋಗ ದೇಹಕ್ಕಾದರೆ ಧ್ಯಾನ ಮನಸ್ಸಿಗೆ- ಮಾನಸಿಕ ಆರೋಗ್ಯಕ್ಕೆ. ಹಿಂದಿನ ವಾರದ ತಲೆಹರಟೆಗೆ ಬಂದ ಕೆಲವು ಪ್ರತಿಕ್ರಿಯೆಯನ್ನು ಗಮನಿಸಿದಾಗ ಇದೊಂದು ವಿಷಯ ಹೇಳಬೇಕೆನಿಸುತ್ತಿದೆ. ಧ್ಯಾನ ಇಂದಿನ ಆಚರಣೆಯ ದೇವರ ಪೂಜೆ ಅಲ್ಲ. ಅಥವಾ ಗಡಿಬಿಡಿಯಲ್ಲಿ ಮಾಡುವ ಸಂಧ್ಯಾವಂದನೆ, ಕೈಂಕರ್ಯ ಯಾವುದು ಕೂಡ ಅಲ್ಲ. ಆದರೆ ಒಂದು ಮಜವೆಂದರೆ ಈ ‘ಧ್ಯಾನ’ ಎನ್ನುವುದು ದೇವರ ಪೂಜೆ, ಮಂತ್ರಗಳಲ್ಲಿ ಘಳಿಗೆಗೊಮ್ಮೆ ಬರುತ್ತದೆ. ವೈದಿಕರನ್ನು ಕರೆಯಿಸಿ ಮಾಡುವ ಪೂಜೆಗಳಲ್ಲಿ, ‘ಅಥ ಧ್ಯಾನಮ’ ಮುಂದೆ ಧ್ಯಾನ ಎನ್ನುವುದನ್ನು ಕೇಳಿರುತ್ತೀರಿ. ಪೂಜೆ ಮಾಡಿಸುವವರು, ಮಾಡುವವರು ಸಾಮಾನ್ಯವಾಗಿ ಬೇಗ ಮುಗಿಸುವ ಗಡಿಬಿಡಿಯಲ್ಲಿ ಒಂದು ಸೌಟು ನೀರನ್ನು ಬಿಟ್ಟು ಧ್ಯಾನವನ್ನು ದೇವರಿಗೆ ನೀನೇ ಮಾಡಿಕೋ ಎಂದುಬಿಡುತ್ತೇವೆ. ವೈದಿಕರು, ಈಗೀಗ ಬೆಂಗಳೂರಿನ ಕಡೆ ಅವರನ್ನು ಗುರೂಜಿ ಎಂದು ಕರೆಯು ವುದು. ಅವರಲ್ಲಿ ಹೆಚ್ಚಿನವರು ಜೀವಮಾನದಲ್ಲಿ ಅದೆಷ್ಟೋ ಪೂಜೆ ಸಾಗಿಸಿದ್ದರೂ, ಒಮ್ಮೆಯೂ, ಒಂದೇ ಒಂದು ಕ್ಷಣವೂ ಧ್ಯಾನ ಮಾಡಿರುವುದಿಲ್ಲ.

Screenshot_6 ok

ನಾನಿಲ್ಲಿ ಹೀಗೆ ಕುಳಿತುಕೊಳ್ಳಿ, ಹೀಗೆ ಮಾಡಿ ಎಂದು ಧ್ಯಾನ ಮಾಡುವುದು ಹೇಗೆ ಎಂದೆಲ್ಲ ವಿವರಿಸು ವುದಿಲ್ಲ. ಬದಲಿಗೆ ಯಾವುದು ಧ್ಯಾನವಲ್ಲ ಎನ್ನುವುದನ್ನು ಹೇಳಬೇಕೆನಿಸುತ್ತಿದೆ. ಧ್ಯಾನ ಸುಮ್ಮನೆ ಕೂತು ಯೋಚಿಸುವುದಲ್ಲ. ಅಥವಾ ಏಕಾಗ್ರತೆ ಕೂಡ ಅಲ್ಲ, ದೇವರ ರೂಪವನ್ನು ಕಲ್ಪಿಸಿ ಕೊಳ್ಳುವುದು, ಪ್ರಾರ್ಥನೆ, ಪೂಜೆ, ಆರತಿ, ವಿಶ್ರಾಂತಿ, ನಿದ್ರೆ, ಹಗಲುಗನಸು, ಯೋಚನೆಗಳನ್ನು ಹಿಡಿದು ನಿಲ್ಲಿಸುವುದು, ಜೀವನದ ಅಸಲಿಯತ್ತಿನಿಂದ ಒಂದಿಷ್ಟು ಹೊತ್ತು ಹೊರಗುಳಿವ ಎಸ್ಕೇಪ್ ಮಾರ್ಗ, ಧಾರ್ಮಿಕ ರಿವಾಜು, ಏನೇನೋ ಅತಿಮಾನುಷ ಅನುಭವ ಇದು ಯಾವುದೂ ಅಲ್ಲವೇ ಅಲ್ಲ. ಧ್ಯಾನವೆಂದರೆ ಮಾನಸಿಕ ಕಸರತ್ತು. ಜಿಮ್‌ಗೆ ಹೋಗಿ ಸಿಕ್ಕದ್ದನ್ನೆ ಒಮ್ಮೆ ಎತ್ತಿ ಬಂದರೆ ಹೃತಿಕ್ ರೋಷನ್ ಆಗಿಬಿಡುವುದಿಲ್ಲವಲ್ಲ!! ನಿಯಮಿತವಾಗಿ ಜಿಮ್‌ಗೆ ಹೋದರೂ ಸರಿಯಾಗಿ ವ್ಯಾಯಾಮ ಮಾಡದೆ, ಕಾಲು ಸಪೂರವಾಗಿ ಕೈ ಮಾತ್ರ ಸನ್ನಿ ಡಿಯೋಲ್‌ನಂತಾಗಿರುವವರನ್ನು ನೋಡಿರುತ್ತೀರಿ. ಹಾಗೆಯೇ ಧ್ಯಾನ. ಇದನ್ನು ಕಲಿಯುವುದಿದೆ. ಯಾವುದೇ ಕಲಿಕೆಯಂತೆ ಇದಕ್ಕೊಂದಿಷ್ಟು ತಯಾರಿ ಯೂ ಬೇಕಿರುತ್ತದೆ. ಆಗ ಧ್ಯಾನ ರುಚಿಸುತ್ತದೆ. ಸರಿಯಾದ ವ್ಯಾಯಾಮ ಮಾಡಿದರಷ್ಟೇ ಜಿಮ್ ಸಹ್ಯವಾಗುವಂತೆ, ಇಷ್ಟವಾಗುವಂತೆ, ಲಾಭವಾಗುವಂತೆ, ಮರಳಿ ಹೋಗುವಂತೆ, ಸರಿಯಾಗಿ ಕಲಿತ ಧ್ಯಾನ ಮಾತ್ರ ಪ್ರಯೋಜನಕ್ಕೆ ಬರುತ್ತದೆ. ಇಲ್ಲದಿದ್ದರೆ ಬರೀ ಸುಸ್ತು. ಮಾನಸಿಕ ಸುಸ್ತು ನಮ್ಮ ಉಮೇದಿಯನ್ನು ಕುಗ್ಗಿಸಿಬಿಡುತ್ತದೆ.

ಧ್ಯಾನದ ಬಗ್ಗೆ ಸಾವಿರ ಪುಸ್ತಕಗಳಿವೆ. ಈಗಂತೂ ಲಕ್ಷ ಪುಸ್ತಕಗಳೇ ಇರಬಹುದು. ಆದರೆ ಮೂಲ ವೆನ್ನಿಸುವ ಕೆಲವೇ ಕೆಲವು. ಈಗ ಸುಮಾರು ನಾಲ್ಕರಿಂದ ಆರು ಸಾವಿರ ವರ್ಷಗಳಿಂದ ಯೂಟ್ಯೂಬ್ ಇಲ್ಲವಾಗಿದ್ದರಿಂದ ಪತಂಜಲಿ ಇತ್ಯಾದಿ ಮಾಡಿರುವ ಪಾಡ್ಕಾ ಸಿಗುವುದಿಲ್ಲ! ಋಗ್ವೇದದಲ್ಲಿ ತಪಸ್ಸು, ಏಕಾಗ್ರತೆ, ಅಂತರ್ಶುದ್ಧಿ ಇತ್ಯಾದಿ ವಿಷಯಪ್ರಸ್ತಾಪ ಇದೆ, ಅದುವೆ ಮೂಲ ಎಂಬೊಂದು ಅನಿಸಿಕೆಯಿದೆ. ಇನ್ನು ಕೆಲವು ಇತಿಹಾಸಕಾರರ ಪ್ರಕಾರ ಸಿಂಧು ನಾಗರಿಕತೆಯ ಉತ್ಖನನ ಸಮಯದಲ್ಲಿ ಸಿಕ್ಕ ಶಿವ - ಪಶುಪತಿ ಸೀಲ(ಠಸ್ಸೆ) ಧ್ಯಾನದ ಮೊದಲ ಕುರುಹು ಎನ್ನಲಾಗುತ್ತದೆ.

ಋಗ್ವೇದದಲ್ಲಿದೆ ಎಂದಾದರೆ ಧ್ಯಾನ ಅದಕ್ಕಿಂತ ಮೊದಲಿನ ಆವಿಷ್ಕಾರ ಎಂದಾಯಿತು! ಆದರೆ ಸ್ಪಷ್ಟವಾದ ಧ್ಯಾನದ ವಿವರಗಳು ಸಿಗುವುದು ಕಠ, ಮುಂಡಕ ಮತ್ತು ಛಾಂದೋಗ್ಯ ಉಪನಿಷತ್ತು ಗಳಲ್ಲಿ. ಇಂದು ನಮಗೆ ಲಭ್ಯವಿರುವ ಧ್ಯಾನ ವಿಧಾನಗಳು ಆ ನಂತರದಲ್ಲಿ ಅಭಿವೃದ್ಧಿ ಹೊಂದಿರ ಬಹುದು, ಅಥವಾ ಅದು ದಾಖಲಾದದ್ದು ಆಯಾ ಕಾಲದಲ್ಲಿರಬಹುದು. ಇಂಥದ್ದಕ್ಕೆಲ್ಲ ಇತಿಹಾಸ - ಮೂಲ ಹುಡುಕಿ ಹೊರಟರೆ ಪ್ರಯೋಜನವೇನಿಲ್ಲ. ಅದು ಉಪ್ಪನ್ನು ಯಾರು ಮೊದಲು ಕಂಡುಹಿಡಿದರು, ತಿಂದರು ಎಂಬ ಪ್ರಶ್ನೆಯಷ್ಟೇ ಅಪ್ರಸ್ತುತ. ಭಗವದ್ಗೀತೆ, ಪತಂಜಲಿ ಯೋಗ ಸೂತ್ರ, ಸತಿಪಟ್ಠಾನ, ಆನಪಾನಸತಿ- ಬೌದ್ಧ ಸೂತ್ರ (ಸುತ್ತಗಳು), ಕ್ರಿಯಾ ಯೋಗ, ನಾದ ಯೋಗ ಹೀಗೆ ನಿಮಗೊಂದು ಉದ್ದದ ಪಟ್ಟಿ ಗೂಗಲ್‌ನಲ್ಲಿ ಸಿಗುತ್ತದೆ. ಇವೆಲ್ಲ ಉಪ್ಪುಗಳೇ- ಕಲ್ಲು ಉಪ್ಪು, ಸಮುದ್ರದ ಉಪ್ಪು, ಗೋಕರ್ಣದ ಉಪ್ಪು, ಪಾಕಿಸ್ತಾನದ ಹಿಮಾಲಯನ್ ಪಿಂಕ್ ಸಾಲ್ಟ ಹೀಗೆ ವೈವಿಧ್ಯ ಇರುವಂತೆ. ಒಟ್ಟಾರೆ ಧ್ಯಾನ ನಡೆದು ಬಂದ ದಾರಿ ಯಾವುದು ಎಂದು ಕೇಳಿದರೆ ವೇದ- ಉಪನಿಷತ್ತುಗಳು- ಪತಂಜಲಿ- ಆನಂತರದಲ್ಲಿ ಕಾಶ್ಮೀರಿ ಶೈವರು.

ಹಾಗಾದರೆ ಎಷ್ಟು ರೀತಿಯಲ್ಲಿ ಧ್ಯಾನ ಸಾಧ್ಯ? ೧೧೨. ಬರೋಬ್ಬರಿ ನೂರಾ ಹನ್ನೆರಡು ರೀತಿಯಲ್ಲಿ ಮಾತ್ರ ಸಾಧ್ಯ. ಅದಕ್ಕಿಂತ ಒಂದು ಹೆಚ್ಚು, ಒಂದು ಕಡಿಮೆ ಇಲ್ಲ. ಇದು ಧ್ಯಾನದ -ಲ್ ಲಿ. ಕಾಶ್ಮೀರಿ ಶೈವ ಪರಂಪರೆಯ- ‘ವಿeನ ಭೈರವ ತಂತ್ರ’ದಲ್ಲಿ ಈ ನೂರಾಹನ್ನೆರಡು ವಿಧಾನಗಳ ಪಟ್ಟಿ ಇದೆ. ಇದನ್ನು ಶಿವ ಪಾರ್ವತಿಗೆ ಹೇಳಿದ ಮಾತುಕತೆಯ ರೂಪದಲ್ಲಿದೆ. ಬುದ್ಧ, ಜೆನ್, ಓಶೋ, ಅರಬಿಂದೋ, ರಾಮಕೃಷ್ಣ ಪರಮಹಂಸರು, ಶಿವಾನಂದರು, ರಮಣ ಮಹರ್ಷಿ, ಚಿನ್ಮಯಾ ನಂದರು, ನೀಮ್ ಕರೋಲಿ ಬಾಬಾ, ಶ್ರೀಶ್ರೀ, ಸದ್ಗುರು, ಎಕ್ಹಾರ್ಟ್ ಟೋಲ್, ಅಮೃತಾನಂದಮಯಿ ಎಲ್ಲರೂ ಕಲಿಸಿದ, ಕಲಿಸುವ ಧ್ಯಾನ ಸಾಮಾನ್ಯವಾಗಿ ಅವರವರ ಮೂಲದ ಹಿನ್ನೆಲೆ ಪ್ರತ್ಯೇಕವೇ ಆದರೂ ಅದೆಲ್ಲವೂ ಈ 112ರ ಪಟ್ಟಿಯಲ್ಲಿಯೇ ಒಂದಾಗಿರುತ್ತದೆ. ವಿಜ್ಞಾನ ಭೈರವ ತಂತ್ರವೇ ಧ್ಯಾನಕ್ಕೆ ಮೂಲವೆಂದಲ್ಲ. ಇದೊಂದು ಮಾಸ್ಟರ್ ಲಿಸ್ಟ್. ಜಗತ್ತಿನ ಎಲ್ಲ ಉಪ್ಪಿನ ವೈವಿಧ್ಯಗಳ ಪೂರ್ಣ ಕ್ಯಾಟಲಾಗ್ ಇದ್ದಂತೆ.

ಬುದ್ಧ ಕುಳಿತು ಉಸಿರನ್ನು ಗಮನಿಸುವ ಮೂಲಕ ಧ್ಯಾನ ಮಾಡಿ ಎಂದ. ಝೆನ್ ಪರಂಪರೆ ‘ಸುಮ್ಮನೆ ಕುಳಿತುಕೋ’ ಎನ್ನುತ್ತದೆ. ಅದೇ ಝೆನ್‌ನಲ್ಲಿ ‘ಕಿನ್ಹಿನ್’ ಎಂದು ನಡೆಯುತ್ತಲೇ ಮಾಡುವ ಧ್ಯಾನವೂ ಇದೆ! ವೇದಾಂತ ‘ನಾನು ಯಾರು?’ ಎಂದು ಕೇಳಿಕೊಳ್ಳುತ್ತ ಹೋಗಿ ಎನ್ನುತ್ತದೆ. ಭಕ್ತಿ ಪರಂಪರೆಯಲ್ಲಿ ನಾಮಸ್ಮರಣೆಯೇ ಧ್ಯಾನ. ವಿeನ ಭೈರವದ ನೂರಾ ಹನ್ನೆರಡರ ಪಟ್ಟಿಯಲ್ಲಿ ಉಸಿರು, ಶಬ್ದ, ಬೆಳಕು, ಕತ್ತಲೆ, ಸಂತೋಷ, ದುಃಖ, ನೋವು, ಪ್ರೀತಿ- ಯಾವುದನ್ನಾದರೂ ಧ್ಯಾನದ ಬಾಗಿಲಾಗಿಸಬಹುದು. ಮಾರ್ಗ ನೂರಾ ಹನ್ನೆರಡು. ಗಮ್ಯ ಮಾತ್ರ ಒಂದೇ- ತಲೆಯೊಳಗಿನ ನಿರಂತರ ಹರಟೆಯಿಂದ ಒಂದೆರಡು ಹೆಜ್ಜೆ ದೂರ ನಿಂತು ಅದನ್ನು ನೋಡುವುದು.

ಹಾಗಿದ್ದರೆ ಈ ನೂರಾ ಹನ್ನೆರಡರಲ್ಲಿ ನನಗೆ, ಅಥವಾ ನಿಮಗೆ ಸರಿಯಾದ ವಿಧಾನ ಯಾವುದು? ಈ ಪ್ರಶ್ನೆಯೇ ತಪ್ಪು. ಇದು ‘ಯಾವ ವ್ಯಾಯಾಮ ಸರಿ?’ ಎಂದು ಕೇಳಿದಂತೆ. ಒಬ್ಬರು ಓಡುತ್ತಾರೆ, ಇನ್ನೊಬ್ಬರು ಈಜುತ್ತಾರೆ, ಮತ್ತೊಬ್ಬರು ಜಿಮ್ಮಿನಲ್ಲಿ ಬೆವರು ಸುರಿಸುತ್ತಾರೆ. ಗುರಿ ಒಂದೇ- ದೇಹದ ಆರೋಗ್ಯ. ವಿಧಾನ ಅವರವರ ಜಾಯಮಾನಕ್ಕೆ ಹೊಂದಿಕೆಯಾಗಬೇಕು. ಧ್ಯಾನವೂ ಹಾಗೆಯೇ. ಕೆಲವರಿಗೆ ಉಸಿರಿನ ಮೇಲೆ ಗಮನವಿಡುವುದು ಸಲೀಸು. ಕೆಲವರಿಗೆ ನಡೆಯುವ ಧ್ಯಾನ ಒಗ್ಗುತ್ತದೆ. ಇನ್ನು ಕೆಲವರಿಗೆ ಪ್ರಕೃತಿಯ ನಡುವೆ ಸುಮ್ಮನೆ ಕುಳಿತರೆ ಸಾಕು, ಮನಸ್ಸು ನೆಲೆಗೊಳ್ಳುತ್ತದೆ. ಗೋಕರ್ಣದ ಉಪ್ಪೋ, ಹಿಮಾಲಯನ್ ಪಿಂಕ್ ಸಾಲ್ಟೋ- ಉಪ್ಪು ಉಪ್ಪೇ.

ಧ್ಯಾನದ ವಿಷಯದಲ್ಲಿ ದೊಡ್ಡ ಸಮಸ್ಯೆ ಎಂದರೆ ನಮ್ಮ ನಿರೀಕ್ಷೆ. ಧ್ಯಾನ ಮೊದಲ ದಿನವೇ ಫಲ ಕೊಡಬೇಕು. ಜಿಮ್ಮಿಗೆ ಮೊದಲ ದಿನ ಹೋಗಿಬಂದು ಕನ್ನಡಿಯ ಮುಂದೆ ನಿಂತು ‘ಸ್ನಾಯು ಫ್ಲೆಕ್ಸ್‌’ ಮಾಡಿಕೊಳ್ಳುವವರಂತೆ. ಧ್ಯಾನದಲ್ಲೂ ಹಾಗೆಯೇ- ಮೊದಲ ದಿನವೇ ಧ್ಯಾನ ದಕ್ಕುವುದಿಲ್ಲ. ಬದಲಿಗೆ ಆರಂಭದಲ್ಲಿ ಧ್ಯಾನಕ್ಕೆ ಕುಳಿತಾಗ ತಲೆಯೊಳಗಿನ ವಕೀಲ, ನ್ಯಾಯಾಧೀಶ, ಜ್ಯೋತಿಷಿ ಇತ್ಯಾದಿ ಹರಗಣಗಳೆಲ್ಲ ದಂಗೆಯೆದ್ದುಬಿಡುತ್ತಾರೆ. ಐದೇ ನಿಮಿಷದಲ್ಲಿ ತಲೆ ಚಿಟ್ಟು ಹಿಡಿದು ಸಾಕೆನಿಸಿಬಿಡುತ್ತದೆ.

ಹಾಗಾದರೆ ಎಲ್ಲಿಂದ ಶುರು? ಬಹಳ ಸರಳ. ದಿನಕ್ಕೆ ಕೇವಲ ಮೂರು ನಿಮಿಷ. ಮೊಬೈಲನ್ನು ಇನ್ನೊಂದು ಕೋಣೆಯಲ್ಲಿಟ್ಟು ಸುಮ್ಮನೆ ಕಣ್ಣುಮುಚ್ಚಿ ಕುಳಿತುಕೊಳ್ಳಿ. ಉಸಿರು ಬರುವುದನ್ನು, ಹೋಗುವುದನ್ನು ಗಮನಿಸಿ. ಯೋಚನೆ ಬಂದರೆ ಅದರ ಹಿಂದೆ ಹೋಗಬೇಡಿ, ಓಡಿಸಲೂಬೇಡಿ. ಯೋಚನೆಯನ್ನು ಗಮನಿಸಿ. ಮತ್ತೆ ಮನಸ್ಸನ್ನು ಉಸಿರಿಗೆ ತನ್ನಿ. ಅಷ್ಟೆ. ಮೂರು ನಿಮಿಷ ಇಷ್ಟನ್ನೇ ಮಾಡಿದರೆ ಸಾಕು. ತಲೆಯ ಯಾವುದೇ ಕಥೆಯನ್ನು, ಕಲ್ಪನೆಯನ್ನು ಮುಂದುವರಿಸಬೇಡಿ. ಸುಮ್ಮನೆ ಗಮನಿಸಿ. ಮೂರೇ ಮೂರು ನಿಮಿಷ. ಒಂದು ಕಾಳು ಉಪ್ಪಿನ ರುಚಿ ಗೊತ್ತಾಗಲು ಸಾಕು. ಆದರೆ ಇದು ಕೇವಲ ಒಂದು ಕಾಳು ಮಾತ್ರ. ಇದು ರುಚಿಗೆ ಸಾಕು- ಆದರೆ ನಿತ್ಯ ಅಡುಗೆಗೆ ಪ್ರಯೋಜನವಿಲ್ಲ. ಉಸಿರಿನ ಮೇಲೆ ಗಮನ ಇಡುವುದು- ಕೇವಲ ಒಂದು ಧ್ಯಾನ ಪ್ರಕಾರದ ಮೊದಲ ಹಂತ. ಇದನ್ನೇ ಮುಂದುವರಿಸಿಕೊಂಡು ಹೋಗಿ- ನಾನೇ ಧ್ಯಾನವನ್ನು ಆವಿಷ್ಕರಿಸಿಬಿಡುತ್ತೇನೆ ಎನ್ನುವುದು ಮೂರ್ಖತನ. ಜಿಮ್ಮಿಗೆ ಹೋಗಿ ನಾನೇ ವ್ಯಾಯಾಮ ಕಲಿಯುತ್ತೇನೆ ಎಂದು ಹೊರಟಂತೆ. ಸಾಧ್ಯ ವಿಲ್ಲವೇ? ಸಾಧ್ಯವಿದೆ. ಆದರೆ ಸೋತು ಕೈಚೆಲ್ಲುವ ಸಾಧ್ಯತೆ ಜಾಸ್ತಿ. ಹೇಗೆ ಒಳ್ಳೆಯ ಜಿಮ್ ಇನ್‌ಸ್ಟ್ರಕ್ಟರ್ ಅವಶ್ಯವೋ ಹಾಗೆಯೇ ಧ್ಯಾನದ ಮಟ್ಟಿಗೆ ಒಬ್ಬ ಒಳ್ಳೆಯ ಗುರುವಿನ ಅವಶ್ಯಕತೆ ಯಿರುತ್ತದೆ. ಆದರೆ ಜಿಮ್ ಇನ್‌ಸ್ಟ್ರಕ್ಟರ್ ಕಾಲಿಗೆ ಬಿದ್ದರೆ ಪ್ರಯೋಜನವಿಲ್ಲ. ಅವನು ಹೇಳಿದ್ದನ್ನು ನಾವೇ ಮಾಡಬೇಕು. ನಿರಂತರ ಮಾಡಬೇಕು. ಗುರು ದಾರಿ ತೋರಿಸಬಲ್ಲ; ನಡೆಯಬೇಕಾದವರು ನಾವೇ.

ಆದರೆ ಯಾರಿಗೆ ಟೈಮ್ ಐತೆ ಸಾರ್ ಅಂದಿರಾ? ಇಪ್ಪತ್ತೊಂದನೆಯ ಶತಮಾನದ ಮನುಷ್ಯನ ದೊಡ್ಡ ಕೊರತೆ ಸಮಯದ್ದಲ್ಲ; ಗಮನದ್ದು. ನಮ್ಮ ಗಮನವನ್ನು ಪ್ರತಿಕ್ಷಣವೂ ಯಾರೋ ಕದಿಯುವ ವ್ಯವಸ್ಥೆಯ ನಡುವೆ ನಾವಿಂದು ಬದುಕುತ್ತಿದ್ದೇವೆ. ಮೊಬೈಲು, ಜಾಹೀರಾತು, ಸುದ್ದಿ, ಇಮೇಲ, ಸಾಮಾಜಿಕ ಜಾಲತಾಣ, ಭವಿಷ್ಯದ ಅನಿಶ್ಚಿತತೆ ಇತ್ಯಾದಿ. ಹೀಗಿರುವ ವ್ಯವಸ್ಥೆಯಲ್ಲಿ ಧ್ಯಾನ ಒಂದು ಅವಶ್ಯಕತೆ. ಮಾನಸಿಕ ಆರೋಗ್ಯ ಇಂದಿನ ತಲೆಮಾರಿನ ಭಸ್ಮಾಸುರ. ನಾವೇ ಕಟ್ಟಿಕೊಂಡ ಡಿಜಿಟಲ್ ಜಗತ್ತು ನಮ್ಮ ತಲೆಯ ಮೇಲೆಯೇ ಕೈಯಿಡಲು ಬರುತ್ತಿದೆ. ಅದಕ್ಕಾಗಿಯೇ ಇಂದು ಆಸ್ಪತ್ರೆಯಿಂದ ಶಾಲೆಯವರೆಗೆ, ಕ್ರೀಡಾಪಟುಗಳಿಂದ ಬಾಹ್ಯಾಕಾಶ ಯಾತ್ರಿಗಳವರೆಗೆ, ಕಾರ್ಪೊರೇಟ್ ಕಂಪನಿಗಳಿಂದ ಜೈಲುಗಳವರೆಗೆ ಧ್ಯಾನ ವ್ಯಾಪಿಸುತ್ತಿದೆ. ಗಮನಿಸಿ- ಇವರಾರೂ ಧ್ಯಾನವನ್ನು ಧರ್ಮವೆಂದು ಮಾಡುತ್ತಿಲ್ಲ. ಔಷಧಿಯೆಂದು ಮಾಡುತ್ತಿದ್ದಾರೆ. ಇದು ಧರ್ಮದ ಪ್ರಶ್ನೆಯಲ್ಲ; ಗಮನದ ಪ್ರಶ್ನೆ. ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಕಂಡು ಹಿಡಿದಿಟ್ಟ ಈ ಮನಸ್ಸಿನ ಕಸರತ್ತನ್ನು ಜಗತ್ತು ಇಂದು ಹೆಕ್ಕಿಕೊಳ್ಳುತ್ತಿರುವಾಗ ಅದರ ತವರಿನವರಾದ ನಾವು ಮಾತ್ರ ‘ಅಥ ಧ್ಯಾನಮ’ ಎಂದು ಸೌಟು ನೀರು ಬಿಟ್ಟು ಮುಂದೆ ಹೋಗುತ್ತಿದ್ದೇವೆ!

ಕಾಡಿನ ಮುಖ್ಯಸ್ಥನಿಗೆ ಉಪ್ಪು ಆಹಾರದ ರುಚಿಯನ್ನು ಹೇಗೆ ಹೆಚ್ಚಿಸುತ್ತದೆ ಎಂದು ಶಿಶಿರಕಾಲ ಓದಿದರೆ ತಿಳಿಯುತ್ತಿತ್ತು. ಆದರೆ ರುಚಿಯ ಅನುಭವವಾಗುತ್ತಿರಲಿಲ್ಲ.

(ತಲೆ-ಹರಟೆ ಮುಗಿದಿಲ್ಲ)