Roopa Gururaj Column: ಅರ್ಧಜ್ಞಾನ ಅಭಿಮನ್ಯುವಿನ ಜೀವಕ್ಕೆ ತಂದ ಆಪತ್ತು
ದುರ್ಯೋಧನನ ಮಗ ಲಕ್ಷ್ಮಣನನ್ನು ಸಂಹರಿಸಿದ ಅಭಿಮನ್ಯು, ಕೌರವ ಸೇನೆಯ ರಥ-ಗಜ- ಪದಾತಿ ಗಳನ್ನು ಧೂಳೀಪಟ ಮಾಡಿದ. ಆ ಬಾಲಕನ ಪರಾಕ್ರಮವನ್ನು ತಡೆಯಲು ಸಾಕ್ಷಾತ್ ದ್ರೋಣ-ಕರ್ಣರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಯುದ್ಧಧರ್ಮವನ್ನೆಲ್ಲ ಗಾಳಿಗೆ ತೂರಿದ ಕೌರವರ ಮಹಾರಥಿಗಳು ಒಟ್ಟಾಗಿ ಆತನನ್ನು ಸುತ್ತುವರಿದರು.
-
ಒಂದೊಳ್ಳೆ ಮಾತು
ಕುರುಕ್ಷೇತ್ರದ ಧರ್ಮಯುದ್ಧ ಹದಿಮೂರನೆಯ ದಿನಕ್ಕೆ ಕಾಲಿಟ್ಟಿತ್ತು. ಭೀಷ್ಮ ಪಿತಾಮಹರು ಶರಶಯ್ಯೆಯ ಮೇಲೆ ಮಲಗಿದ ನಂತರ, ಕೌರವ ಸೈನ್ಯದ ಸರ್ವಸೇನಾಧಿಪತಿಯಾಗಿ ಆಚಾರ್ಯ ದ್ರೋಣರು ನಿಂತಿದ್ದರು. ಯುಧಿಷ್ಠಿರನನ್ನು ಜೀವಂತವಾಗಿ ಸೆರೆ ಹಿಡಿಯುವುದೇ ಅವರ ಅಂದಿನ ಪರಮ ಗುರಿಯಾಗಿತ್ತು. ಈ ಸಂಕಲ್ಪದ ಈಡೇರಿಕೆಗಾಗಿ ದ್ರೋಣರು ಹೆಣೆದದ್ದು ದೇವ- ದಾನವರಿಗೂ ಅಸಾಧ್ಯವೆನಿಸಿದ ಚಕ್ರವ್ಯೂಹ ವನ್ನು. ಆ ವ್ಯೂಹವು ಸಮುದ್ರದ ಸುಳಿಯಂತೆ, ನಿರಂತರ ಸುತ್ತುವ ಮಹಾ ಚಕ್ರದಂತೆ ಸೈನಿಕರ ಸಾಲುಗಳಿಂದ ರಚಿತವಾಗಿತ್ತು.
ಪಾಂಡವ ಪಾಳೆಯದಲ್ಲಿ ಅದನ್ನು ಭೇದಿಸಿ, ಒಳನುಗ್ಗಿ, ಸುರಕ್ಷಿತವಾಗಿ ಹೊರಬರುವ ವಿದ್ಯೆ ಕೃಷ್ಣ ಮತ್ತು ಅರ್ಜುನನಿಗೆ ಮಾತ್ರ ಸಿದ್ಧಿಸಿತ್ತು. ಕೌರವರ ಕುತಂತ್ರದಂತೆ ಸಂಶಪ್ತಕರು ಅರ್ಜುನನನ್ನು ಯುದ್ಧ ಭೂಮಿಯ ದೂರದ ದಕ್ಷಿಣ ದಿಕ್ಕಿಗೆ ಎಳೆದೊಯ್ದಿದ್ದರು. ಇತ್ತ ರಣಾಂಗಣದಲ್ಲಿ ಚಕ್ರವ್ಯೂಹ ಹೆಡೆಮುಡಿ ಕಟ್ಟಿ ಮುನ್ನುಗ್ಗುತ್ತಿದ್ದರೆ, ಯುಧಿಷ್ಠಿರನ ಮುಖದಲ್ಲಿ ಕತ್ತಲು ಕವಿದಿತ್ತು. ಇಡೀ ಸೈನ್ಯ ವನ್ನು ಉಳಿಸಲು ಯಾರಾದರೂ ವ್ಯೂಹವನ್ನು ಭೇದಿಸಲೇಬೇಕಾದ ಅನಿವಾರ್ಯತೆ ಎದುರಾಯಿತು.
ಇದನ್ನೂ ಓದಿ: Roopa Gururaj Column: ಅರ್ಜುನನ ಅಹಂಕಾರ ಕರಗಿಸಿದ ಕರ್ಣನ ಎರಡಿಂಚಿನ ಜಯ
ಆಗ ಯುಧಿಷ್ಠಿರನ ಮುಂದೆ ಬಂದು ನಿಂತವನು ಹದಿನಾರರ ಹರೆಯದ ಬಾಲಕ, ಅರ್ಜುನ-ಸುಭದ್ರೆಯರ ಸುಪುತ್ರ ಅಭಿಮನ್ಯು. ಆತನ ಮುಖದಲ್ಲಿ ಅಪ್ರತಿಮ ತೇಜಸ್ಸು, ಕಣ್ಣುಗಳಲ್ಲಿ ಯುದ್ಧದ ಕಿಚ್ಚಿತ್ತು. ತಾತ, ಚಿಂತಿಸಬೇಡಿ, ಆ ವ್ಯೂಹವನ್ನು ನಾನು ಸೀಳಿ ಒಳನುಗ್ಗಬಲ್ಲೆ ಎಂದು ಗರ್ಜಿಸಿದ. ಆದರೆ ಯುಧಿಷ್ಠಿರನಿಗೆ ಆತನ ರಹಸ್ಯ ತಿಳಿದಿತ್ತು. ಅಭಿಮನ್ಯು ತಾಯಿಯ ಗರ್ಭದಲ್ಲಿ ದ್ದಾಗ, ಅರ್ಜುನನು ಕೌತುಕದಿಂದ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಗೂಢ ವಿದ್ಯೆಯನ್ನು ವಿವರಿಸುತ್ತಿದ್ದ.
ತಾಯಿಯ ಗರ್ಭದಲ್ಲಿದ್ದ ಶಿಶು ಪ್ರತಿಯೊಂದು ವ್ಯೂಹದ್ವಾರದ ಭೇದನೆಯ ಮಂತ್ರವನ್ನು ಶ್ರದ್ಧೆಯಿಂದ ಆಲಿಸುತ್ತಿತ್ತು. ಆದರೆ ವ್ಯೂಹದ ಏಳು ಸುತ್ತುಗಳನ್ನು ಹೊಕ್ಕು, ಅಂತಿಮವಾಗಿ ಅಲ್ಲಿಂದ ಜಯಶಾಲಿಯಾಗಿ ಹೊರಬರುವ ರಹಸ್ಯವನ್ನು ಅರ್ಜುನ ಹೇಳಲು ತೊಡಗಿದಾಗ, ದಣಿವಾಗಿದ್ದ ಸುಭದ್ರೆ ನಿದ್ರೆಗೆ ಜಾರಿದಳು; ಅರ್ಜುನನ ವಿವರಣೆಯೂ ಅಲ್ಲಿಗೇ ನಿಂತಿತು. ಹೀಗಾಗಿ ಅಭಿಮನ್ಯುವಿಗೆ ವ್ಯೂಹದ ಒಳಗೆ ನುಗ್ಗುವ ಕಲೆ ಕರಗತವಾಗಿತ್ತೇ ವಿನಃ, ಅಪಾಯದಿಂದ ಹೊರಬರುವ ದಾರಿ ಮಾತ್ರ ಸಂಪೂರ್ಣ ನಿಗೂಢವಾಗಿಯೇ ಉಳಿದಿತ್ತು.
ಅಭಿಮನ್ಯುವಿನ ಈ ಕೊರತೆ ಯುಧಿಷ್ಠಿರನಿಗೆ ತಿಳಿದಿತ್ತು. ಆದರೂ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಮಗೂ, ನೀನು ವ್ಯೂಹದ ಬಾಗಿಲನ್ನು ತೆರೆದು ಒಳನುಗ್ಗು; ನಿನ್ನ ಬೆನ್ನ ಹಿಂದೆಯೇ ನಾನು, ಭೀಮ, ನಕುಲ, ಸಹದೇವ ಹಾಗೂ ದ್ರುಪದ- ವಿರಾಟರು ಸೇನೆಯೊಂದಿಗೆ ನುಗ್ಗಿ ನಿನ್ನನ್ನು ರಕ್ಷಿಸುತ್ತೇವೆ ಎಂದು ಅಭಯ ನೀಡಿದರು. ಅಭಿಮನ್ಯುವಿನ ರಥ ವ್ಯೂಹದತ್ತ ಸಿಡಿಲಿನಂತೆ ಧಾವಿಸಿತು.
ದ್ರೋಣ, ಕೃಪ, ಕರ್ಣರಂಥ ದಿಗ್ಗಜರ ಬಾಣದ ಮಳೆಯನ್ನು ಲೆಕ್ಕಿಸದೆ, ವ್ಯೂಹದ ಮೊದಲ ದ್ವಾರ ವನ್ನು ಪುಡಿಪುಡಿ ಮಾಡಿ ಸಿಂಹದಂತೆ ಒಳನುಗ್ಗಿದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪಾಂಡವ ಸೇನೆ ಅಭಿಮನ್ಯುವಿನ ಬೆನ್ನ ಹಿಂದೆ ನುಗ್ಗುವಷ್ಟರಲ್ಲಿ, ಶಿವನ ವರಬಲದಿಂದ ಅಜೇಯ ನಾಗಿದ್ದ ಸಿಂಧು ದೇಶದ ರಾಜ ಜಯದ್ರಥ ಅಡ್ಡಗೋಡೆಯಾಗಿ ನಿಂತು ಪಾಂಡವರ ಇಡೀ ಸೈನ್ಯ ವನ್ನೇ ಹಿಮ್ಮೆಟ್ಟಿಸಿದ. ಅಭಿಮನ್ಯು ಕೌರವರ ಸಮುದ್ರದ ನಡುವೆ ಏಕಾಂಗಿಯಾದ. ಒಳಗೆ ನಡೆದದ್ದು ಕ್ರೂರ ನರಮೇಧ.
ದುರ್ಯೋಧನನ ಮಗ ಲಕ್ಷ್ಮಣನನ್ನು ಸಂಹರಿಸಿದ ಅಭಿಮನ್ಯು, ಕೌರವ ಸೇನೆಯ ರಥ-ಗಜ- ಪದಾತಿ ಗಳನ್ನು ಧೂಳೀಪಟ ಮಾಡಿದ. ಆ ಬಾಲಕನ ಪರಾಕ್ರಮವನ್ನು ತಡೆಯಲು ಸಾಕ್ಷಾತ್ ದ್ರೋಣ-ಕರ್ಣರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಯುದ್ಧಧರ್ಮವನ್ನೆಲ್ಲ ಗಾಳಿಗೆ ತೂರಿದ ಕೌರವರ ಮಹಾರಥಿಗಳು ಒಟ್ಟಾಗಿ ಆತನನ್ನು ಸುತ್ತುವರಿದರು.
ಕರ್ಣನು ಹಿಂದಿನಿಂದ ಬಂದು ಆತನ ಧನುಸ್ಸನ್ನು ತುಂಡರಿಸಿದ; ದ್ರೋಣರು ರಥವನ್ನು ಧ್ವಂಸ ಗೊಳಿಸಿದರು; ಅಶ್ವಗಳು ಕೊಲ್ಲಲ್ಪಟ್ಟವು. ಕೈಯಲ್ಲಿ ಧನುಸ್ಸಿಲ್ಲದಿದ್ದರೂ, ನೆಲಕ್ಕುರುಳಿದ ರಥದ ಚಕ್ರವನ್ನೇ ಗಿರಗಿರನೆ ತಿರುಗಿಸುತ್ತಾ ಅಭಿಮನ್ಯು ಕಾಲಾಂತಕನಂತೆ ಹೋರಾಡಿದ. ಆ ಚಕ್ರವೂ ಪುಡಿಯಾದಾಗ ಗದೆಯನ್ನು ಹಿಡಿದು ದುಶ್ಶಾಸನನ ಮಗನೊಂದಿಗೆ ಕಾದಾಡಿದ.
ಕೊನೆಗೆ, ನಿಶ್ಯಸ್ತ್ರನಾಗಿ, ರಕ್ತಸಿಕ್ತನಾಗಿ ನೆಲಕ್ಕುರುಳಿದ ಆ ವೀರಬಾಲಕನನ್ನು ಎಲ್ಲರೂ ಸೇರಿ ಅಧರ್ಮದಿಂದ ಹತ್ಯೆ ಮಾಡಿದರು. ಪ್ರವೇಶ ತಿಳಿದಿದ್ದ ವೀರಯೋಧ, ನಿರ್ಗಮನದ ದಾರಿ ತಿಳಿಯದೆ ಕುರುಕ್ಷೇತ್ರದ ಮಣ್ಣಿನಲ್ಲಿ ಶಾಶ್ವತವಾಗಿ ಮಣ್ಣಾದ. ಅರ್ಧಜ್ಞಾನವೆಂಬುದು ಅತಿಯಾದ ಆತ್ಮ ವಿಶ್ವಾಸವನ್ನು ಹುಟ್ಟಿಸಿ ವಿನಾಶದ ಸುಳಿಗೆ ನಮ್ಮನ್ನು ತಳ್ಳುತ್ತದೆ.
ಯಾವುದೇ ನಿರ್ಧಾರ, ಸಾಹಸ ಅಥವಾ ಕೆಲಸಕ್ಕೆ ಕೈ ಹಾಕುವ ಮುನ್ನ ಅದರೊಳಗೆ ಪ್ರವೇಶಿಸುವ ಉತ್ಸಾಹವಷ್ಟೇ ಅಲ್ಲ; ಸಂಕಷ್ಟ ಎದುರಾದಾಗ ಅಲ್ಲಿಂದ ಸುರಕ್ಷಿತವಾಗಿ ಹೊರ ಬರುವ ಅರಿವೂ ನಮಗಿರಬೇಕು. ಪರಿಣಾಮದ ಜ್ಞಾನವಿಲ್ಲದೆ ಇಡುವ ಒಂದು ಹೆಜ್ಜೆಯೂ ಬದುಕನ್ನೇ ಹಾಳು ಮಾಡಬಹುದು. ಸಮಾಧಾನವೇ ಪ್ರಧಾನ.