Shashidhara Halady Column: ತೆರೆಮರೆಗೆ ಸರಿಯುತಿದೆ ಪೇಪರ್ ಓದುವ ಹವ್ಯಾಸ !
ನನಗೆ ಪೇಪರ್ ಓದುವ ಉತ್ತಮ ಹವ್ಯಾಸವನ್ನು ಬೆಳೆಸಿದವರು ನಮ್ಮಪ್ಪ. ಆಗ ನಾವು ದೂರದ ಆಂಧ್ರ ಪ್ರದೇಶದಲ್ಲಿದ್ದೆವು; ಅಲ್ಲೂ ಸಹ ಅವರು ಪ್ರತಿದಿನ ಕನ್ನಡ ಪೇಪರನ್ನು ನಮ್ಮ ಮನೆಗೆ ತರಿಸುತ್ತಿದ್ದರು ಮತ್ತು ಅವರೂ ಓದಿದ್ದರ ಜತೆಯಲ್ಲೇ, ನನಗೂ ‘ಪ್ರತಿದಿನ ಪೇಪರ್ ಓದು ಓದು’ ಎಂದು ಪ್ರೇರೇಪಿಸು ತ್ತಿದ್ದರು. ಆದರೆ ನಾನು ಹೋಗುತ್ತಿದ್ದ ಪ್ರಾಥಮಿಕ ಪಾಠಶಾಲೆಯು ತೆಲುಗು ಮಾಧ್ಯಮದ್ದು!
-
ಶಶಾಂಕಣ
ನೀವೇನೇ ಹೇಳಿ, ಬೆಳಗ್ಗೆ ಕಾಫಿಯ ಜತೆ ‘ಪೇಪರ್’ ಓದಿದರೇನೇ ಸಮಾಧಾನ, ಹೊರತು ‘ದಿನಪತ್ರಿಕೆ’ ಅಥವಾ ‘ಪತ್ರಿಕೆ’ ಓದಿದರೆ, ಅಷ್ಟೊಂದು ರುಚಿ ಇರುವುದಿಲ್ಲ! ಏಕಂತೀರಾ? ಕನ್ನಡಾಭಿಮಾನ ದಿಂದಾಗಿ, ನ್ಯೂಸ್ ಪೇಪರ್ ಎಂಬುದನ್ನು ಪತ್ರಿಕೆ ಅಥವಾ ದಿನಪತ್ರಿಕೆ ಎಂದು ಕರೆದರೂ, ಬೆಳಗ್ಗೆ ಎದ್ದ ಕೂಡಲೇ ‘ಪೇಪರ್’ ಓದಿದಾಗಲೇ ತೃಪ್ತಿ ಹೊರತು, ‘ಪತ್ರಿಕೆ’ ಓದಿದಾಗ ಅಲ್ಲ! ಲೋಕದ ಸುದ್ದಿ ಗಾಗಿ ಓದುವ ‘ಪೇಪರ್’ ಎಂಬ ಪದವು ಹೇಗೆ ನಮ್ಮ ಭಾವಕೋಶದ ಭಾಗವೇ ಆಗಿ ಹೋಗಿ ಬಿಟ್ಟಿದೆ ಅಲ್ಲವೆ!
ನನಗೆ ಪೇಪರ್ ಓದುವ ಉತ್ತಮ ಹವ್ಯಾಸವನ್ನು ಬೆಳೆಸಿದವರು ನಮ್ಮಪ್ಪ. ಆಗ ನಾವು ದೂರದ ಆಂಧ್ರಪ್ರದೇಶದಲ್ಲಿದ್ದೆವು; ಅಲ್ಲೂ ಸಹ ಅವರು ಪ್ರತಿದಿನ ಕನ್ನಡ ಪೇಪರನ್ನು ನಮ್ಮ ಮನೆಗೆ ತರಿಸುತ್ತಿದ್ದರು ಮತ್ತು ಅವರೂ ಓದಿದ್ದರ ಜತೆಯಲ್ಲೇ, ನನಗೂ ‘ಪ್ರತಿದಿನ ಪೇಪರ್ ಓದು ಓದು’ ಎಂದು ಪ್ರೇರೇಪಿಸುತ್ತಿದ್ದರು. ಆದರೆ ನಾನು ಹೋಗುತ್ತಿದ್ದ ಪ್ರಾಥಮಿಕ ಪಾಠಶಾಲೆಯು ತೆಲುಗು ಮಾಧ್ಯಮದ್ದು!
ನನಗೆ ತೆಲುಗು ಮಾಧ್ಯಮದ ಸರಕಾರಿ ಶಾಲೆಯಲ್ಲಿ ಪಾಠಗಳಿದ್ದರೂ, ಮನೆಯಲ್ಲಿ ಕನ್ನಡದ ಅಕ್ಷರಗಳ ಪರಿಚಯವನ್ನು ನಮ್ಮಪ್ಪ ಮಾಡಿಸುತ್ತಿದ್ದರು. ನಾವಿದ್ದ ಧರ್ಮಾವರಂಗೆ ಆಗ ಬೆಂಗಳೂರಿ ನಿಂದ ಕನ್ನಡ ದಿನಪತ್ರಿಕೆಗಳು ಬರುವಾಗ ಮಧ್ಯಾಹ್ನವೇ ಆಗುತ್ತಿತ್ತು; ಸಂಜೆ ನಾನು ಶಾಲೆ ಮುಗಿಸಿ ಬಂದ ನಂತರ, ಬಿಡುವಿನ ವೇಳೆ ನೋಡಿಕೊಂಡು, ನನ್ನನ್ನು ಕರೆದು, ಕನ್ನಡ ಪೇಪರಿನ ಮುಖ್ಯ ಶೀರ್ಷಿಕೆಗಳನ್ನು ಓದಿಸುತ್ತಿದ್ದರು.
ಇದನ್ನೂ ಓದಿ: Shashidhara Halady Column: ವರ್ಷಕ್ಕೊಮ್ಮೆಯಾದರೂ ಇದನ್ನು ತಿನ್ನಬೇಕಂತೆ !
ನಮ್ಮ ಭಾಷೆಯನ್ನು ನಾನು ಕಲಿಯಲಿ ಎಂಬುದೇ ಅವರ ಇಂಗಿತ; ನಾನು ಇನ್ನಷ್ಟು ಕನ್ನಡ ಕಲಿಯಲಿ ಎಂಬ ಉದ್ದೇಶದಿಂದ, ನಾಲ್ಕನೆಯ ತರಗತಿಯಲ್ಲಿದ್ದಾಗ ತೆಲುಗು ಶಾಲೆ ಬಿಡಿಸಿ, ನಮ್ಮ ರಾಜ್ಯದ ಕರಾವಳಿ ಭಾಗದ ಹಳ್ಳಿಯಲ್ಲಿದ್ದ ‘ಮುದೂರಿ ಕಿರಿಯ ಪ್ರಾಥಮಿಕ ಶಾಲೆ’ಗೆ ನನ್ನನ್ನು ಸೇರಿಸಿದರು. ಅದು ಕನ್ನಡ ಮಾಧ್ಯಮದ ಏಕೋಪಾಧ್ಯಾಯ ಗುಡಿಸಲು ಶಾಲೆ. ಕಾಡಿನ ಮಧ್ಯೆ, ಬಸ್ ರಸ್ತೆಯಿಂದ ಒಂದು ದಿಕ್ಕಿನಲ್ಲಿ ಎರಡು ಕಿ.ಮೀ. ದೂರದಲ್ಲಿದ್ದ ಆ ಶಾಲೆಗಾಗಲೀ, ರಸ್ತೆಯಿಂದ ಇನ್ನೊಂದು ದಿಕ್ಕಿನಲ್ಲಿ ಎರಡು ಕಿ.ಮೀ. ದೂರದಲ್ಲಿದ್ದ ನಮ್ಮ ಹಳ್ಳಿಮನೆಗಾಗಲೀ ಪೇಪರ್ ಬರುವ ಸಾಧ್ಯತೆಯೇ ಇರಲಿಲ್ಲವಾದ್ದರಿಂದ, ಒಂದೆರಡು ವರ್ಷ ಪೇಪರ್ ಓದುವ ಹವ್ಯಾಸ ಬಿಟ್ಟು ಹೋಯಿತು.
ಆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗ ಇದ್ದದ್ದು ನಾಲ್ಕನೆಯ ತರಗತಿಯ ತನಕ ಮಾತ್ರ. ಐದನೆಯ ತರಗತಿಗೆ ಮೂರು ಕಿ.ಮೀ. ದೂರದಲ್ಲಿದ್ದ ಪಡು ಹಾಲಾಡಿ ಸರಕಾರಿ ಶಾಲೆಗೆ ಸೇರಿಕೊಂಡೆ. ಪ್ರತಿದಿನ ಮಧ್ಯಾಹ್ನದ ಊಟಕ್ಕೆಂದು ಬುತ್ತಿಪಾತ್ರೆ ತೆಗೆದುಕೊಂಡು ಹೋಗುವ ಪದ್ಧತಿ; ಅದನ್ನು ಶಾಲೆ ಹತ್ತಿರದ ಹಿರಿಯಣ್ಣ ನಾಯಕ ಎಂಬ ಮಹನೀಯರ ಮನೆಯಲ್ಲಿಟ್ಟು, ಮಧ್ಯಾಹ್ನದ ಊಟದ ಸಮಯಕ್ಕೆ ಅಲ್ಲಿಗೆ ಬಂದು ಬುತ್ತಿಯೂಟ ತಿನ್ನುವ ಕ್ರಮ. ಹಿರಿಯಣ್ಣ ನಾಯಕರ ಮನೆ ಮತ್ತು ಅಂಗಡಿ ಎಂದರೆ, ನಮ್ಮ ಹಳ್ಳಿಯ ಚಟುವಟಿಕೆಗಳ ಒಂದು ಕೇಂದ್ರ ಎಂದೇ ಹೇಳಬಹುದು.
ಸುತ್ತಮುತ್ತಲಿನ ನಾಲ್ಕಾರು ಮನೆಗಳವರು ತರಿಸುತ್ತಿದ್ದ ದಿನಪತ್ರಿಕೆಗಳು ಮೊದಲು ಅವರ ಅಂಗಡಿಗೆ ಬಂದು, ಅಲ್ಲಿಂದ ವಿತರಣೆ ಯಾಗುತ್ತಿದ್ದವು. ಆದ್ದರಿಂದ, ಮಧ್ಯಾಹ್ನ ಊಟಕ್ಕೆ ಬಂದಾಗ, ಅಲ್ಲಿರು ವ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸುವ ಅಭ್ಯಾಸ ಬೆಳೆಯಿತು.ಆಗ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಪೇಪರ್ ಓದುವುದರಲ್ಲಿ ಒಂದು ಮಜಾ ಇತ್ತು; ಆ ಊರಿನ ಮಟ್ಟಿಗೆ, ಆಗಿನ ಕಾಲಮಾನದ ಸನ್ನಿವೇಶ ದಲ್ಲಿ, ಮಧ್ಯಾಹ್ನದ ಹೊತ್ತಿನಲ್ಲೂ ನಾವು ಓದುತ್ತಿದ್ದುದು ತಾಜಾ ಸುದ್ದಿಗಳನ್ನು!
ಹೇಗೆ ಎಂದಿರಾ? ದೂರದ ಬೆಂಗಳೂರಿನಲ್ಲಿ ಮುದ್ರಣಗೊಳ್ಳುತ್ತಿದ್ದ ಪ್ರಜಾವಾಣಿ, ಕನ್ನಡಪ್ರಭ ಪತ್ರಿಕೆಗಳು ಶಿವಮೊಗ್ಗದ ಮೂಲಕ ಹಾಲಾಡಿ ತಲುಪುತ್ತಿದ್ದುದೇ ಮಧ್ಯಾಹ್ನದ ಹೊತ್ತಿಗೆ! ಆಗೆಲ್ಲಾ ದಿನಪತ್ರಿಕೆಗಳು ಬೆಂಗಳೂರಿನಲ್ಲಿ ಮಧ್ಯರಾತ್ರಿಯ ಹೊತ್ತಿಗೆ ಮುದ್ರಣಗೊಂಡು, ‘ಪೇಪರ್ ವ್ಯಾನ್’ ಮೂಲಕ ಶಿವಮೊಗ್ಗ ತಲುಪುವಾಗ ಬೆಳಗಿನ ಜಾವವಾಗುತ್ತಿತ್ತು. ಬೆಳಗ್ಗೆ ಶಿವಮೊಗ್ಗದಿಂದ ಹೊರಡುತ್ತಿದ್ದ ಟಪಾಲು ಬಸ್ಸಿನಲ್ಲಿ ಬರುತ್ತಿದ್ದ ಪೇಪರುಗಳೇ ನಮಗೆ ತಾಜಾ!
ಆದ್ದರಿಂದ, ನಾನು ಓದುತ್ತಿದ್ದುದು ಬಿಸಿಬಿಸಿ ಸುದ್ದಿ. ಅಷ್ಟರಲ್ಲಿ, ಕರಾವಳಿಯ ಪ್ರಮುಖ ದಿನಪತ್ರಿಕೆ ಉದಯವಾಣಿ ಆಗಷ್ಟೇ ಆರಂಭಗೊಂಡಿತ್ತು. ಅದನ್ನೂ ಓದುತ್ತಿದ್ದೆ. ಇಂದಿನ ಬಾಂಗ್ಲಾ ದೇಶದ ಉದಯಕ್ಕೆ ಕಾರಣವಾದ 1971ರ ಯುದ್ಧದ ಸುದ್ದಿಗಳು ದಪ್ಪ ತಲೆಬರಹದಲ್ಲಿ ಪೇಪರಿನಲ್ಲಿ ಓದಿದ್ದು ನೆನಪಿದೆ. ಏಳನೆಯ ತರಗತಿಯ ತನಕ ಹಾಲಾಡಿ ಶಾಲೆಯಲ್ಲಿ ಓದಿದ ನಂತರ, ಎಂಟನೆಯ ತರಗತಿಗೆ ಶಂಕರ ನಾರಾಯಣ ಪ್ರೌಢಶಾಲೆಗೆ ಸೇರಿಕೊಂಡೆ. ಆಗ ದಿನಪತ್ರಿಕೆ ಓದುವ ಅವಕಾಶ ದೊರಕಿದ್ದು, ನಮ್ಮ ಹಳ್ಳಿಯ ಬಸ್ ನಿಲ್ದಾಣ ಸಮೀಪದಲ್ಲಿದ್ದ ಒಂದು ಜಿನಸಿ ಅಂಗಡಿಯಲ್ಲಿ!
ಗೋಳಿ ಎಂಬ ಮಹನೀಯರು ನಡೆಸುತ್ತಿದ್ದ ಜಿನಸಿ ಅಂಗಡಿ ಅದು. ಅವರ ಜಿನಸಿ ಅಂಗಡಿಯು, ನಮಗೆಲ್ಲಾ ದಿನಪತ್ರಿಕೆ ಓದುವ ವಾಚನಾಲಯದ ಸ್ವರೂಪ ಪಡೆದುಕೊಂಡಿತ್ತು! ಅವರ ಅಂಗಡಿಯ ಒಂದು ಭಾಗದಲ್ಲಿದ್ದ ಒಂದೆರಡು ಮರದ ಬೆಂಚುಗಳ ಮೇಲೆ, ದಿನಪತ್ರಿಕೆಗಳನ್ನು ಅವರು ಹರಡಿರುತ್ತಿದ್ದರು. ಆ ಪೇಪರುಗಳನ್ನು ನಮ್ಮೂರಿನ ಯಾರು ಬೇಕಾದರೂ ಓದಬಹುದಿತ್ತು!
ಅದೇ ಉದ್ದೇಶದಿಂದಲೇ, ಅಲ್ಲಿ ಆ ದಿನಪತ್ರಿಕೆಗಳನ್ನು ಇಡುತ್ತಿದ್ದರು. ಸಂಜೆ ತರಗತಿ ಮುಗಿಸಿ, ಮನೆಗೆ ಹೋಗುವ ಮುಂಚೆ, ಗೋಳಿಯರ ಅಂಗಡಿಯಲ್ಲಿರುವ ಕೆಲವು ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿ ದಾಗಲೇ ತೃಪ್ತಿ.
ನೀವೀಗ ಒಂದು ಪ್ರಶ್ನೆ ಕೇಳಬಹುದು: ಅದೇಕೆ ನಿಮ್ಮ ಮನೆಗೇ ಒಂದು ಪೇಪರು ತರಿಸಬಹುದಿತ್ತಲ್ಲ ಎಂದು. ಇದಕ್ಕೆ ಉತ್ತರ ಸರಳ ಮತ್ತು ಸಂಕೀರ್ಣ. ನಮ್ಮ ಮನೆ ಇದ್ದುದ್ದು ಕಾಡು ಗುಡ್ಡಗಳ ನಡುವೆ, ಗದ್ದೆ ಬಯಲಿನ ಒಂದು ತುದಿಯಲ್ಲಿ, ಬಸ್ ರಸ್ತೆಯಿಂದ ಎರಡು ಕಿ.ಮೀ. ದೂರದಲ್ಲಿ. ಪತ್ರಿಕೆಯನ್ನು ಮನೆಗೆ ತರಿಸುವುದು ಎಂದರೆ, ನಾವೇ ಬಸ್‌ಸ್ಟಾಪ್‌ಗೆ ಹೋಗಿ, ತರಬೇಕಾದ ಅನಿವಾರ್ಯತೆ. ಜತೆಗೆ, ಆಗಿನ್ನೂ ನಮ್ಮ ಮನೆಯವರ ಆದ್ಯತೆಯ ಪಟ್ಟಿಯಲ್ಲಿ ದಿನಪತ್ರಿಕೆ ಇರಲಿಲ್ಲ!
ಅದಕ್ಕೇಕೆ ಅಷ್ಟೊಂದು ಖರ್ಚು ಎಂಬ ಭಾವ. ನಮ್ಮ ಮನೆಗೆ ದಿನಪತ್ರಿಕೆಯನ್ನು ತಿರುಸುವ ಸಂದರ್ಭವೂ ಎದುರಾಯಿತು. ನನ್ನ ಪದವಿ ತರಗತಿಗಳು ಮುಗಿದು, ಒಂದು ವರ್ಷ ನಿರುದ್ಯೋಗಿ ಯಾಗಿ ಮನೆಯಲ್ಲಿ ದ್ದಾಗ, ಉದ್ಯೋಗ ಹುಡುಕಲು ಸಾಮಾನ್ಯ ಜ್ಞಾನ ಅಗತ್ಯ ಎಂದು, ಪೇಪರ್ ತರಿಸಲು ಆರಂಭಿಸಿದೆವು. ಆದರೆ, ಅದು ಮನೆ ತಲುಪುತ್ತಿದ್ದುದು ಯಥಾಪ್ರಕಾರ, ಸಂಜೆಯ ಹೊತ್ತಿಗೆ - ಬೆಳಗ್ಗೆ ಶಾಲೆಗೆ ಹೋಗಿದ್ದ ಮಕ್ಕಳು ಸಂಜೆ ವಾಪಸಾಗುವಾಗ ತರುತ್ತಿದ್ದರು.
ಬೆಳಗ್ಗೆನೇ ಪತ್ರಿಕೆ ಬೇಕೆಂದರೆ, ಎರಡು ಕಿ.ಮೀ. ನಡೆದು ಬಸ್‌ಸ್ಟಾಂಡ್ ತನಕ ಹೋಗಬೇಕಿತ್ತು; ಯಾವುದೇ ವಾಹನ ಸೌಕರ್ಯ ಇಲ್ಲದಂತಹ ಜಾಗದಲ್ಲಿ, ಗದ್ದೆಗಳ ಮಧ್ಯೆ ನಮ್ಮ ಮನೆಯಿದ್ದು ದರಿಂದ, ಸಂಜೆಯ ತನಕ ಪತ್ರಿಕೆಗಾಗಿ ಕಾಯುವುದರಲ್ಲಿ ವಿಶೇಷ ಎನಿಸುತ್ತಿರಲಿಲ್ಲ.
ಒಂದು ವರ್ಷದ ನಿರುದ್ಯೋಗ ಪರ್ವ ಮುಗಿದ ನಂತರ, ದೂರದ ಬಯಲುಸೀಮೆಯ ಹೃದಯ ಭಾಗದಲ್ಲಿದ್ದ ಕಣಕಟ್ಟೆ ಎಂಬಲ್ಲಿಗೆ ಉದ್ಯೋಗ ನಿಮಿತ್ತ ಹೋದೆ; ಅಲ್ಲೇ ನೋಡಿ, ನಾನು ಮೊದಲ ಬಾರಿ ‘ಬಿಸಿ ಬಿಸಿ ಸುದ್ದಿ’ ಓದಲು ಆರಂಭಿಸಿದ್ದು! ಅರಸಿಕೆರೆಯಿಂದ 30 ಕಿ.ಮೀ. ದೂರದಲ್ಲಿದ್ದ ಅಲ್ಲಿಗೆ ಬೆಳಗ್ಗೆ ಏಳು ಗಂಟೆಯ ಹೊತ್ತಿಗಾಗಲೇ ಎಲ್ಲಾ ದಿನಪತ್ರಿಕೆಗಳು ಬರುತ್ತಿದ್ದವು; ಏಳುಗಂಟೆಗೆ ಸರಿಯಾಗಿ ಅರಸಿಕೆರೆಯಿಂದ ಬರುತ್ತಿದ್ದ ಬೆಂಗಳೂರು ಬಸ್ಸಿನ ಮೂಲಕ ವಿತರಣೆಯಾಗುತ್ತಿದ್ದ ಪೇಪರುಗಳಿಗಾಗಿ ಬಸ್‌ಸ್ಟಾಪ್‌ನಲ್ಲಿ ಜನರು ಕಾಯುತ್ತಿದ್ದರು.
ನನಗಂತೂ ಬಹಳ ಖುಷಿಯಾಯಿತು. ಪ್ರತಿ ದಿನ ಒಂದು ಕನ್ನಡ, ಒಂದು ಇಂಗ್ಲಿಷ್ ಪೇಪರ್ ತರಿಸತೊಡಗಿದೆ. ಜೀವನದಲ್ಲಿ ಇದೇ ಮೊದಲಬಾರಿ, ಬೆಳಗ್ಗೆ ಎದ್ದ ಕೂಡಲೇ, ಬಿಸಿ ಬಿಸಿ ಕಾಫಿಯ ಜತೆ, ಬಿಸಿ ಬಿಸಿ ಸುದ್ದಿಗಳನ್ನು ಓದಿ ಹಿಗ್ಗಿದೆ. ನಮ್ಮ ರಾಜ್ಯದ, ನಮ್ಮ ದೇಶದ, ಅಷ್ಟೇಕೆ, ಜಗತ್ತಿನಾದ್ಯಂತ ನಡೆಯುತ್ತಿದ್ದ ವಿದ್ಯಮಾನಗಳ ಕುರಿತು ದಿನಪತ್ರಿಕೆಯಲ್ಲಿ ಓದಿ, ವಿವರಗಳನ್ನು ತಿಳಿದುಕೊಂಡು, ಸಂತೃಪ್ತನಾದೆ. ಆಗ ಇನ್ನೂ ಟಿ.ವಿ.ಗಳು ಹಳ್ಳಿಗಳಿಗೆ ಬಂದಿರಲಿಲ್ಲ; ಸ್ಮಾರ್ಟ್ ಫೋನ್ ಎಂಬುದರ ಕನಸನ್ನು ಸಹ ಜನರು ಕಂಡಿರಲಿಲ್ಲ! ದಿನಪತ್ರಿಕೆಗಳಲ್ಲಿ ಮುದ್ರಣಗೊಂಡದ್ದೇ ನಿಜ, ಅದೇ ವೇದವಾಕ್ಯ. ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ಸುತ್ತ ಮುತ್ತ ಏನು ನಡೆಯುತ್ತಿದೆ ಎಂದು ತಿಳಿಯಲು, ಎಲ್ಲೋಲ್ಲೋ ಇದ್ದ ತಜ್ಞ ಬರಹಗಾರರ ವಿಚಾರ ತಿಳಿಯಲು, ರಾಜಕೀಯ ಪಂಡಿತರ ಲೇಖನಗಳನ್ನು ಓದಲು ಅಂದು ಇದ್ದ ಮಾಧ್ಯಮವೆಂದರೆ ಪೇಪರ್ ಮಾತ್ರ.
ತಾಜಾ ಸುದ್ದಿ, ವಿಶ್ಲೇಷಣೆ ಮತ್ತು ಜ್ಞಾನವನ್ನು ನೀಡುವ ಮಾಧ್ಯಮಗಳಲ್ಲಿ ನಂತರದ ಸ್ಥಾನ ಎಂದರೆ ಪುಸ್ತಕಗಳು, ವಾರಪತ್ರಿಕೆಗಳು. ಆದರೆ, ಬೆಳಗ್ಗೆ ಮೊದಲಿಗೆ, ಬಿಸಿ ಬಿಸಿ ಸುದ್ದಿಯನ್ನು, ತಾಜಾ ಪೇಪರ್ ಬಿಡಿಸಿ ಓದುವ ಅನುಭವ ಅಪೂರ್ವ. ಈ ರೀತಿ, ಬೆಳಗ್ಗೆ ಎದ್ದಕೂಡಲೆ ಪೇಪರ್ ಓದುವ ಈ ಸುಖವು ನನ್ನದು ಮಾತ್ರವಲ್ಲ, ನಮ್ಮ ತಲೆಮಾರಿನ ಬಹುಪಾಲು ಜನರದ್ದು ಎಂದು ನಾನು ಬಲ್ಲೆ. ಕೆಲವರಿಗೆ ಬೆಳಗಿನ ಕೆಲವು ಅಗತ್ಯ ಕೆಲಸಗಳು, ಪೇಪರ್ ಹಿಡಿದು ಕುಳಿತಾಗ ಮಾತ್ರ ಸರಾಗವಾಗಿ ಆಗುತ್ತದೆ ಎಂದೂ ಕೇಳಿಬಲ್ಲೆ!
ಎಷ್ಟೋ ಜನ ಕಾಫಿ ಕುಡಿದೋ, ಕುಡಿಯದೆಯೋ, ಬೆಳಗಿನ ಮೊದಲ ಕೆಲಸಕ್ಕೆ ಟಾಯ್ಲೆಟ್‌ಗೆ ಹೋಗುವಾಗ, ಬಿಸಿ ಬಿಸಿ ದಿನಪತ್ರಿಕೆಯನ್ನೂ ಹಿಡಿದುಕೊಂಡು ಹೋಗುತ್ತಿದ್ದರು! ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಒಂದು ಪೇಪರ್ ಓದುವುದು ಅಥವಾ ಕೊನೆಯ ಪಕ್ಷ ಪೇಪರಿನ ಮುಖ್ಯ ಸುದ್ದಿಗಳನ್ನು, ಹೆಡ್ ಲೈನ್‌ಗಳನ್ನು ಓದುವುದು ಖಡ್ಡಾಯವಾಗಿತ್ತು; ಜತೆಗೆ, ಹಲವು ವಿದ್ಯಾರ್ಥಿಗಳು ಇಷ್ಟಪಟ್ಟು ಪೂರ್ತಿ ದಿನಪತ್ರಿಕೆಯನ್ನೂ ಓದುತ್ತಿದ್ದರು.
ದೂರದೂರದ ಹಳ್ಳಿಗಳಿಗೆ ಸುದ್ದಿಯನ್ನು ತಲುಪಿಸುತ್ತಿದ್ದುದೇ ಪೇಪರುಗಳು. ಇಷ್ಟೊಂದು ಜನರ ನೆಚ್ಚಿನ ಹವ್ಯಾಸವಾಗಿರುವ ಪೇಪರ್ ಓದುವುದಕ್ಕೆ ದೊಡ್ಡ ಅಡೆತಡೆ ಎದುರಾದದ್ದು, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ. ಲಾಕ್ ಡೌನ್‌ನಿಂದಾಗಿ ಪತ್ರಿಕೆಗಳು ಸರಾಗವಾಗಿ ವಿತರಣೆಗೊಳ್ಳಲು ಅಡೆತಡೆ ಎದುರಾಗಿದ್ದು ನಿಜವಾದರೂ, ಅದನ್ನು ಪತ್ರಿಕಾ ವಿತರಕರು ನಿವಾರಿಸಿಕೊಂಡರು, ರಿಸ್ಕ್ ತೆಗೆದುಕೊಂಡು ಮನೆಮನೆಗೆ ಹಂಚುವ ಶ್ರಮ ತೆಗೆದುಕೊಂಡರು.
ಆದರೆ, ಕೋವಿಡ್ ವೈರಸ್ ಕುರಿತು ವಿಪರೀತ ಭಯವಿದ್ದ ಆ ದಿನಗಳಲ್ಲಿ, ಒಂದು ಸುದ್ದಿ ಟಿವಿಯಲ್ಲಿ ಬರತೊಡಗಿತು - ಅದೇನೆಂದರೆ, ‘ದಿನಪತ್ರಿಕೆಗಳ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ!’. ಇದನ್ನು ಕಂಡು ಜನರು ದಿಗಿಲುಗೊಂಡರು. ‘ಇದು ಸತ್ಯಕ್ಕೆ ದೂರವಾದ ಸುದ್ದಿ’ ಎಂದು ನಂತರ ಪ್ರಚಾರಗೊಂಡರೂ, ಭಯಭೀತವಾಗಿದ್ದ ಸಮಾಜಕ್ಕೆ ಅಂದು ಬಿತ್ತರಗೊಂಡ ಟಿವಿ ಮಾಹಿತಿಯೇ ಸಾಕಾಯ್ತು: ಅದೆಷ್ಟೋ ಜನರು ತಕ್ಷಣ ದಿನಪತ್ರಿಕೆಗಳನ್ನು ಖರೀದಿಸುವುದನ್ನೇ ನಿಲ್ಲಿಸಿಬಿಟ್ಟರು!
ಅಲ್ಲಿಗೆ, ಎಷ್ಟೋ ಮನೆಗಳಲ್ಲಿ ಬೆಳೆದು ಬಂದಿದ್ದ ‘ಪೇಪರ್ ಓದುವ ಹವ್ಯಾಸ’ಕ್ಕೆ ಒಮ್ಮೆಗೇ ಬ್ರೇಕ್ ಬಿತ್ತು. ಪೇಪರ್ ಓದದೇ ಬೆಳಗ್ಗೆ ಏನೂ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ನನ್ನಂತಹ ಅದೆಷ್ಟೋ ಲಕ್ಷ ಮಂದಿ, ಟಿವಿಯಲ್ಲಿ ಕಣ್ಣುಕೀಲಿಸಿಕೊಂಡು ಕುಳಿತುಬಿಟ್ಟರು. ಅದರಿಂದಾಗಿ, ದೈಹಿಕ ಚಟುವಟಿಕೆಯೂ ಕಡಿಮೆಯಾಯ್ತು, ಲಾಕ್‌ಡೌನ್‌ನಿಂದಾಗಿ, ಕುಳಿತಲ್ಲೇ ಕುಳಿತು, ಸಕ್ಕರೆ ಸಮಸ್ಯೆಯಂತಹ ಸಮಸ್ಯೆಗಳನ್ನೂ ಕೆಲವರು ತಂದುಕೊಂಡರು!
ಕೋವಿಡ್ ಲಾಕ್‌ಡೌನ್ ತೆರವಾದ ನಂತರವೂ, ‘ಪೇಪರ್ ತರಿಸದೇ ಇರುವಂತಹ’ ಇದೇ ಪದ್ಧತಿ ಹಲವು ಮನೆಗಳಲ್ಲಿ ಮುಂದುವರಿಯಿತು. ಪೇಪರ್ ಓದುವ ಹವ್ಯಾಸವು ನಿಧಾನವಾಗಿ ಜನಪ್ರಿಯತೆ ಕಳೆದುಕೊಂಡಿತು. ಕೋವಿಡ್ ಲಾಕ್‌ಡೌನ್ ನಂತರ ಪತ್ರಿಕೆಗಳ ಪ್ರಸಾರ ಎಂದಿನಂತೆ ಮುಂದು ವರಿದದ್ದು ನಿಜ; ಆದರೆ, ಅಷ್ಟರಲ್ಲಿ ಜನರ ಅಭಿರುಚಿ, ಯುವಜನತೆಯ ಅಭ್ಯಾಸಗಳು ಬದಲಾಗಿಬಿಟ್ಟಿದ್ದವು.
ಸ್ಮಾರ್ಟ್ ಫೋನ್ ಎಲ್ಲರ ಮನೆಗಳಿಗೆ, ಮನಗಳಿಗೆ, ಅಂಗೈಗಳಿಗೆ ದಾಳಿಯಿಟ್ಟಿತ್ತು. ಚುಟುಕಾದ ಸುದ್ದಿಗಳು ಸ್ಮಾರ್ಟ್ ಫೋನ್‌ನಲ್ಲಿ ಲಭ್ಯವಾಗತೊಡಗಿದವು. ರೀಲ್ಸ್‌ಗಳು ಬಂದವು; ಯುವ ಪತ್ರಕರ್ತರು ತಾವೇ ಹೊಸ ಹೊಸ ಚಾನೆಲ್ʼಗಳನ್ನು ತೆರೆದು, ಕ್ಷಣಕ್ಷಣದ ಸುದ್ದಿಗಳನ್ನು ಸ್ಮಾರ್ಟ್ ಫೋನ್‌ನಲ್ಲಿ ಬಿತ್ತರಿಸತೊಡಗಿದರು. ಪತ್ರಿಕೆಯಲ್ಲಿ ಮುದ್ರಣಗೊಂಡು ತಲುಪುವ ಹೊಸ ಸುದ್ದಿಗಾಗಿ, ಬೆಳಗಿನ ತನಕ ಕಾಯಬೇಕಾಗಿಲ್ಲ, ಬದಲಿಗೆ ಸ್ಮಾಟ್ ಫೋನ್‌ನಲ್ಲೇ ಕ್ಷಣಕ್ಷಣಕ್ಕೂ ಅಪ್‌ಡೇಟ್ ಆಗತೊಡಗಿತು. ‘ಪೇಪರು’ಗಳ ಪ್ರಾಮುಖ್ಯತೆ ಕಡಿಮೆಯಾಯಿತು. ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ, ಅವೆಷ್ಟೋ ಮನೆಗಳಲ್ಲಿ ದಿನಪತ್ರಿಕೆಯೇ ಇರುವುದಿಲ್ಲ!
ಅಂತರ್ಜಾಲವು ತಂದಿಟ್ಟ ಸ್ಥಿತ್ಯಂತರವೂ ಸೇರಿಕೊಂಡಿದ್ದರಿಂದ, ಪೇಪರ್ ಓದುವ ಹವ್ಯಾಸವನ್ನು ರೂಢಿಸಿಕೊಳ್ಳದೇ ಇರುವ ಒಂದು ತಲೆಮಾರು ಬೆಳೆಯುತ್ತಿರುವುದನ್ನು ಇಂದು ಕಾಣುತ್ತಿದ್ದೇವೆ. ಅಲ್ಲವೇ?