ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಮಾಯಾವತಿಯವರೇ, ನೀವು ಉ.ಪ್ರ.ದಲ್ಲೇ ಇದ್ದೀರಾ ?

2014ರ ದೇಶದಲ್ಲಿ ಮೋದಿ ಅಲೆ ಆರಂಭಗೊಂಡರೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಪ್ರಭಾವ ಪಾತಾಳಕ್ಕೆ ಕುಸಿದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಸುಮಾರು 1.5 ಕೋಟಿ ಮತದಾರರು ಬೆಂಬಲಿಸಿದರೂ, ಬಿಎಸ್ಪಿ ಒಂದೇ ಒಂದು ಸೀಟನ್ನು ಗೆಲ್ಲಲಿಲ್ಲ. 2017ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 4.3 ಸೀಟುಗಳಲ್ಲಿ ಸ್ಪರ್ಧಿಸಿದರೂ, ಬಿಎಸ್ಪಿ ಗೆದ್ದದ್ದು 19 ಸೀಟುಗಳನ್ನು ಮಾತ್ರ.

ಮಾಯಾವತಿಯವರೇ, ನೀವು ಉ.ಪ್ರ.ದಲ್ಲೇ ಇದ್ದೀರಾ ?

-

ಜನಪಥ

ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಅದಾಗಲೇ ಅಧಿಕಾರ ಮರುಸ್ಥಾಪನೆಯ ಲೆಕ್ಕಾಚಾರ ಹಾಕುತ್ತಿವೆ. ಆದರೆ, ಒಂದು ಕಾಲದಲ್ಲಿ ಉ.ಪ್ರ.ದ ರಾಜಕೀಯ ದಿಕ್ಕನ್ನೇ ನಿರ್ಧರಿಸುತ್ತಿದ್ದ, ಬೆಹನ್‌ಜೀ ಎಂದೇ ದೇಶವ್ಯಾಪಿ ಗುರುತಿಸಿಕೊಂಡಿದ್ದ ಬಹುಜನ ಸಮಾಜವಾದಿ ಪಕ್ಷದ ನಾಯಕಿ, ದೇಶದ ಮೊದಲ ದಲಿತ ಸಿಎಂ ಆಗಿದ್ದ ಮಾಯಾವತಿ ಎಲ್ಲಿದ್ದಾರೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿರುವ ಅವರು, ಮುಂದಿನ ಚುನಾವಣೆಯಲ್ಲಿ ಸಂಚಲನ ಸೃಷ್ಟಿಸುವ ಲಕ್ಷಣ ಗೋಚರಿಸುತ್ತಿಲ್ಲ. ಮಹತ್ವದ ಬೆಳವಣಿಗೆಗಳು ಸಂಭವಿಸಿದಾಗ ಮಾಯಾವತಿ ಹೆಸರಂದು ಪತ್ರಿಕಾ ಹೇಳಿಕೆ ಹೊರಬೀಳುತ್ತದೆಯೇ ವಿನಃ ರಾಜಕೀಯ ಅಖಾಡದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳದಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಒಂದೊಮ್ಮೆ ದೆಹಲಿಯ ಇಂದರ್‌ಪುರಿಯ ಜೆಜೆ ಕಾಲನಿಯಲ್ಲಿ (ಕೊಳೆಗೇರಿ ಪ್ರದೇಶ) ಶಾಲಾ ಶಿಕ್ಷಕಿಯಾಗಿದ್ದ ಯುವತಿಯೊಬ್ಬಳು ಉತ್ತರ ಪ್ರದೇಶದ ರಾಜಕೀಯ ಇತಿಹಾಸವನ್ನೇ ಬದಲಾಯಿಸಬಹುದೆಂದು ಯಾರೂ ಊಹಿಸಿರಲಿಲ್ಲ.

ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಮಾಯಾವತಿಗೆ ಕಾನ್ಶಿರಾಂ ರಾಜಕೀಯ ಅಧಿಕಾರದ ಮಹತ್ವ ಮನವರಿಕೆ ಮಾಡಿಕೊಟ್ಟವರು. ರಾಜಕೀಯ ವಂಶಪಾರಂಪರ್ಯವಿಲ್ಲದೆ, ಪ್ರಬಲ ಆರ್ಥಿಕ ಹಿನ್ನೆಲೆಯಿಲ್ಲದೆ ಬಹುಜನ ಚಳವಳಿಯ ಮೂಲಕ ಬೆಳೆದು ಬಂದ ಮಾಯಾವತಿ, ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಅಧಿಕಾರ ನಡೆಸಿದ್ದಾರೆ.

ಇದನ್ನೂ ಓದಿ: Raghava Sharma Nidle Column: ಬಿಜೆಪಿ-ಅಕಾಲಿದಳ: ಮರುಮದುವೆ ಇಬ್ಬರಿಗೂ ಅನಿವಾರ್ಯ

2007ರಲ್ಲಿ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ವಂತ ಬಲದಿಂದ ಬಹುಮತದ ಸರ್ಕಾರ ರಚಿಸಿ ಇತಿಹಾಸ ನಿರ್ಮಿಸಿದ್ದರು. ದೇಶದ ಪ್ರಧಾನಿ ಹುದ್ದೆಗೇರಲೂಬಹುದು ಎಂಬ ಚರ್ಚೆಗೆ ಒಳಪಟ್ಟ ನಾಯಕಿಯ ಸಾರಥ್ಯದಲ್ಲಿರುವ ಬಹುಜನ ಸಮಾಜ ಪಕ್ಷ ಇಂದು ಒಂದು ವಿಧಾನಸಭಾ ಸ್ಥಾನ ಮತ್ತು ಲೋಕಸಭೆಯಲ್ಲಿ ಶೂನ್ಯ ಸ್ಥಾನಗಳ ಮಟ್ಟಿಗೆ ಕುಸಿದಿರುವುದು ಅವರ ಪ್ರಸ್ತುತತೆಯನ್ನೇ ಪ್ರಶ್ನೆ ಮಾಡುತ್ತಿದೆ.

2007ರಲ್ಲಿ ಬಿಎಸ್‌ಪಿಯ ಶೇ.30.43ರಷ್ಟಿದ್ದ ಮತಗಳಿಕೆ 2024ರಲ್ಲಿ ಶೇ.9.39ಕ್ಕೆ ಇಳಿದವು. ಆದರೂ ಪಕ್ಷದ ಪುನರುತ್ಥಾನಕ್ಕಾಗಿ ರಾಜ್ಯದಲ್ಲಿ ಬಿರುಸಿನ ಕಾರ್ಯಚಟುವಟಿಕೆಗಳು ಕಣ್ಣಿಗೆ ಕಾಣುತ್ತಿಲ್ಲ. ಮಾಯಾವತಿ ಮೌನಕ್ಕೆ ಸರಿದಿರುವುದರ ಹಿಂದಿನ ಗುಟ್ಟೇನು? ಕಾನ್ಶಿರಾಂ ಕಟ್ಟಿದ ಬಹುಜನ ಚಳವಳಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಮಾಯಾವತಿ ರಾಜಕೀಯ ಪುನರಾಗಮನಕ್ಕೆ ಇನ್ನೂ ಅವಕಾಶವಿದೆಯೇ? ಅಕ್ರಮ ಆಸ್ತಿ ಸಂಪಾದನೆಯ ಆರೋಪಗಳು ಅವರನ್ನು ಕಟ್ಟಿಹಾಕುತ್ತಿವೆಯೇ ಎಂಬೆ ಚರ್ಚೆಗಳು ಮತ್ತೆ ನಡೆಯುತ್ತಿವೆ.

ಮಾಯಾವತಿ ರಾಜಕೀಯದಿಂದ ಸಂಪೂರ್ಣ ದೂರ ಉಳಿದಿದ್ದಾರೆ ಎಂದೇನಲ್ಲ. ನವೆಂಬರ್ 5ರಂದು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ಪದಾಧಿಕಾರಿ ಗಳೊಂದಿಗೆ ಚುನಾವಣಾ ಸಿದ್ಧತೆ ಪರಿಶೀಲಿಸಲು ಅವರು ಸಭೆ ನಡೆಸಿದ್ದರು. ಮತಗಟ್ಟೆ ಮಟ್ಟದಲ್ಲಿ ಸಂಘಟನೆ ಬಲಪಡಿಸುವುದು, ಅಭ್ಯರ್ಥಿಗಳ ಆಯ್ಕೆ ಹಾಗೂ ವಿವಿಧ ಸಮುದಾಯಗಳ ಬೆಂಬಲ ವಿಸ್ತರಿಸುವ ಕಾರ್ಯತಂತ್ರ ರೂಪಿಸಿದ್ದರು.

RSN 2511

ಆಕಾಶ್ ಆನಂದ್ ಅವರನ್ನು ಮತ್ತೆ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿ ಸಾರ್ವಜನಿಕ ಪ್ರಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. 2027ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿಯೂ ಅವರು ಘೋಷಿಸಿ ದ್ದಾರೆ.

2014ರ ದೇಶದಲ್ಲಿ ಮೋದಿ ಅಲೆ ಆರಂಭಗೊಂಡರೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಪ್ರಭಾವ ಪಾತಾಳಕ್ಕೆ ಕುಸಿದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಸುಮಾರು 1.5 ಕೋಟಿ ಮತದಾರರು ಬೆಂಬಲಿಸಿದರೂ, ಬಿಎಸ್ಪಿ ಒಂದೇ ಒಂದು ಸೀಟನ್ನು ಗೆಲ್ಲಲಿಲ್ಲ. 2017ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 4.3 ಸೀಟುಗಳಲ್ಲಿ ಸ್ಪರ್ಧಿಸಿದರೂ, ಬಿಎಸ್ಪಿ ಗೆದ್ದದ್ದು 19 ಸೀಟುಗಳನ್ನು ಮಾತ್ರ. 2019ರಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡ ಮಾಯಾವತಿ, 80 ಕ್ಷೇತ್ರಗಳಲ್ಲಿ 10ನ್ನು ಗೆದ್ದು ಅಚ್ಚರಿ ಮೂಡಿಸಿದರು. ಆದರೆ, ಈ ಮೈತ್ರಿ ಹೆಚ್ಚು ದಿನ ಬಾಳಲಿಲ್ಲ.

2022ರ ವಿಧಾನಸಭೆಯಲ್ಲಿ ಮತ್ತೆ ಏಕಾಂಗಿ ಹೋರಾಟಕ್ಕಿಳಿದ ಮಾಯಾವತಿ 403ರಲ್ಲಿ 1 ಕ್ಷೇತ್ರವನ್ನಷ್ಟೇ ಗೆದ್ದು, ಶೂನ್ಯ ಸಂಪಾದನೆಯ ಅಪಕೀರ್ತಿಯಿಂದ ಪಾರಾದರು! 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 80 ಸೀಟುಗಳಲ್ಲಿ ಒಂದನ್ನೂ ಗೆಲ್ಲದ ಬಿಎಸ್ಪಿ, ಮತಗಳಿಕೆಯಲ್ಲೂ (9.39%) ತೀವ್ರ ಹಿನ್ನಡೆ ಕಂಡಿತು.

2017ರ ವಿಧಾನಸಭೆ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗಿನ ಚುನಾವಣೆಗಳ ಅಂಕಿ-ಅಂಶ ಪರಿಶೀಲಿಸಿದರೆ, ಪ್ರತಿ ಚುನಾವಣೆಗೂ ಬಿಎಸ್ಪಿ ಮತಗಳಿಕೆ ಪ್ರಮಾಣ ಇಳಿಕೆಯಾಗುತ್ತಲೇ ಇದೆ. ಪಕ್ಷದಲ್ಲಿ ಪರ್ಯಾಯ ನಾಯಕತ್ವವನ್ನೇ ಬೆಳೆಸದ್ದರ ಪರಿಣಾಮ ಬಿಎಸ್ಪಿಗೆ ಮಾಯಾವತಿ ನಂತರ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಇದೇ ಕಾರಣಕ್ಕೆ, ಅನೇಕ ಮಂದಿ ಬಿಎಸ್ಪಿ ಬಿಟ್ಟು ಬಿಜೆಪಿ, ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷಗಳಲ್ಲಿ ರಾಜಕೀಯ ಭವಿಷ್ಯವನ್ನು ನೋಡುತ್ತಿದ್ದಾರೆ.

ಪಕ್ಷದ ಮುಂದಿನ ನಾಯಕತ್ವದ ಚರ್ಚೆಯಲ್ಲಿ ಮಾಯಾವತಿಯ ಸೋದರಳಿಯ ಆಕಾಶ್ ಆನಂದ್ ಪ್ರಮುಖ ಸ್ಥಾನದಲ್ಲಿದ್ದರೂ, ಕಳೆದ 3 ವರ್ಷಗಳಲ್ಲಿ ಅವರಿಗೆ ಅಧಿಕಾರ ನೀಡಿರುವುದು, ಕಿತ್ತುಕೊಂಡಿರುವುದು ಮತ್ತು ಮತ್ತೆ ಜವಾಬ್ದಾರಿ ನೀಡಿರುವುದನ್ನು ಗಮನಿಸಿದರೆ, ಬಿಎಸ್ಪಿಯ ಉತ್ತರಾಧಿಕಾರದ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಇತ್ಯರ್ಥಗೊಂಡಂತಿಲ್ಲ.

ಕಾನ್ಶಿರಾಂ ಅವರು ಮಾಯಾವತಿಯನ್ನು ರಾಜಕೀಯ ನಾಯಕಿಯಾಗಿ ರೂಪಿಸಿದಂತೆ, ಮಾಯಾ ವತಿ ತಮ್ಮ ನಂತರ ಪಕ್ಷಕ್ಕೊಬ್ಬ ನಾಯಕ ಬೇಕು ಎಂಬುದನ್ನರಿತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕಿತ್ತು. ಆದರೆ, ಉಳಿದ ಪ್ರಾದೇಶಿಕ ಪಕ್ಷಗಳ ನಾಯಕರಂತೆ ಮಾಯಾವತಿ ಕೂಡ ತಮ್ಮ ಪರಿವಾರದ ವ್ಯಕ್ತಿಗೆ ಸಣ್ಣಮಟ್ಟಿಗೆ ಅವಕಾಶ ನೀಡುತ್ತಿದ್ದಾರೆಯೇ ವಿನಃ ಉಳಿದವರಲ್ಲಿ ಪರಿಪೂರ್ಣ ನಾಯಕತ್ವ ಬೆಳೆಸುವ ಯತ್ನ ಮಾಡಲಿಲ್ಲ.

ತಮ್ಮ ಇರುವಿಕೆಗಾಗಿ ದೊಡ್ಡದೊಡ್ಡ ಬಂಗಲೆ ಕಟ್ಟುವುದು, ಆಸ್ತಿ ಸಂಪಾದನೆ ಮಾಡಲು ಅವರಲ್ಲಿದ್ದ ಆಸಕ್ತಿ ನಾಯಕತ್ವದ ಬೆಳೆಸುವ ಕಡೆ ಇರಲಿಲ್ಲ. ರಾಜಕೀಯ ಪ್ರವೇಶಕ್ಕೂ ಮುನ್ನ ಕೊಳೆಗೇರಿ ಕಾಲನಿಯಲ್ಲಿ ಶಿಕ್ಷಕಿಯಾಗಿದ್ದ, ಬಿಡುವಿದ್ದಾಗ ಕರೋಲ್‌ಬಾಗ್‌ಗೆ ತೆರಳಿ ಐಎಎಸ್ ಕೋಚಿಂಗ್ ಪಡೆಯುತ್ತಿದ್ದ ಮಾಯಾವತಿ, ಬಾಲ್ಯದಿಂದಲೇ ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯವನ್ನು ಅನುಭವಿಸಿದ್ದರು. ಅವರು ತಮ್ಮ ಆತ್ಮಚರಿತ್ರೆಯಲ್ಲಿ; ಬಾಲ್ಯದಲ್ಲಿ ತಾಯಿಯೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಎದುರಾದ ಅವಮಾನಗಳನ್ನು ವಿವರಿಸಿದ್ದಾರೆ.

ಸಹೋದರರಿಗೆ ಉತ್ತಮ ಶಾಲೆ ಮತ್ತು ಖಾಸಗಿ ಪಾಠದ ವ್ಯವಸ್ಥೆ ಕಲ್ಪಿಸಲಾಗಿದ್ದರೆ, ತಮ್ಮನ್ನು ಸರಿಯಾಗಿ ಕಾರ್ಯನಿರ್ವಹಿಸದ ಸರ್ಕಾರಿ ಶಾಲೆಗೆ ಸೇರಿಸಲಾಗಿತ್ತು ಎಂದು ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಈ ಅನುಭವಗಳು ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳ ಮೇಲೆ ಆಳವಾದ ಪರಿಣಾಮ ಬೀರಿದ್ದವು.

ಯುವತಿಯಾಗಿದ್ದಾಗ ಅಂಬೇಡ್ಕರ್ ಬರಹಗಳನ್ನು ಓದುತ್ತಿದ್ದ ಅವರು, ಜಾತಿ ದಮನದ ವಿರುದ್ಧ ಹೋರಾಡಲು ಪ್ರಭಾವಶಾಲಿ ಸ್ಥಾನ ಪಡೆಯಬೇಕೆಂದು ನಿರ್ಧರಿಸಿದರು. ಭಾರತೀಯ ಆಡಳಿತ ಸೇವೆಗೆ ಸೇರಿ ಸಮಾಜದಲ್ಲಿ ಬದಲಾವಣೆ ತರಬೇಕೆಂಬುದು ಕನಸಾಗಿತ್ತು. ಆದರೆ, ದೆಹಲಿಯ 1977ರಲ್ಲಿ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಕಾರ್ಯಕ್ರಮವೊಂದು ಅವರ ಜೀವನದ ದಿಕ್ಕನ್ನೇ ಬದಲಿಸಿತ್ತು. ಅಂದಿನ ಪ್ರಮುಖ ರಾಜಕೀಯ ನಾಯಕ ರಾಜ್ ನಾರಾಯಣ್ ತಮ್ಮ ಭಾಷಣದಲ್ಲಿ ದಲಿತರನ್ನು ಪದೇಪದೆ ‘ಹರಿಜನ’ ಎಂದು ಉಲ್ಲೇಖಿಸಿದ್ದರು.

ಗಾಂಧೀಜಿ ಬಳಸುತ್ತಿದ್ದ ಈ ಪದವನ್ನು ಅನೇಕ ಅಂಬೇಡ್ಕರ್‌ವಾದಿಗಳು ವಿರೋಧಿಸುತ್ತಿದ್ದರು. ಮಾಯಾವತಿ, ರಾಜ್ ನಾರಾಯಣ್ ಅವರ ಪದಬಳಕೆಯನ್ನು ತೀವ್ರವಾಗಿ ಪ್ರಶ್ನಿಸಿದರು. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿಯೇ ದಲಿತರನ್ನು ಪ್ರತ್ಯೇಕ ಜಾತಿ ಗುರುತಿನಿಂದ ಸಂಬೋಧಿಸುವುದು ಸರಿಯಲ್ಲ ಎಂಬ ವಾದ ಮುಂದಿಟ್ಟಿದ್ದರು.

ಅಂದು ಅವರ ಭಾಷಣಕ್ಕೆ ಸಭಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಈ ಘಟನೆಯ ಮಾಹಿತಿ ಕಾನ್ಶಿರಾಂ ಅವರಿಗೆ ತಲುಪಿತು. ಅವರು ಮಾಯಾವತಿಯವರ ಜೆಜೆ ಕಾಲನಿ ಮನೆಗೆ ತೆರಳಿ ಮಾತುಕತೆ ನಡೆಸಿದರು. ಐಎಎಸ್ ಅಧಿಕಾರಿಯಾಗುವುದಕ್ಕಿಂತ ರಾಜಕೀಯ ಅಧಿಕಾರ ಪಡೆಯು ವುದು ಸಾಮಾಜಿಕ ಬದಲಾವಣೆಗೆ ಹೆಚ್ಚಿನ ಅವಕಾಶ ನೀಡುತ್ತದೆ ಎಂಬ ಕಾನ್ಶಿರಾಂ ಮಾತುಗಳು ಮಾಯಾವತಿ ಮೇಲೆ ಗಾಢ ಪ್ರಭಾವ ಬೀರಿದ್ದವು. ಅಲ್ಲಿಂದ ಮಾಯಾವತಿಯ ರಾಜಕೀಯ ಪಯಣ ಹೊಸ ದಿಕ್ಕು ಪಡೆಯಿತು.

ಮಗಳು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ತಂದೆ ಪ್ರಭುದಾಸ್‌ಗೆ ಸಮ್ಮತಿ ಇರಲಿಲ್ಲ. ಕಾನ್ಶಿರಾಂ ಜತೆಗಿನ ರಾಜಕೀಯ ಒಡನಾಟ ನಿಲ್ಲಿಸಬೇಕು ಅಥವಾ ಮನೆ ತೊರೆಯಬೇಕು ಎಂಬ ಆಯ್ಕೆ ಮುಂದಿಟ್ಟಾಗ ಮಾಯಾವತಿ ಆಯ್ಕೆ ಮಾಡಿದ್ದು ರಾಜಕೀಯ ಮತ್ತು ಸಂಘಟನೆ. ಆರಂಭಿಕ ದಿನಗಳಲ್ಲಿ ಕಾನ್ಶಿರಾಂ ಜತೆಗಿದ್ದುಕೊಂಡೇ ಅವರು ಉತ್ತರ ಸಂಘಟನೆಯಲ್ಲಿ ತೊಡಗಿಸಿಕೊಂಡು, ಉತ್ತರ ಪ್ರದೇಶದಲ್ಲಿ ಸಂಘಟನೆ ಜಾಲ ವಿಸ್ತರಿಸಲು ಮುಂದಾದರು. ಮಾಯಾವತಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು 1984ರಲ್ಲಿ ಪಶ್ಚಿಮ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಿಂದ.

ನಂತರ 1985ರಲ್ಲಿ ಬಿಜ್ನೋರ್ ಉಪಚುನಾವಣೆ ಮತ್ತು 1987ರಲ್ಲಿ ಹರಿದ್ವಾರ (ಆಗ ಹರಿದ್ವಾರ ಉತ್ತರಪ್ರದೇಶದ ಭಾಗವಾಗಿತ್ತು) ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಮೂರೂ ಚುನಾವಣೆ ಗಳಲ್ಲಿ ಸೋತರೂ ಅವರ ಮತಗಳಿಕೆ ಹೆಚ್ಚುತ್ತಿತ್ತು. 1989ರಲ್ಲಿ ಬಿಜ್ನೋರ್ ಲೋಕಸಭಾ ಕ್ಷೇತ್ರದಿಂದ ಮೊದಲ ಚುನಾವಣಾ ಗೆಲುವು ಸಾಧಿಸಿದರು.

ಚುನಾವಣಾ ರಾಜಕೀಯದಲ್ಲಿ ಕಾನ್ಶಿರಾಂಗಿಂತ ಮೊದಲೇ ವಿಜಯ ಕಂಡದ್ದು ಉಲ್ಲೇಖಾರ್ಹ. ಕಾನ್ಶಿರಾಂ ತಮ್ಮ ಮೊದಲ ಲೋಕಸಭಾ ಸ್ಥಾನವನ್ನು 1996ರಲ್ಲಿ ಪಂಜಾಬ್‌ನ ಹೋಶಿಯಾರ್‌ಪುರ ದಿಂದ ಗೆದ್ದಿದ್ದರು. ಒಟ್ಟಿನಲ್ಲಿ ಮಾಯಾವತಿ ಸಂಘಟನಾ ಸಾಮರ್ಥ್ಯ ಮತ್ತು ಚುನಾವಣಾ ತಂತ್ರಗಾರಿಕೆಯನ್ನು ಈ ಗೆಲುವುಗಳು ಸಾಬೀತುಪಡಿಸಿದ್ದವು.

ಕಾನ್ಶಿರಾಂ ಅವರು ಬಹುಜನ ಚಳವಳಿಯ ಅಡಿಪಾಯಕ್ಕಾಗಿ BAMCEF- Backward and Minority Communities Employees Federation ಸ್ಥಾಪಿಸಿದ್ದರು. ಮಾಯಾವತಿ ಈ ಸಂಘಟನೆ ಸೇರಿದಂದಿ ನಿಂದ ಕಾನ್ಶಿರಾಂ ಜತೆಗಿದ್ದು, ಸಂಘಟನೆಗಾಗಿ ಶ್ರಮಿಸಿದರು. ಕಾನ್ಶಿರಾಂ 2003ರಲ್ಲಿ ಅನಾರೋಗ್ಯಕ್ಕೀಡಾದಾಗ ಆರೈಕೆಯ ಜವಾಬ್ದಾರಿಯನ್ನೂ ಮಾಯಾವತಿ ವಹಿಸಿಕೊಂಡಿದ್ದರು. 2004ರಲ್ಲಿ ಕಾನ್ಶಿರಾಂ ಅವರ ಕುಟುಂಬದವರು ಮಾಯಾವತಿ ನಡೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾಗ, ತಾವು ಸ್ವಇಚ್ಛೆಯಿಂದ ಮಾಯಾವತಿಯ ನಿವಾಸದಲ್ಲಿ ಉಳಿದುಕೊಂಡಿರುವು ದಾಗಿ ಕಾನ್ಶಿರಾಂ ನ್ಯಾಯಾಲಯದ ಪ್ರತಿನಿಧಿಗೆ ತಿಳಿಸಿದ್ದರು.

1995ರಲ್ಲಿ ಮೊದಲ ದಲಿತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಯಾವತಿ, 3 ಬಾರಿ ಕಿರು ಅವಧಿಗಷ್ಟೇ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಆದರೆ ದಲಿತ, ಮುಸ್ಲಿಂ, ಬ್ರಾಹ್ಮಣರ ಭರ್ಜರಿ ಜನಬೆಂಬಲದೊಂದಿಗೆ 2007ರಲ್ಲಿ ಅಧಿಕಾರ ಸ್ಥಾಪಿಸಿ, 2012ರ ತನಕ ಪೂರ್ಣಾವಧಿಗೆ ಸಿಎಂ ಆಗಿದ್ದರು. 2012ರಿಂದ ಇಲ್ಲಿಯವರೆಗೆ ಅಂದರೆ 14 ವರ್ಷಗಳಿಂದ ಮಾಯಾವತಿಗೆ ಅಧಿಕಾರ ಮರುಸ್ಥಾಪಿಸಲು ಸಾಧ್ಯವಾಗಿಲ್ಲ.

2019ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಚುನಾವಣಾ ಹೋರಾಟ ನಡೆಸಿದರೂ, ಬಿಜೆಪಿ-ಬಿಎಸ್ಪಿ ಮಧ್ಯೆ ಒಳಒಪ್ಪಂದ, ಪರಸ್ಪರ ಮೃದು ಧೋರಣೆಯ ಮಾತುಗಳು ಆಗಾಗ್ಗೆ ಕೇಳುತ್ತಲೇ ಇದ್ದವು. ಈಗಲೂ ಕೂಡ ಮಾಯಾವತಿ ಇಂಡಿ ಮೈತ್ರಿಕೂಟ ದೊಂದಿಗೆ ಜೋಡಿಸಿಕೊಳ್ಳದಿರುವುದಕ್ಕೆ ಭ್ರಷ್ಟಾಚಾರ ಕೇಸುಗಳು (ತಾಜ್ ಕಾರಿಡಾರ್ ಕೇಸು, ಆದಾಯ ಮೀರಿದ ಆಸ್ತಿ ಪ್ರಕರಣ) ಮತ್ತು ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಈ ಕೇಸುಗಳನ್ನು ರಿ-ಓಪನ್ ಮಾಡಬಹುದು ಎಂಬ ಆತಂಕ ಕಾರಣ ಎಂಬ ಮಾತು ರಾಜಕೀಯ ಕಾರಿಡಾರ್‌ಗಳಲ್ಲಿ ಕೇಳುತ್ತಲೇ ಇರುತ್ತದೆ.

ಕೊಳೆಗೇರಿ ಕಾಲನಿಯೊಂದರಲ್ಲಿ ಬೆಳೆದ ಮಾಯಾವತಿ, ರಾಜಕೀಯದ ಮೂಲಕ ಮುಂದೆ ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಲುಟಿಯ ಪ್ರದೇಶದಲ್ಲಿ ಹಲವು ಸರಕಾರಿ ಬಂಗಲೆಗಳನ್ನು ಪಡೆಯುವ ಮಟ್ಟಿಗೆ ಬೆಳೆದರು. ಪ್ರತಿಷ್ಟಿತ ಸರ್ದಾರ್ ಪಟೇಲ್ ಮಾರ್ಗದಲ್ಲಿನ ನಿವಾಸ, ಕನಾಟ್‌ಪ್ಲೇಸ್‌ನಲ್ಲಿನ 2 ವಾಣಿಜ್ಯ ಕಟ್ಟಡಗಳು ಅವರ ಹೆಸರಿನ ಇವೆ. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಗುರುದ್ವಾರ ರಕಾಬ್‌ಗಂಜ್ ರಸ್ತೆಯಲ್ಲಿದ್ದ ಮೂರು ಸರಕಾರಿ ಬಂಗಲೆಗಳನ್ನು ಒಗ್ಗೂಡಿಸಿ ಒಂದೇ ಬೃಹತ್ ಬಂಗಲೆಯನ್ನಾಗಿ ಪರಿವರ್ತಿಸಲು ಅವಕಾಶ ನೀಡಲಾಗಿತ್ತು. ಈ ಕಟ್ಟಡವನ್ನು ಬಹುಜನ ಪ್ರೇರಣಾ ಟ್ರಸ್ಟ್ ಹೆಸರಿನಲ್ಲಿ ಹಂಚಿಕೆ ಮಾಡಲಾಗಿತ್ತು. ಕಾನ್ಶಿರಾಂ ಅವರ ಸ್ಮಾರಕ ವಿಸ್ತರಣೆಯ ಉದ್ದೇಶಕ್ಕಾಗಿ ಮಾಯಾವತಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.‌

ಮಾಯಾವತಿ ರಾಜಕೀಯ ಪಯಣ ಭಾರತೀಯ ಪ್ರಜಾಪ್ರಭುತ್ವದ ಮಹತ್ವದ ಅಧ್ಯಾಯ. ಬಹುಜನ ಚಳವಳಿಗೆ ಹೊಸ ತಲೆಮಾರಿನ ನಾಯಕತ್ವದ ಅಗತ್ಯದ ಹೊತ್ತಿನ ಚಂದ್ರ ಶೇಖರ್ ಆಜಾದ್‌ರಂತಹ ನಾಯಕರು ಮುನ್ನೆಲೆಗೆ ಬರುತ್ತಿದ್ದಾರೆ. ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಯಾರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದ ಬೆಹನ್‌ಜೀ, ಈಗ ತಮ್ಮದೇ ಪಕ್ಷದ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಹಾಗಾದರೆ, 2027ರಲ್ಲಿ ಬಿಎಸ್ಪಿ ಪಾಲಿಗೆ ಹೊಸದೊಂದು ಅಧ್ಯಾಯ ಶುರುವಾಗುವುದೇ? ಸದ್ಯಕ್ಕಂತೂ ಹೌದು ಎಂಬ ಉತ್ತರ ನೀಡುವುದು ಕಷ್ಟ.