Dr Vijay Darda Column: ನಿದ್ದೆಯಲ್ಲಿದ್ದ ಆನೆ ಎದ್ದಿದೆ, ಇನ್ನು ಸುಮ್ನಿರೋದಿಲ್ಲ !
ನಾವು ಅಮೆರಿಕಕ್ಕೆ 100 ರು. ಬೆಲೆಯ ವಸ್ತುವನ್ನು ರಫ್ತು ಮಾಡಿದರೆ ಆ ದೇಶದಲ್ಲಿ ಅದಕ್ಕೆ 50 ರು. ತೆರಿಗೆ ವಿಧಿಸಲಾಗುತ್ತದೆ. ಸಹಜವಾಗಿಯೇ ಇದು ಅಲ್ಲಿನ ಗ್ರಾಹಕರಿಗೆ ವರ್ಗಾವಣೆಯಾಗುತ್ತದೆ. ಆಗ ಅಮೆರಿಕದ ಗ್ರಾಹಕರು ಕೊಳ್ಳುವ ಭಾರತೀಯ ವಸ್ತುಗಳು ದುಬಾರಿಯಾಗುತ್ತವೆ. ಅದರಿಂದಾಗಿ ಭಾರತದ ವಸ್ತುಗಳಿಗೆ ಅಮೆರಿಕದಲ್ಲಿ ಬೇಡಿಕೆ ಕುಸಿಯುತ್ತದೆ. ಇಲ್ಲೊಂದು ವಿಷಯ ಗಮನಿಸಿ. ಭಾರತವು ಜಗತ್ತಿಗೆ ಎಷ್ಟು ಸರಕನ್ನು ರಫ್ತು ಮಾಡುತ್ತದೆಯೋ ಅದರಲ್ಲಿ ಶೇ.18ರಷ್ಟನ್ನು ಅಮೆರಿಕ ವೊಂದಕ್ಕೇ ರಫ್ತು ಮಾಡುತ್ತದೆ.


ಹಿರಿಯ ಪತ್ರಿಕೋದ್ಯಮಿ
ಭಾರತವು ಐತಿಹಾಸಿಕವಾಗಿ ಬಹಳ ಶ್ರೀಮಂತ ದೇಶವಾಗಿತ್ತು. ನಡುವೆ ಯಾರ‍್ಯಾರೋ ಕೊಳ್ಳೆ ಹೊಡೆದರು. ಅದರಿಂದ ಚೇತರಿಸಿಕೊಂಡು ಮತ್ತೆ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಯಾಗಿ ಬೆಳೆದಿದೆ. ನಮ್ಮ ಶಕ್ತಿ ಜಗತ್ತಿಗಿನ್ನೂ ಸರಿಯಾಗಿ ಗೊತ್ತಿಲ್ಲ. ಅಷ್ಟೇಕೆ, ನಮಗೇ ಸರಿಯಾಗಿ ಗೊತ್ತಿಲ್ಲ!
ದೇಶದಲ್ಲಿ ಒಂದಿಡೀ ವಾರದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಆರಂಭವಾಗಿದೆ. ನಾವೆಲ್ಲರೂ ಈಗ ಸ್ವತಂತ್ರ ಭಾರತದಲ್ಲಿರುವ ಮುಕ್ತವಾಗಿ ಯೋಚಿಸುವ ಪ್ರಜೆಗಳು. ತ್ರಿವರ್ಣ ಧ್ವಜದಡಿ ನಮ್ಮ ನಮ್ಮ ಊರಿನಲ್ಲಿ ನಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯವನ್ನು ಸಂಭ್ರಮಿಸಲು ನನಗೆ ನನ್ನದೇ ಆದ ರೀತಿಯೊಂದಿದೆ. ಅದು ಪೆನ್ನು. ಆ ಪೆನ್ನಿನ ಮೂಲಕ ಈಗ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಚರ್ಚಿಸೋಣ.
ಬ್ರಿಟಿಷರ ಕಪಿಮುಷ್ಟಿಯಿಂದ ನಮ್ಮ ತಾಯ್ನಾಡು ಬಿಡುಗಡೆ ಪಡೆದು 78 ವರ್ಷಗಳು ಕಳೆದವು. ಈ ಅವಧಿಯಲ್ಲಿ ನಾವು ನಿಸ್ಸಂಶಯವಾಗಿಯೂ ಅಗಾಧ ಪ್ರಗತಿ ಸಾಧಿಸಿದ್ದೇವೆ. ಇಡೀ ಜಗತ್ತಿನಲ್ಲಿ ಭಾರತೀಯರು ನಮ್ಮ ಹೆಜ್ಜೆ ಗುರುತು ಮೂಡಿಸಿದ್ದೇವೆ. ಅಭಿವೃದ್ಧಿಯ ಯಾವ ದಾರಿಯನ್ನೂ ನಾವು ಪ್ರಯತ್ನಿಸದೆ ಬಿಟ್ಟಿಲ್ಲ. ಹೀಗಾಗಿ ಸಹಜವಾಗಿಯೇ ನಮ್ಮನ್ನು ನೋಡಿ ಅಸೂಯೆಪಡುವವರು ಇರುತ್ತಾರೆ. ಅವರು ನಮ್ಮ ಪ್ರಗತಿಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಾರೆ.
ನಮ್ಮಲ್ಲಿರುವ ಆರ್ಥಿಕ ಸಂಪನ್ಮೂಲಗಳ ಮೇಲೆ ಅವರು ಲಾಲಸೆಯಿಂದ ಕಣ್ಣು ನೆಟ್ಟಿರುತ್ತಾರೆ. ವಿಶ್ವ ವಾಣಿಜ್ಯ ಕೇಂದ್ರದಂಥ ಸಂಸ್ಥೆ ಇಂದು ಪಾರ್ಶ್ವವಾಯು ಬಡಿಸಿಕೊಂಡು ಕುಳಿತಿದೆ. ಅದರ ಕೈಯಲ್ಲಿ ಯಾರನ್ನೂ ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಈಗ ಹೊಸತಾಗಿ ಎದುರಾಗಿರುವ ಆರ್ಥಿಕ ಸವಾಲುಗಳನ್ನು ನಾವು ಹೇಗೆ ಎದುರಿಸಬೇಕು? ಇಡೀ ಜಗತ್ತು ಇಂದು ಅಮೆರಿಕದ ತೆರಿಗೆಯ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದೆ. ಭಾರತ ಕೂಡ ಅದಕ್ಕೆ ಹೊರತಾಗಿಲ್ಲ. ಹಾಗೆ ನೋಡಿದರೆ, ನಾವು ಅತಿಹೆಚ್ಚು ಹೊಡೆತ ಅನುಭವಿಸುತ್ತಿರುವ ದೇಶಗಳ ಸಾಲಿನಲ್ಲಿದ್ದೇವೆ. ಭಾರತದ ಸರಕುಗಳ ಮೇಲೆ ವಿಧಿಸಿದ್ದ ತೆರಿಗೆಯನ್ನು ಅಮೆರಿಕ ಶೇ.25 ರಿಂದ ಶೇ.50ಕ್ಕೆ ಏರಿಸಿದೆ.
ಇದನ್ನೂ ಓದಿ: Dr Vijay Darda Column: ಟ್ರಂಪ್ ಏಕೆ ಭಾರತದ ಮೇಲೆ ಅಷ್ಟೊಂದು ಸಿಟ್ಟಾಗಿದ್ದಾರೆ ?
ಅಂದರೆ, ನಾವು ಅಮೆರಿಕಕ್ಕೆ 100 ರು. ಬೆಲೆಯ ವಸ್ತುವನ್ನು ರಫ್ತು ಮಾಡಿದರೆ ಆ ದೇಶದಲ್ಲಿ ಅದಕ್ಕೆ 50 ರು. ತೆರಿಗೆ ವಿಧಿಸಲಾಗುತ್ತದೆ. ಸಹಜವಾಗಿಯೇ ಇದು ಅಲ್ಲಿನ ಗ್ರಾಹಕರಿಗೆ ವರ್ಗಾವಣೆಯಾಗುತ್ತದೆ. ಆಗ ಅಮೆರಿಕದ ಗ್ರಾಹಕರು ಕೊಳ್ಳುವ ಭಾರತೀಯ ವಸ್ತುಗಳು ದುಬಾರಿಯಾಗುತ್ತವೆ. ಅದರಿಂದಾಗಿ ಭಾರತದ ವಸ್ತುಗಳಿಗೆ ಅಮೆರಿಕದಲ್ಲಿ ಬೇಡಿಕೆ ಕುಸಿಯುತ್ತದೆ. ಇಲ್ಲೊಂದು ವಿಷಯ ಗಮನಿಸಿ. ಭಾರತವು ಜಗತ್ತಿಗೆ ಎಷ್ಟು ಸರಕನ್ನು ರಫ್ತು ಮಾಡುತ್ತದೆಯೋ ಅದರಲ್ಲಿ ಶೇ.18ರಷ್ಟನ್ನು ಅಮೆರಿಕ ವೊಂದಕ್ಕೇ ರಫ್ತು ಮಾಡುತ್ತದೆ.
ಹೀಗಾಗಿ ಅಮೆರಿಕದ ತೆರಿಗೆ ಹೊಡೆತ ಭಾರತದ ಆರ್ಥಿಕತೆಗೆ ಬಹಳ ಜೋರಾಗಿಯೇ ಬೀಳುತ್ತದೆ. ಇದರಲ್ಲಿ ಭಾರತದ ಆರ್ಥಿಕ ಸ್ವಾತಂತ್ರ್ಯದ ಪ್ರಶ್ನೆಯೂ ಇದೆ. ಅದನ್ನು ಅಮೆರಿಕ ನಿಯಂತ್ರಿಸಲು ಬಯಸುತ್ತಿದೆ. ನನ್ನ ಪ್ರಕಾರ, ಭಾರತ ಯಾವ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆಯೋ ಅದನ್ನು ನೋಡಿ ಸುಮ್ಮನಿರಲು ಎಲ್ಲರಿಗೂ ಆಗುತ್ತಿಲ್ಲ.

ಏನಾದರೂ ಮಾಡಿ, ಎಲ್ಲಾ ರೀತಿಯಲ್ಲೂ, ಭಾರತವನ್ನು ಕಟ್ಟಿಹಾಕಬೇಕು ಎಂದು ಅವು ಪ್ರಯ ತ್ನಿಸುತ್ತಿವೆ. ಇತ್ತೀಚಿನ ಒಂದು ಉದಾಹರಣೆಯನ್ನೇ ನೋಡಿ. ನಮ್ಮ ದೇಶದ ಉದ್ಯಮಪತಿಗಳು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡತೊಡಗಿದ್ದಾರೆ. ಅಂಬಾನಿ, ಅದಾನಿ, ಸಜ್ಜನ್ ಜಿಂದಾಲ್, ಟಾಟಾ, ಬಿರ್ಲಾ ಮುಂತಾದವರು ಉದ್ದಿಮೆಗಳನ್ನು ಬೃಹತ್ತಾಗಿ ವಿಸ್ತರಿಸುತ್ತಿದ್ದಾರೆ. ಅದಾನಿಯಂತೂ ಜಗತ್ತಿನ ನಂ.2 ಶ್ರೀಮಂತರಾಗುವ ಮಟ್ಟಕ್ಕೆ ಬೆಳೆದಿದ್ದಾರೆ.
ಆದರೆ, ಅವರ ಬೆಳವಣಿಗೆಯನ್ನು ಸಹಿಸಲಾಗದ ಕೆಲ ಜಾಗತಿಕ ಶಕ್ತಿಗಳು ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಕಿರುಕುಳ ನೀಡಲು ಯತ್ನಿಸಿದವು. ಎಲ್ಲಿಯವರೆಗೆ ಅಂದರೆ, ಅವರು ಲಂಡನ್, ಯುರೋಪ್ ಅಥವಾ ಅಮೆರಿಕದ ಪ್ರಭಾವಲಯ ದಲ್ಲಿರುವ ದೇಶಗಳಿಗೆ ಹೋದರೆ ಅರೆಸ್ಟ್ ಮಾಡಲಾಗುತ್ತದೆ ಎಂದು ಸುದ್ದಿ ಹರಡಿತ್ತು!
ಇಂದು ಭಾರತದೊಂದಿಗೆ ಪೈಪೋಟಿಗಿಳಿದಿರುವ ಎಲ್ಲಾ ದೇಶಗಳೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮನ್ನು ಕಷ್ಟಕ್ಕೆ ಸಿಲುಕಿಸಲು ಯತ್ನಿಸುತ್ತಿವೆ. ಈ ಹಿಂದೆ ಟ್ರಂಪ್ ಚೀನಾಕ್ಕೆ ಶೇ.145ರಷ್ಟು ತೆರಿಗೆ ವಿಧಿಸಿದ್ದರು. ಅದಕ್ಕೆ ಚೀನಾ ತಕ್ಕ ಉತ್ತರ ನೀಡಿತು. ಕೊನೆಗೆ ಏನಾಯಿತು? ಬೇರೆ ದಾರಿಯಿಲ್ಲದೆ ಟ್ರಂಪ್ ತಲೆಬಾಗಿದರು.
ನಾನು ಅರ್ಥಶಾಸ್ತ್ರಜ್ಞನಲ್ಲ. ಆದರೆ ಒಬ್ಬ ಪತ್ರಕರ್ತನಾಗಿ, ರಾಜಕಾರಣಿಯಾಗಿ ಹಾಗೂ ಉದ್ಯಮಿ ಯಾಗಿ ನನಗೆ ಇದನ್ನೆಲ್ಲ ವಿಶ್ಲೇಷಣೆ ಮಾಡುವ ಶಕ್ತಿ ಖಂಡಿತ ಇದೆ. ನನ್ನ ಪ್ರಕಾರ, ಭಾರತದ ಕೃಷಿ ಕ್ಷೇತ್ರ ಮತ್ತು ಡೈರಿ ಕ್ಷೇತ್ರದ ಮೇಲೆ ಅಮೆರಿಕಕ್ಕೆ ಬಹಳ ವರ್ಷಗಳಿಂದ ಕಣ್ಣಿತ್ತು. ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ಕ್ಕೆ ಕೃಷಿ ಕ್ಷೇತ್ರ ಶೇ.14ರಷ್ಟು ಕೊಡುಗೆ ನೀಡುತ್ತಿದೆ. ಈ ಕ್ಷೇತ್ರವು ಶೇ.42ರಷ್ಟು ಭಾರತೀಯರಿಗೆ ಉದ್ಯೋಗ ನೀಡುತ್ತಿದೆ.
ಡೈರಿ ಉದ್ದಿಮೆಗಳು ಜಿಡಿಪಿಗೆ ಶೇ.5ಕ್ಕಿಂತ ಸ್ವಲ್ಪ ಹೆಚ್ಚು ಕೊಡುಗೆ ನೀಡುತ್ತಿವೆ. ಇದಕ್ಕೆ ಪಶು ಸಂಗೋಪನೆ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳನ್ನೂ ಸೇರಿಸಿದರೆ ದೇಶದ ಶೇ.8.5ರಷ್ಟು ಜನರಿಗೆ ಇವು ಉದ್ಯೋಗ ನೀಡುತ್ತಿವೆ. ಭಾರತವು ಜಗತ್ತಿನಲ್ಲೇ ಅತಿದೊಡ್ಡ ಹಾಲು ಉತ್ಪಾದಕ ದೇಶ. ಜಗತ್ತಿನ ಶೇ.23ರಿಂದ ಶೇ.24ರಷ್ಟು ಹಾಲು ಭಾರತದಲ್ಲಿ ಉತ್ಪತ್ತಿಯಾಗುತ್ತದೆ.
ಅಮೆರಿಕ ಎರಡನೇ ಸ್ಥಾನದಲ್ಲಿದೆ. ಆದರೆ ಅವರ ಹಾಲಿಗೂ ನಮ್ಮ ದೇಶದ ಹಾಲಿಗೂ ಸಾಕಷ್ಟು ವ್ಯತ್ಯಾಸವಿದೆ. ಅಮೆರಿಕದಲ್ಲಿ ಹಸುಗಳಿಗೆ ಮಾಂಸ-ಆಧರಿತ ಪ್ರೋಟೀನ್ ತಿನ್ನಿಸಿ ಹೆಚ್ಚು ಹಾಲು ಕರೆಯುತ್ತಾರೆ. ನಮ್ಮ ದೇಶದಲ್ಲಿ ಹಾಲಿನ ಪಶುಗಳೆಲ್ಲ ಸಸ್ಯಾಹಾರಿಗಳು.
ಈಗ ಎರಡೂ ದೇಶಗಳ ಕೃಷಿ ಮತ್ತು ಡೈರಿ ಉದ್ದಿಮೆಯ ನಡುವಿನ ವ್ಯತ್ಯಾಸ ನೋಡೋಣ. ಭಾರತ ದಲ್ಲಿ ಕೃಷಿ ಕ್ಷೇತ್ರಕ್ಕೆ ಸರಕಾರದಿಂದ ಸಿಗುವ ನೆರವು ಅತ್ಯಲ್ಪ. ಆದರೆ ಅಮೆರಿಕದಲ್ಲಿ ಕೃಷಿಕರಿಗೆ ಸರಕಾರದಿಂದ ಭಾರಿ ಪ್ರಮಾಣದಲ್ಲಿ ಸಬ್ಸಿಡಿ, ತಾಂತ್ರಿಕ ನೆರವು ಹಾಗೂ ಸುಲಭದ ಸಾಲ ಸಿಗುತ್ತದೆ.
ಇದರರ್ಥ ಏನೆಂದರೆ, ಅಮೆರಿಕದ ಕೃಷಿ ಕ್ಷೇತ್ರ ಮತ್ತು ಕೃಷಿಕರು ಭಾರತದ ಕೃಷಿ ಕ್ಷೇತ್ರ ಮತ್ತು ಕೃಷಿಕರಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ. ಅಮೆರಿಕ ಮಾತ್ರವಲ್ಲ, ಯುರೋಪ್ ಹಾಗೂ ಚೀನಾ ಸೇರಿದಂತೆ ಅನೇಕ ದೇಶಗಳು ಕೃಷಿಗೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತವೆ. ಹೀಗಿರುವಾಗ ಅಮೆರಿಕದ ಕೃಷಿ ಉತ್ಪನ್ನಗಳು ಹಾಗೂ ಡೈರಿ ಉತ್ಪನ್ನಗಳಿಗೆ ಭಾರತದೊಳಗೆ ಮುಕ್ತ ಪ್ರವೇಶ ನೀಡಿದರೆ ನಮ್ಮ ಕೃಷಿಕರು ಖಂಡಿತ ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯವಿಲ್ಲ.
ಆಗ ಭಾರತೀಯ ಕೃಷಿಕರ ಆರ್ಥಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಚೀನಾದಿಂದ ನಮ್ಮ ದೇಶದ ಆರ್ಥಿಕ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಈಗಾಗಲೇ ನಾವು ಎಚ್ಚೆತ್ತುಕೊಂಡಿದ್ದೇವೆ. ಆದರೂ ಚೀನಾದ ಉತ್ಪನ್ನಗಳು ನಮ್ಮ ಮಾರುಕಟ್ಟೆಗೆ ದಾಂಗುಡಿ ಇಡುತ್ತಲೇ ಇವೆ. ನಮ್ಮ ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳ ಉತ್ಪನ್ನಗಳು ಚೀನಾದ ಉತ್ಪನ್ನಗಳ ಮೇಲಾಟವನ್ನು ಮಾರುಕಟ್ಟೆಯಲ್ಲಿ ತಾಳಿಕೊಳ್ಳಲು ಆಗದೆ ಹೆಣಗಾಡುತ್ತಿವೆ.
ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಘೋಷಣೆ ನಮಗೊಂದು ದಾರಿ ಯನ್ನು ತೋರಿಸಿದೆಯಾದರೂ ನಾವು ಕ್ರಮಿಸಬೇಕಾದ ದಾರಿ ಇನ್ನೂ ದೀರ್ಘವಿದೆ. ಕೇವಲ ಸರಕಾರದ ದೂರದೃಷ್ಟಿತ್ವದ ನೀತಿಗಳು ಹಾಗೂ ಜನಸಾಮಾನ್ಯರ ಪರಿಶ್ರಮ ಮಾತ್ರ ಈ ಪರಿಸ್ಥಿತಿ ಯನ್ನು ಬದಲಿಸಬಲ್ಲದು.
ನಮ್ಮ ಅಧಿಕಾರಶಾಹಿಯ ಮನಸ್ಥಿತಿ ಈಗಲೂ ಪೂರ್ತಿ ಬದಲಾಗಿಲ್ಲ. ಎಲ್ಲಿಯವರೆಗೆ ನಾವು ಕಾರ್ಮಿಕರ ಉತ್ಪಾದನಾ ಸಾಮರ್ಥ್ಯ ಹಾಗೂ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯನ್ನೊಡ್ಡಲು ಸಾಧ್ಯವಿಲ್ಲ. ಪ್ರತಿ ಯೊಂದು ರಂಗದಲ್ಲೂ ನಾವು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದೆ. ಆಗ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇರುವುದಿಲ್ಲ. ನಾನು ಅಮೆರಿಕದ ಅಭಿವೃದ್ಧಿಯ ಕತೆ ಓದುತ್ತಿದ್ದೆ. ಅಲ್ಲೊಂದು ಸಂಗತಿ ಗಮನ ಸೆಳೆಯಿತು. ಅಮೆರಿಕದ ಆರ್ಥಿಕತೆ ಒಮ್ಮೆ ಕುಸಿದಾಗ ಜಾನ್ ಎಫ್.ಕೆನಡಿ ತಮ್ಮ ದೇಶದ ಪ್ರಜೆಗಳನ್ನುದ್ದೇಶಿಸಿ ಒಂದು ಮಾತು ಹೇಳಿದ್ದರು.
“ದೇಶ ನಿಮಗಾಗಿ ಏನು ಮಾಡುತ್ತಿದೆ ಎಂದು ಕೇಳಬೇಡಿ, ದೇಶಕ್ಕಾಗಿ ನೀವು ಏನು ಮಾಡಬಲ್ಲಿರಿ ಎಂದು ಕೇಳಿಕೊಳ್ಳಿ". ಈ ಮಾತು ಅಮೆರಿಕದ ಭವಿಷ್ಯವನ್ನೇ ಬದಲಿಸಿತು. ಭಾರತದ ವಿಷಯದಲ್ಲೂ ನಮ್ಮ ಮನಸ್ಥಿತಿ ಇದೇ ರೀತಿ ಬದಲಾಗಬೇಕಿದೆ. ನಾವು ಕಠಿಣ ಪರಿಶ್ರಮದಿಂದ ಎಷ್ಟು ಎತ್ತರಕ್ಕೆ ಏರಬೇಕು ಅಂದರೆ, ಕಾಲೆಳೆಯುವವರಿಗೆ ನಮ್ಮ ಕಾಲೇ ಸಿಗಬಾರದು!
ನಮ್ಮನ್ನು ಕೆಣಕಲು ಬರುವವರು ಹತ್ತು ಸಲ ಯೋಚಿಸುವಂತಾಗಬೇಕು! ಚೀನಾ ಹೇಗೆ ಅಮೆರಿಕಕ್ಕೆ ಅದರ ಜಾಗವನ್ನು ತೋರಿಸಿತೋ ಅದೇ ರೀತಿ ನಾವು ಕೂಡ ಎದೆ ಸೆಟೆಸಿ ನಿಲ್ಲಬೇಕು. ಪಂಚಶೀಲ ತತ್ವಗಳ ಗೊಡವೆ ಬಿಟ್ಟು ಕಠಿಣ ನಿಲುವು ಪ್ರದರ್ಶಿಸಬೇಕು. ‘ರಾಮಚರಿತಮಾನಸ’ದಲ್ಲಿ ಒಂದು ಅಧ್ಯಾಯವಿದೆ. ಪರಶುರಾಮ ತನ್ನ ಕೊಡಲಿಯಿಂದ ಲಕ್ಷ್ಮಣನನ್ನು ಹೆದರಿಸಲು ಯತ್ನಿಸಿದಾಗ ಲಕ್ಷ್ಮಣ ಹೇಳುತ್ತಾನೆ: “ಕೈಬೆರಳು ತೋರಿಸಿದಾಕ್ಷಣ ಒಣಗಿಹೋಗಲು ನಾನು ಕುಂಬಳಕಾಯಿಯಲ್ಲ!".
ಭಾರತಕ್ಕೆ ಅಗಾಧ ಸಾಮರ್ಥ್ಯವಿದೆ. ಬೆಳೆಯಲು ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ಕಳೆದ ಎರಡು ಸಾವಿರ ವರ್ಷಗಳ ಆರ್ಥಿಕ ಇತಿಹಾಸವನ್ನು ನೋಡಿದರೆ, ಮೊದಲ 1500 ವರ್ಷಗಳ ಕಾಲ ಜಗತ್ತಿನ ಉತ್ಪಾದನಾ ವಲಯದ ಶೇ.46ರಷ್ಟು ಪಾಲು ಭಾರತದ್ದೇ ಆಗಿತ್ತು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ಮೇಲೂ ನಮ್ಮ ಕೊಡುಗೆ ಶೇ.23ರಷ್ಟಿತ್ತು. ಆದರೆ ಅವರು ಭಾರತವನ್ನು ಬಿಟ್ಟು ಹೋದಾಗ ಅದು ಶೇ.2ಕ್ಕೆ ಕುಸಿದಿತ್ತು. ಆ ಲೂಟಿಯಿಂದಲೂ ನಾವು ಚೇತರಿಸಿಕೊಂಡು, ಇವತ್ತು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದ್ದೇವೆ. ನೆನಪಿಡಿ, ಜಗತ್ತಿನಲ್ಲೇ ಇಂದು ಅತಿಹೆಚ್ಚು ಚಿನ್ನ ಖರೀದಿಸುವ ದೇಶ ನಮ್ಮದು.
ನಮ್ಮ ದೇಶದ ಆರ್ಥಿಕ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲು ಯತ್ನಿಸುತ್ತಿರುವ ಶಕ್ತಿಗಳಿಗೆ ನಾನು ಹೇಳುವುದಿಷ್ಟೆ: ಭಾರತದ ಸಾಮರ್ಥ್ಯವನ್ನು ಕೀಳಂದಾಜು ಮಾಡಬೇಡಿ. ಭಾರತ ಈವರೆಗೆ ನಿದ್ರೆಯಲ್ಲಿದ್ದ ಆನೆಯಾಗಿತ್ತು. ಈಗ ಅದು ಎಚ್ಚರಗೊಂಡು ರಾಜಗಾಂಭೀರ್ಯದಲ್ಲಿ ನಡೆಯಲು ಆರಂಭಿಸಿದೆ. ಇನ್ನು ಇದು ನಿಲ್ಲುವುದೂ ಇಲ್ಲ, ತಲೆಬಾಗುವುದೂ ಇಲ್ಲ, ಹೆದರುವುದೂ ಇಲ್ಲ..! ಜೈ ಹಿಂದ್!
(ಲೇಖಕರು ಹಿರಿಯ ಪತ್ರಿಕೋದ್ಯಮಿ)